ಮೊನ್ನೆ ಗ್ಯಾಸ ಮ್ಯಾಲೆ ಹಾಲ ಉಕ್ಕಿ ಅಟ್ಟಸಲಿಕತ್ತಿತ್ತ
’ಅವ್ವಾ, ಹಾಲ ಮಳ್ಳಲಿಕತ್ತದ,ನೀ ಏನ್ಮಾಡ್ಲಿಕತ್ತಿ?’ ಅಂತ ನಾ ಒದರಿದರ ಅಲ್ಲೇ ಡೈನಿಂಗ ಟೇಬಲ್ ಮ್ಯಾಲೆ ಟ್ಯಾಬ್ ಹಿಡ್ಕೊಂಡ ಕೂತ ನಮ್ಮವ್ವಂದ ಹೂಂ ನೂ ಇಲ್ಲಾ ಹಾಂ ನೂ ಇಲ್ಲಾ. ಇನ್ನ ನಮ್ಮಕಿ ಅಂತೂ ಎಮ್ಮಿ ಹಾಲ ಉಕ್ಕಿದರೇನ ಮಳ್ಳಿದರೇನ? ತನಗೇನ ಸಂಬಂಧ ಇಲ್ಲಾ ಅನ್ನೋರಗತೆ ಟಿ.ವಿ ಮುಂದ ಮೋಬೈಲ ಹಿಡ್ಕೊಂಡ ಕೂತಿದ್ಲು.ಇದ ನಮ್ಮ ಮನ್ಯಾಗ ವಾರಕ್ಕ ನಾಲ್ಕೈದ ಸರತೆ ಇರೋ ಕಾಮನ್ ಸೀನ್. ಯಾವಾಗ ಮನ್ಯಾಗ ತಲಿಗೊಂದೊಂದ ಸ್ಮಾರ್ಟ ಫೋನ ಬಂದ್ವು ಆವಾಗಿಂದ ಹಿಂಗ.
ಮೊದ್ಲ ’ಒಂದೂ ಗಂಡನ ಜೊತಿ ಸ್ಮಾರ್ಟನ ಹೆಂಡ್ತಿನರ ಇರಬೇಕು ಇಲ್ಲಾ ಸ್ಮಾರ್ಟ ಫೋನರ ಇರಬೇಕು’ ಅಂತ ನಾ ಸ್ಮಾರ್ಟ ಫೋನ ತೊಗೊಂಡಿದ್ದಿಲ್ಲಾ, ಆದರ ಯಾವಾಗ ಕಂಪನಿಯವರ ತಮ್ಮ ಕೆಲಸಕ್ಕ ಅನಕೂಲ ಆಗಲಿ ಅಂತ ಸ್ಮಾರ್ಟ ಫೋನ್ ಕೊಡಸಿದರ ಆವಾಗಿಂದ ಮನಿ ಮಂದಿಗೇಲ್ಲಾ ಸ್ಮಾರ್ಟ್ ಫೋನ್ ಚಟಾ ಹತ್ತ. ನಮಗೇಲ್ಲಾ ಮಂದಿ ಫೋನನಾಗ ಆ ಸುಡಗಾಡ ಕ್ಯಾಂಡಿ ಕ್ರಶ್ ಆಡೋದ ನೋಡಿ ಕ್ರಶ್ ಆಗಿತ್ತ ಹಿಂಗಾಗಿ ಒಂದ ಸ್ಮಾರ್ಟ ಫೋನ ಬರೋದ ತಡಾ ಎಲ್ಲಾರೂ ಕ್ಯಾಂಡಿ ಕ್ರಶ್ ಶುರು ಹಚ್ಗೊಂಡ್ವಿ.
