ಈಗ ಒಂದ ಐದ ತಿಂಗಳ ಹಿಂದ ನಮ್ಮ ಹಳೇ ಮನಿ ಕಡೆ ಇದ್ದ ಮಂಜು ಅಂತ ಹುಡುಗ ಒಬ್ಬೊಂವ ಹಡದಿದ್ದಾ, ಅಂದರ ಅವನ ಹೆಂಡ್ತಿ ಹಡದಿದ್ಲು. ಇನ್ನ ಅಕಿ ತವರ ಮನ್ಯಾಗ ಹಡದಿದ್ದಕ್ಕ ನಮಗ ಹೋಗಿ ಕೂಸಿನ ನೋಡ್ಲಿಕ್ಕೆ ಆಗಿದ್ದಿಲ್ಲಾ. ಹಿಂಗಾಗಿ ಅಂವಾ ತನಗ ಗಂಡ ಹುಟ್ಟೇದ ಅಂತ ಖುಷಿಲೇ ಫೋನ್ ಮಾಡಿ ಹೇಳಿದಾಗ ಮನಿಗೆ ಒಂದ ಕೆ.ಜಿ ಮಿಶ್ರಾ ಫೇಡಾ ಇಸ್ಗೊಂಡ ಮ್ಯಾಲೆ ‘ಮಗನ ಒಂದ ಹೊಡ್ತಕ್ಕ ಗಂಡ ಹಡದಿ ನಡಿ’ ಅಂತ ಒಂದ ಹತ್ತ ಸಾವಿರ ರೂಪಾಯಿದ್ದ ಸ್ಕಾಚ್ ಪಾರ್ಟಿ ಇಸ್ಗೊಂಡಿದ್ವಿ. ಅಲ್ಲಾ ಗಂಡಾ-ಹೆಂಡ್ತಿ ಇಬ್ಬರೂ ಸಾಫ್ಟವೇರ್, ಮಾತ ಮಾತಿಗೆ ನಂಬದ C.T.C ( Cost to company) ಅಷ್ಟ ಲಕ್ಷಾ, ಇಷ್ಟ ಲಕ್ಷಾ ಅಂತ ಹೇಳ್ಕೊಳೊರ, ಮ್ಯಾಲೆ ಗಂಡ ಬ್ಯಾರೆ ಹಡದಾರ ಅಂದರ ಅಷ್ಟು ಕೊಡಲಿಲ್ಲಾ ಅಂದರ ಹೆಂಗ?
ಇನ್ನ ಅಕಿ ತವರಮನಿ ಇದ್ದೂರಾಗ ಇದ್ದರ ಕೂಸಿನ ಕೈಯಾಗ ಒಂದ ಐವತ್ತ ರೂಪಾಯಿ ಬಾಣಂತಿಗೆ ಒಂದ ಎರೆಡ ಸೇಬು ಹಣ್ಣ, ಪಾರ್ಲೆ ಬಿಸ್ಕಿಟ್ ಬಂಡಲ್ ಕೊಟ್ಟ ಕೂಸಿನ ನೋಡಿ ಬರಬಹುದಿತ್ತ ಆದರ ಅಕಿ ಜಮಖಂಡಿ ಹುಡಗಿ, ಡಿಲೇವರಿ ಅಲ್ಲೇ ಆಗಿತ್ತ. ಮುಂದ ಹೆಸರ ಇಡೋ ಕಾರ್ಯಕ್ರಮಕ್ಕ ಪಾಪ ಅವರ ಕರದರ ಖರೇ ಆದರ ಅವರೇನ ಬಸ್, ಗಾಡಿ ಮಾಡಿದ್ದಿಲ್ಲಾ. ಹಿಂಗಾಗಿ ಮೈಮ್ಯಾಲೆ ಗಾಡಿ ಖರ್ಚ ಹಾಕ್ಕೊಂಡ ಹೋಗಿ ಮಂದಿ ಮಗಗ ಹೆಸರ ಇಡೋದ ಏನ ಶಾಣ್ಯಾತನ ಅಲ್ಲ ಬಿಡ, ಇವತ್ತಿಲ್ಲಾ ನಾಳೆ ಗಂಡನ ಮನಿಗೆ ಬಂದ ಬರ್ತಾಳ ಆವಾಗ ಕೂಸಿನ ನೋಡಿದ್ರಾತ ಅಂತ ಸುಮ್ಮನಿದ್ವಿ.
