ಫೇಸಬುಕ್ಕಿನಾಗ ಹೆಸರ ಹಚ್ಚ…

ಮೊನ್ನೆ ಸೊಲ್ಹಾಪುರದಿಂದ ನಮ್ಮ ಮಾಮಾ ಒಬ್ಬೊಂವ ಫೋನ ಮಾಡಿದ್ದಾ, ಹಂಗ ನನಗ ಅಂವಾ ದೂರಿಂದ ಮಾಮಾ ಆಗ್ಬೇಕ ಹಿಂಗಾಗಿ ರೆಗ್ಯೂಲರ ಫೋನ ಮಾಡೋ ಗಿರಾಕಿ ಅಂತೂ ಅಲ್ಲಾ, ಎಲ್ಲರ ಲಗ್ನಾ, ಮುಂಜವಿ,ಸೀಮಂತ, ವೈಕುಂಟ ಸಮಾರಾದ್ನಿ ಇದ್ದಾಗೊಮ್ಮೆ ಭೆಟ್ಟಿ ಆಗಿ ಅದು ಎದರ ಬದರಾ ಬಂದರ ಇಷ್ಟ
’ಏನ ಪ್ರಶಾಂತ ಆರಾಮ..’ ಅಂತ ಕರ್ಟಸಿಗಿಷ್ಟ ಮಾತಾಡ್ಸೊಂವಾ. ಹಂತಾವ ಇವತ್ತ ಹೊತ್ತಿಲ್ಲದ ಹೊತ್ತಿನಾಗ ಫೋನ ಮಾಡಿ
“ಮತ್ತೇನ ಪ್ರಶಾಂತ ಹೆಂಗಿ ಇದ್ದಿ, ಅಮ್ಮಾ- ಅಪ್ಪಾ ಹೆಂಗ ಇದ್ದಾರ” ಅಂತ ಅಗದಿ ಕಾಳಜಿಲೇ ಕೇಳಲಿಕತ್ತಾ. ನಾ ನಾವೇಲ್ಲಾ ಆರಾಮಪಾ ನೀ ಹೆಂಗ ಇದ್ದಿ, ನಿನ್ನ ಮಕ್ಕಳೇನ ಅಂತಾರ ಅಂತ ಕೇಳಿ
” ಏನ ಎಲ್ಲಾ ಬಿಟ್ಟ ನಂದ ನೆನಪಾತ” ಅಂತ ಸೀದಾ ವಿಷಯಕ್ಕ ಬಂದೆ.

“ಏ, ಏನಿಲ್ಲಾ…ಅಲ್ಲೇ ಹುಬ್ಬಳ್ಳಿ ಒಳಗ ಆ ವಧು ವರರ ಸೆಂಟರ್ ಅದ ಅಂತಲಾ ಸುಯೋಗ ಅಂತ…ಅಲ್ಲೇ ಯಾರರ ಪರಿಚಯ ಇದ್ದಾರೇನ” ಅಂತ ಕೇಳಿದಾ.

