ಮೊನ್ನೆ ಭವಾನಿನಗರ ರಾಯರ ಮಠದಾಗ ನಮ್ಮ ಮೌಶಿ ಮಗನ ಮದ್ವಿ ಇತ್ತ. ಮನಿ ಅಕ್ಕಿಕಾಳ ಮುಗದ ಮೂರತಾಸ ಆಗಿತ್ತ. ಎಲ್ಲಾರೂ ಯಾವಾಗ ಸಾರ್ವಜನಿಕ ಅಕ್ಕಿಕಾಳ ಮುಗಿತದ, ಎಲಿ ಯಾವಾಗ ಹಾಕ್ತಾರ ಅಂತ ಕಾಯಲಿಕತ್ತಿದ್ವಿ. ಅದರಾಗ ಈ ಸಾರ್ವಜನಿಕ ಅಕ್ಕಿಕಾಳ ಈ ಬ್ಯೂಟಿ ಪಾರ್ಲರನವರ ಬಂದ ಮದುಮಕ್ಕಳನ ಒಂದ ತಾಸಗಟ್ಟಲೇ ರೆಡಿ ಮಾಡಿದ ಮ್ಯಾಲೆ ಆಗೋದ. ಆದರ ಇಲ್ಲೇ ಇನ್ನೂ ಮದ್ವಿ ಸಂಪ್ರದಾಯನ ಮುಗದಿದ್ದಿಲ್ಲಾ.
ಅದರಾಗ ಆ ಹುಡುಗಿ ಮನಿಕಡೆದವರ ’ಸಾರ್ವಜನಿಕ ಅಕ್ಕಿಕಾಳ ಬಿದ್ದಮ್ಯಾಲೆ ನೀ ಎಲಿಗೆ ಉಪ್ಪ-ತುಪ್ಪಾ ಹಾಕಪಾ’ ಅಂತ ಆ ಅಡಗಿ ಭಾದ್ರಿಗೆ ಹೇಳಿ ಬಿಟ್ಟಿದ್ದರಂತ. ಅಂವಾ ಹಿಂಗಾಗಿ ಬರೇ ಎಲಿ ಹಾಕಿ, ಮ್ಯಾಲೆ ಅದ ಹಾರ ಬಾರದಂತ ಒಂದ 300ml ಬಿಸ್ಲೇರಿ ಬಾಟ್ಲಿ ಇಟ್ಟ ಕೈ ಕಟ್ಗೊಂಡ ನಿಂತ ಬಿಟ್ಟಿದ್ದಾ.
ನಾ ತಲಿಕೆಟ್ಟ ಎದಕ್ಕ ಕಾರ್ಯಕ್ರಮ ನಿಂತದ ಅಂತ ಕೇಳಿದರ
’ಇಲ್ಲಾ ಹೆಣ್ಣಿನವರ ಚೊಚ್ಚಲ ಗಂಡಸ ಮಗನ ನಿಯಮ ಮುರಸೋದ ಮರತ ಬಿಟ್ಟಾರ, ಅದನ್ನ ನಿಮ್ಮ ಮೌಶಿ ದೊಡ್ಡ ಇಶ್ಯೂ ಮಾಡ್ಯಾಳ, ನಿಯಮ ಮುರಸಿದ ಮ್ಯಾಲೆ ಸಾರ್ವಜನಿಕ ಅಕ್ಕಿ ಕಾಳ ಅಂತ ಹಟಾ ಹಿಡದಾಳ’ ಅಂತ ಅಂದರು.
ಅಲ್ಲಾ ಜನಾ ಲಗ್ನದಾಗ ಬಂಗಾರದ ಚೈನ್, ಐ-ಫೋನ್ ಹಂತಾವಕ್ಕೇಲ್ಲಾ ಬೀಗರ ಜೊತಿ ಜಗಳಾಡ್ತಾರ ಆದರ ಇಕಿ ಒಂದ ನಿಯಮದ ಸಂಬಂಧ ಹಿಂಗ್ಯಾಕ ಮಾಡ್ಲಿಕತ್ತಾಳ, ಮ್ಯಾಲೆ ಬೀಗರೇನರ ನಮ್ಮ ಕಡೆ ಪ್ರಸ್ಥದ್ದ ಪದ್ದತಿನ ಇಲ್ಲಾ ಅಂದಿದ್ದರ ಇಶ್ಯೂ ಮಾಡಬಹುದಿತ್ತ, ಹಿಂತಾ ಸಣ್ಣ ವಿಷಯಕ್ಕ ಯಾಕ ತಲಿಗೆಡಸ್ಕೊಂಡಿ ಅಂತ ನಾ ಮೌಶಿಗೆ ಕೇಳಿದರ
’ಹೌದ ಮತ್ತ.. ಸೈ ಅನ್ನೊಹಂಗ ಚೊಚ್ಚಲ ಗಂಡಸ ಮಗನ ಹಡದೇನಿ, ಇಷ್ಟ ದಿವಸ ನಿಯಮ ಹಿಡದೇನಿ. ಅದನ್ನ ಮುರಸೋರ ಯಾರ? ಇವರಿಗೆ ಅಷ್ಟು ತಿಳಿಯಂಗಿಲ್ಲೇನ?’ ಅಂತ ನಂಗ ಜೋರ ಮಾಡಿದ್ಲು.
