ಒಂದ ಕಾಲದಾಗ ನಮ್ಮ ಸಂಸಾರ ಅಂದರ ಪ್ಯಾರಾಗಾನ್ ಫ್ಯಾಮಿಲಿ ಆಗಿತ್ತ. ನಾ ಅಂತು ಹವಾಯಿ ಚಪ್ಪಲ್ ಮ್ಯಾಲೆ ಸಾಲಿ ಕಲ್ತೇನಿ. ಕಾಲೇಜಿಗೆ ಹೊಂಟಾಗ ಬೂಟ ಕೊಡಸ್ತಿ ಏನಪಾ ಅಂತ ನಮ್ಮಪ್ಪಗ ಕೇಳಿದರ
’ಸುಮ್ಮನ ಚಪ್ಪಲ್ ತೊಗೊತಿಯೋ ಇಲ್ಲಾ ಬೂಟ ತೊಗೊಳ್ಯೋ’ ಅಂದ ಬೈದ ಮತ್ತ ಹವಾಯಿ ಚಪ್ಪಲ್ ಕೊಡಸ್ತಿದ್ದಾ. ಆವಾಗಿನ ಪರಿಸ್ಥಿತಿನ ಹಂಗ ಇತ್ತ.
ನಾ ಮುಂದ ಕೆ.ಇ.ಸಿ ಗೆ ಕೆಲಸಕ್ಕ ಹೊಂಟ ಒಂದನೇ ತಿಂಗಳ ಪಗಾರ ಬಂದದ್ದ ತಡಾ ನಮ್ಮಪ್ಪಗ ಹೇಳಲಾರದ ಒಂದ ಜೋಡಿ 170 ರೂಪಾಯಿ ಕೊಟ್ಟ ಚಾವಡಾ ಚಪ್ಪಲ್ ತೊಗೊಂಡ ಬಂದೆ.
ಮನಿಗೆ ಬರೋದಕ್ಕ ನಮ್ಮ ಬಾಬು ಮಾಮಾ ಬಂದಿದ್ದಾ.
’ಏನಲೇ…ಪರ್ಶ್ಯಾ ಏನ ತೊಗೊಂಡ ಬಂದಿ’ ಅಂತ ಕೈಯಾಗಿನ ರಟ್ಟಿನ ಡಬ್ಬಿ ನೋಡಿ ಅಂದಾ.
’ಏ…ಚಪ್ಪಲ್ ಬಿಡ ಮಾಮಾ’ ಅಂತ ಅಂದೆ.
ಎಷ್ಟ ಕೊಟ್ಟಿ ಅಂತ ಕೇಳಿದಾ, ನಾ 170 ಅನ್ನೋದ ತಡಾ
’ಕೃಷ್ಣಮೂರ್ತಿ ನೋಡ ನಿನ್ನ ಮಗಾ ನೂರಾ ಎಪ್ಪತ್ತರದ ಚಪ್ಪಲ ತಂದಾನ.. ನೀ ಇನ್ನೂ ಹವಾಯಿ ಹಾಕ್ಕೊಂಡ ಅಡ್ಡಾಡತಿ’ ಅಂತ ಬೆಂಕಿ ಹಚ್ಚಿದಾ. ಚಪ್ಪಲ್ಲಿಗೆ 170 ಅನ್ನೋದ ತಡಾ ನಮ್ಮವ್ವಾ
’ಅಯ್ಯ…ನೂರಾ ಎಪ್ಪತ್ತ?…ಜೋಡಿಗೋ ಡಜನಗೋ? ಕಾಲಾಗ ಹಾಕೋಳೊವ ಹೌದಲ್ಲ ಮತ್ತ?’ ಅಂತ ರಾಗಾ ತಗದ್ಲು.