ಆವಾಗ ಗೊತ್ತಾತ ನೋಡ್ರಿ ಈ ಮನಷ್ಯಾ ಎಲ್ಲಾ ಬಿಟ್ಟ ನನ್ನ ನಂಬರ ಹುಡಕ್ಯಾಡಿ ಯಾಕ ಫೋನ ಮಾಡ್ಯಾನ ಅಂತ. ಅವಂಗ ಒಬ್ಬೋಕಿ ಮಗಳ ಇದ್ದಾಳ, ಹಂಗ ಅಕಿದ ಲಗ್ನದ ವಯಸ್ಸ expire ಆಗಿ ಎರಡ ಮೂರ ವರ್ಷ ಆತ ಖರೆ ಆದರ ಅಕಿ
’ನಂಗ ಹಂತಾ ವರಾ ಬೇಕ…ಹಿಂತಾ ವರಾ ಬೇಕ’
ಅಂತ ನಾಟಕ ಮಾಡ್ಕೋತ ಬಂದಿದ್ದ ವರಕ್ಕೇಲ್ಲಾ ಮುಂದ ಹೋಗ…ಮುಂದ ಹೋಗ…ನೆಕ್ಸ್ಟ..ನೆಕ್ಸ್ಟ ಅನ್ಕೋತ ಹಾರಾಡಿ ಹಾರಾಡಿ ಈಗ ವಯಸ್ಸ ಹೋದ ಮ್ಯಾಲೆ ಸಿರಿಯಸ್ಸಾಗಿ ’ವರಾ ಸಿಕ್ಕರ ಸಾಕ’ ಅನ್ನೊ ಲೇವಲಗೆ ಬಂದ ನಿಂತಾಳ. ಅಲ್ಲಾ, ಅದರಾಗ ಅಕಿ ಕರ್ನಾಟಕದ್ದ ವರಾ ಅಂದರ ಅಗದಿ ’…ಅಜಿಬಾತ್ ನಕೋ’ ಅಂತ ತನ್ನ ಡೊಣ್ಣ ಮೆಣಸಿನಕಾಯಿ ಮೂಗ ಮುರಿತಿದ್ಲು ಹಂತಾಕಿದ ಇವತ್ತ ಹುಬ್ಬಳ್ಳಿ ಒಳಗ ವರಾ ಹುಡಕಲಿಕ್ಕೆ ಹೆಸರ ಹಚ್ಚೊ ಪರಿಸ್ಥಿತಿ ಬಂದದ.

ಅಲ್ಲಾ ಕನ್ಯಾ ಕಡಮಿ ಅವ ಅಂತ ಇದ್ದ ಬಿದ್ದ ಕನ್ಯಾಗೋಳ ದಿಮಾಕ ಮಾಡಿ ಹಾರಾಡಿ ಬಂದ ಛಲೋ ವರಕ್ಕ ಎಲ್ಲಾ ವೈಕ್ ಅಂದರ ಹಿಂತಾ ಪರಿಸ್ಥಿತಿನ ಬರೋದ. ಹಂಗ ನಮ್ಮ ಹುಬ್ಬಳ್ಳಿ ಕಡೆ ವರಾ ಹುಡಕಲಿಕತ್ತಾರ ಅಂದರ ನಾವೇನ ಕೆಟ್ಟ ಮಂದಿ, ನಮ್ಮ ಕಡೆ ವರಾ ಸುಮಾರ ಇರ್ತಾವ ಅಂತ ಅಲ್ಲ ಬಿಡ್ರಿ.. ಆದರೂ ಮಾತ ಹೇಳಿದೆ.

ಇನ್ನ ನಮ್ಮ ಹುಬ್ಬಳ್ಳಿ ಒಳಗಿನ ಸುಯೋಗ ವಧು ವರರ ಸೆಂಟರ್ ಏನ ಅದ ಅಲಾ ಅದನ್ನ ನಡಸೋರು ಆಡೂರ ಅಂತ ಇದ್ದಾರ. ಹಂಗ ಅವರ ನಂಗೇನ ಸಂಬಂಧಿಕರಲ್ಲಾ ಖರೆ ಆದರ ಭಾಳ ಮಂದಿ ನಾನ ಆ ಆಡೂರ ಅಂತ ತಿಳ್ಕೊಂಡ ಹಗಲಗಲಾ ಫೋನ ಮಾಡ್ತಿರ್ತಾರ. ನನಗಂತೂ ಫೋನ ಮಾಡಿದವರಿಗೆ ನಂಬದ ವಧು ವರರ ಕೇಂದ್ರ ಅಲ್ಲಾ, ನಮ್ಮ ಮನ್ಯಾಗ ಯಾರೂ ಕನ್ಯಾ ಇಲ್ಲಾ, ನಂದ ಲಗ್ನ ಆಗೇದ, ನನ್ನ ಹೆಂಡ್ತಿನೂ ಕನ್ಯಾ ಅಲ್ಲಾ, ನನ್ನ ಮಗಳ ಇನ್ನೂ ಸಣ್ಣೋಕಿ ಇದ್ದಾಳ ಅಂತ ಹೇಳಿ ಹೇಳಿ ಸಾಕಾಗಿ ಹೋಗೇದ. ಆದರ ಒಂದ ೧೫ ವರ್ಷದ ಹಿಂದ ಆ ಸುಯೋಗ ಒಳಗ ನಮ್ಮ ತಂಗಿ ಕೆಲಸಾ ಮಾಡ್ತಿದ್ಲು, ಹಿಂಗಾಗಿ ಅಕಿಗೆ ಸುಯೋಗದವರ ಎಲ್ಲಾರೂ ಪರಿಚಯ. ಅದರಾಗ ಅಕಿ ಅಲ್ಲೆ ಇದ್ದಾಗ ಒಂದ ಸ್ವಲ್ಪ ಹಿರೇತನಾ ಮಾಡಿ ಒಂದ ಹತ್ತಿಪ್ಪತ್ತ ಬ್ರಾಹ್ಮಣರ ಹುಡುಗರದ ಲಗ್ನಾ ಮಾಡಸಿದ್ಲು. ಕಡಿಕೆ ಒಂದ ದಿವಸ ತಂದೂ ಲಗ್ನಾ ಮಾಡ್ಕೊಂಡ ಅಲ್ಲಿ ಕೆಲಸಾ ಬಿಟ್ಟ ಬಿಟ್ಲು.

ಇಷ್ಟ ಆ ಸುಯೋಗದ ಆಡೂರರಿಗೂ ನಮಗೂ ಇರೋ ಸಂಬಂಧ.

ಆದರ ಇವತ್ತೂ ನಮ್ಮ ಪೈಕಿ ಯಾರರ ಸುಯೋಗದ ಬಗ್ಗೆ ಕೇಳಿದರ ನಾವ ಅವರ ಮಕ್ಕಳ ಹೆಸರ ಹೆಚ್ಚಿ, ಅಲ್ಲಿದ್ದವರಿಗೆ ಇದ ನಮ್ಮ ಪೈಕಿ ಕನ್ಯಾ/ವರಾ ನೋಡಿ ಛಲೋ ಸಂಬಂಧ ಹುಡಕರಿ ಅಂತ ಪರ್ಸನಲ್ ಇನಫ್ಲ್ಯೂನ್ಸ್ ಮಾಡ್ತಿರ್ತೇವಿ. ಅಲ್ಲಾ ಪುಣ್ಯಾದ್ದ ಕೆಲಸ ಅದರಾಗೂ ಯಾವದರ ಬ್ರಾಹ್ಮರ ವರಕ್ಕ ಕನ್ಯಾಕ್ಕ ಹುಡಕಿ ಕೊಟ್ಟರಂತೂ ಕಾಶಿಗೆ ಹೋಗಿ ಬಂದಷ್ಟ ಪುಣ್ಯಾ ಬರ್ತದ. ಹಂಗ ಮದ್ವಿ ಮಾಡ್ಕೊಂಡ ನಮ್ಮಂಗ ಹತ್ತ ಹದಿನೈದ ವರ್ಷ ಆದ ಮ್ಯಾಲೆ ಆ ಹುಡಗ ಕಾಶಿಗೆ ಹೋದಾಗೊಮ್ಮೆ ತನ್ನ ಲಗ್ನಾ ಮಾಡಿಸ್ದೋರ ಹೆಸರಿಲೇ ಅಂದರ ನಮ್ಮ ಹೆಸರಿಲೇ ನೀರ ಬಿಟ್ಟ ಬರ್ತಾನ ಆ ಮಾತ ಬ್ಯಾರೆ.

