ಲೇ…ಕಾರ ಇದ್ದಷ್ಟ ಕಾಲ ಚಾಚ ಮಗನ.

ಜೀವನದಾಗ ಯಾವದ ಭಾಡಗಿಗೆ ಸಿಗ್ತದ ಅದನ್ನ ಎಂದೂ ಸ್ವಂತದ್ದ ಮಾಡ್ಕೋಬಾರದು ಅನ್ನೋದ ನಂದ ಒಂದ ಕಾಲದಾಗ principle of life ಇತ್ತ. ಹಿಂಗಾಗಿ ನಾ ಸೈಟ ತೊಗೊಂಡಿದ್ದರೂ ಮನಿ ಕಟ್ಟಲಿಕ್ಕೆ ಹೋಗಿದ್ದಿಲ್ಲಾ. ಒಂದು ಸೈಟಿಗೆ ಇದ್ದಷ್ಟ ವ್ಯಾಲ್ಯೂ ಮನಿ ಕಟ್ಟಿದರ ಇರಂಗಿಲ್ಲಾ, ಇನ್ನೊಂದು ಮನಿನೂ ಮನೆಯವರಗತೆ depreciate ಆಗ್ತದ ಆದರ ಖಾಲಿ ಜಗಾ ಕನ್ಯಾದ ಗತೆ ಯಾವಾಗಲೂ appreciate ಆಗಕೋತ ಇರತದ ಅಂತ ನನ್ನ ವಿಚಾರ ಇತ್ತ.
ಅದರಾಗ ’ಈ ದೇಹನ ಭಾಡಗಿ, ಆ ದೇಹದಾಗ ’ನಾನು’ ಅನ್ನೋದ ಭಾಡಗಿಗೆ ಇರೋದ ಅಂದಮ್ಯಾಲೆ ಆ ದೇಹಕ್ಕ ಒಂದ ಸ್ವಂತ ಮನಿ ಕಟಗೊಂಡ ಏನ ಮಾಡೋದ’ಅಂತ ನನ್ನ ಆಧ್ಯಾತ್ಮಿಕ ಚಿಂತನೆ ಬ್ಯಾರೆ ಇತ್ತ. ಆದರ ನಾ ಮಾಡಿದ್ದ ತಪ್ಪ ಏನಪಾ ಅಂದರ ಹುಚ್ಚರಂಗ ಮದ್ವಿ ಆಗಿದ್ದ. ಹಂಗ ನಮ್ಮಲ್ಲೇ ಹೆಂಡ್ತಿ ಭಾಡಗಿಗೆ ಸಿಗಂಗಿಲ್ಲಾ ಒಂದು, ಮತ್ತ ಆವಾಗ ಈ living together ಇನ್ನೂ ಹುಬ್ಬಳ್ಳಿ ಧಾರವಾಡಕ್ಕ ಬಂದಿದ್ದಿಲ್ಲಾ. ಅದರಾಗ ನಾ living together ಅಂದರ ಲಗ್ನ ಆದ ಮ್ಯಾಲೇನೂ ಅವ್ವಾ-ಅಪ್ಪನ್ನ ಜೊತಿಗೆ ಇಟ್ಕೊಳೊದ ಅಂತ ತಿಳ್ಕೊಂಡಿದ್ದೆ. ಇನ್ನ ಸ್ವಂತ ಹೆಂಡ್ತಿ ಬರೋದ ತಡಾ ಸ್ವಂತ ಮಕ್ಕಳ ಆದ್ವು. ಮುಂದ ಬರಬರತ ನನ್ನ priniciple of life ಏನಿತ್ತಲಾ ’ಜೀವನದಾಗ ಯಾವದ ಭಾಡಗಿಗೆ ಸಿಗ್ತದ ಅದನ್ನ ಸ್ವಂತ ಮಾಡ್ಕೋಬಾರದು’ ಅನ್ನೋದ ಕರಗಕೋತ ಹೊಂಟತು.
