ಮೊನ್ನೆ ಮುಂಜ-ಮುಂಜಾನೆ ನಸಿಕಲೇ ವಾಕಿಂಗ ಮುಗಿಸಿಗೊಂಡ ಹಿಂಗ ಮನಿ ಕಡೆ ಬರಲಿಕ್ಕೆ ಹತ್ತಿದ್ದೆ, ನಮ್ಮ ಆಜು ಬಾಜು ಮನಿ ಹೆಣ್ಣ ಮಕ್ಕಳ ಹರಟಿ ಹೊಡ್ಕೊತ ವಾಕಿಂಗ ಹೊಂಟಿದ್ದರು. ಹಂಗ ನಾ ಖರೇ ಹೇಳ್ತೇನಿ ಈ ಹೆಣ್ಣ ಮಕ್ಕಳ ವಾಕಿಂಗ ಮಾಡ್ಬೇಕ ಅಂತ ಮಾಡ್ತಾರೋ ಇಲ್ಲಾ ಟಾಕಿಂಗ ಸಂಬಂಧ ವಾಕಿಂಗ ಮಾಡ್ತಾರೋ ಆ ದೇವರಿಗೆ ಗೊತ್ತ. ಹಿಂಗಾಗೆ ನನ್ನ ಹೆಂಡ್ತಿ ವಾಕಿಂಗೂ ಬ್ಯಾಡಾ ಟಾಕಿಂಗೂ ಬ್ಯಾಡ ನಡಿ ಅಂತ ಗಡದ್ದ ಹೊತೊಗೊಂಡ ಮಲ್ಕೊಂಡಿರ್ತಾಳ.
ಇನ್ನ ಹಿಂಗ ವಾಕ್ ದ ಟಾಕ್ ಹೊಂಟಾಗ ಈ ಹೆಣ್ಣ ಮಕ್ಕಳ ಏನೇನ ಮಾತಾಡ್ತಾರ ಏನ್ತಾನ. ಅಗದಿ ಭಾರಿ ಭಾರಿ ಸುದ್ದಿ ಮಾತಾಡ್ತಿರ್ತಾರ, ಒಬ್ಬೊಕಿ ಸೊಸಿದ ಛಾಡಾ ಹೇಳ್ತಿರ್ತಾಳ, ಮತ್ತೊಬ್ಬಕಿ ಅತ್ತಿದ ಹೇಳ್ತಿರ್ತಾಳ, ಇತ್ತಲಾಗ ಇನ್ನೊಬ್ಬಕಿ ಬಾಜು ಮನಿಕೆ ಸುದ್ದಿ ಹೇಳ್ತಿರ್ತಾಳ. ಅಲ್ಲಾ ಹಿಂಗ ಹೊಟ್ಟಿ ತುಂಬ ಮಾತಾಡ್ಕೋತ ಎಷ್ಟ ವಾಕಿಂಗ ಮಾಡಿದರು ಕೊಲೆಸ್ಟ್ರಾಲ್ ಇಳಿಯಂಗಿಲ್ಲ ಬಿಡ್ರಿ…ಅದಕ್ಕ ನಮ್ಮಕಿ ’ನಮ್ಮನಿ ಬೊಜ್ಜ ನಮಗ ಇರಲಿ’ ಅಂತ ವಾಕಿಂಗ ಹೋಗಂಗಿಲ್ಲಾ.