ಇನ್ನ ನಮ್ಮ ಮಾಮಾ ನನಗ ತನ್ನ ಮಗಳಿಗೆ ವರಾ ಹುಡಕಲಿಕ್ಕೆ ಸುಯೋಗದಾಗ ಹೆಸರ ಹಚ್ಚಲಿಕ್ಕೆ ಫೋನ ಮಾಡಿದ್ದಾ. ಅಂವಾ ಅಷ್ಟ ನನ್ನ ನೆನಸಿಗೊಂಡ ಫೋನ ಮಾಡ್ಯಾನ ಅಂದ ಮ್ಯಾಲೆ ಇಲ್ಲಾ ಅಂತ ಅನ್ನಲಿಕ್ಕ ಬರಂಗಿಲ್ಲಾ ಖರೆ ಆದ್ರ ಅವನ್ನ ಮಗಳನ ನೆನಸಿಗೊಂಡ್ರ ಯಾ ಕಾರಣಕ್ಕೂ ಅಕಿನ್ನ ನಮ್ಮ ಪೈಕಿ ವರಕ್ಕ ತೊರಸ್ಬಾರ್ದು ಅನಸಲಿಕತ್ತ. ಬೇಕಾರ ನಮ್ಮ ಪೈಕಿ ವರಗಳೊದ ಲಗ್ನಾ ಆಗದಿದ್ದರು ಅಡ್ಡಿಯಿಲ್ಲಾ ಅಕಿನ್ನ ಮಾತ್ರ ಕಟಗೊಂಡ ಸಾಯೋತನಕ ನನ್ನ ಹೆಸರಲೇ ನೀರ ಬಿಡೋದ ಬ್ಯಾಡ ಅನಸ್ತ.

