ಈ ಹದಿನೆಂಟು ವರ್ಷಗಳ ಅಷ್ಟಾದಶ ಪರ್ವಗಳು……….

ಇವತ್ತ ಮುಂಜಾನೆ ಏಳೊ ಪುರಸತ್ತ ಇಲ್ಲದ ಕಣ್ಣ ಕ್ಯಾಲೆಂಡರ್ ಮ್ಯಾಲೆ ಹೋತ, ಇವತ್ತ ನವೆಂಬರ್ ೧೭ ಅಂತ ಓದಿದ್ದ ತಡಾ ನನ್ನ ಹೆಂಡ್ತಿಗೆ
“ಲೇ..ಇವತ್ತೀಗೆ ೧೮ ವರ್ಷದ ಹಿಂದ ನಮ್ಮ ಮನ್ಯಾಗ ನನ್ನ ಮದವಿ ಸಂಬಂಧ ಸಜ್ಜಿಗೆ ಮುಹೂರ್ತ ಆಗಿತ್ತು” ಅಂತ ನಾ ಸಹಜ ಅಂದೆ.
“ಅಯ್ಯ..ಅವತ್ತ ನಿಮ್ಮ ಮನ್ಯಾಗ ಸಜ್ಜಗಿ ಮುಹೂರ್ತ ಮಾಡಿದ್ದ ತಪ್ಪಿಗೆ ನಮ್ಮ ಮನ್ಯಾಗ ನನಗ ಯಾ ಮುಹೂರ್ತದಾಗ ನಿಮಗ ಕಟ್ಟಿದರೋ ಏನೋ?” ಅಂತ ಮಾರಿ ತಿರವಿದ್ಲು. ಅಲ್ಲಾ ನಾ ಅಕಿಗೆ ನಮ್ಮ ಮನ್ಯಾಗಿನ ಸಜ್ಜಗಿ ಮುಹೂರ್ತ, ಸೋಡ ಮುಂಜವಿ, ದೇವರ ಊಟಕ್ಕ ಕರದಿದ್ದಿಲ್ಲಾ ಅಂತ ಇನ್ನೂ ಸಿಟ್ಟ ಅದ ಕಾಣ್ತದ.

ನಮ್ಮಲ್ಲೇ ಲಗ್ನ ಇನ್ನೇನ ಹತ್ತ- ಹನ್ನೆರಡ ದಿವಸ ಅದ ಅನ್ನೋ ಟೈಮ ಒಳಗ ಸಜ್ಜಗಿ ಮುಹೂರ್ತ ಅಂತ ಮಾಡಿ ಅವತ್ತಿನಿಂದ ಮದ್ವಿಗೆ ಸಂಬಂಧ ಪಟ್ಟ ಸಿಹಿ ಮಾಡೊ ಕಾರ್ಯಕ್ರಮ ಶುರು ಮಾಡ್ತಾರ. ಒಂಥರಾ ದಸರಾ ಖಂಡೇ ಪೂಜಾಕಿಂತ ಮೊದ್ಲ ಟಗರ್ ತಂದ ಮಾಲಿ ಹಾಕಿ ಪೂಜಾ ಮಾಡಿ ಸಿಹಿ ಊಟಾ ಮಾಡ್ತಾರಲಾ ಹಂಗ ಅನ್ನರಿ. ಮುಂದ ಖಂಡೆ ಪೂಜಾದ ದಿವಸ ಟಗರಿಂದ ಏನ ಗತಿ ಆಗ್ತದ ಅದ ಮುಂದ ಗಂಡಂದರಿಗೆ ಮದ್ವಿ ಆದಮ್ಯಾಲೆ ದಿವಸಾ ಆಕ್ಕೋತ ಇರ್ತದ ಆ ಮಾತ ಬ್ಯಾರೆ.