ಅದರಾಗ ಹಿಂದಕ ಒಂದ ಸರತೆ ನನ್ನ ಹೆಂಡ್ತಿ ಮಠದವರ ಮನಿಗೆ ಅರಿಷಣ-ಕುಂಕಮಕ್ಕ ಹೋದಾಗ ಬಾಜು ಕೂತಿದ್ದ ಮುತ್ತೈದಿಗೊಳ ಕ್ಯಾಂಡಿ ಕ್ರಶ್ ಬಗ್ಗೆ ಮಾತಾಡ್ಲಿಕತ್ತಿದ್ದರಂತ. ಪಾಪ ನನ್ನ ಹೆಂಡತಿಗಂತೂ ನನ್ನ ಮ್ಯಾಲಿನ ಕ್ರಶ್ ಬಿಟ್ಟರ ಬ್ಯಾರೆ ಕ್ರಶ್ ಗೊತ್ತಿದ್ದಿದ್ದಿಲ್ಲಾ. ’ ನಾ ಇಷ್ಟನೇ ಲೇವಲ್ವಾ, ನಿಂದ ಎಷ್ಟನೇ ಲೆವಲ್ ’ ಅಂತ ಅವರ ಮಾತಾಡೋದ ಕೇಳಿ ಇಕಿ ತಲಿಕೆಟ್ಟ ಹೋತ. ಅದರಾಗ ಉಮಾ ಅಂಟಿ
’ಪ್ರೇರಣಾ ನಿಂದ ಯಾ ಲೇವಲ್’ ಅಂತ ಕೇಳಿದರಂತ. ಪಾಪ ಇಕಿ ಕಡೆ ನೋಡಿದರ ಸ್ಮಾರ್ಟ ಫೋನ ಇರಲಿಲ್ಲಾ.
’ಇಲ್ಲರಿ ನನ್ನ ಕಡೆ ಸ್ಮಾರ್ಟ ಫೋನ ಇಲ್ಲಾ’ ಅಂತ ಅಂದ ಕೂಡ್ಲೆ ಅವರ ಇಕಿದ ಲೆವಲ್ ತಿಳ್ಕೊಂಡ ನಕ್ಕ ಬಿಟ್ಟರಂತ. ನನ್ನ ಹೆಂಡ್ತಿ ಅದನ್ನ ಪರ್ಸನಲ್ ತೊಗೊಂಡ ’ನನ್ನ ಕಡೆ ಸ್ಮಾರ್ಟ ಫೋನ ಇಲ್ಲಾ, ಅರಿಷಣ ಕುಂಕಮಕ್ಕ ಹೋದಲ್ಲೇಲ್ಲಾ ಅಸಂಯ್ಯ್ ಆಗತದ. ಸ್ಮಾರ್ಟ ಫೋನ ಕೊಡಸಲಿಲ್ಲಾಂದರ ಇನ್ನ ಮುಂದ ನಾ ಅರಿಷಣ ಕುಂಕಮಕ್ಕ ಹೋಗಂಗಿಲ್ಲಾ’ ಅಂತ ಹಟಾ ಮಾಡಿ ಅಕಿನೂ ಒಂದ ಫೋನ ತೊಗೊಂಡ ಕ್ಯಾಂಡಿ ಕ್ರಶ್ ಉದ್ಘಾಟನೆ ಮಾಡಿದ್ಲು.
ಯಾವಾಗಿಂದ ಅಕಿದ ಕ್ಯಾಂಡಿ ಕ್ರಶ್ ಶುರು ಆತ ಅಕಿಗೆ ನನ್ನ ಮ್ಯಾಲಿನ ಕ್ರಶ್ ಕಡಮಿ ಆತ, ಸ್ಮಾರ್ಟ ಫೋನ್ ಬಂದ ಮ್ಯಾಲೆ ಸ್ಮಾರ್ಟನಿ ಗಂಡನ್ನು ಮರತ್ಲು, ಮನಿ ಕೆಲಸಾನೂ ಬಿಟ್ಲು.