ಅಲ್ಲಾ, ಹಂಗ ಹುಡಗಿ ಕೆಟ್ಟ ಏನ ಅಲ್ಲ ಖರೆ ಆದ್ರ ಅಕಿ ರುಬಾಬು, ಡೌಲ, ಮಾತು- ಕಥಿ ಎಲ್ಲಾ ನೋಡಿ ಬಿಟ್ಟರ ಅಕಿ ಏನ ಯಾರ ಮನಿಗೂ ಹೊಂದೊ ಗಿರಾಕಿನ ಅಲ್ಲಾ. ಅದರಾಗ ಇನ್ನೊಂದ ವಿಷಯ ಅಂದರ ಅಕಿ ಕರ್ನಾಟಕದ ವರಾ ಅಂದರ ಭಾಳ ಲೈಟಾಗಿ ಮಾತಾಡ್ತಿದ್ಲು, ಎಲ್ಲಾ ಕನ್ಯಾಗೊಳಗತೆ ಅಕಿಗೂ ಸಾಫ್ಟವೇರ್ ವರಾನ ಬೇಕಾಗಿತ್ತ, ಅದು ಪುಣಾ-ಮುಂಬೈ ಬೇಸ್ ಇರಬೇಕ ಮುಂದ ಇಕಿನ್ನೂ ಕಟಗೊಂಡ ಫಾರೇನ್ ಸೆಟ್ಲ ಆಗೋ ಚಾನ್ಸ ಇದ್ದದ್ದ ಬೇಕಾಗಿತ್ತ. ಹಂಗ ಪಾಪ ಅವರಪ್ಪ ಹುಡಕಿ- ಹುಡಕಿ ವರಾ ತರೊಂವಾ ಇಕಿ ಆರಿಸಿ ಆರಿಸಿ ಇಲ್ಲಾ ಅನ್ನೋಕಿ. ಅಲ್ಲಾ ಹಂಗ ಎಲ್ಲಾ ಇಕಿ ಹೇಳಿದ್ದ ಗುಣಾ ಇದ್ದೋಂವಾ ಇಕಿನ್ನ ಯಾಕ ಲಗ್ನ ಆಗ್ತಾನ್ರಿ, ಕನ್ಯಾ ಕಡಿಮಿ ಅವ ಅಂತ ಸಿಕ್ಕ ಸಿಕ್ಕದ್ದ ಕನ್ಯಾ ಮಾಡ್ಕೊಳಿಕ್ಕೆ ನಮ್ಮ ವರಗೊಳಿಗೆ ಏನ ತಲಿ-ಗಿಲಿ ಕೆಟ್ಟದ ಏನ? ನಮ್ಮ ಕಾಲ ಬ್ಯಾರೆ ಇತ್ತ ಸಿಕ್ಕದ್ದ ಸಿವಾ ಅಂತ ಮಾಡ್ಕೊಂಡ್ವಿ, ಈಗಿನ ಹುಡಗರ ಯಾಕ ಕನ್ಯಾ ಕಂಡ ಕೂಡ್ಲೆ ಬಾಯಿ ತಗದ ಹೂಂ ಅಂತಾರ. ಅದರಾಗ ಇಕಿ ತಾನೂ ಏನರ ಸಾಫ್ಟವೇರ್ ಇಂಜೀನಿಯರ್ ಇದ್ದರ ಮಾತ ಬ್ಯಾರೆ ಇತ್ತ. ಇಕಿ ಕಲತದ್ದ ಎಮ್.ಎಸ್. ಡಬ್ಲು, ಅದು ಗುದ್ಯಾಡ್ಕೋತ ಡಿಗ್ರಿ ಪಾಸ್ ಆಗಿದ್ಲು ಇನ್ನ ಮನ್ಯಾಗಿದ್ದರ ಮನಿ ಮಂದಿ ಜೀವಾ ತಿಂತಾಳ ಅಂತ ಅವರಪ್ಪ ಮಾಸ್ಟರ ಡಿಗ್ರಿ ಕಲಿಲಿಕ್ಕೆ ಕಳಸಿದ್ದಾ. ಇನ್ನ ಹಿಂತಾ ಹುಡಗಿಗೆ ವರಾ ಹುಡಕಿ ಕೊಟ್ಟರ ಪುಣ್ಯಾಂತೂ ಬರಂಗಿಲ್ಲಾ ಆದರ ಅಕಿನ್ನ ಕಟಗಂಡೊವನ ಶಾಪ ಹತ್ತೋದ ಅಂತೂ ಗ್ಯಾರಂಟಿ ಇತ್ತ.

ಅದಕ್ಕ ನಾ ಭಾಳ ತಲಿಕೆಡಸಿಗೊಳ್ಳಲಾರದ ನಮ್ಮ ಮಾಮಾಗ ಒಂದ ಐಡಿಯಾ ಮಾಡಿ
“ಅಲ್ಲೋ ಮಾಮಾ, ಅಲ್ಲೆ ಇಲ್ಲೆ ಹೆಸರ ಹಚ್ಚೋದ ಬ್ಯಾಡ, ಅವೇಲ್ಲಾ ಹಳೇ ಪದ್ಧತಿ, ನೀ ಒಂದ ಕೆಲಸಾ ಮಾಡ ನಿನ್ನ ಮಗಳ ಹೆಸರ ಫೇಸಬುಕ್ಕಿನಾಗ ಹಚ್ಚಿ ಬಿಡ, ಹೆಂಗಿದ್ದರು ನಿನ್ನ ಮಗಳ ಇಪ್ಪತ್ತನಾಲ್ಕ ತಾಸು ಫೇಸಬುಕ್ಕಿನಾಗ ಸಾಯಿತಿರ್ತಾಳ…ಅಲ್ಲೇ ಅಕಿಗೆ ಒಂದ ಗಂಡ ಹುಡಕ” ಅಂತ ಪುಕ್ಕಟ್ಟ ಸಜೇಶನ್ ಕೊಟ್ಟೆ. ಅವಂಗ ಮಗಳ ಹೆಸರ ಫೇಸಬುಕ್ಕಿನಾಗ ಹಚ್ಚೋದ ಅಂದರ ತಿಳಿಲಿಲ್ಲಾ, ಮತ್ತ ನಾನ ತಿಳಿಸಿ ಹೇಳಿದೆ.