ಹಂಗ ಅಕಿ ಅಂದಿದ್ದರಾಗ, ನಮ್ಮ ಮಾಮಾ ಟಾಂಟ್ ಹೊಡದಿದ್ದರಾಗ ತಪ್ಪೇನ ಇದ್ದಿದ್ದಿಲ್ಲಾ. ಆವಾಗ ನಮ್ಮ ಪರಿಸ್ಥಿತಿನ ಹಂಗ ಇತ್ತ, ನಮ್ಮ ಅವ್ವಾ-ಅಪ್ಪಾ ಇಬ್ಬರು ಸೇರಿ ವಾರಕ್ಕ 450 ರೂಪಾಯಿ ಗಳಸ್ತಿದ್ದರ. ಹಂತಾದರಾಗ ನಾ 170ರದ ಚಪ್ಪಲ್ ತೊಗೊಂಡರ ಹೊಟ್ಟ್ಯಾಗ ಹುಳಿ ಪಳದೆ ಹಾಕಿ ಕಲಿಸಿದಂಗ ಆಗಿತ್ತ.
ನಮ್ಮಪ್ಪ ತಲಿಕೆಟ್ಟ ಏನೂ ಮಾತಾಡ್ಲಿಲ್ಲಾ. ಮಗಾ ದೊಡ್ಡ ನೌಕರಿಗೆ ಹತ್ತ್ಯಾನ, ಏನಿಲ್ಲದ ಮಾತ ಕೇಳೊಂವ ಅಲ್ಲಾ, ಇನ್ನೂ ಅಂತ ಕೇಳೊರಿಲ್ಲಾ ಅಂತ ಸುಮ್ಮನಿದ್ದಾ.
ಮುಂದ ಒಂದ ಹದಿನೈದ ದಿವಸಕ್ಕ ನಮ್ಮ ಗುರಪ್ಪಜ್ಜನ ಮನ್ಯಾಗ ಸತ್ಯನಾರಾಯಣ ಪೂಜಾ ಇತ್ತ, ನಮ್ಮ ಅವ್ವಾ- ಅಪ್ಪನ ಬ್ರಾಹ್ಮಣ-ಮುತ್ತೈದಿ. ಅದರಾಗ ಸಂಡೆ ಅದ ನಿನ್ನ ಒಬ್ಬೊವನ ಸಂಬಂಧ ಎಲ್ಲೆ ಕುಕ್ಕರ ಇಡೋದ ಅಂತ ನನ್ನೂ ಎಳ್ಕೊಂಡ ಹೋದರು.
ಪೂಜಾ ಮುಗಿಸ್ಗೊಂಡ ಎಲ್ಲಾರೂ ಬಂದ್ವಿ. ಅವರ ಮನಿ ಮುಂದ ಬಸ್ ಸ್ಟಾಪ್, ನಾ ಬಸ್ ಹತ್ತಿ CBT ಒಳಗ ಇಳದ ನಾಲ್ಕ ಹೆಜ್ಜಿ ಇಡೋದರಾಗ ಯಾಕೊ ಕಾಲಾಗ ಒಂಥರಾ uncomfortable ಆಗಲಿಕತ್ತ. ಬಗ್ಗಿ ನೋಡಿದರ ನನ್ನ ಒಂದ ಚಪ್ಪಲ್ ಚೇಂಜ್ ಆಗಿತ್ತ. ಅದು ಚಾವಡಾ ಪ್ಯಾಟರ್ನ್ ಒಳಗ ಲೋಕಲ್ ಬ್ರ್ಯಾಂಡ್ ಇತ್ತ. ನಾ ಗಡಬಡಿ ಒಳಗ ಹಂಗ ಹಾಕ್ಕೊಂಡ ಬಂದಿದ್ದೆ. ಅದರಾಗ ಆ ಚಪ್ಪಲ್ 8 ನಂಬರದ್ದ ಇತ್ತ, ನಂದ 7 ನಂ.
