ಈಗ ಒಂದ ತಿಂಗಳ ಹಿಂದ ಒಂದ ಮದ್ವಿ ಹಿಂದಿನ ದಿವಸದ ರುಕ್ಕೋತ್ ಊಟಕ್ಕ ಅಂದರ ಮಂಡಗಿ ಊಟಕ್ಕ ಕೂತಿದ್ದೆ. ನನಗ ಹಾಕಿದ್ದ ಎಲಿ ಅಗದಿ ಸಣ್ಣದ ಇತ್ತ. ಆಜು ಬಾಜುದವರ ಎಲಿ ನೋಡಿದೆ ಅವರದ ಎಲಿ ಒಂದ ಸ್ವಲ್ಪ ದೊಡ್ಡದ ಇತ್ತ. ಎಲ್ಲೆ ಎಲಿನೂ ಮನಷ್ಯಾರ ಹೊಟ್ಟಿ ಸೈಜ್ ನೋಡಿ ಹಾಕಲಿಕತ್ತಾರೋ ಅಂತ ಅನಸಲಿಕತ್ತ.
ಅಗದಿ ನನ್ನ ಎಲಿ ಅಂತೂ ನೈವಿದ್ಯದ ಎಲಿಗತೆ ಇತ್ತ, ಇನ್ನ ಚಟ್ನಿ-ಕೊಸಂಬರಿ-ಕಾಯಿಪಲ್ಯಾ ಎಲ್ಲಾ ಬಡಿಸಿಬಿಟ್ಟರ ಮುಂದ ಸಾರು ಅನ್ನಕ್ಕ, ಮಂಡಗಿಗೆ ಜಾಗಾನ ಉಳಿತಿದ್ದಿಲ್ಲಾ. ನಾ ಆ ಎಲಿ ಹಾಕಲಿಕತ್ತೊಂವಂಗ ಕರದ
’ಏ..ಎಲಿ ಚೇಂಜ್ ಮಾಡಪಾ, ಇಷ್ಟ ಸಣ್ಣ ಎಲಿ ಹಾಕಿದರ ನಾ ಏನ ಬರೇ ಕಾಯಿಪಲ್ಯೆ ತಿಂದ ಏಳ್ಬೇಕಿನ’ ಅಂದೆ. ಅದಕ್ಕ ಅಂವಾ
’ಏ..ಈಗ ಎಲ್ಲಾ ಹೈಬ್ರಿಡ್ ಬಾಳೆ ಎಲಿ, ಇಷ್ಟ ಬರೋದ’ ಅಂತ ಅಂದ ಹೋಗಿ ಬಿಟ್ಟಾ. ನಾ ಸಿಟ್ಟಿಗೆದ್ದ ಅಡಗಿ ಕಂಟ್ರ್ಯಾಕ್ಟರ್ ಯಾರ ಅಂತ ಕೇಳಿದೆ. ಭಾದ್ರಿ ಅಂದರ, ಏ ಭಾದ್ರಿ ನಮ್ಮಂವಾ ಕರಿ ಅವಂಗ ಅಂತ ಕರಸಿಸಿ
’ಏನೋ…ಒಂದ ಎಲಿಗೆ ಮೂರನೂರ ರೂಪಾಯಿ ತೊಗೊತಿ ಎಲಿನರ ದೊಡ್ಡದ ಹಾಕೋ ನಮ್ಮಪ್ಪಾ’ ಅಂದೆ. ಅಂವಾ ಇಮ್ಮಿಡಿಯೇಟ್ ನನ್ನ ಎಲಿ ತಗಿಸಿ ಬ್ಯಾರೆ ಎಲಿ ತರಲಿಕ್ಕೆ ಹೇಳಿದಾ.
’ಮಾಮಾ ಬೇಕಾರ ಭೂಮದ್ದ ಇಡಿ ಕುಡಿ ಬಾಳಿ ಎಲಿನ ಹಾಕಲೇನ್? ನೀವೇನ ಚೊಚ್ಚಲ ಗಂಡಸ ಮಗನ ನಿಯಮಾ ಹಿಡದಿಲ್ಲಲ್ಲಾ’ ಅಂತ ಚಾಷ್ಟಿ ಬ್ಯಾರೆ ಮಾಡಿ ಹೋದಾ.
