ಪ್ಲೀಸ್….ಟೋಟಲ್ ‘ ಫುಡ್ ಬಿಲ್ ‘ ಕೊಡ್ರಿ

ಇದೇನಿಲ್ಲಾ ಅಂದರು ಹತ್ತ-ಹದಿನೈದ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಒಬ್ಬಂವ ಹುಬ್ಬಳ್ಳ್ಯಾಗ ಮೆಡಿಕಲ್ ರೆಪ್ ಇದ್ದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಟ್ರಾನ್ಸಫರ್ ಆಗಿ ಹೊಂಟಾ. ಹಂಗ ನಮ್ಮ ದೋಸ್ತರ ಒಳಗ ಇಂವಾ ಒಂದನೇದಂವಾ ಮ್ಯಾನೇಜರ್ ಆಗಿ ಬೆಂಗಳೂರಿಗೆ ಹೊಂಟೊಂವಾ. ಇಂವಾ ಹೊಂಟಾಗ ನಮಗೇಲ್ಲಾ ನಮ್ಮ ಅಕ್ಕ-ತಂಗ್ಯಾರನ್ನ ಮದ್ವಿ ಮಾಡಿ ಬೆಂಗಳೂರಿಗೆ ಕೊಟ್ಟಷ್ಟ ದುಃಖ ಆತ. ಅಲ್ಲಾ, ಹಂತಾ ಛಲೋ ದೋಸ್ತ ಇದ್ದಾ ಬಿಡ್ರಿ.
ಹಂಗ ಅಂವಾ ಪಗಾರ ಜಾಸ್ತಿ ಆತ ಅಂತ ಅಗದಿ ಖುಶ್ ಆಗಿದ್ದಾ. ಅಲ್ಲಾ ಆಗಲಾರದ ಏನ, ಬರೇ ರೆಪ್ ಇದ್ದಾಗ ಕಂಪನಿ TA-DA ಮ್ಯಾಲೆ ಮನಿ ನಡಸ್ತಿದ್ದಾ. ಇನ್ನ ಮ್ಯಾನೇಜರ ಅಂದರ ಇಡಿ ಸ್ಟೇಟ್ ಕವರಿಂಗ, ತನ್ನ ಖರ್ಚ ಎಲ್ಲಾ ಕೆಳಗ ಇರೋ ರೆಪಗೊಳ ಮ್ಯಾಲೆ ಹಾಕಿ, ಅವರ ಗಾಡಿ ಮ್ಯಾಲೆ ಅಡ್ಡಾಡಿ TA-DA ಎಲ್ಲಾ FD ಇಡ್ತಾನ ಅಂತ ನಮಗ ಗ್ಯಾರಂಟೀ ಇತ್ತ.
ಅಲ್ಲಾ, ಈ ಮಾರ್ಕೇಟಿಂಗ್ ಮಂದಿ TA-DA ಒಳಗ ಸಂಸಾರ ಮಾಡ್ತಾರ. ಅವರಿಗೆ ಪಗಾರ ಲೇಟ ಆದರೂ expenses ಮೊದ್ಲ ಬೇಕ. ಅದರಾಗ ನಮ್ಮ ದೋಸ್ತ ಅಂತೂ ರೆಪ್ ಇದ್ದಾಗ ಭಾರಿ ಇನೊವೇಟಿವ್ ಐಡಿಯಾದ್ಲೆ ರೊಕ್ಕಾ ಉಳಸ್ತಿದ್ದಾ. ಫಸ್ಟಕ್ಲಾಸ ಎಲಿಜಿಬಲ್ ಇದ್ದರೂ ಕೆಂಪ ಬಸ್ಸನಾಗ ಅಡ್ಡಾಡಿ ಫಸ್ಟಕ್ಲಾಸ್ ಕ್ಲೇಮ್ ಮಾಡ್ತಿದ್ದಾ. ಒಂದ ದಿವಸದ್ದ ಕೆಲಸಾ ಎರಡ ದಿವಸ ಮಾಡಿ, ಎರಡ ದಿವಸದ್ದ DA ಕ್ಲೇಮ್ ಮಾಡ್ತಿದ್ದಾ. ಯಾ ಊರಿಗೆ ಹೋಗ್ತಿದ್ದಾ ಅಲ್ಲೆ ಬಳಗದವರನ ಹುಡಕಿ ’ವರ್ಕ್ ಮ್ಯಾಲೆ ಬಂದಿದ್ದೆ, ನಿಮ್ಮನ್ನ ಭೆಟ್ಟಿ ಆಗಲಾರದನೂ ಭಾಳ ದಿವಸಾಗಿತ್ತ’ ಅಂತ ಅವರ ಮನ್ಯಾಗ ಟೆಂಟ್ ಹೊಡದ ಅವರದ ಬೈಕ್ ಇಸ್ಗೊಂಡ ಕೆಲಸಾ ಮುಗಿಸಿ TA-DA ಕ್ಲೇಮ್ ಮಾಡ್ತಿದ್ದಾ.