ಇನ್ನ ಮುಂದ ಒಂದ ದಿವಸ ಆ ಕೂಸ ಅಂದರ ಅವನ ಮಗಾ ಬಂದ ಸುದ್ದಿ ಮಂಜೂನ ಅವ್ವಾ ವಾಟ್ಸಪ್ ಸ್ಟೇಟಸ್ ಇಟ್ಟಿದ್ಲಂತ. ನನ್ನಂತಾ ಮುಗ್ಗಲಗೇಡಿ ಜನಾ ವಾಟ್ಸಪ್ ಸ್ಟೇಟಸ್ ನೋಡಂಗಿಲ್ಲ ಅಂತ ಅಂವಾ ಫೋನ್ ಬ್ಯಾರೆ ಮಾಡಿ ಹೇಳಿದ್ದಾ. ಸರಿ ಇನ್ನ ಕೂಸಿನ ನೋಡ್ಲಿಕ್ಕೆ ನಾ ಹೋಗ್ತೇನಿ ಅಂದ ಕೂಡ್ಲೇ ನನ್ನ ಹೆಂಡ್ತಿ
’ನೀವೊಬ್ಬರ ಏನ ಹೋಗ್ತಿರಿ ನಾಳೆ ಹೋಗೋಣು ನಾನೂ ಬರ್ತೇನಿ’ ಅಂದ್ಲು. ಅದರಾಗ ಅಂವಾ ಗಂಡಸ ಮಗನ ಹಡದ ಪಾರ್ಟಿ ಕೊಡಬೇಕಾರನೂ ತಾನೂ ಬರ್ತೇನಿ ಅಂತ ಗಂಟ ಬಿದ್ದಿದ್ಲು ಆದರ ಅಂವಾ ಗಂಡ ಹುಟ್ಟಿದ್ದಕ್ಕ ಬರೇ ಗಂಡಸರಿಗೆ ಇಷ್ಟ ಪಾರ್ಟಿ ಕೊಡ್ಲಿಕತ್ತಾನ ಅಂತ ತಿಳಿಸಿ ಹೇಳಿ ಹೋಗಿದ್ದೆ. ಇನ್ನ ಕೂಸಿನ ನೋಡ್ಲಿಕ್ಕೆ ಕರಕೊಂಡ ಹೋಗೊದರಾಗ ಏನ ತಪ್ಪಿಲ್ಲ ತೊಗೊ ಅಂತ ಮುಂದ ಒಂದ ಎರೆಡ-ಮೂರ ದಿವಸ ಬಿಟ್ಟ ಕರಕೊಂಡ ಹೋದೆ ಅನ್ನರಿ.
