ಒಂದ ತಿಂಗಳ ಹಿಂದ ನಮ್ಮ ಕಾಶಕ್ಕ ಮೌಶಿ ಗಂಡನ ಕಟಗೊಂಡ ಕಾಶಿಗೆ ಹೋಗಿ ಬಂದ್ಲು. ಪಾಪ ಹಂಗ ಅಕಿ ಕಾಶಿಗೆ ಹೋಗಬೇಕ ಅನ್ನಲಿಕತ್ತ ಹತ್ತ ವರ್ಷ ಆಗಿತ್ತ ಖರೆ ಆದರ ಮಗಾ ವಿನ್ಯಾಗ ಅವರವ್ವಾ ಅಪ್ಪನ ಕಾಶಿ ಕಳಸಲಿಕ್ಕೆ ದುಡ್ಡಿದ್ದರು ಟೈಮ ಸಿಕ್ಕಿದ್ದಿಲ್ಲಾ. ಅಂವಾ ಬೆಂಗಳೂರ, ಇವರ ಇಲ್ಲೇ ಹುಬ್ಬಳ್ಳಿ. ಅದರಾಗ ವಯಸ್ಸಾದವರ ಜೊತಿಗೆ ಹೋಗಲಿಕ್ಕೆ ಯಾರು ಸಿಗವಲ್ಲರಾಗಿದ್ದರು. ನಮ್ಮ ಕಾಶಕ್ಕ ಮೌಶಿ ನೋಡಿದರ
’ಎಲ್ಲೆ ನಮ್ಮ ಅತ್ತಿ-ಮಾವನ ಶ್ರಾದ್ಧ ಮಾಡಲಿಕ್ಕೆ ಕಾಶಿಗೆ ಹೋಗಿ ನಂಬದು ಮಾಡ್ಕೊಂಡ ಬರ್ತೇವೋ ಅನಸಲಿಕತ್ತದಪಾ’ ಅಂತ ಅನ್ನೋಕಿ.
ನನಗ ಅಂವಾ ’ನೀ ಕರ್ಕೊಂಡ ಹೋಗ್ತಿ ಏನಲೇ’ ಅಂತ ಕೇಳಿದಾಗ ’ಹೋಗ..ಮಗನ, ನಮ್ಮ ಅವ್ವಾ-ಅಪ್ಪನ ಕರಕೊಂಡ ಹೋಗಿಲ್ಲಾ, ಇನ್ನ ನಿಮ್ಮ ಅವ್ವಾ-ಅಪ್ಪಂದ ಎಲ್ಲೆ ಹಚ್ಚಿ’ ಅಂತ ನಾ ಜಾರಕೊಂಡಿದ್ದೆ.
ಕಡಿಕೂ ಮೊನ್ನೆ ಯಾರೊ ಸಿಕ್ಕರು ಅಂತ ಅವರ ಜೊತಿ ಮಾಡಿ ಇಬ್ಬರನು ಕಳಸಿದಾ.
