ಇತ್ತೀಚಿಗೆ ಡೈಟ್ ಮಾಡೋದ ಒಂದ ಚಟಾ ಆಗೇದ. ಹಂಗ ಕೆಲವೊಬ್ಬರಿಗೆ ಚಟಾ ಜಾಸ್ತಿ ಆದಮ್ಯಾಲೆ ಡೈಟ್ ಮಾಡಬೇಕಾಗ್ತದ ಆ ಮಾತ ಬ್ಯಾರೆ.
ಇನ್ನ ಈ ಡೈಟಗೆ ಲಿಂಗ್ ಭೇದ ಇಲ್ಲಾ ಅಂತ ಅನ್ಕೊಂಡರು ಇದನ್ನ ಹೆಣ್ಣಮಕ್ಕಳ ಸಿರಿಯಸ್ ಆಗಿ ಮಾಡಿದಷ್ಟ ಗಂಡಸರಂತೂ ಮಾಡಂಗಿಲ್ಲಾ.
ಇನ್ನ ಯಾರರ ಗಂಡಂದರ ಅಗದಿ ಸೀರಿಯಸ್ ಆಗಿ ಡೈಟ್ ಮಾಡ್ಲಿಕತ್ತಾರ ಅಂದರ ಅವರ ಅರ್ಧಾ ಹೆಂಡ್ತಿ ಕಾಟಕ್ಕ ಮಾಡ್ಲಿಕತ್ತಿರ್ತಾರ ಅನ್ನೊದ ಗ್ಯಾರಂಟಿ.
ಈಗ ಒಂದ್ಯಾರಡ ವರ್ಷದ ಹಿಂದ ಮಂದಿ ಮಾತ ಎತ್ತಿದರ ಡೈಟ್ ಅನ್ನೋದ ನೋಡಿ ನನ್ನ ಹೆಂಡ್ತಿ ನನಗೂ
’ರ್ರಿ..ನೀವು ಡೈಟ್ ಮಾಡ್ರಿ’ ಅಂತ ಗಂಟ ಬಿದ್ಲು. ಅಲ್ಲಾ ಒಂದ ಐದಾರ ವರ್ಷದಿಂದ ವೀಕೆಂಡ್, ಆಕೇಜನ್ ಅಂತ ವಾರಕ್ಕ ಎರೆಡ ಮೂರ ಸರತೆ ಹೊರಗ ಹೊಂಟಿದ್ದಕ್ಕ ನಾಲ್ಕ ಮಂದಿ ನೋಡೊ ಹಂಗ ಗಡತರ ಆಗೇನಿ, ಅದು ನಲವತ್ತ ದಾಟಿ ಎರಡ ಹಡದ ಆಪರೇಶನ್ ಆದಮ್ಯಾಲೆ ಹಂತಾದರಾಗ ಇಕಿ ನಂಗ ಡೈಟ್ ಮಾಡ ಅಂತ ಗಂಟ ಬಿದ್ದಿದ್ದಕ್ಕ ನಂಗ ತಲಿ ಕೆಡ್ತ.
’ಏ….ನಂಗೇನ ಆಗೇದ…ನಂದ ಇನ್ನೂ ಹೈಟ ತಕ್ಕ ವೇಟ್ ಇಲ್ಲಾ, ನಾ ಯಾಕ ಡೈಟ್ ಮಾಡ್ಲಿ…’ ಅಂತ ಅಂದರ
’ಅಯ್ಯ…ಹೈಟ್ ತಕ್ಕ ವೇಟ್ ಇರಲಿಲ್ಲಾ ಅಂದರ ಏನಾತ ಹೈಟಕಿಂತಾ ಜಾಸ್ತಿ ಚಟಾ ಅವ ಅಲಾ, ಅದಕ್ಕರ ಡೈಟ್ ಮಾಡ್ರಿ..prevention is better than abortion ಅಂತ ನೀವ ಹೇಳ್ತಿದ್ದರಿಲ್ಲ’ ಅಂತ ನಂಗ ಜೋರ ಮಾಡಿದ್ಲು. ಲೇ operation ಆದಮ್ಯಾಲೆ ಎಲ್ಲೀ abortion ಅಂತ ಅನ್ನೊವ ಇದ್ದೆ ಹೋಗ್ಲಿ ಬಿಡ ಮತ್ತ ಇನ್ನ ಆ ಸುದ್ದಿ ತಗದರ ನಂದ ಮೂಡ್ ಆಫ್ ಆಗ್ತದ ಅಂತ ಸುಮ್ಮನಾಗಿ
’ನೀ ಡೈಟ ಮಾಡ್ತಿದ್ದರ ಮಾಡ ನಂಗೇನ ಅದರ ಉಸಾಬರಿ ಹಚ್ಚಬ್ಯಾಡ’ ಅಂತ ಹೇಳಿ ಬಿಟ್ಟಿದ್ದೆ.
