ಇದ ನಾವ ಕಾಲೇಜನಾಗ ಇದ್ದಾಗಿನ ಮಾತ, ನಮಗ ಗಣಪತಿ ಹಬ್ಬ ಅಂದರ ಅಗದಿ ದೊಡ್ಡ ಹಬ್ಬ…ಹಂಗ ಗಣಪತಿ ಹಬ್ಬನ ದೊಡ್ಡದು ಅದರಾಗ ನಮ್ಮ ಹುಬ್ಬಳ್ಳಿ ಸಾರ್ವಜನಿಕ ಗಣಪತಿ ಹಬ್ಬ ಅಂದರ ಕೇಳ್ತಿರೇನ? ಇನ್ನ ನಮ್ಮಂತಾ ಕಾಲೇಜ ಹುಡುಗರಿಗಂತು ಅಗದಿ ಹೇಳಿ-ಕೇಳಿ ಬರೋ ಹಬ್ಬಾ. ಅದ ಯಾಕಪಾ ಅಂದರ ನಾವು ಕಾಲೇಜ ದೋಸ್ತರೇಲ್ಲಾ ಸೇರಿ ದಿವಸಾ ರಾತ್ರಿ ಸಾರ್ವಜನಿಕ ಗಣಪತಿ ನೋಡ್ಲಿಕ್ಕೆ ಹೋಗೊರ. ಹಂಗ ನಾವ ಬರೇ ಗಣಪತಿ ನೋಡ್ಲಿಕ್ಕೆ ಹೋಗ್ತಿದ್ದಿಲ್ಲಾ, ಆ ಗಣಪತಿ ನೋಡ್ಲಿಕ್ಕೆ ಬಂದವರನೂ ನೋಡ್ಲಿಕ್ಕೆ ಹೋಗ್ತಿದ್ವಿ. ಅದರಾಗ ಯಾರರ ನಮ್ಮ ಕ್ಲಾಸಮೇಟ ಹುಡಿಗ್ಯಾರ ಬರ್ತಿರತಾರ ಅಂತ ಆಶಾ ಇಟ್ಗೊಂಡ ದಿವಸಾ ಹೋಗೊರ.
ಒಬ್ಬೋಕಿ ಯಾರರ ಕಂಡ್ಲಿಲ್ಲೋ ಮುಗಿತ. ನಾವ ಮುಂದ ಅಕಿ ಯಾವ ಯಾವ ಗಣಪತಿ ನೋಡ್ತಾಳ ಅವನ್ನ ನೋಡ್ಕೊತ ಹೊಂಟ ಬಿಡ್ತಿದ್ದವಿ, ಅಕಿ ಅಕ್ಕಿ-ಹೊಂಡದ ಗಣಪತಿ ಪೆಂಡಾಲದಾಗ ಭೆಟ್ಟಿ ಆದ್ಲು ಅಂದರ ಮುಂದ ಶಿಂಪಿ ಗಲ್ಲಿ, ಜವಳಿ ಸಾಲ, ದುರ್ಗದ ಬೈಲ, ಡೆಕ್ಕನ್ ಟಾಕೀಸ್, ಚಂದ್ರಕಲಾ ಟಾಕೀಸ್ ಅಂತ ಎಲ್ಲಾ ಕಡೆ ಬೆನ್ನ ಹತ್ತತಿದ್ವಿ.
ಪಾಪ ಆ ಹುಡಗಿನರ ಅವರವ್ವಾ-ಅಪ್ಪನ ಜೊತಿ ಬಂದಿರೋಕಿ, ಅಕಿ ಸಂಕಟ ಅಕಿಗೆ..ನಾವ ಮುದ್ದಾಮ ಅಕಿ ಹಿಂದ ಪಾಳೆ ಹಚ್ಚಿ ಅಕಿ ದೇವರಿಗೆ ಕೈಮುಗದ ಬೇಡ್ಕೊಬೇಕಾರ ನಾವು ಅಕಿಗೆ ಬೇಡ್ಕೊಂಡ ಮ್ಯಾಲೆ ಗದ್ದಲದಾಗ ಕೈ ಕೈ ಬಡಿಸ್ಗೋತ ಪಂಚಾಮೃತ ತೊಗೊಂಡ ಬರೋರ. ಮತ್ತ ಮುಂದಿನ ಪೆಂಡಾಲದಾಗ ಇದ ಹಣೇಬರಹ.