ಮದ್ವಿ ಆಗಿ ಒಂದ ನಾಲ್ಕೈದ ವರ್ಷಕ್ಕ ಹೆಂಡ್ತಿ ’ರ್ರಿ..ನೀವು ಮನಿ ಕಟ್ಟರಿ..ಎಲ್ಲಾರೂ ಕಟ್ಟಸಲಿಕತ್ತಾರ,…’ಅಂತ ಕಿರಿ ಕಿರಿ ಶುರು ಮಾಡಿದ್ಲು. ಯಾರದರ ಮನಿ ಒಪನಿಂಗ ಕಾರ್ಡ ಬಂದರ ಸಾಕ
’ನಮ್ಮ ಹಣೇಬರಹದಾಗ ಮಂದಿ ಮನಿ ಒಪನಿಂಗಗೆ ಹೋಗಿ ನಿಮ್ಮ ಸುಡಗಾಡ ಪೇಂಟಿಂಗ ಗಿಫ್ಟ ಕೊಡೊದ ಆತ, ನಮಗ ಮಂದಿ ಯಾವಾಗ ಮನಿ ಒಪನಿಂಗದ ಗಿಫ್ಟ ಕೊಡ್ತಾರೋ ಏನೋ’ ಅಂತ ಅವರ ಮನಿ ಒಪನಿಂಗ ಆಗಿ ಸತ್ಯನಾರಾಯಣ ಪೂಜಾ ಮುಗದರು ಇಕಿದ ಕಿಟಿ ಕಿಟಿ ಮುಗಿತಿದ್ದಿಲ್ಲಾ.
’ಏ…ಹೆಲೋ ನಂದ ಸ್ವಂತ ಸೈಟದ. ನಿಮ್ಮಪ್ಪಗ ಒಂದ ಐದ ಲಕ್ಷ ಕೊಡ ಅಂತ ಹೇಳ ನಾನೂ ನಾಳೆ ಮನಿ ಪಾಯಾ ಹಾಕಸ್ತೇನಿ’ ಅಂದರ
’ಹೂಂ….ನಮ್ಮಪ್ಪ ನನ್ನ ನಿಮಗ ಕೊಟ್ಟ ನಿಮ್ಮ ಸಂಸಾರಕ್ಕ ಪಾಯಾ ಹಾಕಿದ್ದಲ್ಲದ ಇನ್ನ ನಿಮ್ಮ ಮನಿಗೂ ಒಂದ ಪಾಯಾ ಹಾಕೋದ ಉಳದದ ನೋಡ್ರಿ’ ಅಂತ ಮಾರಿ ತಿರುವತಿದ್ಲು. ಅಲ್ಲಾ ಲಗ್ನಾ ಮಾಡ್ಕೊಂಡ ನನ್ನ ಜೀವನದ ಪಾಯಾನ ಅಳಗ್ಯಾಡಲಿಕತ್ತಿತ್ತ ಅದನ್ನ ಯಾರಿಗೆ ಹೇಳೊದ?
ಕಡಿಕೂ ಲಗ್ನ ಆಗಿ ವನವಾಸ, ಅಜ್ಞಾತವಾಸ ಅಂದರ ಹದಿನಾಲ್ಕ ವರ್ಷ ಮುಗಿಯೋದ ತಡಾ ಸ್ವಂತ ಮನಿಗೆ ಗುದ್ಲಿ ಪೂಜಾ ಮಾಡಿಸೇ ಬಿಟ್ಲು. ಹಿಂಗಾಗಿ ನಂದೂ ಒಂದ ಜೀವನದಾಗ ಸ್ವಂತ ಮನಿ ಆತ ಅನ್ನರಿ.
ಮನಿ ಆಗಿ ಇನ್ನೇನ honeymoon period ಅಂದರ ಬ್ಯಾಂಕಿನವರ ಕೊಟ್ಟ moratorium ಪಿರಿಯಡ್ ಮುಗಿತೋ ಇಲ್ಲೋ ಅನ್ನೋದರಾಗ ’ರ್ರೀ…ನಾವು ಒಂದ ಕಾರ ತೊಗೊಳೋಣ್ರಿ’ ಅಂತ ಶುರು ಮಾಡಿದ್ಲು.
ಆವಾಗ ನಂದ ಕಾರಿನ ಬಗ್ಗೆನೂ ಅದ ಫಿಲಾಸಫಿ ಇತ್ತ.