ಇನ್ನ ನಮ್ಮವ್ವ ಅವರ ತಂಗಿ ಕಾಶಿಗೆ ಹೊಂಟಾಳ ಅಂತ
’ನಮ್ಮ ಹಣೇಬರಹದಾಗ ಅಂತೂ ಕಾಶಿ ವಿಶ್ವೇಶ್ವರನ ನೋಡೊದ ಬರ್ದಿಲ್ವಾ…ಪುಣ್ಯಾದ್ದ ಕೆಲಸಾ ಎಲ್ಲಾದಕ್ಕೂ ಪಡದ ಬರಬೇಕ…’ ಅಂತ ಅಕಿಗೆ ಒಂದ ಐದ ಕೆ.ಜಿ ಅವಲಕ್ಕಿ ಹಚ್ಚಿ ಕೊಟ್ಟ, ಮ್ಯಾಲೆ ಐದನೂರ ರೂಪಾಯಿ ಕೊಟ್ಟ ಬರತ ಒಂದ ನಾಲ್ಕ ಭಾಗಿರಥಿ ಗಿಂಡಿ ತೊಗೊಂಡ ರೊಕ್ಕ ಉಳದರ ಹುಂಡಿಗೆ ಹಾಕಿ ಬಾ ಅಂತ ಕಳಸಿದ್ಲು. ನಾ
’ನಾಲ್ಕ ಭಾಗಿರಥಿ ಗಿಂಡಿ ತೊಗೊಂಡ ಏನ್ಮಾಡ್ತೀ…ಮನ್ಯಾಗ ಐದಾರ ಅವ…ನೀ ಏನ ಅದರಾಗ ಯರಕೋಳೊಕೇನ್’ ಅಂತ ಅಂದರ
’ಏ, ನಿಂಗೇನ ತಲಿ ಗೊತ್ತಾಗತದ…ಯಾರಿಗರ ಬೇಕಾಗ್ತದ ಸುಮ್ಮನ ಕೂಡ’ ಅಂತ ನಂಗ ಜೋರ ಮಾಡಿದ್ಲು. ಹಂಗ ಭಾಗೀರಥಿ ಗಿಂಡಿಗೆ expiry date ಇರಂಗಿಲ್ಲ ಬಿಡ್ರಿ.
ಕಡಿಕೂ ಕಾಶಕ್ಕ ಮೌಶಿ ಸುಸುತ್ರ ಕಾಶಿಗೆ ಹೋಗಿ ಬಂದ್ಲು. ಬರೋ ಪುರಸತ್ತ ಇಲ್ಲದ ಮಗಗ
’ಕಾಶಿ ಸಮಾರಾಧನಿ ಮಾಡಬೇಕು…ಒಂದ ಐವತ್ತ ಮಂದಿಗೆ ಊಟಕ್ಕ ಹಾಕಿ ಕಾಶಿ ಪ್ರಸಾದ ಹಂಚಬೇಕು’ ಅಂತ ಅಂದ್ಲು. ಅಂವಾ ಕಾಶಿಗೆ ಕಳಸಲಿಕ್ಕೆ ಹತ್ತ ಸರತೆ ವಿಚಾರ ಮಾಡಿದಂವಾ, ಈಗ ಇದೇಲ್ಲಿ ಕಾಶಿ ಸಮಾರಾಧನಿ ತಂದಳಲೇ ನಮ್ಮವ್ವ ಅಂತ ಅಂದಾ. ಹಂಗ ಅವಂಗ ಗೊತ್ತಿದ್ದ ವೈಕುಂಠ ಸಮಾರಾಧನಿ ಒಂದ. ಇನ್ನ ಇದೊಂದ ಖರ್ಚ ಬಂತಲಪಾ ಅಂತ ಅವಂಗ ತಲಿ ಕೆಡ್ತ. ಹಿಂಗ ಕಾಶಿಗೆ ಹೋಗಿ ಬಂದ ಮ್ಯಾಲೆ ಸಮಾರಾಧನಿ ಮಾಡ್ತಾರ ಅಂತ ಗೊತ್ತಿದ್ದರ ಅಂವಾ ಅವರನ ಕಾಶಿಗೆ ಕಳಸ್ತಿದ್ದಿಲ್ಲಾ.
’ಏ..ನಾ ಹತ್ತ ಸರತೆ ಎಷ್ಟೇಷ್ಟ ದೇಶಕ್ಕ ಹೋಗಿ ಬಂದೇನಿ…ಆವಾಗ ಸಮಾರಾಧನಿ ಮಾಡಿಲ್ಲಾ, ಇಕಿ ಇಲ್ಲೆ ಇಂಡಿಯಾದಾಗ ಕಾಶಿಗೆ ಹೋಗಿ ಬಂದರ ಮಾಡಬೇಕಿನ’ ಅಂತ ಅಂದಾ.