ಅಲ್ಲಾ, ನಾ ಎಷ್ಟ ಬಡ್ಕೊಂಡೆ ’ಇದ್ದಿದ್ದರಾಗ ನಮ್ಮ ಲೇವಲ್ ಕನ್ಯಾ ನೋಡಿ ನಿನ್ನ ಮಗಗ ಕಟ್ಟವಾ ಅಂತ’ ಅಕಿ
’ನನ್ನ ಮಗಾ ಪಿಡಿಯಾಟ್ರಿಸಿಯನ್, ನಮಗ ಗೈನಾಕಲಜಿಸ್ಟ ಕನ್ಯಾನ ಬೇಕ’ ಅಂತ ಹುಡಕಿ ಹುಡಕಿ ಕುಂಡ್ಲಿ ಕೂಡಲಿಲ್ಲಾ ಅಂದರು ಲಿಂಗ-ಗೋತ್ರ ಬಿಟ್ಟದ ಸಾಕ ಅಂತ ಮಾಡರ್ನ್ , ಮೆಟ್ರೋ ಕನ್ಯಾ ಗೊತ್ತ ಮಾಡಿದ್ಲು. ಪಾಪ ಆ ಹುಡುಗಿ ಮನೆತನದಾಗ ಬರೇ ಹೆಣ್ಣ ಸಂತಾನನ, ಇದ್ದವು ಮ್ಯಾಲೆ ಎಲ್ಲಾರೂ ಹೈಲಿ ಎಜುಕೇಟೆಡ್ ಅವರಿಗೆ ಈ ಚೊಚ್ಚಲ ಗಂಡಸ ಮಗನ ನಿಯಮ ಗೊತ್ತ ಇದ್ದಿದ್ದಿಲ್ಲಾ.
ಈಗ ಆಗಿದ್ದ ಆಗಿ ಹೋತ ನಿಯಮ ಮುರಸೋದ ಏನ ದೊಡ್ಡದ ಭಡಾ ಭಡಾ ಮಾಡ್ರಿ ಅಂತ ರವಿ ಆಚಾರ್ಯರ ಗಂಟ ಬಿದ್ದರ ಖರೆ ಆದರ ಬೀಗರಿಗೆ ಅದನ್ನ ಹೆಂಗ ಮುರಸಬೇಕ ಅಂತೂ ಗೊತ್ತ ಇದ್ದಿದ್ದಿಲ್ಲಾ. ಕಡಿಕೆ ಆಚಾರ್ಯರ ಒಂದ ಹಸಿರ ಸಿರಿ, ಒಂದ ಡಜನ್ ಹಸಿರ ಬಳಿ, ಹಾಗಲಕಾಯಿ ಬಳ್ಳಿ, ಒಂದ ಮೂರ ಕಾಲಿಂದ ಮಣಿ ಲಗೂನ ತೊಗೊಂಡ ಬರ್ರಿ ಅಂತ ಹೇಳಿ ಕಳಸಿದರ.
ಅಷ್ಟರಾಗ ಆ ಹುಡುಗಿ ಮಾಮಾ ಒಬ್ಬೊಂವ ಚಾಷ್ಟಿಗೆ
’ಏ ಹಾಗಲಕಾಯಿ ಯಾಕ ಬೇಕ ತೊಗೊರಿ, ನಮ್ಮ ಹುಡುಗಿನ್ನ ನಿಮ್ಮ ಮನಿಗೆ ಕೊಟ್ಟೇವಿ’ ಅಂದ ಬಿಟ್ಟಾ.
