ಮೊನ್ನೆ ಸಹಜ ಸೋಫಾದ ಮ್ಯಾಲೆ ಕೂತ ಟಿ.ವಿ ನೋಡ್ಲಿಕತ್ತಿದ್ದೆ, ಬಾಜೂಕ ತನ್ನ ಬ್ಲೌಜಿಗೆ ಆರಿ ವರ್ಕ್ ಮಾಡ್ಲಿಕತ್ತಿದ್ದ ನನ್ನ ಹೆಂಡ್ತಿ ಒಮ್ಮಿಂದೊಮ್ಮಿಲೆ..
’ರ್ರೀ…ನಿಂಬದ ಆರ್ಟ ಛಲೋ ಅದ…ಇದೊಂದ ಆರಿ ವರ್ಕ್ ಕಂಪ್ಮೀಟ್ ಮಾಡಿ ಕೊಡ್ರಿ’ ಅಂತ ಜಂಪರ್, ಸೂಜಿ, ಧಾರಾ ನನ್ನ ಉಡಿ ತುಂಬಿದ್ಲು. ನನಗ ಪಿತ್ತ ನೆತ್ತಿಗೇರತ ..
’ಲೇ…ಹುಚ್ಚಿ ನಾ ಏನ ಲೇಡಿಜ್ ಟೇಲರೋ ಇಲ್ಲಾ ಆರಿ ವರ್ಕ ಮಾಡವನೋ….ಅರಾಮ ಅದ ಇಲ್ಲ ನಿನಗ’ ಅಂತ ಜೋರ ಮಾಡಿದರ..
’ರ್ರೀ..ನಾ ಬಾಕಿ ಎಲ್ಲಾ ಮಾಡೇನಿ, ಅದೊಂದ ಲಾಸ್ಟ ಲೈನ ಆರ್ಟ್ ಬರವಲ್ತ ಅದನ್ನ ಮಾಡಿ ಕೊಡ್ರಿ….ಪ್ಲೀಜ್’ ಅಂತ ದೈನಾಸ ಪಡ್ತು…
ಅಲ್ಲಾ ಏನ ಬಂತಪಾ ನನ್ನ ಹಣೇಬರಹ ಅಂತೇನಿ…ಅವನೌನ ಇದ ಒಂದ ಕಡಮಿ ಆಗಿತ್ತ ನನಗ ಅಂತ ಅನಸ್ತ…
ನಾ ನೋಡಿದರ ಹಾಬಿ ಆರ್ಟಿಸ್ಟ್ ಮ್ಯಾಲೆ ಬರೇ ಲ್ಯಾಂಡ್ ಸ್ಕೇಪ್ ಪೇಂಟಿಂಗ್ ಮಾಡೋಂವಾ ಹಂತಾವಂಗ ಆರಿ ವರ್ಕ್ ಮಾಡಿ ಕೊಡಂದರ…..ಅದು ಬ್ಲೌಜ್ ಮ್ಯಾಲೆ…ಅಲ್ಲಾ, ಖಾಸ ಹೆಂಡ್ತಿದ ಬ್ಲೌಜ್ ಯಾಕ ಆಗವಲ್ತಾಕ…
’ನಿನ್ನ ಹೆಂಡ್ತಿ ಬ್ಲೌಜಗೆ ನೀ ಆರಿ ವರ್ಕ್ ಮಾಡಿಕೊಟ್ಟರ ತಪ್ಪ ಏನದ ಮಗನ?’ ಅಂತ ಅನಬ್ಯಾಡ್ರಿ….ಆದರೂ ಇದ ನನಗ ಒಂಥರಾ ಅನಸ್ತ…
ಹಂಗ ನಾ ಸಣ್ಣಂವ ಇದ್ದಾಗ ಆರ್ಟ ವರ್ಕ ಛಲೋ ಅದ ಅಂತ ನಮ್ಮವ್ವಾ ಬನಶಂಕರಿ ನವರಾತ್ರಿ ಒಳಗ ಆರತಿ ತಾಟ ಮ್ಯಾಲೆ ತುಪ್ಪದಲೇ ರಂಗೋಲಿ ಡ್ರಾಯಿಂಗ್ ಮಾಡಿಸಿಸಿ ಮ್ಯಾಲೆ ಅದಕ್ಕ ಅರಷಿಣ- ಕುಂಕಮ- ಅಕ್ಕಿ ಹಿಟ್ಟ ಉದರಸಿಸಿ ಅಗದಿ ಛಂದ ಛಂದ ಆರತಿ ಡಿಸೈನ್ ಮಾಡಸ್ತಿದ್ಲು, ಒಂದೂ ನಾ ಆವಾಗ ಸಣ್ಣೊಂವ ಇದ್ದೆ, ಮ್ಯಾಲೆ ಬನಶಂಕರಿ ಹೆದರಕಿಗೆ ಮಾಡ್ತಿದ್ದೆ ಅನ್ನರಿ.