ಅಲ್ಲೇ ಹೋಗಿ ನೋಡಿದ್ರ ಅವರವ್ವಾ
’ಅಯ್ಯ…ನಿನ್ನೇನ ನಮ್ಮ ಸೊಸಿ ಮತ್ತ ತವರಮನಿಗೆ ಹೋದ್ಲವಾ..ಒಂದ ದಿವಸ ಮೊದ್ಲನರ ಬರಬೇಕಿತ್ತ, ಇಲ್ಲಾ ಫೋನ್ ಮಾಡಿ ಬರಬೇಕಿತ್ತಿಲ್ಲ’ ಅಂತ ಅಂದ ಬಿಟ್ಲು. ಏನ ಸೊಸಿ ಮತ್ತ ಹಡಿಲಿಕ್ಕೆ ಹೋದ್ಲೇನ ಅಂತ ನಾ ಕೇಳೊಂವ ಇದ್ದೆ ಹೋಗ್ಲಿ ಬಿಡ ಅಕಿ ಗಂಡನ ಮನಿಗೆ ಬಂದ ಒಂದ ವಾರ ಆಗಿತ್ತ ಅದ ಅಂತೂ ಪಾಸಿಬಲ್ ಇಲ್ಲಾ ಅಂತ ಸುಮ್ಮನಾದೆ. ಇನ್ನ ಅಷ್ಟ ದೂರ ಹೋಗಿದ್ದಕ್ಕ ಅವರವ್ವ ಮತ್ತ ಮಿಶ್ರಾ ಫೇಡಾ ಕೊಟ್ಟಳು. ’ಅಲ್ಲಾ, ಈಗ ಯಾಕ ಮತ್ತ ತವರಮನಿಗೆ ಹೋದ್ಲ ಕೂಸಿನ ಧುಬಟಿ, ಕುಂಚಗಿ, ಹಗ್ಗೀಜ್ ಏನರ ಬಿಟ್ಟ ಬಂದಿದ್ಲ ಏನ’ ಅಂತ ನಾ ಚಾಷ್ಟಿಗೆ ಅಂದರ
’ಏ…ಇಲ್ಲೋ ತವರ ಮನಿಗೆ ಬಚ್ಚಲಾ ಬದಲಾಯಿಸಲಿಕ್ಕೆ ಹೋಗ್ಯಾಳ’ ಅಂದರು. ನಾ ಹಡದ ಮನಿಗೆ ಬಚ್ಚಲಾ ಬದಲಾಯಿಸಲಿಕ್ಕೆ ಹೋಗ್ಯಾಳ ಅಂದರ ಏನು ಅಂತ ಕೇಳಬೇಕ ಅನ್ನೊದರಾಗನನ್ನ ಹೆಂಡ್ತಿ , ’ಓ ನೀವ ಅದಕ್ಕ ಬಚ್ಚಲಾ ಬದಲಾಯಿಸೋದ ಅಂತಿರೇನ, ನಾವ ಅದಕ್ಕ ಬಾಣಂತಿ ಕೋಣಿ ನೋಡ್ಲಿಕ್ಕೆ ಹೋಗೋದ ಅಂತೇವಿ, ನಮ್ಮಲ್ಲೇನೂ ಆ ಪದ್ಧತಿ ಅದ’ ಅಂತ ಅಂದ್ಲು. ನಾ ’ನೀ ಹೋಗಿದ್ದೇನ’ ಅಂತ ಕೇಳಿದೆ. ’ಏ..ನಾನೂ ಹೋಗಿದ್ನೇಲಾ ನಿಮ್ಮ ಕಾಟಕ್ಕ ಮುಂಜಾನೆ ಹೋಗಿ ಸಂಜಿಗೆ ಮತ್ತ ನಿಮ್ಮ ಕೋಣಿಗೆ ವಾಪಸ ಬಂದಿದ್ದೆ, ನಿಮಗೇಲ್ಲ ಈಗ ನೆನಪ ಇರ್ತದ’ ಅಂದ್ಲು. ಅಲ್ಲಾ ಇಕಿ ಇದ್ದೂರಾಗ ತವರಮನಿ ಅದ ಎಷ್ಟ ಸಲಾ ಹೋಗಿ ಎಷ್ಟ ಸಲಾ ಬಂದಾಳೊ, ಎಷ್ಟ ಸಲಾ ಬಚ್ಚಲಾ ಬದಲಾಯಿಸ್ಯಾಳೋ ಏನೊ ಎಲ್ಲಾ ಎಲ್ಲೇ ನೆನೆಪ ಇಟ್ಗೊಳಿಕ್ಕೆ ಆಗ್ತದ ಬಿಡ್ರಿ. ಸರಿ, ಆತ ಮತ್ತ ಸೊಸಿ ಬಂದ ಮ್ಯಾಲೆ ಹೇಳ್ರಿ ಹಂಗರ ಮತ್ತೊಮ್ಮೆ ಬರ್ತೇವಿ ಅಂತ ವಾಪಸ ಮನಿಗೆ ಬಂದ್ವಿ.