ಮುಂದ ಈ ಸಜ್ಜಗಿ ಮುಹೂರ್ತ ಮಾಡಿದ್ದರ ತಪ್ಪಿಗೆ ನವೆಂಬರ್ 28, 2000ಕ್ಕ inevitably ನನ್ನ ಮದ್ವಿ ಆತು. ಅಂದರ ನನ್ನ ಮದ್ವಿ ಆಗಿ ಬರೋ 28ಕ್ಕ ಹದಿನೆಂಟ ವರ್ಷ್ ಆಗತದ. ಈ ಹದಿನೆಂಟ ವರ್ಷ ಹೆಂಗ ಹೋತು ಅನ್ನೋದ ನನ್ನ ಹೆಂಡತಿಗೆ ಗೊತ್ತಾಗಿರಲಿಕ್ಕಿಲ್ಲಾ ಆದರ ನಾ ಹದಿನೆಂಟ ವರ್ಷ ಹೆಂಗ ಕಳದೇನಿ ಅನ್ನೊದ ಮಾತ್ರ ನನಗs ಗೊತ್ತ.
ನಾ ಮತ್ತ ನನ್ನ ಹೆಂಡತಿಗೆ
“ಲೇ…ಇನ್ನೊಂದ ಹತ್ತ ದಿವಸಕ್ಕ ನಮ್ಮ ಮದುವಿ ಆಗಿ ಹದಿನೆಂಟ ವರ್ಷ್ ಆಗ್ತದ, ಆದರ ಗೊತ್ತದ ಇಲ್ಲ ನಿನಗ” ಅಂತ ಕೇಳಿದರ
“ಅಯ್ಯ..ಅದನ್ನ ಹೆಂಗ ಮರಿಲಿಕ್ಕೆ ಆಗ್ತದರಿ….ನಿಮ್ಮನ್ನ ಗಂಟ ಹಾಕ್ಕೊಂಡ ಹದಿನೆಂಟ ವರ್ಷ ಹೆಂಗ ಸಂಸಾರ ಮಾಡೇನೋ ಏನೋ ಆ ಶ್ರೀಕೃಷ್ಣ ಪರಮಾತ್ಮಗ ಗೊತ್ತ……” ಅಂತ ಅಂದ್ಲು, ಹಂಗ ಅಕಿ ಮಾತೋಡದ ಕೇಳಿ ಬಿಟ್ಟರ ಏನ ಅಕಿ ಒಬ್ಬೋಕಿನ ಸಂಸಾರ ಮಾಡ್ಯಾಳ ಅನ್ನಬೇಕ.
ಏನ ಮಾಡ್ತೀರಿ? ಅಲ್ಲಾ, ಹದಿನೆಂಟ ವರ್ಷದಿಂದ ಇಬ್ಬರೂ ಕೂಡಿ ಇದ್ದೇವಿ ಅನ್ನೋದ ಏನ ಸಣ್ಣ ಅಚೀವಮೆಂಟ್? ಅಲ್ಲಾ ಹಂಗ ಹದಿನೆಂಟ ವರ್ಷದಾಗ ಬರೇ ಎರಡ ಹಡದಿರಬಹುದು ಆದರೂ ಜೊತಿಲೇ ಇನ್ನೂ ಇದ್ದೇವಿ ಅನ್ನೋದ ಏನ ಕಡಮಿನ?
ಅಲ್ಲಾ ಹಂಗ ಈ ಹದಿನೆಂಟಕ್ಕ ನಮ್ಮ ಪ್ರಾಚೀನ ಪುರಾಣದೊಳಗ ಭಾಳ ಇಂಪಾರ್ಟೆನ್ಸ್ ಅದರಿಪಾ.
