ಈಗ ಒಂದ ತಿಂಗಳ ಹಿಂದ ಹೆಂಗ ಕಾರ ತೊಗೊಂಡೆ ಅನ್ನೊದರ ಬಗ್ಗೆ ’ ಕಾರ ಇದ್ದಷ್ಟ ಕಾಲ ಚಾಚಬೇಕು’ ಅಂತ ಒಂದ ದೊಡ್ಡ ಪ್ರಹಸನನ ಬರದಿದ್ದೆ. ಕಾರಿಗೆ ನಂಬರ್ ಪ್ಲೇಟ್ ಬರೋದಕ್ಕ ಆ ಪ್ರಹಸನ ನಿಂತಿತ್ತ. ಈಗ ಮುಂದಿನ ಪ್ರಹಸನ ನನ್ನ ಹೆಂಡ್ತಿ ಕಾರಿಗೆ ನಂಬರ ಪ್ಲೇಟ್ ಬರಸಲಿಕ್ಕೆ ಹೋದಾಗ “ರ್ರೀ…ಕಾರಿನ ಮ್ಯಾಲೆ ಯಾರ ಹೆಸರ ಬರಸ್ತೀರಿ?” ಅಂತ ಕೇಳಿದ್ದ.
ಹಂಗ ನಮ್ಮಲ್ಲೆ ಒಟ್ಟ ಕಾರ ತೊಗೊಂಡ್ರ ಸಾಕ, ಅದ ಹೊಸಾದ ಇರಲಿ ಸೆಕೆಂಡ್ ಹ್ಯಾಂಡ್ ಇರಲಿ ಅದರ ಗ್ಲಾಸ್ ತುಂಬ ಕುಲದೇವರದಿಂದ ಹಿಡದ ಕಾರಿಗೆ ಸಾಲಾ ಕೊಟ್ಟವರತನಕ ಎಲ್ಲಾರದೂ ಹೆಸರ ಬರಸೋ ಪದ್ಧತಿ ಅದ. ಅಲ್ಲಾ ಮಿಡಲ್ ಕ್ಲಾಸ್ ಫ್ಯಾಮಿಲಿಯವರಿಗೆ ಕಾರ ತೊಗೊಳೊದ ಅಂದರ ಹುಬ್ಬಳ್ಳಿ-ಧಾರವಾಡ ವರಕ್ಕ ಬೆಂಗಳೂರ ಕನ್ಯಾ ಸಿಕ್ಕಂಗ ಬಿಡ್ರಿ. ಹಿಂಗಾಗಿ ಕಾರ ಬಂತ ಅಂದರ ಸಾಕ ಅದರ ಮ್ಯಾಲೆ ಬೇಕಾದವರದ ಬ್ಯಾಡಾದವರದ ಹೆಸರ ಬರಸೊ ಜನಾ ನಾವ. ಒಂದ ಒಪ್ಪತ್ತ ಬೆಡ್ ರೂಮ್ ಚೌಕಟ್ಟ ಮ್ಯಾಲೆ ’ ಶ್ರೀ ಸಂತಾನ ಗೋಪಾಲಕೃಷ್ಣ ಪ್ರಸನ್ನ್’ ಅಂತ ಬರಸಲಿಲ್ಲಾ ಅಂದರು ಅಡ್ಡಿಯಿಲ್ಲಾ ಕಾರ ಮ್ಯಾಲೆ ಕೊಳಲಿಂದ-ನವಿಲ ಪುಚ್ಛದ್ದ ಸ್ಟಿಕರ್ ಹಚ್ಚತೇವಿ.
