ನಮ್ಮ ಮನ್ಯಾಗ ಒಂದ ಕಾಲ ಇತ್ತ, ಎಲ್ಲಾ ಕೆಲಸ ನಮ್ಮವ್ವ ಒಬ್ಬೋಕಿನ ಮಾಡ್ಕೊಂಡ, ಗಂಡಾ-ಮಕ್ಕಳನ್ನ ಸಾಕ್ಕೊಂಡ ಮತ್ತ ಮ್ಯಾಲೆ ತಾ ಪ್ರೆಸ್ ನಾಗ ಕೆಲಸಕ್ಕ ಬ್ಯಾರೆ ಹೋಗ್ತಿದ್ಲು. ಒಂದ ಮುಂಜಾನೆ ಐದಕ್ಕ ಎದ್ದಳು ಅಂದರ ರಾತ್ರಿ ಹತ್ತರ ತನಕ ದುಡಿಯೋಕಿ. ಅಕಿಗೆ ಗಂಡಾ-ಮಕ್ಕಳು ಬ್ಯಾಸರ ಬಂದರು ಕೆಲಸಕ್ಕ ಬ್ಯಾಸರಾ ಅನ್ನೋದ ಇರ್ತಿದ್ದಿಲ್ಲಾ. ಇನ್ನ ಸೂಟಿ ಬಂದರ ಎಕ್ಸ್ಟ್ರಾ ಕೆಲಸ ಹುಡಕಿ ಹುಡಕಿ ಮಾಡೋಕಿ. ಇವತ್ತಿಗೂ ಹಂಗ ಕೆಲಸಾ ಮಾಡ್ತಾಳ ಆ ಮಾತ ಬ್ಯಾರೆ.
ಮತ್ತ ಮ್ಯಾಲೆ ಗಂಡಾ, ಮಕ್ಕಳಿಗೆ
“ನೀವ ಅಂತು ಮನ್ಯಾಗಿಂದ ಒಂದ ಕಡ್ಡಿ ಈ ಕಡೆಯಿಂದ ಎತ್ತಿ ಆ ಕಡೆ ಇಡಂಗಿಲ್ಲಾ, ಎದಿ ಉದ್ದ ಬೆಳದರು ಹೇಳಿಸಿಗೊಳ್ಳಲಾರದ ಒಂದ ಕೆಲಸಾ ಮಾಡಂಗಿಲ್ಲಾ ( ಇದ ನನಗ,ನಮ್ಮಪ್ಪಗ ಇಬ್ಬರಿಗೂನ ಮತ್ತ), ಹೊರಗೂ ಒಳಗೂ ಎಲ್ಲಾ ಕಡೆ ನಾನ ಕೆಲಸಾ ಮಾಡಿ ಸಾಯಿಬೇಕ” ಅಂತ ವಟಾ ವಟಾ ಅನ್ಕೋತ ಕೆಲಸಾ ಮಾಡೋಕಿ. ಅಕಿಗೆ ನಮಗ ವಟಾ-ವಟಾ ಅನ್ನೋದು ಒಂದ ಕೆಲಸನ.
