ನಾವ ಸಣ್ಣ ಹುಡುಗರ ಇದ್ದಾಗ ಒಂದ ಆಟಾ ಆಡ್ತಿದ್ವಿ,
’ಅವರನ ಬಿಟ್ಟ…ಇವರನ ಬಿಟ್ಟ…ಇವರ್ಯಾರು’ ಅಂತ ಕಣ್ಣ ಮುಚಗೊಂಡ ಎದರಿಗೆ ನಿಂತ ಮೂರ ನಾಲ್ಕ ಮಂದಿ ದೋಸ್ತರನ ಕರೆಕ್ಟ ಗೊತ್ತ ಹಿಡಿಯೋದ. ಒಬ್ಬರ ನಮ್ಮ ಕಣ್ಣ ಮುಚ್ಚತಿದ್ದರು, ಕಣ್ಣ ಮುಚ್ಚಿದ ಕೂಡ್ಲೇ ಎದರಗಿನ ದೊಸ್ತರ ತಮ್ಮ ಪೋಸಿಶನ್ ಚೇಂಜ್ ಮಾಡಿ ಅದ್ಲಾ-ಬದ್ಲಿ ಆಗ್ತಿದ್ದರ. ನಾವ ಅವರ ಯಾರ ಅಂತ ಕರೆಕ್ಟ ಹೇಳಿದರ ಅವರ ಔಟ. ಅಲ್ಲಾ ಇದ ಅಗದಿ ಒಂದ ನಲವತ್ತ ವರ್ಷದ ಹಿಂದಿನ ಆಟ ಬಿಡ್ರಿ, ಈಗ ಭಾಳ ಮಂದಿಗೆ ನೆನಪೂ ಇರಲಿಕ್ಕಿಲ್ಲಾ.
ಇರಲಿ, ಈಗ ನಾ ಹೇಳಲಿಕತ್ತಿದ್ದ ಏನಂದರ ಆವಾಗ ನಾವ ಹೆಂಗ ಈ ಅದ್ಲಾ-ಬದ್ಲಿ ಆಟಾ ಆಡ್ತಿದ್ವಿ ಹಂಗ ಮನಿ ಒಳಗ ನಮಗ ಗೊರ್ತ ಇರಲಾರದ ಒಂದಿಷ್ಟ ಭಾಂಡಿ ಸಾಮಾನನು ಅದ್ಲಾ-ಬದ್ಲಿ ಅಗಿರ್ತಿದ್ವು. ಅವು ಯಾರ ಮನಿವು ಅಂತ ಗೊತ್ತ ಹಿಡಿಯೋದ ಈ ಆಟದಂಗ ಇರ್ತಿತ್ತ.
ನಮ್ಮಪ್ಪ ಊಟಕ್ಕ ಕೂತಾಗ ಬರೇ ಸಾರಿಗೆ ಹಾಕಿದ್ದ ಹಿಂಗ ಬದಲಾದರ ಇಷ್ಟ ಗೊತ್ತಾಗತಿದ್ದಿಲ್ಲಾ, ಆ ಬಟ್ಲ ಬದಲಾದರ ಸಹಿತ ಗೊತ್ತಾಗತಿತ್ತ. ನಮ್ಮವ್ವ ಸಾರ ಹೆಂಗ ಆಗೇದ ಅಂತ ಕೇಳಿದರ ಅಂವಾ ಈ ಸಾರ ಬಟ್ಲ ಯಾರದು ಯಾಕೋ ವಜ್ಜಾ ಅದ ಅಲಾ ಅಂತ ಅಂತಿದ್ದಾ. ಅಷ್ಟ ನಮ್ಮಪ್ಪಗ ನಮ್ಮನಿ ಸಾಮಾನ, ಮಂದಿ ಮನಿ ಸಾಮಾನ ಕರೆಕ್ಟ ಗೊತ್ತ ಆಗತಿದ್ವು. ಇನ್ನ ಚಹಾ ವಾಟಗಾ ಬದಲ ಆದರು ಗೊತ್ತಾಗತಿತ್ತ. ಹಂಗ ನಮ್ಮ ಮನ್ಯಾಗ ಇವತ್ತೂ ಯಾರ ಬಂದರು ಚಹಾ ವಾಟಗದಾಗ ಕೊಡ್ತಾರ. ಹಂಗ ನಾ ಡಜನ್ ಗಟ್ಟಲೇ ಒಂದೊಂದ ಡ್ರಿಂಕಿಗೆ ಒಂದೊಂದ ಥರದ್ದ ಗ್ಲಾಸ್, ಕಪ್ ತಂದ ಇಟ್ಟೇನಿ. ಅವೇಲ್ಲಾ ಶೋಕೇಸ್ ಒಳಗ ಮಂದಿಗೆ ತೊರಸಲಿಕ್ಕೆ ಇಷ್ಟ.
