ಕೆಲವೊಬ್ಬರಿಗೆ ದಿವಸಾ ಬೆಳಿಗ್ಗೆ ಎದ್ದ ಕೂಡ್ಲೆನ ಅವತ್ತಿಂದ ತಮ್ಮ ರಾಶಿ ಫಲಾ, ಭವಿಷ್ಯ ನೋಡೊ ಚಟಾ ಇರ್ತದ. ಅದನ್ನ ನೋಡಿನ ಮುಂದಿನ ಕೆಲಸ.
ಹಂಗ ಅದರಾಗ ತಪ್ಪೇನಿಲ್ಲಾ, ’ಜ್ಯೋತಿಷಮ್ ನೇತ್ರಮುಚ್ಯತೇ’ ಅಂತಾರ. ಸೃಷ್ಟಿಯನ್ನ, ವೇದಗಳನ್ನ ಅರ್ಥ ಮಾಡ್ಕೊಬೇಕಂದರ ಜ್ಯೋತಿಷ್ಯ ಶಾಸ್ತ್ರ ತಿಳ್ಕೊಳೊದ ಅವಶ್ಯ, ಜ್ಯೋತಿಷ್ಯ ಶಾಸ್ತ್ರನ ವೇದಗಳಿಗೆ ಕಣ್ಣ ಇದ್ದಂಗ. ವ್ಯಾಸ ಮುನಿಗಳ ತಂದೆ ಪರಾಶರ ಮುನಿಗಳನ್ನ father of vedic astrology ಅಂತ ಕರಿತಾರ.
ಹಂಗ ನಾ ಜ್ಯೋತಿಷ್ಯ ನಂಬಂಗಿಲ್ಲಾ ಅಂತೇನಿಲ್ಲಾ ಆದರ ನಾ anxiety ಮನಷ್ಯಾ. ಹಿಂಗಾಗಿ
’ಇಂದು ಸಂಸಾರದಲ್ಲಿ ಕಲಹ,ಆರೋಗ್ಯದ ಕಡೆ ಗಮನವಿರಲಿ’ ಅಂತ ಓದಿ ಬಿಟ್ಟರ ಮುಗಿತ. tension ತೊಗೊಂಡ, ಹೆಂಡ್ತಿಗೆ ’ಟರ್ರ್…ಪರ್ರ್…’ ಅಂದ ಅಕಿ ಕಡೆ ಬೈಸ್ಗೊಂಡ acidity ಮಾಡ್ಕೊಂಡ 60ml ಜೆಲೊಸಿಲ್ ತೊಗೊಂಡರ ಸಮಾಧಾನ. ಅದಕ್ಕ ನಾ ಒಟ್ಟ ರಾಶಿ ಫಲಾ, ಭವಿಷ್ಯ ನೋಡ್ಲಿಕ್ಕೆ ಹೋಗಂಗಿಲ್ಲಾ.
ಇತ್ತೀಚಿಗೆ ನಮ್ಮ ದೋಸ್ತ ವಿನ್ಯಾ ಈ ಅಸ್ಟ್ರಾಲಾಜಿ, ರಾಶಿ ಫಲಾ ಹೇಳೋದು ಎಲ್ಲಾ ಕಲತ ಅಗದಿ ಫೇಮಸ್ ಆಗ್ಯಾನ. ದೋಸ್ತರಿಗೆಲ್ಲಾ ರಾಶಿ, ನಕ್ಷತ್ರ ಕೇಳಿ ಅದನ್ನ ಸ್ಟಡಿ ಮಾಡಿ ಸಜೆಶನ್ ಕೊಡ್ತಾನ. ನಂಗೂ ಒಂದ್ಯಾರಡ ಸರತೆ ಹೇಳಿದಾ.
