ಆರತಿ ಹಾಡ ಬರೋ ಮುತ್ತೈದಿನ್ನ ಕರೀರಿ…..

ಇದ ಹೋದ ವರ್ಷದ ಕಥಿ. ಇನ್ನೇನ ಶ್ರಾವಣ ಮುಗದ ಭಾದ್ರಪದ ಮಾಸ ಬರೋದಕ್ಕ ಮುಂಜ ಮುಂಜಾನೆ ಎದ್ದ ನಮ್ಮ ಮೌಶಿದ ಫೋನ್ ಬಂತ, ಇನ್ನ ಅಕಿ ಫೋನ್ ಬಂತಂದರ ನಂಗಂತೂ ಅಸಿಡಿಟಿನ ಆಗ್ತದ ಯಾಕಂದರ, ಒಂದ ಏನರ ನನಗ ಕೆಲಸಾ ಹೇಳಿ ಅದನ್ನ ನಾ ಮಾಡೋ ತನಕಾ ನನ್ನ ಜೀವಾ ತಿನ್ನೋಕಿ. ಅದರಾಗ ಅಕಿ ಮಗಾ-ಸೊಸಿ ಇಬ್ಬರೂ ಬೆಂಗಳೂರಾಗ ಹಿಂಗಾಗಿ ತನ್ನ ಮನಿದ ಏನ ಕೆಲಸ ಇದ್ದರು ಬ್ಯಾರೆಯವರ ಜೀವಾ ತಿಂತಾಳ.
ನಾ ಫೋನ ಎತ್ತೋದಕ್ಕ
’ಏ…ಅಷ್ಟಮಿಗೆ ಯಾರರ ಒಂದ ಮುತ್ತೈದಿನ್ನ ಹುಡುಕಿ ಕೊಡಪಾ, ಅಕಿಗೆ ಆರತಿ ಹಾಡ ಹೇಳಲಿಕ್ಕೆ ಬರ್ತಿರಬೇಕ ಮತ್ತ’ ಅಂತ ಅಂದ್ಲು.
ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ಎಲ್ಲಾ ಬಿಟ್ಟ ಗಂಡ ಹುಡುಗಗ ಅಂದರ ನನಗ ಇಕಿ ಮುತೈದಿನ್ನ ಹುಡುಕಿ ಕೊಡ ಅಂತ ಅನ್ನಲಿಕತ್ತಾಳ ನಾ ಏನ ಮುತ್ತೈದಿಯರ ಸಂಘದ ಅಧ್ಯಕ್ಷ ಅಂತ ತಿಳ್ಕೊಂಡಾಳೇನ ಅಂತ ಸಿಟ್ಟಿಗೆದ್ದ
’ಏ..ಮುತ್ತೈದಿ ಹುಡಕಲಿಕ್ಕೆ ನಂಗ ಯಾಕ ಹೇಳಲಿಕತ್ತಿ, ನನ್ನ ಹೆಂಡ್ತಿಗೆ ಹೇಳ…ನಾ ಏನ ಮುತ್ತೈದಿಯರನ ಕಟಗೊಂಡ ಅಡ್ಡಾಡತೇನ ಏನ್…” ಅಂತ ಜೋರ್ ಮಾಡಿದೆ.
’ಏ…ನಿನ್ನ ಹೆಂಡ್ತಿಗೆ ಫೋನ್ ಮಾಡಿದ್ದೆ…ಅಕಿನ ನಮ್ಮ ಮನೆಯವರಿಗೆ ಕೇಳರಿ, ಅವರ ಆರ್ಟಿಕಲ್ ಓದಿ-ಓದಿ ಭಾಳ ಮಂದಿ ಮುತ್ತೈದಿಗೊಳ ಅವರ ಫ್ಯಾನ್ ಆಗ್ಯಾರ ಅಂತ ಅಂದ್ಲೊ ಮಾರಾಯಾ’ ಅಂದ್ಲು.
ಅಲ್ಲಾ ನನ್ನ ಹೆಂಡ್ತಿನ ಮುತ್ತೈದಿ ಇದ್ದಾಳಲಾ, ಮತ್ತ ಹೊರಗಿನ ಮುತ್ತೈದಿ ಯಾಕ ಅಂತ ಕೇಳಿದರ
’ಏ…ನಿನ್ನ ಹೆಂಡ್ತಿಗೆ ಆರತಿ ಹಾಡ ಹೇಳಲಿಕ್ಕೆ ಬರಂಗಿಲ್ಲಾ, ನಂಗ ಆರತಿ ಹಾಡ ಬರೋ ಮುತ್ತೈದಿ ಬೇಕ…’ ಅಂದ್ಲು.
