ಫೇಸಬುಕ್ ಬಂದ ಆಗತದ ಅಂತ. ಒಂದ ಎರಡ ವರ್ಷದ ಹಿಂದ ಮಾರ್ಚ ೧೫ ಕ್ಕ ಫೇಸಬುಕ್ ಬಂದ್ ಆಗತದ ಅಂತ ಇಂಟರನೇಟನಾಗ ಆರ್ಟಿಕಲ್ ಬರಲಿಕತ್ತಿದ್ವು. ನನಗಂತೂ ಓದಿ ಗಾಬರಿನ ಆಗಿತ್ತು. ಹಾರ್ಟ್ ಅಟ್ಯಾಕ ಆಗೋದ ಒಂದ ಬಾಕಿ ಇತ್ತ. ಆದರ ಅಷ್ಟರಾಗ ಯಾರೋ ಇದೆಲ್ಲಾ ’ರೂಮರ್’ ಅಂತ ಮೆಸೆಜ್ ಕೊಟ್ಟ ಪುಣ್ಯಾ ಕಟಗೊಂಡರು. ಮುಂದ ಮಾರ್ಚ ೧೫ ಬಂದ ಹೋತು ಆದರ ಫೇಸಬುಕ್ ಏನ ಬಂದಾಗಲಿಲ್ಲಾ. ನನಗ ಹೋಗಿದ್ದ ಜೀವಾ ಬಂದಂಗ ಆತು.
ಅಲ್ಲರೀ ಹಂಗ ಒಮ್ಮಿಂದೊಮ್ಮಿಲೆ ಕಾರಣ ಇಲ್ಲಾ ಕಂತ ಇಲ್ಲಾ ಫೇಸಬುಕ್ ಬಂದ ಅಂದರ ಹೆಂಗರಿ? ಅದನ್ನ ನೆಚ್ಚಿದವರದ ಮುಂದ ಗತಿ ಏನಂತ? ಅಲ್ಲಾ ದಿವಸಕ್ಕ ಆರ-ಏಳ ತಾಸ ಅದರ ಮುಂದ ಸಾಯೋರ ನಾವು, ಫೇಸಬುಕ್ ಬಂದ ಮಾಡಿದ್ರ ಮುಂದ ನಾವೆಲ್ಲಾ ಹೆಂಗ ಬದುಕಬೇಕು ಅಂತ ವಿಚಾರನೂ ಮಾಡಲಿಲ್ಲ ಅಂದರ ಹೆಂಗ ಅಂತೇನಿ? ನಮ್ಮ ಜೀವನದಾಗ ನಾವ ಹಚಗೊಂಡಿದ್ದ ಫೇಸಬುಕ್ ಮಂದಿನ್ನ ಇಷ್ಟ. ಇನ್ನ ಅದ ಬಂದ್ ಆದರ ನಾವ ಯಾರ ಜೊತಿ ನಮ್ಮ ಸುಖ-ದುಃಖ ಹಂಚಗೊಬೇಕ ಹೇಳ್ರಿ?
ಅಲ್ಲಾ, ಸತ್ತರ ಹೊರಲಿಕ್ಕ ಬೇಕಾಗೊ ನಾಲ್ಕ ಮಂದಿನ್ನು ನಾವ ಸಮಾಜದಾಗ ಹಚಗೊಂಡಿಲ್ಲಾ. ಇನ್ನ ಆ ನಾಲ್ಕ ಮಂದಿನ್ನ ಕರಿಬೇಕಂದರು ನಾವು ಫೇಸಬುಕ್ ಒಳಗ ಒಂದ ‘attend my funeral’ ಅಂತ event ಕ್ರಿಯೇಟ ಮಾಡಿ ಒಂದ ಸಾವಿರ ಮಂದೀಗೆ invitation ಕಳಿಸಿ ನಾಲ್ಕ ಮಂದಿ ’going’ ಅಂತ ಕನ್ಪರ್ಮ ಮಾಡಿದ ಮ್ಯಾಲೇ ಸಾಯಬೇಕು.
ಹಂಗ ಒಂದಿಷ್ಟ ಮಂದಿ ನಮ್ಮಇನ್ವೇಟೇಶನ ನೋಡಿ ’may be’ ಅಂತ ಅಡ್ಡ ಗೊಡೆ ಮ್ಯಾಲೆ ದೀಪಾ ಇಟ್ಟಂಗ ಹೇಳಿ ” thanks for invite, i am out of station, i will try ಅಂತ, Thanks, very tough to attend during week days. will definitely try next time ಅಂತ ಕೆಲವಬ್ಬರು, All the best to the event ! thanks, but i am not sure….ಅಂತ ಒಂದಿಷ್ಟ ಮಂದಿ, pls tell me exact time and venue” ಅಂತ ಇನ್ನೊಂದಿಷ್ಟ ಮಂದಿ ನಮ್ಮ invitationಗೆ like ಮಾಡಿ comment ಮಾಡ್ತಾರ.
