ಮೊನ್ನೆ ಲಾಕಡೌನ್ ಅನೌನ್ಸ ಮಾಡಿ ಒಂದ-ಎರಡ ದಿವಸಕ್ಕ ನಮ್ಮ ಮೌಶಿ ಗಂಡಂದ ವಾಟ್ಸಪ್ ಬಂತ
’ಜಿಲ್ಲೆಯಲ್ಲಿ ಕೋರೊನಾ ಹಾವಳಿ ಜಾಸ್ತಿ ಆದ ಕಾರಣ ಲಾಕಡೌನ್ ಘೋಷಿಸಿದ್ದು. ನನ್ನ ಸುಪುತ್ರ ಚಿ. ಚಿದಾನಂದ ಇವನ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ತಿಳಿಸಲಾಗುವದು’ ಅಂತ ಬರದಿದ್ದಾ.
ಅಲ್ಲಾ, ನಾ ಸೋಡ ಮುಂಜವಿಗೆ ಹೋದಾಗ ’ಹಂಗ ಏನರ ಲಾಕ್ ಡೌನ್ ಆದರ ಮದ್ವಿ ಕ್ಯಾನ್ಸೆಲ್ ಮಾಡಬ್ಯಾಡಾ ಐವತ್ತ ಮಂದಿ ಒಳಗ ಮುಗಿಸಿ ಬಿಡ ಕಾಕಾ’ ಅಂತ ಹೇಳಿದ್ದೆ. ಆದರ ಅಂವಾ ಹೆಂಡ್ತಿದ ಬಿಟ್ಟ ಬ್ಯಾರೆದವರ ಮಾತ ಕೇಳಿದರಲಾ? ಅದರಾಗ ನಮ್ಮ ಮೌಶಿ ಅಂತೂ
’ಇರೊಂವ ಒಬ್ಬ ಮಗಾ, ಮಾಡ್ಕೋಳೊದ ಒಂದ ಮದ್ವಿ ಅದನ್ನ ಗ್ರ್ಯಾಂಡ್ ಮಾಡೋದ. ಮೇ ಸೂಟ್ಯಾಗ ಆಗಲಿಲ್ಲಾ ಅಂದರ ಅಕ್ಟೋಬರ್ ಸೂಟ್ಯಾಗ ಆಗ್ಲಿ’ ಅಂತ ಹಟಾ ಹಿಡಿದಿದ್ಲು. ಅಕಿದ ಏನ ಗಂಟ ಹೋಗೊದ, ಪಾಪ ಲಗ್ನಾ ಮಾಡಿ ಕೋಡೊರ ಬೀಗರ, ತ್ರಾಸ ಆಗೋದ ಬೀಗರಿಗೆ.
ಮುಂದ ಒಂದ ಹತ್ತ ನಿಮಿಷಕ್ಕ ನಮ್ಮವ್ವಗ ನಮ್ಮ ಮೌಶಿದ ಫೋನ ಬಂತ. ನಾ ನಮ್ಮವ್ವಗ ಮೊದ್ಲ ಮದ್ವಿ ಮುಂದ ಹೋಗಿದ್ದ ಹೇಳಿದ್ದೆ, ಪಾಪ ಅಕಿ ಒಂದ ಹತ್ತ ಸರತೆ ಲೊಚ್ಚ್ ಲೊಚ್ಚ್ ಅಂದ ಮೌಶಿ ಹೀರೇಮನಷ್ಯಾಳಂತ ಕಾರ್ಡ ಜೊತಿ ಕೊಟ್ಟಿದ್ದ ಆರವಾರಿ ಕಾಟನ್ ಸೀರಿ ಹಿಡಕೊಂಡ ಮರಗಿದ್ದ ಮರಗಿದ್ದ. ನಾ ಅಕಿಗೆ
’ಮೌಶಿ ಸೀರಿ ಏನ ವಾಪಸ್ಸ ಇಸ್ಗೊಳಂಗಿಲ್ಲ ತೊಗೊ’ ಅಂತ ಸಮಾಧಾನ ಮಾಡೋದಕ್ಕ ಅಕಿದ ಫೋನ ಬಂದಿತ್ತ. ನಮ್ಮವ್ವ ಫೋನ ಎತ್ತಿದೋಕಿನ
’ಸುದ್ದಿ ಗೊತ್ತ ಆತ್ವಾ, ಭಾಳ ಕೆಟ್ಟ ಅನಸ್ತ, ಇಷ್ಟೇಲ್ಲಾ ಮಾಡಿದ್ರಿ, ಹಿಂಗ ಆಗಬಾರದಾಗಿತ್ತ..ಎಲ್ಲಾ ದೇವರ ಇಚ್ಛೆ” ಅಂತ ಅಂದ್ಲು.