ಹಂಗ ಇವಂಗ ಬಾಗಲಕೋಟ ಒಳಗ ಯಾ ಬೈಕ ಸಿಗಲಿಲ್ಲಾಂತ ನಾಲ್ಕ ಮಂದಿ ರೆಪಗೊಳನ್ನ ಹಿಡದ ಕಂಟ್ರಿಬ್ಯುಶನ್ ಇಸ್ಗೊಂಡ ನಾಲ್ಕ ಸಾವಿರ ರೂಪಾಯಿದ್ದ ಸೆಕೆಂಡ್ ಹ್ಯಾಂಡ ಲೂನಾ ತೊಗೊಂಡ ಅದನ್ನ ಅಲ್ಲೇ ಮೆಡಿಕಲ್ ಶಾಪನಾಗ ಇಟ್ಟಿದ್ದಾ. ಯಾ ರೆಪ್ ಬಾಗಲಕೋಟಗೆ ಹೋಗ್ತಾರ ಅವರ ಆ ಲೂನಾ ತೊಗೊಂಡ ತಮ್ಮ ಲೋಕಲ್ ಕೆಲಸಾ ಮಾಡಿ ಮತ್ತ ಅಲ್ಲೇ ಇಟ್ಟ ಬರ್ತಿದ್ದರು. ಹಿಂಗ ಪ್ರತಿಯೊಂದ ಊರಾಗೂ ಒಂದಿಲ್ಲಾ ಒಂದ ಜುಗಾಡ ಮಾಡ್ತಿದ್ದಾ. ಹಂಗ ಅಪ್ಪಿ-ತಪ್ಪಿ ಶಿಗ್ಗಾಂವ, ಸವಣೂರಕ್ಕ ಕೆಲಸಕ್ಕ ಅವರಪ್ಪನ ಕಾರ ತೂಗೊಂಡ ಹೋಗಬೇಕಾರ ಮತ್ತೊಂದ ನಾಲ್ಕ ಕಂಪನಿ ರೆಪ್ ಕಾರನಾಗ ಹಾಕ್ಕೊಂಡ ಹೋಗಿ ಲಾಸ್ಟಿಗೆ ಅವರ ಕಡೆ ಪೆಟ್ರೋಲ್ ಕಂಟ್ರಿಬ್ಯೂಶನ್ ಇಸ್ಗೊತಿದ್ದಾ. ಅದರಾಗ ಒಟ್ಟ ಭಿಡೆ ಮಾಡ್ತಿದ್ದಿಲ್ಲ ಬಿಡ್ರಿ.
ಮುಂದ ಬೆಂಗಳೂರಿಗೆ ಶಿಫ್ಟ ಆಗಿ ಮ್ಯಾನೇಜರ್ ಆದಮ್ಯಾಲೂ ಅವಂದ ಈ ಚಾಳಿ ಏನ ಹೋಗಿದ್ದಿಲ್ಲಾ, ಹುಬ್ಬಳ್ಳಿಗೆ ಡ್ಯೂಟಿ ಮ್ಯಾಲೆ ಬಂದರ ಸ್ವಂತ ಮನಿ ಇದ್ದರು ಅನಂತ ರೆಸಿಡೆನ್ಸಿ ಒಳಗ ಸ್ಟೇ ಅಂತ ತೊರಸ್ತಿದ್ದಾ. ಆವಾಗ ಬಿಲ್ ಕಂಪಲ್ಸರಿ ಇರಲಿಲ್ಲಾ, ಸೇಲ್ಸ ಬಂದರ ಸಾಕಾಗಿತ್ತ.