ಇನ್ನ ಒಟ್ಟ facebook ಬಿಟ್ಟ ಏಳಲಿಕ್ಕಾಗಲಾರದವರಂತೂ invitation ಡೈರೆಕ್ಟ್ decline ಮಾಡಿ ’ funeral ದ live streaming ಮಾಡಿ ಫೇಸಬುಕ್ ಒಳಗ ಲಿಂಕ ಕೊಡ್ರಿ ನಾವ ಇಲ್ಲೆ ಕೂತ ನೋಡ್ತೇವಿ’ ಅಂತಾರ. ಹಿಂಗ ನಾವು ಸಾಯಬೇಕಾರೂ ನಮ್ಮ ಫೇಸಬುಕ್ friends ದ ಅನಕೂಲ – ಅನಾನಕೂಲ ನೋಡ್ಕೊಂಡ ಸಾಯಿಬೇಕು.
ಇನ್ನ ಹಿಂತಾದರಾಗ ನಾಳೆ ಫೇಸಬುಕ್ ಬಂದ ಆತಂದ್ರ ನಮ್ಮನ್ನ ಹೊರಲಿಕ್ಕೆ ನಾಲ್ಕ ಮಂದಿನ್ನೂ ನಾವ ಪೇಪರನಾಗ ಅಡ್ವರ್ಟೈಸಮೆಂಟ್ ಕೊಟ್ಟ ಕರಸಬೇಕಾಗತದ. ಅಲ್ಲಾ, ನಮಗ ಫೇಸಬುಕ್ ಫ್ರೆಂಡ್ಸ ಬಿಟ್ಟರ ಮತ್ತ ಯಾರಿದ್ದಾರ ನೀವ ಹೇಳ್ರಿ? ಹಂಗ ಫೇಸಬುಕ್ ಬಂದ್ ಮಾಡಬೇಕಾರ ನಮ್ಮಂತಾವರ ಒಂದ ನಾಲ್ಕ-ಐದ ಮಂದಿನ ಕೇಳೆರ ಡಿಸೈಡ ಮಾಡಬೇಕ ಬಿಡ್ರಿ. ಅದಕ್ಕೂ ಮೀರಿ ಹಂಗ ಏನರ ಫೇಸಬುಕ್ ಬಂದ ಆದರ ನಾ ಕೋರ್ಟಿಗೆ ಹೋಗ್ತೇನಿ ಆ ಮಾತ ಬ್ಯಾರೆ, ಫೇಸಬುಕ್ ಸಂಬಂಧ ಇಷ್ಟು ಮಾಡಲಿಲ್ಲಾ ಅಂದರ ಹೆಂಗರಿ.
ನನ್ನ ಹೆಂಡ್ತಿಗೂ ಯಾರೋ ಫೇಸಬುಕ್ ಬಂದ ಆಗ್ತದ ಅಂತ ಹೇಳಿದ್ರಂತ, ಅಕಿ ಅಗ್ದೀ ಖುಷಿಲೇ
“ರ್ರೀ, ನಾಳೆ ಸಂಡೆ ಶಿರ್ಶಿಗೆ ಹೋಗಿ ಮಾರಿಕಾಂಬಾಗ ಕಾಯಿ ಒಡಿಸಿಕೊಂಡ, ಉಡಿತುಂಬಿ ಬರೋಣ್ರೀ” ಅಂದ್ಲು,
” ಯಾಕವಾ ಮಗಳ ಹುಟ್ಟಿದಾಗ ಒಡಸೆವೆಲಾ,ಈಗ ಮತ್ತ ಏನರ ಹಡಿಯೋಕಿ ಇದ್ದಿ ಏನು?” ಅಂದೆ
” ಏ…ಎಲ್ಲಿದರಿ, ನಂದ ಅಕೌಂಟ ಕ್ಲೋಸ್ ಆಗಿ ಮೂರ ವರ್ಷ ಆತು. ಈಗ ಉಳದಿರೋದು ಆ ನಿಮ್ಮ ಸುಡಗಾಡ ಫೇಸಬುಕ್ ಅಕೌಂಟ ಒಂದ, ಆ facebook ಬಂದ ಅತಂದ್ರ ಕಾಯಿ ಒಡಸ್ತೇನಿ ಅಂತ ಹೋದ ಸರತೆ ಶಿರಸಿಗೆ ಹೋದಾಗ ಬೇಡ್ಕೊಂಡ ಬಂದಿದ್ದೆ ಅದಕ್ಕ ” ಅಂದ್ಲು
” ಲೇ, ಹುಚ್ಚಿ ಹಂಗ ಫೇಸಬುಕ್ ಅಕೌಂಟ್ ಬಂದ್ ಆದ್ರ ಹೆಂಗಲೇ? ಜೀವನದಾಗ ಸಂಸಾರ ಮರತ ದಿವಸಕ್ಕ ಒಂದ-ಎರಡ ತಾಸ ಫೇಸಬುಕ್ ಮುಂದ ನೆಮ್ಮದಿಯಿಂದ ಕೂಡ್ತೇವಿ. ಅದೇನರ ಬಂದ ಆದ್ರ ಹುಚ್ಚ ಹಿಡದ ಸತ್ತ ಹೋಗ್ತೇವಿ. ಸುಮ್ಮನ ಯಾರದರ ಮಾತ ಕೇಳ್ಕೊಂಡ ಏನರ ಅಡ್ಡಬಾಯಿ ಹಾಕಬ್ಯಾಡ, ಫೇಸಬುಕ್ ಏನ ಬಂದ ಆಗಂಗಿಲ್ಲಾ ಹೋಗ ” ಅಂತ ಬೈದ ಕಳಿಸಿದೆ.