ಬರತ ದಾರಿ ಒಳಗ ನಮ್ಮಕಿಗೆ ’ಅದ ಹೆಂತಾ ಪದ್ದತಿಲೇ..ಮೊದ್ಲ ಹಡಿಲಿಕ್ಕೆ ಅಂತ ಮೂರ ತಿಂಗಳ ಅಡ್ವಾನ್ಸ್ ಹೋಗಿರ್ತೀರಿ ಮ್ಯಾಲೆ ಹಡದ ಮ್ಯಾಲೆ ಐದನೇ ತಿಂಗಳಕ್ಕ ಹತ್ತಿಬಣ ಬಂದಿರ್ತೀರಿ..ಮತ್ತ ಯಾಕ ಹೋಗಬೇಕ, ತವರ ಮನ್ಯಾಗ ಏನ ಮಾಟಾ ಮಾಡಿಸಿ ಕಳಸಿರ್ತಾರ ಏನ’ ಅಂತ ಕೇಳಿದರ.
’ಏ ನಂಗೂ ಗೊತ್ತಿಲ್ಲರಿ, ನಿಮ್ಮವ್ವ ಕಳಸಿದ್ದರು ನಮ್ಮವ್ವ ಕರದಿದ್ಲು ಹಿಂಗಾಗಿ ನಾ ಹೋಗಿದ್ದೆ. ಆ ಪದ್ಧತಿ -ಗಿದ್ದತಿ ಎಲ್ಲಾ ನಿಮ್ಮವ್ವನ್ನ ಕೇಳ್ರಿ’ ಅಂದ್ಲು.
ಅದ ನನಗ ಮನಿ ಬರೋತನಕಾ ತಲ್ಯಾಗ ಕೊರಿಲಿಕತ್ತಿತ್ತ, ಒಂದೂ ನನ್ನ ಸ್ವಭಾವ ನಿಮಗೊತ್ತಲಾ ಏನ ಹೊಸಾ ವಿಷಯ ಕೇಳಿದರೂ ಅದನ್ನ ಡಿಟೇಲ್ ಆಗಿ ತಿಳ್ಕೊಳೊತನಕಾ ಬಿಡಂಗಿಲ್ಲಾ ಮತ್ತೊಂದ ಹಿಂತಾ ಹೊಸಾ ಹೊಸಾ ವಿಷಯ ನನಗ ಗೊತ್ತ ಆದ ಮ್ಯಾಲೆ ಅದಕ್ಕ ಮ್ಯಾಲೆ ನಂದೊಂದ ಒಗ್ಗರಣಿ ಹಾಕಿ ಗಿರಮಿಟ್ ಮಾಡಿ ನಿಮ್ಮ ಜೊತಿ ಹಂಚಗೊಳ್ಳಿಲ್ಲಾ ಅಂದರ ಸಮಾಧಾನ ಆಗಂಗಿಲ್ಲಾ. ಹಿಂಗಾಗಿ ಮನಿ ಒಳಗ ಕಾಲ ಇಡೋ ಪುರಸತ್ತ ಇಲ್ಲದ ನಮ್ಮವ್ವನ್ನ ಕೇಳಿದೆ.
