ಏನ್ ದೋಸ್ತ…ನಮ್ಮ ಕಾಕಾ ಕಂಡಂಗ ಕಾಣ್ತಿಯಲಾ

ಹೋದ ಶನಿವಾರ ನಾನು ನಮ್ಮ ದೋಸ್ತ ಮಂಜ್ಯಾ ವೀಕೆಂಡ್ ಅಂತ ಹೋಗಿದ್ವಿ. ಹಂಗ ಶನಿವಾರ ನಮ್ಮಕಿದ ಒಪ್ಪತ್ತ ಇತ್ತ ಅಂತ ಸುಮ್ಮನ ದೋಸ್ತನ ಜೊತಿ ಹೋಗ್ಲಿಕ್ಕೆ ಬಿಟ್ಟಳ ಅನ್ನರಿ, ಇಲ್ಲಾಂದರ ಎಲ್ಲೆ ಹೊಂಟರೂ ’ ನಾನೂ..ಬರೋಕಿ’ ಅಂತ ಅಡ್ಡಗಾಲ ಹಾಕೋ ಚಟಾ ಅಕಿದ.
ಅದರಾಗ ನಾ ಹಳೇ ದೋಸ್ತರ ಜೊತಿ ಹೋಗಬೇಕಾರ ಅಗದಿ ಕ್ಲೀಯರ್ ಆಗಿ
’ಏ….ಅಂವಾ ಲ್ಯಾಮಿಂಗ್ಟನ್ ಫ್ರೇಂಡ, ಮೂವತ್ತೈದ ವರ್ಷದ ದೋಸ್ತ, ನೀ ಬಂದ ಈಗ ಇಪ್ಪತ್ತೆರಡ ವರ್ಷಾತ ಸುಮ್ಮನಿರ’ ಅಂತ ಜೋರ ಮಾಡೇ ಹೋಗೊದ.
ನಾನು ಮಂಜ್ಯಾ ಇಬ್ಬರೂ ಅದು- ಇದು ಹಳೆ ಸುದ್ದಿ ಮಾತಾಡ್ಕೋತ ಶುರು ಹಚ್ಗೊಂಡ್ವಿ. ಅಷ್ಟರಾಗ ಎದುರಗಿನ ಟೇಬಲ್ ಮ್ಯಾಲೆ ಒಬ್ಬೊಂವ ಕೂತಿದ್ದಾ, ಎಲ್ಲೋ ನೋಡಿದಂಗ ಅನಸಲಿಕತ್ತ ಆದರ ಯಾರ ಅಂತ ಗೊತ್ತಾಗಲಿಲ್ಲಾ. ಅದರಾಗ ಪರ್ಸಾನಲಿಟಿ ನೋಡಿದರ ಸಿನಿಯರ್ ಸಿಟಿಜನ್ ಗತೆ ಇತ್ತ.
ನಾ ಮಂಜ್ಯಾಗ ತೋರಿಸಿ
“ಲೇ..ಅವನ್ನ ಏಲ್ಲೋ ನೋಡೇನಲೇ…ಎಲ್ಲೆ ಅಂತ ಗೊತ್ತಾಗವಲ್ತ, ನೀ ಗೊರ್ತ ಹಿಡಿತಿ ಏನ ನೋಡ” ಅಂತ ಅವನ್ನ ತೋರಿಸಿದೆ. ಅವನೂ ದೂರಿಂದ ಡಿಮ್ ಲೈಟನಾಗ ನೋಡಿ
“ಏ, ತಡಿ ಹತ್ತರ ಹೋಗಿ ನೋಡ್ತೆನಿ” ಅಂತ ಅವನ ಟೇಬಲಗೆ ಹೋದಾ. ಮುಂದ ಹತ್ತ ನಿಮಿಷಕ್ಕ ಅವನ್ನ ಕರಕೊಂಡ ನಮ್ಮ ಟೇಬಲಗೇ ಬಂದಾ.
’ಲೇ….. ಆಡ್ಯಾ ಇಂವಾ ಯಾರ ಗೊತ್ತಾಗಲಿಲ್ಲಾ? ಮಗನ ಸುನ್ಯಾಲೇ..ನಮ್ಮ ಜೋತಿ ಲ್ಯಾಮಿಂಗ್ಟನ್ನಾಗ ಇದ್ದನಲಾ” ಅಂತ ಅಂದಾ, ಆದರೂ ನಂಗ ಲಗೂನ ನೆನಪಾಗಲಿಲ್ಲಾ.