ಇನ್ನ ನಾ ಕಾರ ತೊಗೊಂಡ ಮ್ಯಾಲೆ ನಮ್ಮ ಮನಿಕೆ ಯಾಕ ಬಿಡ್ತಾಳ. ಹಿಂಗಾಗಿ ಇಕಿ ’ಯಾರ ಹೆಸರ ಬರಸ್ತಿರಿ?’ ಅಂತ ಗಂಟ ಬಿದ್ದಿದ್ಲು. ಹಂಗ ಗಾಡಿ ತೊಗೊಂಡ ಇಷ್ಟ ದಿವಸ ಆದರೂ ಇನ್ನೂ ಅದರ ಮ್ಯಾಲೆ ಒಂದ ಶ್ರೀ-ಕಾರ ಸಹಿತ ಬರಸಿಲ್ಲಾ, ಹಂತಾದರಾಗ ಮೊನ್ನೆ ಒಮ್ಮಿಕ್ಕಲೇ ’ಅತ್ತಿ ಮಾವಾನ ಆಶೀರ್ವಾದ ಅಂತ ಬರಸರಿ’ ಅಂತ ಅಂದ್ಲು. ನಂಗ ಪಿತ್ತ ನೆತ್ತಿಗೇರತ ’ಯಾಕ ನಾ ದುಡದ ರೊಕ್ಕಾ ಕೊಟ್ಟ ಅಂದರ ಸಾಲಾ ಮಾಡಿ ತೊಗೊಂಡೇನಿ..ನಿಮ್ಮ ಅಪ್ಪಾ-ಅವ್ವಂದ ಹೆಸರ ಯಾಕ….ಅವರೇನ ಹತ್ತ ಲಿಟರ್ ಪೆಟ್ರೋಲ್ ಕುಪನ್ ಸಹಿತ ಕೊಟ್ಟಿಲ್ಲಾ’ ಅಂತ ಅಂದರ.
’ನೀವು ಮತ್ತ ಅದ ಟಾಪಿಕ್ ತಗಿಬ್ಯಾಡ್ರಿ…..ಅವರ ನನ್ನೊಬ್ಬಕಿನ ನಿಮಗ ಕೊಟ್ಟಾರ, ಅದ ರಗಡ ಆಗೇದ.. ಮುಂದ ನನ್ನಿಂದ ಇವೇಲ್ಲಾ ಬಂದಾವ ಮುಗಿತ’ ಅಂತ ಡೈಲಾಗ ಹೋಡದ್ಲು.
ಅಲ್ಲಾ ಆ ಟಾಪಿಕ್ ತಗದೋಕಿ ಅಕಿನ ಮತ್ತ ನಂಗ ಜೋರ ಮಾಡ್ತಾಳ.
ನಾ ಅಕಿಗೆ ಸದ್ಯೇಕ ಕಾರ ಹಿಂಗ ಖಾಲಿ ಖಾಲಿ ಇರವಲ್ತಾಕ, ಯಾರ ಹೆಸರ ಬರಸಬೇಕು ಅನ್ನೋದರ ಬಗ್ಗೆ ಮುಂದ ಚೀಟಿ ಎತ್ತೋಣಂತ, ಈಗ ನೀ ಗಪ್ ಕೂಡ ಅಂತ ಬೈದ ಟಾಪಿಕ್ ಚೇಂಜ್ ಮಾಡಿಸಿದೆ.
ಹಂಗ ನಮ್ಮ ದೋಸ್ತರೊಳಗ ಗಾಡಿ ಮ್ಯಾಲೆ ಭಾರಿ ವಿಚಿತ್ರ ವಿಚಿತ್ರ ಬರಸಿದೋರ ಇದ್ದಾರ.