ಅದರಾಗ ಆಗಿನ ಕಾಲದಾಗ ಆಜು ಬಾಜು ಮನಿಯವರ ಒಬ್ಬರಿಗೊಬ್ಬರ ಕಡಾ ಕೊಡೋದು ತೊಗೊಳೊದು ಕಾಮನ್ ಇತ್ತ. ಕಡಾ ಅಂದರ ಸಾಲಾ, borrowing. ಅದು ವಾಪಸ ಕೊಡೊ ವಸ್ತು ಇದ್ದರ ಸಾಲಾ ಇಲ್ಲಾಂದರ ಇಲ್ಲಾ. ಈಗ ಹೆಪ್ಪಿಗೆ ಮಸರ ಒಯ್ತಾರ, ಆ ಮಸರ ಏನ ಅವರ ಕಡೆ ವಾಪಸ ಇಸ್ಗೊಳಿಕ್ಕೆ ಬರಂಗಿಲ್ಲಾ ಆದರ ಆ ಮಸರ ಹಾಕಿ ಕೊಟ್ಟಿದ್ದ ಬಟ್ಲಾನರ ವಾಪಸ ಕೊಡಬೇಕ.
ಇನ್ನ ಆವಾಗ
’ ಅಯ್ಯ…ಸಕ್ಕರಿ ಖಾಲಿ ಆಗೇದ ನೋಡೇಲ್ವಾ…ಒಂದ ವಾಟಗಾ ಸಕ್ಕರಿ ಕೊಡ’
’ನಮ್ಮ ಮನೇಯವರಿಗೆ ಭಕ್ಕರಿನ ಬೇಕಂತ, ಜೋಳಾ ತಂದ ಒಂದ ವಾರ ಆತ ಗಿರಣಿಗೆ ಹಾಕಸಲಿಕ್ಕೆ ಆಗವಲ್ತ, ಒಂದ ಕಾಲ್ಪೋವ್ ಜೋಳದ ಹಿಟ್ಟ ಕೊಡ’
’ನಮ್ಮ ಅತ್ತಿಗೆ ಮೆತ್ತಗನಿ ಉಪ್ಪಿಟ್ಟ ಬೇಕಂತ, ಮನ್ಯಾಗ ಬಾಂಬೆ ರವಾ ಖಾಲಿ ಆಗೇದ, ಒಂದ ಬಟ್ಲಾ ರವಾ ಕೊಡ್ವಾ’ ಅಂತೇಲ್ಲಾ ಕಡಾ ಇಸ್ಗೊತಿದ್ದರು. ಒಂದಿಷ್ಟ ಮಂದಿ ಅಂತೂ ಅನಿವಾರ್ಯ ಇದ್ದದ್ದು ಇರಲಾರದ್ದು ಎಲ್ಲಾ ಕಡಾ ಇಸ್ಗೊಳೊರು
’ಒಂದ ವಾಟಗಾ ಕಡ್ಲಿಹಿಟ್ಟ ಇದ್ದರ ಕೊಡ್ರಿ, ನಮ್ಮ ಮನೆಯವರಿಗೆ ಸಂಜಿಗೆ ಚಹಾದ ಜೊತಿ ಕಾಂದಾಭಜಿ ಬೇಕಂತ ಗಂಟ ಬಿದ್ದಾರ’ ಅಂತ ತಮ್ಮ ಬಯಕಿಗೆ ಕಡಾ ಇಸ್ಗೊಂಡರ ಕೆಲವೊಮ್ಮೆ
’ಒಂದ ಅರ್ಧಾ ವಾಟಗಾ ಸಾರ ಇದ್ದರ ಕೊಡ್ವಾ, ಇವತ್ತ ನಮ್ಮ ಮನಿಯವರದ ಇಷ್ಟ ಊಟ, ನಂಬದೇಲ್ಲಾ ಸಂಕಷ್ಟಿ ಹಿಂಗಾಗಿ ಬ್ಯಾಳಿನ ಬೇಯಸಿಲ್ಲಾ” ಅಂತ ಸಾರ ಇಸ್ಗೊಂಡ ಹೋಗೊರ.