“ಲೇ…ಸೋಸಿಯಲ್ ಸ್ಟಡಿ ನಂದಣ್ಣವರ ಸರ್ ಕಡೆ’ ನಮ್ಮ ದೇಶದ್ದ ರಾಜಧಾನಿ ಯಾವದು ಅಂತ ಕೇಳಿದಾಗ ’ದೌಲತಾಬಾದ್’ ಅಂತ ಹೇಳಿ ಬೈಸ್ಗೊಂಡಿದ್ನಲಾ” ಅವನ ಇಂವಾ ಅಂದಾ.
ಆವಾಗ ನಂಗ ಸಡನ್ ಆಗಿ ನೆನಪಾತ, ಓ ಆ ಸುನ್ಯಾ, ಹೆಂಗ ಇದ್ದಾ ಹೆಂಗ ಆಗ್ಯಾನ ಏನ್ತಾನ, ನಮ್ಮ ಜೊತಿ ಹೈಸ್ಕೂಲನಾಗ ಇದ್ದಾಗ ಇಂಗಳಗಿ ಚಾಳ ಒಳಗ ಮನಿ ಇತ್ತ ಮಗಂದ, ಅಂವಾ ಹಿಂಗ ಆಗ್ಯಾನ ಅಂದರ ನಂಬಲಿಕ್ಕೆ ಆಗಲಿಲ್ಲಾ. ಅಲ್ಲಾ ನಂಬದೇಲ್ಲಾ ಕಾಲೇಜ ಮೆಟ್ಟಲಾ ಹತ್ತಿದ ಮ್ಯಾಲೆ ಬೆಳವಣಗಿ ನಿಂತರ ಇವಂದೇನ ಇನ್ನೂ ನಿಂತೇಲ ಏನ ಅನಸಲಿಕತ್ತ.
ತಲಿ ಮ್ಯಾಲೆ ಒಂದ ಕೂದ್ಲ್ ಇಲ್ಲಾ, ಹೊಟ್ಟಿ ನೋಡಿದರ ದಿಂದಾಗ ಇದ್ದಂಗ ಇತ್ತ. ಒಂದ ಮಾತನಾಗ ಹೇಳ್ಬೇಕಂದರ ನಮ್ಮ ಕಾಕಾ ಕಂಡಂಗ ಕಾಣ್ತಿದ್ದಾ, ನಾ ಸೀದಾ ಡೈರೆಕ್ಟ
“ಏನ ದೋಸ್ತ ನಮ್ಮ ಕಾಕಾ ಕಂಡಂಗ ಕಾಣ್ತಿಯಲಾ” ಅಂತ ಅಂದ ಬಿಟ್ಟೆ.
ಅಲ್ಲಾ ಹಂಗ ನಂಗೂ ಹೆಂಡ್ತಿ ಬೈತ್ಲಾ ತಗಲಿಕತ್ತ ಮ್ಯಾಲೆ ಕೂದ್ಲ ಹೋಗ್ಯಾವ ಆ ಮಾತ ಬ್ಯಾರೆ. ಆದರ ನಮ್ಮ ಮಂಜ್ಯಾನ ನೋಡಿದ್ರಂತೂ ಮುಗದ ಹೋತ ಇಷ್ಟ ಯಂಗ ಕಾಣ್ತಾನ ಅಂದರ ಅಂವಾ ಇವತ್ತೂ ಹೈಸ್ಕೂಲಿಗೆ ಹೋದರ ಸಪ್ಲಿಮೆಂಟರಿ exam form ತುಂಬಲಿಕ್ಕೆ ಬಂದಾನ ಅನ್ಕೋಬೇಕ ಅಷ್ಟ ಯಂಗ ಇದ್ದಾನ.
ಅಲ್ಲಾ ಹಂಗ ನಾನೂ ಯಂಗ್ ಇದ್ದೇನ ಬಿಡ್ರಿ. ನನ್ನ ಮಗನ ಡಿಪ್ಲೋಮಾ admission ಮಾಡಸಲಿಕ್ಕೆ ಕ್ಯಾಪ ಹಾಕ್ಕೊಂಡ ಹೋದಾಗ ನನಗ ಅಳಗುಂಡಗಿ ಸರ್
’ ಏ, ಇದ ಬರೇ ಫ್ರೆಶ್ ಅಡ್ಮಿಶನ, back log ಇದ್ದೋರ ಒಂದ ತಿಂಗಳ ಬಿಟ್ಟ ಬರ್ರಿ’ ಅಂತ ಅಂದಿದ್ದರು.