ನಾ ಸಿರಿಯಸ್ ಆಗಿ
’ದೋಸ್ತ ನಾ ಇದನ್ನೇಲ್ಲಾ ನಂಬಗಿಲ್ಲಾ, ನಮ್ಮ ಹಣೇಬರಹದಾಗ ಇದ್ದದ್ದ ಆಗ್ತದ….I just enjoy my bloody life ’ ಅಂತ ಹೇಳಿ ಬಿಟ್ಟಿದ್ದೆ.
ಅಲ್ಲಾ ನಾವ ಲಗ್ನಾ ಮಾಡ್ಕೊಬೇಕಾರರ ಅಂವಾ ಜ್ಯೋತಿಷ್ಯ ಕಲತಿದ್ದರ ಅವಂಗ ಕುಂಡ್ಲಿ ತೋರಿಸಿ ಈಗ ಇದ್ದದ್ದರಕಿಂತಾ ಛಲೋ ಕನ್ಯಾನರ ಮಾಡ್ಕೋತಿದ್ವಿ, ಈಗ ಏನ ಮಾಡೋದ ತೊಗೊಂಡ.
ಹಂಗ ಅವಂಗ
’ನೀ ಇಷ್ಟ ವರ್ಷ ಬಿಟ್ಟ ಈಗ ಯಾಕ ಜ್ಯೋತಿಷ್ಯ ಕಲ್ತಿಲೇ ದೋಸ್ತ’ ಅಂತ ಕೇಳಿದರ
’ಲೇ ನನ್ನ ಜಾತಕದಾಗ ೩೬ ಗುಣಾ ಹೆಂಗ ಕೂಡಿ ಬಂದ್ವು ಅಂತ revalulation ಮಾಡ್ಲಿಕ್ಕೆ ಕಲಿಬೇಕಾತಲೆ’ ಅಂದಾ. ಏನ್ಮಾಡ್ತೀರಿ?
ಹಂಗ ದೋಸ್ತರ ಯಾರ ಸಮಸ್ಯೆ ಕೇಳಿದರು ಪಾಪ ಒಂದ ಪೈಸಾ ಇಸ್ಗೊಳಲಾರದ ಪರಿಹಾರ ಹೇಳ್ತಾನ ಬಿಡ್ರಿ.
ಮೊನ್ನೆ ಯುಗಾದಿಗೆ ತನ್ನ ರೊಕ್ಕದ್ಲೆನ ಪಂಚಾಂಗ ತಂದ ಎಲ್ಲಾ ರಾಶಿಯವರದು ಭವಿಷ್ಯ ನೋಡಿ ನಮಗೇಲ್ಲಾ ಮುಂದಿನ ವರ್ಷದ್ದ, ತಿಂಗಳದ್ದ ರಾಶಿ ಫಲಾ ಹೇಳಲಿಕತ್ತಾ. ನಂದ ಮೇಷ ರಾಶಿ ಅಂತ ನನಗ
’ನಿಮಗೆ ವಿದೇಶ ಪ್ರಯಾಣ, ದೇವರ ಕೃಪೆ ನಿಮ್ಮದಾಗಿರುತ್ತದೆ’ ಅಂತ ಹೇಳಿದಾ.
ಅಲ್ಲಾ ನಂಗರ ಫ್ಲೈಯಿಂಗ ಫೋಬಿಯಾ ಅದ ಅಂತ ಪ್ಲೇನನಾಗ ಸ್ವದೇಶ ಪ್ರಯಾಣನ ಆಗಿಲ್ಲಾ ಇನ್ನ ಎಲ್ಲಿ ವಿದೇಶ ಪ್ರಯಾಣ ಅಂತೇನಿ. ಅಷ್ಟರಾಗ ನಮ್ಮ ಇನ್ನೊಬ್ಬ ’ಮೇಷ’ ರಾಶಿ ದೋಸ್ತ ಮುರಲಿ ಸಿರಿಯಸ್ ಆಗಿ ನಮ್ಮ ವಿನ್ಯಾ ಹೇಳ್ಯಾನ ಅಂದರ ಖರೇ ಆಗೋದ ಗ್ಯಾರಂಟೀ ಅಂತ ಬ್ಯಾಂಕಾಕ್ ಟಿಕೇಟ್ ತಗಿಸಿ ಪೇಪರನಾಗ ’ವಿದೇಶ ಪ್ರಯಾಣ’ ಅಂತ 18cm x 24 cm ad ರೆಡಿ ಮಾಡ್ಕೊಳಿಕತ್ತಿದ್ದಾ ಅಷ್ಟರಾಗ ಕೊರೊನಾ ಸಂಬಂಧ ಫ್ಲೈಟ ಸರ್ವಿಸ್ ಬಂದ ಆತ.
