ಮೊನ್ನೆ ನಮ್ಮ ಪುಣಾ ಮಾಮಾ ಭಾಳ ದಿವಸದ ಮ್ಯಾಲೆ ಹುಬ್ಬಳ್ಳಿ ಕಡೆ ಬಂದಿದ್ದರು. ಅವರದ ಭೆಟ್ಟಿ ಅಪರೂಪ. ಅವರ ಇತ್ತಲಾಗ ಬರಂಗಿಲ್ಲಾ ನಾವ ಅತ್ತಲಾಗ ಹೋಗಂಗಿಲ್ಲಾ. ಇನ್ನ ಯಾವದರ ತಪ್ಪಸಲಾರದ ಕಾರ್ಯಕ್ರಮ ಅಂದರ ಹತ್ತ ದಿವಸದಾಗಿನವರ ಹೋದರ ಇಲ್ಲಾ ಬಿಡಲಾರದಂತಾ ಮದುವಿ, ಮುಂಜವಿ ಇದ್ದರ ಇಷ್ಟ ಇತ್ತಲಾಗ ಬರೋರ.
ನಾ ಅವರ ಬರೋ ಪುರಸತ್ತ ಇಲ್ಲದ
’ಮತ್ತೇನ್ರಿ ಮಾಮಾ ಹೆಂಗಿದ್ದೀರಿ’ ಅಂತ ಅಗದಿ ’ಜಾದು ಕಿ ಜಪ್ಪಿ’ ಕೊಟ್ಟ ಕಡಿಕೆ ನಮ್ಮವ್ವ ಬೈದ್ಲ ಅಂತ ಬಗ್ಗಿ ನಮಸ್ಕಾರನೂ ಮಾಡಿದೆ.
ಅವರ ’ಏ..ಇಲ್ಲಪಾ, ರಟ್ಟಿಹಳ್ಳಿ ಒಳಗ ನಮ್ಮ ತಮ್ಮನ ಮಗನ ಮದ್ವಿ ಇತ್ತ ಅದಕ್ಕ ಬಂದಿದ್ದೆ’ಅಂದರು.
’ಅಲ್ಲಾ, ನಿಮ್ಮ ಆರೋಗ್ಯ ಹೆಂಗ ಅದ ಅಂತ ಕೇಳಿದೆ’ ಅಂತ ನಾ ಅಂದರ
’ಏ, ಅಕಿಗೇನ ಆಗೇದ ಮಾರಾಯಾ, ಗುಂಡಕಲ್..ಗುಂಡಕಲ್ ಇದ್ದಂಗ ಇದ್ದಾಳ…’ ಅಂತ ಅಂದರು.
ನಾ ನಮ್ಮ ಅಕ್ಕನ ಮಾರಿ ನೋಡಿದೆ, ಅಲ್ಲಾ ನಮ್ಮಕ್ಕ ಗುಂಡಕಲ್ ಇದ್ದಂಗ ಇದ್ದಾಳ ಆ ಮಾತ ಬ್ಯಾರೆ ಆದರ ಹಿಂಗ್ಯಾಕ ಮಾಮಾ ನಾ ಏನರ ಕೇಳಿದರ ಏನರ ಹೇಳಲಿಕತ್ತಾರ ಅಂತ ನಮ್ಮಕ್ಕಗ ಸನ್ನಿ ಮಾಡಿದೆ.
ಅಕಿ ತಲಿ ಜಜ್ಜಕೊಂಡ
’ಅವರಿಗೆ ಕೇಳಸಂಗಿಲ್ಲಾ, ಸ್ವಲ್ಪ ಜೋರಾಗಿ ಹೇಳ…’ಅಂತ ಅಂದ್ಲು.
ನಂಗ ಅವರಿಗೆ ಕಿವಿ ಕೆಳಸಲಾರದ ವಿಷಯ ಗೊತ್ತಿರಲಿಲ್ಲಾ, ಮತ್ತ ಮಷೀನ ಕೊಡಸಬೇಕಿಲ್ಲ ಅಂತ ಅಂದರ, ’ಅಯ್ಯ.. ಮಗಾ ಆಸ್ಟ್ರೇಲಿಯಾದಿಂದ ಮಷೀನ್ ಕಳಿಸ್ಯಾನ…ಕಿವ್ಯಾಗ ಹಾಕ್ಕೊಂಡರ ಮರ್ಯಾದಿ ಹೋಗ್ತದ ಅಂತ ಕಿಸೆದಾಗ ಇಟಗೊಂಡ ಅಡ್ಡಾಡತಾರ’ ಅಂತ ಹೇಳಿದ್ಲು.