’ಲೇ…ನೀ ತಿಂಗಳಿಗೊಮ್ಮೆ ಬ್ಯಾಂಕಾಕ್ ಹೋಗಿ ಬಂದಂಗ ಅಲ್ಲ ಮಗನ…ಖರೇ ಕೇಳಿದ್ರ ನೀ ಬ್ಯಾಂಕಾಕ್ ಹೋಗಿ ಬಂದಾಗೊಮ್ಮೆ ಮನ್ಯಾಗ ಸಂಪ್ರೋಕ್ಷಣಿ ಹೋಮಾ ಮಾಡಬೇಕು…ಆದರ ಹೋಗ್ಲಿ ಬಿಡ…..ನಮ್ಮಲ್ಲೇ ಕಾಶಿಗೆ ಹೋಗಿ ಬಂದ ಮ್ಯಾಲೆ ಕಾಶಿ ಸಮಾರಾಧನಿ ಮಾಡೋ ಪದ್ಧತಿ ಇರ್ತದ’ ಅಂತ ನಾ ತಿಳಿಸಿ ಹೇಳಿದೆ.
ಇನ್ನ ಈ ಕಾಶಿ ಸಮಾರಾಧನಿ ಅಂದರ ಕಾಶಿಗೆ ಹೋಗಿ ಬಂದೋರು ಇಲ್ಲೇ ಒಂದ ಐವತ್ತ ಮಂದಿನ್ನ ಸೇರಿಸಿ ಒಂದ ಪುಣ್ಯಾವಚನ ಮಾಡಿ ತಂದ ಪ್ರಸಾದ ಎಲ್ಲಾ ಮಂದಿಗೂ ಹಂಚಿ ಪುಣ್ಯಾ ಕಟಗೋತಾರ. ’ಇನ್ನ ನಮಗಂತೂ ಕಾಶಿಗೆ ಹೋಗಲಿಕ್ಕೆ ಆಗಿಲ್ಲಾ ಅವರರ ಹೋಗಿ ಬಂದಾರ’ ಅಂತ ಅನ್ನೋರು ಅವರಿಗೊಂದ ಆರ ವಾರಿ ಪತ್ಲಾ, ಒಂದ ವಾರಿ ಶಲ್ಯೆ ಕೊಟ್ಟ ನಮಸ್ಕಾರ ಮಾಡಿ ’ನೀವು ಕಾಶಿಗೆ ಹೋಗಿ ಬಂದಿದ್ದ ಪುಣ್ಯಾ ನಮಗೂ ಬರಲಿ’ ಅಂತ ಕಾಲ ಮುಗದ ಹೊಟ್ಟಿ ತುಂಬ ಊಟಾ ಹೊಡದ ಬರ್ತಾರ.
ನಮ್ಮವ್ವಂತೂ ನಾ ಕಾಶಿ ಯಾತ್ರಾ ಮಾಡಸಂಗಿಲ್ಲಾ ಅಂತ ಗ್ಯಾರಂಟೀ ಆಗಿ ಎಲ್ಲೇ ಕಾಶಿ ಸಮಾರಾಧನಿ ಇದ್ದರೂ ಜಂಪರ್ ಪೀಸ್, ಶೆಲ್ಲೆ ತೊಗೊಂಡ ಹೊಂಟ ಬಿಡ್ತಾಳ. ಅಲ್ಲಾ ಹಿಂಗಾಗೆ ಮತ್ತ ನಮ್ಮ ಮನ್ಯಾಗ ಅಷ್ಟ ಭಾಗಿರಥಿ ಗಿಂಡಿ ಆಗಿದ್ದ. ನಮ್ಮಪ್ಪಂತೂ ಇಕಿ ಹಂಗ ಮಾಡೊದಕ್ಕ
’ನೀ ಏಲ್ಲರ ನಳಾ ಬರಲಾರದ ದಿವಸ ಕುಡಿಲಿಕ್ಕೆ ನೀರ ಇಲ್ಲಾ ಅಂತ ಭಾಗೀರಥಿ ಗಿಂಡಿ ಕುಡದ ಗಿಡದಿ, ನಿಂದಿನ್ನೂ ದೂರ ಅದ’ ಅಂತಿದ್ದಾ.
