ಹಂಗ ನಾ ಮೊದ್ಲಿಂದ ಕಡ್ದಿ ಪೈಲವಾನ. ಈಗ ಏನೊ ಎರಡ ಮಕ್ಕಳ ಹುಟ್ಟಿ ಆಪರೇಶನ್ ಆದಮ್ಯಾಲೆ, ಅಂದರ ಹೆಂಡ್ತಿದ ಮತ್ತ, ಒಂದ ಚೂರ ಗಡತರ ಆಗೇನಿ ಅನ್ನೋದ ಬಿಟ್ಟರ ಯಾವಾಗಲೂ ಅಂಡರ ವೇಟ್ ಮನಷ್ಯಾನ. ನಮ್ಮಜ್ಜಂತೂ ನಾ ಸಣ್ಣಂವ ಇದ್ದಾಗ ’ನಾಯಿ ಬಡಿಯೋ ಕೋಲ ಇದ್ದಂಗ ಇದ್ದಿ ಮಗನ’ ಅಂತಿದ್ದಾ. ಕಾಲೇಜನಾಗ ದೋಸ್ತರೇಲ್ಲಾ ’ರೇನಾಲ್ಡ್ ರಿಫಿಲ್’ ಅಂತ ಕರಿತಿದ್ದರು.
ಇನ್ನ ಅಂಡರ ವೇಟ್ ಇದ್ದದ್ದಕ್ಕ ಕಿರ್ಲೋಸ್ಕರ ಒಳಗ ನೌಕರಿ ಕೊಡಬೇಕಾರ
’ನೀ as per factory act 45 ಕೆ.ಜಿ ಆದಮ್ಯಾಲೆ ನಿಂದ ಕನಫರ್ಮೇಶನ್, ಅಲ್ಲಿ ತನಕ ಪ್ರೋಬೇಶನ ಕಂಟಿನ್ಯೂ’ ಅಂತ ವಾರ್ನಿಂಗ ಕೊಟ್ಟ ನೌಕರಿ ಕೊಟ್ಟಿದ್ದರ.
ಅಲ್ಲಾ ನಾ ಏನ ಪ್ರೋಬೇಶನ್ ಮುಗದರು 45 kg ದಾಟಲಿಲ್ಲಾ, ಆದರ ಯಾರ ನಂಗ ವೇಟ್ ಗೇನ್ ಆದರಿಷ್ಟ ಕನಫರ್ಮೇಶನ್ ಅಂದಿದ್ದರಲಾ ಅವರ ತಮ್ಮ ವೇಟ ರಿಡ್ಯೂಸ್ ಮಾಡ್ಲಿಕ್ಕೆ ಗುದ್ದಾಡ್ಲಿಕತ್ತಿದ್ದರ. ಆಮ್ಯಾಲೆ ನನ್ನ ಮೆಂಟಲ್ ವೇಟ್ ನೋಡಿ ’he is asset to the company’ ಅಂತ ಕನಫರ್ಮೇಶನ್ ಕೊಟ್ಟರ ಆ ಮಾತ ಬ್ಯಾರೆ.
ಒಂದ ಸರತೆ ಕಂಪನಿ ಒಳಗ ಒಂದ ಬ್ಲಡ್ ಕ್ಯಾಂಪ್ ಇಟಗೊಂಡಿದ್ದರು. ರಕ್ತಾ ಕೊಡೊರ ಲೈನ ಒಳಗ ನಾನೂ ಪಾಳೆ ಹಚ್ಚಿದ್ದೆ. ಅವರ ವೇಟ, ಬಿ.ಪಿ, ಶುಗರ್ ಚೆಕ್ ಮಾಡಿ ಬ್ಲಡ್ ತೊಗೊಳಿಕತ್ತಿದ್ದರು. ನನ್ನ ಪಾಳೆ ಬಂತ, ನಂದ ವೇಟ ಕಡಮಿ ಇದ್ದದ್ದಕ್ಕ ರಕ್ತಾ ತೊಗೊಳಂಗಿಲ್ಲಾ ಅಂತ ಸೈಡಿಗೆ ಸರಿಸಿದರ
’ಏ..ನಂಗೇನ ಪ್ರಾಬ್ಲೇಮ್ ಇಲ್ಲಾ… I want to donate blood’ ಅಂತ ಅಂದರೂ ಕೇಳಲಿಲ್ಲಾ.