ಅಂವಾ ತಲಿಕೆಟ್ಟ ಅವಂಗ ’ಲೇ ನಿನ್ನ ಭವಿಷ್ಯ ಸುಳ್ಳ ಆತ ಮಗನ, ಪ್ಲೇನ ಟಿಕೇಟ ರೊಕ್ಕಾ ನೀನ ವಾಪಸ ಕೊಡ’ ಅಂತ ಈಗ ಗಂಟ ಬಿದ್ದಾನ.
ಹಂಗ ಎಪ್ರಿಲನಾಗ ಯಾವ್ಯಾವ ರಾಶಿ ಒಳಗ ವಿದೇಶ/ಸ್ವದೇಶಿ ಪ್ರಯಾಣ ಅಂತ ಇದ್ವು ಎಲ್ಲಾ ಸುಳ್ಳ ಆದ್ವು.
ನಂಗಂತೂ ರಾಶಿ ಫಲದಾಗ ಪ್ರವಾಸ ಅಂತ ಬಂದರ ’ಎಲ್ಲೆ ನನಗ ಅಂಬುಲೆನ್ಸ ಒಳಗ ಕರಕೊಂಡ ಹೋಗಿ ಕ್ವಾರೆಂಟೇನ್ ಮಾಡ್ತಾರೋ’ ಅಂತ ಹೆದರಕಿ ಆಗಲಿಕತ್ತದ.
ಇನ್ನೊಬ್ಬ ವೃಷಭ ರಾಶಿ ದೋಸ್ತಗ ’ಶುಕ್ರನು ಸ್ವಸ್ಥಾನದಲ್ಲಿದ್ದು ಧನವನ್ನು ಅನುಗ್ರಹಿಸುತ್ತಾನೆ, ಮನಸ್ಸಿಗೆ ನೆಮ್ಮದಿ ಇರುತ್ತದೆ, ನಿಮಗೆ ಈ ತಿಂಗಳು ಶುಭ ಫಲ’ ಅಂತ ಹೇಳಿದ್ದಾ.
ಅಂವಾ ಹೆಂಡ್ತಿನ್ನ ತವರಮನಿಗೆ ಯುಗಾದಿ ಹಬ್ಬಕ್ಕ ಎರಡ ದಿವಸ ಮೊದ್ಲ ಕಳಸಿದ್ದಾ, ಅಕಿ ಅಲ್ಲೆ ಬೆಂಗಳೂರಾಗ ಇಂವಾ ಇಲ್ಲೆ ಹುಬ್ಬಳ್ಳ್ಯಾಗ..ಲಾಕಡೌನ ಅನೌನ್ಸ ಆತ. ಅಂವಾ ಇವಂಗ ಫೋನ ಮಾಡಿದವನ
’ಏನ ಕರೆಕ್ಟ ಹೇಳಿದಿಲೇ ವಿನ್ಯಾ…ಹೆಂಡ್ತಿನ್ನ ತವರಮನಿಗೆ ಕಳಿಸಿದ್ದೆ, ಲಾಕಡೌನ ಆತ. ಒಂದ ತಿಂಗಳ ಸಂಸಾರದ್ದ ಖರ್ಚ ಉಳಿತ, ಇನ್ನ ಹೆಂಡ್ತಿ ಇಲ್ಲಾಂದರ ಮನಸ್ಸಿಗೆ ನೆಮ್ಮದಿ ಅಂತು ಸೈನ ಸೈ..ಇನ್ನೇನ ಶುಭ ಫಲಾ ಬೇಕಲೆ’ ಅಂತ ಹೇಳಿದಾ.