’ಏ, ಐದಾರ ಲಕ್ಷ ಖರ್ಚ ಮಾಡಿ ಯಾರ ಕಾರ ತೊಗೊತಾರಲೇ….ಮುಂದ ಕಂತ ಕಟ್ಟೋರ ಯಾರ, ಪೆಟ್ರೋಲ ಹಾಕೋರ ಯಾರ, ನಮ್ಮ ಮಾವಂದ ಏನ ಪೇಟ್ರೋಲ ಬಂಕ್ ಅದ?….ಒಂದ ಫೋನ ಮಾಡಿದರ ಓಲಾ ಬಂದ ನಿಲ್ತಾವ’ ಅಂತ ನಾ ಅನ್ನೋದ…ಅಕಿ ನೋಡಿದರ ಅವರ ಕಾರ ತೊಗೊಂಡ್ರು, ಇವರ ಕಾರ ತೊಗೊಂಡ್ರು ಅಂತ ಜೀವಾ ತಿಂದ ತಿನ್ನೋಕಿ. ಅಲ್ಲಾ ಹಂಗ ಖರೇ ಅಂದರ ನಂಗ ಕಾರ ತೊಗೊಳೊ ಕ್ಯಾಪ್ಯಾಸಿಟಿನ ಇರಲಿಲ್ಲಾ. ಹಿಂಗಾಗಿ ಯಾಕ ಸ್ವಂತ ಕಾರ, ಭಾಡಗಿ ಟ್ಯಾಕ್ಸಿ ಸಿಗಬೇಕಾರ ಅಂತ ದೊಡ್ಡ ಫಿಲಾಸಫಿ ಹೇಳ್ತಿದ್ದೆ ಅನ್ನರಿ.
ಅದರಾಗ ನನ್ನ ಹೆಂಡ್ತಿ ಮಂದಿ ಕಾರ ತೊಗೊಂಡಿದ್ದ ಹೇಳಿದಾಗೊಮ್ಮೆ
’ಅವರ ಮಾವ ಅವಂಗ ಕಾರ ತೊಗೊಳಿಕ್ಕೆ ಮೂರ ಲಕ್ಷ ಕೊಟ್ಟಾನ’
’ಮತ್ತೊಬ್ಬನ ಮಾವಾ ಅನಿವರ್ಸರಿಗೆ ಕಾರ ಗಿಫ್ಟ ಕೊಟ್ಟಾನ’ ಅಂತೇಲ್ಲಾ ನಾ ಅಂದರ ಅಕಿ
’ಹೂಂ…ನಮ್ಮಪ್ಪಂದ ಏನ ಝೂಮ್ ಕಾರ ಸರ್ವೀಸ ಅದ ನೋಡ್ರಿ…ಅಳಿಯಾಗೊಂದ ಕಾರ ಕೊಡ್ಲಿಕ್ಕೆ’ ಅಂತ ನಂಗ ಜೋರ ಮಾಡ್ತಿದ್ಲು. ಅಲ್ಲಾ ಹಂಗ ನಾ ಕಾರ ಏನ ಮೊಮ್ಮಕ್ಕಳಿಗೆ ಮೂರ ಗಾಲಿ ಸೈಕಲ ಸಹಿತ ಬಾಯಿ ಬಿಟ್ಟ ನಮ್ಮ ಮಾವನ ಕೇಳಿದಂವಾ ಅಲ್ಲ. ಅವರಾಗೆ ಪ್ರೀತಿಯಿಂದ ಏನ ಕೊಟ್ಟರೂ ಇಲ್ಲನೂ ಅಂದಿಲ್ಲ ಮತ್ತ. ಅಲ್ಲಾ ಬೇಕಾರ ಕೇಳ್ರಿ ನನ್ನ ಹೆಂಡ್ತಿಗೆ….ಹಂಗ ಅಕಿನೇನ ಕೇಳೊದ ಬಿಡ್ರಿ ಅಕಿನ್ನ ಕೊಟ್ಟಿದ್ದು ಅವರ ಆ ಮಾತ ಬ್ಯಾರೆ.