ನಮ್ಮ ಪರ್ಸನಲ್ ಮ್ಯಾನೇಜರ್ ಕುಲಕರ್ಣಿ ಸರ್ ನನ್ನ ಮಾರಿ ನೋಡಿ
’ಏ..ನೀ ಒಂದ ಬಾಟಲಿ ಕೊಡೊದ ಇರಲಿ, ಆಮ್ಯಾಲೆ ಮೂರ ಬಾಟಲಿ ರಕ್ತಾ ಹಚ್ಚೊ ಹಂಗ ಆಗಬಾರದ ನಡಿ…’ ಅಂತ ಬೈದ
’ಏ…ಈ ಹುಡಗಗ ಒಂದ ಸೇಬು ಹಣ್ಣ, ಫ್ರೂಟಿ ಕೊಟ್ಟ ಕಳಸರಿ’ ಅಂತ ಅಂದ ಕಳಸಿದರು.
ಅವರು ನಾ ಸೇಬು ಹಣ್ಣ, ಜ್ಯುಸ್ ಆಶಾಕ್ಕ ರಕ್ತಾ ಕೊಡಲಿಕ್ಕೆ ಬಂದೇನಿ ಅಂತ ತಿಳ್ಕೊಂಡಿದ್ದರ.
ಅಲ್ಲೆ ಇಷ್ಟ ಅಲ್ಲಾ, ಒಟ್ಟ ನಾ ಎಲ್ಲೇ ರಕ್ತಾ ಕೊಡ್ತೇನಿ ಅಂದರೂ ನಂಗ
’ಮೊದ್ಲ ನೀ ತಿಂದ-ಉಂಡ ರಕ್ತಾ ಜನರೇಟ ಮಡ್ಕೊ ಮಗನ, ಆಮ್ಯಾಲೆ ಮಂದಿಗೆ ರಕ್ತಾ ಕೊಡೊ ಅಂತಿ’ ಅಂತ ಹೇಳಿ ಕಳಸ್ತಿದ್ದರ ಬಿಡ್ರಿ.
ಮುಂದ ಮದ್ವಿ ಆದಮ್ಯಾಲೆ ಅಂತೂ ರಕ್ತ ಕೊಡೊ ಚಾನ್ಸ ಇರಲಿಲ್ಲಾ. ಯಾಕಂದರ ಮನ್ಯಾಗ ಹೆಂಡ್ತಿನ ಇರತಿದ್ಲು, ಹಿಂಗಾಗಿ ಮಂದಿ ಅನ್ನೊ ಹಂಗ ರಕ್ತ ನನಗ ಕಡಿಮಿ ಬೀಳ್ತಿತ್ತ ಅಂದರು ಅಡ್ಡಿಯಿಲ್ಲಾ.
ಆದರ ಜನಾ ಮಾತ್ರ ಯಾರಿಗರ ರಕ್ತ ಬೇಕಂದರ ಮೊದ್ಲ ನನಗ ಕಂಟ್ಯಾಕ್ಟ ಮಾಡೋರ. ಹಂಗ ಅವರಿಗೆ ನನ್ನ ರಕ್ತನ ಬೇಕಂತ ಅಲ್ಲಾ. ನನ್ನ ಕಂಟ್ಯಾಕ್ಟ್ಸ ಛೊಲೊ ಅವ ಇಂವಾ ಎಲ್ಲರ ಆರೇಂಜ್ ಮಾಡ್ತಾನ ಅಂತ ಹೇಳಿ. ನಾ ಯಾರಿಗೆ ರಕ್ತ ಬೇಕಂದರೂ ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದೆ, ಒಮ್ಮೊಮ್ಮೆ ಅಂತೂ ರಕ್ತಾ ಕೊಡೊರ ಸಿಗಲಿಲ್ಲಾಂದರ ಮನ್ಯಾಗಿನ ಸ್ಟಾಕ ಅಂದರ ನನ್ನ ಹೆಂಡ್ತಿನ್ನ ಕರಕೊಂಡ ಹೋಗಿ ರಕ್ತಾ ಕೊಡಸ್ತಿದ್ದೆ. ಮತ್ತ ಸುಳ್ಳ ಹೇಳಬಾರದೂ ಅಕಿ ಒಮ್ಮೆನೂ ಒಲ್ಲೆ ಅಂದಿಲ್ಲ ಬಿಡ್ರಿ. ಅಲ್ಲಾ ಹಂಗ ಬಾಜು ಮನಿಯವರ ಹೆಪ್ಪಿಗೆ ಮಸರ ಕೇಳಿದರ ನಮ್ಮ ಮನ್ಯಾಗ ಇಲ್ಲಾ, ಇದ್ದದ್ದ ಅಷ್ಟು ಈಗ ನಮ್ಮ ಅತ್ತಿಗೆ ಮೊಸರವಲಕ್ಕಿ ಕಲಿಸಿಕೊಟ್ಟೆ ಅಂತ ಸುಳ್ಳ ಹೇಳಿ ಕಳಸೋಕಿ ಆದರ ಯಾರಿಗರ ರಕ್ತ ಬೇಕಂದರ ಒಲ್ಲೆ ಅಂದಿಲ್ಲಾ.