ನಮ್ಮ ಸಿಂಹ ರಾಶಿ ದೋಸ್ತಗ ’ಗ್ರಹಗಳ ಅನಕೂಲವಿದ್ದರೂ ನಿಮಗೆ ಏಕಾಂತತೆ ಕಾಡುತ್ತದೆ. ಸಿಂಹವು ಘರ್ಜಿಸುತ್ತದೆ. ದುಃಖಿಸುವದಿಲ್ಲಾ’ ಅಂತ ಹೇಳಿದ್ದಾ. ಮುಂದ ಅಂವಾ ಆಫೀಸ ಕೆಲಸದ ಮ್ಯಾಲೆ ಪೂಣಾಕ್ಕ ಹೋಗಿ ಸಿಕ್ಕೊಂಡಾ. ಅಂವಾ ತಲಿಕೆಟ್ಟ
’ಮಗನ….ಸಿಂಹವು ಘರ್ಜಿಸುತ್ತದೆ..ದುಃಖಿಸುವದಿಲ್ಲಾ…ಧೈರ್ಯ ತೊಗೊ ಅಂತ ನನಗ ಹೇಳ್ತಿ, ಮ್ಯಾಲೆ ನೀನ ’ ಲಾಕಡೌನ ಆಗಿ ಮನ್ಯಾಗ ಹೆಂಡ್ತಿ ಕೈಯಾಗ ಇಲಿ ಬೋನನಾಗ ಸಿಕ್ಕೊಂಡಂಗ ಸಿಕ್ಕೊಂಡೆನಿ’ ಅಂತಿ……ನಮಗೇನ ತಲಿ ಭವಿಷ್ಯಾ ಹೇಳ್ತಿಲೇ?’ ಅಂತ ಬೈದಾ
ಆದರೂ ನಮ್ಮ ದೋಸ್ತರಿಗೆ ಅವನ astrology knowledge ಮ್ಯಾಲೆ ಭಾರಿ ಅಭಿಮಾನ, ಈ ಮಗಾ ಇಷ್ಟ ತಿಳ್ಕೊಂಡೊಂವಾ ನಮಗ್ಯಾಕ ಈ ಕೊರೊನಾ, ಲಾಕಡೌನ ಬಗ್ಗೆ ಮೊದ್ಲ ಹೇಳಲಿಲ್ಲಾ, ಅವಂಗರ ಗೊತ್ತ ಇತ್ತಿಲ್ಲೊ ಅಂತ ಕೇಳಿದರ.
ದೋಸ್ತ astrology ಒಳಗ “ಪಂಚ ಭವತಿ…ಪಂಚ ನಾ ಭವತಿ” ಅಂದರ ಐದ ಆಗ್ತಾವ ಐದ ಆಗಂಗಿಲ್ಲಾ ಅಂತ ಹೇಳಿದಾ.
’ಲೇ ಹಂಗಿದ್ದರ ಇನ್ನಮ್ಯಾಲೆ ನೀ ನಮಗ ಖರೆ ಆಗೋ ಐದ ಭವಿಷ್ಯಾ ಇಷ್ಟ ಹೇಳ ಮಗನ’ ಅಂತ ನಾವ ಕಾಡಸಿದ್ವಿ.
