ಇದ ಒಂದ ಎರಡ ತಿಂಗಳ ಹಿಂದಿನ ಮಾತ ಇರಬೇಕ…ನನ್ನ ಮಗಳ ಭರತನಾಟ್ಯದ್ದ ’ ರಂಗ ಪ್ರವೇಶ’ ದ ಕಾರ್ಯ ಕ್ರಮ ಫಿಕ್ಸ್ ಆತ…..ಇನ್ನಅಕಿ ಗುರುಗಳು ಅಕಿಗೆ ಒಂದ ’ಏಕ ವ್ಯಕ್ತಿ…ರೂಪಕ ಮಾಡಬೇಕು..ಅಕಿ ಅದನ್ನ ನಾಟ್ಯ ರೂಪದೊಳಗ ಪ್ರಸ್ತುತ ಪಡಸಬೇಕು…ನಿಮ್ಮ ತಲ್ಯಾಗ ಯಾವದರ ಐತಿಹಾಸಿಕ, ಪೌರಾಣಿಕ ಹೆಸರ ಇದ್ದರ ಹೇಳ್ರಿ’ ಅಂತ ಡಿಸಿಜನ್ ನನ್ನ ಮ್ಯಾಲೆ ಬಿಟ್ಟರು.
ನಾ ಒಂದ ಎರಡ ದಿವಸ ವಿಚಾರ ಮಾಡಿ…ಐತಿಹಾಸಿಕ ಬ್ಯಾಡ, ಹಿಂಗಿದ್ದರು ನಾವ ಕಾಶ್ಯಪ ಗೋತ್ರದವರ ಹಿಂಗಾಗಿ ಪೌರಾಣಿಕನ ಇರಲಿ ಮತ್ತ ಸ್ವಲ್ಪ’ ಹಟ್ ಕೇ’ ಇರಲಿ ಅಂತ ವಿಚಾರ ಮಾಡ್ಲಿಕ್ಕೆ ಹತ್ತಿದೆ….ಅದ ಯಾಕೋ ಏನೋ ಗೊತ್ತಿಲ್ಲಾ ಒಮ್ಮಿಂದೊಮ್ಮಿಲೆ ದೇವಯಾನಿ ನೆನಪ ಆದ್ಲು…..ಏ ಹೆಂತಾ figure ಅಕಿ..ಅಂದರ ಹೆಂತಾ jubilant personality, ನನ್ನ ಮಗಳಿಗೆ ಅಕಿದ ಏಕ ವ್ಯಕ್ತಿ ರೂಪಕ ಮಾಡಿಸಿದರ ಆತು ಅಂತ ಡಿಸೈಡ ಮಾಡಿದೆ.
ಮರದಿವಸ ನಾ ನಮ್ಮ ಪ್ರಶಸ್ತಿ ಟೀಚರ್ ಗೆ
’ಇಲ್ಲಾ ನನ್ನ ಮಗಳಿಗೆ ದೇವಯಾನಿ ಏಕ ವ್ಯಕ್ತಿ ರೂಪಕ ಮಾಡಿಸಿದರ ಹೆಂಗ’ ಅಂದೆ….ಒಮ್ಮಿಕ್ಕಲೇ ನನ್ನ ಹೆಂಡ್ತಿ ನಡಕ ಬಾಯಿ ಹಾಕಿ ’ good choice’ ಅಂತ ಅಂದ್ಲು.