ಇತ್ತಲಾಗ ನಮ್ಮವ್ವಾ ರಾತ್ರಿ ನಿದ್ದಿ ಬರಂಗಿಲ್ಲಾ ಅಂತ ಟ್ಯಾಬ ಕೊಡಿಸಿಕೊಂಡ ಅಕಿನೂ ಕ್ಯಾಂಡಿ ಕ್ರಶ್ ಶುರು ಮಾಡಿದ್ಲು, ಅತ್ತಲಾಗ ಮಕ್ಕಳು ಆನ-ಲೈನ್ ಕ್ಲಾಸ ಅಂತ ಮೋಬೈಲ ಹಿಡ್ಕೊಂಡ ಆಡ್ಲಿಕತ್ತರು.
ನಮ್ಮವ್ವಂತು ’ಒಗ್ಗರಣಿ ಹೊತ್ತೇದಲ್ವಾ…ನೀ ಏನ ಮಾಡ್ಲಿಕತ್ತಿದ್ದಿ’ ಅಂದರ ಅಗದಿ ಕ್ಲೀಯರ್ ಆಗಿ ’ನಾ ಕ್ಯಾಂಡಿ ಕ್ರಶ್ ಆಡಲಿಕತ್ತಿದ್ದೆ’ ಅಂತ ಹೇಳೋಕಿ…’ನೀನರ ನೋಡಬೇಕಿಲ್ಲ’ ಅಂದರ ನನ್ನ ಹೆಂಡ್ತಿ
’ನಂಗೇನ ಗೊತ್ತರಿ ಅವರ ಒಗ್ಗರಣಿ ಹೊತ್ತಿದ್ದ..ನನ್ನಷ್ಟಕ್ಕ ನಾ ಸುಮ್ಮನ ಕ್ಯಾಂಡಿ ಕ್ರಶ ಆಡ್ಕೊತ ಕೂತಿದ್ದೆ’ ಅಂತ ಅನ್ನೋಕಿ.
ಯಾರಿಗೂ ಏನೂ ಅನ್ನೋಹಂಗ ಇಲ್ಲಾ. ಕಡಿಕೆ ತಲಿಕೆಟ್ಟ ನಾ ಟೆನ್ಶನ್ ತೊಗೊಂಡ relieve your stress ಅಂತ ನಾನೂ ಒಂದ್ಯಾರಡ ಲೇವಲ್ ಕ್ಯಾಂಡಿ ಕ್ರಶ್ ಆಡಿ ಸ್ಟ್ರೆಸ್ ರೀಲೀವ್ ಮಾಡ್ಕೊಳೊಂವಾ.
ಅಲ್ಲಾ ಇದ ನಮ್ಮನಿದ ಒಂದ ಕಥಿ ಅಲ್ಲಾ ಜಗತ್ತಿನಾಗ ಭಾಳ ಮನ್ಯಾಗ ಇದ ಹಣೇಬರಹ.
ಇವತ್ತ ’ಕ್ಯಾಂಡಿ ಕ್ರಶ್’ ಆಡಲಾರದ ಮನಿ ಇಲ್ಲಾ ಅಂತ ಅಂದರೂ ಅಡ್ಡಿಯಿಲ್ಲ.
ನಮ್ಮ ಮನಿ ಬಾಜು ಹುಡಗಿ ಅಂತೂ ಕಾಲೇಜ ಬಸ್ ವಾರಕ್ಕ ಮೂರ ಸರತೆ ಮಿಸ್ ಮಾಡ್ಕೊಳೊಕಿ. ಕಡಿಕೆ ಬಸ್ ಸ್ಟಾಪ ಮುಂದ ನಾ ಹೋಗಬೇಕಾರ ’ಮಾಮಾ ಡ್ರಾಪ ಕೊಡ’ ಅನ್ನೋಕಿ, ’ಯಾಕ ಕಾಲೇಜ ಬಸ್ ಏನಾತ’ ಅಂದರ, ’ಏ ಅದ ಯಾವಾಗ ಬಂತ ಯಾವಾಗ ಹೋತ ಗೊತ್ತಾಗಲಿಲ್ಲಾ’ ಅನ್ನೋಕಿ. ’ಬಸ್ ಬಂದಾಗ ನೀ ಏನ ಮಾಡ್ಲಿಕತ್ತಿದ್ದಿ’ ಅಂತ ಕೇಳಿದರ. ಅಗದಿ ಹಲ್ಲ ತಗದ ’ನಾ ಬಸ ಬರೋತನಕಾ ಅಂತ ಕ್ಯಾಂಡಿ ಕ್ರಶ್ ಆಡ್ಲಿಕತ್ತಿದ್ದೆ’ ಅನ್ನೋಕಿ.