ಇನ್ನ ಅಂವಾ ಹುಬ್ಬಳ್ಳಿಗೆ ಬರ್ತಾನ ಅಂದರ ದೋಸ್ತರಿಗೇಲ್ಲಾ ಹಬ್ಬ ಇದ್ದಂಗ. ಅವಂಗ ಲೋಕಲ್ ಅಡ್ಡಾಡಲಿಕ್ಕೆ ’ನನ್ನ ಬೈಕ್ ತೊಗೊ, ನಿನ್ನ ಬೈಕ್ ತೊಗೊ’ ಅಂತ ದೋಸ್ತರ ಅಗದಿ ಅವನ ಕಂಡರ ಏನ ಪ್ರೀತಿ ಅನ್ನೋರಗತೆ ಗಾಡಿ ಕೊಡ್ತಿದ್ದರು. ಕಡಿಕೆ ಸಂಜಿಗೆ ಅವನ ಲಾಸ್ಟ ಕಾಲ್ ಮುಗಿತ ಅನ್ನೋದ ತಡಾ ಎಲ್ಲಾರೂ ಒಂದ ಕಡೆ ಸೇರತಿದ್ವಿ. ಎಲ್ಲೆ ಅಂತ ಬಾಯಿ ಬಿಟ್ಟ ಏನ ಹೇಳೋದ ಬ್ಯಾಡ ಅನ್ಕೊಂಡೇನಿ. ಎಲ್ಲಾ ದೋಸ್ತರ ಸೇರಿ ಪಾರ್ಟಿ ಮಾಡೋರ. ಇನ್ನ ನಮ್ಮೊಳಗ ಜಾಸ್ತಿ ಗಳಸೋಂವಾ ಅವನ ಅಂದ ಮ್ಯಾಲೆ ಅವಂಗ ಟೊಪಗಿ ಹಾಕ್ತಿದ್ವಿ.ಅದರಾಗ ಅಂವಾ ಕ್ರೇಡಿಟ್ ಕಾರ್ಡ್ ಹೋಲ್ಡರ, ಆವಾಗ ನಮಗ ಅದ ಅಮೇರಿಕನ್ ಗ್ರೀನ್ ಕಾರ್ಡ್ ಇದ್ದಂಗ. ಇಂವಾ ಬಿಲ್ ಬಂದ ಕೂಡ್ಲೆ ಎದ್ದ ಹೋಗಿ ಕ್ರೇಡಿಟ್ ಕಾರ್ಡ ಸ್ವೈಪ್ ಮಾಡ್ತಿದ್ದಾ.
ಅಲ್ಲಾ, ಹಂಗ ಅಂವಾ ಕಂಪನಿ TA-DA ಒಳಗ ಬೇಕಾದಷ್ಟ ಹೊಡ್ಕೊಂಡಿರಬಹುದು ಆದರ ದೋಸ್ತರ ಸಂಬಂಧ ದಿಲ್ ದಾರ್ ಇದ್ದಾನ ಬಿಡ್ರಿ. ಅಲ್ಲಾ, ನಾವ ಹುಬ್ಬಳ್ಳಿ ಮಂದಿನ ಹಂಗ …..ದೋಸ್ತಿ ಅಂದರ ದೋಸ್ತಿ.
ಹಿಂಗ ಇಂವಾ ಹುಬ್ಬಳ್ಳಿಗೆ ಬಂದಾಗೊಮ್ಮೆ ನಮಗ ಪಾರ್ಟಿ ಕೊಡೊದ ಕಂಟಿನ್ಯೂ ಇತ್ತ. ಇತ್ತಲಾಗ ಶಾಣ್ಯಾ ಇದ್ದದ್ದಕ್ಕ ಪ್ರಮೋಶನ್ ಆಗಕೋತ ಹೋದಾ, ಸ್ಟೇಟನಿಂದ ಇಂಡಿಯಾ ಲೇವೆಲ್ ಮುಟ್ಟಿದಾ. ಬರಬರತ ಹುಬ್ಬಳ್ಳಿಗೆ ಬರೋದ ಕಡಮಿ ಆತ. ಎಲ್ಲೆ ಹೋದರು ಫ್ಲೈಟ್ ಅನ್ನೋ ಲೇವಲಗೆ ಬಂದಾ.