ಒಂದ ಸ್ವಲ್ಪ ದೊಡ್ಡಂವ ಆದ ಮ್ಯಾಲೆ ಯಾವದರ ಮದ್ವಿಗೇ ಹೋದರ ಅಲ್ಲೇ ಲಗ್ನದ ಹಿಂದಿನ ದಿವಸದ ರುಕ್ಕೋತ ಕಾರ್ಯಕ್ರಮ, ಅದ ಮಂಡಗಿ ಊಟದ್ದ ದಿವಸ ಭೂಮದ ಎಲಿ ಸುತ್ತಲೂ ರಂಗೋಲಿ ಹಾಕಲಿಕ್ಕೆ ನಂಗ ಕರಿತಿದ್ದರ, ನಂಗ ರಂಗೋಲಿ ಬರಂಗಿಲ್ಲಾ ಅಂದರ ನಮ್ಮ ಅಕ್ಕ-ತಂಗ್ಯಾರ, ಅತ್ಯಾ- ಮೌಶಿಗಳ
’ನೀ ಚಾಕ್ ಪೀಸಲೇ ಡಿಸೈನ್ ಮಾಡಿ ಕೊಡ ನಾವ ಅದರ ಮ್ಯಾಲೆ ರಂಗೋಲಿ ಹಾಕ್ತೇವಿ’ ಅಂತ ಅಂತಿದ್ದರ…
ಹಂಗ ಏನಿಲ್ಲಾ ಅಂದರು ನಾ ಒಂದ ಹದಿನೈದ ಇಪ್ಪತ್ತ ಲಗ್ನದಾಗ ಭೂಮದ ಎಲಿಗೆ ರಂಗೋಲಿ ಹಾಕೇನಿ. ಮತ್ತ ಒಂದ ಸರತೆನೂ ವರಾ ಏನ ನಾ ಹಾಕಿದ್ದ ರಂಗೋಲಿ ಎಡವಿಲ್ಲಾ ಅನ್ನರಿ.
ಇನ್ನ ಒಂದ್ಯಾರಡ ಸರತೆ ನಮ್ಮ ಪೈಕಿ ಒಂದಿಬ್ಬರ ’ಲೇ…ನಿನ್ನ ಆರ್ಟ ವರ್ಕ್ ಛಲೋ ಅದ ನನ್ನ ಅಂಗಡಿಗೆ ಬೋರ್ಡ್ ಬರದ ಕೊಡ’ ಅಂತ ಭಿಡೇ ಬಿಟ್ಟ ಕೇಳಿದರ. ನಾ ಬೋರ್ಡ್ ಬರೆಯೋ ಪೇಂಟರ್ ಅಲ್ಲಪಾ ಅಂತಾ ಬಂಬಡಾ ಹೊಡದರು ಕೇಳ್ತಿದ್ದಿಲ್ಲಾ.
ಇನ್ನೊಂದಿಬ್ಬರ ತಮ್ಮ ಮನಿಗೆ ಶ್ರೀಕಾರ ಹಾಕಲಿಕ್ಕೆ ನನಗ ಕರೆಯೋರ…
ಹಂಗ ಸಣ್ಣಂವಾ ಇದ್ದಾಗ ಹುಡಿಗ್ಯಾರ ಕೈಗೆ ಮದರಂಗಿನೂ ಹಾಕ್ತಿದ್ದೆ, ಯಾವಾಗ ನಾ ದೊಡ್ಡಂವ ಆಗೇನಿ ತಾಸ ಗಟ್ಟಲೇ ಕೈಬಿಡವಲ್ಲೇ ಅಂತ ಅನಸಲಿಕತ್ತ ಆವಾಗ ಹುಡಿಗ್ಯಾರ ನಂಗ ಕೈಕೊಡದ ಬಿಟ್ಟರ ಅನ್ನರಿ.
ಅಲ್ಲಾ, ಏನ್ಮಾಡ್ತೀರಿ ಹಿಂತಾ ಮಂದಿಗೆ…. ಆರ್ಟ್, ಕಲೆ ಅಂದರ ಏನ ಅಂತನ ಗೊತ್ತ ಇಲ್ಲಾ…
ಅಲ್ಲಾ ಮಂದಿದ ಬಿಡ್ರಿ ಕಟಗೊಂಡ ಹೆಂಡ್ತಿಗೆ ಗಂಡನ ಆರ್ಟ ಬಗ್ಗೆ ಗೊತ್ತ ಇಲ್ಲಾ. ಅಕಿ ಲ್ಯಾಂಡ್ ಸ್ಕೇಪ್ ಆರ್ಟಿಸ್ಟ್ ಕಡೆ ಬ್ಲೌಜ್ ಮ್ಯಾಲೆ ಆರಿ ವರ್ಕ್ ಮಾಡಸ್ತಾಳ ಅಂತ ಅಂದರ ಏನ ಹೇಳ್ಬೇಕ ಅಂತೇನಿ…
ಆದರೂ ಪಾಪ ಹಿಂಗ ನನ್ನ ಹೆಂಡ್ತಿ ದೈನಾಸ ಪಡೋದ ನೋಡಿ ನಮ್ಮವ್ವಾ..
’ಏನೋ ಒಂದ ಸ್ವಲ್ಪ ಆರ್ಟ ನಿನಗ ಬರ್ತದ ಅಂತ ಪಾಪ ಅದ ಅಷ್ಟ ಕೇಳ್ತದ ಕೂಸ ಹಾಕಿ ಕೊಡ…..ಹೊರಗ ಆರಿ ವರ್ಕ ಮಾಡ್ಸಿದರ ಸಾವಿರಗಟ್ಟಲೇ ಕೊಡಬೇಕಾಗ್ತದ’ ಅಂತ ಶುರು ಹಚಗೊಂಡ್ಲು.
ಸಜ್ಜನಸ್ಯ ಹೃದಯಂ ನವನೀತಂ ಅಂತ…ಅಂದರ ಸಜ್ಜನರ ಮನಸ್ಸ ಮತ್ತೊಬ್ಬರ ಸಮಸ್ಯೆ ನೋಡಿದರ ಬೆಣ್ಣಿಗತೆ ಕರಗತದ ಅಂತಾರ..ಇನ್ನ ಹಂತಾದರಾಗ ನಾ ಸಜ್ಜನ ಮ್ಯಾಲೆ ಗಂಡ ಬ್ಯಾರೆ ಹಿಂಗಾಗಿ ಒಂದ ಆರ್ಟ ವರ್ಕ್ ಮಾಡಿ ನೋಡೋಣ ತಡಿ ಅಂತ ಬ್ಲೌಜ್, ಸೂಜಿ, ಧಾರ ಹಿಡ್ಕೊಂಡ
’ಮೊದ್ಲ ಮುಂಚಿ ಕಡೆದ ಬಾಗಲಾ ಹಾಕ…..ಯಾರರ ಗಬಕ್ಕನ ಒಳಗ ಬಂದ ಗಿಂದಾರ, ಎದರಗಿನ ಖಿಡಕಿಗೆ ಪಡದೆ ಎಳಿ…ಯಾರರ ಖಿಡಕಿ ಒಳಗಿಂದ ನೋಡಿ-ಗಿಡ್ಯಾರ…ಆಮ್ಯಾಲೆ ನಾ ಆರಿ ವರ್ಕ್ ಹಾಕಿದ್ದ ಅಂತ ಒಟ್ಟ ನೀವ ಯಾರೂ ಯಾರಿಗೂ ಹೇಳಂಗಿಲ್ಲಾ’ ಅಂತ ನಮ್ಮಕಿ ಕಡೆ ಆ ಬ್ಲೌಜ್ ಮ್ಯಾಲೆ ಆಣೆ ಮಾಡಿಸಿಸಿ ಆರಿ ವರ್ಕ್ ಹಾಕಲಿಕ್ಕೆ ಶುರು ಮಾಡಿದೆ.
