ಜಗತ್ತಿನೊಳಗ ಹೆಂಡ್ತಿ ಕೇಳೊ ಕೋಟ್ಯಾಂತರ ಪ್ರಶ್ನೆ ಒಳಗ ಇದರಂಥಾ ಅಗದಿ ಸಿಂಪಲ್ ಮತ್ತ ಕಾಂಪ್ಲಿಕೇಟೆಡ್ ಪ್ರಶ್ನೆ ಮತ್ತೊಂದಿಲ್ಲಾ ಅಂತ ನಂಗ ಅನಸ್ತದ.
ಹಂಗ ಕುಕ್ಕರ್ ಎಷ್ಟ ಸೀಟಿ ಹೊಡಿತ ಅನ್ನೊದನ್ನ ಎಣಸಲಿಕ್ಕೆ ಎರಡನೇತ್ತ ಕಲತದ್ದ ಗಂಡ ಸಾಕ. ಆದರ ಅದನ್ನ ಲಕ್ಷ ಗೊಟ್ಟ ಕೇಳಲಿಕ್ಕೆ B.Sc, MBA ಆಗಿದ್ದರು ಒಮ್ಮೋಮ್ಮೆ ಆಗಂಗಿಲ್ಲಾ. ಕುಕ್ಕರ್ ಒಂದೊ-ಎರಡೋ ಸೀಟಿ ಹೊಡದ ಮ್ಯಾಲೆ ಅದ ಎಷ್ಟನೇ ಸೀಟಿ ಅನ್ನೋದ ನಮಗ ಡೌಟ ಬರತದ. ಯಾಕಂದರ ನಾವು ಕುಕ್ಕರ್ ಇಟ್ಟ TVನರ ನೋಡ್ತಿರ್ತೇನಿ, ಇಲ್ಲಾ ಮೋಬೈಲರ ಹಿಡಕೊಂಡಿರ್ತೇವಿ, ಹರಟಿನರ ಹೊಡಿತಿರ್ತೇವಿ.
ಹಂಗ ’ರ್ರೀ..ಕುಕ್ಕರ್ ಸೀಟಿ ಎಷ್ಟ ಆದ್ವು’ ಅಂತ ನಮ್ಮವ್ವ ನಮ್ಮಪ್ಪಗ ಕೇಳ್ತಿದ್ಲು, ಈಗ ನನ್ನ ಹೆಂಡತಿ ನಂಗ ಕೇಳ್ತಾಳ. ಮುಂದ ನನ್ನ ಸೊಸಿ ನನ್ನ ಮಗಗ ಕೇಳ್ತಾಳ ಆ ಮಾತ ಬ್ಯಾರೆ.
ಅಲ್ಲಾ ಯಾರ ಯಾರ ಮನ್ಯಾಗ ಕುಕ್ಕರ ಇಡ್ತಾರ ಅವರ ಮನ್ಯಾಗ ಕುಕ್ಕರ ಸೀಟಿ ಹೊಡಿಯೋದ ಸಹಜ.
ಹಂಗ ನಮ್ಮವ್ವನಿಂದ ಹಿಡದ ನನ್ನ ಹೆಂಡ್ತಿ ತನಕ ಈ ಕುಕ್ಕರ್ ಸೀಟಿ ಸ್ಟೋರಿ ಕೇಳಿ ಬಿಟ್ಟರ ನಿಮಗ ಅಜೀಬ್ ಅನಸ್ತದ.