ಇದ ನನ್ನ ಹೆಂಡತಿ ಒಂದ ಸ್ವಲ್ಪ ದಿವಸದ ಹಿಂದ ಅಕಿ ತಮ್ಮಗ ಒಂದ ಧಾರವಾಡ ಕನ್ಯಾ ಬಂದಾಗ
“ರ್ರಿ..ಯಾಕೋ ಹುಡಗಿ ಫೋಟೊದಾಗ ಒಂದ ಸ್ವಲ್ಪ ದಪ್ಪ ಅನಸ್ತಳಾ, ಒಂದ ಸರತೆ ಈಕಿ ಫೇಸಬುಕ್ ಅಕೌಂಟನಾಗ ಇಕಿವು ಬ್ಯಾರೆ ಫೋಟೊ ಅವ ಏನ ನೋಡ್ರಿ, ಹೆಂಗಿದ್ದರೂ ಸಾಫ್ಟವೇರ ಹುಡಗಿ, ಫೇಸಬುಕ್ ನಾಗ ಇದ್ದ ಇರತಾಳ” ಅಂತ ನನಗ ಗಂಟ ಬಿದ್ದಿದ್ದಳು.
ಪಾಪ, ಹೆಣ್ಣಿನವರು ನಮಗ ಫೊಟೊ, ಕುಂಡ್ಲಿ ಎರಡು ಕೊಟ್ಟಿದ್ದರು. ಕುಂಡ್ಲಿ ಕೊಡಿಸಿ ನೋಡಿದ ಮ್ಯಾಲೆ ಕುಂಡ್ಲಿನು ಕೂಡಿ ಬಂದಿತ್ತು, ಫೋಟೊನೂ ಅಡ್ಡಿಯಿದ್ದಿದ್ದಿಲ್ಲಾ ಆದರ ಹುಡಗಿ ಒಂದ ಸ್ವಲ್ಪ ದಪ್ಪ ಇದ್ದಾಳ ಅನಸ್ತಿತ್ತು. ಆದರ ಈ ಕನ್ಯಾದವರು ಕುಂಡ್ಲಿ ಜೊತಿ ಕೊಡೊ ಫೋಟೊಕ್ಕೂ ಆ ಹುಡಗಿ ಹಕಿಕತ್ ನಾಗ ಇರೊದಕ್ಕೂ ಭಾಳ ಫರಕ ಇರತದ ಬಿಡ್ರಿ. ಹಂಗ ಬರೆ ಫೋಟೊ ಒಂದs ನೋಡಿ ನನ್ನಂಗ ಫಸಗಿ ಬೀಳಬಾರದು. ನನ್ನ ಹೆಂಡತಿ ಹೇಳೋದು ಖರೇನ, ಒಂದ ಸರತೆ ಆ ಹುಡುಗಿ ಫೇಸಬುಕ್ ಅಕೌಂಟನಾಗ ಅಕಿವು ಬ್ಯಾರೆ ಫೋಟೊ ನೋಡಿ ಬಿಡೋಣ ಅಂತ ಹುಡುಗಿ ಹೆಸರ ಫೇಸಬುಕನಾಗ ಸರ್ಚ ಮಾಡಿದೆ, ಸಿಕ್ಕಳೂ. ಅಕಿ ಹೆಸರು, ಊರು ಧಾರವಾಡ, ಕಲತದ್ದ ಕೆ.ಇ.ಬೋರ್ಡ್ಸ ಅಂತ ಎಲ್ಲಾ ಕನಫರ್ಮ ಆತು, ಆದರ ನನ್ನ ಕೈಯಾಗಿನ ಫೋಟೊಕ್ಕೂ ಫೇಸಬುಕನಾಗಿನ ಫೋಟೊಕ್ಕೂ ಭಾಳ ಫರಕ ಇತ್ತ. ಬಹುಶಃ ಹುಡಗಿ ಅವರವ್ವಂದ ಇಲ್ಲಾ ಅವರಕ್ಕಂದ ಫೋಟೊ ಹಾಕಿರಬೇಕ ಫೇಸಬುಕನಾಗ ಅಂತ ಅನಸೊ ಹಂಗ ಇತ್ತ. ಅದರಾಗ photo gallery ಒಳಗ ಇದ್ವಲಾ ಅಕಿವು ಉಳದ ಫೋಟೊ, ಐಯ್ಯಯ್ಯ……..ಅಗದಿ ಮಾಯಾವತಿ ಪಾರ್ಟಿ ಸಿಂಬಾಲ್ ಆಗಿದ್ಲು. ಹುಡುಗಿ ಅಗ್ದಿ ಅನಾಹುತ ಇದ್ಲ. ನಾ ನನ್ನ ಹೆಂಡತಿ ತಮ್ಮಗ ಫೇಸಬುಕ್ ಲಿಂಕ ಕಳಸಿ