ಅಕಿ ಒಮ್ಮಿಕ್ಕಲೇ ಗಾಬರಿ ಆಗಿ ’ಯಾಕ ನಿನ್ನ ಹೆಂಡ್ತಿ ಏನ ಮತ್ತ್ ಬಚ್ಚಲಾ ಬದಲಾಯಿಸಲಿಕ್ಕೆ ಹೋಗೊಕಿ ಅಂತ ಏನ? ಒಟ್ಟ ಅಕಿಗೆ ತವರ ಮನಿಗೆ ಹೋಗಲಿಕ್ಕೆ ಏನರ ನೇವಾ ಬೇಕಾಗಿರ್ತದ, ಹದಿನೈದ ವರ್ಷದ ಹಿಂದ ಹಡದಿದ್ದರೂ ಇನ್ನೊಮ್ಮೆ ಬಚ್ಚಲಾ ಬದ್ಲಾಯಿಸ್ತೇನಿ ಅಂತ ಹೋದರು ಹೋದ್ಲ ಅಕಿದ ಏನ ಹೇಳಲಿಕ್ಕೆ ಬರಂಗಿಲ್ಲಾ’ ಅಂತ ಒಂದ ಉಸಿರನಾಗ ಶುರು ಹಚಗೊಂಡ್ಲು.
ನಂಗ ಅಕಿಗೆ ಅಕಿ ಏನ ಹೊಂಟಿಲ್ಲಾ ಅಂತ ಎಲ್ಲಾ ಕಥಿ ತಿಳಿಸಿ ಹೇಳೊದರಾಗ ಸಾಕ ಸಾಕಾತ.
ಕಡಿಕೆ ಅದ ಏನ ಪದ್ದತಿ ಅಂತ ಕೇಳಿದರ
’ಹಂಗ ಹುಟ್ಟಿದ ಕೋಣಿ ನೋಡಬೇಕ ಅಂತ ನಿಯಮ ಇರ್ತದ ಪಾ…ಯಾಕ ಏನ ಅಂತ ನಂಗೂ ಗೊತ್ತ ಇಲ್ಲಾ. ಹೋಗಿ ತವರ ಮನ್ಯಾಗ ಉಡಿ ತುಂಬಿಸಿಕೊಂಡ ಒಂದ ಏನರ ಸಿಹಿ ಅಡಗಿ ಮಾಡಿಸ್ಗೊಂಡ ಉಂಡ ಬರೋ ಪದ್ದತಿ’ ಅಂದ್ಲು. ಅಲ್ಲಾ ಹಂಗ ಹುಟ್ಟಿದ ಕೋಣಿ ನೋಡ್ಬೇಕ ಅಂತನ ನಿಯಮ ಇತ್ತಂದರ ನಮ್ಮ ಮಂಜುನ ಹೆಂಡ್ತಿ ಹಡದಿದ್ದ ಜಮಖಂಡಿ ಸರ್ಕಾರಿ ಆಸ್ಪತ್ರಿ ಒಳಗ. ಇನ್ನ ಐದ ತಿಂಗಳ ಬಿಟ್ಟ ಮತ್ತ ಸರ್ಕಾರಿ ಹೆಣ್ಣು ಮಕ್ಕಳ ಹೆರಿಗೆ ಕೇಂದ್ರಕ್ಕ ಹೋಗಿ ನಾವ ಬಚ್ಚಲಾ ಬದಲಾಯಿಸಿ ಹೋಗ್ತೇವಿ ಅಂದರ ಅವರೇನ ಸುಮ್ಮನ ತೋರಸ್ತಾರ, ಮೊದ್ಲ ಚೀಟಿ ಮಾಡಸರಿ ಅಂತಾರ, ಆಮ್ಯಾಲೆ ಆ ಟೈಮ್ ಒಳಗ ಬಚ್ಚಲಾ ಖಾಲಿ ಇರ್ಬೇಕಲಾ? ಮತ್ಯಾರರ ಅಲ್ಲೆ ಹಡದ ಹಡದಿರತಾರ.