ಇದನ್ನೇಲ್ಲಾ ನನ್ನ ಬಾಜೂಕ ಕೂತ ನೋಡ್ಲಿಕತ್ತಿದ್ದ ನಮ್ಮ ವಾಸಪ್ಪಜ್ಜಾ
’ಲೇ…ಮಗನ, ಬಡಸೋರ ನಮ್ಮೋರ ಇದ್ದರ ಹುಣಸಿ ಎಲ್ಯಾಗೂ ಊಟಾ ಮಾಡಬಹುದು, ನೀ ನೋಡಿದರ ತುತ್ತಿಗೆ ಮುದ್ದ ಕೊಟ್ಟ ಏಳೋಂವಾ, ಒಂದ ಎಲಿ ಸಣ್ಣದ ಹಾಕಿದ್ದಕ್ಕ ಎಷ್ಟ ದೊಡ್ಡ ಇಶ್ಯೂ ಮಾಡ್ತಿ’ ಅಂತ ಬೈದಾ.
ಹಂಗ ಅಂವಾ ಹೇಳಿದ್ದ ಖರೆ ಇತ್ತ. ಅದರಾಗ ಎಲಿ ಮ್ಯಾಲಿನ ’ಮ್ಯಾಲಿನ ಪಂಕ್ತಿ’ ಅಂದರ ಕಾಯಪಲ್ಯ ಅಂತೂ ನಾ ಮುಟ್ಟವನ ಅಲ್ಲಾ. ಸುಳ್ಳ ಹಾಕಿಸ್ಗೊಂಡ ಛಲ್ಲಿದಂಗ ಆಗ್ತಿತ್ತ.
ನಾ ಈಗ ಶ್ರಾವಣ ಮಾಸದಾಗ ನೈವಿದ್ಯ ಎಲಿ ಒಳಗ ಊಟಾ ಮಾಡ್ಬೇಕಾರು ಹತ್ತ ಸರತೆ ವಿಚಾರ ಮಾಡಿ ನನಗ ಏನ ಸೇರತದ ಅದನ್ನಿಷ್ಟ ಗೌರಿಗೆ ನೈವಿದ್ಯ ಮಾಡ್ಲಿಕ್ಕೆ ಬಡಸಸ್ತೇನಿ. ಇಲ್ಲಾಂದರ ನಮ್ಮವ್ವ ಚೊಚ್ಚಲ ಗಂಡಸ ಮಗಾ ನೈವಿದ್ಯ ಎಲಿನ ಉಣ್ಣ ಬೇಕ ಅಂತ ಎಲಿ ಇಟ್ಟ ಮ್ಯಾಲೆ ನನಗ ’ನೈವಿದ್ಯ ಎಲಿ ಏನೂ ಬಿಟ್ಟ ಏಳಂಗಿಲ್ಲಾ…ಬಿಟ್ಟರ ತಲಿಗೆ ಕಟ್ಟತೇನಿ’ ಅಂತ ಇವತ್ತಿಗೂ ಧಮಕಿ ಕೊಡ್ತಾಳ.
ಇನ್ನ ಇತ್ತಲಾಗ ಋಕ್ಕೋತ ಊಟದಾಗ ನಾ ಹಿಂಗ ಎರಡ ಸರತೆ ಸಾರು ಅನ್ನಾ ಉಣ್ಣೊದರಾಗ ಮಂಡಗಿ ಬಂತ ನಾ ಶಾಸ್ತ್ರಕ್ಕ ಒಂದ ಚೂರ ಹಾಕಿಸ್ಗೊಂಡೆ. ನೆಕ್ಸ್ಟ ರೌಂಡ ಮೋಹನ ಲಾಡು ಬಂತ. ನಾ ಬ್ಯಾಡ ಅಂತ ಕೈ ಮಾಡಿದೆ, ಬಾಜುಕ ಕೂತ ನಮ್ಮಜ್ಜ ಅದು ಎಂಬತ್ತ ದಾಟಿದೊಂವಾ ಎರಡ ಸರತೆ ಮಂಡಗಿ, ತುಪ್ಪಾ, ಹಾಲು ಸಕ್ಕರಿ ಪುಡಿ ಕರದ ಕರದ ಹಾಕಿಸ್ಗೊಂಡ ಹೊಡದಂವಾ ಮೋಹನ ಲಾಡು ಒಂದ ಹಾಕಿದಾಗ ’ಇನ್ನೊಂದ ಹಾಕೊ ನಾವ ಗಂಡಿನವರ’ ಅಂತ ಜೋರ ಮಾಡಿ ಹಾಕಿಸ್ಗೊಂಡಾ. ನಾ ಒಂದ ಸರತೆ ಅವನ ಮಾರಿ ನೋಡಿ
’ನಿಂಗ ಶುಗರ ಇತ್ತಲಾ?’ ಅಂತ ಮುದ್ದಾಮ್ ಮೂಡ್ ಆಫ್ ಆಗೊ ಹಂಗ ಕೇಳಿದೆ.