” ನೋಡಪಾ ಹುಡಗಿ ಖರೇ ಇರೋದ ಹಿಂಗ, ಆದ್ರೂ ನೀ ಹೂಂ ಅಂದರ ಹುಡಗಿನ್ನ ಕರಿಸಿ ತೋರಸ್ತೇವಿ. ಮುಂದಿಂದ ರಿಸ್ಕ ನಿಂದ. ’ಮೊದ್ಲ ಲಗ್ನಾ ಮಾಡ್ಕೊಂಡ ಮ್ಯಾಲೆ ಹೆಂಡತಿನ್ನ ಸಾಕೋದ ಅಂದರ ಆನೆ ಸಾಕಿದಂಗ’, ಹಂಗಂತ ಹೇಳಿ ಆನೆನ್ನ ಲಗ್ನಾ ಮಾಡ್ಕೊಳ್ಳಿಕ್ಕೆ ಬರಂಗಿಲ್ಲಾ. ನೀ ಎಲ್ಲಾ ತಿಳದಂವಾ ಇದ್ದಿ, ಅಗದಿ ತೆಳ್ಳನ ನಿಮ್ಮಕ್ಕನ ನನ್ನ ಮದುವಿ ಆಗಿ ಎರಡ ಹಡದ ಮ್ಯಾಲೆ ಆನೆ ಮರಿ ಆಗಿದ್ದ ನಿನಗ ಗೊತ್ತದ, ಇನ್ನ ನೀ ಆನೆ ಮರಿನ ಮದುವಿ ಆಗ್ತೇನಿ ಅಂದ್ರ ನಿನ್ನ ಇಷ್ಟ. ಅಕಿದ ಫೇಸಬುಕ್ ನಾಗಿಂದ ಸಣ್ಣ profile photo ನಿನ್ನ ಫೇಸಬುಕ್ cover page ಸೈಜ ಅದ ಅಂದರ ಹುಡುಗಿ ಎಷ್ಟ ದಪ್ಪ ಇದ್ದಾಳ ಅಂತ ತಿಳ್ಕೊ. ಮುಂದ ಜೀವನದಾಗ ಅಕಿ ಭಾರ ಹೋರೊಂವಾ ನೀನ ಮತ್ತ ” ಅಂತ ಹೇಳಿದೆ.
ಅಂವಾ ಆ ಲಿಂಕನಾಗಿನ ಫೋಟೊ ನೋಡಿ ಕನ್ಯಾ ತೋರಸೋದ ಏನ ಬ್ಯಾಡಾ, ಅವರಿಗೆ ಕುಂಡ್ಲೀನ ಕೂಡಿ ಬಂದಿಲ್ಲಾ ಅಂತ ಹೇಳಿ ಬಿಡ್ರಿ ಅಂದಾ. ಹಂಗ ಲಗ್ನಾ ಮಾಡ್ಕೊಬೇಕಂದರ ಬರೆ ಕುಂಡ್ಲಿ ಕೂಡಿದರ ನಡೆಂಗಿಲ್ಲರಿ, ಅದರ ತಕ್ಕ ಬಾಕಿ ಎಲ್ಲಾ ಕೂಡಬೇಕಲಾ. ಏನ ಮಾಡ್ತೀರಿ ಈ ಫೇಸಬುಕ್ ಇದ್ದಿದ್ದಿಲ್ಲಾಂದ್ರ ನಮಗ ಕನ್ಯಾದವರದ ಒಳಗಿಂದ ದೊಡ್ಡ ಗಾತ್ರದ ಹಕಿಕತ್ ಗೊತ್ತಾಗತ್ತಿದ್ದಿಲ್ಲಾ. thanks to facebook, ಇನ್ನ ಹಿಂತಾದರಾಗ ಅಕಸ್ಮಾತ ಏನರ ಫೇಸಬುಕ್ ಬಂದ್ ಆಗಿಬಿಟ್ಟರ, ನಮ್ಮ ಜೀವನನ ಬಂದ್ ಆಗ್ತದ. ನಾ ಅಂತೂ long live facebook ಅಂತ ದೇವರಿಗೆ ಬೇಡ್ಕೋಂಡ ದಿವಸಾ ಫೇಸಬುಕಗೆ ಒಂದ ಸರತೆ ಪೂಜಾ ಮಾಡಿನ ನನ್ನ ಅಕೌಂಟ್ ಒಪನ್ ಮಾಡೋದು.