ನನ್ನ ತಂಗಿ ಮಗಾ ತನ್ನ ಐದನೇ ವರ್ಷದ ಹುಟ್ಟಿದ ಹಬ್ಬಕ್ಕ ಕ್ಯಾಂಡಿ ಕ್ರಶ್ ಕೇಕ್ ಬೇಕಂತ ಹಟಾ ಮಾಡಿ ಮಾಡಿಸ್ಗೊಂಡ ಅದರಾಗ ಮೂರ ಕಲರ ಬಾಂಬ್ ಸಾಲಕ ಇಟಗೊಂಡ ಕೇಕ್ ಕಟ್ ಮಾಡಿದಾ, ಏನಂತಿರಿ ?
ಇವತ್ತ ಜಗತ್ತಿನಾಗ ಇಷ್ಟ ಜನಾ ಇದಕ್ಕ ಅಡಿಕ್ಟ ಆಗ್ಯಾರ ಅಂದರ ಅದರಿಂದ ಮುಕ್ತಿ ಹೊಂದಲಿಕ್ಕೆ ಫಾರೇನದಾಗ
rehabilitation center for candy crush addicts ಅಂತ ಶುರು ಮಾಡ್ಯಾರ.
ನಾ ವಾರದಾಗ ಒಂದ ಸರತೆ ಬಿಟ್ಟ ಮೂರ ಸರತೆ occasionally ಹೊರಗ ಪಾರ್ಟಿಗೆ ಹೋದರ ನನ್ನ ಹೆಂಡ್ತಿ ‘ಯಾಕ ಭಾಳ ಜೋರ ನಡದದಲಾ ’rehabilitation center’ಗೆ ಅಡ್ಮಿಟ್ ಮಾಡಸಬೇಕಿನ?’ ಅಂತ ನಂಗ ಟಾಂಟ್ ಹೊಡಿತಾಳ ತಾ ನೋಡಿದರ ದಿನಕ್ಕ ಮೂರ ಮೂರ ತಾಸ ಕ್ಯಾಂಡಿ ಕ್ರಶ್ ಆಡ್ತಾಳ. ಮ್ಯಾಲೆ ಕ್ಯಾಂಡಿ ಕ್ರಶ್ ಒಳಗ ತನ್ನ ಲೈಫ ಕಡಮಿ ಆದರ ಮತ್ತೊಬ್ಬರಿಗೆ ಲೈಫ ಉದ್ರಿ ಕೇಳ್ತಾಳ. ’ನಂದ ಖಾಲಿ ಆದಾಗ ನೀ ಕೊಡ, ನಿಂದ ಖಾಲಿ ಆದಾಗ ನಾ ಕೋಡ್ತೇನಿ’ ಅಂತಾಳ. ಅಲ್ಲಾ ಒಂದ ಕಾಲದಾಗ ಜನಾ ಹೆಪ್ಪಿಗೆ ಮೊಸರ, ಪಾನಕಕ್ಕ ಲಿಂಬೆಹಣ್ಣ, ಚಹಾಕ್ಕ ಸಕ್ಕರಿ ಕಡಾ ಇಸ್ಗೊಂಡ ಬರ್ತಿದ್ದರು ಈಗ ಕ್ಯಾಂಡಿ ಕ್ರಶದ್ದ ಲೈಫ್ ಕಡಾ ಇಸ್ಗೋತಾರ.
ನಮ್ಮಕ್ಕ ಒಬ್ಬೋಕಿ ಇದ್ದಾಳ, ಅಕಿ ಅಂತೂ ನಮ್ಮ ಸಂಬಂಧಿಕರ ಒಳಗ ಎಲ್ಲಾರ ಕಡೆನೂ ಸಾಲಾ ಮಾಡ್ಯಾಳ..ರೊಕ್ಕಾ ಅಲ್ಲ ಮತ್ತ ಕ್ಯಾಂಡಿ ಕ್ರ್ಯಾಶ ಲೈವ್ಸ. ಮುಂದ ಯಾವಾಗ ಅಕಿಗೆ ಇನ್ನ ಯಾರು ಕಡಾ ಕೊಡಂಗಿಲ್ಲಾ ಅಂತ ಗೊತ್ತಾತ ಆವಾಗಿಂದ ಅಕಿ candy crush next level after 30 mins ಅಂದಾಗೊಮ್ಮೆ ತನ್ನ ಮೋಬೈಲದ್ದ ಟೈಮ್ ಚೇಂಜ್ ಮಾಡಿ ಲೈಫ ತೊಗೊತಾಳ. ಮತ್ತ ಲೈಫ ಮುಗಿತ, ಮತ್ತ ಮೋಬೈಲ್ ಟೈಮ್ ಚೇಂಜ್ ಮಾಡ್ತಾಳ. ಹಿಂಗ ಮಾಡ್ತ..ಮಾಡ್ತ, ಟೈಮ್, ಡೇಟ್..ಮಂಥ..ಇಯರ್ ಚೇಂಜ್ ಮಾಡ್ಕೊತ ಇವತ್ತ ಅಕಿ ಮೋಬೈಲದ ಡೇಟ್ 10.04.2100 ಕ್ಕ ಮುಟ್ಟೇದ. ಇಷ್ಟ ಮಾಡಿನೂ ಅಕಿ ಇನ್ನೂ ಕ್ಯಾಂಡಿ ಕ್ರಶ್ ಒಳಗ 2020 level ದಾಟಿಲ್ಲಾ ಆ ಮಾತ ಬ್ಯಾರೆ. ಅಲ್ಲಾ, ಹಿಂತಾವರ ಸಂಬಂದ ಮತ್ತ candy crush rehab centers ಒಪನ್ ಆಗಿದ್ದ.
ಇನ್ನ ನನ್ನ ಮಗಳ ಅಂತೂ ಒಮ್ಮೊಮ್ಮೆ ಬರೇ ಒಂದ ಜೆಲ್ಲಿ ಇದ್ದಾಗ ಅದು nightmerishly hard level ಒಳಗ ಮೂವ್ಸ ಮುಗದ ಬಿಟ್ಟರ ಕಣ್ಣಾಗ ನೀರ ತಗಿತಾಳ. ನೋಡಿದವರ ಅಗದಿ ಏನಾತೋ ಅನ್ನಬೇಕ ಅಷ್ಟ ದುಃಖ ಉಕ್ಕಿ ಬಂದಿರತದ. ಅಲ್ಲಾ, ಪಾಪ ಅಕಿಗೆ ಎಷ್ಟ ದುಃಖ ಆಗಿರ್ತದ ಅನ್ನೋದ ಕ್ಯಾಂಡಿ ಕ್ರಶ್ ಆಡೋರಿಗೆ ಗೊತ್ತಾಗತದ ಬಿಡ್ರಿ.