’ಅವ್ವಾ…ಚಪ್ಪಲ್ ಚೇಂಜ್ ಆಗೇದ ನೀವ ಹೋಗಿರ್ರಿ…ನಾ ವಾಪಸ ಹೋಗಿ ಚಪ್ಪಲ್ ಚೇಂಜ್ ಮಾಡ್ಕೊಂಡ ಬರ್ತೇನಿ’ ಅಂತ ಅನ್ನೋದ ತಡಾ
’ಅದಕ್ಕ ಹೇಳಿದೆ ತುಟ್ಟಿ ಚಪ್ಪಲ್ ಎಲ್ಲೇ ಬೇಕಲ್ಲೇ ಹಾಕ್ಕೊಂಡ ಬರಬ್ಯಾಡಾ ಅಂತ, ನನ್ನ ಮಾತ ಎಲ್ಲೇ ಕೇಳ್ತಿ’ ಅಂತ ಮತ್ತ ಶುರು ಮಾಡಿದ್ಲು. ನಾ ವಾಪಸ್ ಅವರ ಮನಿಗೆ ಹೋದೆ.
ಅಲ್ಲೆ ನೋಡಿದರ ಲಗಭಗ ಎಲ್ಲಾರೂ ಹೋಗೆ ಬಿಟ್ಟಿದ್ದರು, ಇದ್ದೋರ ಒಂದ ಐದ-ಆರ ಮಂದಿ ಚಪ್ಪಲ್ ಒಳಗ ನನ್ನ ಚಾವಡಾ ಇರಲಿಲ್ಲಾ. ಹೋದೊರ ಪೈಕಿ ಯಾರೋ ನನ್ನ ಚಪ್ಪಲ್ ಹಾಕ್ಕೊಂಡ ಹೋಗ್ಯಾರ ಅಂತ ಗ್ಯಾರಂಟೀ ಆತ.
ನಾ ವಾಪಸ ಮನಿಗೆ ಬಂದೆ. ಖರೇನ ಮನಸ್ಸಿಗೆ ಭಾಳ ಹಳಹಳಿ ಆತ. ಸ್ವಂತ ಕಷ್ಟ ಪಟ್ಟ ದುಡದ ತೊಗೊಂಡಿದ್ದ ಚಪ್ಪಲ್ ಬ್ಯಾರೆ. ಸಂಕಟ ಆಗಲಾರದ ಏನ?
ಮನಿಗೆ ಬಂದವನ ನಮ್ಮವ್ವಗ
’ನನ್ನ ಚಪ್ಪಲ್ ನಿನ್ನ ದೃಷ್ಟಿ ಹತ್ತಿನ ಹೋತ’ ಅಂತ ನಾ ಅಂದರ
’ಲೇ ಮಂಗ್ಯಾ…ಚಪ್ಪಲ್ಲಲೇನ ದೃಷ್ಟಿ ತಗತಾರ, ಚಪ್ಪಲ್ಲಿಗೆ ದೃಷ್ಟಿ ಬಿಳ್ತಾವೇನ, ನಿಂಗ್ಯಾರ ದೊಡ್ಡಿಸ್ತನ ಮಾಡಿ ಅಷ್ಟ ತುಟ್ಟಿ ಚಪ್ಪಲ್ ತೊಗೊ ಅಂದಿದ್ದರ’ ಅಂತ ಬೈದ್ಲು. ನಮ್ಮಪ್ಪನೂ ಅಕಿ ಜೊತಿ ಸೋ… ಅಂದಾ.