ನಾ ಎಷ್ಟ ಊರ ಮಂದಿ ಉಸಾಬರಿ ನನಗ್ಯಾಕ, ಅವರಿವರ ಸುದ್ದಿ ತೊಗೊಂಡ ಏನ ಮಾಡಬೇಕ ಅಂತ ಅನ್ಕೊಂಡಿರ್ತೇನಿ ಖರೆ ಆದರ ಮನಸ್ಸ ಕೆಪ್ಪ ಆದರೂ ಕಿವಿ ಕೆಪ್ಪ ಅಲ್ಲಲಾ, ಮತ್ತ ಕಿವ್ಯಾಗ ಅವರ ಮಾತಾಡಿದ್ದ ನಾಲ್ಕ ಮಾತ ಬಿದ್ದ ಬಿಡ್ತಾವ. ಅಲ್ಲಾ ಒಮ್ಮೊಮ್ಮೆ ಅವ ಆರ್ಟಿಕಲ್ ಬರಿಲಿಕ್ಕೆ ಸಬ್ಜೆಕ್ಟ ಆಗ್ತಾವ ಆ ಮಾತ ಬ್ಯಾರೆ, ಮೊನ್ನೆನು ಹಂಗ ಆತ ನಾ ಇನ್ನೇನ ನಮ್ಮನಿ ಕ್ರಾಸಗೆ ಹೊಳ್ಳಬೇಕು ಅನ್ನೋದರಾಗ ನಮ್ಮ ಎದರಗಿನ ಮನಿ ಲೈನನಾಗಿ ಮೂರ ನಾಲ್ಕ ಅಂಟಿಗೊಳ ಮಾತಾಡ್ಕೊತ ಬಂದರು, ಅದರಾಗ ಒಬ್ಬರು
’ಏ…ಇಲ್ಲಾ ಅವರ ಬೆಂಗಳೂರಿಗೆ ಓಯ್ದಾರ’ ಅಂತ ಅನ್ಕೋತ ಹೋದರು. ನಾ ಒಮ್ಮಿಕ್ಕಲೇ ಗಾಬರಿ ಆದೆ, ಯಾರನ ಬೆಂಗಳೂರಿಗೆ ಒಯ್ದಾರ ಅಂತ. ಆಮ್ಯಾಲೆ ನೆನಪಾತ ಮುಂದಿನ ಓಣಿ ಜೋಶಿ ಅಜ್ಜಿಗೆ ಆರಾಮ ಇದ್ದಿದ್ದಿಲ್ಲಾ, ಲೈಫ್ ಲೈನದಾಗ ಅಡ್ಮಿಟ್ ಇದ್ದರು ಬಹುಶಃ ಅವರಿಗೇನರ ಸಿರಿಯಸ್ ಆಗಿರಬೇಕ, ಬೆಂಗಳೂರಿಗೆ ಒಯ್ದಾರೋ ಏನೋ ಅಂತ ಗಾಬರಿ ಆಗಿ ಮನಿಗೆ ಬಂದವನ ನಮ್ಮವ್ವಗ ಕೇಳಿದೆ.
’ಏ, ಆ ಜೋಶಿ ಅಜ್ಜಿಗೆ ಡಿಸಚಾರ್ಜ್ ಮಾಡಿ ಮೂರ ದಿವಸ ಆತ, ಅಗದಿ ಈಗ ಗುಂಡಕಲ್ ಇದ್ದಂಗ ಇದ್ದಾರ…..ಅವರನ ಯಾಕ ಬೆಂಗಳೂರಿಗೆ ಒಯ್ತಾರ’ ಅಂತ ನಮ್ಮವ್ವ ಅಂದ್ಲು. ಹಂಗರ ಮತ್ತ ಯಾರನ ಬೆಂಗಳೂರಿಗೆ ಒಯ್ದಾರ ಅಂತ ನಂಗ ತಲ್ಯಾಗ ಕೊರಿಲಿಕತ್ತ. ಹಕಿಕತ್ ಏನ ತಿಳ್ಕೊಂಡ ಬಿಡೋಣ ತಡಿ ಅಂತ ಮನಿ ಗೇಟ ಮುಂದ ನಿಂತ ಆ ಅಂಟಿಗೊಳ ನೆಕ್ಸ್ಟ ರೌಂಡ ನಮ್ಮ ಮನಿ ಮುಂದ ಬಂದಾಗ
’ಏ,…ಯಾರನ ಬೆಂಗಳೂರಿಗೆ ಒಯ್ದಾರ’ ಅಂತ ಕೇಳಿದೆ.