ಹಿಂದ ನಮ್ಮಲ್ಲೇ ಇತಿಹಾಸದೊಳಗ ಅಷ್ಟಾದಶ (ಹದಿನೆಂಟ) ಮಹಾನ ಆಚಾರ್ಯರು ಇದ್ದರು, ಅಷ್ಟಾದಶ ಪುಣ್ಯ ನದಿಗಳು ಇದ್ವು, ಧರ್ಮಶಾಸ್ತ್ರಗಳ ಇರೋದ ಹದಿನೆಂಟ, ಅಷ್ಟಾದಶ ಆದರ್ಶ ಮಹಾರಾಜರು ಇದ್ದರು, ಅಷ್ಟಾದಶ ಪುರಾಣ ಇದ್ವು. ಇನ್ನ ಇವಕರ ಜೊತಿ ನಂದೊಂದ ಅಷ್ಟಾದಶ ಸಂಸಾರ…ಅಂದರ ಹದಿನೆಂಟ ಸಂಸಾರಲ್ಲ ಮತ್ತ. ಒಂದ ಸಂಸಾರ ಹದಿನೆಂಟ ವರ್ಷ ಹಳೇದ….and still continuing…ಅಲ್ಲಾ ಹಂಗ ಅಷ್ಟಾದಶ ಸಂಸಾರ ಅಂದ್ರು ತಪ್ಪಲ್ಲ ಬಿಡ್ರಿ..ನಾ ಹದಿನೆಂಟ ವರ್ಷದಾಗ ನನ್ನ ಹೆಂಡ್ತಿವು ಅಷ್ಟಾದಶ ಅವತಾರ ನೋಡಿ ಬಿಟ್ಟೇನಿ.
ನಾ ಇದನ್ನೇಲ್ಲಾ ನನ್ನ ಹೆಂಡತಿಗೆ ತಿಳಿಸಿ ಹೇಳಿ, ಮಹಾಭಾರತದಾಗ ಹದಿನೆಂಟಕ್ಕ ಎಷ್ಟ ಮಹತ್ವ ಅದ, ನಂಬದು ಇದ ಹದಿನೆಂಟನೇ ವರ್ಷಾ ಅಂತ ಅಕಿನ್ನ ಕರದ ಕೂಡಿಸಿ ಪುರಾಣ ಹೇಳಲಿಕ್ಕೆ ಶುರು ಮಾಡಿದೆ
“ನೋಡಿಲ್ಲೆ, ಮಹಾಭಾರತದಾಗ ಇದ್ದದ್ದ ಹದಿನೆಂಟ ಪರ್ವ, ಮಹಾಭಾರತ ಯುದ್ಧ ನಡದದ್ದ ಹದಿನೆಂಟ ದಿವಸ, ಭಗವದ್ಗಿತೆ ಒಳಗ ಇರೋದ ಹದಿನೆಂಟ ಅಧ್ಯಾಯ, ಮಹಾಭಾರತದ ಯುದ್ಧದೊಳಗ ಹದಿನೆಂಟ ಅಕ್ಷೋಹಿಣಿ ಸೈನ್ಯ ಇದ್ವು. ಕೃಷ್ಣ ಗೀತೋಪದೇಶ ಮಾಡಿದ್ದ ಹದಿನೆಂಟ ದಿವಸ…..” ಅಂತ ನಾ ಹೇಳೊದಕ್ಕ ಅಕಿ ನಡಕ ಬಾಯಿ ಹಾಕಿ
“ಅಯ್ಯ..ಸಾಕ ಸುಮ್ಮನಿರ್ರಿ.. ನಾನು ಹದಿನೆಂಟ ವರ್ಷದಿಂದ ನಿಮ್ಮ ಉಪದೇಶ ಕೇಳಲಿಕತ್ತೇನಿ…ಹಂಗ ಎಷ್ಟ ಪರ್ವ ಹೋದ್ವೋ ಏನೋ? ನಿಮ್ಮ ಅಧ್ಯಾಯ ಏನ ಮುಗಿವಲ್ತು” ಅಂತ ಅಂದ್ಲು.