’ಏ..ಚಪ್ಪಲ್ ಕಳದಿಲ್ಲಾ ಚೇಂಜ್ ಆಗೇದ, ಮ್ಯಾಲೆ ಒಂದs ಚಪ್ಪಲ್ ತೊಗೊಂಡ ಯಾರರ ಏನ ಮಾಡ್ತಾರ’ ಅಂತ ನಾ ಅಂದರ ಅಕಿ ’ಇವತ್ತ ಒಂದ ತೊಗೊಂಡಾರ ನಾಳೆ ಇನ್ನೊಂದ ತೊಗೊತಾರ’ ಅಂದ್ಲು. ಅದರಾಗ ನಾ ಊಟಕ್ಕ ಕೂತಾಗೊಮ್ಮೆ ’ಹಿಂತಾ ತುಟ್ಟಿ ಕಾಲದಾಗ ತುಟ್ಟಿ ಚಪ್ಪಲ್ ಕಳ್ಕೊಂಡ ಬಂದೆಲೋ’ ಅಂತ ತುತ್ತಿಗೊಮ್ಮೆ ಮರಗೋಕಿ. ಅಕಿ ಹಂಗ ಅಂದಾಗೊಮ್ಮೆ ನಂಗ ಒಂದ ತುತ್ತ ಕಡಮಿ ಹೋಗ್ತಿತ್ತ. ತಲಿ ಕೆಟ್ಟ ಸುಮ್ಮನ ಗುರುವಾರಕ್ಕೊಮ್ಮೆ ಮಠಕ್ಕ ಹೋಗಲಿನ ಅಲ್ಲೆ ಯಾರದರ ಏಳ ನಂಬರ ಚಾವಡಾ ಚಪ್ಪಲ್ ಸಿಕ್ಕರ ನೋಡೋಣ ಅಂತ ವಿಚಾರ ಮಾಡಿದೆ. Exchange ಮಾಡ್ಲಿಕ್ಕೆ ಮತ್ತ ಕಳುವ ಮಾಡ್ಲಿಕ್ಕೆ ಅಲ್ಲಾ. ಆದರ ಅದ ಏನ workout ಆಗಲಿಲ್ಲಾ, ಯಾಕಂದರ ಚಾವಡಾ ಹಾಕ್ಕೊಂಡ ಓಡ್ಯಾಡೋರ ಭಾಳ ಕಡಮಿ ಇದ್ದರ. ಚಾವಡಾ ಅಂದರ ಆಗಿನ ಕಾಲದಾಗ ಕಾಸ್ಟ್ಲಿ ಬ್ರ್ಯಾಂಡ್. ನಾ ಹಿಂಗ ಗುಡಿ-ಗುಂಡಾರ ಅಡ್ಡಾಡೋದ ನೋಡಿ ನಮ್ಮವ್ವಾ
’ಆ ಮಾರಾವಾಡಿ ದೋಸ್ತರನ ನೋಡಿ ಚಾವಡಾ ತೊಗೊಂಡಿ..ಸುಮ್ಮನ ಮಾರವಾಡಿ ಗುಡಿಗೆರ ಹೋಗ’ ಅಂದ್ಲು. ಅದ ಖರೇ ಅನಸ್ತ ಆದರ ಜೈನರ ಗುಡಿಗೆ ಚಪ್ಪಲ್ ಹಾಕ್ಕೊಂಡ ಹೋಗಂಗಿಲ್ಲಾ ಅಂತ ಸುಮ್ಮನ ಬಿಟ್ಟೆ.
ಇನ್ನ ಹೆಂಗರ ಮಾಡಿ ನನ್ನ ಏಳ ನಂಬರ ಚಪ್ಪಲ್ ಹುಡಕ ಬೇಕ ತಡಿ ಅಂತ ಪತ್ತೇದಾರಿ ಕೆಲಸಾ ಶುರು ಮಾಡಿದೆ.
ಅವತ್ತ ಒಟ್ಟ ಸತ್ಯನಾರಾಯಣ ಪೂಜಾಕ್ಕ ಬಂದೋರ ಒಂದ ನಲವತ್ತ ಮಂದಿ, ಅದರಾಗ ಚಪ್ಪಲ್ ಸೈಜ್ ಏಳ, ಎಂಟ ಇದ್ದೋರ ಇಪ್ಪತ್ತೈದ ಮಂದಿ, ಅದರಾಗ ಗಂಡಸರ ಹತ್ತೊಂಬತ್ತ ಮಂದಿ.