ಒಂದ ಸರತೆ ಅಕಿ ಹಂಗ ಅಂದದ್ದ ಕೇಳಿ ನಂಗ ಗಾಬರಿ ಆತ. ಯಾರರ ಇಕಿ ಮಾತ ಕೇಳಿದರ ಅವರ ಪೈಕಿ ಯಾರೊ ಹೋಗ್ಯಾರ ಅಂತ ತಿಳ್ಕೋಬೇಕ. ನಮ್ಮವ್ವ ಇನ್ನೇನ ಫೋನನಾಗ ಶೃದ್ಧಾಂಜಲಿ ಸಭಾನೂ ಮಾಡ್ತಾಳೊ ಅನ್ನೋದರಾಗ ನಮ್ಮ ಮೌಶಿ
’ಏನ ಮಾಡಬೇಕ ಸಿಂಧಕ್ಕಾ, ಸರ್ಕಾರಿ ರೂಲ್ಸ ಪಾಲಸಬೇಕಲ್ವಾ…ಅದರಾಗ ಇರೋ ಒಬ್ಬ ಮಗನ ಮದ್ವಿ ಅದನ್ನೆಂಗ ಮನಿ ಪೂರ್ತೇಕ ಮಾಡ್ಲಿಕ್ಕೆ ಆಗ್ತದ, ಹೆಂಗಿದ್ದರೂ ಖರ್ಚ ಎಲ್ಲಾ ಹೆಣ್ಣೋರದ ನಂಬದೇನ ಗಂಟ ಹೋಗೊದ’ ಅಂತ ಅಗದಿ ಭಿಡೆ ಬಿಟ್ಟ ಹೇಳಿದ್ಲು.
ಪಾಪ, ಅಕಿ ಸಂಕಟ ಅಕಿಗೆ. ಹಂಗ ಅಕಿದು ತಪ್ಪಿಲ್ಲಾ ಅನ್ನರಿ. ಯಾ ಚೊಚ್ಚಲ ಗಂಡಸ ಮಗನ ತಾಯಿಗೆ ಲಗ್ನ ಪದ್ದತಸೀರ ಆಗಬೇಕು, ಹಾಗಲಕಾಯಿ ಬಳ್ಳಿ ಒಳಗ ಚೊಚ್ಚಲ ಗಂಡಸ ಮಗನ ನಿಯಮ ಮುರಿಸ್ಗೊಬೇಕು, ಮ್ಯಾಲೆ ಅದಕ್ಕೊಂದ ಹಸರ ಸೀರಿ ಬೀಗರ ಕಡೆ ವಸೂಲ ಮಾಡ್ಕೊಬೇಕು ಅಂತ ಆಶಾ ಇರಂಗಿಲ್ಲಾ ಹೇಳ್ರಿ?