ನನಗ ನಾ ಮುಂಜಾನೆ ಯಾರ ಮಾರಿ ನೋಡಿ ಎದ್ದಿದ್ದೆಪಾ ಇವತ್ತ ಏನ ನನ್ನ ಹೆಂಡ್ತಿ ಒಂದ ಹೊಡ್ತಕ್ಕ ’ good choice’ ಅಂದ್ಲಲಾ ಅಂತ ಅನಸ್ತ. ಅಲ್ಲಾ ನನ್ನ ಲಗ್ನಾ ಮಾಡ್ಕೋಬೇಕಾರ ಅವರಪ್ಪ ನನ್ನ ಸೆಲೆಕ್ಟ ಮಾಡಿದಾಗ ಒಂದ ಹೊಡ್ತಕ್ಕ good choice ಅಂದೋಕಿ ಅಲ್ಲಾ ಇಕಿ, ಹಂತಾದ ಇವತ್ತ ಯಾಕ ಇಕಿ ನನ್ನ ಸೆಲಕ್ಷನ್ ಗೆ ರೈಟ್ ಅಂದ್ಲು ಅಂತ ನಾ ಕೇಳಿದರ
’ನೋಡ್ರಿಲ್ಲೇ…ಲಾಜಿಕ್ ಸಿಂಪಲ್ ಅದ….ದೇವಯಾನಿ…ಶುಕ್ರಾಚಾರಿ ಮಗಳ….ಅಂವಾ ಅಸುರರ ಗುರು, ಸಿಡಕ-ಶಿವರಾತ್ರಿ..ಅವಂಗೂ ಮದಿರಾಪಾನದ್ದ ಚಟಾ ಇತ್ತ ಸೇಮ್ ನಿಮ್ಮಂಗ…ಅವಂದ ಒಕ್ಕಣ್ಣ ಇತ್ತ ನಿಮಗ ನಾಲ್ಕ್ ಕಣ್ಣವ …..ಅಲ್ಲಾ….ಆದರೂ ನಿಮಗೇನ ಛಂದಾಗಿ ಕಾಣಂಗಿಲ್ಲಾ ಆ ಮಾತ ಬ್ಯಾರೆ….ಇನ್ನ ದೇವಯಾನಿನೂ ನಿಮ್ಮ ಮಗಳ ಹಂಗ ನೋಡ್ಲಿಕ್ಕೆ ಛಂದ ಇಂದರು ಡೌಲು, ಗಮ್ಮತ್ತ, ಸೊಕ್ಕು ಮ್ಯಾಲೆ ಅಪ್ಪನ ಹಂಗ ಸಿಡಕು, ಹ್ಯಾವಾ, ಹಟಮಾರಿ ತನಾ ಎಲ್ಲಾ ಅವ……’ ಅಂತ ಅಂದ ಬಿಟ್ಲು…ನನಗ ಬಿ.ಪಿ ನೆತ್ತಿಗೇರತ…ನನ್ನ ಹೆಂಡ್ತಿ ಒಂದ ಹೊಡ್ತಕ್ಕ ದೇವಯಾನಿ ಪಾತ್ರಕ್ಕ ಒಪ್ಪ್ಯಾಳ ಅಂದರ ಅದ ಬ್ಯಾಡ, ಬ್ಯಾಡ ನಡಿ ಅಂತ ನಾ ಡಿಸೈಡ ಮಾಡಿದೆ….ಅಲ್ಲಾ ಎಷ್ಟ ಅಂದರೂ ಗಂಡಸು, ಮ್ಯಾಲೆ ಗಂಡ ಬ್ಯಾರೆ…ನಾ ಯಾಕ ಹೆಂಡ್ತಿ ಹೇಳಿದಂಗ ಕೇಳಬೇಕಂತ ಒಮ್ಮಿಕ್ಕಲೇ
’ ಏ….ದೇವಯಾನಿ ಅಪ್ಪಾ ಅಸುರರ ಗುರು ಅಂದರ ಆ ಪಾತ್ರ ಬ್ಯಾಡಾ….’ ಅಂತ ಹಿಂದ ಮುಂದ ವಿಚಾರ ಮಾಡಲಾರದ ಹುಚ್ಚರಂಗ ’ಒಂದ ಕೆಲಸಾ ಮಾಡ್ರಿ ಟೀಚರ್, ನನ್ನ ಮಗಳಿಗೆ ಆ ದೇವಯಾನಿ ಬೆಸ್ಟ ಫ್ರೇಂಡ್ ಇದ್ದಳಲಾ ಶರ್ಮಿಷ್ಠೆ ಆ ಪಾತ್ರ ಮಾಡಸರಿ’ ಅಂದ ಬಿಟ್ಟೆ. ನನ್ನ ಹಣೇಬರಹಕ್ಕ ಅದಕ್ಕೂ ನನ್ನ ಹೆಂಡ್ತಿ ಒಂದ ಹೊಡ್ತಕ್ಕ ಹೂಂ ಅನ್ನಬೇಕಾ….