ಅಲ್ಲಾ ಹಂಗ ಅವರದೇನ ಸಣ್ಣ ವಯಸ್ಸಲ್ಲ ಬಿಡ್ರಿ, ಎಪ್ಪತ್ತರ ಸನಿಕ ಬಂದಾವ. ಅದರಾಗ ನಮ್ಮ ಸುಮಕ್ಕನ ಅತಿ ಸೂಕ್ಷ್ಮ ಧ್ವನಿ ಕೇಳಿ ಕೇಳಿ ೪೦-೪೫ ವರ್ಷ ಸಂಸಾರ ಬ್ಯಾರೆ ಮಾಡ್ಯಾರ ಅಂದರ ಇಷ್ಟ ದಿವಸ ಕಿವಿ ಬಾಳಕಿ ಬಂದಿದ್ದ ಗ್ರೇಟ್.
ಮುಂದ ಏನ ಮಾತಾಡಿದರು ಜೋರಾಗಿ ಮಾತಾಡಿದೆ, ಅವರಿಗೆ ಕೇಳಸಲಿಕತ್ತ.
ಅಲ್ಲಾ ಈ ವಯಸ್ಸಾದವರಿಗೆ ಮೊದ್ಲ ಕಿವಿ ಕೇಳಸ್ತಿರಂಗಿಲ್ಲಾ, ನಾವ ಜೋರಾಗಿ ಮಾತಾಡಿದರ ಸಿಟ್ಟಿಗೆದ್ದ
’ಹಂಗ್ಯಾಕ ಚೀರತಿ…ಸಮಾಧಾನದ್ಲೇ ಹೇಳ’ಅಂತ ನಮಗ ಜೋರ ಮಾಡ್ತಾರ. ನಾವ ಹಿಂಗ ಜೋರ ಮಾತಾಡಿದಾಗೊಮ್ಮೆ ಅವರಿಗೆ ’ನಮಗ ಕಿವಿ ಕೇಳಸಂಗಿಲ್ಲಾ ಅಂತ ಮಂದಿ ಜೋರ ಮಾತಾಡಲಿಕತ್ತಾರ’ ಅಂತ ಮನಸ್ಸಿಗೆ ಹರ್ಟ್ ಆಗ್ತದ, ಅದು ಹೊಸ್ದಾಗಿ ಕೆಪ್ಪ ಆದೋರಿಗಂತೂ ಪಾಪ ಇರಿಟೇಟ್ ಆಗ್ತದ.
ನಾ ನಮ್ಮ ಅಕ್ಕಗ ಆಮ್ಯಾಲೆ ಸೈಡಿಗೆ ಕರದ ಕೇಳಿದೆ ’ಏ, ಮಾಮಾಗ ಖರೇ ಖರೇನ ಕೇಳಸಂಗಿಲ್ಲೊ ಇಲ್ಲಾ ನಿನ್ನ ಕಾಟಕ್ಕ ಕಿವಡರಗತೆ ನಾಟಕ ಮಾಡಲಿಕತ್ತಾರೋ ನೋಡ?’ ಅಂತ ಅಂದರ.
’ಏ, ನಿಮ್ಮ ಮಾಮ ಎಂದೂ ನಾ ಹೇಳಿದ್ದಕ್ಕ ಹೂಂ ಅನ್ನಲಾರದವರಲ್ಲ ತೊಗೊ..ಪಾಪ ಅವರ ಯಾಕ ನಾಟಕ ಮಾಡ್ತಾರ, ಅವರಿಗೆ ಖರೇನ ಕಿವಿ ಮಬ್ಬ ಆಗ್ಯಾವ’ ಅಂದ್ಲು.
ಅಡ್ಡಿಯಿಲ್ಲ ತೊಗೊ ಕಡಿಕೂ ಮಾಮಾ ಜೀವನದಾಗ ನಿನ್ನ ಮಾತ ಕೇಳಲಾರದಂಗ ಆತಲಾ ಅಂದರ
’ಏ..ಹಂಗೇನಿಲ್ಲಾ ತಮ್ಮಾ, ಕಿವಿ ಕೇಳಲಿಲ್ಲಾ ಅಂದರೂ ಹೆಂಡ್ತಿ ಮಾತ ಕೇಳೆ ಕೇಳ್ತಾರ’ ಅಂದ್ಲು.
ಏನಂತರಿ ಇದಕ್ಕ, ಗಂಡ ಕಿವಡಾದರು ಹೆಂಡ್ತಿ ಮಾತ ಕೇಳೆ ಕೇಳ್ತಾನ ಅಂದರ ಗಂಡಂದರ ಹಣೇಬರಹ ಎಷ್ಟ ಕೆಟ್ಟ ಅದ ನೋಡ್ರಿ.