ಕಡಿಕೆ ನಮ್ಮವ್ವ ’ಆಗಿದ್ದ ಆತ ಬಿಡ್ವಾ, ಲಾಕಡೌನ್ ಮುಗದ ಮ್ಯಾಲೆ ಲಗೂನ ಮಾಡಿ ಮುಗಿಸಿಬಿಡು’ ಅಂತ ಅಂದರ ಅಕಿ
’ಅಲ್ಲಾ, ಅನ್ನಂಗ ಸಿಂಧಕ್ಕಾ ಮತ್ತ ಹಂಗ ಲಾಸ್ಟ ಟೈಮ ಗಡಿ-ಬಿಡಿ ಆತ ಅಂತ ನೀವು ಗಡಿಗಿನೀರಗೆ ಕರದಾಗ ನಮಗ ಬರಲಿಕ್ಕೆ ಆಗಲಿಲ್ಲಾ, ಈಗ ಹೆಂಗಿದ್ದರೂ ಮದ್ವಿ ಮುಂದ ಹೋಗೇದ, ಹಂಗ ಲಾಕಡೌನ್ ಒಳಗ ಗಡಿಗಿನೀರ ಮಾಡಬಹುದು, ನಾವು ಫ್ರೀ ಇದ್ದೇವಿ’ ಅಂತ ಅಗದಿ ಅತ್ತು-ಕರದು ಔತಣಾ ತೊಗೊಂಡರು ಅಂತಾರಲಾ ಹಂಗ ಕೇಳಿದ್ಲು. ಪಾಪ ನಮ್ಮವ್ವಗ ಏನ ಹೇಳ್ಬೇಕ ತಿಳಿಲಿಲ್ಲಾ
ಒಂದ ಸರತೆ ನನ್ನ ಹೆಂಡ್ತಿ ಮಾರಿ ನೋಡಿ ’ಯಾಕ ಆಗವಲ್ತಾಕ ತೊಗೊ, ಸೊಸಿನ್ನ ಒಂದ ಮಾತ ಕೇಳಿ ಹೇಳ್ತೇನಿ’ ಅಂತ ಫೋನ ಇಟ್ಟಳು.
(ಗಡಿಗಿನೀರ ಅಂದರ ನಮ್ಮಲ್ಲೇ ಲಗ್ನಕಿಂತ ಮುಂಚೆ ಹುಡಗನ್ನ/ಹುಡಗಿನ್ನ ಅವರವ್ವಾ ಅಪ್ಪನ ಜೊತಿ ಮನಿ ಕರದ ಊಟಾ ಇಲ್ಲಾ ತಿಂಡಿ ತಿನಿಸಿ ಉಡಗೋರೆ ಅಲ್ಲೇ ಕೊಟ್ಟ ಕಳಸ್ತೇವಿ. ಹಂಗ ಇದನ್ನ ಕಾರ್ಡ ಕೊಟ್ಟೊರಿಗೇಲ್ಲಾ ಮಾಡಂಗಿಲ್ಲ ಮತ್ತ, ಅಗದಿ ಹತ್ತರದ ಸಂಬಂಧಿಕರಿಗೆ, ಕ್ಲೋಸ್ ಇದ್ದವರಿಗೆ ಇಷ್ಟ ಮಾಡ್ತೇವಿ)
ಅಲ್ಲಾ ಏನ ಜನಾ ಅಂತೇನಿ. ಲಗ್ನ ಮುಂದ ಹೋತ ಅಂತ ಪಾಪ ಹುಡುಗ ಹೊಟ್ಟಿಬ್ಯಾನಿ ಹಚಗೊಂಡರ ಇಕಿ ಹೆಂಗಿದ್ದರು ಲಗ್ನ ಮುಂದ ಹೋಗಿದ್ದಕ್ಕ ಯಾರ-ಯಾರ ಮನ್ಯಾಗಿನ ಗಡಿಗಿನೀರ ಬಾಕಿ ಉಳದಿದ್ವು ಅವನ್ನ ಮುಗಿಸಿಕೊಳ್ಳಿಕ್ಕೆ ನಿಂತಾಳ ಅಂದರ ಏನ ಮಾಡಬೇಕು.
ಅದರಾಗ ದೊಡ್ಡಿಸ್ತನ ಮಾಡಿ ಕಾರ್ಡ ಜೊತಿ ರಿಟರ್ನ್ ಗಿಫ್ಟ ಬ್ಯಾರೆ ಕೊಟ್ಟ ಹೋಗಿದ್ಲು, ಇನ್ನ ಗಡಿಗಿನೀರ ಮಾಡಿಸ್ಕೊಂಡ ರಿಟರ್ನ್ ಆನ್ ರಿಟರ್ನ್ ಗಿಫ್ಟ ಬಂದರ ಸಾಕ ಅಂತ ವಿಚಾರಕ್ಕ ಬಂದಿದ್ಲು. ಅಲ್ಲಾ ನನಗಂತೂ ಎಲ್ಲೇ ನಮ್ಮ ಮೌಶಿ
ಎಲ್ಲಾರದೂ ಗಡಿಗಿನೀರ ಮುಗದಿಲ್ಲಾ ಹಿಂಗಾಗಿ ಅಷ್ಟು ಗಡಿಗಿನೀರ ಮುಗದ ಮ್ಯಾಲೆ ಮದ್ವಿ ಇಟ್ಕೊಂಡರಾತ ಅಂತ ಲಾಕಡೌನ್ ನೇವಾ ಮಾಡಿ ಮದ್ವಿ ಪೋಸ್ಟಪೋನ ಮಾಡ್ಯಾಳೊ ಅನಸಲಿಕತ್ತ.