ಅದರಾಗ ಒಂದಿಷ್ಟ ಗಣಪತಿ ಪೆಂಡಾಲದಾಗ ರಾತ್ರಿ ಪ್ರಸಾದದ ವ್ಯವಸ್ಥೆ ಬ್ಯಾರೆ ಇರ್ತಿತ್ತ. ಅಂದರ ಅನ್ನ ಸಂತರ್ಪಣೆ. ಒಂದ ಸೀರಾ, ಪಲಾವ ಇಲ್ಲಾ ಬಿಸಿಬ್ಯಾಳಿ ಭಾತ ಗಣಪತಿ ನೋಡ್ಲಿಕ್ಕೆ ಬಂದೋರಿಗೆ ಹಂಚತಿದ್ದರ. ಹಂಗ ಒಂದಿಷ್ಟ ದೋಸ್ತರ ಗಣಪತಿ ನೋಡೊದಕಿಂತಾ ಜಾಸ್ತಿ ಪ್ರಸಾದಕ್ಕ ಬಂದಿರ್ತಿದ್ದರ ಆ ಮಾತ ಬ್ಯಾರೆ.
ನಾವು ನಮ್ಮ ಕ್ಲಾಸಮೇಟ್ ಹುಡಗ್ಯಾರಿಗೆ ’ಏ…ಶಿಂಪಿಗಲ್ಯಾಗ ಪಲಾವ ಮಸ್ತ ಮಾಡ್ಯಾರ’, ’ಚಂದ್ರಕಲಾ ಟಾಕೀಸ ಗಣಪತಿ ಕಡೆ ಬೆಲ್ಲದ ಸಿರಾ ಐತಿ’ ಅಂತೇಲ್ಲಾ ಹೇಳೋರ. ಅವರ ತಲಿಕೆಟ್ಟ ’ನಾ ನಿಮ್ಮಂಗ ತಿನ್ನಲಿಕ್ಕೆ ಬಂದಿಲ್ಲಾ ಗಣಪತಿ ನೋಡ್ಲಿಕ್ಕೆ ಬಂದೇನಿ ನಡಿ’ ಅಂತ ಹರಕೊಳೊರ.
ಇನ್ನೊಂದ ಮಜಾ ಅಂದರ ಆವಾಗ ಗಣಪತಿ ನೋಡ್ಲಿಕ್ಕೆ ಜಗ್ಗೆ ಜನಾ ಬರೋದಕ್ಕ ಗದ್ಲ ಜಾಸ್ತಿ ಇರ್ತಿತ್ತ. ಒಮ್ಮೋಮ್ಮೆ ಸಣ್ಣ ಹುಡುಗರು ಕಳಕೊಂಡ ಬಿಡ್ತಿದ್ದರು. ಹಂಗ ಯಾರದರ ಮಕ್ಕಳ ಕಳ್ಕೊಂಡರ ಅವರ ಪೆಂಡಾಲದಾಗ ಮೈಕಿನಾಗ ಒದರಸೋರ ’ಹಸರ ಫ್ರಾಕ್ ಹಾಕ್ಕೊಂಡ ಸವಿತಾ ಅನ್ನೋಕಿ, ೬ ವರ್ಷದೋಕಿ ಯಾರಿಗರ ಸಿಕ್ಕಿದ್ದರ ಇಲ್ಲೆ ಪೇಂಡಾಲ ಸ್ಟೇಜ ಕಡೆ ಕರಕೊಂಡ ಬರ್ರಿ, ಅವರ ಅವ್ವಾ ಅಪ್ಪಾ ಕಾಯಕತ್ತಾರ’ ಅಂತ ಅನೌನ್ಸ ಮಾಡೋರ. ಇದ ಲಗ-ಭಗ ಗದ್ಲ ಇರೋ ಪೆಂಡಾಲದಾಗ ಕಾಮನ್.