ಇನ್ನ ನಮ್ಮಕಿದ ಅವರಿವರ ಮಾತ ಕೇಳಿ ಡೈಟ್ ಶುರು ಆತರಿಪಾ. ನಮ್ಮವ್ವಗರ ಅದನ್ನ ನೋಡಿ-ನೋಡಿ ಸಾಕಾಗಿ ಬಿಡ್ತ.
ಮೊದ್ಲ ಹಿಂದಿನ ದಿವಸದ್ದ ಏನ ಉಳದರು ಅಗದಿ ಖುಷಿಲೇ ತಿನ್ನೋಕಿ ಈಗ ಬಿಸಿ ಬಿಸಿ ಮಾಡಿ ಕೊಟ್ಟರು ಅದನ್ನೊಲ್ಲೇ ಇದನ್ನೋಲ್ಲೇ ಅಂತ ಶುರು ಮಾಡಿದ್ಲು. ಮೊದ್ಲ ಬೇಸಿದ್ದ ಕಾಯಿಪಲ್ಯಾಕ್ಕ ಹೆಸರ ಇಡೋಕಿ ಈಗ ಹಸಿ ಕಾಯಿಪಲ್ಯೆ ತಿನ್ನಲಿಕತ್ಲು.
’ತೊಳ್ಕೊಂಡರ ತಿನ್ನ ನಮ್ಮವ್ವಾ ಅವಕ್ಕ ಎಣ್ಣಿ ಹೊಡದಿರ್ತಾರ…ಮತ್ತ ಒಂದ ಹೋಗಿ ಒಂದ ಆಗಿ, ನೀ ಎಲ್ಲೇರ ತಾಯಿ-ಮಗಗ ಕಂಬಿ ಎಣಸೊ ಹಂಗ ಮಾಡಿ-ಗಿಡಿ’ ಅಂತ ನಮ್ಮವ್ವ ಅನ್ನಲಿಕತ್ಲು. ಹಿತ್ತಲದಾಗ ಬೆಳದದ್ದ ಪಪ್ಪಾಯಿ ಬಿಟ್ಟ ಇಕಿಗೆ ಇಂಪೋರ್ಟೇಡ್ ಕಿವಿ ಫ್ರ್ಯೂಟ್ ಬೇಕಾತ. ಎರೆಡುದರಾಗೂ vitamin C ಇರ್ತದ ಅಂದರೂ ಇಕಿಗೆ imported kiwi ಫ್ರ್ಯೂಟ್ ಬೇಕಾಗ್ತಿತ್ತ. ಅಲ್ಲಾ ಎಲ್ಲಾ ಬಿಟ್ಟ ಇಂವಾ ಮತ್ತ ಹೆಂಡ್ತಿಗೆ ಪಪ್ಪಾಯಿ ತಿನಿಸೋ ಲೆಕ್ಕಕ್ಕ ಬಂದನಲಪಾ ಅಂತ ಅನಬ್ಯಾಡ್ರಿ, ಪಪ್ಪಾಯಿ ಒಳಗ vitamin A,B,C,E & K ಎಲ್ಲಾ ಇರ್ತಾವ ಅಂತ ಹೇಳಿದೆ.