ಹಂಗ ನಾನ ಎರಡ ಸಿಜರಿನ್ ಆದಮ್ಯಾಲೆ ಅಕಿ ಕಡೆ ರಕ್ತಾ ಕೊಡಸೊದ ಬಿಡ್ಸಿದೆ. ಯಾಕಂದರ ಅಕಿ ಹಳೇ ರಕ್ತ ಕೊಟ್ಟಷ್ಟ ಹೊಸಾ ರಕ್ತದಲೇ ದಪ್ಪ ಆಗಕೋತ ಹೊಂಟಿದ್ಲು.
ಇನ್ನ ನಾ ಜನಾ ಯಾ ಬ್ಲಡ್ ಗ್ರೂಪ್ ಕೇಳ್ತಾರ ಅದನ್ನ ಹುಡಕತಿದ್ದೆ. ಅದರಾಗ ಡಾಕ್ಟರ್ ಫ್ರೆಶ್ ಇದ್ದರ ಛಲೋ ಅಂತಾರ ಅಂತ ಫ್ರೆಶ್ ಹುಡಕತಿದ್ದೆ ಬಿಡ್ರಿ.
ಹಂಗ ಇತ್ತೀಚಿಗೆ ಯಾರಿಗರ ರಕ್ತ ಬೇಕಂದಾಗ ಹೆಂಗಿದ್ದರೂ ನಂದ ವೇಟ್ ಗೇನ್ ಆಗೇದ ಅಂತ ರಕ್ತಾ ಕೊಡ್ಲಿಕ್ಕೆ ನಾ ಹೊಂಟರ ನನ್ನ ಹೆಂಡ್ತಿ
’’ಆಡ ಮುಟ್ಟಲಾರದ ತೊಪ್ಪಲ ಇಲ್ಲಾ ಆಡೂರ ಮಾಡಲಾರದ ಚಟಾ ಇಲ್ಲಾ ಅಂತ ಊರ ಮಂದಿ ಅಂತಾರ…ನೀವೇನ ರಕ್ತಾ ಕೊಡ್ತಿರಿ…ಸುಮ್ಮನ ಇರ್ರಿ…ಪಾಪ ಅವರ ಮಡಿವಂತರು ನಿಮ್ಮ ರಕ್ತಾ ತೊಗೊಂಡರ ಮೈಲಗಿ ಆಗಿ-ಗಿಗ್ಯಾರ’ ಅಂತಾಳ
’ಲೇ…ಅಲ್ಲೇ ಅವರದ life and deathದ ಪ್ರಶ್ನೆ ಅದಲೇ……’ ಅಂದರು ಕೇಳಂಗಿಲ್ಲಾ.