ಅಲ್ಲಾ, ಹಂಗ ನಮ್ಮ ಮಾಮಾ ಕಿವಡನಗತೆ ನಾಟಕ ಮಾಡ್ಲಿಕತ್ತಾರೇನು ಅಂತ ಡೌಟ ಬರಲಿಕ್ಕೆ ಏನ ಕಾರಣ ಅಂದರ ಈಗ ಒಂದ ಸ್ವಲ್ಪ ದಿವಸದ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ.
ಅಮೇರಿಕಾದಾಗ ಒಬ್ಬ ಗಂಡ ಹೆಂಡತಿ ಜೊತೆ ಮಾತು-ಕಥಿ ತಪ್ಪಿಸಲಿಕ್ಕೆ ೬೨ ವರ್ಷ ತನಕ ಕಿವುಡ, ಮೂಕನಗತೆ ನಾಟಕ ಮಾಡ್ತಿದ್ದನಂತ. ಕಡಿಕೆ ಒಂದ ದಿವಸ ಅದ ಹೆಂಡ್ತಿಗೆ ಗೊತ್ತಾಗಿ ಇಂವಾ ನನಗ ಇಷ್ಟ ದಿವಸ ಮೋಸಾ ಮಾಡ್ಯಾನ ನಂಗ ಡೈವರ್ಸ ಬೇಕ ಅಂತ ಈಗ ಕೋರ್ಟಿಗೆ ಹೋಗ್ಯಾಳಂತ. ಅಲ್ಲಾ ಹೆಂಡ್ತಿಗೆ ಈಗ ಎಂಬತ್ತ ತುಂಬಿ ಎಂಬತ್ತೊಂದರಾಗ ಬಿದ್ದಾವ ಆದರೂ ಡೈವರ್ಸ್ ಬೇಕಂತ.
’ಪಾಪ ನನ್ನ ಗಂಡ ಕಿವಡಾ ಮ್ಯಾಲೆ ಮಾತಾಡಲಿಕ್ಕೂ ಬರಂಗಿಲ್ಲಾ ಅಂತ ಇಷ್ಟ ವರ್ಷ ಸೇವಾ ಮಾಡಿದೆ, ಇಂವಾ ನನಗ ಮೋಸಾ ಮಾಡಿದಾ’ ಅಂತ ಡೈವರ್ಸ ಕೇಳಲಿಕತ್ತಾಳ.
ಹಂಗ ಅಂವಾ ಹೆಂಡ್ತಿಗೆ ನಂಗ ಮಾತಾಡಲಿಕ್ಕೆ ಬರಂಗಿಲ್ಲಾ, ಕಿವಿ ಕೆಳಸಂಗಿಲ್ಲಾ ಅಂತ ನಂಬಸಲಿಕ್ಕೆ ಸನ್ನೆ ಮಾಡೊ ಭಾಷೆ ಬ್ಯಾರೆ ಕಲಿತಿದ್ದನಂತ. ಮ್ಯಾಲೆ ಅಕಿಗೂ ತನ್ನ ಜೊತಿ ಕಮುನಿಕೇಟ ಮಾಡ್ಲಿಕ್ಕೆ ಎರಡ ವರ್ಷ ಮೂಕರ ಭಾಷಾ ಕಲಸಿದ್ನಂತ.
ಆದರ ಒಂದ ದಿವಸ ಅಕಿ ತವರಮನಿಗೆ ಹೋದಾಗ ಇಂವಾ ಎಲ್ಲೋ ಕರೋಕೆ ಕಾರ್ಯಕ್ರಮದಾಗ ಹಾಡೋದನ್ನ ಇಕಿ ಯು-ಟ್ಯೂಬ ಒಳಗ ನೋಡಿ ಅವಂದ ಎಲ್ಲಾ ಬಣ್ಣ ಬಯಲಾಗಿ ಈಗ ಡೈವರ್ಸ ಲೆವಲಗೆ ಬಂದ ನಿಂತದ.