ಇನ್ನ ಇಕಿದ ಡೈಟ್ ಮೂರ ಮೂರ ತಿಂಗಳಿಗೊಮ್ಮೆ ಚೇಂಜ್ ಆಗಲಿಕತ್ತವು, ಫೆಬ್ರುವರಿ ಒಳಗ ಬರೇ ಫ್ರ್ಯೂಟ್ಸ್ ತಿನ್ನೋಕಿ, ಮೇ ಒಳಗ ಮಿಲಿಟ್ಸ್ ಅನ್ನೋಕಿ, ಸೆಪ್ಟೆಂಬರ್ ಒಳಗ ಬರೇ ಸ್ಪ್ರೌಟ್ಸ್ ಮುಕ್ಕೋಕಿ. ಕೊಸಂಬರಿ-ಪಚಡಿ-ಭಜ್ಜಿ ತಿನ್ನೋಕಿ ಗ್ರೀನ್ ವೆಜಿಟೇಬಲ್ ಸಲಾಡ್ ಅಂತ ಹಸಿರ ತೊಪ್ಪಲಾ, ಗ್ರೀಕ್ ಸಲಾಡ ಅಂತ ಮನ್ಯಾಗಿನ ಟೊಮೇಟೊ, ಸವತಿಕಾಯಿ, ಉಳ್ಳಾಗಡ್ಡಿ ತಿನ್ನಲಿಕತ್ಲು. ನಮ್ಮವ್ವ
’ನೀ ಹಿಂಗ ಇದ್ದ ಬಿದ್ದ ಮನ್ಯಾಗಿನ ಕಾಯಿಪಲ್ಯಾ ತಿಂದರ ನಾ ಏನ ಬರೇ ಉಳ್ಳಾಗಡ್ಡಿ- ಬಳ್ಳೊಳ್ಳಿ ಹುಳಿ ಮಾಡ್ಲಿ ಏನ ’ ಅನ್ನಲಿಕತ್ಲು.
ಅದರಾಗ ಒಂದ ದಿವಸ ನಮ್ಮವ್ವ ತಲಿ ಕೆಟ್ಟ
’ಅಲ್ಲಾ, ಹಿಪಪಾಟಮಸ್ ನೋಡಿ ಇಲ್ಲ…ಪಾಪ ಅದು ಹಿಂಗ ಬರೆ ಹಸರ ಹುಲ್ಲ, ಬೇರು, ಕಾಯಿಪಲ್ಯಾ ತಿಂತದ ಆದರ ನೋಡ್ಲಿಕ್ಕೆ ಹೆಂಗ ಅದ… ಎಲ್ಲಾ ನಮ್ಮ-ನಮ್ಮ ಮೈಗುಣಾವಾ ಭಾಳ ತಲಿಕೆಡಸಿಗೊಬಾರದ. ಇರೋಷ್ಟ ದಿವಸ ತಿಂದ-ಉಂಡ ಆರಾಮ ಇರಬೇಕ’ ಅಂತ ಅಂದ ಬಿಟ್ಲು.
’ಹಾಂ…ನಂಗ ಹೆಂಗ ನೀವು ಹಿಪ್ಪೊ ಅಂದರಿ’ ಅಂತ ಅದೊಂದ ದೊಡ್ಡ ಇಶ್ಯೂ ಆತ.
