ಮೊನ್ನೆ ಮುಂಜಾನೆ ಎದ್ದೋಕಿನ
’ಅನ್ನಂಗ…ಈ ಸರತೆ ದೀಪಾವಳಿ ಫರಾಳ ಏನ ಮಾಡ್ಲಿರಿ?’ ಅಂತ ಕೇಳಿದ್ಲು.
ನಾ ನಿದ್ದಿ ಗಣ್ಣಾಗ
’ಯಾಕ ಹೋದ ವರ್ಷದ ಏನ ಉಳದಿಲ್ಲೇನ?’ ಅಂದ ಬಿಟ್ಟೆ
’ರ್ರಿ …ನಾ ದೀಪಾವಳಿ ಫರಾಳದ ಬಗ್ಗೆ ಕೇಳಲಿಕತ್ತೇನಿ, ನಿಮ್ಮ ನಾಷ್ಟಾದ ಬಗ್ಗೆ ಅಲ್ಲಾ, ನಿನ್ನೆ ಉಳದಿದ್ದ ಅನ್ನಕ್ಕ ಇವತ್ತಿನ ಒಗ್ಗರಣಿ ಹಾಕಿ ಕಲಸನ್ನಾ ಮಾಡಿ ಕೊಡ್ಲಿಕ್ಕೆ’ ಅಂದ್ಲು
ಹಂಗ ಅಕಿ ಹೇಳೋದ ಖರೆ ಇತ್ತ, ದಿವಸಾ ಮುಂಜಾನೆ ಅತ್ತಿ- ಸೊಸಿ ನಾ ಏಳೋ ಪುರಸತ್ತ ಇಲ್ಲದ ಫಾರ್ಮಾಲಿಟಿಗೆ
’ಇವತ್ತ ನಾಷ್ಟಾ ಏನ ಮಾಡ್ಬೇಕಪಾ’ ಅಂತ ಕೇಳೋರ ಕಡಿಕೆ ಮತ್ತು
’ನಿನ್ನಿದ ಅದ ಉಳದದ, ಇದ ಉಳದದ’ ಅಂತ ಅದನ್ನ ಮೊಡಿಫೈ ಮಾಡಿ ನಂಗ ತಿನಿಸಿ ಕಳ್ಸೋರ. ಇನ್ನ ಹಂತಾವರ ಡೈರೆಕ್ಟ ದೀಪಾವಳಿ ಫರಾಳಕ್ಕ ಕೈಹಚ್ಚಿದ್ದರು ಅದು ನನ್ನ ಕೇಳಿ ಮಾಡ್ಲಿಕತ್ತಾರಲಾ ಅಂತ ಆಶ್ಚರ್ಯ ಆಗಿ ’ಹೋದ ಸಲಾದ್ದ ಏನ ಉಳದಿಲ್ಲೇನ’ ಅಂತ ಕೇಳಿದ್ದೆ.
ಕಡಿಕೆ ’ನೀ ಏನ ಎಲ್ಲಾ ನನ್ನ ಕೇಳಿ ಮಾಡೋಕಿ? ಹೋದ ವರ್ಷ ಏನ್ಮಾಡಿದ್ದಿ ಅದನ್ನ ಮಾಡ” ಅಂತ ನಾ ಜೋರ್ ಮಾಡಿದರ
’ಹೋದ ವರ್ಷ ಎಲ್ಲೇ ಮಾಡಿತ್ತ…..ನೀವ ಕೊವಿಡ್, ತುಟ್ಟಿಕಾಲ, ಪಗಾರ ಕಟ್ ಮಾಡ್ಯಾರ, ಬೋನಸ್ ಕೊಟ್ಟಿಲ್ಲಾ ಅಂತ ಬ್ಯಾಡ ಅಂದರಿ, ಆಮ್ಯಾಲೆ ಮಂದಿ ಕೊಟ್ಟದ್ದ ಸಂಕಟಕ್ಕ ಭಾದ್ರಿ ಕಡೆ ರೆಡಿ ಮೇಡ ತೊಗೊಂಡ ಊರ ಮಂದಿಗೇಲ್ಲಾ ಹಂಚಲಿಲ್ಲೇನ’ ಅಂತ ಅಂದ್ಲು.