ನಮ್ಮಪ್ಪ ನನ್ನ ಸ್ವಭಾವದಂವಾ, ಅವಂಗ ಮನಿ ಕೆಲಸಾ-ಬೊಗಸಿ ಮಾಡಿ ಗೊತ್ತ ಇದ್ದಿದ್ದಿಲ್ಲಾ, ಇನ್ನ ಕೆಲಸದವರನ ಹಚಗೋಳೊ ಕ್ಯಾಪಿಸಿಟಿ ಇರ್ಲಿಲ್ಲಾ. ಅದರಾಗ ನಮ್ಮಪ್ಪ
’ನಿಮ್ಮವ್ವ ಕೆಲಸಕ್ಕ ಹೋದರ ಮನಿನೂ ಶಾಂತ ಇರ್ತದ ಮ್ಯಾಲೆ ಪಗಾರನು ಬರ್ತದ ಸುಮ್ಮನಿರಲೇ’ ಅಂತಿದ್ದಾ. ಹಿಂಗ ನಮ್ಮವ್ವಗ ಮೊದ್ಲಿಂದ ಮೈತುಂಬ ಕೆಲಸ-ಬೊಗಸಿ ಮಾಡಿ ಚಟಾ. ಏನರ ಒಂದೊಂದ ದಿವಸ ಕೆಲಸನ ಇಲ್ಲಾ ಅಂದರ ಅಕಿಗೆ ಹುಚ್ಚ ಹಿಡದಂಗ ಆಗ್ತಿತ್ತ. ನಾವ ನಾಲ್ಕ ಮನಿ ಇರೋ ಚಾಳ ಒಳಗ ಭಾಡಗಿ ಇದ್ದಾಗ ಇಕಿ ಅಕಸ್ಮಾತ ಲಗೂ ಎದ್ದಿದ್ಲಂದರ ನಮ್ಮ ಮನಿ ಜೊತಿ ಆ ನಾಲ್ಕ ಮನಿಯವರದು ಅಂಗಳಾ ಕಸಾ ಮಾಡಿ ಸಾರಿಸಿ ರಂಗೋಲಿ ಹಾಕೋಕಿ. ನಮ್ಮಪ್ಪಂತೂ ಎಲ್ಲೋ ಇಕಿ ಹೋದ ಜನ್ಮದಾಗ ಕಸಾ ಹೊಡಿಯೋಕಿ ಆಗಿದ್ಲು ಅಂತಿದ್ದಾ. ಎಲ್ಲಾ ಕೆಲಸಾ ಚೊಕ್ಕ- ಸ್ವಚ್ಛ ಮಾಡೋಕಿನ ಮತ್ತ.
ಮುಂದ ಕಾಲ ಬದಲಾತ, ನಾ ದೊಡ್ಡೊಂವ ಆಗಿ ನೌಕರಿಗೆ ಹತ್ತಿದ ಮ್ಯಾಲೆ ನಮ್ಮವ್ವನ್ನ ನೌಕರಿ ಬಿಡಸಿಸಿದೆ. ಹಂಗ ಪಾಪ ಅಕಿ ಭಾಳ ದುಡದಾಳ ಕೆಲಸದವರನ ಇಟ್ಗೊಬೇಕು ಅಂದರ ಅಕಿ
’ಅಯ್ಯ ಇನ್ನೊಂದ ಎರಡ ವರ್ಷಕ್ಕ ಲಗ್ನಾನ ಮಾಡ್ಕೊಳೊಂವ ಇದ್ದಿ ಮತ್ತ ಯಾಕ ಸಪರೇಟ್ ಕೆಲಸದೊಕಿ’ ಅಂತ ಅಂದ್ಲು. ಆದರೂ ನಾ ಖಾಸ ನಮ್ಮವ್ವಾ, ಇಷ್ಟ ವರ್ಷ ದುಡದಾಳ, ಪಾಪ ಇನ್ನೂ ಎಷ್ಟ ವರ್ಷಂತ ದುಡಿಬೇಕು, ಅದರಾಗ ನಾಳೆ ನನ್ನ ಲಗ್ನ ಆದ ಮ್ಯಾಲೆ ನಾ ಏನರ ಕೆಲಸದೊಕಿನ ಹಚಗೊಂಡರ
’ನೋಡ ಮಗಾ ಹೆಂಡ್ತಿ ಬಂದ ಕೂಡಲೇ ಕೆಲಸದೊಕಿ ಹಚಗೊಂಡಾ, ನಾ ಇಷ್ಟ ವರ್ಷ ದುಡದ ದುಡದ ಸತ್ತರೂ ಸುಮ್ಮನಿದ್ದಾ’ ಅನಬಾರದ ಅಂತ ಅಕಿ ಬ್ಯಾಡ ಅಂದರೂ ಭಾಂಡೆ ಓಗ್ಯಾಣಕ್ಕ ಹಚ್ಚಿದೆ.