ಒಂದ ಸರತೆ ಅವರೇಲ್ಲಾ ನನ್ನ ಮಾರಿ ನೋಡಿ ಕಡಿಕೆ ಉಮಾ ಅಂಟಿ
’ಏ…ಯಾರನು ಒಯ್ದಿಲ್ಲೊ ಮಾರಾಯಾ…ವನಜಾ ಅಂಟಿ ಗಿರಿಜಾ ಅಂಟಿಗೆ ಜಂಪರ್ ಹೊಲಿಲಿಕ್ಕೆ ಕೊಟ್ಟಿದ್ದರು, ಅವರ ಬೆಂಗಳೂರಿಗೆ ಮಗನ ಕಡೆ ಹೋಗಬೇಕಾರ ಅಲ್ಲೇ ಹೊಲ್ಕೊಂಡ ಬರ್ತೇನಿ ಅಂತ ಜಂಪರ್ ಪೀಸ ತೊಗೊಂಡ ಹೋಗ್ಯಾರ, ಅದಕ್ಕ ನಾವ ’ ಬೆಂಗಳೂರಿಗೆ ಒಯ್ದಾರ’ ಅಂದಿದ್ದ ತೊಗೊ’ ಅಂತ ಕ್ಲಾರಿಫೈ ಮಾಡಿದರು.
ಏನ್ಮಾಡ್ತೀರಿ…ಅದಕ್ಕ ಹೇಳೋದ ಒಂದ ಹಂಗ ಮಂದಿ ಮಾತಾಡೋದನ್ನ ಕದ್ದ ಕೇಳ ಬಾರದ, ಹಂಗ ಕೇಳಿದರು ಛಂದಾಗಿ ಪೂರ್ತಿ ಕೇಳಬೇಕ ಅಂತ. ನಾ ನೋಡಿದರ ಏಲ್ಲೋ ಪಾಪ ಜೋಶಿ ಅಜ್ಜಿ ಸಿರಿಯಸ್ ಆಗ್ಯಾರ ಅಂತ ಹೆದರಿದ್ದೆ.
ಇನ್ನ ಈ ಗಿರಿಜಾ ಅಂಟಿ ಏನ ಇದ್ದಾರಲಾ ಅವರ ನಮ್ಮ ಓಣ್ಯಾಗಿನ ಫೇಮಸ ಲೇಡಿಸ್ ಟೇಲರ್, ಪಾಪ ಹಂಗ ಸಸ್ತಾದಾಗ ಬ್ಲೌಸ ಹೊಲಿತಾರಂತ ಎಲ್ಲಾರೂ ಅವರ ಕಡೆನ ಕೊಡ್ತಾರ, ಹಿಂಗಾಗಿ ಅವರಿಗೆ ಪುರಸೊತ್ತ ಇಲ್ಲದಷ್ಟ ಕೆಲಸ ಬರ್ತಾವ. ಎಲ್ಲೇರ ಊರಿಗೆ-ಕೇರಿಗೆ ಹೋದರು ಸಹಿತ ಪಾಪ ಗಿರಾಕಿ ಗೊಳಿಗೆ ಟೈಮ ಸೀರ ಬ್ಲೌಸ ಕೊಡಲಿಲ್ಲಾ ಅಂದರ ಹೆಂಗ ಅಂತ ಹೋದಲ್ಲೆ ಬಂದಲ್ಲೇ ಎಲ್ಲಾ ಜಂಪರ್ ಪೀಸ ತೊಗೊಂಡ ಹೋಗ್ತಾರ.