ಅಕ್ಕಿ, ತೊಗರಿ ಬ್ಯಾಳಿ ಇಸ್ಗೊಂಡರ ವಾಪಸ ಬರ್ತಿತ್ತ ಅನ್ನರಿ ಇನ್ನ ಸಾರ ಹೆಂಗ ಕೇಳ್ತೇರಿ? ಹಿಂತಾ ಜನಾ ಇದ್ದರ ಆವಾಗ. ಈಗೂ ಇದ್ದಾರ ಆ ಮಾತ ಬ್ಯಾರೆ.
ಒಟ್ಟ ಹಿಂಗ ಕಡಾ ಕೊಟ್ಟದ್ದರೊಳಗ ಒಂದಿಷ್ಟ ರಿಟರ್ನೇಬಲ್ ವಿಥ್ ಕಂಟೇನರ್ ಅಂದರ ಇವನ್ನ ಸಾಲಾ ಅಂತನ ಒಯ್ಯೋದು ಮತ್ತ ವಾಪಸ್ಸ ಎದರಾಗ ಓಯ್ದಿರ್ತಾರ ಅದರ ಜೊತಿನ ಕೊಡಬೇಕ. ಒಮ್ಮೊಮ್ಮೆ ಒಂದ ವಾರ ತನಕ ನಾವ ನೋಡಿ ನೋಡಿ ಕಡಿಕೆ ಬಾಯಿ ಬಿಟ್ಟ
’ಜೋಳಾ ಗಿರಣಿಗೆ ಹಾಕಿಸಿದರೇನ್ವಾ…ನಂಬದು ಹಿಟ್ಟ ತೀರಲಿಕ್ಕೆ ಬಂದದ, ನಮ್ಮ ಮನೆಯವರ ಮುದ್ದಿ ಮಾಡ ಅಂತ ಗಂಟ ಬಿದ್ದಾರ’ ಅಂತ ನಾವ ರಿಮೈಂಡ ಮಾಡಬೇಕಾಗ್ತಿತ್ತ.
ಅದರಾಗ ನಮ್ಮವ್ವನ್ನ ನೆನಪಿನ ಶಕ್ತಿ ಭಾಳ ಕಡಿಮಿ ಇತ್ತ. ಹಿಂಗಾಗಿ ಯಾರಿಗರ ಅಕಿ ಏನರ ಕಡಾ ಕೊಟ್ಟರ ಅವರಾಗೆ ವಾಪಸ ಕೊಟ್ಟರ ಇಷ್ಟ ಅದು ರಿಟರ್ನ್ ಆಗತಿತ್ತ. ನಮ್ಮಪ್ಪಾ ತಲಿ ಕೆಟ್ಟ
’ಅವರಿಗೆ ಕೊಟ್ಟದ್ದ ರವಾ ಹೋದರ ಹೋಗ್ಲಿ ಅದನ್ನ ಹಾಕಿ ಕೊಟ್ಟದ್ದ ಬಟ್ಲಾನರ ವಾಪಸ ಇಸ್ಗೊ’ ಅಂತ ಬೈತಿದ್ದಾ. ಮತ್ತ ಮ್ಯಾಲೆ
’ನೀ ಯಾರರ ಕಡಾ ಕೇಳಿದರ ಗಂಡನ್ನೂ ಕೊಟ್ಟ ಮರಿಯೊ ಪೈಕಿ ತೊಗೊ’ ಅಂತ ಬೈತಿದ್ದಾ. ಆದರ ಪಾಪ ಅವನ ಹಣೇಬರಹದಾಗ ಅದ ಬರದಿದ್ದಿಲ್ಲಾ ಹಿಂಗಾಗೆ ನಮ್ಮ ಮನ್ಯಾಗ ಉಳದಾ ಆ ಮಾತ ಬ್ಯಾರೆ.
ಇರಲಿ ಇವತ್ತಿನ ಮೇನ್ ಮುದ್ದಾ ಕಡಾ ಕೊಡೊದು ತೊಗೊಳೊದು ಅಲ್ಲಾ ಆದರ ಹಿಂಗ ಕೊಟ್ಟ- ತೊಗೊಂಡ ಮಾಡೋದರಾಗ ಮಂದಿ ಮನಿ ಸಾಮಾನ ನಮ್ಮ ಮನ್ಯಾಗ ಬರ್ತಾವ ಅಲಾ ಅದರ ಬಗ್ಗೆ ನಾ ಹೇಳಲಿಕತ್ತಿದ್ದ.