’ಏನಲೇ..ಮಗನ ಹುಬ್ಬಳ್ಳಿ ಮರತಿ ಏನ’ ಅಂತ ಕೇಳಿದರ…’ನಿಮ್ಮ ಊರಿಗೆ ಫ್ಲೈಟ ಇಲ್ಲಾ’ ಅನ್ನಲಿಕತ್ತಾ. ಅಲ್ಲಾ ಮಗಾ ತಾ ನೋಡಿದರ ’ಸಿ.ಬಿ.ಟಿ- ಗೋಪನಕೊಪ್ಪ’ ಬಸನಾಗ ಓಡಾಡಿ ಕಲತಂವಾ ನಮ್ಮ ಹುಬ್ಬಳ್ಳಿಗೆ ಹೆಸರ ಇಡೋ ಮಟ್ಟಕ್ಕ ಹೋದಾ. ಇರಲಿ ನಮ್ಮ ದೋಸ್ತ ಮ್ಯಾಲೆ ಹಾರಾಡ್ತಾನ ಹಾರಾಡಲಿ ಒಟ್ಟ ಕೆಳಗ ಬಂದಾಗ ನಮಗ ಪಾರ್ಟಿ ಕೊಡ್ತಾನಲಾ ಸಾಕ ಅಂತ ನಾವು ದೋಸ್ತರ ಸುಮ್ಮನ ಇದ್ವಿ. ಕಡಿಕೆ ಹುಬ್ಬಳ್ಳಿಗೆ ಫ್ಲೈಟ ಬರಲಿಕತ್ವು, ಈ ಮಗಗ ಆವಾಗ ಮತ್ತ ನಮ್ಮ ಹುಬ್ಬಳ್ಳಿ ಸತ್ತೂರ ಡಾಕ್ಟರ, ನಾಲ್ವಾಡ ಡಾಕ್ಟರ ನೆನಪಾದರು. ಅಲ್ಲಾ ಅವರ ಒಂದ ಕಾಲದಾಗ ಸಪೋರ್ಟ ಮಾಡಿದ್ದರಂತ ಇವತ್ತ ಆ ಲೇವಲಗೆ ಏರಿದ್ದಾ ಬಿಡ್ರಿ.
ಮುಂದ ಯಾವಾಗ ಬಂದರೂ ಫ್ಲೈಟನಾಗ. ಪಾರ್ಟಿ ಕೊಡೊದ ಕ್ಲಾರ್ಕ್ಸ ಇನ್ನ್, ಕಾಟನ್ ಕೌಂಟಿ ಒಳಗ. ನಮಗೇನ ಗಂಟ ಹೋಗೊದ ಅಂವಾ ಕರದಾನ,ಅವಂದ ಬಿಲ್ ಅಂತ ನಾವ ಹೋಗಿ ಕಟದ ಬರ್ತಿದ್ವಿ. ಆದರೂ ನಂಗ ಇಂವಾ ಹೆಂಗ ದೋಸ್ತರಿಗೆ ಯಾವಾಗಲೂ ಪಾರ್ಟಿ ಕೊಡ್ಲಿಕ್ಕೆ ಇಷ್ಟ ದಿಲದಾರ್ ಆಗ್ತಾನ ಅಂತ ಆಶ್ಚರ್ಯ ಆಗ್ತಿತ್ತ. ಯಾಕಂದರ ಬರೇ TA-DA ಒಳಗ ಸಂಸಾರ ಮಾಡಿ ಮತ್ತ ಉಳಿಸಿ FD ಇಡೊಂವಾ ಇವತ್ತ ಹೆಂಗ ಸಾವಿರಾರ ಗಟ್ಟಲೇ ಬಿಲ್ ಕೊಡ್ತಾನ ಅಂತ ಡೌಟ ಬರಲಿಕತ್ತ.