ಇನ್ನ ಕರ್ಕ ರಾಶಿ ದೊಸ್ತಗ ’ಸಂಸಾರದಲ್ಲಿ ತಾಪತ್ರಯಗಳಿದ್ದರೂ ಗಲಾಟೆಗಳಿಗೆ ಅವಕಾಶ ಕೊಡದಿರಿ. ಮಾಡುವ ಕೆಲಸಗಳಿಗೆ ಭಯ ಬೇಡ. ವೀರತೆಯು ಮಾನವನ ಸರ್ವೋತ್ಕೃಷ್ಟ ಗುಣ. ಶನಿ ಅಷ್ಟೋತ್ತರ ಪಠಿಸಿ’ ಅಂತ ಹೇಳಿದಾ. ಅಲ್ಲಾ ತಿಂಗಾಳನ ಗಟ್ಟಲೇ ಮನ್ಯಾಗ ಇದ್ದಾಗ ಸಂಸಾರದಾಗ ತಾಪತ್ರಯ ಆಗೋದ ಸಹಜ. ಇನ್ನ ಹಂತಾದರಾಗ ’ವೀರತೆಯು ಗಂಡನ ಸರ್ವೋತ್ಕೃಷ್ಟ ಗುಣ’ ಆಗಬೇಕ, ಇಲ್ಲಾಂದರ ನಡೆಯಂಗಿಲ್ಲಾ.
ಅಂವಾ ’ಎಲ್ಲಿ ಶನಿ ಅಷ್ಟೋತ್ತರಲೇ ಮುಂಜಾನಿಯಿಂದ ರಾತ್ರಿ ತನಕ ಹೆಂಡ್ತಿ ಅಷ್ಟೋತ್ತರ ಪಠಣನ ನಡದದ’ ಅಂತ ಅಂದರ, ಇಂವಾ
‘ ನಾ ಹೇಳಿದ್ದು ಅದ ಮತ್ತ’ ಅನ್ನಬೇಕ?
ಇನ್ನ ನಮ್ಮ ಪವ್ಯಾನ ಭವಿಷ್ಯದಾಗ ’ಗೃಹಬಂಧನ…ಆದರೂ ರಾಜ ಯೋಗದ ಮೇಲೆ ಅಶುಭ ಫಲದ ಕರಿ ನೆರಳು’ ಅಂತ ಇತ್ತ…..
ಹಂಗ ಗೃಹ ಬಂಧನ ಹೋಸಾದೇನಲ್ಲಾ ಆದರ ಅಶುಭ ಫಲದ ಜೊತಿಗೆ ರಾಜ ಯೋಗನೂ ಅಂತ ಇತ್ತ. ಅಂವಂದ ಕತಿ ಏನಪಾ ಅಂದರ ಅವನೂ ಹಬ್ಬಕ್ಕ ಅತ್ತಿ ಮನಿಯವರ ಕರದಾರ ಅಂತ ಹುಚ್ಚರಂಗ ಹೈದರಾಬಾದನಿಂದ ಹುಬ್ಬಳ್ಳಿಗೆ ’ಬಿಸಿಬ್ಯಾಳಿ ಭಾತ ,ಶಾವಗಿ ಪಾಯಸ ಮ್ಯಾಲೆ ಒಂದ ಬೆಳ್ಳಿ ಬಟ್ಟಲದ’ ಆಶಾಕ್ಕ ಬಂದ ಅತ್ತಿ ಮನ್ಯಾಗ ಗೃಹಬಂಧನದಾಗ ಇದ್ದಾನ…ಇನ್ನ ಅತ್ತಿ ಮನ್ಯಾಗ ಇದ್ದಾನ ಅಂದರ ಅಶುಭ ಫಲಾನ…ಆದರ ಅಳಿಯಾ …ಹಿಂಗಾಗಿ ರಾಜ ಭೋಗಾನೂ ಅನುಭವಿಸಲಿಕತ್ತಾನ.