ಇನ್ನ ನಮ್ಮನ್ನ ನೋಡಿ ಪಾಪ ಸುನ್ಯಾಗ ಇನ್ನೂ ವಯಸ್ಸಾದಂಗ ಅನಸಲಿಕತ್ತ ಕಾಣ್ತದ ಅದರಾಗ ನಾ ’ಕಾಕಾ ಕಂಡಂಗ ಕಾಣ್ತಿ’ ಅಂದದ್ದ ಇನ್ನೂ ಅಸಂಯ್ಯ ಆಗಿತ್ತ.
ನಾ ” ಯಾಕಲೇ ಸುನ್ಯಾ…ಹಿಂಗ್ಯಾಕ ಆಗಿ” ಅಂತ ಕೇಳೋದ ತಡಾ, ಅಂವಾ ತನ್ನ ಕಥಿ ಶುರು ಮಾಡಿದಾ.
ಮಲ್ಟಿ ನ್ಯಾಶನಲ್ ಕಂಪನಿದ ಸೌಥ ಇಂಡಿಯಾ ಚೀಫ್, ಸಿಕ್ಕಾ ಪಟ್ಟೆ ಸ್ಟ್ರೆಸ್, ಟಾರ್ಗೇಟ್, ಟ್ರಾವೇಲ್. ಹದಿನೈದ ದಿವಸಕ್ಕೊಂದ ಸರತೆ ಹೆಂಡ್ತಿ ಮಾರಿ ನೋಡ್ತಾನ, ಪಗಾರ ನೋಡಿದ್ರ ನನ್ನ half year ಪಗಾರ ಅವಂದ ಒಂದ ತಿಂಗಳದ್ದ ಪಗಾರ ಸೇಮ್. ಬೆಂಗಳೂರಾಗ ಸಿಕ್ಕಾಪಟ್ಟೆ ಆಸ್ತಿ. ಇರೋ ಒಬ್ಬ ಮಗಗ ಮಂಗಳೂರಾಗ residential school ಒಳಗ ವರ್ಷಕ್ಕ ಐದ ಲಕ್ಷ ಕೊಟ್ಟ ಇಟ್ಟಾನ.
’i want my son to be engineer man’ ಅಂದಾ.
ಏನಿಲ್ಲದ ಕಂಪನಿ ಪ್ರೆಶರ್ ಮ್ಯಾಲೆ ಮಗನ career, ಹೆಂಡ್ತಿ ಕಾಟ..ಎಷ್ಟಂತ ಅಂತ ಗಂಡ ಅನ್ನೊ ಪ್ರಾಣಿ ತಡ್ಕೊಬೇಕ? ಲೈಫ ಅನ್ನೋದ ಮಶೀನಗತೆ ಆಗಿ ಇವತ್ತಿಲ್ಲಾ ನಾಳೇ ಇಂಜೀನ್ ಡೌನ ಆಗೋ ಲೇವಲಗೆ ಬಂದಿತ್ತ.
ಅವನ್ನ ನೋಡಿ ನಾವಿಬ್ಬರೂ ಏನು ಮಾತಾಡ್ಲಿಲ್ಲಾ, ನಾವ ನೋಡಿದರ ಇನ್ನೂ ಹುಡಗರ ಗತೆ ಲಗ್ನಾ ಆಗಿ ಎದಿ ಉದ್ದ ಮಕ್ಕಳ ಬಂದರು
’ಮೊನ್ನೆ ಬ್ರಾಡವೇ ಒಳಗ ಜವಳಿ ಸಿಕ್ಕಿದ್ಲು, ಅಕಿ ಅವಳಿ-ಜವಳಿ ಮಕ್ಕಳ ಇಬ್ಬರೂ B.E ಮಾಡ್ತಾರಂತ, sine Tita ಸಿಂಗಾಪೂರನಾಗ ಇರ್ತಾಳ, P square ಪಾಂಡಿಚೇರಿಗೆ ಶಿಫ್ಟ ಆಗ್ಯಾಳ, ಜಾನ್ಸನ್ ಬೇಬಿ ಸೋಪ್ ಅಂತೂ ಇನ್ನು ಸಂತೂರ್ ಗರ್ಲ್ ಇದ್ದಂಗ ಇದ್ದಾಳ ’ ಅಂತೇಲ್ಲಾ ಇನ್ನೂ ನಮ್ಮ ಕಾಲೇಜ ಹುಡಗ್ಯಾರ ಭೆಟ್ಟಿ ಆಗಿದ್ದನ್ನ ನೆನಸಿಗೋತ ಇರ್ತೇವಿ. ಸುನ್ಯಾನ್ನ ನೋಡಿ ನಮಗೇನ ಲೈಫ್ ಬಗ್ಗೆ ಸಿರಿಯಸನೆಸ್ ಇಲ್ಲ ಏನಪಾ, ಮಕ್ಕಳ ಬಗ್ಗೆ ಕಾಳಜಿನ ಇಲ್ಲ ಏನ ಅಂತ guilty feeling ಬರಲಿಕತ್ತ.