ಇನ್ನ ಮನ್ಯಾಗ ಕಾರ ತೊಗೊಳೊ ಸುದ್ದಿ ಮಾತಾಡಿದಾಗೊಮ್ಮೆ ನನ್ನ ಮಗಾ ಅಗದಿ ಏನ ಇವತ್ತ ಕಾರ ತೊಗೊತೇವೇನೋ ಅನ್ನೋರಗತೆ
’ಪಪ್ಪಾ….ಕಾರ ಒಂದ ಸ್ವಲ್ಪ ಭೀಸಾಗಿ ದೊಡ್ಡದ ತೊಗೊರಿ..ಕಾಲ ಫ್ರೀ ಆಗಿ ಚಾಚಲಿಕ್ಕೆ ಬರಬೇಕ’ ಅಂತ ದೊಡ್ಡಿಸ್ತನ ಬಡದ ಹೇಳೊಂವಾ, ನಂಗ ಮೊದ್ಲ ತಲಿಕೆಟ್ಟಿರತಿತ್ತ. ಇಲ್ಲೆ ನಾ ನೋಡಿದರ ಪೋಸ್ಟ ಪೇಡ ಓಲಾದಾಗ ಅಡ್ಡಾಡತಿದ್ದೆ, ಈ ಮಗಾ ಕಾರಿನ ಕನಸ ಕಾಣಲಿಕತ್ತಾನಲಾ ಅಂತ ಸಿಟ್ಟ ಬಂದ ಅವರಜ್ಜ ಅಂದರ ನಮ್ಮ ಮಾವ ಮನಿ ಕಟ್ಟಸಲಿಕ್ಕೆ,ಕಾರ ತೊಗೊಳಿಕ್ಕೆ ಹೆಲ್ಪ ಕೇಳಿದಾಗೊಮ್ಮೆ ’ಹಾಸಿಗೆ ಇದ್ದಷ್ಟ ಕಾಲ ಚಾಚ ಬೇಕರಿ ಅಳಿಯಂದರ’ ಅಂತ ಅಂದಿದ್ದ ನೆನಪಾಗಿ ಮಗಗ ’ಲೇ ಮಗನ ಕಾರ ಇದ್ದಷ್ಟ ಕಾಲ ಚಾಚಬೇಕ…’ಅಂತ ಜೋರ ಮಾಡ್ತಿದ್ದೆ.
ಹಂಗ ನಮ್ಮ ಮಾವಾ ’ಹಾಸಗಿ ಇದ್ದಷ್ಟ ಕಾಲ ಚಾಚಬೇಕ’ ಅಂದಾಗ ’ನಿಮ್ಮ ಮಗಳನ ಕಟಗೊಂಡ ಮ್ಯಾಲೆ ಹಾಸಗಿ ಸಣ್ಣದಾಗೇದ’ ಅಂದರ
’ನಿಮಗ್ಯಾರ ಲಗ್ನ ಆಗಿ ಹತ್ತ-ಹದಿನೈದ ವರ್ಷ ಆದರು ಇನ್ನೂ ಸಿಂಗಲ್ ಗಾದಿ ಒಳಗ ಮಲ್ಕೊ ಅಂದಾರ, ಬಿ.ಬಾಬು & ಕಂಪನಿ ಒಳಗ ಡಬಲ್ ಗಾದಿ ಹಾಕಸರಿ, ಬೇಕಾರ ರೊಕ್ಕಾ ನಾವ ಕೋಡ್ತೇವಿ’ ಅಂತ ನಂಗ ಜೋರ ಮಾಡಿದ್ದರು. ಅವತ್ತಿನಂದ ಅವರ ಹಾಸಗಿ, ಮನಿ, ಕಾರ ವಿಚಾರ ಎಲ್ಲಾ ಬಿಟ್ಟ ಬಿಟ್ಟಿದ್ದೆ.
ಕಡಿಕೂ ಮೊನ್ನೆ ಈ ಕೋರೊನಾದ ಕಾಟ ಜಾಸ್ತಿ ಆದಮ್ಯಾಲೆ ತಲಿ ಕೆಟ್ಟ living ಹೆಂಡ್ತಿ ಮಾಡ್ಕೋಬೇಕಾರ ತಲಿಗೆಡಸಿಗೊಂಡಿಲ್ಲಾ ಇನ್ನ non- living ಕಾರ ತೊಗೊಬೇಕಾರ ಏನ ತಲಿಗೆಡಸಿಕೊಳ್ಳೊದ ಬಿಡ ಅಂತ ಕಾರ ತೊಗೊಳೊದ ಡಿಸೈಡ ಮಾಡಿದೆ. ಮರದಿವಸನ ಓಲಾದಾಗ ಹೊಂಟಾಗ ಒಂದ ಕಾರ ಒವರ್ ಟೇಕ್ ಮಾಡ್ತು, ಆ ಕಾರ ಯಾವದು ಅಂತ ಡ್ರೈವರಗ ಕೇಳಿದೆ. ಅಂವಾ ‘Maruti Ertiga zxi+ sir… ಅಗದಿ ಗಂಡ ಕಾರರಿ….’ ಅಂದಾ, ಗಂಡ ಕಾರಲಾ….ಹೆಣ್ಣ ಅಂತೂ ಅಲ್ಲಲಾ…ಹಂಗರ ಖರ್ಚ ಕಡಮಿ ತೊಗೊ ಅಂತ ಹೆಂಡ್ತಿ ಮಕ್ಕಳನ ಒಂದ ಮಾತೂ ಕೇಳಲಾರದ ಬುಕ್ ಮಾಡಿ ಬಿಟ್ಟೆ.