ಅಲ್ಲಾ ಸರ್ಕಾರದವರ ಜನರಿಗೆ ಎಮೆರ್ಜನ್ಸಿ, ಎಸ್ಸೆನ್ಶಿಯಲ್ ಅಂತ ಹಾಲು, ಎಣ್ಣಿ , ಕಾಯಿಪಲ್ಯೆ , ಔಷದಿ ತೊಗೊಳ್ಳಿಕ್ಕೆ ಒಂದ ನಾಲ್ಕ ತಾಸ ಮುಂಜಾನೆ ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಬೇಕರಿ, ಬಾರ್ ಒಪನ್ ಇಟ್ಟರ ಇವರ ಹಂತಾ ಹೊತ್ತಿನಾಗ ಗಡಿಗಿನೀರ ಮಾಡಿಸ್ಗೊತಾರ ಅಂದರ ಏನ ಹೇಳ್ಬೇಕರಿ.
ಹಂಗ ನನ್ನವು ಈ ಹತ್ತ ದಿವಸ ಲಾಕ್ ಡೌನ್ ಒಳಗ ಒಂಬತ್ತ ಮದ್ವಿ ಮಿಸ್ ಆಗ್ಯಾವ. ನಮ್ಮ ಓಣ್ಯಾಗಿನ ಎರೆಡ ಮದ್ವಿ ಮನಿ ಮುಂದ ಮಾಡಿದರು. ಇನ್ನ ಮನಿ ಮುಂದಿನ ಮದ್ವಿ, ಊಟಕ್ಕ ಹೋಗಲಿಲ್ಲಾ ಅಂದರು ಅವರ ಸೀರಿ ಕೊಟ್ಟ ಹೋಗಿದ್ದಕ್ಕ ನಾವು ಒಂದ ಸೀರಿ ಕೊಟ್ಟ ಬರಲಿಲ್ಲಾ ಅಂದರ ಹೆಂಗ ಅಂತ ನನ್ನ ಹೆಂಡ್ತಿ ಹೋದ್ಲು.
’ಇನ್ನ ಸೀರಿ ಕೊಡೊದ ಖರೇ ಅಂದ ಮ್ಯಾಲೆ ಅಲ್ಲೇ ಒಂದ ತುತ್ತ ಅಲ್ಲೇ ಊಟಾ ಮಾಡಿ ಬಾ, ಮತ್ತೇಲ್ಲೆ ನಿನ್ನ ಪಾಲಿಂದ ಕುಕ್ಕರ ಇಡ್ಲಿ’ ಅಂತ ನಮ್ಮವ್ವ ಅಂದ್ಲು. ಅಲ್ಲಾ ನಾವ ಗಿಫ್ಟ ಕೊಟ್ಟಿದ್ದ ವರ್ಕ್ ಔಟ್ ಆಗಬೇಕಲಾ?
ಹೋಗಲಿ ಬಿಡ್ರಿ ನಾವೇನೊ ಹಿಂಗ ಮಷ್ಕೀರಿ ಮಾಡ್ತೇವಿ ಆದರ ಹಿಂಗ ಒಮ್ಮಿಂದೊಮ್ಮಿಲೇ ಲಗ್ನ ಫಿಕ್ಸ್ ಆಗಿ ಪೋಸ್ಟಪೋನ್ ಆದರ ಆಗೋ ತ್ರಾಸ ಅವರಿಗೆ ಗೊತ್ತ. ಆದರೂ ನಮ್ಮ ಮೌಶಿ ಹಿಂಗ ಲಾಕ್ ಡೌನ ಒಳಗ ಗಡಿಗಿನೀರ ನಡಿತದ, ಮಾಡೋರ ಮಾಡ್ರಿ ಅಂತ ಅಂದದ್ದಕ್ಕ ಇಷ್ಟ ಬರಿಬೇಕಾತ.