ಅದು ಹೇಳಿ ಕೇಳಿ ನನ್ನ ಹೆಂಡ್ತಿದ…ಒಂಬತ್ತವಾರಿ ಜಂಪರ್ ಲಗನೂ ಮುಗಿಯಂಗಿಲ್ಲಾ, ಕೈ ಹಿಡಿತದ, ಮ್ಯಾಲೆ ಕೈಕೆಲಸ ಅಲಾ ಹಿಂಗಾಗಿ ಪೂರ್ತಿ ಮುಗಸಲಿಕ್ಕೆ ಒಂದ ವಾರ ಆತ ಅನ್ನರಿ…..
ಹಂಗ ನಾ ನನ್ನ ಹೆಂಡ್ತಿ ಬ್ಲೌಜಿಗೆ ಆರಿ ವರ್ಕ್ ಹಾಕಿದ್ದ ಮನಿ ಮಂದಿಗೆ ಬಿಟ್ಟರ ಯಾರಿಗೂ ಗೊತ್ತ ಇದ್ದಿದ್ದಿಲ್ಲಾ, ಆದರ ನಾ ಆರಿ ವರ್ಕ್ ಮಾಡ್ಬೇಕಾರ ನಂಗೋತ್ತ ಆಗಲಾರದ ಈ ಫೋಟೊ ಹೊಡದಿದ್ದು ನಮ್ಮನಿ ಇನ್ನೊಂದ ಆರ್ಟಿಸ್ಟ – ನನ್ನ ಮಗಳ ಪ್ರಶಸ್ತಿ….
ಇನ್ನ ಅಕಿ ಅದನ್ನ ಸ್ಟೇಟಸ್ ಇಟ್ಟ ಊರ ಎಲ್ಲಾ ವೈರಲ್ ಮಾಡ್ತಾಳ ತಡಿ ಅಂತ ಭಡಾ ಭಡಾ ನಾನ ಅದರ ಮ್ಯಾಲೆ ಒಂದ ಪ್ರಹಸನ ಬರದ ಇವತ್ತ ವೈರಲ್ ಮಾಡಿ ಬಿಟ್ಟೆ….
ಅಲ್ಲಾ…ಅದರಾಗ ಏನ ತಪ್ಪ ಬಿಡ್ರಿ, ನನ್ನ ಹೆಂಡ್ತಿ ಬ್ಲೌಜ್ ನಾ ಆರಿ ವರ್ಕ ಮಾಡಿದರ ಮಂದಿಗೆ ಯಾಕ ಹೆದರಬೇಕ? ಹೌದಲ್ಲ…..?
ಅಲ್ಲಾ ಹಂಗ ಮತ್ತ ನೀವೇಲ್ಲರ ’ನಿನ್ನ ಆರ್ಟ ವರ್ಕ್ ಛಲೋ ಅದ ನಮಗೊಂದ ಆರಿ ವರ್ಕ್ ಮಾಡಿಕೊಡ’ ಅಂತ ಅಂದ-ಗಿಂದೀರಿ.