ಹಂಗ ಈ ಬ್ಲೌಸ ಹೊಲಿಯವರಿಗೆ ಭಾರಿ ಡಿಮಾಂಡ ಬಿಡ್ರಿ, ಅದರಾಗ ಒಂದೊಂದ ಬ್ಲೌಸ ಹೊಲಿಲಿಕ್ಕೆ ಎರಡನೂರ ಮೂರನೂರಿಂದ ಹಿಡದ ಐದ-ಹತ್ತ ಸಾವಿರ ಗಟ್ಟಲೇ ಚಾರ್ಜ ಮಾಡ್ತಾರಂತ. ನಂಗ ಒಂದ ಸರತೆ ಆ ರೇಟ ಕೇಳಿ ಗಾಬರಿ ಆಗಿ ಕನಫರ್ಮ ಮಾಡ್ಕೋಳಿಕ್ಕೆ ನನ್ನ ಹೆಂಡ್ತಿಗೆ ಕೇಳಿದರ ಅಕಿ
“ಹೌದ ಮತ್ತ…..ನಿಮಗೇನ ಗೊತ್ತ…ಏನೋ ನಮ್ಮವ್ವ ನನ್ನ ಬ್ಲೌಸ ಹೊಲದ ಕೋಡ್ತಾಳ ಅಂತ ನಡದದ, ಇಲ್ಲಾಂದರ ನಿಮ್ಮ ಪಗಾರದಾಗಿಂದ ಅರ್ಧಾ ರೊಕ್ಕ ನನ್ನ ಬ್ಲೌಸ ಹೊಲಿಲಿಕ್ಕೆ ಹೋಗ್ತಿತ್ತ, ಅದು ಸ್ಲೀವಲೆಸ್ ಗೆ” ಅಂದ್ಲು. ಹಂಗ ಅಕಿ ಹೇಳಿದ್ದ ಖರೆ ಬಿಡ್ರಿ, ನಾ ಲಗ್ನ ಆದಾಗಿಂದ ಒಂದ ಸರತೆ ಬ್ಲೌಸ ಹೊಲಿಲಿಕ್ಕೆ ರೊಕ್ಕಾ ಕೊಟ್ಟಿಲ್ಲಾ, ಯಾಕಂದರ ನಮ್ಮ ಅತ್ತಿನೂ ಲೇಡಿಸ್ ಟೇಲರ್, ಪಾಪ ಮಗಳ ಅಂತ ಇಪ್ಪತ್ತ ವರ್ಷದಿಂದ ಪುಕ್ಕಟ್ಟ ಹೊಲದ ಕೊಟ್ಟ ಕೊಡ್ತಾರ. ಮ್ಯಾಲೆ ನಮ್ಮವ್ವನು ಸಣ್ಣ ಪುಟ್ಟ ಹೊಲಿಗೆ ಹೊಲಿತಾಳ. ಹಿಂಗಾಗಿ ನಮಗ ಲೇಡಿಸ್ ಟೇಲರ್ ಕಡೆ ಹೊಗೊ ಪ್ರಸಂಗನ ಬಂದಿಲ್ಲಾ.
ನಮ್ಮವ್ವಗಂತೂ ಬ್ಲೌಸ ಹೊಲಿಲಿಕ್ಕೆ ಸಾವಿರಗಟ್ಟಲೇ ರೊಕ್ಕಾ ತೊಗೊತಾರ ಅಂತ ಹೇಳಿದಾಗ ಹಾರ್ಟ ಅಟ್ಯಾಕ ಆಗೋದ ಒಂದ ಬಾಕಿ ಇತ್ತ, ಅದರಾಗ ಒಂದೊಂದ ಬ್ಲೌಸ ಪೀಸ ಐದ – ಹತ್ತ ಸಾವಿರದ್ದ ಬ್ಯಾರೆ ಇರ್ತಾವಂತ. ಹಂಗ ನನ್ನ ಹೆಂಡ್ತಿನೂ ಎಲ್ಲೇರ ಹಂತಾ ಕಾಸ್ಟ್ಲಿ ಬ್ಲೌಸ್ ತಾನೂ ಹಾಕೋಳಕಿನ ಅಂತ ಗಂಟ ಬಿದ್ದಿದ್ದರ
’ನೀ ನೈಟಿ ಮ್ಯಾಲೆ ಛಂದ ಕಾಣ್ತಿ, ಸುಮ್ಮನ ನೈಟಿ ಮ್ಯಾಲೆ ಇರ’ ಅಂತ ಅನ್ನೋವನ ನಾ.