ಒಂದ ಸರತೆ ಹಿಂಗ ದೊಡ್ಡಿಸ್ತನಾ ಮಾಡಿ ದೋಸ್ತರನ ಡೇನಿಸನ್ಸಗೆ ಕರಕೊಂಡ ಹೋದಾ, ಎಲ್ಲಾರೂ ತಲ್ಯಾಗೊಂದೊಂದ ಕಂಡೇನೊ ಇಲ್ಲೋ ಅನ್ನೊರಂಗ imported ಬ್ರ್ಯಾಂಡ ಆರ್ಡರ ಮಾಡಿ ಮ್ಯಾಲೆ ಊಟಾ ಕಟದ್ವಿ. ಮುಂದ ಇಂವಾ ಸ್ಟಿವಾರ್ಡಗ ಸೈಡಿಗೆ ಕರದ ’ಟೋಟಲ್ ಪುಡ್ ಬಿಲ್ ಪ್ಲೀಸ್ ’ಅಂದ ಬಿಲ್ ಕೊಟ್ಟ ಬಂದಾ.
ನಾ ಅನ್ಕೊಂಡೆ ಅವನು ನನ್ನಂಗ ಹೆಂಡ್ತಿಗೆ ಹೆದರಿ, ಅಕಿ ಎಲ್ಲರ ಬಿಲ್ ನೋಡಿ-ಗೀಡಿದರ ಅಂತ ಸೇಫಟಿಗೆ ಬರೇ ಫುಡ್ ಬಿಲ್ ತೊಗೊಂಡಿರಬೇಕ ಅಂತ ಅನ್ಕೊಂಡ ಸುಮ್ಮನಾದೆ. ಹಂಗ ನಮಗ ಅವನ ಬಗ್ಗೆ
’ದೋಸ್ತ ಇದ್ದರ ಹಿಂತಾವ ಇರಬೇಕ’ ಅಂತ ಹೆಮ್ಮೆ ಅನಸ್ತಿತ್ತ ಬಿಡ್ರಿ. ಅಲ್ಲಾ, ನಮ್ಮ ದೋಸ್ತ ನ್ಯಾಶನಲ್ ಲೇವಲಗೆ ಹೋಗ್ಯಾನ ಅಂತ ಅಲ್ಲ ಮತ್ತ…ಹುಬ್ಬಳ್ಳಿಗೆ ಬಂದಾಗ ದೋಸ್ತರಿಗೆ ಕರದ ಪಾರ್ಟಿ ಕೊಡ್ತಾನಲಾ ಅದಕ್ಕ.
ಹಂಗ ಹೋದವಾರ friendship day ಇತ್ತಲಾ ಅದಕ್ಕ ಹಿಂತಾ ದೋಸ್ತನ ನೆನಸಿಗೊಳ್ಳಲಾರದ ಹೆಂಗ ಅಂತ ಅವನ ಬಗ್ಗೆ ಇಷ್ಟ ಬರದ ಅವನ ಪಾರ್ಟಿ ಋಣಾ ತಿರಿಸಿಗೊಂಡೆ. ಜೀವನದಾಗ ಹಿಂತಾ ದೋಸ್ತರ ಇದ್ದದ್ದಕ್ಕ ಮತ್ತ ಇವತ್ತೂ ಫ್ರೇಂಡಶಿಪ್ ಡೇ ಸೆಲೆಬ್ರೇಟ್ ಮಾಡೋದ.
ಅನ್ನಂಗ ಇನ್ನೊಂದ ಹೇಳೋದ ಮರತೆ, ಮೊನ್ನೆ ಅವನ ಕಾಂಪಿಟೇಟರ್ ಕಂಪನಿ ದೋಸ್ತ ಭೆಟ್ಟಿ ಆಗಿದ್ದಾ, ಅವಂಗ ಈ ದಿಲದಾರ್ ದೋಸ್ತನ ಬಗ್ಗೆ ಹೇಳಿ ’ನೀ ಒಂದ ಸ್ವಲ್ಪ ಅವನ್ನ ಉಚ್ಚಿನರ ದಾಟ ಮಗನ….ಅವನ್ನ ನೋಡಿ ಕಲಿ’ ಅಂದರ ಅಂವಾ ಏನ ಅಂದಾ ಹೇಳ್ರಿ
’ಲೇ…ಹುಚ್ಚಾ…ಅಂವಾ ರೊಕ್ಕಾ ಏನ ತನ್ನ ಕೈಲೆ ಕೊಡ್ತಾನೇನ…ನಿಮಗ ಕುಡಸಿದ್ದ, ತಿನಿಸಿದ್ದ ಎಲ್ಲಾ ಕಂಪನಿಗೆ ಕ್ಲೇಮ್ ಮಾಡ್ತಾನ…ಒಂದ ಪೈಸಾ ಬಿಡಂಗಿಲ್ಲಾ…ಬೇಕಾರ ನೋಡ ನೀ..ಅಂವಾ ಯಾವಾಗಲೂ ಟೋಟಲ್ ಫುಡ್ ಬಿಲ್ ಕೊಡ್ರಿ ಅಂತ ಇಸ್ಗೋತಾನ. ಫುಡ್ ಬಿಲ್ ಇದ್ದರ ಇಷ್ಟ ಕಂಪನ್ಯಾಗ ಕ್ಲೇಮ್ ಆಗ್ತೈತಿ ಮಗನ’ ಅಂತ ಒಂದ ಬಾಂಬ್ ಹಾಕಿದಾ.