ನಮ್ಮ ಮೌಶಿಗೆ ತಲಿ ಗರಮ್ ಆತ
’ಅಂದರೇನಪಾ, ನಿಮ್ಮ ಹುಡುಗಿ ಹಾಗಲಕಾಯಿ ಗತೆ ಕಹಿ ಇದ್ದಾಳೇನ’ ಅಂತ ಅಂದ್ಲು
’ಏ..ಹಂಗ ಅಲ್ಲರಿ ನಮ್ಮ ಹುಡಗಿನ ಎಳೆ ಹಾಗಲಕಾಯಿಗತೆ ನಾಜೂಕ ಇದ್ದಾಳ’ ಅಂತ ಅಂದಾ.
ಒಟ್ಟ ನಮ್ಮ ಮೌಶಿಗೆ ಚೊಚ್ಚಲ ಗಂಡಸ ಮಗನ ನಿಯಮ ಮುರಿಸಿಸಿ ಒಂದ ಡಜನ್ ಹಸಿರ ಬಳಿ, ಒಂದ ಹಸಿರ ರೇಷ್ಮಿ ಸೀರಿ, ಶಾಸ್ತ್ರಕ್ಕ ಬೆಳ್ಳಿ ಹಾಗಲಕಾಯಿ ಕೊಟ್ಟರ ಸಾಕಾಗಿತ್ತ. ಇನ್ನೊಂದ ಮಜಾ ಅಂದರ ಮೂರ ಕಾಲಿನ ಮಣಿ ಸಿಗವಲ್ತ ನಾಲ್ಕ ಕಾಲಿನ ಮಣಿಮ್ಯಾಲೆ ನಡಸರಿ ಅಂತ ಯಾರೋ ಅಂದರ
’ಏ, ಅದ ಹೆಂಗ ನಡಿತದ, ನಂಗ ಮೂರ ಕಾಲಿನ ಮಣಿನ ಬೇಕ’ ಅಂತ ನಮ್ಮ ಮೌಶಿ. ಕಡಿಕೆ ತಲಿಕೆಟ್ಟ ನಾನ ಒಬ್ಬೊವಂಗ ಬಟರ್ ಮಾರ್ಕೇಟನಾಗಿಂದ ಪ್ಲಾಸ್ಟಿಕ ಮೂರ ಕಾಲಿನ ಮಣಿ, ಅದ ಬಚ್ಚಲ ಮನ್ಯಾಗ ಭಾಂಡೆ ತಿಕ್ಕಲಿಕ್ಕೆ, ಅರಬಿ ಒಗಿಲಿಕ್ಕೆ ಇಲ್ಲಾ ಕೂತ ಯರಕೊಳ್ಳಿಕ್ಕೆ ಇಟಗೊಂಡಿರ್ತಾರಲಾ ಹಂತಾದ ತರಿಸಿಸಿ ಕೊಟ್ಟ ಬೀಗರ ಕಡೆ ರೊಕ್ಕಾ ಇಸ್ಗೊಂಡೆ. ಒಟ್ಟ ಹಂಗು-ಹಿಂಗೂ ಮಾಡಿ ನಮ್ಮ ಮೌಶಿ ಚೊಚ್ಚಲ ಗಂಡಸ ಮಗನ ನಿಯಮ ಮುರಿಸಿಸ್ಗೊಂಡ ತನ್ನ ಮಗನ ಆ ಹುಡುಗಿ ಉಡೇದಾಗ ಹಾಕಿದ್ಲ ಅನ್ನರಿ.
ಇನ್ನ ನನಗ ಈ ಚೊಚ್ಚಲ ಗಂಡಸ ಮಗನ ನಿಯಮದ ಬಗ್ಗೆ ಮೊದ್ಲಿಂದ ಗೊತ್ತ. ಅದಕ್ಕ ಕಾರಣ ಅಂದರ ನಮ್ಮಜ್ಜಿಗೆ ಚೊಚ್ಚಲ ಗಂಡಸ, ನಮ್ಮವ್ವಗ ಚೊಚ್ಚಲ ಗಂಡಸ, ಮ್ಯಾಲೆ ನನ್ನ ಹೆಂಡ್ತಿಗೂ ಚೊಚ್ಚಲ ಗಂಡಸ. ಮೂರು ಮಂದಿ ನಿಯಮ ಹಿಡದೋರ ಅದರಾಗ ಇಬ್ಬರ ನಿಯಮ ಮುರಿಸ್ಕೊಂಡಾರ ನನ್ನ ಹೆಂಡ್ತಿದ ಇನ್ನೂ ಪಾಳೆ ಬಂದಿಲ್ಲಾ. ಹಂಗ ನಂಬದ ಚೊಚ್ಚಲ ಗಂಡಸ ಮಕ್ಕಳ ಒಕ್ಕಲ ಅನ್ನರಿ.