ಆವಾಗ ಹೊಸಾ ಪ್ರಾಬ್ಲೇಮ್ ಸ್ಟಾರ್ಟ ಆತ. ಮೊದ್ಲ ಹೇಳಿದ್ನೇಲಾ ನಮ್ಮವ್ವಗ ಎಲ್ಲಾ ಕೆಲಸ ಚೊಕ್ಕ ಆಗಬೇಕಂತ ಹಿಂಗಾಗಿ ಆ ಭಾಂಡೆ ತಿಕ್ಕೋಕಿ ಮುಂದ ಬುಟ್ಟಿ ಗಟ್ಟಲೇ ಭಾಂಡೆ ಇಟ್ಟ ಟೊಂಕದ ಮ್ಯಾಲೆ ಕೈಇಟಗೊಂಡ ನಿಂತ
’ತಳಾ ತಿಕ್ಕ…ಬುಡಕ ಅಗಳ ಹಂಗ ಅದ..ಕರೆಕ್ಟ ಗಲಬರಸ’ ಅಂತ ಅನ್ನೊದ, ಒಗಿಲಿಕತ್ತಾಗ ’ಕಾಲರಗೆ ಬ್ರಶ್ ಹಚ್ಚ, ಪ್ಯಾಂಟ ಸ್ವಲ್ಪ ಎತ್ತರಿಸಿ ಬಡಿ….’ಅಂತ ಗಂಟ ಬೀಳಲಿಕ್ಕೆ ಶುರು ಮಾಡಿದ್ಲು. ಕೆಲಸದೋಕಿಗೆ ಇದ ಕಿರಿ ಕಿರಿ ಆಗಲಿಕತ್ತ, ಅವರ ನೋಡಿದರ ಒಂದ ಮನಿ ಬಿಟ್ಟ ಹತ್ತ ಮನಿ ಕೆಲಸಾ ಮಾಡೋರು, ನಮ್ಮವ್ವ ಎಷ್ಟ ಶಂಖಾ ಹೊಡ್ಕೊಂಡರು ತಮಗ ತಿಳದಂಗ ಮಾಡಿ ಹೋಗೊರ. ಮುಂದ ಇಕಿ ಅವರನ ಬೈಕೋತ ಮತ್ತೊಮ್ಮೆ ಭಾಂಡೆ ಗಲಬರಸೋಕಿ, ಅರಬಿ ಹಿಂಡಿ ಓಣಾ ಹಾಕೋಕಿ. ಇಕಿಗೆ ತಾ ಕೆಲಸ ಮಾಡಿದರ ಇಷ್ಟ ಸಮಾಧಾನ ಆಗ್ತಿತ್ತ. ಹಿಂಗಾಗಿ ಆ ಕೆಲಸಕ್ಕ ಹಚಗೊಂಡಿದ್ದ ಏನ ಉಪಯೋಗ ಆಗಲಿಲ್ಲಾ.
ಇತ್ತಲಾಗ ಮೂರ ತಿಂಗಳಿಗೊಮ್ಮೆ ಕೆಲಸದವರ ನಮ್ಮವ್ವನ್ನ ಕಾಟಕ್ಕ ಬಿಟ್ಟ ಹೋಗಿ ಬಿಡ್ತಿದ್ದರು. ಅವರ ಹಿಂಗ ಬಿಟ್ಟ ಹೋಗೊದ ನೋಡಿ ನಮ್ಮಪ್ಪ
’ಏ, ನೀ ಗಂಡಗ ಕಾಟಾ ಕೊಟ್ಟಂಗ ಕೆಲಸದವರಿಗೆ ಕೊಟ್ಟರ ಅವರ ಯಾಕ ತಡ್ಕೋತಾರ. ನಿನ್ನ ಕೈಯಾಗ ಗಂಡಾ-ಮಕ್ಕಳು ನಿಂತಂಗ ಯಾ ಕೆಲಸಗಾರರು ನಿಲ್ಲಂಗಿಲ್ಲ ತೊಗೊ’ ಅಂತಿದ್ದಾ.