ಮೊನ್ನೆ ಸಂಜಿಗೆ ನನ್ನ ಹೆಂಡ್ತಿ ಕುಕ್ಕರ್ ಇಟ್ಟ ಫೋನ್ ಒಳಗ ಹರಟಿ ಹೊಡಿಲಿಕತ್ತಿದ್ಲ. ಮುಂದ ಕುಕ್ಕರ ಒಂದ್ಯಾರಡ ಸೀಟಿ ಹೊಡದಿತ್ತ ಕಾಣ್ತದ ಅತ್ತಲಾಗ ಇಕಿದ ಇನ್ನೂ ಫೋನ ಕಂಟಿನ್ಯೂ ಇತ್ತ, ಸಟಕ್ಕನ್ನ ಇಕಿಗೆ ಕುಕ್ಕರದ್ದ ಮತ್ತೊಂದ ಸೀಟಿ ಹೊಡದ ಕೂಡ್ಲೇನ ಕುಕ್ಕರ್ ಇಟ್ಟಿದ್ದ ನೆನಪಾಗಿ ಫೋನ್ ಹಿಡಕೊಂಡ ನನಗ
’ರ್ರಿ…ಕುಕ್ಕರ ಸೀಟಿ ಎಷ್ಟ ಆದ್ವು’ ಅಂತ ಕೇಳಿದ್ಲು.
’ನಂಗೇನ ಗೊತ್ತ….ಕುಕ್ಕರ್ ನೀ ಇಟ್ಟಿಯೋ ನಾ ಇಟ್ಟೇನೋ?’ ಅಂತ ಅಂದರ
’ಇಲ್ಲೇ ಟಿ.ವಿ ಮುಂದ ಕೂತಿರಿ ಕುಕ್ಕರ್ ಸೀಟಿ ಕೇಳಂಗಿಲ್ಲಾ….?’ ಅಂತ ಜೋರ್ ಮಾಡಿದ್ಲು.
’ಏ..ನೀ ಕುಕ್ಕರ್ ಇಟ್ಟ ಮೋಬೈಲನಾಗ ಹರಟಿ ಹೋಡ್ಕೊತ ನಿಂತಿ, ನಾ ಏನ ಕುಕ್ಕರ್ ಸೀಟಿ ಎಣಸೋ ಗಂಡಾಳ ಏನ?’ ಅಂತ ಜೋರ ಮಾಡಿದೆ.
ಹಿಂಗ ನಮ್ಮಿಬ್ಬರದ ಸ್ಟಾರ್ಟ ಆಗೋದಕ್ಕ ಅತ್ತಲಾಗ ಫೋನನಾಗ ಇದ್ದ ಮಹರಾಯತಿ ನನ್ನ ಹೆಂಡ್ತಿಗೆ
’ಏ..ನೀವಿಬ್ಬರು ಜಗಳಬ್ಯಾಡ್ರಿ…ಕುಕ್ಕರ್ ಸೀಟಿ ಮೂರ ಆಗೇದ ಇನ್ನೊಂದ ಆದಮ್ಯಾಲೆ ನಾನ ಹೇಳ್ತೇನಿ….ಅನ್ನಂಗ ನೀ ಏನೋ ಕೇಳಲಿಕತ್ತಿದ್ದೇಲ್ಲಾ …..’ ಅಂತ ಮೊಬೈಲನಾಗ ಮಾತ ಕಂಟಿನ್ಯೂ ಮಾಡಿದ್ಲು. ಏನ್ಮಾಡ್ತೀರಿ? ಇಕಿ ಕುಕ್ಕರ ಇಟ್ಟ ಫೋನ ಒಳಗ ಮಾತಾಡಲಿಕತ್ತರ ಅತ್ತಲಾಗ ಇಕಿ ಜೊತಿ ಮಾತಾಡ್ಲಿಕತ್ತೋಕಿ ನಮ್ಮ ಮನಿ ಕುಕ್ಕರ್ ಸೀಟಿ ಮೋಬೈಲನಾಗ ಎಣಸಿದ್ದಳು. ಅಲ್ಲಾ ಹಂಗ ನಮ್ಮಕಿ ಖಬರಗೇಡಿ ಇದ್ದರ ಏನಾತ, ಎದರಗಿನೋಕಿ ಶಾಣ್ಯಾ ಇದ್ದಳ. ಅಲ್ಲಾ ಶಾಣ್ಯಾ ಇರಲಾರದ ಏನ ಬಿಡ್ರಿ, ಇಕಿ ಮಾತಾಡ್ಲಿಕತ್ತಿದ್ದ ನನ್ನ ತಂಗಿ ಜೊತಿ. ಇನ್ನ ನನ್ನ ತಂಗಿ ಅಂದರ ಶಾಣ್ಯಾಕಿನ ಅಂತ ಬಾಯಿ ಬಿಟ್ಟ ಹೇಳೋದ ಏನ ಬ್ಯಾಡ. ಹಂಗ ಅಕಿ ತಮ್ಮ ಮನ್ಯಾಗಿನ ಕುಕ್ಕರಿಗೆ ವೈಸರ್ ಹಾಕೇನೋ ಇಲ್ಲೋ ನೆನಪ ಇರಲಿಲ್ಲಾ ಅಂದರು ಮಂದಿ ಮನಿ ಕುಕ್ಕರ ಸೀಟಿ ಎಣಸ್ತಾಳ ಆ ಮಾತ ಬ್ಯಾರೆ. ಕಡಿಕೆ ನಾಲ್ಕನೇ ಸೀಟಿ ಆಗೋದಕ್ಕ ಅಕಿನ ಫೋನ್ ಒಳಗ
’ಭಾಭಿ ಕುಕ್ಕರ್ ನಾಲ್ಕನೇ ಸೀಟಿ ಹೊಡಿತ’ ಅಂತ ಹೇಳಿದ ಮ್ಯಾಲೆ ನಮ್ಮಕಿ ಗ್ಯಾಸ ಆರಿಸಿದ್ಲು.
ಇದು ಲೇಟೇಸ್ಟ ಸ್ಟೋರಿ ಹಿಂತಾವ ವಾರಕ್ಕ ಮೂರ – ನಾಲ್ಕ ಆಗ್ತಾವ.
ಅದರಾಗ ನಮ್ಮವ್ವ ಕುಕ್ಕರ್ ಇಟ್ಟಾಗಂತು ಮುಗದ ಹೋತ. ಅಕಿ ಕುಕ್ಕರ್ ಇಟ್ಟ ಟಿ. ವಿ. ಒಳಗ ಮಿಥುನ ರಾಶಿ ನೋಡ್ಕೋತ ಕೂತ ಬಿಡೋಕಿ, ಅತ್ತಲಾಗ ಕುಕ್ಕರ ಸೀಟಿ ಹೋಡ್ಕೋತ ಇರತಿತ್ತ. ಇಕಿಗೆ ಟಿ.ವಿ ಒಳಗ ಅಡ್ವರ್ಟೈಸಮೆಂಟ್ ಬಂದಾಗ ಕುಕ್ಕರ್ ಸೀಟಿ ಹೊಡದರ ಇಷ್ಟ ಕುಕ್ಕರ ಕಡೆ ಲಕ್ಷ ಹೋಗೊದ ಆವಾಗ ನನ್ನ ಮಗಳಿಗೆ ಕೇಳೋದ
’ಕುಕ್ಕರ ಸೀಟಿ ಎಷ್ಟ ಆದ್ವು’ ಅಂತ. ಅಕಿ
’ಕುಕ್ಕರ್ ಇಟ್ಟ ನೀ ಟಿ.ವಿ. ಮುಂದ ಕೂಡ…ಸೀಟಿ ಎಷ್ಟ ಆದ್ವು ಅಂತ ನನಗ ಕೇಳವಾ’ ಅಂತ ಅನ್ನೋಕಿ.
ಒಮ್ಮೊಮ್ಮೆ ಅಂತು ಇಕಿದ ಮಿಥುನರಾಶಿ ಮುಗದ ಮುಂದ ನಮ್ಮನೆ ಯುವರಾಣಿ ಒಳಗಿನ ಮೀರಾ ಕುಕ್ಕರ ಇಟ್ಟದ್ದ ಸೀನ್ ಬಂದಾಗ ಇಕಿಗೆ ’ಅಯ್ಯ ದೇವರ ಗ್ಯಾಸ ಮ್ಯಾಲೆ ಕುಕ್ಕರ್ ಇಟ್ಟಿದ್ದೆ’ ಅಂತ ನೆನಪಾಗೋದ. ಅಷ್ಟರಾಗ ಕುಕ್ಕರದ್ದ ಐದ ಸೀಟಿ ಆಗಿ ಅನ್ನ ಅನ್ನೋದ ಗಂಜಿ ಆಗಿರ್ತಿತ್ತ.