ಇನ್ನ ನಾವು ಕಾಶಿಗೆ ಹೋಗ್ತೇವಿ ಅಂತ ಡಿಸೈಡ ಮಾಡಿದಾಗ ನಮಗ ಸಾಕ್ಷಾತ ಕಾಶಿ ವಿಶ್ವನಾಥನ ಅಲ್ಲಿ ತನಕಾ ಮುಟ್ಟಲಿಕ್ಕೆ ಶಕ್ತಿ ಕೊಟ್ಟಿರ್ತಾನ ಮುಂದ ನಾವ ವಾಪಸ ಬರಬೇಕಾರ ’ ಭಕ್ತರು ನನ್ನ ಸಲುವಾಗಿ ಅಲ್ಲಿಂದ ಬಂದಾರ ಅವರನ ಸುರಕ್ಷಿತವಾಗಿ ಮುಟ್ಟಸಬೇಕು’ ಅಂತ ಕಾಶಿಗೆ ಹೋದವರ ಜೊತಿ ವಾಪಸ ಹುಬ್ಬಳ್ಳಿ ತನಕಾ ಬಂದಿರ್ತಾನಂತ….ಇನ್ನ ಅವನ್ನ ಹಂಗ ಕಳಸಬಾರದು ಅಂತ ಒಂದ ಸಮಾರಾಧನಿ ಮಾಡಿ ಕಳಸ್ತಾರ.
ಅನ್ನಂಗ ಇನ್ನೊಂದ ಹೇಳೋದ ಮರತೆ ನಮ್ಮಲ್ಲೇ ಹಿಂಗ ಕಾಶಿಗೆ ಹೋದಾಗ ನಮಗ ಸೇರೊ ಯಾವದರ ಒಂದ ತಿಂಡಿ ತಿನಸು ಬಿಟ್ಟ ಬರೋ ಪದ್ದತಿ ಇರ್ತದ, ಮುಂದ ಅದನ್ನೆಂದೂ ನಾವ ಜೀವನದಾಗ ತಿನ್ನ ಬಾರದು ಅಂತ ಪ್ರಥಾ.
ಹಿಂಗಾಗಿ ನಮ್ಮ ಕಾಶಕ್ಕ ಮೌಶಿ ಗಟ್ಟಿ ಇದ್ದಾಗ ಕಾಶಿ ಯಾತ್ರಾ ಮಾಡವಾ ಅಂದರ ಹತ್ತ ಸರತೆ ವಿಚಾರ ಮಾಡ್ತಿದ್ಲು, ಯಾಕಂದರ ಅಕಿಗೆ ತಿನ್ನೋದರಾಗ ಏನೂ ಬಿಟ್ಟ ಬರೋ ಮನಸ್ಸ ಇದ್ದಿದ್ದಿಲ್ಲಾ. ಕಡಿಕೆ ಮೊನ್ನೆ ಕಾಶಿಗೆ ಹೋದಾಗ ಏನರ ಬಿಡಬೇಕ ಅಂತ ಭಟ್ಟರ ಹೇಳಿದಾಗ ಅಕಿ ಹಗಲಕಾಯಿ ಬಿಟ್ಟ ಬಂದ್ಲು. ಅಲ್ಲಾ ಮೊದ್ಲ ಚೊಚ್ಚಲ ಗಂಡಸ ಮಗನ ಹಡದಾಳ ಹಗಲಕಾಯಿ ತಿನ್ನೊಹಂಗ ಇಲ್ಲಾ, ಇಕಿ ಅದನ್ನ ಮುದ್ದಾಮ ಬಿಟ್ಟ ಬಂದ್ಲು. ಹಂಗ್ಯಾಕ ಅಂತ ಕೇಳಿದ್ರ..’ನಿಂಗ ಯಾವದ ಭಾಳ ಸೇರತದ ಅದನ್ನ ಬಿಡ ಅಂದರು, ಇನ್ನ ಗಂಡನ ಜೀವನ ಭಾಳ ಸೇರತದ ಅಂತ ಅದನ್ನ ಬಿಡಲಿಕ್ಕೆ ಬರಂಗಿಲ್ಲಾ ಅದಕ್ಕ ಹಗಲಕಾಯಿ ಬಿಟ್ಟ ಬಂದೆ’ ಅಂದ್ಲು.