’ಶುಗರ್ ಅದ ಅಲಾ, ಅದ ನಿಮ್ಮಜ್ಜಿ ಬಾಜೂಕ ಕೂತಾಗ ಇಷ್ಟ ಇರ್ತದ. ನೀ ಗಪ್ ಬಾಯಿ ಮುಚಗೊಂಡ ನಿನ್ನ ಎಲಿ ನೋಡ ಊಟಾ ಮಾಡ ಮಗನ, ನಾ ಬೇಕಂತ ನಿಮ್ಮಜ್ಜಿನ್ನ ಬಿಟ್ಟ ಇತ್ತಲಾಗ ಊಟಕ್ಕ ಕೂತೇನಿ’ ಅಂತ ಅಂದಾ.
ಅಲ್ಲಾ ಅವರೇಲ್ಲಾ ಹಳೇ ಮನಷ್ಯಾರ ಅಗದಿ ಗಟ್ಟಿ, ಮ್ಯಾಲೆ ಶುಗರ್-ಪಗರ್ ಅಂತ ನಮ್ಮ ಗತೆ ತಲಿಕೆಡಸ್ಗೊಳೊಂಗಿಲ್ಲಾ.
ನಾ ಹಿಂಗ ಸ್ವೀಟ ಹಾಕಿಸ್ಗೊಳ್ಳಾರದ್ದ ನೋಡಿ ಅಂವಾ ನನಗ ಉಲ್ಟಾ
’ಯಾಕ ನಿನಗೂ ಶುಗರ್ ಬಂತೇನ?’ ಅಂತ ಕೇಳಿದಾ
’ಏ..ಇಲ್ಲೋ ಮಾರಾಯಾ, ವಳತ ಅನ್ನ. ನಾ ಶುಗರ್ ಬಂದ್-ಗಿಂದಿತ್ತ ಅಂತ ಸ್ವೀಟ ತಿನ್ನಂಗೇಲಾ… ನಂದ preventive measure’ ಅಂತ ಅಂದೆ.
’ಭಾಳ ಶಾಣ್ಯಾ ಇದ್ದಿ ತೊಗೊ. ಒಂದ ಕಾಲದಾಗ ಮಂದಿ ಹೆಂಗ ಊಟಾ ಮಾಡ್ತಿದ್ದರ ಗೊತ್ತ ಏನ’ ಅಂತ ಫ್ಲ್ಯಾಶ್ ಬ್ಯಾಕಿಗೆ ಹೋದಾ.
ಆ ಕಾಲದಾಗ ನಾಲ್ಕ ಮಂದಿ ಹಿರೇಮನಷ್ಯಾರ ಊಟಕ್ಕ ಕೂತರಂದರ ಪೂರ್ತಿ ಊಟಾ ಮುಗದ ಇನ್ನೇನ ಆಪೋಷಣಾ ತೊಗೊಬೇಕ ಅನ್ನೊ ಟೈಮ ಒಳಗ ಒಬ್ಬರ ಒಂದ ಮೋತಿ ಚೂರ ಲಾಡುದ್ದ ಬುಟ್ಟಿ ಹಿಡ್ಕೊಂಡ ಬಂದ ನಿಲ್ತಿದ್ದರಂತ. ಒಂದೂ ಹೆಂಡತಿ ಹೆಸರ ಹೇಳಬೇಕ ಅದು ಒಗಟ ಹಚ್ಚಿ ಇಲ್ಲಾ ಉಂಡಿ ತಿನ್ನಬೇಕ. ಉಂಡಿ ತಿನ್ನೋ ಕಾಂಪಿಟೇಶನ್, ಯಾರ ಸೋಲ್ತಾರ ಅವರ ಲಾಸ್ಟಿಗೆ ಹೆಂಡ್ತಿ ಹೆಸರ ಹೇಳಬೇಕಾಗ್ತಿತ್ತ ಅಂತ. ಒಬ್ಬೊಬ್ಬೊಂವಾ ಹತ್ತ- ಹದಿನೈದ ಉಂಡಿ ತಿಂತಿದ್ದರಂತ. ಹಂಗ ಹೋಳಗಿಗೂ ಜಿದ್ದ ಕಟ್ಟತಿದ್ದರಂತ. ಅಲ್ಲಾ ನಾ ಏನರ ಆ ಕಾಲದಾಗ ಇದ್ದರ ನನ್ನ ಹೆಂಡ್ತಿ ಹೆಸರ ಏನ ಮಂದಿ ಹೆಂಡ್ತಿ ಹೆಸರ ಸಹಿತ ಒಗಟ ಹಚ್ಚಿ ಹೇಳ್ತಿದ್ದೆ ಆದರ ಹಿಂಗ ಬುಟ್ಟಿ ಗಟ್ಟಲೇ ಉಂಡಿ, ಹೋಳಗಿ ನನ್ನ ಕಡೆ ತಿನ್ನಲಿಕ್ಕೆ ಆಗ್ತಿದ್ದಿಲ್ಲ ಬಿಡ್ರಿ. ಅಲ್ಲಾ ನಮ್ಮ ಕ್ಯಾಪಿಸಿಟಿನ ಇಲ್ಲಾ ಅಂದರ ಜಿದ್ದ ಯಾಕ? ನಮ್ಮ ಪ್ರಕೃತಿ ನೋಡಿದರ ಅದ ಏನೋ ಅಂತಾರಲಾ ಮಂಗಳಾರತಿ ತೊಗೊಂಡರ ಹೀಟ ಆಗ್ತದ ತೀರ್ಥ ತೊಗೊಂಡರ ತಂಪ ಆಗ್ತದ ಅಂತ ಹಂತಾ ನಾಜೂಕ ಮಂದಿರಿಪಾ ನಾವ.
ಅಲ್ಲಾ, ಆಗಿನ ಕಾಲದಾಗ ಗಂಡ ನಾಲ್ಕ ಮಂದಿ ಮುಂದ ಅದು ಒಗಟ ಹಚ್ಚಿ ಹೆಂಡ್ತಿ ಹೆಸರ ಹೇಳೋದ ಅಂದರ ಅಸಂಯ್ಯ ಅನಸ್ತಿತ್ತ ಕಾಣ್ತದ ಇಲ್ಲಾ ಮರ್ಯಾದಿ ಪ್ರಶ್ನೆ ಇರಬೇಕ. ನಾ ಹತ್ತ ಹೋಳಗಿ ತಿಂದರು ಅಡ್ಡಿಯಿಲ್ಲಾ ನಾಲ್ಕ ಮಂದಿ ಮುಂದ ಹೆಂಡ್ತಿ ಹೆಸರ ಹೇಳಂಗಿಲ್ಲಾ ಅಂತ ಹಟಾ. ಮುಂದ ಹೊಟ್ಟಿ ಕೆಟ್ಟರ ಕೆಡವಲ್ತಾಕ. ಅಲ್ಲಾ ಹಂಗ ಅವರಿಗೇನೂ ಆಗ್ತಿದ್ದಿಲ್ಲಾ ಆ ಮಾತ ಬ್ಯಾರೆ.
ನಮ್ಮ ಆನವಟ್ಟಿ ಈಶಾಭಟ್ಟರ ಯಾರರ ಜಿಲೇಬಿ ಬಡಸಲಿಕ್ಕೆ ಬುಟ್ಟಿ ಒಳಗ ತೊಗೊಂಡ ಬಂದರ, ಮರದಾಗ ತೊಗೊಂಡ ಬಾ, ಕೈಲೇ ಹಾಕ್ಬೇಡಾ ಮರದಲೇನ ಸುರುವ ಅಂತಿದ್ದರ ಅಂತ. ಹಾನಗಲ್ ಒಳಗ ದತ್ತಂಭಟ್ ದೇಶಪಾಂಡೆಯವರ ದೊನ್ನಿ ಗಟ್ಟಲೇ ತುಪ್ಪಾ ಕುಡಿತಿದ್ದರಂತ. ಬೊಮ್ಮನಳ್ಳಿ ಒಳಗ ಶಿಂದಗಿ ಅವರ ಮನ್ಯಾಗ ಅಡಗಿ ಮನ್ಯಾಗ ಒಳ್ಳಗತೆ ಒಂದ ದೊಡ್ಡ ಹಂಡೆ ಸೈಜಿಂದ ತೆಗ್ಗ ನೆಲದಾಗ ಇರತಿತ್ತಂತ ಅದರಾಗ ಮಾವಿನ ಹಣ್ಣಿನ ಸೀಜನ್ ಒಳಗ ಸೀಕರ್ಣಿ ಹಾಕಿ ಪರಟಿ ಗಟ್ಟಲೇ ಸೀಕರ್ಣಿ ಜಿದ್ದ ಮ್ಯಾಲೆ ಕುಡಿತಿದ್ದರಂತ.