ಇನ್ನೊಂದ ಮಜಾ ಕೇಳ್ರಿಲ್ಲೆ, ಕರೆಕ್ಟ ಹೋದ ವರ್ಷ ಲಾಕ್ ಡೌನ್ ಟೈಮ ಒಳಗ ನಮ್ಮ ಮೌಶಿ ಮಗಳದ ಡಿಲೇವರಿ ಡೇಟ್ ಇತ್ತ, ಲಾಕ್ ಡೌನ ಆತ. ನಾವ ಇನ್ನೂ ಅಕಿಗೆ ಕುಬಸಾ ಮಾಡೋದ ಬಾಕಿ ಇತ್ತ. ಇನ್ನ ಬಸರ ಹೆಂಗಸಿಗೆ ಯಾಕ ರಿಸ್ಕ್ ಅಂತ ನಾವ ಲಾಕ್ ಡೌನ್ ಒಳಗ ಕುಬಸಾ ಮಾಡ್ಲಿಲ್ಲಾ. ನಾ ನಮ್ಮ ಮೌಶಿ ಮಗಳಿಗೆ ಸಾವಜಿ ಸೇರತದ ಅಂತ ಝಿಮೊಟೊ ಒಳಗ ಪಾರ್ಸೆಲ್ ಕೊಟ್ಟ ಕಳಿಸಿ ಅಕಿ ಬಯಕಿ ತಿರಿಸಿ, ಇದ ನಮ್ಮನಿ ಕುಬಸಾ ಅಂತ ಹೇಳಿ ಬಿಟ್ಟಿದ್ದೆ. ಅಲ್ಲಾ ಆವಾಗ ನಮ್ಮ ಮೌಶಿ
’ಅಯ್ಯ ಈಗಿನ ಕಾಲದ ಹುಡಿಗ್ಯಾರ ಹಡಿಯೋದ ಒಂದ, ಎಷ್ಟ ಕುಬಸ ಆಗ್ತಾವ ಆಗಲಿ ತಡಿ, ಒಮ್ಮೆ ಎಲ್ಲಾ ಕುಬಸ ಮುಗದ ಮ್ಯಾಲೆ ಡಿಲೇವರಿ ಮಾಡಿಸಿದರಾತ ಅಂತ ಅನ್ನಬೇಕಿತ್ತ? ಲಾಕ್-ಡೌನ್ ಅದ ಅಂತ ಡಿಲೇವರಿ ಪೋಸ್ಟಪೋನ್ ಮಾಡ್ಬೇಕಿತ್ತ? ಅಲ್ಲಾ, ಅದೇಲ್ಲೆ ಇಕಿ ಕೈಯಾಗ ಇತ್ತ ತಲಿ? ಜಗತ್ತಿನೊಳಗ ಕೊರೊನಾ ಬಂದರೇನು ಬಿಟ್ಟರೇನು, ಕುಬಸಾ ಮಾಡಿದರೇನು ಮಾಡದಿದ್ದರ ಏನು, ಹುಟ್ಟೋರ ಹುಟ್ಟೇ ಹುಟ್ಟತಾರ.