ಹಿಂಗ ವರ್ಷಕ್ಕ ಎರಡ ಮೂರ ಕೆಲಸಗಾರರನ ಇಟ್ಗೋಳೋದು, ಅವರ ನಮ್ಮವ್ವನ್ನ ಕಾಟಕ್ಕ ಬಿಟ್ಟ ಹೋಗೊದು ನೋಡಿ ನೋಡಿ ನಂಗ ಸಾಕಾತ. ಅದರಾಗ ಅವರ ತಿಂಗಳಿಗೆ ಒಂದ ನಾಲ್ಕ ದಿವಸ ಏನರ ನೇವಾ ಹಾಕಿ ತಪ್ಪಸೋರ ಬ್ಯಾರೆ. ನಾ ತಲಿ ಕೆಟ್ಟ ಸುಮ್ಮನ ಮದ್ವಿ ಮಾಡ್ಕೊಳೋದ ಛಲೋ ಪರ್ಮನೆಂಟ ಕೆಲಸಾ ಮಾಡೋಕಿ ಬರ್ತಾಳಂತ ಡಿಸೈಡ ಮಾಡಿದೆ. ನಮ್ಮವ್ವನು ಒಂದ ಮಾತಿಗೆ ಹೂಂ ಅಂದ್ಲು, ಅಲ್ಲಾ ಹೂಂ ಅನಲಾರದ ಏನ ಇಕಿಗೆ ಇಕಿ ಕಾಟ ತಡ್ಕೊಂಡ ಕೆಲಸಾ ಮಾಡೋರ ಸಿಕ್ಕರ ಸಾಕಾಗಿತ್ತ.
ಆದರೂ ನಾ ನಮ್ಮವ್ವಗ ಲಗ್ನಕಿಂತಾ ಮುಂಚೆ
’ನಾ ಹೆಂಡ್ತಿನ ತರಲಿಕತ್ತೇನಿ, ಕೆಲಸದೋಕಿನ ಅಲ್ಲಾ, ನೀ ಕೆಲಸಗಾರರಿಗೆ ಕಿರಿ-ಕಿರಿ ಕೊಟ್ಟಂಗ ಅಕಿಗೆ ಕೊಟ್ಟರ ನಡೆಯಂಗಿಲ್ಲಾ’ ಅಂತ ಕಂಡಿಶನ್ ಹಾಕೇನ ಲಗ್ನಾ ಮಾಡ್ಕೊಂಡಿದ್ದೆ.
ಸರಿ ಮದ್ವಿ ಆತು, ಪುಣ್ಯಾಕ್ಕ ನನಗ ಹೆಂಡ್ತಿನೂ ಕೆಲಸದೊಕಿನ ಸಿಕ್ಕಳು ಅಂದರ ಕೆಲಸಾ-ಬೊಗಸಿ ಮಾಡೊಕಿನ ಇದ್ಲು. ಹಿಂಗಾಗಿ ಅತ್ತಿ-ಸೊಸಿ ಇಬ್ಬರದೂ ಗೋತ್ರ ಕೂಡತ, ಒಬ್ಬೊಕಿ ತಿಕ್ಕಿದರ ಮತ್ತೊಬ್ಬೊಕಿ ಗಲಬರಸೋಕಿ, ಒಬ್ಬೊಕಿ ಒಗದರ, ಮತ್ತೊಬ್ಬೊಕಿ ಹಿಂಡಿ ಒಣಾ ಹಾಕೋಕಿ.