ಅಕಿ ಹೇಳಿದ್ದು ಖರೇನ, ಕೋರೊನಾ ಬಂದಾಗಿಂದ ಹಬ್ಬದ ರಂಗ ಹೋಗಿತ್ತ. ಅದರಾಗ ಕೋರೊನಾ ಸಂಬಂಧ ಒಂದ ಎರಡ ವರ್ಷದಾಗ ಮೂರ-ನಾಲ್ಕ ಸರತೆ ರವಾ ಊಂಡಿ ತಿನ್ನೊ ಪ್ರಸಂಗ ಬ್ಯಾರೆ ಬಂದಿತ್ತ, ಹಿಂಗಾಗಿ ದೀಪಾವಳಿ ಫರಾಳ ಮನಿ ಪೂರ್ತೇಕ ಅಂತ ವಿಚಾರ ಮಾಡಿದ್ದೆ. ಆದರ ಮಂದಿ ಫರಾಳ ತಂದ ಕೊಟ್ಟಿದ್ದ ಸಂಕಟಕ್ಕ ಮತ್ತ ಅವರಿಗೆ ರಿಟರ್ನ್ ಕೊಡಲಿಕ್ಕೆ ಅಂತ ಭಾದ್ರಿ ಕಡೆ ರೆಡಿಮೇಡ್ ಫರಾಳ ತರಸಿದ್ದೆ.
ಇನ್ನ ಇಕಿ ಇಷ್ಟ ಪರ್ಟಿಕ್ಯೂಲರ್ ಆಗಿ ಕೇಳಿದ್ದ ಯಾಕಪಾ ಅಂದರ ’ಈ ಸರತೆನೂ ರೆಡಿಮೇಡ್ ತರಸ್ತೀರೊ ಇಲ್ಲಾ ಮನ್ಯಾಗ ಮಾಡ್ಲೋ?’ ಅಂತ clarify ಮಾಡ್ಕೊಳಿಕ್ಕೆ.
ಹಂಗ ತರಸ್ತೇನಿ ಅಂದ ಬಿಟ್ಟರ ಅಕಿಗೂ ಚಿಂತಿ ತಪ್ಪತಿತ್ತ.
ಆದರ ಈ ಸರತೆ ನಮ್ಮವ್ವ
’ಏನ ಆಗಲಿವಾ, ಈ ಸರತೆ ಮನ್ಯಾಗ ಫರಾಳ ಮಾಡೋಣ. ಅವ ಈಡ ಆಗ್ತಾವ ಕೊಂಡದ್ದ ಏನ ಈಡ ಆಗಂಗಿಲ್ಲಾ’ ಅಂತ ಅಂದ್ಲು.
ಸರಿ ಅತ್ತಿ ಏನೇನ ಮಾಡೋದ ಅಂತ ಡಿಸೈಡ ಮಾಡಿದರ ಸೊಸಿ ಅವನ್ನ ಮಾಡಲಿಕ್ಕೆ ಎಷ್ಟ ರೊಕ್ಕ್ ಆಗ್ತದ ಅಂತ ಲೆಕ್ಕಾ ಮಾಡಿ ಒಂದ ಹತ್ತ ಸಾವಿರ ರೂಪಾಯಿ ಬಜೆಟ್ ಹೇಳಿದ್ಲು.
ನಾ ಆ ಬಜೆಟ್ ನೋಡಿ ಇದರಾಗ ಆರತಿಗೆ ಹಾಕೋ ರೊಕ್ಕನೂ ಬಂತ ಏನ ಅಂತ ಕೇಳಿದರ
’ಅದ ಹೆಂಗರಿ, ಅದ ಸಪರೇಟ್’ ಅಂದ್ಲು. ಈ ದೀಪಾವಳಿಗೆ ಮುಂಜಾ ಮುಂಜಾನೆ ಆರತಿ ಮಾಡಿಸ್ಗೊಂಡ ರೊಕ್ಕಾ ಹಾಕೋದ ಏನ ಅದ ಅಲಾ ಅದ ಒಂಥರಾ ಗಂಡಸರಿಗೆ ಹಬ್ಬದ್ದ ದಿವಸ ಮಂಗಳಾರತಿ ಮಾಡಿಸ್ಗೊಂಡಂಗ. ಅದರ ಬಗ್ಗೆ ಮೊತ್ತೊಮ್ಮೆ ಹೇಳ್ತೇನಿ, ಮೊದ್ಲ ಫರಾಳ ಮುಗಸೋಣ.