ಅವರದ ಒಂದ ಲಿಸ್ಟ ರೆಡಿ ಮಾಡಿ ದಿವಸಾ ನಾಲ್ಕ ಗಂಟೆಕ್ಕ ಕೆ.ಇ.ಸಿ ಬಿಟ್ಟ ಮ್ಯಾಲೆ ಒಬ್ಬೊಬ್ಬರ ಮನಿಗೆ ಹೋಗಿ ’ತಪ್ಪಿ ನೀವೇನರ ನನ್ನ ಚಪ್ಪಲ್ ಹಾಕ್ಕೊಂಡ ಬಂದಿರೇನ್’ ಅಂತ ಹುಡಕಲಿಕ್ಕೆ ಶುರು ಮಾಡಿದೆ.
ಮುಂದ ಒಂದ ವಾರಕ್ಕ ಭವಾನಿ ನಗರದಾಗ ನಮ್ಮ ವಾಸಪ್ಪಜ್ಜನ ಮನ್ಯಾಗ ನನ್ನ ಚಪ್ಪಲ್ ಸಿಕ್ಕತ. ಅದರಾಗ ಅಂವಾ ವಯಸ್ಸಾದ ಮನಷ್ಯಾ, ಕಾರನಾಗ ಒಂದ ನಂದು ಒಂದ ತಂದು ಚಪ್ಪಲ್ ಹಾಕ್ಕೊಂಡ ಹೋಗಿದ್ದಾ. ಅವಂಗೂ ಚಪ್ಪಲ್ ಬದಲಾಗಿದ್ದ ಗೊತ್ತಾಗಿತ್ತ ಆದರ ಭಾಳ ತಿರಗ್ಯಾಡೋ ಮನಷ್ಯಾ ಅಲ್ಲಾ, ಹಿಂಗಾಗಿ ತಲಿಗೆಡಸಿಕೊಂಡಿದ್ದಿಲ್ಲಾ.
ನಾ ಕಡಿಕೂ ಚಪ್ಪಲ್ ಸಿಕ್ಕತಲಾ ಅಂತ ಖುಶ್ ಆಗಿ ನನ್ನ 7 ನಂಬರ ಚಪ್ಪಲ್ ತೊಗೊಂಡ 8 ನಂಬರ ಚಪ್ಪಲ್ ವಾಪಸ ತಂದ ಕೊಡ್ತೇನಿ ಅಂತ ಮನಿಗೆ ಬಂದೆ.
ಅಷ್ಟರಾಗ ಅವತ್ತ ಮಧ್ಯಾಹ್ನ ನಮ್ಮವ್ವಾ
’ಹಳೇ ಬಕೇಟ್, ಹರದಿದ್ದ ಚಪ್ಪಲ್..ಮೊಡ್ಕಾ ಡಬ್ಬಿ ಮಾರಾಕ್ಕ ಕೊಡೋ…………’ ಅಂತ ಒದರಕೋತ ಬರೋರಿಗೆ ನನ್ನ unmatched ಚಪ್ಪಲ್ pair ಕೊಟ್ಟ ಎರಡ ಜೋಡಿ ಹವಾಯಿ ಚಪ್ಪಲ್ ತೊಗೊಂಡಿದ್ಲು.
ನಂಗೇನ ಹೇಳ್ಬೇಕ ತಿಳಿಲಿಲ್ಲಾ. ಸಿಟ್ಟರ ಇಷ್ಟ ಬಂದಿತ್ತ ಆದರ ತಡ್ಕೊಂಡೆ.
ಮುಂದ ವಾಸಪ್ಪಜ್ಜಗ ಹಿಂಗ ಆಗೇದ ಅಂತ ಹೇಳಿದರ ಅಂವಾ
’ಆ ಮೊಡ್ಕಾದೊಂವಾ ಬಂದಾಗ ನಮ್ಮ ಏರಿಯಾಕ್ಕೂ ಕಳಸ ಅಂತ’ ಅಂದಾ
ಯಾಕ ಅವನ ಕಡೆ ಚಪ್ಪಲ್ ವಾಪಸ ತೊಗೊಳಿಕ್ಕೆ ಏನ ಅಂತ ನಾ ಕೇಳಿದರ. ಇಲ್ಲಾ ನನ್ನ ಚಪ್ಪಲ್ಲೂ ಕೊಟ್ಟ ನಾನೂ ಹವಾಯಿ ಚಪ್ಪಲ್ ತೊಗೊತೇನಿ ಅಂತ ನಕ್ಕಾ.