ಇವತ್ತ ಕಾರ ಪಾಸಿಂಗ್ ಆಗಿ ನಂಬರ ಪ್ಲೇಟ ಬಂತ.
ನನ್ನ ಹೆಂಡ್ತಿಗೆ ಕಾಡಸಲಿಕ್ಕೆ
’If your father is poor, it is your fate. but if your father-in-law is poor, it is your fault ಅಂತಾರಲಾ ಹಂಗ ಆಗೇದ ನನ್ನ ಹಣೇಬರಹ’ ಅಂತ ಅಂದರ ಅಕಿ ಒಂದ ಹೊಸ ಡೈಲಾಗ ಕಂಡ ಹಿಡದ….
’if your son is poor, it is default. but if your son-in-law is also poor then it is your fault ಅಂತಾರಲಾ ಹಂಗ ನಮ್ಮಪ್ಪನ ಹಣೇಬರಹ ಆಗೇದ’ ಅಂದ್ಲು.
ಮುಂದ?..ಮುಂದೇನ…ನಾ ಬಾಯಿಮುಚಗೊಂಡ ನಮ್ಮ ಮಾವ ಕೊಟ್ಟಿದ್ದ ಒಂದ ಹುಡಗಿನ್ನ, ಸ್ವಂತ ದುಡದ ಕಟ್ಟಿಸಿದ್ದ ಮನಿ, ಸಾಲಾ ಮಾಡಿ ತೊಗೊಂಡಿದ್ದ ಕಾರ ಇವನ್ನೇಲ್ಲಾ ಸರ್ವಿಸಿಂಗ, ಮೆಂಟೇನೆನ್ಸ ಮಾಡ್ಕೋತ ಹೊಗೋದ ನನ್ನ ಹಣೇಬರಹ ಅಂತ ಸುಮ್ಮನಾಗೇನಿ.
ಆದರು ಏನ ಅನ್ನರಿ ಅಕಿ ಕಾಲ್ಗುಣ ಛಲೋ ಇತ್ತ ಹಿಂಗಾಗಿ ಎರಡ ಮಕ್ಕಳ ಆದ್ವು, ಅಲ್ಲ ಅವು ಅಕಿಗೂ ಆದ್ವು ಬಿಡ್ರಿ, ಒಂದ ಮನಿ ಆತು…ಈಗ ಒಂದ ಕಾರನೂ ಆತ ಅನ್ನರಿ.
ಇರಲಿ ಸಂಸಾರದಾಗ ’ಹಾಸಗಿ ಇದ್ದಷ್ಟ ಕಾಲ ಚಾಚಬೇಕು’ ಅಂತನ ನಾ ಬದಕೊತ ಬಂದೊಂವಾ…ಇನ್ನ ಕಾಲ ಅಂತು ಸಣ್ಣವ ಮಾಡಲಿಕ್ಕೆ ಬರಂಗಿಲ್ಲಾ ಹಿಂಗಾಗಿ ಹಾಸಗಿನ ತ್ಯಾಪಿ ಹಚ್ಚಿ ಅಂದರ ಸಾಲಾ-ಸೂಲಾ ಮಾಡಿ ದೊಡ್ಡದ ಮಾಡ್ಕೋತ ಹೋಗೊದ ಜೀವನರಿಪಾ…ಹೌದಲ್ಲ ಮತ್ತ?
ಅನ್ನಂಗ ಇನ್ನೊಂದ ಹೇಳೊದ ಮರತೆ ನಿನ್ನೆ ನಂಬರ ಪ್ಲೇಟ್ ಬರಸಲಿಕ್ಕೆ ಹೋದಾಗ ’ರ್ರಿ…ಕಾರ ಮ್ಯಾಲೆ ಯಾರ ಹೆಸರ ಬರಸ್ತೀರಿ?’ ಅಂತ ನನ್ನ ಹೆಂಡ್ತಿ ಕೇಳಿದ್ಲು…ಇನ್ನ ಅದರದೊಂದ ಪ್ರಹಸನ ಇವತ್ತಿಲ್ಲಾ ನಾಳೆ ಬರ್ತದ.

One thought on “ಲೇ…ಕಾರ ಇದ್ದಷ್ಟ ಕಾಲ ಚಾಚ ಮಗನ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