ಹಂಗ ಅಕಿ ಹೇಳಿದ್ದ ಖರೆ ಇತ್ತ ಅನ್ನರಿ ಆದರು ನನ್ನ ಹೆಂಡ್ತಿ ಒಪ್ಪಾ ಇಟ್ಗೊಬೇಕಲಾ ಅದಕ್ಕ
’ಇರಲಿ ತೊಗೊ ನಮ್ಮ ಮನ್ಯಾಗೂ ಅಷ್ಟಮಿ ಅದ, ಅಕಿನ್ನ ಹೆಂಗ ದಕ್ಷೀಣಿ ಆಶಾಕ್ಕ ಮತ್ತೊಬ್ಬರ ಮನಿಗೆ ಹಬ್ಬದ್ದ ದಿವಸ ಮುತ್ತೈದಿ ಅಂತ ಕಳಸಲಿಕ್ಕೆ ಬರ್ತದ’ ಅಂತ ನಾನೂ ಜೋರ ಮಾಡಿ
’ಯಾಕ ಸಾದಾ ಮುತ್ತೈದಿ ನಡಿಯಂಗಿಲ್ಲೇನ, ಆರತಿ ಹಾಡ ಹಾಡೋಕಿನ ಯಾಕ ಬೇಕ…ನಿನ್ನ ಸೊಸಿಗೂ ಆರತಿ ಹಾಡ ಬರಂಗಿಲ್ಲೇನ’ ಅಂತ ಕೇಳಿದೆ.
’ಅಯ್ಯ..ಈಗೀನ ಹುಡಗ್ಯಾರಿಗೆ ಎಲ್ಲಿ ಆರತಿ ಹಾಡ ಬರ್ತಾವ ನಮ್ಮಪ್ಪಾ…ಆ ಸುಡಗಾಡ ಪಿಕ್ಚರ್ ಹಾಡ ಮ್ಯಾಲೆ ಕುಣದಾಡಿ ರೀಲ್ ಮಾಡ ಅನ್ನ ದಿನಕ್ಕ ಹತ್ತ ಮಾಡ್ತಾವ, ಒಂದ ದೇವರ ಹಾಡ ಬರಂಗಿಲ್ಲಾ, ಆರತಿ ಹಾಡ ಬರಂಗಿಲ್ಲಾ’ ಅಂತ ಕಥಿ ಹೇಳಲಿಕತ್ಲು. ಇನ್ನ ಇಕಿನ್ನ ಹಿಂಗ ಬಿಟ್ಟರ ಇಕಿ ಸೊಸಿ ಮ್ಯಾಲೆ ಒಂದ ಮಂಗಳಾರತಿ ಹಾಡ ಹೇಳ್ತಾಳ ಬಿಡ ಅಂತ ಅಕಿಗೆ ಯಾರರ ಮುತ್ತೈದಿ ಸಿಕ್ಕರ ಹೇಳ್ತೇನಿ ಅಂತ ಅಂದ ಫೋನ್ ಇಟ್ಟೆ.
ಹಂಗ ನಮ್ಮ ಮೌಶಿ ಹೇಳಿದ್ದ ಲಾಜಿಕ್ ಕರೆಕ್ಟ ಇತ್ತ, ಈಗಿನವರಿಗೆ ಆರತಿ ಹಾಡ ಹೇಳಲಿಕ್ಕೆ ಬರಂಗಿಲ್ಲಾ ಮತ್ತ ಕಲಿಲಿಕ್ಕೂ ಹೋಗಂಗಿಲ್ಲಾ. ಭಾಳ ಅಂದರ youtubeನಾಗ ಆರತಿ ಹಾಡ ಹಚ್ಚಿ ಪೂಜಾ ಮಾಡಿ ಕೈಬಿಡ್ತಾರ.