ಹಂಗ ಆಗಿನ ಕಾಲದಾಗ ಸ್ಟೀಲ್ ಭಾಂಡಿ ಅಂದರ ಒಂದ ವಾಟಗಾ, ಬಟ್ಲದಿಂದ ಹಿಡದ ತಪ್ಪೇಲಿ-ತಾಟ ತನಕಾನೂ ಎಲ್ಲಾದರೂ ಮ್ಯಾಲೆ ಹೆಸರ ಬರಸೊ ಚಾಳಿ ಇತ್ತ. ಹಿಂಗಾಗಿ ಯಾರದ ಮನಿದ ಸಾಮನ ಬಂದರು ಗೊತ್ತಾಗತಿತ್ತ. ಆದರ ಒಮ್ಮೋಮ್ಮೆ ಅದ ಹೆಂಗ ಬಂತ ಅನ್ನೋದ ಗೊತ್ತಾಗತಿದ್ದಿಲ್ಲಾ. ಕೆಲವೊಮ್ಮೆ ಮತ್ತೊಬ್ಬರ ಮನಿ ಪಾತೇಲಿ ನಮ್ಮ ಮನಿಗೆ ಬರತಿತ್ತ ವಾಪಸ ಇನ್ನೊಬ್ಬರ ಮನಿಗೆ ಹೋಗ್ತಿತ್ತ. ಹಿಂಗ ಒಬ್ಬರ ಮನಿ ಸಾಮಾನ ಮತ್ತೊಬ್ಬರ ಮನಿಗೆ ಹೋಗಿ ಅಲ್ಲಿಂದ ಮತ್ತ ಯಾರದೋ ಮನಿಗೆ ಹೋಗಿ ಅದ್ಲಾ-ಬದ್ಲಿ ಆಗಿ ಬಿಡ್ತಿದ್ವು. ಅದಕ್ಕ ನಾ ಹೇಳಿದ್ದ , ಇದ ಅವರದ ಬಿಟ್ಟ ಇವರದ ಬಿಟ್ಟ ಯಾರ ಮನಿದು ಅಂತ.
ಒಂದ ಸರತೆ ನಮ್ಮ ಮನ್ಯಾಗ ಒಂದ ಡಬ್ಬಿ ಬಂದಿತ್ತ. ಅದು ನಮ್ಮಪ್ಪ ಮುಲ್ಲಾನ ಓಣಿ ಒಳಗ ಬಾಂಬೆ ಪ್ರಿಂಟಿಂಗ್ ಪ್ರೆಸನಾಗ ಕೆಲಸಾ ಮಾಡ್ಬೇಕಾರ ಅವರ ರಮಜಾನಕ್ಕ ಸುರುಕುಂಬಾ (ಶೀರ ಕುರ್ಮಾ) ಮಾಡಿದಾಗ ನಮ್ಮ ಮನಿಗೆ ಕೊಟ್ಟ ಕಳಸಿದ್ದ ಡಬ್ಬಿ. ನಮ್ಮವ್ವ ಇನ್ನ ಅದರಾಗ ನಾವ ಏನರ ಹಾಕಿ ವಾಪಸ ಕೊಡಬೇಕಲಾ ಅಂತ ತೊಳಿ ಬೇಕಾರ ನೋಡಿದ್ಲು ಅದರ ಮ್ಯಾಲೆ ಸೌಂಶಿಕರ ಅಂತ ಬರದಿತ್ತ.
ನಮ್ಮಪ್ಪ ಸೌಂಶಿಕರವರ ಡಬ್ಬಿ ಒಳಗ ಸುರುಕುಂಬಾ ಹೆಂಗ ಬಂತ ಅಂತ ತಲಿ ಕೆಡಸ್ಗೊಂಡ ಆ ಸುರುಕುಂಬಾ ಕೊಟ್ಟೊರನ ಕೇಳಿದರ ಅವರ
’ಏ.. ತುಮಾರಾ ಘರಕಾಚ್, ಮೂರ ತಿಂಗಳ ಪಿಛೆ ತುಮಾರ ಘರಸೇಚ್ ಓ ಕಟ್ಟಿನ ಸಾರ ಡಾಲಕೋ ನೀವ ಕೊಟ್ಟಿತ್ತ’ ಅಂತ ಅಂದರು.
ಅವರಿಗೆ ಕಟ್ಟಿನ ಸಾರ ಸೇರತದ ಅಂತ ನಮ್ಮವ್ವ ಕೊಟ್ಟಿದ್ಲು. ಪಾಪ ಅವರ ಆ ಡಬ್ಬಿ ರಮಜಾನ್ ಟೈಮ್ ಒಳಗ ಸುರುಕುಂಬಾ ಹಾಕಿ ವಾಪಸ ಕೊಟ್ಟಿದ್ದರ.