ಹಂಗ ನನ್ನ ಹೆಂಡ್ತಿ ಯಾರರ ಉಡಿ ತುಂಬಿದಾಗ ಅಪ್ಪಿ ತಪ್ಪಿ ಇದ್ದದ್ದರಾಗ ಛಲೋ ಬ್ಲೌಸ ಪೀಸ್ ಬಂದರ ಅದನ್ನ ಹೊಲಿಸಿಗೊಂಡ ಬಿಡೋಕಿ, ಕಡಿಕೆ ಆ ಬ್ಲೌಸಿಗೆ ಮ್ಯಾಚಿಂಗ್ ಸೀರಿ ಇರಲಿಲ್ಲಾ ಅಂದರ ಬ್ಲೌಸ ಹೊಲಸಿದ್ದ ಸಂಕಟಕ್ಕ ಸೀರಿ ತೊಗೊಳೊಕಿ, ನಾ ಏನರ ಅಂದರ
’ಬ್ಲೌಸ ಪೀಸ ಪುಕ್ಕಟ್ಟೆ, ನಮ್ಮವ್ವ ಹೊಲಿಯೋದ ಪುಕ್ಕಟ್ಟೆ. ಬರೇ ಒಂದ ಸೀರಿ ಕೊಡಸಲಿಕ್ಕೆ ನಿಂಬದೇನ ಗಂಟ ಹೋಗ್ತದ’ ಅಂತ ನಂಗ ಅಂತಾಳ.
ಒಮ್ಮೆ ಇಕಿ ಬರೊಹಂಗಿದ್ದಿದ್ದಿಲ್ಲಾ ಅಂತ ಹೇಳಿ ಒಬ್ಬರ ಮನಿ ಫಂಕ್ಷನಕ್ಕ ನಾ ಒಬ್ಬನ ಹೋದಾಗ
ಅವರ ’ಹೆಂಡ್ತಿನ್ನ ಯಾಕ ಕರಕೊಂಡ ಬಂದಿಲ್ಲಾ…ತೊಗೊ ಅಕಿ ಪಾಲಿಂದ ಜಂಪರ್ ಪೀಸ’ ಅಂತ ನಂಗ ಉಡಿ ಗಂಟ ಕೈಯಾಗ ಕೊಟ್ಟಾಗ ನಾ ಜಂಪರ್ ಪೀಸ ತಗದ ನೋಡಿ, ಮುಂದೇಲ್ಲರ ಇದರ ಮ್ಯಾಚಿಂಗ ಸೀರಿ ಕೊಡಸರಿ ಅಂತ ಹೆಂಡ್ತಿ ಗಂಟ ಬಿದ್ದ-ಗಿದ್ದಾಳ ಅಂತ ನಾ ಅವರಿಗೆ ವಾಪಸ ಕೊಟ್ಟ
“ಇದ ಅಕಿಗೆ ಸಾಲಂಗಿಲ್ಲಾ…ಅಕಿಗೆ ಒಂಬತ್ತ ವಾರಿ ಬೇಕ” ಅಂತ ವಾಪಸ ಕೊಟ್ಟ ಬಂದಿದ್ದೆ.