ನಮ್ಮ ಪಕ್ಕುನ ಕಾರ ಮ್ಯಾಲೆ ’ಹೆಂಡ್ತಿಯ ಆಶೀರ್ವಾದ’ ಅಂತ ಇತ್ತ. ನಾವೇಲ್ಲಾ ಅನ್ಕೊಂಡ್ವಿ, ಅವನ ಹೆಂಡ್ತಿ ದುಡಿತಾಳ ಹಿಂಗಾಗಿ ಅಕಿನ ಕಂತ ತುಂಬತಿರಬೇಕು ಅದಕ್ಕ ಹಂಗ ಬರಿಸ್ಯಾನ ಅಂತ. ಆದರ ಆಮ್ಯಾಲೆ ಗೊತ್ತಾತ ಅದು ಅವರವನ್ನ ರಿಟೈರಮೆಂಟ್ ಫಂಡ್ ಒಳಗ ತೊಗೊಂಡಿದ್ದಂತ, ಹಿಂಗಾಗಿ ಮೊದ್ಲ ’ತಾಯಿಯ ಆಶೀರ್ವಾದ’ ಅಂತ ಬರಸಿದ್ದಾ. ಅದಕ್ಕ ಹೆಂಡ್ತಿ ಆಬ್ಜೇಕ್ಶನ್ ಮಾಡಿದ್ಲು ಅಂತ ’ತಾಯಿ’ ತಗಿಸಿ ’ಹೆಂಡ್ತಿ’ ಅಂತ ಇಷ್ಟ ರೇಡಿಯಮ್ ಕಟ್ ಮಾಡಿಸಿಸಿ ಹಾಕಸಿದ್ದಾ, ಆಶೀರ್ವಾದ ಅಂತ ಬರದಿದ್ದ ತಗಸೋದನ್ನ ಮರತ ಬಿಟ್ಟಿದ್ದನೋ ಇಲ್ಲಾ ಖರೇನ ಹೆಂಡ್ತಿ ಆಶೀರ್ವಾದದೊಳಗ ಸಂಸಾರ ನಡಿಸ್ಗೊತ ಹೊಂಟಾನೊ ಆ ದೇವರಿಗೆ ಗೊತ್ತ. ಅಲ್ಲಾ ಹೆಂಡ್ತಿ ಆಶೀರ್ವಾದ ಅಂತ ಬರಸಿದರು ತಪ್ಪ ಇಲ್ಲ ಬಿಡ್ರಿ, ಲಗ್ನ ಆದಮ್ಯಾಲೆ ಲೈಫ ಹೆಂಡ್ತಿಗೆ ಹೈಪೋಥಿಕೇಟ್ ಮಾಡಿರ್ತೇವಿ ಇನ್ನ ಕಾರ ಮಾಡಲಿಕ್ಕೆ ಏನ ಹೋಗಿದ್ದ ಗಂಟ.
ಇನ್ನ ನಮ್ಮ ದೀಪು ಅಂತು ಅಗದಿ ಕ್ಯಾಪಿಟಲ್ ಲೆಟರ ಲೇ financed by wife ಅಂತ ಹಾಕ್ಕೊಂಡ ಅಡ್ದಾಡತಾನ. ಅಗದಿ ಕ್ಲೀಯರ್ ಮನಷ್ಯಾ, ಮಾವ ಡೌನ ಪೇಮೆಂಟ್ ಮಾಡ್ಯಾನ ಹೆಂಡ್ತಿ ಕಂತ ತುಂಬತಾಳ. ಕ್ಲೀಯರ್. ಅವರ ಕೊಟ್ಟದ ಖರೇ ಅಂದ ಮ್ಯಾಲೆ ನಮ್ಮ ಸ್ವಂತ ರೊಕ್ಕದಲೇ ರೇಡಿಯಮ್ ಸ್ಟಿಕರ್ ಹಾಕಲಿಕ್ಕೆ ಏನ ನಮಗೇನ ಆಗೋದ.
ನಮ್ಮ ರಾಘ್ಯಾ ’ಅಳೆತನದಾಗ ಬಂದಿದ್ದು’ ಅಂತ ಬರಸಿದರ ಸಂಜ್ಯಾ ’ಬಾಣೆಂತನಕ್ಕ ಬಂದಿದ್ದು’ ಅಂತ ಬರಸಿದ್ದಾ. ಸಂಜ್ಯಾಗ ’ಹಂಗ್ಯಾಕಲೇ ನೀ ಏನ ಅಗ್ಗಿಷ್ಟಗಿ ಬದ್ಲಿ ಕಾರನಾಗಿನ ಹೀಟರ ಹಚ್ಚಿ ಹೆಂಡ್ತಿ ಬಾಣಂತನ ಮಾಡಿದ್ದೇನ’ ಅಂತ ಕೇಳಿದರ.