ನನ್ನ ಪ್ರಕಾರ ಯಾರದರ ಆಗಲಿ, ಮದುವಿ ಗೊತ್ತಾದ ಮ್ಯಾಲೆ ಒಂದ ಸರತೆ ನಿಮ್ಮ ಹುಡುಗಾ- ಇಲ್ಲಾ ಹುಡುಗಿ photo ಫೇಸಬುಕ್ ನಾಗ ಹಾಕಿ i am engaged ಅಂತ status message ಹಾಕೋದ ಛಲೋ. ಅಕಸ್ಮಾತ ಯಾರಿಗರ ನಿಮ್ಮ fiancee ಇತಿಹಾಸದ ಬಗ್ಗೆ ಏನರ ಗೊತ್ತಿದ್ದರ ಒಂದ comment ರ ಮಾಡತಾರ ಇಲ್ಲಾ personal ಆಗಿ message ರ ಕಳಸ್ತಾರ. ಮದುವಿಕಿಂತ ಮುಂಚೆ ಹುಡುಗಿ ಬಗ್ಗೆ ಒಂದ ನಾಲ್ಕ ಮಂದಿಗೆ ಕೇಳಬೇಕು ಅಂತಾರಲಾ ಹಂಗ ಇದು. ಈಗಿನ ಕಾಲದಾಗ, ಮಂದಿನ್ನ ” ಆ ಹುಡುಗಿ ಹೆಂಗ, ಅವರ ಮನೆತನ ಹೆಂಗ ” ಅಂತೇಲ್ಲಾ ಕೇಳಿ ಲಗ್ನಾ ಮಾಡ್ಕೋಳಿಕ್ಕೆ time ಇರಂಗಿಲ್ಲಾ. ಏನಿದ್ದರು ’ ಚಟ್ ಮಂಗನಿ ಪಟ್ ಬ್ಯಾಹ್’. ಅದಕ್ಕ ಒಂದ ಸರತೆ ಫೇಸಬುಕನಾಗ photo ಹಾಕಿ ಯಾರದರ ಏನರ objection ಅವ ಏನ ಅಂತ ಮೊದ್ಲ ತಿಳ್ಕೋಳ್ಳೊದು ಛಲೊ ಅಂತ ನನಗ ಅನಸ್ತದ. ಆಮ್ಯಾಲೆ, ಲಗ್ನಾಗಿ facebook ನಾಗ marriage photo ಹಾಕಿದಾಗ ಯಾರರ ” ಇಕೀನ ನಿನ್ನ ಹೆಂಡತಿ, ನಾ ಒಂದೆರಡ ಸರತೆ ಇಕಿನ್ನ ಬೆಂಗಳೂರ pub ನಾಗ ನೋಡಿದ್ದೆ ” ಅಂತ comment ಬರದರ ನಮ್ಮ ಮನಸ್ಸಿಗೂ ಸಮಾಧಾನ ಇರಂಗಿಲ್ಲಾ. ಈಗ ನಾವು ಯಾವದರ property ಖರೀದಿ ಮಾಡಬೇಕಾರ ಒಂದ ಸರತೆ paper ನಾಗ advertisement ಕೊಟ್ಟ ಆಮ್ಯಾಲೆ registration ಮಾಡಸ್ತೇವೆಲ್ಲಾ, ಹಂಗ ನಾವು facebook ನಾಗ advertisement ಕೊಡೋದು ಛಲೊ. ಇನ್ನೊಂದ ಸ್ವಲ್ಪ ದಿವಸಕ್ಕ ಫೇಸಬುಕನಾಗಿನ announcement ಸಹಿತ court ನಾಗ valid ಆಗತದ ಆ ಮಾತ ಬ್ಯಾರೆ, ಆವಾಗ court ನವರು ಎಲ್ಲಾ ವ್ಯವಹಾರಕ್ಕೂ ಮೊದ್ಲ ಫೇಸಬುಕನಾಗ ಅದರ ಬಗ್ಗೆ status message ಹಾಕರಿ, ಆಮ್ಯಾಲೆ ಏಳ ದಿವಸ ಬಿಟ್ಟ ಬಂದ ಏನು objection ಬಂದಿಲ್ಲಾ ಅಂದರ registration ಮಾಡಸರಿ ಅಂತ ಅಂದರು ಅಂದರ. ಆವಾಗ ಅದ ಒಂಥರಾ facebook affidavit ಇದ್ದಂಗ ಅನ್ರಿ.