ಇನ್ನ ನಮ್ಮ ಒಬ್ಬ ಮಾಮಿನೂ ಚೊಚ್ಚಲ ಗಂಡಸ ಮಗನ ನಿಯಮ ಹಿಡದಿದ್ಲು, ಅಕಿ ಮಗನ ಲಗ್ನ ಇದ್ದಾಗಂತೂ ಬೀಗರ ಹಾಗಲಕಾಯಿ ಬಳ್ಳಿಲೇನ ಮಂಟಪಾ ಡೇಕಾರೇಶನ್ ಮಾಡಿದ್ದರು. ಎಲಿ ಪ್ಲಾಸ್ಟಿಕದ್ದ ಇದ್ದರು ಹಾಗಲಕಾಯಿ ಅಗದಿ ಮೋರ್ ನಿಂದ ಫ್ರೇಶ್ ತಂದ ಕಟ್ಟಿದ್ದರ.
’ಅಲ್ಲಾ, ಹಂಗ ಮೊದ್ಲ ಹೇಳಿದ್ದರ ನಮ್ಮ ಹೊಲದಾಗ ಹಾಗಲಕಾಯಿನ ಬೆಳಿತಿದ್ದರ, ಅಲ್ಲೇ ಹೊಲದಾಗ ಲಗ್ನಾ ಮಾಡ್ತಿದ್ದವಿ ಅಲಾ’ ಅಂತ ಹೆಣ್ಣಿನವರ ಅಂದಿದ್ದರ ಆ ಮಾತ ಬ್ಯಾರೆ.
ಇನ್ನ ನಮ್ಮ ಕಾಕು ಮಾತು ಕತಿ ಒಳಗ ಹತ್ತ ತೊಲಿ ಬಂಗಾರದ ಜೊತಿ ಒಂದ ಬಂಗಾರದ ಹಾಗಲಕಾಯಿ ಅಂತ ಗಟ್ಟಿ ಮಾಡ್ಕೊಂಡ ಅವರ ಮನಿಗೆ ಮಗನ್ನ ಕೊಟ್ಟಿದ್ಲು.
ಇನ್ನ ನಮ್ಮ ಮನ್ಯಾಗ ಅತ್ತಿ ಸೊಸಿ ಇಬ್ಬರೂ ಚೊಚ್ಚಲ ಗಂಡಸ ಮಗನ ಹಡದ ನಿಯಮ ಹಿಡದೋರ, ಇವರದೊಂದ ದೊಡ್ಡ ಕಥಿ.
ನಮ್ಮವ್ವಗ ನಾ ಹುಟ್ಟಿದ ಮ್ಯಾಲೆ ಎರಡನೇದ ಕ್ಯಾರಿಂಗ ಇದ್ದಾಗ ಹಾಗಲಕಾಯಿ ಭಜಿ, ಭಜ್ಜಿ, ಪಳದೇ, ಪಲ್ಯಾ ತಿನ್ನೊಹಂಗ ಆಗ್ತಿತ್ತಂತ ಆದರ ಏನ ಮಾಡ್ಬೇಕ ನಮ್ಮಜ್ಜಿ ಕಾಟಕ್ಕ ಚೊಚ್ಚಲ ಗಂಡಸ ಮಗನ ನಿಯಮ ಹಿಡದಿದ್ಲು. ಅಕಿಗೆ ಯಾವಾಗ ಮಗನ್ನ ಲಗ್ನಾ ಮಾಡಿ ನಿಯಮ ಮುರಿಸ್ಗೊಂಡೇನಿ ಅಂತ ಆಗಿತ್ತ. ಅಲ್ಲಾ ಹಂಗ ಇಕಿ ಹಾಗಲಕಾಯಿ ತಿನ್ನೊ ಸಂಕಟಕ್ಕ ಎಲ್ಲೆ ನನ್ನ ಲಗ್ನಾ ಲಗೂ ಮಾಡಿ ಭಾವಿಗೆ ದೂಕಿದ್ಲೊ ಅಂತ ಒಮ್ಮೆಮ್ಮೆ ಅನಸ್ತದ. ಅಲ್ಲಾ, ಖರೇನ…ಹಂಗ ನಮ್ಮ ಮಂದ್ಯಾಗ 27 ವರ್ಷಕ್ಕ ಮದ್ವಿ ಆದೋಂವಾ ಅದು ಹುಬ್ಬಳ್ಳ್ಯಾಗ ಪ್ರೈವೇಟ್ ಕಂಪನಿ ಒಳಗ ಸಣ್ಣ ನೌಕರಿ ಮಾಡ್ಕೊಂಡ ಮದ್ವಿ ಮಾಡ್ಕೊಂಡೊಂವಾ ನಾ ಒಬ್ಬನ. ಹಂಗ ಅಕಿ ಅಷ್ಟ ಲಗೂ ಲಗ್ನ ಮಾಡಿದ್ದಕ್ಕ ಮುಂದ ಅಕಿ ಸೊಸಿ 23ನೇ ವಯಸ್ಸಿಗೆ ಚೊಚ್ಚಲ ಗಂಡಸ ಮಗನ ನಿಯಮ ಹಿಡದಿದ್ದ ಬಿಡ್ರಿ.