’ಏ ಹಂಗೇನಿಲ್ಲಾ ನಮ್ಮ ಮಾವಗ ಮೂರು ಗಂಡ ಮೊಮ್ಮಕ್ಕಳ ಇದ್ವು, ಇನ್ನ ನಾ ಹೆಣ್ಣ ಹಡದ ಮ್ಯಾಲೆ ಖುಶ್ ಆಗಿ ಮನಿಗೆ ’ಲಕ್ಷ್ಮೀ’ ಬಂದಳು ಅಂತ ಅವರ ಸೆಕೆಂಡ್ ಹ್ಯಾಂಡ್ ಆಲ್ಟೋ ಹತ್ತಿ ಬಣಕ್ಕ ಕರಕೊಂಡ ಬರಲಿಕ್ಕೆ ಹೋದಾಗ ಅತ್ತಲಾಗ ಇಟ್ಗೊ ಅಂತ ಕೊಟ್ಟ ಕಳಸ್ಯಾರ’ ಅದಕ್ಕ ಹಂಗ ಬರಸೇನಿ ಅಂದಾ….ಏನ್ಮಾಡ್ತೀರಿ?
ಇನ್ನೊಂದಿಷ್ಟ ಮಂದಿ ಭಾರಿ ಭಾರಿ ಡೈಲಾಗ ಬರಸಿದ್ದರ.
ಮಂಜ್ಯಾ ’ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನ ಮರಿಬೇಡ’ ಅಂತ ಬರಸಿದ್ದಾ. ಅದಕ್ಕ ಅವನ ಹೆಂಡ್ತಿ ಅಡ್ದ ಹಚ್ಚಿ ’ಏ..ಹೀರೊ ಮುತ್ತ ಕೋಡೊಕಿನ ಮೂತ್ತೂಟ್ ಫೈನಾನ್ಸ ಒಳಗ ಬಂಗಾರ್ ಇಟ್ಟ ಡೌನ ಪೇಮೆಂಟ್ ಮಾಡಿದೋಕಿ..ತುತ್ತು ಕೊಟ್ಟೊಕಿ ಒಂದ ತೊಲಿ ಬಂಗಾರನೂ ಕೊಟ್ಟಿಲ್ಲಾ’ ಅಂತ ಅದನ್ನ ತಗಿಸಿದ್ಲು.
ಇನ್ನ ನಮ್ಮ ಬಸ್ಸುಂದ ಒಂದ ದೊಡ್ಡ ಕಥಿ, ಅಂವಾ ಒಂದ ಸ್ವಲ್ಪ ಶೋಕಿ ಮನಷ್ಯಾ, ವರ್ಷಕ್ಕ ಮಿನಿಮಮ್ ಒಂದ ಕಾರ ಅಂತೂ ಚೇಂಜ್ ಮಾಡೇ ಮಾಡ್ತಿದ್ದಾ. ಹಂಗ ಹೊಸಾದ ತೊಗೊತಿದ್ದಾ ಅಂತ ಏನ ಇಲ್ಲಾ, ಇದ್ದ ಕಾರ ಮಾರೋದು, ಮತ್ತೊಂದ ಸೆಕೆಂಡ್ ಹ್ಯಾಂಡ್ ಕಾರ ತೊಗೊಳೊದ ಅವಂದ ಚಟಾ.