ಅಲ್ಲಾ, ಇಷ್ಟೇಲ್ಲಾ facebook ಛಲೋ ಅಂತ ಗೊತ್ತಿದ್ದರೂ ನನ್ನ ಹೆಂಡತಿ ಮಾತ್ರ ಇವತ್ತೂ ನಾ ಫೇಸಬುಕ್ ಮುಂದ ಕೂತಾಗ ಒಮ್ಮೆ
” ಹೆಣಾ ಎತ್ತಲಿ, ಮನಿಗೆ ಬಂದ ಕೂಡಲೇನ ಆ ಸುಡಗಾಡ ಫೇಸಬುಕ್ ಹಿಡಕೊಂಡ ಕೂತ ಬಿಡ್ತಾರ, ಮನ್ಯಾಗ ಹೆಂಡ್ರ ಬ್ಯಾಡಾ, ಮಕ್ಕಳ ಬ್ಯಾಡಾ ” ಅಂತ ಒಂದ ಹತ್ತ ಸರತೆ ಅಂದ, ಕಡಿಕೆ “ಏನರ ಹಾಳ ಗುಂಡಿ ಬೀಳರಿ” ಅಂತ ಸುಮ್ಮನ ಬಿಟ್ಟ ಬಿಡತಾಳ. ಅಕಿ ಹೆಣಾ ಎತ್ತಲಿ ಅಂತ ನನಗ ಅಂತಾಳೊ ಇಲ್ಲಾ ಫೇಸಬುಕಗೆ ಅಂತಾಳೊ ಅಂತ ನನಗ ತಲಿ ಕೆಡಸಿಗೊಳ್ಳಿಕ್ಕೂ ಫೇಸಬುಕ್ ಮುಂದ ಕುತಾಗ ಟೈಮ ಇರಂಗಿಲ್ಲಾ, ಹಿಂಗಾಗಿ ಇವತ್ತಿಗೂ ನಾ ಇಬ್ಬರನೂ ಮೆಂಟೇನ್ ಮಾಡಲಿಕತ್ತೇನಿ, ಇಲ್ಲಾಂದರ ನನ್ನ ಹೆಂಡತೀನ ಇಷ್ಟೋತ್ತಿಗೆ ತವರಮನಿಗೆ ಕಳಿಸಿ ಫೇಸಬುಕ್ ನಾಗ ’bachelor again’ ಅಂತ status message ಹಾಕಿ ಬಿಡತಿದ್ದೆ. ಅಲ್ಲಾ ನಾ ಹಂಗ status message ಹಾಕಿದರ ಅದನ್ನೂ ಒಂದ ನೂರ ಮಂದಿ congrats ಅಂತ ಅಂದ like ಮಾಡ್ತಾರ, ಅವನೌನ ಏನ್ ಅಗ್ದಿ ನನ್ನ ಹೆಂಡತಿ ಅವರಿಗೂ ಬ್ಯಾಸರ ಆದವರಗತೆ.
ಆದರ ಯಾಕೋ ಇತ್ತೀಚಿಗೆ ನನ್ನ ಹೆಂಡತಿನೂ ಬಂದ ಬಂದ ನಾ ಫೇಸಬುಕ ಮುಂದ ಕೂತಾಗ ತನ್ನ ’ಫೇಸ್’ ತುರಕಲಿಕತ್ತಾಳ. ಮೊನ್ನೆ ಒಂದ ಸರತೆ ಹಿಂಗ ನಡಕ ತಲಿ ಹಾಕಿದಾಗ
“ನಿನಗ ಇದರಾಗ ಏನ ತಿಳಿತದ ಅಂತ ತಲಿ ಹಾಕತಿ, ಸುಮ್ಮನ ಮಕ್ಕಳ ಸಾಲಿ ಬುಕ್ ತೊಗೊಂಡ ಅವರಿಗೆ ಅಭ್ಯಾಸ ಮಾಡಸ ಹೋಗ, ಪರೀಕ್ಷಾ ಹತ್ತರ ಬಂದದ” ಅಂತ ನಾ ಜೋರ ಮಾಡಿದೆ
“ರ್ರೀ,ನಂಗೊತ್ತದ. ನೀವು ಸುಮ್ಮನಿರ್ರೀ… ಈ ಸುಡಗಾಡ ಫೇಸಬುಕ wall ಮ್ಯಾಲೆ ಹೊಲಸೊಲಸ ಚಿತ್ರ ಬರತಾವ ಅಂತ ಅದಕ್ಕ ನೋಡಿದೆ” ಅಂದ್ಲು.