ಇರಲಿ ವಾಪಸ ಕಾಶಿ ಸಮಾರಾಧನಿಗೆ ಬರ್ರಿ..ಇನ್ನ ನಮ್ಮ ವಿನ್ಯಾಗ ಕಾಶಿ ಸಮಾರಾಧನಿ ಮಾಡಬೇಕು ಅಂದ ಕೂಡ್ಲೆ ತಲಿ ಕೆಟ್ಟ ಹುಬ್ಬಳ್ಳಿಗೆ ಬಂದಾ, ಮನಿ ಸಣ್ಣದು ಅಂತ ಮಠಾ ಹುಡ್ಕ್ಯಾಡಿದಾ, ಅವು ಬುಕ್ ಆಗಿದ್ವು..ಭಡಾ ಭಡಾ ನಮ್ಮ ರವಿನಗರದಾಗಿನ ಕ್ಲಾಸಿಕ್ ಹೊಟೆಲನಾಗಿನ್ ಹಾಲ್ ನಮಗ್ಯಾರಿಗೂ ಕೇಳಲಾರದ ಬುಕ್ ಮಾಡಿ ನಮಗೇಲ್ಲಾ ’ಕ್ಲಾಸಿಕನಾಗ ಕಾಶಿ ಸಮಾರಾಧನಿ ಇಟಗೊಂಡೇನಿ..ಎಲ್ಲಾರೂ ಬರ್ರಿ’ ಅಂದಾ.
ನಾ ಗಾಬರಿ ಆಗಿ ಯಾ ಕ್ಲಾಸಿಕ್ ಅಂದೆ, ಅಲ್ಲೇ ನಮ್ಮ ಮನಿ ಕಡೆ ಅದ ಅಲಾ ಅದು ಅಂದಾ…ಲೇ ಮಗನ ಅದ ಬಾರಲೇ…ಕೆಳಗ ಹಾಲ್ ಮಾಡ್ಯಾರ ಖರೆ ಆದರ ಮ್ಯಾಲೆ ಇರೋದ bar & restaurant ಅಂತ ನಾ ಅಂದೆ.
’ಏ, ನಂಗೇನ ಗೊತ್ತಲೇ…ಹುಬ್ಬಳ್ಳ್ಯಾಗ ಓಣ್ಯಾಗ ನಾಲ್ಕ ನಾಲ್ಕ ಬಾರ್ ಆಗ್ಯಾವ…ಯಾ ಮಠಾನೂ ಸಿಗಲಿಲ್ಲಾ….ಮನಿ ಹತ್ತರದ್ದ ಹಾಲ್ ಅಂತ ಅದನ್ನ ಬುಕ್ ಮಾಡಿದೆ…ಹೋಗ್ಲಿ ಬಿಡ, ನೀ ಮತ್ತ ನಮ್ಮವ್ವಗ ಎಲ್ಲರ ಹೇಳಿ ಗೀಳಿ…ಹೆಂಗಿದ್ದರು ನಂಬದ ಮಧ್ಯಾಹ್ನದ ಹೊತ್ತಿಗೆ ಮುಗದ ಬಿಡ್ತದ’ ಅಂತ ಅಂದ ಫೋನ ಇಟ್ಟಾ.