ಅದರಾಗ ನಮ್ಮವ್ವಂದ ಇನ್ನೊಂದ ವಿಚಿತ್ರ ಲಾಜಿಕ್ ಇತ್ತ. ಅಕಿ ಮಾತ-ಮಾತಿಗೆ ನನ್ನ ಹೆಂಡ್ತಿಗೆ ನೀ ನಿಮ್ಮವ್ವನ ಕಡೆ ಬಾಣಂತನ ಛಂದಾಗಿ ಮಾಡಿಸ್ಗೊಂಡಿಲ್ಲಾ ಅದಕ್ಕ ಮೈ ಬಂದದ ಅನ್ನೋಕಿ. ಬಾಣಂತನದಾಗ ಬಾಯಿ ಕಟ್ಟಲಿಲ್ಲಾ ಅಂದರ, ಛಂದಾಗಿ ಅಗ್ಗಿಷ್ಟಗಿ ಕಾಯಿಸ್ಗೊಳಿಲ್ಲಾ ಅಂದರ ಹಡದ ಮೈ ಹಂಗ ಉಳಿತದ ಅಂತ ಅನ್ನೋಕಿ. ಈ ಲಾಜಿಕ್ ನನಗೇನ ತಿಳಿಲಿಲ್ಲಾ ಆ ಮಾತ ಬ್ಯಾರೆ. ಮುಂದ ನಮ್ಮವ್ವ ನನ್ನ ಹೆಂಡ್ತಿ ಏನ ಡೈಟ್ ವಿಷಯ ತಗದರು
’ಸಂಡಗಿಕುಂಬಳಕಾಯಿ ಗುಂಡ-ಗುಂಡಗ ಇದ್ದಿ, ಕೆಲಸದೊಕಿನ ಬಿಡಿಸಿ ಸ್ವಲ್ಪ ಮೈಮುರದ ದುಡದ ಮನ್ಯಾಗ ಏನ ಬೇಕ ಅದನ್ನ ಮಾಡ್ಕೊಂಡ ತಿನ್ನ…ಈ ಡೈಟ್- ಗೀಟ್ ಹಿಂತಾ ಸಣ್ಣ ವಯಸ್ಸಿನಾಗ ಯಾಕ’ ಅಂತ ಗಂಟ ಬಿದ್ಲು. ನನ್ನ ಹೆಂಡ್ತಿ ಪುಣ್ಯಾಕ್ಕ ನಮ್ಮವ್ವಾ
’ಮನಿ ಕೆಲಸ ಕಡಮಿ ಅನಿಸಿದರ, ಆಜು-ಬಾಜು ಒಂದ್ಯಾರಡ ಮನಿದ ಭಾಂಡೆ-ಓಗ್ಯಾಣ ಹಿಡಿ’ ಅಂತ ಅನಲ್ಲಿಲ್ಲಾ. ಹಂಗ ನಮ್ಮವ್ವ ಎಷ್ಟ ಹೇಳಿದರು ನಮ್ಮಕಿ ಏನ ಕೇಳಲಿಲ್ಲಾ ಆ ಮಾತ ಬ್ಯಾರೆ. ಅಕಿಗೆ ಡೈಟ್ ಮಾಡೋದ ಒಂಥರಾ ಚಟಾ ಆಗಿತ್ತ ಅನ್ನರಿ.
ಮೊನ್ನೆ ಒಂದ ಸರತೆ ನನ್ನ ಹೆಂಡ್ತಿದ ಚಾರ್ಟ್ ಪ್ರಕಾರ ಡೈಟ್ ಅಂತ ರಾತ್ರಿ ಊಟ ಇದ್ದಿದ್ದಿಲ್ಲಾ, ಮ್ಯಾಲೆ ಅವತ್ತ ನಮ್ಮವ್ವನ ಏಕಾದಶಿ ಬ್ಯಾರೆ ಇತ್ತ, ಮಕ್ಕಳ ಮ್ಯಾಗಿ ಮಾಡ್ಕೊಂಡ ತಿಂತೇವಿ ಅಂತ ಗಂಟ ಬಿದ್ದಿದ್ವು. ಇನ್ನ ನಂದ ಒಬ್ಬೊವಂದ ಊಟಾ, ನನ್ನ ಹೆಂಡ್ತಿ
’ಎಲ್ಲೇ ನಿಮ್ಮ ಒಬ್ಬೊರ ಸಂಬಂಧ ಕುಕ್ಕರ ಇಡ್ಲಿ, ನೀವು ನಿಮ್ಮ ದೋಸ್ತ ಬಸ್ಯಾನ ಜೊತಿ ಹೊರಗ ಹೋಗಿ ಬಿಡ್ರಿ’ ಅಂತ ಅಂದ ಬಿಟ್ಲು. ನಂಗ ಒಮ್ಮಿಕ್ಕಲೇ ಆಶ್ಚರ್ಯ ಆತ, ಹಂಗ ನಾ
’ಇವತ್ತ ರಾತ್ರಿ ನಂದ ಮನ್ಯಾಗ ಊಟಾ ಇಲ್ಲಾ’ ಅಂದಾಗೊಮ್ಮೆ ಇಶ್ಯೂ ಮಾಡೋಕಿ, ಹಂತಾಕಿ ತಾನಾಗಿ ಹೊರಗ ಹೋಗ್ರಿ ಅಂತ ಅಂದ್ಲಲಾ ಅಂತ ಖುಶಿ ಆತ ಬಿಡ್ರಿ.