ಇನ್ನ ನಮ್ಮ ಮನ್ಯಾಗ ನಮ್ಮವ್ವಾ ಮೋಬೈಲ್ youtube ಮಡಿಗೆ ಬರಂಗಿಲ್ಲಾ ಅಂತ ಹಟಾ ಮಾಡೋಕಿ, ನನ್ನ ಹೆಂಡ್ತಿ ನೋಡಿದರ ಮೋಬೈಲ್ ರೇಷ್ಮಿ ಮಡಿ ಇದ್ದಂಗ ಅದಕ್ಕ ಮಡಿ ಮೈಲಗಿ ಅಂತ ಇರಂಗಿಲ್ಲಾ ಅಂತ ಅನ್ನೋಕಿ. ಕಡಿಕೆ ನನ್ನ ಹೆಂಡ್ತಿ ತಲಿ ಓಡಿಸಿ ಯಾವಾಗ ಮುತ್ತೈದಿಗೆ ಕರದರು ಆರತಿ ಹಾಡ ಹಾಡಲಿಕ್ಕೆ ಬರೋರನ ಹುಡುಕಿ ಹುಡುಕಿ ಕರೆಯೋಕಿ ಮತ್ತ ಅಗದಿ ಆರತಿ ಹಚ್ಚಿದ ಮ್ಯಾಲೆ
’ನೀವ ಒಂದ ಹಾಡ ಹಾಡಿ ಬಿಡ್ರಿವಾ, ನಂಗ ಯಾಕೋ ಗಂಟ್ಲ ಹಿಡದದ ಅಂದ ಕರದ ಮುತ್ತೈದಿ ಕಡೆನ ಆರತಿ ಹಾಡ ಹೇಳಸೊಕಿ’.
’ಏ..ಅದೇನ ಪಾಪ ಬಂದ ಮುತ್ತೈದಿ ಕಡೆ ಆರತಿ ಹಾಡ ಹೇಳಸ್ತಿ….ನೀನ ಒಂದ ನಾಲ್ಕ ಲೈನ ಬಂದಂಗ ಹೇಳ…ಇಲ್ಲ್ಯಾರ ಇದ್ದಾರ ನಿನ್ನ ಆರತಿ ಹಾಡ ಕೇಳಿ once more ಅನ್ನಲಿಕ್ಕೆ’ ಅಂತ ನಮ್ಮವ್ವ ಅಂದರ
’ಅಯ್ಯ…ಮುತ್ತೈದಿಗೆ ಹೆಂಗಿದ್ದರೂ ದಕ್ಷೀಣಿ ಕೊಟ್ಟ ಕೊಡ್ತೇವಲಾ…ನೀವ ಸುಮ್ಮನಿರ್ರಿ’ ಅಂತ ನಮ್ಮಕಿ ಅನ್ನೋಕಿ
. ಅಲ್ಲಾ ಹಂಗ ಆ ಮುತ್ತೈದಿ
’ಪ್ರಶಾಂತ ಆರತಿ ಹಾಡ ಹೇಳಿದ್ದಕ್ಕ ದಕ್ಷೀಣಿ ಎಕ್ಸ್ಟ್ರಾ ಕೊಡಬೇಕ’ ಅಂತ ಸಿರಿಯಸ್ ಆಗಿ ನೂರ ರೂಪಾಯಿ ಎಕ್ಸ್ಟ್ರಾ ದಕ್ಷೀಣಿ ತೊಗೊಂಡ ಹೋಗ್ತಿದ್ಲು ಆ ಮಾತ ಬ್ಯಾರೆ.
ನಾ ಒಂದ ಸಲಾ ತಲಿಕೆಟ್ಟ
’ಮುಂದಿನ ಸಲಾ virtual ಮುತ್ತೈದಿ onlineನಾಗ ಕರಸ್ತೇನಿ, video conference ಒಳಗ ಪೂಜಾ ಮಾಡಿ ಆಮ್ಯಾಲೆ ದಕ್ಷೀಣಿ google pay, ಉಡಿ ಸಾಮಾನ ಕೋರಿಯರ್ ಮಾಡ್ತೇನಿ ನೋಡ’ ಅಂತ ಹೆದರಸಿದ್ದೆ.
ಅಲ್ಲಾ ಅದಕ್ಕ ಮೊದ್ಲಿನ ಕಾಲದಾಗ ಕನ್ಯಾ ನೋಡ್ಬೇಕಾರ
’ತಂಗಿ ಏನ ಕಲ್ತೀವಾ…ಹಾಡ ಹಾಡಲಿಕ್ಕೆ ಬರ್ತದ ಏನ…ಎಲ್ಲೇ ಒಂದ ಹಾಡ ಹಾಡ ನೋಡೋಣ’ ಅಂತ ಹಾಡ ಹಾಡಿಸಿ ಮುಂದ ಹುಡಗಿ ಗುಣಾ ನೋಡ್ತಿದ್ದರು.
ಹಂಗ ಆವಾಗ ಕನ್ಯಾ ತೊರಸ್ಬೇಕಾರ ಕಾಯಂ ಹಾಡ ಅಂದರ ’ಪವಮಾನ ಪವಮಾನ ಜಗದಾ ಪ್ರಾಣಾ… ಸಂಕರುಷಣ ಭವಭಯಾರಣ್ಯ ದಹನಾ….’ ಒಂದು ಇಲ್ಲಾ ಯಾವದರ ಒಂದ ದಾಸರ ಪದಾ ಹೇಳಿಸಿಸಿ ನಾವ ಮುಂದ ಜೀವನ ಪರ್ಯಂತ ಅವರ ದಾಸ ಆಗಿ ಬಿಡ್ತೇವಿ. ಅಲ್ಲಾ ಅವು ಆಗಿನ ಕಾಲದಾಗಿನ ಅಗದಿ ಪೆಟೆಂಟ್ ಹಾಡ.
ಹಂಗ ನಾನೂ ಹಾಡ ಹಾಡಿಸಿಸಿನ ಮಾಡ್ಕೊಂಡಿದ್ದ ಖರೆ ಆದರ ಏನ ಮಾಡೋದ ಮುಂದ ಶ್ರಾವಣ ಬಂದಾಗ
’ನಂಗ ಆರತಿ ಹಾಡ ಬರಂಗಿಲ್ಲಾ, ನೀವೇನ ಆರತಿ ಹಾಡ ಬರ್ತದ ಅಂತ ಮಾಡ್ಕೊಳೊಕಿಂತ ಮೊದ್ಲ ಕೇಳಿದ್ರೇನ’ ಅಂತ ನನಗ ಜೋರ ಮಾಡಿದ್ಲು.
ನಮ್ಮವ್ವ ಅವತ್ತನಿಂದ ಅಕಿ ಆರತಿ ಹಾಡ ಹಾಡ್ಸೊ ಉಸಾಬರಿ ಬಿಟ್ಟ ಬಿಟ್ಟಳ ಅನ್ನರಿ.
ಹಂಗ ಈಗ ಕಾಲ ಬದಲಾಗೇದ. ಹೆಣ್ಣಮಕ್ಕಳಿಗೆ ಆರತಿ ಹಾಡ ಹೇಳೋದ ದೂರ ಹೋತ ಗಂಡ ಹುಡುಗರಿಗೆ ಒಂದ ದೇವರ ಪೂಜಿ ಮಂತ್ರ ಸಹಿತ ಬರಂಗಿಲ್ಲಾ.
ಅಲ್ಲಾ ಸುಳ್ಳ ಅವರದ-ಇವರದ ಯಾಕ ಹೇಳ್ಬೇಕ ನಂಗ ಬರಂಗಿಲ್ಲ ಅನ್ನರಿ. ನಮ್ಮಪ್ಪ ಜೀವಂತ ಇರೋತನಕಾ ಎಷ್ಟ ಬಡ್ಕೊಂಡಾ
’ಲೇ…ವೈದಿಕರ ಮನ್ಯಾಗ ಹುಟ್ಟಿ ಮಗನ ಒಂದ ಮಂಗಳಾರತಿ ಮಾಡಿ ಅಕ್ಕಿ ಕಾಳ ಹಾಕೊ ಮಂತ್ರಾನರ ಕಲ್ಕೊ’ ಅಂತ. ನಾ ಏನ ಒಂದ ದಿವಸನೂ ಅವನ ಮಾತ ಕೇಳಲ್ಲಿಲ್ಲಾ. ಅದ ಬಿಡ್ರಿ ಮೊನ್ನೆ ನೂಲ ಹುಣ್ಣಮಿಗೆ ಜನಿವಾರ ಚೇಂಜ್ ಮಾಡಬೇಕಾರ ರವಿ ಆಚಾರ್ಯರ ಕಡೆ ಎರೆಡ ಜೋಡ ಜನಿವಾರದ ತೊಗೊಂಡ ಅದರ ಜೊತಿ ಫ್ರೀ ಅಂತ ಹೇಳಿ ವಾಟ್ಸಪ್ ಒಳಗ ಅವರ ಬಾಯಲಿನೇ “ಯಜ್ಯೋಪವೀತಂ ಬಲಮಸ್ತು ತೇಜಃ” ದಿಂದ ಹಿಡದ ” ಸಮುದ್ರಂ ಗಚ್ಚ ಸ್ವಾಹಾ ………” ತನಕಾ ಪೂರ್ತಿ ಜನಿವಾರ ಚೆಂಜ್ ಮಾಡೋ ಮಂತ್ರದ್ದ ಆಡಿಯೋ ಮಾಡಿಸ್ಗೊಂಡ ಜನಿವಾರ ಚೇಂಜ್ ಮಾಡಿದ ಪುಣ್ಯಾತ್ಮ ನಾ.