ಮುಂದ ಬರಬರತ ನಮ್ಮವ್ವಗೂ ವಯಸ್ಸಾತು, ನನ್ನ ಹೆಂಡ್ತಿಗೂ ಮಕ್ಕಳಾಗಲಿಕತ್ವು ಮತ್ತ ಕೆಲಸದೊರ ಬೇಕಾತ. ಈ ಸರತೆ ನನ್ನ ಹೆಂಡ್ತಿ ತಾ ಹಿರೇತನ ಮಾಡಿ ಕೆಲಸದವರನ ಆರಿಸಿ, ಆರಿಸಿ ಹಚಗೊಳಿಕತ್ಲು. ಮತ್ತ ನಮ್ಮವ್ವ ತನ್ನ ಹಳೇ ಚಟಾ ಶುರು ಮಾಡಿದ್ಲು,
’ಪ್ರೇರಣಾ ನೀ ಅಡಗಿ ಮನಿ ನೋಡ್ಕೊ, ನಾ ಕೆಲಸದೊಕಿನ ನೋಡ್ಕೋತೇನಿ’ ಅಂತ ಆ ಕೆಲಸದವರ ಮುಂದ ನಿಂತ ಬಿಡೋಕಿ, ತೊಗೊ ಹಳೇ ರಾಮಾಯಣ ಮತ್ತ ಚಾಲೂ ಆತ, ಅದರಾಗ ಮ್ಯಾಲೆ ನನ್ನ ಹೆಂಡ್ತಿನೂ ಅಕಿ ಜೊತಿ ಸೊ…ಅನ್ನೋಕಿ. ಇಕಿಗೂ ಒಟ್ಟ ಕೆಲಸದೋರ ಕೆಲಸ ಬಗಿಹರಿತಿದ್ದಿಲ್ಲಾ. ಮತ್ತ ವರ್ಷಕ್ಕ ಮೂರ ಮೂರ ಮಂದಿ ಕೆಲಸದವರ ಚೇಂಜ್ ಆಗಲಿಕತ್ತರು. ನಂಗ ಅನಸ್ತ ನಾ ಹಂಗ ಖರೇನ ಭಾಂಡೆ-ಒಗ್ಯೋಣಾ ಮಾಡೊಕಿನ್ನ ಲಗ್ನ ಮಾಡ್ಕೊಂಡಿದ್ದರ ನಮ್ಮವ್ವನ ಆಶೀರ್ವಾದದಲೇ ವರ್ಷಕ್ಕ ಮೂರ ಮೂರ ಹೆಂಡಂದರ ಸಿಗ್ತಿದ್ದರೊ ಏನೋ ಅಂತ. ಅಲ್ಲಾ ಅದಕ್ಕೂ ಪಡದ ಬರಬೇಕ ತೊಗೊರಿ ಆ ಮಾತ ಬ್ಯಾರೆ.
ನಮ್ಮವ್ವ ಆತು ನನ್ನ ಹೆಂಡತಿ ಆತು ಹಿಂಗ ಕೆಲಸಾ ಮಾಡೋರ ಮುಂದ ನಿಂತ ಕಿರಿ ಕಿರಿ ಮಾಡಿದರ ಎಷ್ಟಂತ ಅವರರ ತಡ್ಕೊತಾರ ಹೇಳ್ರಿ, ಅವರೇನ ನಮ್ಮಪ್ಪ ಹೇಳಿದಂಗ ಕಟಗೊಂಡ ಗಂಡನ? ನಮ್ಮ ಹಣೇಬರಹ ನಾವ ಕಟಗೊಂಡೇವಿ, ಆ ತಪ್ಪಿಗೆ ತಡ್ಕೋತೇವಿ. ಕೆಲಸಾ ಮಾಡೋರ ಏನ್ರಿ ’ನಿಮ್ಮ ಮನಿ ಇಲ್ಲಾ ಮತ್ತೊಬ್ಬರ ಮನಿ’ ಅಂತ ಹೋಗ್ತಾರ. ಹಂಗ ನಮಗ ಹೆಂಡ್ತಿಗೆ ’ನೀ ಇಲ್ಲಾ ಮತ್ತೊಬ್ಬೊಕಿ’ ಅಂತ ಅನ್ನಲಿಕ್ಕೂ ಬರಂಗಿಲ್ಲಾ, ಆ ಧೈರ್ಯಾನೂ ಇಲ್ಲ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.