“ಲೇ, ಎರಡ ಮಕ್ಕಳಾಗ್ಯಾವ, ತಿಳಿತದ ಇಲ್ಲೋ, ಇನ್ನೂ ಏನ ಅಸಂಯ್ಯ-ಅಸಂಯ್ಯ ಚಿತ್ರಾ ನೋಡ್ತಿ ” ಅಂದೆ.
“ರ್ರೀ, ನೀವ ಏನರ ಹಂತಾವ ನೋಡ್ಲಿಕತ್ತಿರೇನ ಅಂತ ನೋಡಿದೆ. ಹಂತಾವೆಲ್ಲಾ ನೋಡಲಿಕ್ಕೆ ನಂಗೇನ ಹುಚ್ಚ ಹಿಡದದ ಏನ? ಎದಿ ಉದ್ದ ಮಕ್ಕಳಾದರೂ ಹಿಂತಾವೆಲ್ಲಾ ಮಂಗ್ಯಾನಾಟಾ ಮಾಡೋರು ನೀವ, ಗಂಡಸರು” ಅಂತ ತನ್ನ ಗಲ್ಲಾ ಕೆಂಪ ಮಾಡ್ಕೊಂಡ ನನ್ನ ಮಾರಿ ತಿವಿದ ಹೋದ್ಲು. ಪಾಪ ಅಕಿ ಇಷ್ಟ ದಿವಸ ಫೇಸಬುಕ್ ಅಂದರ ಬರೆ ಫೇಸಿಯಲ್ activity ಇಷ್ಟ ಇರತಾವ ಅಂತ ತಿಳ್ಕೊಂಡಿದ್ಲು. ಅಕಿಗೆ ಯಾರೋ ಫೇಸಬುಕನಾಗ ಅಶ್ಲೀಲ video / picture tag ಮಾಡೊದರ ಬಗ್ಗೆ ಹೇಳ್ಯಾರ, ಅವಾಗಿಂದ ಭಾಳ ತಲಿ ಕೆಡಿಸಿಕೊಂಡ ನಾ ಏನರ ಹಂತಾವ like ಮಾಡ್ತೇನಿ, ಇಲ್ಲಾ ಯಾರಿಗರ ಹಂತಾವ ಕಳಿಸಿ poke ಮಾಡ್ಲಿಕತ್ತೇನಿನೂ ಅಂತ ನೋಡತಿರ್ತಾಳ.
ಅದರಾಗ ಹೋದವಾರ ಅಕಿ ಕಸೀನ ಒಬ್ಬೊಕಿ ಹುಬ್ಬಳ್ಳಿಗೆ ಬಂದಾಗ ನನ್ನ ಹೆಂಡತಿಗೆ
“ಮಾಮಾ ಫೇಸಬುಕನಾಗ ಹೆಂತಾ ಅಸಂಯ್ಯ-ಅಸಂಯ್ಯ ವೀಡೀಯೋ ಕಳಸ್ತಾರವಾ, ನೀ ಏನ ಅನ್ನಂಗಿಲ್ಲೆನ?” ಅಂತ ಕೇಳಿ ಹೋಗ್ಯಾಳ, ಅವಾಗಿಂದ ನನ್ನ ಹೆಂಡತಿ ತಲ್ಯಾಗ ಹೊಸ-ಹೊಸಾ notification ಬರಲಿಕತ್ತಾವ.
“ಅಲ್ಲಾವಾ, ಅದು ನಾ ಕಳಿಸಿದ್ದಲ್ಲಾ, ಅದಕ್ಕ spam video ಅಂತಾರ. ಅದು virus ಇದ್ದಂಗ ,ಅಟೋಮೆಟಿಕ್ ನನಗೂ ಗೊತ್ತಾಗಲಾರದ ನನ್ನ ಅಕೌಂಟನಿಂದ ಎಲ್ಲಾ ಫೇಸಬುಕ್ ಫ್ರೆಂಡ್ಸಗೆ ಹೋಗ್ತದ” ಅಂತ ಎಷ್ಟ ತಿಳಿಸಿ ಹೇಳಿದರು ತಿಳಿವಲ್ತು.