ಇನ್ನ ನಮ್ಮವ್ವಗ ದೀಪಾವಳಿ ಫರಾಳ ಅಂದರ ಮೊದ್ಲನೇ ಐಟೇಮ್ ಅನರಾಸ, ಅಕಿ ಅದರ ಎಕ್ಸಪರ್ಟ್. ಅಕಿ ಹಿಂತಾ ಖತರನಾಕ ಅನಾರಸ ಮಾಡ್ತಿದ್ಲು ಅಂದರ ಆ ಅನರಾಸ ವಾಸನಿಗೆ ನಮ್ಮ ಮನ್ಯಾಗಿನ್ವು ಬಿಡ್ರಿ ಆಜು-ಬಾಜು ಮನ್ಯಾಗಿನವರ ಝರಿ ಸಹಿತ ನಮ್ಮ ಮನಿ ಮೊರಿ ಒಳಗಿಂದ ಹೊರಗ ಬರ್ತಿದ್ಲು. ಅಲ್ಲಾ ಗೊತ್ತ ಇಲ್ಲದೊವರಿಗೆ ಹೇಳ್ತೇನಿ, ಹಿಂದಕ ನಾವ ಸಣ್ಣೊರಿದ್ದಾಗ ಕೀವ್ಯಾಗ ಝರಿ ಹೋದರ ಅನಾರಸ ಕಿವಿ ಕಡೆ ಇಟಗೊಂಡ ಮಲ್ಕೊ ಅದರ ವಾಸನಿಗೆ ಝರಿ ಹೊರಗ ಬರ್ತದ ಅಂತಿದ್ದರು. ನಾ ಆವಾಗ ಈ ಅನಾರಸ ಮಾಡೋದ ಝರಿ ಹೊರಗ ತಗಿಲಿಕ್ಕೆ ಅಂತ ತಿಳ್ಕೊಂಡಿದ್ದೆ. ಆಮ್ಯಾಲೆ ಗೊತ್ತಾತ ಅದ ದೀಪಾವಳಿ ಫರಾಳದ್ದ ತಿನ್ನೊ ಐಟೆಮ್ ಅಂತ.
ಅನಾರಸಕ್ಕ ಅಪೂಪ ಅಂತನೂ ಕರಿತಾರ ಅದರಾಗ ಅಧಿಕಮಾಸದಾಗ ದಾನ ಕೊಡ್ಲಿಕ್ಕೆ ಅಗದಿ ಶ್ರೇಷ್ಟ ಐಟೆಮ್. ಅನಾರಸ ಒಳಗ ಎಷ್ಟ ತೂತ ಇರ್ತಾವ ಅಷ್ಟ ವರ್ಷ ನಮಗ ಸ್ವರ್ಗದೊಳಗ ಜಾಗ ಸಿಗ್ತದ (೩೩ ಕೋಟಿ ತೂತ ಇರಬೇಕು) ಅಂತ ನಮ್ಮವ್ವ ಅದನ್ನ ದಾನಾ ಮಾಡೋಕಿ. ಇನ್ನ ಅದರಾಗ ಎಷ್ಟ ತೂತ ಆಗ್ಯಾವ ಅನ್ನೋದನ್ನ ನೋಡ್ಲಿಕ್ಕೆ ರಾವ್ ಕಾಜ ಬೇಕ ಆ ಮಾತ ಬ್ಯಾರೆ.
ಹಂಗ ಈಗಿನ ಕಾಲದ ಹುಡಗ್ಯಾರಿಗೆ ಅನಾರಸ ಮಾಡ್ಲಿಕ್ಕೆ ಬರಂಗಿಲ್ಲಾ. ನನ್ನ ಹೆಂಡ್ತಿ ಒಂದನೇ ಸರತೆ ಅನಾರಸ ಮಾಡಿದಾಗ ಅದ ಅಗದಿ ಕಟಲೇಟ್ ಆದಂಗ ಆಗಿ ತಿನ್ನಲಿಕ್ಕೆ ಕಟ್ಟರ್ ಬೇಕಾಗಿತ್ತ. ಅವತ್ತ ಲಾಸ್ಟ ಮುಂದ ಅಕಿ ಎಂದೂ ಅನಾರಸ ಮಾಡೋದ ದೂರ ಉಳಿತ ನೋಡಂಗಿಲ್ಲ ಸಹಿತ.
ಇನ್ನ ಅನಾರಸ ಬಿಟ್ಟರ ಬೇಸನ್ ಉಂಡಿ, ಶಂಕರಪೋಳೆ, ಚಕ್ಕಲಿ, ಕರ್ಚಿಕಾಯಿ, ಅಂಟಿನ ಉಂಡಿ, ಹಚ್ಚಿದ್ದ ಅವಲಕ್ಕಿ ಅಂತ ದೊಡ್ಡ ಲಿಸ್ಟ ತಯಾರ ಮಾಡಿದ್ದರು.