ಹೋದ ವರ್ಷ World Blood Donor Dayದ ಸಂಬಂದ ನಮ್ಮ ಮನಿ ಕಡೆ ಒಂದ ಬ್ಲಡ್ ಕ್ಯಾಂಪ್ ಮಾಡಿದ್ದರು. ಅದರಾಗ ವಿಶೇಷ ಏನಪಾ ಅಂದರ ಅದನ್ನ ಮಾಡಿದವರು ಮಹಿಳಾ ಸಂಘದವರ. ಇನ್ನ ಅದರಾಗ ಅಂತೂ ಅರ್ಧಕ್ಕಾ ಅರ್ಧಾ ಮಂದಿ ಗಂಡನ ರಕ್ತಾ ಹೀರಿದವರ. ಹೋಗ್ಲಿ ಬಿಡ ಅವರ ವರ್ಷಕ್ಕ ಒಂದ ಬಿಟ್ಟ ಹತ್ತ ಕ್ಯಾಂಪ್ ಮಾಡಿದರು ತಪ್ಪ ಇಲ್ಲಾ, ಇಷ್ಟ ದಿವಸ ಗಂಡಂದರ ಜೀವಾ ತಿಂದದ್ದಕ್ಕ ಸಾರ್ಥಕ ಆತ ಅಂತ ಅನ್ಕೊಂಡ ನಾ ತಲಿ ಕೆಡಸಿಗೊಳ್ಳಿಕ್ಕೆ ಹೋಗಿದ್ದಿಲ್ಲಾ. ಆದರ ಅಲ್ಲೆ ಹೋಗಿ ನೋಡಿದರ ರಕ್ತಾ ಕೊಡಲಿಕ್ಕೆನೂ ಈ ಮಹಿಳಾ ಮಣಿಗಳ ಮತ್ತ ತಮ್ಮ ತಮ್ಮ ಗಂಡಂದರ ಕರಕೊಂಡ ಬಂದ ಪಾಳೆ ಹಚ್ಚಸಿದ್ದರು. ನಾ ನನ್ನ ಹೆಂಡ್ತಿಗೆ ಸೈಡಿಗೆ ಕರದ
’ಅಲ್ಲಾ ಮನ್ಯಾಗ ಇಷ್ಟ ಜೀವಾ ತಿಂದದ್ದ ಸಾಕಾಗಿಲ್ಲಾ, ಇಲ್ಲೇನ ಅಗದಿ ಸಾರ್ವಜನಿಕವಾಗಿ ಡೈರೆಕ್ಟ ರಕ್ತಕ್ಕ ಕೈ ಹಚ್ಚಿರೇಲಾ’ ಅಂತ ಅಂದರ
’ರಕ್ತಾ ಕೊಟ್ಟಷ್ಟ ಫ್ರೇಶ್ ರಕ್ತ reproduce ಆಗ್ತದ ತೊಗೊರಿ’ ಅಂತ ಅಂದ್ಲು. ಅದರಾಗ ಇಕಿಗೆ ಒಂದ ಪೇಪರ ಕೊಟ್ಟ ಎಲ್ಲಾರದೂ ಹೆಸರು, ವಯಸ್ಸು, ಬ್ಲಡ್ ಗ್ರೂಪ್ ಬರಕೊಳ್ಳಿಕ್ಕೆ ಕೂಡಸಿದ್ದರು.
ನನ್ನ ಹೆಂಡ್ತಿ ಗಡಿಬಿಡಿ ಒಳಗ ಒಬ್ಬೊಕಿ ಗಂಡನ್ನ ಬ್ಲಡ್ ಗ್ರೂಪ್ ಬರಕೋಳೊದ ಮರತ ಬಿಟ್ಟಿದ್ಲು. ಮುಂದ ಅಕಿನ್ನ ಹುಡುಕಿ
’ಅನ್ನಂಗ ನಿಮ್ಮ ಮನೆಯವರ ಬ್ಲಡ್ ಗ್ರೂಪ್ ಏನ?’ ಅಂತ ಕೇಳಿದ್ಲು.
ಅಕಿ ’ನನ್ನ ಗಂಡಂದ ಬಾಂಬೆ ಬ್ಲಡ್’ ಅಂದ್ಲು. ಅಲ್ಲಾ ಹಂಗ ಅಕಿ ಇಲ್ಲೇ ಹುಬ್ಬಳ್ಳಿ ಮಂಗಳವಾರ ಪೇಟ್ ಹುಡುಗಿ ಆದರ ಮಾಡ್ಕೊಂಡಿದ್ದ ಬಾಂಬೆ ಹುಡ್ಗನ್ನ. ಅಕಿ ಹಂಗ ಅಂದಿದ್ದ ಕೇಳಿ ನನ್ನ ಹೆಂಡ್ತಿಗೆ ಇಕಿ ಎಲ್ಲಿ ಬಾಂಬೆ ಬ್ಲಡ್ ತಂದ್ಲಲೇ ಅಂತ ತಲಿಕೆಟ್ಟ