ಇತ್ತಲಾಗ ನಮ್ಮವ್ವ ಮತ್ತ ಅಕಿಗೆ
’ನೋಡಿಲ್ಲೇ ಹಿಂದಿನ ಕಾಲದಾಗ ಈ ಡೈಟ್-ಗೀಟ್ ಏನ ಇರ್ತಿದ್ದಿಲ್ಲಾ ನಾವ ಹೊಟ್ಟಿತುಂಬ ಉಂಡ ಮೈತುಂಬ ಕೆಲಸಾ ಮಾಡ್ತಿದ್ದವಿ, ಮ್ಯಾಲೆ ವಾರಕ್ಕೊಮ್ಮೆ ಒಪ್ಪತ್ತ, ಹದಿನೈದ ದಿವಸಕ್ಕೊಮ್ಮೆ ಏಕಾದಶಿ ತಿಂಗಳಿಗೊಮ್ಮೆ ಸಂಕಷ್ಟ ಮಾಡ್ಕೊತಿದ್ದರ ಎಲ್ಲಾ ಆರಾಮ ಇರ್ತದ. ಆ ಸುಡಗಾಟ ಡೈಟ ಬಿಟ್ಟ ಏಕಾದಶಿ-ಒಪ್ಪತ್ತ್ ಮಾಡ’ ಅಂತ ರಿಲಿಜಿಯಸ್ ಆಗಿ ಹೇಳಿಕತ್ಲು. ಅಲ್ಲಾ ಹಂಗ ನಮ್ಮಕಿ ಏನ ಹೇಳಿದರೂ ಕೇಳೋಕಿ ಅಲ್ಲ ಬಿಡ್ರಿ, ಮಾಡ್ಲಿ ಎಷ್ಟ ದಿವಸ ಮಾಡ್ತಾಳ ಡೈಟ್ ನೋಡೋಣ ಅಂತ ನಾನೂ ಸುಮ್ಮನ ಇದ್ದೇನಿ. ಹಂಗ ನಾಳೆ ಎಲ್ಲೇರ ನಾವ ಗಂಡಾ ಹೆಂಡ್ತಿ ಮಾರ್ಕೇಟನಾಗ ಭೇಟ್ಟಿ ಆದರ ನೀವ ನಮ್ಮಕಿನ ನೋಡಿ
’ಏ…ಹೆಂಡ್ತಿಗೆ ತಿನ್ನಲಿಕ್ಕೆ ಹಾಕ್ತಿ ಇಲ್ಲೋ ಮಾರಾಯಾ, ಎಷ್ಟ ಸೊರಗ್ಯಾಳಲಾ’ ಅಂತ ಅಂದ-ಗಿಂದೀರಿ…ನಿಮಗ ಗೊತ್ತಿರ್ಲಿ ಅಕಿ ಡೈಟ್ ಮಾಡ್ಲಿಕತ್ತಾಳ ಅಂತ ಇಷ್ಟ ಕಥಿ ಬರದಿದ್ದ.