ಹಂತಾದರಾಗ ನಾವು ದೋಸ್ತರ ಸೇರಿ ಯಾ ಪೆಂಡಾಲದಾಗ ನಮ್ಮ ಕ್ಲಾಸಮೇಟ್ ಇರ್ತಾಳ ಅಲ್ಲೇ ಹೋಗಿ ಆ ಹುಡಗಿ ಹೆಸರ ತೊಗೊಂಡ ’ಪ್ರೀತಿ ಪಾಟೀಲ, ಶಾರ್ಟ್ ರೆಡ್ ಮಿಡಿ ಹಾಕ್ಕೊಂಡೊಕಿ ಕಳ್ಕೊಂಡಾಳ’ ಅಂತ ಸುಳ್ಳ-ಸುಳ್ಳ ಅನೌನ್ಸ ಮಾಡಸ್ತಿದ್ದವಿ. ಪಾಪ ಪೆಂಡಾಲದವರ ಖರೇ ಅಂತ ತಿಳ್ಕೊಂಡ ’ಪ್ರೀತಿ ಪಾಟೀಲ್ ಅನ್ನೊ ರೆಡ್ ಮಿಡಿ ಹಾಕ್ಕೊಂಡ ಹುಡುಗಿ ಕಳ್ಕೊಂಡಾಳ, ಅಕಿ ಎಲ್ಲಿದ್ದರೂ ಪೆಂಡಾಲ ಸ್ಟೇಜ್ ಕಡೆ ಬರಬೇಕು, ಅಕಿ ಮಾಮಾ ಇಲ್ಲೆ ಕಾಯಲಿಕತ್ತಾನ’ ಅಂತ ಅನೌನ್ಸ ಮಾಡೋರ…ಅಲ್ಲೇ ನೋಡಿದರ ಅಕಿ ಪ್ರಸಾದಕ್ಕ ಪಾಳೇ ಹಚ್ಚಿರ್ತಿದ್ದಳು. ಅಕಿಗರ ಅಗದಿ ಎಂಬಾರಸಿಂಗ್ ಆಗೋದ. ಮ್ಯಾಲೆ ಅಕಿ ಅವ್ವಾ-ಅಪ್ಪಾ ಬ್ಯಾರೆ ಜೊತಿಗೆ ಇರ್ತಿದ್ದರು. ಅಕಿಗೆ ಗೊತ್ತ ಇರ್ತಿತ್ತ ಇದ ನಂಬದ ಕಿತಾಪತಿ ಅಂತ ಆದರ ಏನ ಮಾಡೋದ, ಯಾರ ಮುಂದ ಹೇಳೊ ಹಂಗ ಇರ್ತಿದ್ದಿಲ್ಲಾ. ಒಮ್ಮೋಮ್ಮೆ ಅಂತೂ ನಾವ ಮೈಕ ಇಸ್ಗೊಂಡ ’ಜಯಮಾಲಾ ಜವಳಿ, ಕೋತಂಬರಿ ಕಾಲೇಜ CBZನಾಗ ಓದೋಕಿ ಅರ್ಜೆಂಟ ಇಲ್ಲಿಗೆ ಬರಬೇಕು…ನಿಮ್ಮ ಮನೆಯವರ ಕಾಯಾಕತ್ತಾರ’ ಅಂತ ಅನೌನ್ಸ ಮಾಡಿ ಬಿಡ್ತಿದ್ವಿ. ಮನೆಯವರ ಅಂದರ ಮನಿ ಮಂದಿ ಅಂತನೂ ಅರ್ಥ ಮತ್ತ…
ಮರದಿವಸ ಕಾಲೇಜನಾಗ ಆ ಹುಡುಗ್ಯಾರ ನಮಗ ಹಿಡದ ಮಂಗಳಾರ್ತಿ ಮಾಡ್ತಿದ್ದರು ಆ ಮಾತ ಬ್ಯಾರೆ.