ಏನ್ಮಾಡ್ತೀರಿ ಹಿಂತಾ ಗಂಡಂದರಿಗೆ? ಅಲ್ಲಾ, ಜೀವನದಾಗ ಹೆಂಡ್ತಿಗೆ ಹೆದರಿ ಒಬ್ಬ ಗಂಡಾ ಅರವತ್ತ ವರ್ಷಗಟ್ಟಲೇ ಮೂಕ, ಕಿವಡ ಆಗಿ ಬದಕತಾನಂದರ ವಿಚಾರ ಮಾಡ್ರಿ. ಅಲ್ಲಾ ಆ ಪರಿ ಯಾಕ ಬದಕ ಬಿಡ್ರಿ…
ಹಂಗ ಈಗ ಒಂದ್ಯಾರಡ ವರ್ಷದಿಂದ ಪಾಪ ನಮ್ಮವ್ವಗೂ ಕಿವಿ ಕೆಳಸಂಗಿಲ್ಲಾ, ಅಕಿಗೆ ಮಶೀನ್ ತಂದ ಕೋಡ್ತೇನಿ ಅಂದರ ’ ಏ..ನಂಗ್ಯಾಕ ಮಶೀನ್..ಏನ ಕೇಳಬೇಕ ಅದ ಕೇಳೆ ಕೇಳ್ತದ ತೊಗೊ’ ಅಂತ ಜೋರ್ ಮಾಡ್ತಾಳ.
ನನ್ನ ಹೆಂಡ್ತಿ ’ಒಲಿ ಮ್ಯಾಲೆ ಹಾಲ ಇಟ್ಟೇನಿ. ಉಕ್ಕಿ-ಗಿಕ್ಕಿತ್ತ ನೋಡ್ರಿ…’ ಅಂದರ
“ಏನ…ಮೋಟರ್ ಚಲು ಮಾಡಿಯಾ? ಬಂದ ಮಾಡಬೇಕ ಹೌದಲ್ಲ…’ ಅಂತಾಳ.
’ಕುಕ್ಕರದ್ದ ನಾಲ್ಕ ಸೀಟಿ ಆದಮ್ಯಾಲೆ ಗ್ಯಾಸ ಬಂದ ಮಾಡ್ರಿ’ ಅಂದರ ಭಡಾ ಭಡಾ ಹೋಗಿ ಟಿ.ವಿ ಬಂದ ಮಾಡ್ತಾಳ. ಮತ್ತ ಅಕಿಗೆ ಏನರ ನಿನಗ ಕಿವಿ ಕೆಳಸಂಗಿಲ್ಲಾ ಅಂದರ ಸಿಟ್ಟ ಬರ್ತದ.
ಅಲ್ಲಾ ಹಂಗ ವಯಸ್ಸಾದ ಮ್ಯಾಲೆ ಹಿಂತಾವೇಲ್ಲಾ ಸಮಸ್ಯೆ ಕಾಮನ್ ಬಿಡ್ರಿ. ಇವತ್ತ ಅವರಿಗೆ ನಾಳೆ ನಮಗ, ಹಂಗ ಹೆಂಡಂದರ ಅಂತು ಗಂಡದರ ಮಾತ ಈಗ ಕೇಳಂಗಿಲ್ಲಾ ಇನ್ನ ಮುಂದ ಕಿವಿ ಕೇಳಲಾರದಾಂಗ ಆದಮ್ಯಾಲೆ ಅಂತೂ ಮುಗದ ಹೋತ.
ಅಲ್ಲಾ ಅದ ಒಂದ ಜೋಕ ಅದಲಾ, ಒಬ್ಬ ಗಂಡ ಡಾಕ್ಟರಗೆ ಹೋಗಿ ಕೇಳಿದ್ನಂತ ’ನಂಗ ಯಾಕೋ ನನ್ನ ಹೆಂಡ್ತಿಗೆ ಕಿವಿ ಕೆಳಸವಲ್ತ ಅಂತ ಡೌಟ ಬರಲಿಕ್ಕತ್ತದ, ಇನ್ನ ಅಕಿನ್ನ ಕೇಳಿದರ ಅಕಿ ಸಿಟ್ಟಿಗೆ ಏಳ್ತಾಳ, ಏನ್ಮಾಡೋದು?’ ಅಂತ. ಅದಕ್ಕ ಡಾಕ್ಟರ ಹೇಳಿದರಂತ ’ಒಂದ ಹತ್ತ ಫೂಟ ದೂರಿಂದ ಒದರ…ಅಕಿ ಓss ಅನಲಿಲ್ಲಾ ಅಂದರ ಐದ ಫೂಟ ದೂರಿಂದ ಒದರ..ಆವಾಗೂ ಅಕಿಗೆ ಕೆಳಸಲಿಲ್ಲಾ ಅಂದರ ಬಾಜು ಹೋಗಿ ಕೀವ್ಯಾಗ ಒದರ, ಆವಾಗ ಕೇಳ್ತಂದರ ಅಕಿಗೆ ಕಿವಿ ಪ್ರಾಬ್ಲೇಮ್ ಅದ ಅಂತ ಗ್ಯಾರಂಟಿ, ನನ್ನ ಕಡೆ ಕರಕೊಂಡ ಬಾ’ ಅಂತ ಹೇಳಿ ಕಳಸಿದರಂತ.