ಇನ್ನ ದೀಪಾವಳಿ ಫರಾಳದಾಗ
’ಅಂಟಿನ ಉಂಡಿ ಯಾಕ? ಮತ್ತ ಟೊಂಕಾ ಗಟ್ಟಿ ಮಾಡ್ಕೊಳಿಕತ್ತಿ ಏನ ನೀ ?’ ಇಲ್ಲಾ ’ಯಾಕ ನಿನ್ನ ಹೆಂಡ್ತಿದ ಇನ್ನೂ ಬಾಣಂತನ ಮುಗದಿಲ್ಲೇನ?’ ಅಂತ ಕೇಳಬ್ಯಾಡ್ರಿ.ಇದ ಏನ ಅದ ಅಲಾ ನನ್ನ ಬಯಕಿ ಐಟೆಮ್, ಅಗದಿ ಫೇವರೇಟ್. ನನ್ನ ಹೆಂಡ್ತಿ ಒಂದನೇ ಡಿಲೇವರಿ ಆದಾಗ ಏನ ಟೊಂಕ ಗಟ್ಟಿ ಆಗ್ಲಿ ಅಂತ ಅಕಿಗೆ ಅಂಟಿನ ಉಂಡಿ ಮಾಡಿ ಕೊಟ್ಟಿದ್ದರಲಾ ಆವಾಗಿಂದ ನನಗ ಅದರ ಚಟಾ ಹತ್ತೇದ. ವರ್ಷಾ ನಮ್ಮ ಮನ್ಯಾಗ ಅಂಟಿನ ಉಂಡಿ ಇದ್ದ ಇರ್ತದ.
ಇನ್ನ ನಮ್ಮ ಅತ್ತಿ ಮನ್ಯಾಗ ಮೂರನೇದ ಬಾಣಂತನ ಮಾಡಂಗಿಲ್ಲಾ ಅಂತ ಸ್ಪಷ್ಟ ಹೇಳಿದರೂ ಇವತ್ತೂ ಅಧಿಕ ಬಾಗಣಕ್ಕ 33 ಅಂಟಿನ ಉಂಡಿನ ಕೊಡ್ತಾರ. ಹಂಗ ಈಗ ವಯಸ್ಸಾಗೇದ , ಎಲ್ಲಾ ಮುಗದದ ಅಂದರು ನಾ ಅಂಟಿನ ಉಂಡಿ ಏನ ಒಲ್ಲೇ ಅನ್ನಂಗಿಲ್ಲಾ.
ಇನ್ನ ಶಂಕರಪೋಳೆ ಒಳಗ ನನ್ನ ಹೆಂಡ್ತಿ ಒಂದ ಸೀಹಿದೂ ಇನ್ನೊಂದ ಖಾರದ್ದ ಅಂತ ಸಪರೇಟ್ ಮಾಡ್ತಾಳ. ಆ ಖಾರದ್ದ ಶಂಕರಪೋಳೆ ಯಾಕ ಅಂತ ನಮ್ಮವ್ವ ಕೇಳಿದರ
’ನಮ್ಮ ಮನೆಯವರಿಗೆ ರಾತ್ರಿ ಬೇಕಾಗ್ತದ ತೊಗೊರಿ, ನಿಮಗೂ ಕಾಫೀ ಜೊತಿ ನಡಿತದ’ ಅಂತ ನಮ್ಮ ಹೆಸರಮ್ಯಾಲೆ ಅಕಿ ಡಬ್ಬಿಗಟ್ಟಲೇ ಮಾಡ್ಕೊಂಡ ಇಟ್ಕೊತಾಳ.
ಇದ ಫಸ್ಟ ಇನ್ಸ್ಟಾಲಮೆಂಟ್ ಫರಾಳ ಲಿಸ್ಟ. ಫಸ್ಟ ಇನ್ಸ್ಟಾಲಮೆಂಟ್ ಅಂತ ಯಾಕಂದರ ನಾವ ಮನ್ಯಾಗ ಫರಾಳ ಎಷ್ಟ ಮಾಡಿದರು ಅದ ತಿನ್ನೋದಕಿಂತಾ ಅರ್ಧಕ್ಕ ಅರ್ಧಾ ಮಂದಿಗೆ ಕೊಡ್ಲಿಕ್ಕೆ ಮಾಡೋದ. ನಮ್ಮಪ್ಪ ಇದ್ದಾಗ ಅಂತೂ ಅಂವಾ ನಮ್ಮವ್ವಗ
’ನೀ ಹಿಂಗ ತುಟ್ಟಿ ಕಾಲದಾಗ ಫರಾಳ ಮಾಡಿ ಮಾಡಿ ಮಂದಿ ಕೊಡ್ಕೋತ ಹೊಂಟರ ಹೆಂಗ’ ಅಂತ ಬಡ್ಕೋತಿದ್ದಾ, ಆದರ ನಮ್ಮವ್ವ ಏನ ಕೇಳ್ತಿದ್ದಿಲ್ಲಾ. ಅದರಾಗ ಅಕಿ ತವರಮನಿ ಪೈಕಿವ ಒಂದ ಐದ ಆರ ಮನಿ ಹುಬ್ಬಳ್ಳ್ಯಾಗ ಇದ್ದವು, ಕೇಳ್ತಿರೇನ, ವರ್ಷಾ ಇಕಿ ಮಾಡಿದ್ದ ಫರಾಳ ಖಾಲಿ ಆಗಿ ಮತ್ತ ಎರಡನೇ ಇನ್ಸ್ಟಾಲಮೆಂಟ್ ಒಳಗ ಕಡಮಿ ಬಿದ್ದದ್ದನ್ನ ಮತ್ತ ಮಾಡೋಕಿ.