” ನೋಡ ಒಂದ ಕೆಲಸಾ ಮಾಡ…ನಿನ್ನ ಫೇಸಬುಕ್ ಅಕೌಂಟ ಅದ ಅಲಾ ಅದರಾಗ ನಿನ್ನ ಮಗಳದ ಒಂದ ಛಲೋ ಸೀರಿ,ಫುಲ್ ಸ್ಲೀವ್ ಬ್ಲೌಸ ಹಾಕ್ಕೊಂಡಿದ್ದ ಫೋಟೊ ಅಪಲೋಡ್ ಮಾಡಿ ಅದನ್ನ ನಿನ್ನ ಕರ್ನಾಟಕದಾಗ ಇರೋ ಎಲ್ಲಾ ಸಂಬಂಧಕರಿಗೆ ಟ್ಯಾಗ ಮಾಡಿ, #kanyaavailable ಅಂತ trend create ಮಾಡಿ ಅದರ ಕೆಳಗ ಕ್ಲೀಯರ್ ಆಗಿ ಬರಿ.

ಕನ್ಯಾ ಕೊಡುವದಿದೆ…
ಇಕಿ ನನ್ನ ಮಗಳು …ಇವತ್ತೀಗೆ ಇಕಿಗೆ ೩೧ ತುಂಬಿ ೩೨ ರಾಗ ಬಿದ್ದಾವ
ಇಕಿ ಒಂದ outdated ಕನ್ಯಾ, ಅಕಿ ಪೂರ್ತಿ ಹೆಸರು …………………………
ಇಕಿ ಪೂರ್ವಜರ ಒಂದ ಕಾಲದಾಗ ತಿಳವಳ್ಳಿಯವರು
ವೈದಿಕ ಬ್ರಾಹ್ಮಣರ ಪೈಕಿ, ಅವ್ವ ಕೊಂಕಣಸ್ತರ ಪೈಕಿ
ಗೋತ್ರ- ಕಾಶ್ಯಪ, ನಕ್ಷತ್ರ- ಹಸ್ತಾ, ರಾಶಿ- ಕನ್ಯಾ,
ಸ್ವಭಾವ Over+ve, ರಕ್ತ A+ve, ಅಭ್ಯಾಸದಾಗ C-ve, ಕೆಲಸಾ-ಬೊಗಸಿ – xyz -ve ಕೇಳ ಬ್ಯಾಡ್ರಿ..

ಹೈಟು-ವೇಟು ಇಷ್ಟಿಷ್ಟು, ಬಣ್ಣ – ಫೋಟದಾಗ ಹಿಂಗ ಬಂದಾಳ brightness ಜಾಸ್ತಿ ಮಾಡಿದರ ಇನ್ನು ಬೆಳ್ಳಗಾಗಬಹುದು. ಹುಡಗಿ ಹಂಗ ನೋಡಲಿಕ್ಕೆ ಮಾಡರ್ನ ಅನಿಸಿದರು traditional thinking ಅದ. ಮಾತ ಸ್ವಲ್ಪ ಜಾಸ್ತಿ, straight forward, ದೊಡ್ಡೊರಿಲ್ಲಾ ಸಣ್ಣೊರಿಲ್ಲಾ ಮಾರಿ ಮ್ಯಾಲೆ ಹೊಡದಂಗ ಮಾತಾಡ್ತಾಳ. etc..etc… ಅಂತ ಸ್ವಲ್ಪ ಡಿಟೇಲ್ಸ್ ಎಲ್ಲಾ ಬರಿ, ನೋಡ ನೀ ಆಮ್ಯಾಲೆ ನಿಂಗ ಎಷ್ಟ likes, comments, share ಬರ್ತಾವ ಅಂತ ಹೇಳಿದೆ…ಅಂವಾ ಪಾಪ ನಾ ಹೇಳಿದ್ದ ಕೇಳಿ ಗಾಬರಿ ಆಗಿ…