ಪಾಪ ಗಂಡಾ ಮನಿಗೆ ಹೋಗಿ ಹತ್ತ ಫೂಟ ದೂರಿಂದ ’ಏನ ಅಡಗಿ ಇವತ್ತ’ ಅಂತ ಕೇಳಿದ್ನಂತ, ಅಕಿ ಹೂಂ ಇಲ್ಲಾ ಹಾಂ ಇಲ್ಲಾ, ಮುಂದ ಐದ ಫೂಟ ಹತ್ತರ ಹೋಗಿ ಕೇಳಿದರು ನೋ ರಿಪ್ಲೈ, ಕಡಿಕೆ ಖರೇನ ಹೆಂಡ್ತಿ ಕೆಪ್ಪ ಆಗ್ಯಾಳ ಅಂತ ಬಾಜೂಕ ಹೋಗಿ ಕೀವ್ಯಾಗ ’ಲೇ,..ಇವತ್ತೇನ ಅಡಿಗಿಲೇ’ಅಂತ ಚೀರಿದನಂತ. ಅಕಿ ಗಂಡಗ ತಗದ ರಪ್ಪ ಅಂತ ಕಪಾಳಕ್ಕ ಹೊಡದ ’ಎಷ್ಟ ಸಲಾ ಹೇಳಬೇಕ…ನಿನ್ನಿ ಅನ್ನಾನ ಕಲಸನ್ನಾ ಮಾಡೇನಿ ಅಂತ..ಕೀವ್ಯಾಗ ಏನ ಬತ್ತಿ ಇಟಗೊಂಡಿ’ ಅಂದ್ಲಂತ. ಏನ್ಮಾಡ್ತೀರಿ? ಈಗ ಹೇಳ್ರಿ ಖರೇ ಕಿವಡ ಯಾರಂತ?
ಹಂಗ ನಮ್ಮ ಮಾತ 5 ನಿಮಿಷದಾಗ ಕೇಳೋಕಿ ಮಗಳಂತ, ಅವ್ವಾ ಹತ್ತ ನಿಮಿಷದಾಗ ಕೇಳ್ತಾಳಂತ, ತಂಗಿ ಹದಿನೈದ ನಿಮಿಷದಾಗ ಕೇಳ್ತಾಳಂತ. ಆದರ ಜೀವನ ಪರ್ಯಂತ ಹೇಳಿದರೂ ಕೇಳಲಿಲ್ಲಾ ಅಂದ್ರ ತಿಳ್ಕೊಳ್ರಿ ಅಕಿ………….ಹೆಂಡ್ತಿನ ಇರ್ತಾಳ ಆ ಮಾತ ಬ್ಯಾರೆ ಆದರ ಕಿವುಡಿನೂ ಆಗಿರಬಹುದು ಒಮ್ಮೆ ಯಾವದಕ್ಕೂ ಚೆಕ್ ಮಾಡಿಸಿ ಬಿಡ್ರಿ.
ಹೋಗ್ಲಿ ಬಿಡ್ರಿ ಸುಳ್ಳ ಹೆಂಡ್ತಿಗೆ ಕೀವಿ ಕೇಳಲಾರದಂಗ ಆದರ ಹೆಂಗ ಅಂತ ವಿಚಾರ ಮಾಡೋದಕಿಂತ ಮೊದ್ಲ ನಮಗ ಕಿವಿ ಕೇಳ್ತಾವೊ ಇಲ್ಲೊ ಚೆಕ್ ಮಾಡಿಸ್ಗೊಳೊದ ಛಲೋ. ಹಂಗ ಎಲ್ಲಿತನಕ ನಾವ ಹೆಂಡ್ತಿ ಮಾತ ಕೇಳ್ತೇವಿ ಅಲ್ಲಿ ತನಕ ನಮ್ಮ ಕಿವಿ ಛಲೋ ಇದ್ದಂಗ.
ಅಲ್ಲಾ, ಹೆಂಡ್ತಿ ಮಾತ ಕೇಳೋರ ಎಂದೂ ಕೆಪ್ಪ ಆಗಂಗೇಲಂತ. ಹೌದೇನ?
ತಡಿ ನಮ್ಮ ಹೆಂಡ್ತಿನ್ನ ಒಂದ ಮಾತ ಕೇಳಿ ಹೇಳ್ತೇನಿ ಅನಬ್ಯಾಡ್ರಿ ಮತ್ತ.