ನಮ್ಮವ್ವ ಅಂತೂ ಒಂದ ಕಾಲದಾಗ ಶುಕ್ರವಾರ ಮಂಗಳವಾರ ಮನಿಗೆ ಬಂದ ಹೆಣ್ಣಮಕ್ಕಳಿಗೇಲ್ಲಾ ಜಂಪರ್ ಪೀಸ ಹಾಕಿ ಉಡಿ ತುಂಬಿ ಕಳಸ್ತಿದ್ದಳು…ನಾ ಅಕಿಗೆ ಹಿಂಗ ಹೊಲಿಲಿಕ್ಕೆ ಸಾವಿರಗಟ್ಟಲೇ ಚಾರ್ಚ ಮಾಡ್ತಾರ ನೀ ಕೊಟ್ಟಿದ್ದ ಜಂಪರ್ ಪೀಸ ಯಾರು ಹೊಲಿಸಿಗೊಳ್ಳಂಗಿಲ್ಲಾ, ಅವನ್ನ ದುಬಟಿಗೆ ಹಚ್ಚತಾರ ಅಂದ ಮ್ಯಾಲೆ ಬಿಟ್ಟಳು. ಅಲ್ಲಾ ಎಂಬತ್ತ-ತೊಂಬತ್ತರ ರೂಪಾಯಿ ಜಂಪರ ಪೀಸ ಉಡಿ ತುಂಬಿಸಿಗೊಂಡ ಬಂದ, ನಾಲ್ಕನೂರ ಐದನೂರ ಬಡದ ಹೊಲಿಸ್ಗೊ ಅಂದರ ಹೆಂಗ.
ಅದರಾಗ ನಮ್ಮವ್ವಗ ಬ್ಲೌಸ್ ಒಳಗ ಬ್ಯಾಕಲೇಸ್, ಡೀಪ್ ನೆಕ್, ಡೀಪ್ ಬ್ಯಾಕ, ಲಾಂಗ್ ಸ್ಲೀವ್, ಸ್ಲೀವ್ ಲೆಸ್. ಯು ನೆಕ್, v ನೆಕ್…ಇಷ್ಟೇಲ್ಲಾ ಇರತಾವ ಅಂತ ನನ್ನ ಹೆಂಡ್ತಿ ಹೇಳಿದಾಗ ಹುಚ್ಚು ಹಿಡಿಯೊದ ಒಂದ ಬಾಕಿ ಇತ್ತ.
ಪಾಪ ಅಕಿಗೆ ಮೈಲಗಿ ಒಳಗ ಒಂದ, ಮಡಿಗೆ ಒಂದ, ಅಡಗಿಗೆ ಒಂದ, ಹೊರಗ ಹೋಗಿ-ಬಂದರ ಒಂದ ಅಂತ ಒಂದ ಮೂರ ನಾಲ್ಕ ನಮನಿ ಜಂಪರ್ ಇಷ್ಟ ಗೊತ್ತ ಇದ್ವು.
ಅಲ್ಲಾ, ಏನೋ ಮುಂಜ ಮುಂಜಾನೆ ನಮ್ಮ ಓಣಿ ಹೆಣ್ಮಕ್ಕಳ ’ಅವರ ಬೆಂಗಳೂರಿಗೆ ಓಯ್ದಾರ’ ಅಂದಿದ್ದನ್ನ ’ಅವರನ ಬೆಂಗಳೂರಿಗೆ ಓಯ್ದಾರ’ ಅಂತ ತಿಳ್ಕೊಂಡ ಒಂದ ಸ್ವಲ್ಪ ಡೀಪ್ ವಿಚಾರ ಮಾಡ್ಲಿಕ್ಕೆ ಹೋದರ ಕಡಿಕೆ ವಿಷಯ ಡೀಪ್ ಬ್ಯಾಕ್ ಬ್ಲೌಸ ತನಕ ಬಂದ ಹತ್ತ ಅನ್ನರಿ…
ಅಲ್ಲಾ ಅದಕ್ಕ ನಾ ಹೇಳಿದ್ನೆಲಾ ಹಿಂಗ ಅವರಿವರ ಮಾತಾಡಿದ್ದ ಕದ್ದ ಕೇಳಿದ್ದ ನಮ್ಮ ಆರ್ಟಿಕಲ್ ಸಬ್ಜೇಕ್ಟ ಆಗ್ತಾವ ಅಂತ. ಒಂದ ಬ್ಲೌಸ ಪೀಸ್ ಬೆಂಗಳೂರಿಗೆ ಹೋಗಿದ್ದ ಸುದ್ದಿ ಕೇಳಿ ಇಷ್ಟ ಬರಿ ಬೇಕಾತ.