ಈಗ ನೋಡಿದರ ನಮಗ ಒಂದ ಬಟ್ಲಾ ಬಿಟ್ಟ ಎರಡ ಬಟ್ಲಾ ಸೀಕರಣಿ ಕುಡದರ ಭಟ್ಟಿ ಸರದವರಗತೆ ಹೊರಕಡಿ ಹತ್ತತದ.
ಅಲ್ಲಾ ಅವರೇಲ್ಲಾ ಶತಾಯುಷಿಗಳ ಬಿಡ್ರಿ. ಆಗಿನ ಮಂದಿನ ಹಂಗ ಇದ್ದರ. ಏನ ತಿಂದರು ದಕ್ಕಿಸ್ಗೊತಿದ್ದರು. ದೊನ್ನಿ ಗಟ್ಟಲೇ ತುಪ್ಪ ಕುಡದರು ಅವರಿಗೇನ ಕೊಲೇಸ್ಟ್ರಾಲ್ ಬರ್ತಿದ್ದಿಲ್ಲಾ, ಬೈಪಾಸ್ ಆಗ್ತಿದ್ದಿಲ್ಲಾ. ಬುಟ್ಟಿ ಗಟ್ಟಲೇ ಉಂಡಿ ತಿಂದರು ಶುಗರ ಬರ್ತಿದ್ದಿಲ್ಲಾ. ನಾವ ನೋಡಿದರ ಯಾವದರ ಲಗ್ನಕ್ಕ ಹೊಗೊ ಮೊದ್ಲ ಒಮ್ಮೆ ಬಂದ ಮ್ಯಾಲೆ ಒಮ್ಮೆ ಶುಗರ ಚೆಕ್ ಮಾಡ್ಸೊ ಪ್ರಸಂಗ ಬಂದದ. ಹಂಗ ಅಕಸ್ಮಾತ after marriage fucntion sugar level ಜಾಸ್ತಿ ಆದರ ಮುಗದ ಹೋತ ಹೆಂಡ್ತಿ
’ನಾ ಹೇಳಿದ್ನಿಲ್ಲ, ಹೋದಲ್ಲೆ ಬಂದಲ್ಲೇ ಬಾಯಿ ಕಟ್ಟರಿ, ಸಿಹಿ ಕಂಡಕೂಡ್ಲೇನ ಇರಬಿ ಗತೆ ಮುಕರಬ್ಯಾಡ್ರಿ ಅಂತ’ ಅಂತ ಶುರು ಮಾಡ್ತಾಳ. ಇನ್ನ ಅಕಿ ಬಾಯಿ ಮುಚ್ಚಸಬೇಕಂದರ ಒಂದ ಹತ್ತ ಒಗಟ ಹಚ್ಚಿ ಅಕಿ ಹೆಸರಲೇ ಹೋಯ್ಕೋಬೇಕ ಆ ಮಾತ ಬ್ಯಾರೆ.
ಇರಲಿ, ನಮ್ಮಜ್ಜ ಹೇಳಿದಂಗ
’ಬಡಸೋರ ನಮ್ಮೋರ ಇದ್ದರ ಹುಣಸಿ ಎಲಿ ಒಳಗೂ ಊಟ ಮಾಡಬಹುದು’ ಅನ್ನೋದ ಒಂದ ಗಾದಿ ಮಾತ ಖರೆ ಆದರ ಅದರ ಅರ್ಥ ಆತ್ಮೀಯತೆಯಿಂದ ರುಚಿ, ರುಚಿ ಅಡಗಿ ಮಾಡಿ-ಬಡಸೋರ ಇದ್ದಾಗ ಎಲಿ ಸಣ್ಣದ ಏನ ದೊಡ್ಡದ ಏನ?
ಒಂದು ಮಾಡಿದ್ದ ಅಡಗಿಗೆ ’ಅದ ಹಂಗ ಆಗೇದ ಇದ ಹಿಂಗ ಆಗೇದ’ ಅಂತ ಹೆಸರ ಇಡಲಾರದ ಉಣ್ಣೊ ವಿಶಾಲ ಮನಸ್ಸ ಇರಬೇಕ, ಮ್ಯಾಲೆ ತಿಂದದ್ದ ಜೀರ್ಣ ಮಾಡ್ಕೊಳೊ ಕ್ಯಾಪಿಸಿಟಿ ಇರಬೇಕ. ಹೌದಲ್ಲ ಮತ್ತ?
Beautiful
Beautiful expressions 👌