” ಅಲ್ಲೋ ಆ ಸುಡಗಾಡ ಲೈಕ, ಕಮೆಂಟ್ ತೊಗೊಂಡ ಏನ ಮಾಡೋದಪಾ, ನನ್ನ ಮಗಳಿಗೆ ವರಾ ಬೇಕಲಾ” ಅಂತ ಅಂದಾ. ನಾ ಅವಂಗ ಮತ್ತ ತಿಳಿಸಿ ಹೇಳಿದೆ

” ನೋಡ ಮಾಮಾ ಹಂಗ ಒಂದ ಸರತೆ ನಿನ್ನ ಮಗಳ social mediaದಾಗ trending ಆದಳು ಅಂದ್ರ ವರಾ ತಾಂವ messanger ನಾಗ message ಕಳಸ್ತಾರ ನೀ ಭಾಳ ತಲಿಕೆಡಿಸ್ಕೊ ಬ್ಯಾಡಾ, ಅಕಿ ಹೆಸರ ಎಲ್ಲೂ ಹಚ್ಚದೋ ಬ್ಯಾಡ, ಆಮ್ಯಾಲೆ chatting ಒಳಗ ಸರಿ ಹೊಂದತು ಅಂದ್ರ ಮುಂದ fb live ಒಳಗ ಕನ್ಯಾ ತೋರಿಸಿ ಬಿಡ, ಮತ್ತ ಇಲ್ಲಿ ತನಕಾ ಯಾಕ ಗಾಡಿ ಖರ್ಚ ಮಾಡ್ಕೊಂಡ ಬರ್ತಿ” ಅಂತ ಕನ್ವಿನ್ಸ್ ಮಾಡಿ ಫೋನ ಇಟ್ಟೆ.