ಮಜಾ ಅಂದರ ಅವನ ಅತ್ತಿ ಭವಿಷ್ಯದಾಗನೂ ಅಶುಭ ಫಲಾ ಅಂತ ಇತ್ತ, ಅದಕ್ಕ ಏನ explanationಲೇ ನಿಂದು ಅಂತ ಪವ್ಯಾ ವಿನ್ಯಾಗ ಕೇಳಿದರ
’ದೋಸ್ತ ಲಗ್ನಾ ಮಾಡ್ಕೊಬೇಕಾರ ಬರೇ ಹುಡುಗಾ-ಹುಡುಗಿದ ಇಷ್ಟ ಕುಂಡ್ಲಿ ನೋಡಬಾರದ್ಲೇ…ಅತ್ತಿ-ಸೊಸಿದು, ಅತ್ತಿ-ಅಳಿಯಾಂದನೂ ನೋಡ್ಬೇಕಾಗ್ತದ. “ಕನ್ಯಾರಾಶಿಸ್ತಿಥೋ ನಿತ್ಯಂ ಜಾಮಾತಾ ದಶಮಗ್ರಹಃ ” ಅಂತಾರ ಅಂದರ ಒಂಬತ್ತ ಗ್ರಹಗಳು ರಾಶಿ ಟು ರಾಶಿ ಮೂವ ಆಗ್ತಾವ ಆದರ ಈ ಅಳಿಯಾ ಅನ್ನೊ ಹತ್ತನೆ ಗ್ರಹ ಶಾಶ್ವತವಾಗಿ ನಿನ್ನಂಗ ಕನ್ಯಾರಾಶಿಯಲ್ಲೇ ಅಂದರ ಅತ್ತಿ ಮನ್ಯಾಗ ಇದ್ದರ ಅದ ಅತ್ತಿಗೆ ಅಶುಭ ಫಲಾನ’ ಅಂತ ಅಂದಾ.
ಅಲ್ಲಾ, ಹಂಗ ಹಿರೇಮನಷ್ಯಾರ “ನಿಮ್ಮ ಕೈನಲ್ಲೇ ನಿಮ್ಮ ಭವಿಷ್ಯ ಇದೆ” ಅಂತಿದ್ದರು….ಕೊರೊನಾ ಬಂದ ಮ್ಯಾಲೆ ನಂಗ ಅದ ಖರೆ ಅನಸಲಿಕತ್ತದ.
ನಾ ಕಡಿಕೆ ಅವಂಗ ’ದೊಸ್ತ ನೀ ನಮ್ಮ ಕುಂಡ್ಲಿ, ಕೈ ನೋಡಿ ಭವಿಷ್ಯ ಹೇಳಿದ್ದ ಸಾಕ. ಒಂದ ಸಲಾ ಆ ಕೊರೊನಾದ್ದ ಕೈ ನೋಡಿ ನಮ್ಮ ಮುಂದಿನ ಭವಿಷ್ಯ ಏನ ಹೇಳಪಾ, ಅದಕ್ಕ ಯಾವಾಗಿಂದ ಶನಿ ಕಾಟಾ?’ ಅಂತ ಕೇಳಿದರ
’ದೊಸ್ತ…ಏನ ಕಾಳಜಿ ಮಾಡಬ್ಯಾಡ…ಏತದಪಿ ಗಮಿಷ್ಯತಿ , this too shall pass….ಈ ಕೊರೊನಾ ಹೋಗ್ತದ, ಭಾಳ ಲಗೂ ಹೋಗ್ತದ’ ಅಂತ ಹೇಳ್ಯಾನ.
ಅಂವಾ ಹೇಳಿದ್ದ ’ಪಂಚ ಭವತಿ’ ಭವಿಷ್ಯದೊಳಗ ಬರಲಿ ಅಂತ ಆಶಿಸುತ್ತಾ, ಅಲ್ಲಿ ತನಕ ನಾವು-ನೀವು ಸೊಸಿಯಲ್ ಡಿಸ್ಟನ್ಸ ಮೆಂಟೇನ್ ಮಾಡೋಣ.
ಛಂದ ಬರೆದೀರಿ ಸರ್ .. ಈಗಂತೂ ಸೆಲ್ಫಿಯೇ ಹುಚ್ಚು ಬಹಳ ಆಗೇದ . ಎಷ್ಟೋ ಜನ ಸೆಲ್ಫಿಯೇ ತೆಗೀಲಿಕ್ಕೆ ಹೋಗಿ ಪ್ರಾಣಾನೂ ಕಳಕೊಂಡಾರ ..