ಅದರಾಗ ಮೌಶಿ ಮಗಳ ಹಡಿಯೋ ಟೈಮ್ ಒಳಗ ಅಕಿ ಅಳಿಯಾ ಬ್ಯಾರೆ ವರ್ಕ್ ಫ್ರಾಮ್ ಹೋಮ್ ಹಾಕಿಸ್ಗೊಂಡ ಹೆಂಡ್ತಿ ಹಡಿಯೊಕಿಂತ ಮೊದ್ಲ ಬಾಣಂತನ ಮಾಡ್ಲಿಕ್ಕೆ ಬಂದಿದ್ದಾ, ನಮ್ಮ ಮೌಶಿಗರ ಇತ್ತಲಾಗ ಅಳಿಯಾಂದ ಚಾಕರಿ ಮಾಡಬೇಕೊ ಇಲ್ಲಾ ಮಗಳದ ನೋಡಬೇಕೋ? ಅಳಿಯಾಂದ ಬೈಕಿ ತಿರಸಬೇಕೊ ಇಲ್ಲಾ ಮಗಳದ ಬಯಕಿ ತಿರಸಬೇಕೊ ಒಂದ ತಿಳಿವಲ್ತಾಗಿತ್ತ. ರಿಟೈರ್ಡ್ ಆದ ಮ್ಯಾಲೆ ಗಂಡ ಮನ್ಯಾಗ ಇದ್ದರ ಹೆಂಡ್ತಿಗೆ ಕಿರಿ ಕಿರಿ ಆಗ್ತದ ಇನ್ನ ಹಿಂಗ ಅಳಿಯಾ ಬಂದ ಪಡಸಲ್ಯಾಗ ಲ್ಯಾಪ್ ಟಾಪ್ ತಕ್ಕೊಂಡ ತಾಸ-ತಾಸಿಗೊಮ್ಮೆ ಕಶಾಯ ಮಾಡ್ರಿ, ಚಹಾ ಮಾಡ್ರಿ ಅಂದರ ತಲಿ ಕೆಡಲಾರದ ಏನ್ರಿ.
ಆವಾಗ ಈ ಸುಡಗಾಡ್ ಲಾಕ್-ಡೌನ್ ಇರಲಿ ಬಿಡಲಿ, ಮಂದಿ ಮನಿ ಕುಬಸ ಮುಗಿಲಿ-ಮುಗಿಲಾರದ ಇರಲಿ ಒಟ್ಟ ಸುಸುತ್ರ ಮಗಳ ಹಡದ ಹೆತ್ತಿಬಣ ಹೋದರ ಸಾಕ ಅಂದ ಮೌಶಿ ಈಗ ಮಗನ ಮದ್ವಿ ಮುಂದ ಹೋದರ ಗಡಿಗಿನೀರ ಮಾಡಿಸ್ಗೊಳ್ಳಿಕ್ಕೆ ಅಪಾಯಿಂಟಮೆಂಟ್ ತೊಗೊಳಿಕತ್ತಾಳ.
ನಾ ಅಕಿಗೆ ತಲಿಕೆಟ್ಟ ಮೊದ್ಲ ಅಪಾಯಿಂಟ್ ಮೆಂಟ್ ತೊಗೊಂಡ ವಾಕ್ಸಿನ್ ಹಾಕಿಸ್ಗೊ, ಲಾಕಡೌನ್ ಒಳಗ ವ್ಯಾಕ್ಸಿನ್ ನಡಿತದ ಆಮ್ಯಾಲೆ ಗಡಿಗಿನೀರ. ನಾವು ವಾಕ್ಸಿನ್ ತೊಗೊಂಡವರಿಗೆ ಇಷ್ಟ ಗಡಿಗಿನೀರ ಮಾಡ್ತೇವಿ ಅಂತ ಹೇಳೇನಿ. ಅಲ್ಲಾ ಕರೆಕ್ಟ ಹೌದಲ್ಲ ನಾ ಹೇಳಿದ್ದ ಮತ್ತ?
ಸರ್ ನಿಮ್ಮ ಲೇಖನ ನಿಮ್ಮ ಬರವಣಿಗೆಗಳು ಓದುದ ಅಷ್ಟ ಅಲ್ಲ ನೋಡದಂಗ ಅಕೈತಿ ರೀ
ತುಂಬಾ ಚೆನ್ನಾಗಿದೆ. ನಾವು ಮಾಡಿದ್ದ ಗಡಿಗಿನೀರು ಎಲ್ಲಾ ಫ್ಲ್ಯಾಶ್ ಬ್ಯಾಕ್‌ನಲ್ಲಿ ಹಾದು ಹೋದವು.
ವ್ಯಾಕ್ಸಿನ್ ತೊಗೊಂಡವರಿಗಷ್ಟ ಗಡಿಗಿನೀರು; ಅಲ್ಟಿಮೇಟ್.
Brought back the sweet memories of this event before the wedding. Light and crisp words