“ಅಲ್ಲಲೇ………ಆ ಮಹಾಭಾರತದ ಹದಿನೆಂಟಕ್ಕೂ ಮತ್ತ ನಮ್ಮ ಸಾಂಸಾರಿಕ ಹದಿನೆಂಟಕ್ಕೂ ಎಷ್ಟ ಕಾಮನ್ ಅದ ನೋಡ…ಲಾಸ್ಟಿಗೆ ಮಹಾಭಾರತದ ಯುದ್ಧ ಮುಗದ ಮ್ಯಾಲೆ ಉಳದವರ ಸಹಿತ ಹದಿನೆಂಟ ಮಂದಿ ಅಂತ….ಹಂಗ ನಾ ನಿನ್ನ ಕಟಗೊಂಡ ಹದಿನೆಂಟ ವರ್ಷ ಆದ ಮ್ಯಾಲೆ ನಿನ್ನ ಸಂಬಂಧ ತಲಿ ಒಡ್ಕೊಂಡ ಒಡ್ಕೊಂಡ ನನ್ನ ತಲ್ಯಾಗ ಉಳದಿದ್ದ ಸಹಿತ ಹದಿನೆಂಟನೂರ ಕೂದಲಾ” ಅಂತ ನಾ ಅಂದೆ.
ಹಂಗ ಈ ಹೆದಿನೆಂಟರ ನೆಂಟ ನಮ್ಮ ಇತಿಹಾಸ, ಪರಂಪರೆಗೆ, ಮಹಾಭಾರತಕ್ಕ ಇರಬಹುದು ಆದರ ನನಗಂತೂ ಈ ಹದಿನೆಂಟ ವರ್ಷದ ಸಂಸಾರದ ನಂಟ ಜೀವನ ಕಗ್ಗಂಟ ಮಾಡಿ ಬಿಟ್ಟದ.
ನಾ ಅಕಿಗೆ ಮತ್ತ ತಲಿ ತಿನ್ನಲಿಕ್ಕೆ
“ಇನ್ನೊಂದ ಮಜಾ ಕೇಳಿಲ್ಲೇ, ಮಹಾಭಾರತದ ಯುದ್ಧದ ಅಕ್ಷೋಹಿಣಿ ಒಳಗ 21870 ರಥ ಸೇನೆ, 21870 ಆನೆ ಸೇನೆ ಇದ್ದವಂತ, 65610 ಕುದರಿ ಪಡೆ ಮತ್ತ 109350 ಸೈನಿಕರು ಇದ್ದರಂತ…ಇದರಾಗ ನೀ ಯಾವದನ್ನರ ಅಷ್ಟು ಸಂಖ್ಯೆ ಕೂಡಸಿ ನೋಡ 18 ಬರ್ತದ…..” ಅಂತ ನಾ ನನ್ನ ಪುರಾಣ ಕಂಟಿನ್ಯೂ ಮಾಡಿದೆ.
“ಆ ಹದಿನೆಂಟಕ್ಕ ನಮ್ಮ ಮದ್ವಿ ಆಗಿ ಹದಿನೆಂಟ ವರ್ಷಕ್ಕ ಏನ ಸಂಬಂಧ..ನೀವ ಸುಳ್ಳ-ಪಳ್ಳ ಸಂಬಂದಿಲ್ಲಾ ಸಾಟಿಲ್ಲಾ ಏನೇನರ ಹೇಳಬ್ಯಾಡ್ರಿ” ಅಂತ ಅಕಿ ತಂದ ರಾಗಾ ಕಂಟಿನ್ಯೂ ಮಾಡಿದ್ಲು