ನಾ ಅಂತೂ ಹದಿನಾರ ವರ್ಷದ parentshood ಒಳಗ ಒಂದ ದಿವಸನೂ ಪೇರೆಂಟ್ಸ ಡೇ ದಿವಸ ಸಾಲಿಗೆ ಹೋಗಲಿಲ್ಲಾ, ನನ್ನ ಮಗಗ ಡಿಪ್ಲೋಮಾ ಹಚ್ಚಬೇಕಾರ ನನ್ನ ಹೆಂಡ್ತಿ
’ಅಡ್ಮಿಶನಗೆ ನಾ ಹೋಗಂಗಿಲ್ಲಾ, ಅಲ್ಲೆ ಬರೇ ಇಂಗ್ಲೀಷ್ ಮಾತಾಡ್ತಾರ’ ಅಂದಾಗ ನಾನ ಹೋಗಬೇಕಾತ.
ನಾ ಇವತ್ತಿಗೂ ಮಕ್ಕಳ education ಬಗ್ಗೆ ತಲಿಕೆಡಸಿಕೊಂಡಿಲ್ಲಾ. ಅಲ್ಲಾ ನಾ ಕಲಿಬೇಕಾರ ತಲಿ ಕೆಡಸಿಕೊಂಡಿದ್ದಿಲ್ಲಾ ಇನ್ನ ಮಕ್ಕಳ ಕಲಿಬೇಕಾರ ಎಲ್ಲೆ ತಲಿಕೆಡಸಿಕೊಳ್ಳೊದ? ಅವರ ಹಣೇಬರಹ ಅವರದ, ನಂಬದ ನಂಬದ.
ಹಂಗ ನಮ್ಮ್ ಲೈಫ sacrifice ಮಾಡ್ಕೊಂಡ ನಮ್ಮ ಮಕ್ಕಳ ಸಂಬಂಧ ನಾವ ಬದಕೋದು, ಮುಂದ ನಮ್ಮ ಮಕ್ಕಳ ತಮ್ಮ ಮಕ್ಕಳ ಸಂಬಂಧ ಬದಕೋತ ಹೊಂಟರ ನಮ್ಮ individual ಲೈಫ ಯಾರ ಎಂಜಾಯ್ ಮಾಡೊರ? ನಾ ಅಂತೂ enjoy bloody life ಅಂತ ದಿಂದಾಸ ಇರೊ ಮನಷ್ಯಾ. ಅಲ್ಲಾ, ಇದ ನನ್ನ ವಿಚಾರ ಬಿಡ್ರಿ.
ಆದರು ಸುನ್ಯಾಂದ ಪುರಾಣ ಕೇಳಿದ ಮ್ಯಾಲೆ ’ನಾವ ಲೈಫ್ ಒಳಗ ಸಿರಿಯಸ್ ಆಗಲೇಲಲಾ ಇನ್ನೂ ಹೈಸ್ಕೂಲ, ಕಾಲೇಜ ಹುಡುಗರ ಗತೆ ಲೈಫ ಎಂಜಾಯ್ ಮಾಡ್ಕೋತ, ಸಣ್ಣೊರಿದ್ದಾಗ ಅವ್ವಾ ಅಪ್ಪಗ ಸುಳ್ಳ ಹೇಳ್ತಿದ್ವಿ, ಈಗ ಹೆಂಡ್ತಿ-ಮಕ್ಕಳಿಗೆ ಸುಳ್ಳ ಹೇಳ್ಕೋತ ಬದಕಲಿಕತ್ತೇವೆಲಾ ಅಂತ ಅನಸಲಿಕತ್ತ.
ಇನ್ನ ಆ ಸುನ್ಯಾಂದ ಪೂರ್ತಿ ಕಥಿ ಕೇಳ್ರಿಲ್ಲೆ….ಆ ಮಗಗ ಕಂಪನಿದು, ಸಂಸಾರದ್ದು ಟೇನ್ಶನಗೆ ಸ್ಟ್ರೆಸ್ ಆಗಿ ಡೈಬಿಟಿಸ್ ಬಂದ ಹತ್ತ ವರ್ಷ ಆಗೇದ ಅಂತ, ಬಿ.ಪಿ ಗುಳಗಿ ನುಂಗಲಿಕ್ಕತ್ತ ಮೂರ ವರ್ಷಾತ. ಏನ್ಮಾಡ್ತೀರಿ? ನನ್ನಕಿಂತ ಮೂರ ತಿಂಗಳ ದೊಡ್ಡೊಂವ ಇಷ್ಟ.