” ಅಲ್ಲರಿ…ನಿಮ್ಮ ಮಗಳ ದೇವಯಾನಿ ಆಗಿದ್ದರ…ನೀವು ಬರೇ ಅಸುರರ ಗುರು ಆಗ್ತಿದ್ದರಿ, ಈಗ ನಿಮ್ಮ ಮಗಳನ ಶರ್ಮಿಷ್ಠೆ ಮಾಡಿ ನೀವ ಡೈರೆಕ್ಟ್ ಅಸುರನ ಆದರಿ…ಅಲ್ಲಾ ಅದರಾಗ ಏನ ತಪ್ಪಿಲ್ಲ ತೊಗೊರಿ….ನೀವು ಆಡೂರ ಕಡಮಿ, ಅಸುರ ಜಾಸ್ತಿನ ಇದ್ದೀರಿ’ ಅಂತ ಅಂದ ಬಿಟ್ಲು….ನಂಗ ಪಿತ್ತ ನೆತ್ತಿಗೇರತ… ’ಲೇ…ಹಂಗ್ಯಾಕ ಅಂತಿ ’ ಅಂತ ಜೋರ ಮಾಡಿದೆ
’ಮತ್ತ ಏನ… ಶರ್ಮಿಷ್ಠೆ ಅಸುರ ರಾಜಾ ವೃಷಪರ್ವನ ಮಗಳ…ಶುಕ್ರಾಚಾರಿ ಅವರ ಗುರು…ದೇವಯಾನಿ, ಶರ್ಮಿಷ್ಠೆ ಇಬ್ಬರು ಕ್ಲೋಸ್ ಫ್ರೇಂಡ್ಸ್ ಅಂದರ ಇಬ್ಬರೂ ಆಡೂರ ಪಾರ್ಟಿನ… I mean ಅಸುರ ಪಾರ್ಟಿನ’ ಅಂತ ಅಂದ ಬಿಟ್ಲು….ನಂಗ ಇನ್ನ ಏನ ಹೇಳ್ಬೇಕ ಅಂತ ತಿಳಿಲಿಲ್ಲಾ..ನಾ ಖರೇ ಹೇಳ್ತೇನಿ ಆ ದೇವಯಾನಿ, ಶರ್ಮಿಷ್ಠೆ ಇಬ್ಬರನೂ ಕಟಗೊಂಡ ಯಾಯಾತಿಗರ ಇಷ್ಟ ಪ್ರಾಬ್ಲೇಮ್ ಆಗಿತ್ತೊ ಇಲ್ಲೋ ಗೊತ್ತಿಲ್ಲಾ ಆದರ ನನಗ ಆತ….
ಅಷ್ಟರಾಗ ಇವರ ಇಬ್ಬರನೂ ಹಿಂಗ ಬಿಟ್ಟರ ’ ರಂಗ ಪ್ರವೇಶಕ್ಕ’ ಸ್ಟೇಜ್ ಮ್ಯಾಲೆ ಪ್ರಶಸ್ತಿ ಅಪ್ಪಾ ಮತ್ತ ಅವ್ವಾ ಇಬ್ಬರೂ ಕೂಡಿ ಕೂಡೋದ ಡೌಟ ಅಂತ ಗ್ಯಾರಂಟಿ ಮಾಡ್ಕೊಂಡ ಆ ಡ್ಯಾನ್ಸ ಟೀಚರ್…
’ಇಲ್ಲೆ ನೋಡ್ರಿಲ್ಲಿ, ದೇವಯಾನಿನೂ ಬ್ಯಾಡಾ, ಶರ್ಮಿಷ್ಠೆನೂ ಬ್ಯಾಡಾ…ಪ್ರಶಸ್ತಿ ಅಪ್ಪ ಮಾನವನು ಬ್ಯಾಡಾ ದಾನವನು ಬ್ಯಾಡ, ಸುಮ್ಮನ ಮೇನಕಾದ ಏಕ ವ್ಯಕ್ತಿ ರೂಪಕ ಮಾಡೋಣ…..ಮೇನಕಾ ಹೆಂಗಿದ್ದರು ಅಪ್ಸರೆ ಬ್ಯಾರೆ…ಅಪ್ಸರೆಯರೇಲ್ಲಾ ಸಾಕ್ಷಾತ್ ಬ್ರಹ್ಮನಿಂದ ಸೃಷ್ಟಿ ಆದವರ…ಹಂಗ ಕೆಲವೊಬ್ಬರ ಅಕಿ ಸಮುದ್ರಮಂಥನದೊಳಗ ಕಾಶ್ಯಪ ಋಷಿಯಿಂದ ಹುಟ್ಟಿದೋಕಿನೂ ಅಂತಾರ……ನೀವು ಕಾಶ್ಯಪ ವಂಶಸ್ಥರ ಇದ್ದೀರಿ…ಕಾಶ್ಯಪ ಗೋತ್ರದವರ…ಮಾತ ಮುಗಿತ…ಮೇನಕಾ ಪಾತ್ರ ಮಾಡಿ ಬಿಟ್ಟರ ಅಕಿಗೆ ಅವ್ವನ ಕಿರಿಕಿರಿನ ಇಲ್ಲಾ’ ಅಂತ ಅಂದ ಬಿಟ್ಟರು. ಅವರ ಅಷ್ಟ ಹೇಳೊದ ತಡಾ ನಾ ಒಂದ ಹೊಡ್ತಕ್ಕ ಹೂಂ ಅಂದ ಬಿಟ್ಟೆ…
ಇನ್ನೇನ ಮೇನಕಾ ಫೈನಲ್ ಮಾಡಿ ಪ್ರಾಕ್ಟೀಸ್ ಸ್ಟಾರ್ಟ ಮಾಡ್ಲಿಕ್ಕೆ ಅಡ್ಡಿಯಿಲ್ಲಾ ಅನ್ನೋದರಾಗ ಆ ಡ್ಯಾನ್ಸ್ ಟೀಚರ್ ಗಂಡ ಬಂದರು
’ಅಲ್ಲಾ ಪ್ರಶಸ್ತಿಗೇ ಶಕುಂತಲೆ ಮಾಡಿದರೆ ಹೆಂಗೆ, ಅದು ಆಕೆಗೆ ಒಪ್ಪತ್ತೆ’ ಅಂತ ಅಂದರು……ಡ್ಯಾನ್ಸ್ ಟೀಚರಗೆ ಮೊದ್ಲ ನಾವ ಗಂಡಾ ಹೆಂಡತಿ ದೇವಯಾನಿ, ಶರ್ಮಿಷ್ಠೆ ಅಂತ ತಾಸ ಗಟ್ಟಲೇ ಜಗಳಾಡಿದ್ದ ನೋಡಿ ತಲಿ ಕೆಟ್ಟಿತ್ತ ಇನ್ನ ಹಂತಾದರಾಗ ಅವರ ಮನಿಯವರ ಎಲ್ಲೆ ಇನ್ನ ಮೇನಕಾ- ಶಕುಂತಲೆ ನಡಕ ಜಗಳಾ ಹಚ್ಚತಾರ ಅಂತ ಸಿಟ್ಟಿಗೆದ್ದ
’ನೀವು ಸುಮ್ಮನ ಇರ್ರಿ ಮಾರಾಯರೇ….ನಾವು ಶಕುಂತಲಾ ಏನ ಅವರವ್ವ ಮೇನಕಾನ ಪಾತ್ರನ ಮಾಡ್ಲಿಕತ್ತಿದ್ದೇವಿ……..ಇಲ್ಲೇ ಒಂದ ಏಕ ವ್ಯಕ್ತಿ ರೂಪಕ ಮಾಡೋ ಸಂಬಂಧ ಅವರಿಬ್ಬರು ಗಂಡಾ ಹೆಂಡ್ತಿ ಕೌರವರು ಪಾಂಡವರು ಹುಟ್ಟೊಕಿಂತ ಮೊದ್ಲಿನ ಪಾತ್ರದ ಸಂಬಂಧ ಕುರುಕ್ಷೇತ್ರ ಮಾಡ್ಲಿಕತ್ತಾರೆ….ನೀವು ಮತ್ತ ಅವರಿಬ್ಬರ ನಡುವ ಜಗಳಾ ಹಚ್ಚ ಬೇಡಿ’ ಅಂತ ಜೋರ ಮಾಡಿದರು.
ಅಲ್ಲಿಗೆ ನನ್ನ ಮಗಳ ಏಕ ವ್ಯಕ್ತಿ ರೂಪಕಾ ಮೇನಕಾ ಅಂತ ಫೈನಲ್ ಆತ… ಹೆಂಗಿದ್ದರೂ ಮೇನಕೆ ಬ್ರಹ್ಮನ ಮಾನಸ ಪುತ್ರಿ ..ನಾ ನೋಡಿದರ ದಾನವ..ಮಾನವ ಅಂತ ಜಗಳಾಡ್ಲಿಕತ್ತಿದ್ದೆ ಈಗ ಡೈರೆಕ್ಟ ನಂದ ಬ್ರಹ್ಮನ ಸ್ಥಾನಕ್ಕ ಪ್ರಮೋಶನ್ ಆತ ನಡಿ ಅಂತ ನನ್ನ ಸ್ವಂತ ಊರ್ವಶಿನ್ನ ಕರಕೊಂಡ ಮನಿಗೆ ಬಂದೆ……