ಈಗ ಅಂತು ನಮ್ಮವ್ವಗ ಕೆಲಸಾ ಮಾಡಲಿಕ್ಕೆ ಆಗಂಗಿಲ್ಲಾ, ಇನ್ನ ನನ್ನ ಹೆಂಡತಿಗೆ ಗಂಡಾ-ಮಕ್ಕಳನ ಕಟಗೊಂಡ ಮನಿ ಕೆಲಸಾ ಮಾಡಲಿಕ್ಕೆ ಅಕಿಗೂ ಆಗಂಗಿಲ್ಲಾ. ಹಿಂಗಾಗಿ ಕೆಲಸದವರ ಇಲ್ಲದ ನಡಿಯಂಗಿಲ್ಲಾ. ಅದರಾಗ ಇಕಿನೂ ನಮ್ಮವ್ವನಂಗ
’ಎದಿ ಉದ್ದ ಮಕ್ಕಳ ಆದರೂ ಒಂದ ಕಡ್ಡಿ ಇತ್ತಲಾಗಿಂದ ಎತ್ತಿ ಅತ್ತಲಾಗ ಇಡಂಗಿಲ್ಲಾ, ಗಂಡಂತೂ ಇದ್ದರು ಇಲ್ಲದಂಗ, ಮನಿಗೆ ಸಂಬಂಧನ ಇಲ್ಲಾ, ಒಂದ ಜವಾಬ್ದಾರಿ ಇಲ್ಲಾ’ ಅಂತ ವಟಾ ವಟಾ ಅನ್ಕೋತ ಇರ್ತಾಳ. ಕಡಿಕೆ ನಮ್ಮ ಸಿಟ್ಟ ತಗದ ಆ ಕೆಲಸದೋರ ಮ್ಯಾಲೆ ಹಾಕ್ತಾಳ ಇಷ್ಟ.
ಹೋಗಲಿ ಬಿಡ್ರಿ ಈ ವಿಷಯದ ಬಗ್ಗೆ ಎಷ್ಟ ಬರದರು ಕಡಮಿನ.
ಅದರಾಗ ಈಗ ಕೆಲಸದೋಕಿ ಬ್ಯಾರೆ ಇಲ್ಲಾ ಅಂತ ಪಾಪ ಬಚ್ಚಲದಾಗ ಭಾಂಡಿ ತಿಕ್ಕಲಿಕತ್ತಾಳ, ನಾ ಹೋಗಿ ಗಲಬರಿಸಿ ಡಬ್ಬ ಹಾಕಲಿಲ್ಲಾಂದರ ಎದ್ದ ಬಂದ ಭಾಂಡಿ ಜೊತಿ ನನ್ನು ಡಬ್ಬ ಹಾಕಿದರು ಹಾಕಿದ್ಲ.
ಅಲ್ಲಾ ಈಗ ಲಾಕಡೌನ ಮುಗದದ, ಕೆಲಸದೋಕಿನ ಕರಿಸಿಕೊಂಡ ನನಗ ರೀಲೀವ್ ಮಾಡ ಅಂದರ ನನ್ನ ಮಾತ ಕೇಳವಳ್ಳು. ನನ್ನ ಹಣೇಬರಹ ಹೆಂಗ ಆಗೇದ ಅಂದರ ಮುವತ್ತ ವರ್ಷದ ಹಿಂದ ನಮ್ಮವ್ವ ಅಂತಿದ್ಲಲಾ
’ಹೊರಗೂ ಒಳಗೂ ಎಲ್ಲಾ ಕಡೆ ನಾನ ಮಾಡಿ ಸಾಯಿಬೇಕ’ ಅಂತ ಹಂಗ ಆಗೇದ.
ಅಲ್ಲಾ ಏನ್ಮಾಡ್ಲಿಕ್ಕೆ ಬರಂಗಿಲ್ಲಾ, ಲಾಕಡೌನ ಒಳಗ ಹೆಂಡ್ತಿಗೆ ಅಚ್ಚಚ್ಛಾ ಮಾಡಿದ್ದ ತಪ್ಪಿಗೆ ಈಗ ಅನುಭವಸಬೇಕ ಇಷ್ಟ.
ಒಳ್ಳೆಯ ಲೇಖನ ಮನ ದಲ್ಲಿ ಇದ್ದ ವಿಚಾರ..
kelasdavaru andra devaru makkal iddang sir 😀😀😀