ಇನ್ನ ನಮ್ಮಪ್ಪ ಇದ್ದಾಗ ನಮ್ಮವ್ವ
’ರ್ರಿ…ಕುಕ್ಕರ್ ಇಟ್ಟೇನಿ ಒಂದ ಸ್ವಲ್ಪ ಲಕ್ಷ ಇರಲಿ’ ಅಂತ ವಾರ್ನಿಂಗ ಕೊಟ್ಟ ಬಿಟ್ಟಳಂದರ ನಮ್ಮಪ್ಪಗ ಬಿ.ಪಿ ಏರತಿತ್ತ. ಅಂವಾ ಅಂತಿದ್ದಾ ’ಗಂಡಂದರ ರಿಟೈರ್ಡ್ ಆಗೋದ ಹಾಲ ತರಲಿಕ್ಕೆ, ಹಾಲ ಕಾಸಲಿಕ್ಕೆ, ಗಲಬರಸಿದ್ದ ಭಾಂಡೆ ಡಬ್ಬ್ ಹಾಕಲಿಕ್ಕೆ, ಹಿಂಡಿದ್ದ ಅರಬಿ ಒಣಾ ಹಾಕಲಿಕ್ಕೆ, ಓಣಗಿದ್ದ ಅರಬಿ ತಂದ ಮಡಚಿ ಇಡ್ಲಿಕ್ಕೆ, ಕುಕ್ಕರ್ ಸೀಟಿ ಎಣಿಸಿ ಗ್ಯಾಸ ಬಂದ ಮಾಡ್ಲಿಕ್ಕೆ’ ಅಂತ. ಅಗದಿ ಖರೇ ಮಾತ ಬಿಡ್ರಿ.
ಖರೇ ಹೇಳ್ಬೇಕಂದರ ನಮ್ಮಪ್ಪನಷ್ಟ ಕುಕ್ಕರ ಸೀಟಿ ಹೊಡಿಸಿದಂವಾ, ಹಾಲ ಕಾಸಿದವನ ನಾ ನೋಡೆ ಇಲ್ಲ ಸುಳ್ಳ ಯಾಕ ಹೇಳ್ಬೇಕ.
ಅದರಾಗ ನಮ್ಮವ್ವ ಮಲ್ಟಿ ಟಾಸ್ಕ ಹೆಣ್ಣ ಮಗಳ, ಒಂದ ಕಾಲದಾಗ ಸ್ಟೋವ್ ಮ್ಯಾಲೆ ಕುಕ್ಕರ ಇಟ್ಟರ ಇದ್ಲಿ ಒಲಿ ಮ್ಯಾಲೆ ಮುಸರಿ ಆಗಬಾರದ ಅಂತ ಹಾಲ ಇಡೋಕಿ, ಒಂದ ಕಡೆ ಕಾಯಿಪಲ್ಯೆ ಸೋಸೊಕಿ ಮತ್ತೊಂದ ಕಡೆ ನಮಗ ಹೋಮ್ ವರ್ಕ ಮಾಡ್ಸೋಕಿ. ಅಗದಿ ಈಗ ಒಂಥರಾ ನನ್ನ ಹೆಂಡತಿ ಒಂದ ಮೋಬೈಲನಾಗ ಯು-ಟ್ಯೂಬ್ ನಾಗ ಬೆಲ್ಲ-ಹುಣಸಿನ ಸಾರ ಹೆಂಗ ಮಾಡಬೇಕ ಅಂತ ನೋಡಿ ಮತ್ತೊಂದ ಮೋಬೈಲನಾಗ ಮತ್ತೊಬ್ಬರಿಗೆ ವಾಟ್ಸಪನಾಗ ಕಳಿಸಿ ಮತ್ತ ಅದನ್ನ ಫೇಸಬುಕ್ಕಿನಾಗ ಅಪಲೋಡ್ ಮಾಡಿ ನೋಟಿಫಿಕೇಶನ್ ಹೆಂಗ ಮೇಂಟೆನ್ ಮಾಡ್ತಾಳ ಹಂಗ.