ಏನ್ಮಾಡ್ತೀರಿ? ಮೊದ್ಲ ಕಾಶಿ ಸಮಾರಾಧನಿ ಅಂದರ ಏನೂ ಅಂತ ಗೊತ್ತಿಲ್ಲಾ, ಮ್ಯಾಲೆ ಎಲ್ಲೇ ಮಾಡಬೇಕು ಅಂತ ಗೊತ್ತಿಲ್ಲಾ. ಇನ್ನ ಕಾಶಿಗೆ ಹೋಗಿ ಇಡಿ ಮನೆತನದಾಗ ಸತ್ತವರದೇಲ್ಲಾ ಶ್ರಾದ್ಧಾ ಮಾಡಿ ವಿಶ್ವೇಶ್ವರನ ದರ್ಶನ ತೊಗೊಂಡ ಬಂದ ಬಾರನಾಗ ಕಾಶಿ ಸಮಾರಾಧನಿ ಮಾಡ್ಸೊ ಮಕ್ಕಳ ಇದ್ದಾರಂದರ ಏನ ಹೇಳ್ಬೇಕ…. ಏನಿಲ್ಲದ ನಾವ ಬಾರಗೆ ಹೋಗಿದ್ದ ಗೊತ್ತಾದರ ಜನಾ ಏನಪಾ ತೀರ್ಥಾ ತೊಗೊಳಿಕ್ಕೆ ಹೋಗಿದ್ದೇನ ಅಂತಾರ ಇನ್ನ ಹಿಂಗ ಕಾಶಿ ಪ್ರಸಾದ, ಭಾಗಿರಥಿ ತೀರ್ಥದ ಗಿಂಡಿ ಇಂವಾ ಕ್ಲಾಸಿಕನಾಗ ಕೊಟ್ಟನ ಅಂದರ ಮುಗದ ಹೋತ.
ಅದು ಹೋಗ್ಲಿ ನಮ್ಮವ್ವಗ ನಾ ವಾರದಾಗ ಮೂರ ದಿವಸ ಕ್ಲಾಸಿಕಗೆ ಹೋಗೊದ ಗೊತ್ತ. ಇನ್ನ ಅಕಿ ಅಲ್ಲೆ ಕಾಶಿ ಸಮಾರಾಧನಿಗೆ ಹೋದ್ಲಂದರ ಭಾಗಿರಥಿ ಗಿಂಡಿ ಹತ್ತ ಸರತೆ ವಾಸನಿ, ಬ್ರ್ಯಾಂಡ್ ನೋಡಿ ಇಸ್ಗೊಂಡ ಬರ್ತಾಳ.
ಆದರೂ ಈಗೀನ ಹುಡಗರಿಗೆ ಯಾ ಕಾರ್ಯಕ್ರಮ ಎಲ್ಲೇ ಮಾಡಬೇಕ ಅನ್ನೋ ಖಬರ ಇಲ್ಲ ಬಿಡ್ರಿ, ಯಾವದ ಮಠದಾಗ ಮಾಡ್ಬೇಕು, ಯಾವದ ಬಾರ್ & ರೆಸ್ಟೋರೆಂಟನಾಗ ಮಾಡಬೇಕು ಅನ್ನೋದ ಗೊತ್ತಿಲ್ಲಾ.
ಏನ ಅನ್ನಲಿಕ್ಕೆ ಬರಂಗಿಲ್ಲಾ…ಕಾಲಾಯ ತಸ್ಮೈ ನಮಃ ಅಂತ ಅನ್ಕೊಂಡ ಸುಮ್ಮನ ತೀರ್ಥದ ಗಿಂಡಿ ತೊಗೊಂಡ ಬರೋದ…..
ನಾ ಹೇಳಿದ್ದ ಭಾಗಿರಥಿ ಗಿಂಡಿ ಮತ್ತ.