ಅವಂದ ಬಿಡ್ರಿ ಹಂಗ ನಮ್ಮವ್ವನ ಖರೇನ ಹಡದಿದ್ದ ಕೋಣಿ ನೋಡ್ಬೇಕಿಂದರ ನನ್ನ ಹಡದಿದ್ದಕ್ಕ ಅಕಿ ಶಿವಮೊಗ್ಗಾದ ಸರ್ಕಾರಿ ಆಸ್ಪತ್ರಿಗೆ ಹೋಗಬೇಕಾಗತಿತ್ತ. ಹಂಗ ಅಕಿ ಹೋಗಿದ್ಲು ಬಿಟ್ಟಿದ್ಲೊ ಗೊತ್ತಿಲ್ಲಾ, ಆದರೂ ಏನೊ ನಿಯಮನೋ ಏನೋ…ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ಹೆಣ್ಣಮಕ್ಕಳಿಗೆ ತವರಮನಿಗೆ ಹೋಗಲಿಕ್ಕೆ ಏನರ ನೇವಾ- ನಿಯಮಾ ಬೇಕಾಗಿರ್ತದ ಇಷ್ಟ.
ಇನ್ನೊಂದ ಮಜಾ ಅಂದರ ಪಾಪ ನಮ್ಮ ಮಂಜು ಹೆಂಡ್ತಿ ಹೆತ್ತಿಬಣ ಬರ್ತಾಳ ಅಂತ ಒಂದ ವಾರ ಸಿಕ್ ಲೀವ್ ಹಾಕಿ ಬೆಂಗಳೂರಿಂದ ಬಂದಿದ್ದಾ. ಸಿಕ್ ಲೀವ್ ಯಾಕ ಹಾಕಿದ್ದಾ ಅಂದರ ಅವಂಗ ಒಂದ ಅವನ ಹೆಂಡತಿ ಹಡದ ಬಾಣಂತನ ಮುಗಿಯೋದರಾಗ ಅವನ ವರ್ಕ್ ಫ್ರಾಮ್ ಹೋಮ್ ಫೆಸಿಲಿಟಿ, ಮ್ಯಾಟರ್ನಿಟಿ ಲೀವ್, ಕ್ಯಾಜುವಲ್ ಲೀವ್ ಎಲ್ಲಾ ಖಾಲಿ ಆಗಿ ಮಂದಿ ಲೀವ್ ಕಡಾ ಕೇಳೋ ಪ್ರಸಂಗ ಬಂದಿತ್ತ. ಹಿಂಗಾಗಿ ತಲಿ ಕೆಟ್ಟ ಸಿಕ್ ಲೀವ್ ಹಾಕಿ ಬಂದಿದ್ದಾ. ಇಲ್ಲೇ ನೋಡಿದರ ಹೆಂಡ್ತಿ ಬಂದ ಎರಡ ದಿವಸಕ್ಕ ಮತ್ತ ತವರಮನಿಗೆ ಹೋಗಿದ್ದಕ್ಕ ಅಂವಾ ಸಿಕ್ ಲೀವ್ ಕ್ಯಾನ್ಸೆಲ್ ಮಾಡಿಸಿ ಮೆಂಟಲಿ ಸಿಕ್ ಆಗಿ ಈಗ ವಾಪಸ್ ಕೆಲಸಕ್ಕ ಹೋಗೊ ಬಗ್ಗೆ ವಿಚಾರ ಮಾಡ್ಲಿಕತ್ತನಾ.
ಅಲ್ಲಾ, ಏನ್ಮಾಡ್ತಾನ ಪಾಪ, ಹೆಂಡ್ತಿ ಬಂದಾಳ ಜಮಖಂಡಿಯಿಂದ ಅಂತ ಸಿಕ್ ಲೀವ್ ಹಾಕಿ ಬಂದರ ಅಕಿ ಎರಡ ದಿವಸಕ್ಕ ವಾಪಸ ತವರ ಮನಿಗೆ ’ ಬಚ್ಚಲಾ ಬದಲಾಯಿಸಲಿಕ್ಕೆ ಹೋಗ್ತೇನಿ’ ಅಂತ ಹೋದರ ಖರೇನ ಮಾನಸಿಕ್ ಆಗೋ ಆಟರಿಪಾ.
ಗಿರ್ಮಿಟ್ ರುಚಿ ಇತ್ತರಿ sir