ಇನ್ನ ನಮ್ಮ ಆಫೀಸನಾಗ ನಮ್ಮ ಅಕೌಂಟೆಂಟ್ ಒಬ್ಬೋಕಿ ಡೈಟ್ ಮಾಡ್ತಾಳ, ಅಕಿಗೂ ಡೈಟ್ ಮಾಡೋದ ಚಟಾ ಆಗೇದ. ಮ್ಯಾಲೆ ಅಕಿಗೆ ತಾ ಮಾಡ್ಕೊಂಡ ಬರೋ ಮನಿ ಅಡಗಿ ಮ್ಯಾಲೆ ಸಹಿತ ಭರೋಸಾ ಇಲ್ಲಾ. ಹಿಂಗಾಗಿ ಅದ ಯಾವದೋ ನ್ಯೂಟ್ರಿಶನ್ ಡೈಟ್ ಚಾರ್ಟ್ ಫಾಲೋ ಮಾಡ್ತಾಳ. ಊಟದ ಹೊತ್ತಿನಾಗ ಬಿಸಿ ನೀರಾಗ ಪೌಡರ ಹಾಕ್ಕೊಂಡ ಹಗಲ ಹೊತ್ತಿನಾಗ ಬೀಯರ್ ಮಗ್ಗನಾಗ ಆಫೀಸನಾಗ ಕುಡ್ಕೋತ ಕೂತ ಬಿಡ್ತಾಳ. ನಾ ಎಷ್ಟ ಸಲಾ ನಂಬದ ಮಾರವಾಡಿ ಆಫೀಸವಾ ಬರೋ ಹೋಗರ ಏನ ಅನ್ಕೋತಾರ ಅಂತ ಹೇಳಿದರು ಕೇಳಂಗಿಲ್ಲಾ. ಹಂಗ ಅಕಿಗೆ ಕೆಲಸದ ಅವಶ್ಯಕತಾನ ಇಲ್ಲಾ, ಆದರ ಅಕಿ ದುಡಿಯೋದ ಈ ನ್ಯೂಟ್ರಿಶನ್ ಫೂಡ್ ಖರೀದಿ ಮಾಡ್ಲಿಕ್ಕೆ. ಯಾಕ ಅಂದರ ಅಕಿ ಗಂಡ ಸ್ಪಷ್ಟ ಹೇಳ್ಯಾನ
’ನಾ ಕಷ್ಟ ಪಟ್ಟ ದುಡಿಯೋದ ಹೆಂಡ್ತಿ-ಮಕ್ಕಳಿಗೆ ಹೊಟ್ಟಿ ತುಂಬ ಎರೆಡ ಹೊತ್ತ ಹೊಟ್ಟಿಗೆ ಹಾಕಲಿಕ್ಕೆ, ನಿನ್ನ ನ್ಯೂಟ್ರಿಶನ್ ಫೂಡಗೆ ಅಲ್ಲಾ’ ಅಂತ. ಏನ್ಮಾಡ್ತೀರಿ? ಈ ಡೈಟ್ ಮಾಡೊದ ಏನ ಹುಚ್ಚೋ ಇಲ್ಲಾ ಖರೇನ ನಾ ಹೇಳಿದಂಗ ಚಟಾನೂ ಆ ದೇವರಿಗೆ ಗೊತ್ತ.
ಅನ್ನಂಗ ನಾಳೆ ಶ್ರಾವಣ ಏಕಾದಶಿ ಯಾರರ ಡೈಟ್ ಮಾಡೋರ ಇದ್ದರ ಅದನ್ನ ಬಿಟ್ಟ ಏಕಾದಶಿ ಮಾಡ್ರಿ, ಹೆಲ್ತಿಗೂ ಛಲೋ ಮ್ಯಾಲೆ ಶ್ರಾವಣ ಏಕಾದಶಿ ಮಾಡಿದರ ಪುಣ್ಯಾನೂ ಬರ್ತದ.
ಭಾಳ ಚಂದ ಬರ್ದರಿ ನೋಡ್ರಿ ಅಂದಂಗ ಮತ್ತ ನೀವು ಏನರ್ ಡೈಎಟ ಸುರು ಮಾಡಿರೇನ್ರಿ