“ಲೇ…ಹುಚ್ಚಿ..ಅಲ್ಲೇ ಇರೋದ ಮಜಾ ಕೇಳಿಲ್ಲೆ…ನಮ್ಮ ಮದುವಿ ಆಗಿ 18 ವರ್ಷ್ ಆತ. ಅಂದರ 6570 ದಿವಸಾತ, ಇನ್ನ 6+5+7+0 ಕೂಡಿಸಿ ನೋಡ ಕರೆಕ್ಟ 18 ಆಗ್ತದ, ಇನ್ನ ಈ ಹದಿನಂಟ ವರ್ಷದಾಗ ನೀ ಆಷಾಡ ಮಾಸ, ಪುಷ್ಯ ಮಾಸ, ಎರೆಡೆರಡ ಡಿಲೇವರಿ, ಬಾಣಂತನ, ವರ್ಷಕ್ಕ ಎರಡ ಸರತೆ ಮಕ್ಕಳ ಸಾಲಿ ಸೂಟಿ, ನಿಮ್ಮ ಪೈಕಿ ಮುಂಜವಿ, ಮದ್ವಿ, ಕುಬಸ, ನಾಮಕರಣ, ಅವರ ಸತ್ತರು, ಇವರು ಹುಟ್ಟಿದರು ಅಂತ ತವರ ಮನಿಗೆ ಹೋಗಿದ್ದ 765 ದಿವಸ, ಇದನ್ನ ಕೂಡಸಿದ್ರು 18 ಆಗ್ತದ. ಹಿಂಗಾಗಿ ನಾ ಹೇಳಿದ್ದ ನಮಗು ಈ ಮಹಾಭಾರತಕ್ಕೂ ಭಾಳ ಸಂಬಂಧ ಅದ ಅಂತ” ಅಂತ ನಾ ಅಂದೆ. ಅಕಿ ಒಂದ ಸರತೆ ನನ್ನ ಲೆಕ್ಕಾ ಕೇಳಿ ತಲಿ ತಲಿ ಬಡ್ಕೊಂಡ್ಳು.
“ನೀಮಗೇನ ಬ್ಯಾರೆ ಕೆಲಸ ಇಲ್ಲೇನ್… ಇದನ್ನೇಲ್ಲಾ ಲೆಕ್ಕ ಇಟಗೊಂಡ ನೀವೇನ ಸಂಸಾರದ್ದ ಕೌಂಟ ಡೌನ್ ಶುರು ಮಾಡಿರೇನ?” ಅಂತ ನನಗ ಜೋರ ಮಾಡಿದ್ಲು.
“ಹಂಗ ಅಲ್ಲಲೇ.. ಹದಿನೆಂಟ ಪರ್ವಕ್ಕ ಮಹಾಭಾರತ ಮುಗದಹೋತ. ಆದರ ನಂಬದ ಇನ್ನೂ ಕಂಟಿನ್ಯು ಅದ. ನಂಬದ ಅದರಕಿಂತ ದೊಡ್ಡದು, ೧೦೮ ಪರ್ವ ಆದರು ಆಗಬಹುದು…ನೀ ಯಾಕ ಗಾಬರಿ ಆಗ್ತಿ” ಅಂತ ನಾ ಅಂದರ
“ವಳತ ಅನ್ನರಿ…..18ಕ್ಕ ಸಾಕ ಸಾಕಾಗಿ ಹೋಗೇದ, ಅಪ್ಪಿ ತಪ್ಪಿ ಎರಡ ಹಡದದ್ದಕ್ಕ ಆ ಮಕ್ಕಳದ ಒಂದ ಲಗ್ನಾ ಮಾಡಿ ಹೆಬ್ಬಳ್ಳಿ ಮಠ ಸೇರಬೇಕಂತ ಮಾಡೇನಿ” ಅಂದ್ಲು.
ಹಕ್ಕ..ಅಲ್ಲಾ, ಇಲ್ಲೇ ಅನಭವಸಲಿಕತ್ತಂವ ನಾ, ಹಂಗ ಖರೇ ಅಂದ್ರ ನಾ ಮಠಾ ಸೇರಬೇಕ ಅನ್ನೋಂವ ಇದ್ದೆ, ಮತ್ತ ಇಕಿನ ಸೇರ್ತಾಳ ಅಂದ್ರ ನಾ ಲೌಕಿಕ ಹಿಂಗ ಕಂಟಿನ್ಯೂ ಮಾಡ್ಕೋತ ಇದ್ದರಾತ ಬಿಡ್ರಿ.