ಅಲ್ಲಾ…ಹಂಗ ನಾ ಹೇಳಿದ್ದ ಖರೆ ಹೌದಲ್ಲ ಮತ್ತ…ಆ ಹುಡಗಿ ನೋಡಿದರ ಯಾವಾಗಲೂ ಫೇಸಬುಕ್ಕಿನಾಗ ಇರ್ತಾಳ ಅಲ್ಲೇ ಒಂದ ಅಕಿಗೆ ಗಂಡ ಹುಡಕಿ ಕಟ್ಟಿದರಾತ, ಇನ್ನ ಹಂತಾ ಹುಡಗಿಗೆ ನಾವೇಲ್ಲ ನಡಕ ಆಗಿ ವರಾ ಹುಡಕಿ ಮುಂದ ಆ ಹುಡಗನ ಕಡೆ ಅವರ ಮನಿ ಕಡೆಯವರ ಕಡೆ ತಿವಿಸಿಗೊಂಡ block ಮಾಡಿಸ್ಗೋಬೇಕರಿ…ಅಲ್ಲಾ ಪಾಪ ನನ್ನ ಹೆಂಡತಿ ಇಷ್ಟ ಛಲೋ ಇದ್ದರೂ ನಾ ತಲಿ ಕೆಟ್ಟಾಗ ಆ ನಡಕ ಆಗಿ ನನ್ನ ಲಗ್ನಾ ಮಾಡಿದವರಿಗೆ ನೀರ ಬಿಡತಿರ್ತೇನಿ…..ಇನ್ನ ಹಿಂತಾಕಿಗೆ ಗಂಟ ಹಾಕಿಸಿ ನಾವ ನಾಳೇ ಯಾಕ ಮಂದಿ ಕಡೆ ಬೈಸ್ಗೊಬೇಕ….ಅದಕ್ಕ ಅಕಿ ಫೇಸಬುಕ್ಕಿನಾಗ ಒಂದ ಗಂಟ ಹಾಕ್ಕೊಳ್ಳವಳ್ಳಾಕ…..ನಾಳೆ ಏನರ ಹೆಚ್ಚು ಕಡಮಿ ಆದರ social media ಬ್ಲೇಮ್ ಮಾಡಿದರಾತ. ಏನಿಲ್ಲದ ಫೇಸ ಬುಕ್ಕಿನಿಂದ ಎಷ್ಟೋ ಸಂಸಾರ ಹಾಳ ಆಗ್ಯಾವ ಅಂತ ಕೇಳತಿರ್ತೇವಿ ಒಂದ ಛಲೋನು ಯಾಕ ಆಗ ಬಾರದು…..ಅಲ್ಲಾ ನಾ ಹೇಳೋದ ನಿಮಗ ಮಸ್ಕೀರಿ ಅನಸಬಹುದು..ಬೇಕಾರ ನೋಡ್ರಿ ನೀವು…ಎಷ್ಟೋ ಮಂದಿ ಮೊದ್ಲ ಹುಡಗಿನ್ನ ಎಲ್ಲೆ ನೋಡಿದ್ದಿ ಅಂದರ ಫೇಸಬುಕ್ಕ್ ನಾಗ ನೋಡಿದ್ದೆ ಅನ್ನೋರ ಇದ್ದಾರ. ಬರೆ facebook ನಾಗ ಈ ಜನಾ ಹುಡಗಿ/ಹುಡಗಂದ ಫೋಟೊ ನೋಡಿ ಜಾತಕಾ ಕಂಡ ಹಿಡಿತಾರ ಅಂದ ಮ್ಯಾಲೆ ಅದನ್ನ ಯಾಕ use ಮಾಡ್ಕೊಂಡ ಲಗ್ನ ಮಾಡ್ಕೋಬಾರದ…..ಅಲ್ಲಾ ಹಂಗ ಹುಡಗ/ಹುಡಗಿದ ಏನರ ಲಫಡಾ ಇದ್ದರ ಇಲ್ಲೇ ಊರ ಹಿರೇತನಾ ಮಾಡೋ ಮಂದಿ ಕಮೆಂಟ್ ಮಾಡಿ ನಿಮಗ feedback ಕೊಟ್ಟ ಬಿಡ್ತಾರ…ನಾಲ್ಕ ಮಂದಿಗೆ ಕೇಳಿ ಕನ್ಯಾ/ವರಾ ಫಿಕ್ಸ್ ಮಾಡಬೇಕು ಅಂತಾರಲಾ ಹಂಗ ನೀವ ಫೇಸಬುಕ್ಕಿನಾಗ ಹಾಕಿ ಬಿಟ್ಟರ ನಾಲ್ಕ ಮಂದಿ ಏನ ನಲವತ್ತ ಮಂದಿ ತಮ್ಮ feedback ಪುಕ್ಕಟ್ಟ ಕೊಡ್ತಾರ.

ನೋಡ್ರಿ ಹಂಗ ಏನರ ನಮ್ಮ ಮಾಮಾನ ಮಗಳದ ಪ್ರೋಫೈಲ ಏನರ ನಿಮ್ಮ ಫೇಸಬುಕ್ಕಿನಾಗ ಕಂಡರ ಲೈಕ ಮಾಡ್ರಿ, ಕಮೆಂಟ್ ಮಾಡ್ರಿ, ಸಾದ್ಯ ಆದರ ಶೇರನೂ ಮಾಡ್ರಿ…ಪಾಪ ಒಳ್ಳೆ ಹುಡಗಿ ಇದ್ದಾಳ, ಮ್ಯಾಲೆ ಬ್ರಾಹ್ಮರೋಕಿ ಬ್ಯಾರೆ…ಒಂದ ಛಲೋ ವರಾ ಹುಡಕಿ ಕೊಡ್ರಿ..ನಿಮಗೂ ಪುಣ್ಯಾ ಬರ್ತದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