ಒಂದ ಸರತೆ ಗೌರಿ ಅನ್ನೋ ನಮ್ಮ ಕ್ಲಾಸಮೇಟ್ ಮೇದಾರ ಓಣಿ ಗಣಪತಿ ಕಡೆ ಕಂಡ್ಲು. ಅದರಾಗ ಅಕಿಗೆ ನಮ್ಮ ದೋಸ್ತ ಗಂಗ್ಯಾ ಲೈನ ಬ್ಯಾರೆ ಹೊಡಿತಿದ್ದಾ. ಅಕಿ ಕಂಡ ಕೂಡ್ಲೆ ಇಂವಾ ಅಕಿ ಎಲ್ಲೇಲ್ಲೆ ಹೋಗ್ತಾಳ ಅಲ್ಲಲ್ಲೇ ಹೋಗೊದ ಅಂತ ನಮ್ಮನ್ನು ಯಳಕೊಂಡ ಹೊಂಟಾ. ಹಿಂಗ ಒಂದ್ಯಾರಡ ಗಣಪತಿ ನೋಡಿ ಬಾರದಾನ ಸಾಲ ಗಣಪತಿ ಕಡೆ ಬಂದ್ವಿ. ಅಲ್ಲೇ ಅವತ್ತ ಬಿಸಿಬ್ಯಾಳಿ ಭಾತ ಪ್ರಸಾದ ಇತ್ತ. ನಂಗೂ ಆ ಗೌರಿ ಹಿಂದ ತಿರಗಿ ತಿರಗಿ ಸಾಕಾಗಿತ್ತ ಸೀದಾ ಪ್ರಸಾದಕ್ಕ ಪಾಳೆ ಹಚ್ಚಿದೆ. ಇನ್ನೇನ ನಂದ ತಿನ್ನೋದ ಮುಗಿಲಿಕ್ಕೆ ಬಂದಿತ್ತ ಅಷ್ಟರಾಗ ಮೈಕ ಒಳಗ
“ಗೌರಿ ಅನ್ನೋ ಹುಡಗಿ, ಹಸರ ಲಂಗಾ ಹಳದಿ ಬ್ಲೌಸ ಹಾಕ್ಕೊಂಡೋಕಿ ಎಲ್ಲಿದ್ದರು ಇಲ್ಲೆ ಬರಬೇಕು, ನಿಮ್ಮ ಅವ್ವಾ-ಅಪ್ಪಾ ಇಲ್ಲೆ ಕಾಯಾಕತ್ತಾರ’ ಅಂತ ಅನೌನ್ಸ ಮಾಡಿದರು. ಏ ಇದ ನಮ್ಮ ಯಾವದೋ ದೋಸ್ತಂದ ಕಿತಾಪತಿ ಅಂತ ನಾ ಸುಮ್ಮನಿದ್ದೆ, ಆದರ ಮತ್ತ ಒಂದ ಐದ ನಿಮಿಷಕ್ಕ ಸೇಮ ಅನೌನ್ಸಮೆಂಟ ಆತ. ಇದೇನ ಲಫಡಾ ಅಂತ ಹೋಗಿ ನೋಡಿದರ ಖರೇನ ಸ್ಟೇಜ ಕಡೆ ಅವರವ್ವಾ-ಅಪ್ಪಾ ಟೆನ್ಶನ್ನಾಗ ನಿಂತಿದ್ದರು, ಗೌರಿ ಗಾಯಬ ಆಗಿ ಬಿಟ್ಟಿದ್ಲು.
ನಾ ಹೋಗಿ ಕೇಳಿದರ…’ಇಲ್ಲಾ, ಶಿಂಪಿಗಲ್ಲಿ ತನಕ ನಮ್ಮ ಜೊತಿ ಇದ್ಲು, ಮುಂದ ಎಲ್ಲೇ ಹೋದ್ಲೊ ಏನೊ ಕಾಣವಳ್ಳು’ ಅಂತ ಅವರವ್ವ ಗಾಬರಿ ಆಗಿ ಅಂದ್ಲು. ’ಏ ಏನ ಕಾಳಜಿ ಮಾಡಬ್ಯಾಡ್ರಿ, ನಾವ ಅಕಿ ಕ್ಲಾಸಮೇಟ್’ ಅಂತ ಹೇಳಿ ಮನಸ್ಸಿನಾಗ ’ಅಕಿ ನಿಮಗ ಎಷ್ಟ ಇಂಪಾರ್ಟೇಂಟೊ ಅಷ್ಟ ನಮಗೂ ಇಂಪಾರ್ಟೇಂಟ್’ ಅಂತ ಅನ್ಕೊಂಡ ’ನಾವ ಹುಡಕ್ತೇವಿ ತೊಗೊರಿ’ ಅಂತ ನಮ್ಮ ದೋಸ್ತರಿಗೆ ಕರದ ಸಿರಿಯಸ್ ಆಗಿ ಹುಡುಕರಿ ಅಂತ ಒಬ್ಬೊಬ್ಬಂವಂಗ ಒಂದೊಂದ ಪೇಂಡಾಲಕ್ಕ ಕಳಸಿದೆ. ಅದರಾಗ ಆವಾಗ ಮೋಬೈಲ ಇರಲಿಲ್ಲಾ, ಕಮುನಿಕೇಶನ್ ತ್ರಾಸ ಇತ್ತ. ಒಂದ ತಾಸ ಆದರೂ ಗೌರಿದ ಪತ್ತೇ ಆಗಲಿಲ್ಲಾ, ಒಂದಿಷ್ಟ ದೋಸ್ತರ ಖಾಲಿ ಕೈಲೇ ವಾಪಸ ಬಂದರು. ಅಕಿ ಸಿಗಲಿಲ್ಲಾ. ನಮ್ಮ ದೋಸ್ತ ಗಂಗ್ಯಾ, ಪಾಪ ಅಂವಾ ಮೊದ್ಲ ಅಕಿಗೆ ಲೈನ ಹೊಡಿತಿದ್ದಾ, ಅಂವಾ ಏಲ್ಲೋ ಅವರ ಅವ್ವಾ-ಅಪ್ಪನಕಿಂತಾ ಜಾಸ್ತಿ ಮಾನಸಿಕ ಆಗಿ ಹುಡಕ್ಕೋತ ಕೈಲಾಸಕ್ಕ ಹೋದನೋ ಏನೋ ಮಗಾ ಅವನೂ ವಾಪಸ ಬರಲಿಲ್ಲಾ.
ನಾವೇಲ್ಲಾ ಸಿರಿಯಸ್ ಆಗಿ ಹುಡುಕ್ಯಾಡೋದ ನೋಡಿ ಅವರವ್ವಾ-ಅಪ್ಪಗ ಸ್ವಲ್ಪ ಧೈರ್ಯ ಬಂದಿತ್ತ ಖರೆ ಆದರ ಹಿಂಗ ಹರೇದ ಹುಡುಗಿ ಒಮ್ಮಿಂದೊಮ್ಮಿಲೇ ಹೆಂಗ ಗಾಯಬ ಆದ್ಲು ಅಂತ ಟೆನ್ಶನ್ ಮಾಡ್ಕೊಂಡಿದ್ದರು.
ನಾವೇಲ್ಲಾ ಮತ್ತೊಂದ ರೌಂಡ ಹುಡುಕಿದ್ವಿ. ಗೌರಿ ಸಿಗಲಿಲ್ಲಾ, ಇನ್ನೇನ ಅವರವ್ವನ ಕಣ್ಣಾಗ ಗಂಗಾ ಬರೋದ ಒಂದ ಬಾಕಿ ಇತ್ತ. ಅಷ್ಟರಾಗ ಗಂಗ್ಯಾ ಗೌರಿನ್ನ ಕೈ ಹಿಡದ ಕರಕೊಂಡ ಬಂದಾ.
’ಏ..ಅಲ್ಲೆ ಚಂದ್ರಕಲಾ ಟಾಕೀಸ ಕಡೆ ಆರ್ಕೇಸ್ಟ್ರಾ ನೋಡ್ಕೊತ ಕೂತಿದ್ಲು, ನಾನ ಹುಡಕಿ ಕರಕೊಂಡ ಬಂದೆ’ ಅಂತ ಹೇಳಿ ಅವರವ್ವನ ಕಡೆ
’ಯಪ್ಪಾ ಹೆಂತಾ ಪುಣ್ಯಾ ಕೆಲಸಾ ಮಾಡಿದಿಪಾ, ನಂಬದಂತೂ ಜೀವ ಹೋಗೊದ ಒಂದ ಬಾಕಿ ಇತ್ತ…ಗಣಪತಿ ನಿಂಗ ಛಲೋ ಹೆಂಡ್ತಿ ಕೊಡ್ಲೇಪ್ಪಾ’ ಅಂತ ತಲಿ ಮುಟ್ಟಿಸಿಗೊಂಡ ಆಶೀರ್ವಾದ ತೊಗೊಂಡಾ.
ನಮಗೂ ಗೌರಿ ಸಿಕ್ಕಳು ಅಂತ ಮನಸ್ಸಿಗೆ ಸಮಾಧಾನ ಆತ.