’ಏನ್?…ನಿನ್ನ ಗಂಡಂದ ಬಾಂಬೆ ಬ್ಲಡ್?…ಹಂಗರ ನನ್ನ ಗಂಡಂದ ಛೋಟಾ ಬಾಂಬೆ ಬ್ಲಡ್ ತೊಗೊ…..ಸುಮ್ಮನ ಬ್ಲಡ್ ಗ್ರುಪ ಹೇಳ ಅಂದರ ಏನೇನರ ಹೇಳ್ತಿ ಅಲಾ’ ಅಂತ ಅಕಿಗೆ ಜೋರ ಮಾಡಿದ್ಲು. ಅಕಿ ಗಂಡ ಬಾಂಬೆದಂವಾ ಹಿಂಗಾಗಿ ಅಕಿ ಬಾಂಬೆ ಬ್ಲಡ್ ಅಂತ ಹೇಳ್ಯಾಳ ಅಂತ ಇಕಿ ತಿಳ್ಕೊಂಡಿದ್ಲು. ನನ್ನ ಪುಣ್ಯಾಕ್ಕ ಇಕಿ ತನ್ನ ಗಂಡಂದ ಕಮರಿಪೇಟ್ ಬ್ಲಡ್ ಅನಲಿಲ್ಲಾ. ಅಲ್ಲಾ, ಅಕಿಗೆ ಬಾಂಬೆ ಬ್ಲಡ್ ಅನ್ನೊದ ಒಂದ ಬ್ಲಡ್ ಗ್ರುಪ್ ಅಂತ ಗೊತ್ತ ಇರಲಿಲ್ಲಾ. ನಾನ ಅಕಿಗೆ ಜಾಸ್ತಿ embarass ಆಗೋದ ಬ್ಯಾಡಾ ಅಂತ ಕಿವ್ಯಾಗ
’ಲೇ…ನೀ ಹುಟ್ಟಾ ಚೆನ್ನಪೇಟ್ ದಾಟಿಲ್ಲಾ, ಸುಮ್ಮನ ಕೂಡ. ಬಾಂಬೆ ಬ್ಲಡ್ ಅಂತ ಬ್ಲಡ್ ಗ್ರುಪ್ ಅದ’ ಅಂತ ಹೇಳಿ ಗಪ್ ಮಾಡಿದೆ.
ಹಂಗ ಭಾಳ ಮಂದಿಗೆ ಇವತ್ತಿಗೂ ಬಾಂಬೆ ಬ್ಲಡ್ ಅಂದರ ಗೊತ್ತಿಲ್ಲಾ. ಜಗತ್ತಿನೊಳಗ A+ O+ B+ AB+ A- O- B- AB- ಅನ್ನೊ ಎಂಟ ಬ್ಲಡ್ ಗ್ರುಪ್ ಬಿಟ್ಟ there is a blood group by the name bombay. ಬಾಂಬೆ ಅಂತ ಬ್ಲಡ್ ಗ್ರುಪ ಅದ. ಇದಕ್ಕ Hh ಬ್ಲಡ ಗ್ರುಪ್ ಅಂತನೂ ಕರಿತಾರ. ಇದ ಅಗದಿ ರೇರ್ ಬ್ಲಡ್ ಗ್ರುಪ. ಜಗತ್ತಿನೊಳಗ ಒಂದ ಮಿಲಿಯನ್ ಮಂದಿ ಒಳಗ ನಾಲ್ಕ ಮಂದಿಗೆ ಇರ್ತದ. ಈ ಬ್ಲಡ್ ಗ್ರುಪನವರಿಗೆ ರಕ್ತ ಸಿಗೋದ ಭಾಳ ತ್ರಾಸ. ೨೦೧೭ರಾಗ ಒಬ್ಬ ಕೋಲಂಬಿಯನಗೆ ಈ ಗ್ರುಪದ ರಕ್ತ ಬೇಕಾದಾಗ ಬ್ರೆಜಿಲದಿಂದ ಇಂಪೋರ್ಟ ಮಾಡಿಸಿ ಹಾಕಿದರಂತ. ಏನ್ಮಾಡ್ತೀರಿ?
ಇರಲಿ ನಾಡದ ಜೂನ್ 14ಕ್ಕ ವಿಶ್ವ ರಕ್ತದಾನಿಗಳ ದಿನಾ ಅಂತ ಇಷ್ಟೇಲ್ಲಾ ಬರಿಬೇಕಾತ.
ಹಂಗ ರಕ್ತ ದಾನನ ಜೀವನದಾಗ ಶ್ರೇಷ್ಟ ದಾನ ಅನ್ನೋದರಾಗ ಎರಡ ಮಾತಿಲ್ಲಾ. ಪ್ರತಿಯೊಂದು ರಕ್ತ ಕಣಕ್ಕೂ ಜೀವ ಉಳಿಸುವ ಶಕ್ತಿ ಅದ. ದಯವಿಟ್ಟು ರಕ್ತದಾನ ಮಾಡೋಣ. ಅದರಾಗ ಈ ಕೊರೊನಾ ಟೈಮ್ ಒಳಗ ಪ್ಲಸ್ಮಾ ಕೋಡೊದ ಅಂತು ಅಗದಿ ಪುಣ್ಯಾದ್ದ ಕೆಲಸ.
Entertaining as well as informative