ನಮ್ಮವ್ವಗ ಅವರಿಗೆ ಡಬ್ಬಿ ಕೊಟ್ಟದ್ದು ನೆನಪ ಇದ್ದಿದ್ದಿಲ್ಲಾ, ಅಲ್ಲಾ ಮೊದ್ಲ ಹೇಳಿದೆ ಅಲಾ ಅಕಿಗೆ ನೆನಪಿನ ಶಕ್ತಿ ಕಡಮಿ ಅಂತ.
ಅದ ಇರಲಿ ಸೌಂಶಿಕರವರ ಡಬ್ಬಿ ನಮ್ಮ ಮನಿಗೆ ಹೆಂಗ ಬಂತು ಅಂತ ನಮ್ಮವ್ವ ವಿಚಾರ ಮಾಡಿದರ ತೊರವಿಗಲ್ಲಿ ರಾಯರ ಮಠದಾಗ ಆರಾಧನೆ ಊಟಕ್ಕ ಹೋದಾಗ ಮಠದ ಹುಳಿ ಮನಿಗೆ ಪಾರ್ಸೆಲ್ ತೊಗೊಂಡ ಬರಲಿಕ್ಕೆ ಸೌಂಶಿಕರವರ ಮನಿಗೆ ಹೋಗಿ ಡಬ್ಬಿ ಇಸ್ಗೊಂಡ ಬಂದಿದ್ದ ನೆನಪಾತ. ಪಾಪ ಸೌಂಶಿಕರವರ ಡಬ್ಬಿ ವಾಪಸ ಕೇಳೊದ ಮರತಿದ್ದರ. ಅದು ನಮ್ಮ ಮನಿ ಇಂದ ಮುಲ್ಲಾನ ಓಣಿಗೆ ಕಟ್ಟಿನ ಸಾರ ಕಟಗೊಂಡ ಹೋಗಿ ಸುರುಕುಂಬಾ ಆಗಿ ಮತ್ತ ವಾಪಸ ಬಂತ. ಕಡಿಕೆ ನಮ್ಮವ್ವ ಖಾಲಿ ಡಬ್ಬಿ ಹಂಗ ಸೌಂಶಿಕರ ಅವರಿಗೆ ಕೊಡ್ಲಿಕ್ಕೆ ಬರಂಗಿಲ್ಲಾ ಅಂತ ಅದರ ಸಂಬಂಧ ಎರಡ ಕಾಯಿ ಒಡದ ಅರ್ಧಾ ಕೆ.ಜಿ ಸಕ್ಕರಿ ತಂದ ಕೊಬ್ಬರಿವಡಿ ಮಾಡಿ ಅವರ ಮನಿಗೆ ವಾಪಸ ಕೊಟ್ಲು ಆ ಮಾತ ಬ್ಯಾರೆ.
ಹಿಂಗ ಒಬ್ಬರ ಮನಿ ಸಾಮಾನ ಮತ್ತೊಬ್ಬರ ಮನಿಗೆ ಹೊಗೊದ ಒಂದ ಕಾಲದಾಗ ಸಹಜ ಇತ್ತ. ಈಗ ಜನಾ ಹಂಗ ಕಡಾ ಕೊಡೊದು-ಇಸ್ಗೊಳೊದ ಕಡಮಿ ಆಗೇದ ಹಂಗೇನರ ಕೊಟ್ಟರು ಪ್ಲ್ಯಾಸ್ಟಿಕ್ ಕಂಟೇನರ್ ಒಳಗ ಕೊಡ್ತಾರ.
ಅಲ್ಲಾ, ಈಗ ಎಲ್ಲಾ ಬಿಟ್ಟ ಈಗ್ಯಾಕ ಇದ ನೆನಪಾತ ಅಂದರ ನಿನ್ನೆ ದೀಪಾವಳಿ ಫರಾಳ ಸ್ಟೀಲಿನ ಡಬ್ಬಿ ಒಳಗ ಹಾಕಿ ಕೊಟ್ಟೊರದೇಲ್ಲಾ ನಾವ ರಿಟರ್ನ್ ಮಾಡ್ಲಿಕತ್ತಿದ್ದಿವೆ ಆವಾಗ ಹಳೇ ಕಥಿ ನೆನಪಾತ. ನೋಡ್ರಿ ಒಂದ ಸಲಾ ನಿಮ್ಮ ಮನ್ಯಾಗೂ ನಮ್ಮ ಮನಿದ ಏನರ ವಾಟಗಾ- ಬಟ್ಲಾ- ಡಬ್ಬಿ-ಪಾತೇಲಿ ಏನರ ಬಂದಾವೇನ ಅಂತ ಮತ್ತ.