ಇನ್ನ ನಮ್ಮವ್ವ, ನಮ್ಮಪ್ಪಗ ’ಅಲ್ಲಾ ಪಾಪ ಅವರಿಗರ ರಿಟೈರ್ಡ ಆದ ಮ್ಯಾಲೆ ಹೆಂಗ ಹೊತ್ತ ಹೋಗಬೇಕ’ ಅಂತ
’ಹಾಲ ಕಡೆ ಲಕ್ಷ ಇರಲಿ, ಮೂರ ಸೀಟಿ ಆದಮ್ಯಾಲೆ ಕುಕ್ಕರ್ ಆರಸರಿ, ಮಳಿ ಬರೋ ಹಂಗ ಆದರ ಅರಬಿ ಒಳಗ ತರ್ರಿ’ ಅಂತ ಸಣ್ಣ-ಪುಟ್ಟ ದಿವಸಾ ಕೆಲಸಾ ಹೇಳ್ತಿದ್ದಳ ಅನ್ನರಿ. ಅದರಾಗ ಇನ್ನೊಂದ ಮಜಾ ಅಂದರ ನಮ್ಮಪ್ಪನ ಮೂಗ ಭಾರಿ ಚುರುಕ ಇತ್ತ. ಅವಂಗ ನಮ್ಮ ಚಾಳನಾಗ ಯಾರದರ ಮನ್ಯಾಗ ಹಾಲ ಉಕ್ಕಿ ಮಳ್ಳಿ-ಮಳ್ಳಿ ತಳಕ್ಕ ಹತ್ತಿದರ, ಒಗ್ಗರಣ್ಯಾಗ ಬಳ್ಳೊಳ್ಳಿ ಹಾಕಿದರ, ಕಶಾಯಕ್ಕ ಬೋಳಮೆಣಸ ಜಾಸ್ತಿ ಹಾಕಿದರ ಬರೇ ವಾಸನಿ ಮ್ಯಾಲೆ ಹೇಳ್ತಿದ್ದಾ. ಏಷ್ಟೋ ಸರತೆ ’ಯಾರದೋ ಮನ್ಯಾಗ ಹಾಲ ಹೊತ್ತಿದ್ದ ವಾಸನಿ ಬರಲಿಕತ್ತದ’ ಅಂತ ನಮ್ಮಪ್ಪ ಅಂದಾಗ ನಮ್ಮವ್ವಗ ನೆನಪಾಗ್ತಿತ್ತ ಇದ್ಲಿ ಒಲಿ ಮ್ಯಾಲೆ ಹಾಲ ಇಟ್ಟ ಬಂದ ಅಂಗಳದಾಗ ಹರಟಿ ಹೊಡಿಲಿಕತ್ತೇನಿ ಅಂತ. ಒಮ್ಮೊಮ್ಮೆ ಅಂತೂ ಅಂವಾ ಕುಕ್ಕರ ಸೀಟಿ ಹೊಡದಾಗ ಸೀಟಿ ವಾಸನಿ ಮ್ಯಾಲೆ ಕುಕ್ಕರನಾಗ ತಳಕ್ಕ ನೀರ ಕಡಮಿ ಹಾಕಿ, ಮ್ಯಾಲಿನ ಡಬ್ಯಾಗಿನ ಬ್ಯಾಳಿ ಉಕ್ಕೇದ ನೋಡ ಅಂತ ಅಗದಿ ಕರೆಕ್ಟ ಹೇಳ್ತಿದ್ದಾ. ಇರಲಿ ಆವಾಗಿನ ಕಾಲ ಬ್ಯಾರೆ ಇತ್ತ ಈಗಿನ ಕಾಲನ ಬ್ಯಾರೆ. ಆದರ ಇವತ್ತೂ ಮನ್ಯಾಗ ಗಂಡಂದರ ಕುಕ್ಕರ್ ಮೂರ ಸೀಟಿ ಹೊಡದ ಮ್ಯಾಲೆ ಗ್ಯಾಸ ಆರಸೋದ ಏನ ತಪ್ಪಿಲ್ಲಾ ಮತ್ತ ಅದರಾಗ ತಪ್ಪೂ ಏನ ಇಲ್ಲ ಬಿಡ್ರಿ.