ಮುಂದ ಇನ್ನೇನ ಎಲ್ಲಾ ಮುಗಿತ ಅನ್ನೋದರಾಗ ಒಂದಿಬ್ಬರ unexpected ದೀಪಾವಳಿ ಮುಗದ ಹದಿನೈದ ದಿವಸ ಆದಮ್ಯಾಲೆ ಫರಾಳ ಕೊಟ್ಟ ಹೋಗ್ತಿದ್ದರು. ಇನ್ನ ಅವರ ಕೊಟ್ಟ ಸಂಕಟಕ್ಕ ಇಕಿ ಮತ್ತ ಮಾಡಿ ಕೊಡೊಕಿ.
ನಮ್ಮಪ್ಪ ತಲಿಕೆಟ್ಟ
’ಅವರ ಮನಿದ ಇವರಿಗೆ, ಇವರ ಮನಿದ ಅವರಿಗೆ ಕೊಟ್ಟ ಕೈ ತೊಳ್ಕೊ…ಸಾಕ ಇನ್ನ ಫರಾಳದ್ದ ಸಡಗರ’ ಅಂತ ಬೈತಿದ್ದಾ.
ಹಂಗ ನಮ್ಮಪ್ಪ ಹೇಳಿದ್ದ ಖರೇನ ಇತ್ತ . ಮಂದಿನೂ ಹಂಗ ಮಾಡಿರ್ತಿದ್ದರ ಒಮ್ಮೋಮ್ಮೆ ಕೊಟ್ಟಿದ್ದ ನಾಲ್ಕ ಬೇಸನ ಉಂಡಿ ಒಳಗ ಎರಡ ತುಪ್ಪದಾಗ ಮಾಡಿದ್ವು, ಎರಡ ಡಾಲ್ಡಾದಾಗ ಮಾಡಿದ್ವು ಇರ್ತಿದ್ವು. ಇನ್ನ ಕೊಟ್ಟ ನಾಲ್ಕ ಚಕ್ಕಲಿ ನಾಲ್ಕ ನಮನೀವು ಇರ್ತಿದ್ವು.
ಅಲ್ಲಾ, ಅದ ಏನೋ ಅಂತಾರಲಾ ಎಲ್ಲಾರ ಮನ್ಯಾಗಿನ ಅನಾರಸಕ್ಕ ತೂತ ಇರೋದ. ಏನೋ ದೀಪಾವಳಿ ಫರಾಳದ ಸುದ್ದಿ ಬಂತ ಅಂತ ಒಂದ ಪ್ರಹಸನ ಆತ.
ನೋಡ್ರಿ,ಮುಂದಿನ ವಾರ ದೀಪಾವಳಿ ಬರತದ ಆರತಿಗೆ ಬರಲಿಕ್ಕೆ ಆಗಲಿಲ್ಲಾ ಅಂದರೂ ಫರಾಳಕ್ಕ ಬರ್ರಿ.
ನಿಮಗ ಮತ್ತು ನಿಮ್ಮ ಕುಟುಂಬದವರಿಗೇಲ್ಲಾ ದೀಪಾವಳಿ ಹಬ್ಬದ ಶುಭಾಶಯಗಳು.
ನಮ್ಮ ಮನಿ ಫರಾಳ ಮುಗಿಯೋದರಾಗ ಬರ್ರಿ. ಮತ್ತೇಲ್ಲರ ನಿಮಗೂ ಮಂದಿ ಮನಿ ಫರಾಳ ಕೊಟ್ಟ ಕಳಸೊ ಹಂಗ ಆಗಬಾರದ.