ನಾ ಒಂದ ಸರತೆ ಸಿರಿಯಸ್ ಆಗಿ ಫ್ಲ್ಯಾಶ್ ಬ್ಯಾಕಿಗೆ ಹೋದೆ. ಕರೆಕ್ಟ, ಅಂವಾ ಯಾವಾಗಲೂ ಟೋಟಲ್ ಫುಡ್ ಬಿಲ್ ಕೊಡ್ರಿ ಅಂತ ಇಸ್ಗೊತಿದ್ದಾ.
ನಂಗ ಒಂದ ಸರತೆ ಅವನ ಬಗ್ಗೆ ಇದ್ದ ಹೆಮ್ಮೆ, ಗೌರವ ಎಲ್ಲಾ ಇಳದ ಹೋತ. ಮಗಾ ಕಂಪನಿ ರೊಕ್ಕದಲೇ ನಮಗೇಲ್ಲಾ ತಿನಿಸಿ ಕುಡಿಸಿ ದೊಡ್ಡಿಸ್ತನ ಬಡಿತಾನಲಾ ಅಂತ ಅನಸ್ತ. ಆದರ ನಾ ಅವಂಗೇನ ಅದನ್ನ ಕೇಳಲಿಲ್ಲಾ, ಬ್ಯಾರೆ ದೋಸ್ತರಿಗೂ ಹೇಳಲಿಲ್ಲಾ. ಯಾಕಂದರ ಮುಂದಿನ ಸರತೆ ಬಂದಾಗ ಪಾರ್ಟಿಗೆ ನನ್ನ ಕರಕೊಂಡ ಹೋಗ್ಲಿಲ್ಲಾ ಅಂದರ?
ಅಲ್ಲಾ, ಇದಕ್ಕ ಹೌದಲ್ಲ ಮತ್ತ ದೋಸ್ತಿ ಅನ್ನೋದ.
Any way belated happy friendship day to all of you.

One thought on “ಪ್ಲೀಸ್….ಟೋಟಲ್ ‘ ಫುಡ್ ಬಿಲ್ ‘ ಕೊಡ್ರಿ

  1. ಮಸ್ತ ನೆನಪುಗಳನ್ನ ಬರೆದಿರಿ ಸರ್ .. ನಿಮ್ಮ ದೋಸ್ತ ಅಷ್ಟ ಅಲ್ಲ , ನಾವೂ ಒಂದ ಕಾಲಕ್ಕ , ದೋಸ್ತರ ಜೊತೆಗೆ ಏನರ ಹೋಟೆಲ್ (?) ಗೆ ಊಟಕ್ಕ ಹೋದರ , ಮೊದಲು , ಹೋಟೆಲ್ ಮ್ಯಾನೇಜರ್ ಹತ್ತಿರ , ಡ್ರಿಂಕ್ಸ್ ಬದಲಿ , ಫುಡ್ ಬಿಲ್ ಕೊಡ್ತಿರೋ ಇಲ್ಲೋ ?, ಎಂದು ಕೇಳಿ , ಖಾತ್ರಿ ಮಾಡಿಕೊಂಡ ಒಳಗ ಹೋಗುತ್ತಿದೆವು 😀

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