“ಅಲ್ರಿ. ಬುದ್ಧಿ ಎಲ್ಲೆ ಇಟ್ಟೀರಿ, ಮಕ್ಕಳಾಗಿ ಮುದಕರಾದ್ರಿ, ಅದರಾಗ ಪಾಪ ಅಕಿದು ಮೊನ್ನೆ-ಮೊನ್ನೆನ ಮದುವಿ ಆಗೇದ, ಅಕಿ ಗಂಡಾ ಅದನ್ನ ನೋಡಿದ್ರ ಏನ ತಿಳ್ಕೊಬೇಕು ನಿಮ್ಮ ಬಗ್ಗೆ?” ಅಂತ ಅಂದ್ಲು.
ನಂದು ತಲಿ ಕೆಡ್ತ “ಲೇ…ನೀ ಏನ್ ಕಾಳಜಿ ಮಾಡಬ್ಯಾಡಾ, ನನ್ನ ವೀಡೀಯೋ ಅಕಿ ಗಂಡಗೂ ಹೋಗೇದ. ಅಂವಾ ಅದನ್ನ like ಮಾಡಿ ಮತ್ತ ತನ್ನ wall ಮ್ಯಾಲೆ share ಮಾಡ್ಯಾನ. ನೀ ಯಾಕ ತಲಿ ಕೆಡಿಸಿಗೋತಿ ತೊಗೊ” ಅಂತ ಅಂದೆ. ಅಕಿ ನನ್ನ ಮಾರಿ ಒಮ್ಮೆ ನೋಡಿ
“ಆ ಫೇಸಬುಕ್, ಅದರಾಗಿನ ನಿಮ್ಮ ಅಕೌಂಟ್, ನಿಮ್ಮ ಫೇಸಬುಕ್ friends, ಎಲ್ಲಾರನೂ ಒಂದ ಸರತೆ ಸುಟ್ಟ ಬರ್ತೇನಿ ” ಅಂದ್ಲು.
ಏನೋ ಪುಣ್ಯಾ ನನ್ನ ಸುಟ್ಟ ಬರ್ತೆನಿ ಅನ್ನಲಿಲ್ಲಾ ಅಂತ ಸುಮ್ಮನಾದೆ. ಅಲ್ಲಾ, ಯಾರೋ ಮಂದಿ ಸುಮ್ಮ-ಸುಮ್ಮನ ನನ್ನ ಹೆಸರಿಲೆ ಹೊಲಸ ವಿಡೀಯೋ ಕಳಸಿದರ ನಾ ಏನ ಮಾಡ್ಬೇಕರಿಪಾ? ಅಲ್ಲಾ ಆ ವೀಡೀಯೋದಾಗ ಏನ್ ನಾ ಇದ್ದೇನ ನಂದ ವಿಡೀಯೋ ಅನ್ನಲಿಕ್ಕೆ? ನನ್ನ ಹೆಂಡತಿಗೆ ಈ ಫೇಸಬುಕ್ ಬಗ್ಗೆ ಒಂದು ತಿಳಿಯಂಗಿಲ್ಲಾ- ಬಿಡಂಗಿಲ್ಲಾ ಸುಳ್ಳ ಸುಳ್ಳ ನಮ್ಮ ಜೀವಾ ತಿಂತಾಳ.
ಇರಲಿ ಅಕಿ ಸ್ವಭಾವನ ಹಂಗ ಅಕಿ ಮಾತ ನೀವೇನ್ ಸಿರಿಯಸ್ ತೊಗೊಬ್ಯಾಡರಿ. ಅಕಸ್ಮಾತ ನೀವ ಯಾರರ ಫೇಸಬುಕ್ ಒಳಗ ಇಲ್ಲಾಂದರ ಲಗೂನ ಒಂದ facebook account ಒಪನ್ ಮಾಡಿಬಿಡರಿ. ನಾಳೆ ಆಧಾರ card ಮಾಡಸಬೇಕಾರ facebook account ಕೇಳ್ತಾರಂತ ನೋಡ್ರಿ. ಅಲ್ಲಾ, ಹಂಗ ಆಧಾರ card ಬಂದ್ ಆದರು facebook ಏನ ಬಂದ ಆಗಂಗಿಲ್ಲಾ ಮತ್ತ.
ಹಂಗ ನನ್ನ ಪ್ರಹಸನ ಓದಿ ಬರೆ like ಮಾಡಿ ಸುಮ್ಮನ ಕುತಗೋ ಬ್ಯಾಡರಿ, comment ಬರದ ಬ್ಯಾರೆವರ ಜೊತಿಗೆ share ಮಾಡೊದನ್ನು ಮರಿಬ್ಯಾಡರಿ. ಅಕಸ್ಮಾತ like ಅಗಿಲ್ಲಾಂದ್ರ ಸುಮ್ಮನ ಇದ್ದ ಬಿಡ್ರಿ, ಯಾಕಂದರ facebook ನಾಗ dislike option ಇಲ್ಲಾ.