ಇನ್ನ ಹಂಗ ಗಣಪತಿ ಕುಡ್ಸೋದ, ಕಳಸೋದ ಎಲ್ಲಾದಕ್ಕೂ ಭಟ್ಟರಿಗೆ ಕರಿತೇನಿ. ಇಲ್ಲಾಂದರ ಅದಕ್ಕೂ youtubeನ ಗತಿ. ಹೋದ ವರ್ಷ ಅಂತೂ ಬೆಂಗಳೂರಾಗ ಒಬ್ಬ ಭಟ್ಟರ webex video conference ಒಳಗ at a time 21 ಮಂದಿ ಮನಿ ಗಣಪತಿ ವಿಸರ್ಜನ ಮಾಡಸಿದ್ರಂತ. ಏನ ಮಾಡ್ತಿರಿ…
ಹಂಗ ಇಗೇನೋ chat GPT, AI ಅಂತ ಏನೇನೊ ಬಂದಾವಂತ. ಮಂತ್ರಾ chat GPT ಒಳಗ ಹುಡಕಿ AI (artificial intelligence) ಕಡೆಯಿಂದ ಹೇಳಸಿದರಾತ ಮತ್ತ ನಾವ ಯಾಕ ಕಲಿಬೇಕ, ಭಟ್ಟರ ಯಾಕ ಬೇಕ, ಆರತಿ ಹಾಡ ಬರೋ ಮುತ್ತೈದಿ ಯಾಕ ಬೇಕ? ಹೌದಲ್ಲ ಮತ್ತ….?
ಆದರೂ on serious note ನಾವೇಲ್ಲಾ ಹಿಂಗ ನಮ್ಮ ಸನಾತನ ಪದ್ದತಿ, ಪೂಜೆ, ಪುನಸ್ಕಾರ ಮರಕೋತ ಹೊಂಟರ ನಮ್ಮ ಮುಂದಿನ ಜನರೇಶನದ ಏನ ಹಣೇಬರಹ ಅಂತೇನಿ. ಬೇಕಾರ ಒಂದ ಸರತೆ ನಮ್ಮ ಮಕ್ಕಳನ ಕೇಳಿ ನೋಡ್ರಿ ’ನಿಮ್ಮ ಮನಿ ಕುಲದೇವರ ಯಾವದ’ ಅಂತ, ಎಷ್ಟೋ ಮಕ್ಕಳಿಗೆ ಗೊತ್ತ ಇರಂಗಿಲ್ಲಾ.
ಏನ ಮಾಡ್ಲಿಕ್ಕೆ ಬರಂಗಿಲ್ಲಾ ಎಲ್ಲಾ ’ಕಾಲಾಯ ತಸ್ಮೈ ನಮಃ’ ಅಂತ ಅನ್ಕೊಂಡ ಸುಮ್ಮನಾಗೋದ. ಅಲ್ಲಾ ಎಲ್ಲಾ ಬಿಟ್ಟ ಇವತ್ತ ಇದನ್ನ ಬರಿಲಿಕ್ಕೆ ಕಾರಣ ಅಂದರ ಈಗ ಮತ್ತ ಶ್ರಾವಣ ನಡದದ ಇನ್ನೊಂದ ಹದಿನೈದ ದಿವಸಕ್ಕ ಭಾದ್ರಪದಾ ಬರತದ, ನೋಡ್ರಿ ಹಂಗ ನಿಮಗೂ ಯಾರಿಗರ ಅಷ್ಟಮಿಗೆ, ಸ್ವರ್ಣಗೌರಿಗೆ ಆರತಿ ಹಾಡ ಬರೋ ಮುತ್ತೈದಿನ ಬೇಕಾಗಿದ್ದರ ಈಗ ಬುಕ್ ಮಾಡ್ಕೊಂಡ ಬಿಡ್ರಿ, ಆಯ್ತ ವೇಳ್ಯಾಕ್ಕ ಅವರು ಸಿಗಂಗಿಲ್ಲಾ..ಆಮ್ಯಾಲೆ ಎಲ್ಲೇರ Arificial Intelligence ಮುತ್ತೈದಿಗೆ online ಒಳಗ ಉಡಿ ತುಂಬೊ ಹಂಗ ಆಗಬಾರದ ಅಂತ ಮೊದ್ಲ ಹೇಳಿದೆ ಇಷ್ಟ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