ಆ ಮಾತಿಗೆ ಈಗ ೨೭ ವರ್ಷ ಆತು. ಮೊನ್ನೆ ಸ್ವರ್ಣಗೌರಿ ಪೂಜಾದ್ದ ಸಂಬಂಧ ಕ್ಯಾದಗಿ ತರಲಿಕ್ಕೆ ದುರ್ಗದಬೈಲಗೆ ಹೋದಾಗ ಆ ಗೌರಿ ಸಿಕ್ಕಿದ್ಲು. ಈ ಸರತೆ ಗಂಡನ ಜೊತಿ ಬಂದಿದ್ಲು. ನಾ ಅಕಿಗೆ ’ಗಂಡನ ಕೈ ಗಟ್ಟೆ ಹಿಡ್ಕೊ ಮತ್ತೇಲ್ಲರ ಕಳ್ಕೊಂಡ ಗಿಳ್ಕೊಂಡಿ’ ಅಂದರ ’ಕಳ್ಕೊಂಡರ ಹುಡುಕಲಿಕ್ಕೆ ಗಂಗ್ಯಾ ಇಲ್ಲೇ ಇದ್ದಾನಲಾ’ ಅಂದ್ಲು.
ಅದ ನಮ್ಮ ಗಂಗ್ಯಾನ, ಅವತ್ತ ಅವರವ್ವಾ ಛಲೋ ಹೆಂಡ್ತಿ ಸಿಗಲಿ ಅಂತ ಆಶೀರ್ವಾದ ಮಾಡಿದ್ದನ್ನ ಸಿರಿಯಸ್ ತೊಗೊಂಡ ಗೌರಿನ್ನ ಲಗ್ನಾ ಮಾಡ್ಕೊಂಡಿದ್ದಾ …..ಆಮ್ಯಾಲೇ ಅಕಿ ಏನ ಅವತ್ತ ಗಣಪತಿ ನೋಡ್ಲಿಕ್ಕೆ ಹೋದಾಗ ಕಳಕೊಂಡಿದ್ಲಲಾ, ಅವತ್ತ ಈ ಗಂಗ್ಯಾನ ಗೌರಿನ್ನ ಎಬಿಸಿಕೊಂಡ ನಮಗೇಲ್ಲಾ ಧೋಕಾ ಕೊಟ್ಟ ಕಿಲ್ಲೇ ಗಣಪತಿ ಕಡೆ ಗದ್ಲ ಇರಂಗಿಲ್ಲಾ ಅಂತ ಹೋಗಿ ಮೂಲ್ಯಾಗ ಕೂತ ಅಂತಾಕ್ಷರಿ ಹಾಡಿ ಬಂದಿದ್ದಾ. ನಾವ ಮಂಗ್ಯಾನಂಗ ಟೆನ್ಶನ್ ತೊಗೊಂಡ ಊರೇಲ್ಲಾ ಹುಡಕ್ಯಾಡಿದ್ವಿ.
ಇರಲಿ, ಈ ವರ್ಷ ಸುಡಗಾಡ ಕೋರೊನಾ ಸಂಬಂಧ ನಮ್ಮ ಸಾರ್ವಜನಿಕ ಗಣಪತಿನ ಕಳ್ಕೊಂಡ ಬಿಟ್ಟಾನ, ಹೋದ ವರ್ಷದ ರೌನಕ ಇಲ್ಲಾ ಆದರ ಗೌರಿ ಮನ್ಯಾಗ ಕ್ವಾರೆಂಟೈನ ಆಗಿ ಕೂತಾಳ…..
ನಿಮಗೇಲ್ಲಾ ಈ ಗೌರಿ-ಗಣಪತಿ ಹಬ್ಬದ ಹಾರ್ದಿಕ ಶುಭಾಶಯಗಳು.
Sir ganeshana bagge tumba changi bardidiri Odida mele mansige anadavayitu.sir tavu yavagadru free idre navu nimanu betimadabahuda?
ಸರ್ ಸೂಪರ್ ಐತಿ.. ನಿಮ್ಮ ಗಣಪತಿ ನೋಡ್ಲಿಕ್ಕೆ ಹೋದಾಗ ಗೌರಿ ಕೇಳ್ಕೊಂಡ್ಳ.. ಸ್ಟೋರಿ
ಪ್ರಿತಿ ಪಾಟೀಲ ಕೆಂಪು ಮಿಡಿ .. ಕಥಿ ಅಂತೂ ಬಹಳ ಚಲೋ ಐತಿ….