ಹಿಂಗ ಜೀವನದಾಗ ಸ್ವಂತ ರೊಕ್ಕದಲೇ ದುಡದ ತೊಗೊಂಡ ತುಟ್ಟಿ ಚಾವಡಾ ಚಪ್ಪಲ್ ಮೋಡ್ಕಾದವರಿಗೆ ಹೋತ.
ಅಲ್ಲಾ ಎಲ್ಲಾ ಬಿಟ್ಟ ಈಗ ಚಪ್ಪಲ್ ವಿಷಯ ಯಾಕ ಬಂತ ಅಂದರ ಮುಂದಿನ ವಾರದಿಂದ ನನ್ನ ಮಗನ ಕಾಲೇಜ ಶುರು ಆಗ್ತದಂತ ಅದಕ್ಕ ಅಂವಾ ’ಇನ್ನರ ಬೂಟ ಕೊಡಸ್ತಿಯೋ ಇಲ್ಲಾ ಚಪ್ಪಲ್ ತೊಗೊಳ್ಯೋ’ ಅಂತ ಕೇಳಿಕತ್ತಾನ.
ಇಲ್ಲೇ ನಮ್ಮಪ್ಪ ನನಗ ’ಚಪ್ಪಲ್ ತೊಗೊತೀಯೊ ಇಲ್ಲಾ ಬೂಟ ತೊಗೊಳ್ಯೋ’ ಅಂದಾಗ ಅಂವಾ ಸಿರಿಯಸ್ಸಾಗಿ ’ಸುಮ್ಮನ ಬಾಯಿ ಮುಚಗೊಂಡ ಚಪ್ಪಲ್ ತೊಗೊ ಇಲ್ಲಾ ಬೂಟ ತೊಗೊಂಡ ಹೋಡೇತಿನ’ ಅಂತ ಅರ್ಥ…
ಇನ್ನ ನನ್ನ ಮಗಾ
’ಬೂಟ ಕೊಡಸ್ತಿಯೋ ಇಲ್ಲಾ ಚಪ್ಪಲ್ ತೊಗೊಳ್ಯೋ’ ಅಂದರ ’ನೀ ಬೂಟ ಕೊಡಸಂಗಿಲ್ಲಾ ಅಂದರ ನಾ ಹೊಸಾ ಚಪ್ಪಲ್ ತೊಗೊತೇನಿ’ ಅಂತ ಅರ್ಥ. ಅದರಾಗ ಇಷ್ಟ ದಿವಸ ಲಾಕಡೌನ, ಕಾಲೇಜ ಇದ್ದಿದ್ದಿಲ್ಲಾ ಹಿಂಗಾಗಿ ಮನ್ಯಾಗಿನ ಚಪ್ಪಲ್ ಮ್ಯಾಲೆ ಜೀವನಾ ನಡಸಿದ್ದಾ.
ಅಲ್ಲಾ ಇವತ್ತ ಮಕ್ಕಳ ’ಬೂಟ ಕೊಡಸ್ತೀಯೋ ಇಲ್ಲಾ ಚಪ್ಪಲ್ ತೊಗೊಳ್ಯೋ’ ಅಂತ ಅಪ್ಪಗ ಸಿರಿಯಸ್ ಆಗಿ ಅನ್ನೊ ಲೇವಲಗೆ ಬಂದಾರ ಆ ಮಾತ ಬ್ಯಾರೆ. ಏನೋ ನನ್ನ ಮಗಾ ಹಿಂಗ ಅಂದಿದ್ದಕ್ಕ ಹಳೇ ಚಾವಡಾ ಚಪ್ಪಲ್ಲಿನ ಕಥಿ ನೆನಪಾಗಿ ಇಷ್ಟ ಬರಿಬೇಕಾತ.
Very nice
Good story. Narration and style are as usual very good.