ಹಂಗ ಎಲ್ಲಾ ಬಿಟ್ಟ ಇವತ್ತ ಕುಕ್ಕರ್ ಸೀಟಿ ಮ್ಯಾಲೆ ಯಾಕ ಬಂತ ವಿಷಯ ಅಂದರ ಮೊನ್ನೆ ಈ ಸರತೆ ’ಗಿರಮಿಟ್’ ಕ್ಕ ಯಾ ಟಾಪಿಕ ಮ್ಯಾಲೆ ಬರಿಲಿ ಅಂತ ವಿಚಾರ ಮಾಡ್ಕೋತ ಕೂತಿದ್ದೆ, ನನ್ನ ಹೆಂಡ್ತಿ
’ರ್ರಿ…ಕುಕ್ಕರ ಇಟ್ಟಿರ್ತೇನಿ, ನಾಲ್ಕ ಸೀಟಿ ಆದಮ್ಯಾಲೆ ಆರಸರಿ….ನಾ ಇಲ್ಲೇ ಮಠದ ಅಂಟೀ ಮನಿಗೆ ಅರಿಷಣಾ-ಕುಂಕಮಕ್ಕ ಹೋಗಿ ಬರ್ತೇನಿ’ ಅಂತ ಹೋದ್ಲು. ಆವಾಗ ನಂಗ ಸಟಕ್ಕನ್ ಈ ಟಾಪಿಕ್ ಹೊಳದ ಇಷ್ಟ ಪ್ರಹಸನ ಬರದೆ. ಇನ್ನೇನ ಬರಿಯೋದ ಮುಗಿಲಿಕ್ಕೆ ಬಂದಿತ್ತ ನನ್ನ ಹೆಂಡ್ತಿ ವಾಪಸ ಬಂದೊಕಿನ
’ರ್ರಿ…ಕುಕ್ಕರ ಸೀಟಿ ಎಷ್ಟ ಆದ್ವು’ ಅಂತ ಕೇಳಿದ್ವು, ನಾ ಖರೇ ಹೇಳ್ತೇನಿ ಬರೇಯೊದರಾಗ ಕುಕ್ಕರ್ ಸೀಟಿ ಹೊಡದ್ದದ್ದ ಮರತ ಬಿಟ್ಟಿದ್ದೆ. ಆದರ ಅದನ್ನ ಹೆಂಗ ಹೆಂಡ್ತಿಗೆ ಹೇಳಲಿಕ್ಕೆ ಬರ್ತದ. ಹಿಂಗಾಗಿ ಅಕಿ ಕೇಳಿದ ಕೂಡ್ಲೇನ
’ಈಗ ನಾಲ್ಕನೇದ ಆತ ನೋಡ…’ ಅಂತ ಎದ್ದ ಹೋಗಿ ಗ್ಯಾಸ ಆರಿಸಿ ಬಂದೆ.
ನೋಡ್ರಿ ಹಂಗ ಜೀವನದಾಗ ನೀವ ಒಮ್ಮೆರ ಕುಕ್ಕರ ಸೀಟಿ ಹೊಡಸಿ ಗ್ಯಾಸ ಆರಸಿದ್ದರ ನನ್ನ ಆರ್ಟಿಕಲ್ ಓದಿ ಒಂದ ಸೀಟಿ ಹೊಡಿರಿ ಮತ್ತ.
ನಿಮ್ಮ ಲೇಖನಗಳು ಓದಲಿಕ್ಕೆ ಬಾಳಾ ಚಲೋ ಇರ್ತಾವ್ರಿ .