ನಮ್ಮ ದೋಸ್ತ ಒಬ್ಬೊಂವ ಇದ್ದಾನ, ಅಗದಿ ಕ್ಯಾಂಡಿ ಕ್ರಶ್ ಭಕ್ತ. ಅಂವಾ ಅಂತೂ ಮುಂಜಾನೆ ಎದ್ದ ಕೂಡಲೇ ಮೊಬೈಲ ಹಿಡ್ಕೊಂಡ ಬಾಥರೂಮಗೆ ಹೋಗ್ತಾನ. ಒಂದ ಐದ ಲೇವಲ್ ದಾಟೋ ಮಟಾ ಅವಂದ ಹೊಟ್ಟಿ ಸ್ವಚ್ಛ ಆಗಂಗಿಲ್ಲಾ. ಇತ್ತಲಾಗ ಹೊರಗ ಕಾಯಲಿಕತ್ತವರದ ಲೇವಲ್ ದಾಟಿ ಹೋಗಿರ್ತದ. ’ಏ, ಕ್ಯಾಂಡಿ ಕ್ರಶ್ ಆಡಿದರ ಇಷ್ಟ ಬರೋದಲೇ’ ಅಂತಾನ. ಅಲ್ಲಾ ಒಂಥರಾ ಕ್ಯಾಂಡಿ ಕ್ರಶ್ ಅವಂಗ ಎನಿಮಾ ಇದ್ದಂಗ.
ಒಟ್ಟ ಮಂದಿ ಒಂದ ಚೂರ ಟೈಮ ಸಿಗ್ತಿಲ್ಲೊ ಕ್ಯಾಂಡಿ ಕ್ರಶ ಹಿಡ್ಕೊಂಡ ಕೂಡ್ತಾರ. corporate officeನಾಗ daily meetingನಿಂದ ಹಿಡದ ಕಟಿಂಗ ಅಂಗಡಿ ಒಳಗ ಕಟಿಂಗ ಮಾಡಿಸ್ಗೊಬೇಕಾರ ಸಹಿತ ಆಡ್ತಾರ ಅಂದರ ವಿಚಾರ ಮಾಡ್ರಿ ಜನರಿಗೆ ಎಷ್ಟ ಕ್ರಶ್ ಅದ ಈ ಕ್ಯಾಂಡಿ ಕ್ರಶದ್ದ ಅಂತ.
ಅನ್ನಂಗ ಇವತ್ತ ಎಲ್ಲಾ ಬಿಟ್ಟ ಈ ವಿಷಯ ಯಾಕ ಬಂತು ಅಂದರ ನಾಡದ ಅಂದರ ಎಪ್ರಿಲ್ 12ಕ್ಕ ಕ್ಯಾಂಡಿ ಕ್ರಶ್ ಆಫಿಸಿಯಲಿ ರೀಲೀಸ್ ಆಗಿ ಒಂಬತ್ತ ವರ್ಷಾತ. ಅಂದರ ಒಂಬತ್ತ ತುಂಬಿ ಹತ್ತರಾಗ ಬಿತ್ತ ಅನ್ನರಿ. ಹಂಗ ಅದೇನ ದಿಂದಾಗಿಲ್ಲಾ, ಅದಕ್ಕೇನ ಡಿಲೇವರಿ ಆಗಂಗಿಲ್ಲಾ ಆದರ ಹಿಂದ ಬಿದ್ದ ನಮ್ಮ ನಾರ್ಮಲ್ ಲೈಫ್ ಸಿಜರಿನ್ ಆಗಲಿಕತ್ತದ ಇಷ್ಟ್.
ಅನ್ನಂಗ ಇನ್ನೊಂದ ಕೇಳೋದ ಮರತೆ, ನೀವ ಎಷ್ಟನೇ ಲೇವಲಗೆ ಇದ್ದೀರಿ ಕ್ಯಾಂಡ್ರಿ ಕ್ರಶ್ ಒಳಗ? ಹಂಗೇನರ ಲೈಫ್ ಬೇಕಂದರ ಕೇಳ್ರಿ ನನಗ, ಕಡಾ ಕೊಡ್ತೇನಿ.