ಇನ್ನೊಂದ ಮಜಾ ಕೇಳ್ರಿ ಇಲ್ಲೇ. ಇದನ್ನೇನ ನಾ ನನ್ನ ಹೆಂಡ್ತಿಗೆ ಹೇಳಿ ಮತ್ತ ಬೈಸಿಗೊಳ್ಳಿಕ್ಕೆ ಹೋಗಂಗಿಲ್ಲಾ. ಆದರ ನೀವ ಕೇಳ್ರಿ. ಇದ ಅಗದಿ ನನ್ನ ಸಂಸಾರಕ್ಕ ಹೊಂದೊ ವಿಷಯ.
ದೇವರು ಮತ್ತು ಅಸುರರ ನಡುವೆ ಏನ ಯುದ್ಧ ನಡದಿತ್ತಲಾ…ಅದ ಅಗದಿ ಕರೆಕ್ಟ ಹದಿನೆಂಟ ವರ್ಷ ನಡದಿತ್ತಂತ…ಅಂದರ ಈಗ ನನ್ನ ಸಂಸಾರದ ಯುದ್ಧ ನಡದನೂ ಕರೆಕ್ಟ ಹದಿನೆಂಟ ವರ್ಷಾತ…ಇನ್ನ ನಮ್ಮ ಸಂಸಾರದಾಗ ದೇವರ ಯಾರು ಅಸುರರ ಯಾರು ಅನ್ನೋದ ನಾ clarify ಮಾಡಲಿಕ್ಕೆ ಹೋಗಂಗಿಲ್ಲಾ….ಹಂಗ ನೀವೇಲ್ಲಾ ತಿಳದವರಿದ್ದಿರಿ ’ಪತಿಯೇ ಪರಮೇಶ್ವರ’ಅನ್ನೋದ ನಿಮಗೇಲ್ಲಾ ಗೊತ್ತದ.
ಇನ್ನ ರಾಮ ರಾವಣರ ಯುದ್ಧ ನಡದಿದ್ದ ಹದಿನೆಂಟ ತಿಂಗಳ ಅಂತ.
ಈಗ ನೀವ ಹೇಳ್ರಿ ,ಹದಿನೆಂಟ ದಿವಸದ್ದ ಮಹಾಭಾರತ ಯುದ್ಧ ದೊಡ್ಡದೊ, ಹದಿನೆಂಟ ತಿಂಗಳದ ರಾಮ ರಾವಣರ ಯುದ್ಧ ದೊಡ್ಡದೋ..ಹದಿನೆಂಟ ವರ್ಷದ ದೇವಾಸುರರ ಯುದ್ಧ ದೊಡ್ಡದೊ….ಇಲ್ಲಾ ನನ್ನ ಸಾಂಸಾರಿಕ ಸಂಗ್ರಾಮ ಹದಿನೆಂಟ ವರ್ಷದಿಂದ ನಡದದ್ದು ಮತ್ತ to be continued ಇರೋದ ದೊಡ್ಡದೊ?
ಇನ್ನ ಲಾಸ್ಟ 18ರದ ಅರ್ಥ ಒಂದ ಹೇಳಿ ಬಿಡ್ತೇನಿ…1- ಅನ್ನೋದ ದೇವರ ಒಬ್ಬನ ಅನ್ನೋದನ್ನ ಸೂಚಿಸ್ತದ, 8 – ನ್ನ ಉಲ್ಟಾ ಮಾಡಿದರ ಅದ infinity ಅಂದರ ಅನಂತ..ನಿರಂತರ ಅಂತ ಅರ್ಥ. ಅಂದರ ದೇವರು ಒಬ್ಬನೇ ಅವನು ಅನಂತ ..ನಿರಂತರ ಅನ್ನೋದನ್ನ 18 ಸೂಚಸ್ತದ.
ಹಂಗ ನನ್ನ ಪಾಲಿಗೆ ಸದ್ಯೇಕ ಹೆಂಡ್ತಿನೂ ಒಬ್ಬೋಕಿನ, ಅಕಿ ಅನಂತ ಮತ್ತ ನಿರಂತರ ಅಂತ ಅರ್ಥ.

2 thoughts on “ಈ ಹದಿನೆಂಟು ವರ್ಷಗಳ ಅಷ್ಟಾದಶ ಪರ್ವಗಳು……….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