ಇನ್ನ ಅಂವಾ ಸೆಕೆಂಡ್ ಹ್ಯಾಂಡ್ ಕಾರ ತೊಗೊತಿದ್ದಾ ಅಂದ ಮ್ಯಾಲೆ ಒಂದ ಕಾರ ಮ್ಯಾಲೆ ‘ ನನ್ನ ಪ್ರೀತಿಯ ಹುಡುಗಿ ಪರಿಮಳಾ’ ಅಂತ ಇದ್ದರ ಮುಂದ ಮತ್ತೊಂದ ಕಾರ ಮ್ಯಾಲೆ ’love u sunita’ ಅಂತ ಇರ್ತಿತ್ತ. ಅದರಾಗ ಕಾಲೇಜನಾಗ ಇದ್ದಾಗ ಅವನ ಕೃಷ್ಣ ಲೀಲೆಗಳು ಬ್ಯಾರೆ ಭಾಳ ಇರ್ತಿದ್ವು. ನಮ್ಮ ಕ್ಲಾಸಮೇಟ ಒಬ್ಬೋಕಿ ಸುನಿತಾ ಅಂತ ಇದ್ಲು, ಇಂವಾ ಅಕಿಗೆ ತನ್ನ ಕಾರಿಂದ ಫೋಟೊ ತಗದ ’ನೋಡ ನಾ ನಿನ್ನ ಇನ್ನೂ ಮರತಿಲ್ಲಾ, ಇವತ್ತು ಕಾರ ಮ್ಯಾಲೆ love u sunita ಅಂತ ಬರಸೇನಿ’ ಅಂತ ಬರದ ವಾಟ್ಸಪ್ ಕಳಸಿದಾ. ಅಕಿ ತಲಿ ಕೆಟ್ಟ ಯಾವದೋ ಕಾರ ಹಿಂದ ’ಬುರಿ ನಜರವಾಲೇ ತು ನಸಬಂಧಿ ಕರಾಲೇ’ ( ಕೆಟ್ಟ ದೃಷ್ಟಿ ಬಿಡುವವನೇ ನೀ ಆಪರೇಷನ್ ಮಾಡಿಸ್ಗೊ) ಅಂತ ಬರದಿದ್ದ ಫೋಟೊ ಕಳಸಿ ರಿಪ್ಲೈ ಮಾಡಿದ್ಲು. ಏನ್ಮಾಡ್ತೀರಿ?
ಒಂದ ಸರತೆ ಅವನ ಕಾರ ಮ್ಯಾಲೆ ಸ್ವಂತ ಹೆಂಡತಿ -ಮಕ್ಕಳ ಹೆಸರ ಇರತಿದ್ವು, ಮುಂದ ಆರ ತಿಂಗಳಕ್ಕ ಬ್ಯಾರೆವರ ಹೆಂಡ್ತಿ-ಮಕ್ಕಳ ಹೆಸರ ಇರತಿದ್ವು. ನೋಡಿದವರಿಗೆ ಇವಂಗ ಹೆಂಡಂದರ ಎಷ್ಟ, ಮಕ್ಕಳ ಎಷ್ಟ ಅಂತ ಕನಫ್ಯೂಸ ಆಗೋ ಆಟರಿಪಾ.
’ಲೇ…ಬಸ್ಯಾ ಕಾರಿಂದ ಸೀಟ ಕವರ ಚೇಂಜ್ ಮಾಡಸದಿದ್ದರ ಎಷ್ಟೋ ಹೋತ, ಸ್ಟೀಕರರ ಚೇಂಜ್ ಮಾಡಸಲೇ’ ಅಂದರ.
’ಇರವಲ್ತಾಕ ತೊಗೊ…ಇವತ್ತಿಲ್ಲಾ ನಾಳೆ ಇದನ್ನೂ ಮಾರೋದ’ ಅಂತ ನಕ್ಕ ಬಿಡ್ತಿದ್ದಾ.