ಇನ್ನ ನನ್ನ ಹೆಂಡ್ತಿಗೆ ಅಂತು ನಮ್ಮವ್ವ ಜಬರದಸ್ತಿ ನಿಯಮಾ ಹಿಡಸಿಸಿ ಊಟಕ್ಕ ಕೂತಾಗೊಮ್ಮೆ
’ಏ..ಕುಡಿ ಬಾಳೆ ಎಲೆ ಮ್ಯಾಲೆ ನೀ ಊಟಾ ಮಾಡಂಗಿಲ್ಲಾ, ಕುಡಿ ಚೂಟಲೇ’ ಅಂತ ಬಾಜೂಕ ಕೂತ ಚೂಟಿ ಚೂಟಿ ಹೇಳೋಕಿ. ಪಾಪ ಅಕಿಗೆ ನೋಡಿದರ ಬಾಳಿ ಎಲಿ ಹೆಂಗ ಹಾಕಬೇಕ ಗೊತ್ತ ಇರಲಿಲ್ಲಾ ಇನ್ನ ಹಂತಾದರಾಗ ಕುಡಿ ಬಾಳಿ, ಮಂಡ ಬಾಳಿ ಅಂದರ ಏನ ಗೊತ್ತ ಆಗಬೇಕ. ಹಂಗ ಅಕಿಗೆ ಈ ಕುಡಿ ಬಾಳೆ, ಹಸಿರ ಸೀರಿ, ಹಸಿರ ಬಳಿ ಅದರದ ಟೇನ್ಶನ್ ಇರಲಿಲ್ಲಾ ಆದರ ಹಾಗಲಕಾಯಿ ಅಕಿಗೆ ಫೇವರೇಟ್. ಪಾಪ ಹಂತಾಕಿಗೆ ನೀ ಹಾಗಲಕಾಯಿ ತಿನ್ನಬಾರದು ಅಂತ ನಮ್ಮವ್ವ ತಾ ಕಾಫಿ ಜೊತಿ ಹಾಗಲಕಾಯಿ ಭಜಿ ಮಾಡಿಸ್ಗೊಂಡ ತಿನ್ಕೋತ ಮುದ್ದಾಂ ಹೇಳೋಕಿ. ಅಲ್ಲಾ ಇವತ್ತಿಲ್ಲಾ ನಾಳೆ ಅಕಿದು ನಿಯಮಾ ಯಾರರ ಹೆಣ್ಣ ಹಡದ ಪುಣ್ಯಾತ್ಮರ ಬಿಡಸಸ್ತಾರ ಆ ಮಾತ ಬ್ಯಾರೆ, ಅದಕ್ಕ ಇನ್ನೂ ಟೈಮ ಆದ.
ಹಂಗ ಇದರ ಉಸಾಬರಿ ನಂಗ್ಯಾಕ ಬಿಡ್ರಿ, ನಂಗೇನ ಈ ನಿಯಮ ಸಂಬಂದ ಇಲ್ಲಾ ಏನಿಲ್ಲಾ ಆದರೂ ಏನೋ ಚೊಚ್ಚಲ ಗಂಡಸ ಮಗನ ಸುದ್ದಿ ಬಂತ, ಇನ್ನ ನಾ ಚೊಚ್ಚಲ ಗಂಡಸ ಮಗಾ ಆಗಿ ಹುಟ್ಟಿ ಇಷ್ಟು ಬರಿಲಿಲ್ಲಾ ಅಂದರ ಹೆಂಗ ಅಂತ ಇಷ್ಟ ಬರಿಬೇಕಾತ.
ನೋಡ್ರಿ ಹಂಗ ಯಾರರ ನನ್ನ ಹೆಂಡ್ತಿದ ಚೊಚ್ಚಲ ಗಂಡಸ ಮಗನ ನಿಯಮ ಮುರಸೋರ ಇದ್ದರ, ಈಗ ಬುಕ್ ಮಾಡ್ಕೋರಿ.
Super