ಅಲ್ಲಾ ಯಾರ ಸಂಬಂಧ ಇಷ್ಟೇಲ್ಲಾ ಮಾಡ್ಯಾನ, ಯಾರ ಸಂಬಂಧ ಬದಕಲಿಕತ್ತಾನ, ಒಂದೂ ಕ್ಲೀಯರ್ ಇಲ್ಲಾ.
ಮನ್ಯಾಗ ಮಲ್ಟಿ ಜಿಮ್ ಇಟಗೊಂಡ ತಾ ನೋಡಿದರ ಲೇಜಿ ಬ್ಯಾಗ ಆಗ್ಯಾನ. ಏನ ಹೇಳಬೇಕ ಹಿಂತಾವರಿಗೆ, ಅಲ್ಲಾ ಇಂವಾ ಒಬ್ಬನ ಅಲ್ಲಾ, ಹಂಗ ನಮ್ಮ ಸರ್ಕಲನಾಗ ಭಾಳ ಮಂದಿ ಇದ್ದಾರ, ಅವರ ನೋಡಿ ಬಿಟ್ಟರ ನಮ್ಮ ಜನರೇಶನ್ ಅನಸಂಗಿಲ್ಲಾ, ಹಿಂಗ mechanical ಲೈಫ್ ಒಳಗ ಸಿಕ್ಕೊಂಡ materialistic ಆಗಿ ಇವತ್ತ real life ಕಳ್ಕೊಂಡವರಿಗೆ ಏನ ಅನ್ನೋದ? ಅವರ ಲೈಫ್, ಅವರ ಪ್ರಿಯಾರಿಟಿ.
ಹೋಗ್ಲಿ ಬಿಡ್ರಿ ಇದರ ಬಗ್ಗೆ ನಾ ಭಾಳ ಹೇಳಿದರ ಶಾಣ್ಯಾತನ ಬಡದಂಗ ಆಗ್ತದ ಆದರೂ ನಮ್ಮ ಸುನ್ಯಾನ್ನ ನೋಡಿ ಜೀವಾ ಚುಟು ಚುಟು ಅಂತ ಅದಕ್ಕ ಇಷ್ಟ ಹೇಳ್ಬೇಕಾತು.
“ಸರಿ ಬಿಡಪಾ ಕಾಕಾ…ಹೋಗ್ಲಿ ಬಿಡ ಭಾಳ ತಲಿಕೆಡಸ್ಗೊ ಬ್ಯಾಡಾ…ಇನ್ನೊಂದ ಲಾರ್ಜ್ ಹೇಳಲಿನ” ಅಂದೆ,
“yes, scotch please…..it has less sugar” ಅಂದಾ.
ಏನ್ಮಾಡ್ತೀರಿ. ಬರೇ ಫುಡ್ ಇಷ್ಟ ಅಲ್ಲಾ ಇವನ ಚಟಾ ಸಹಿತ ಶುಗರ್ ಫ್ರೀ.
ನಂದೇನ ಗಂಟ ಹೋಗೊದ ಅಂತ ಅವಂಗೊಂದ ಲಾರ್ಜ್ ನಮಗ ಎರಡ ಸ್ಮಾಲ್ ಹೇಳಿದೆ.
ನಾವು ಏನಿದ್ದರೂ ಲವ್ ಡ್ರಾಪ್ ಎಂಜಾಯ್ ಮಾಡೋ ಮಂದಿ, ಜೀವನದ ಪ್ರತಿ ಹನಿ ಹನಿನೂ ಎಂಜಾಯ್ ಮಾಡ್ತೇವಿ.
ಅದಕ್ಕ ಹೇಳಿದ್ದ enjoy bloody life ಅಂತ.
ಅನ್ನಂಗ ನಾಳೆ ಅಂತರಾಷ್ಟ್ರೀಯ ಫ್ರೆಂಡಶಿಪ್ ಡೇ, ನಿಮಗೇಲ್ಲಾ ಫ್ರೆಂಡಶಿಪ್ ಡೇ ದ ಹಾರ್ದಿಕ ಶುಭಾಶಯ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