ಮೊನ್ನೆ ನನ್ನ ಹೆಂಡ್ತಿ ಮತ್ತ ’ರ್ರೀ..ಕಾರ ಭಾಳ.. ಬೋಳ ಬೋಳ ಕಾಣಲಿಕತ್ತದ…ಏನರ ಬರಸರಿ’ ಅಂತ ಗಂಟ ಬಿದ್ಲು. ನಾ ತಲಿಕೆಟ್ಟ ’ಜೈ ಮಾದೇಶ’ ಅಂತ ಬರಸ್ತೇನಿ ಅಂದೆ.
’..ಮಾದೇಶ ಯಾರ್ರಿ..ನನ್ನ ತಮ್ಮನ ಹೆಸರ ಮಾಲತೇಶ..ಮರತರೇನ್?’ ಅಂದ್ಲು.
ನಂಗ ಇನ್ನು ತಲಿಕೆಡ್ತ. ’ನಾ ಖಾಸ ಹೆಂಡ್ತಿ-ಮಕ್ಕಳ ಹೆಸರ ಕಾರ ಮ್ಯಾಲೆ ಬರಸಲಿಕ್ಕೆ ಮೀನಾ-ಮೇಷಾ ಮಾಡ್ಲಿಕತ್ತೇನಿ ಇನ್ನ ನಿನ್ನ ತಮ್ಮನ ಹೆಸರ ಯಾಕ ಬರಸಲಿಲೇ’ ಅಂತ ಜೋರ ಮಾಡಿದರ.
’ಹಂಗರ ಈ ಮಾದೇಶ ಯಾರರಿ?’ ಅಂತ ಕೇಳಿದ್ಲು.
’ಖಾಸ ಮಾವ ಹತ್ತ ಸರತೆ ಕೇಳಿದರು ಕಾರ ತೊಗೊಳಿಕ್ಕೆ ಹೆಲ್ಪ್ ಮಾಡಲಾರದಾಗ ಬರೇ ಒಂದ A4 ಸೈಜ್ ಕೋಟೇಶನ್ ಮತ್ತ ಪಾಸ್-ಪೋರ್ಟ್ ಸೈಜ್ ಫೋಟೊದಾಗ ನನ್ನ ಮಾರಿ ನೋಡಿ ಒಂಬತ್ತ ಲಕ್ಷ ಲೋನ ಕೊಟ್ಟರಲಾ ಆ ಬ್ಯಾಂಕ ಮ್ಯಾನೇಜರನ ಹೆಸರ’ ಅಂದೆ.
ಈ ಸರತೆ ಅಕಿಗೆ ತಲಿ ಕೆಟ್ಟತ ’ನೀವು ಅವರ ಇವರ ಹೆಸರ ಬರಸೊದಿದ್ದರ ಬ್ಯಾಡs ಬ್ಯಾಡ..ಕಾರ ಹಂಗ ಬೋಳ ಬೋಳ ಇರಲಿ’ ಅಂತ ಟಾಪಿಕ್ ಚೆಂಜ್ ಮಾಡಿದ್ಲು.
ಹಂಗ ನನ್ನ ಕಾರಮ್ಯಾಲೆ ಇವತ್ತಿಗೂ ಏನು ಬರಸಿಲ್ಲ ಮತ್ತ. ಇವತ್ತಿಲ್ಲಾ ನಾಳೆ ನಿಮ್ಮಂತವರ ಯಾರರ ಲೋನ ತೊಗೊಂಡಿದ್ದ ಮುಟ್ಟಸಲಿಕ್ಕೆ ಹೆಲ್ಪ್ ಮಾಡಿದರ ಅವರ ಹೆಸರ ಹಾಕಿಸಿದರಾತು ಅಂತ ಸುಮ್ಮನಿದ್ದೇನೆ.
ನೋಡ್ರಿ ನಿಂಬದೇನರ ಹೆಸರ ಬರಸ ಬೇಕಿತ್ತಂದರ ಹೇಳ್ರಿ ಮತ್ತ.
Super..,,👌👌👌👍