ಒಂದ ಹದಿನೈದ ದಿವಸದ ಹಿಂದ ಶನಿವಾರ ಮುಂಜ-ಮುಂಜಾನೆ ನಮ್ಮ ಬಸ್ಯಾ ಫೋನ್ ಮಾಡಿದವನ
’ದೋಸ್ತ ಮಧ್ಯಾಹ್ನ ಫ್ರೀ ಇದ್ದಿ ಏನ’ ಅಂತ ಕೇಳಿದಾ. ನಾ ಫ್ರೀ ಇದ್ದೇ, ಒಂದ ಹೊಡ್ತಕ್ಕ
’ಫ್ರೀ ಇದ್ದೇನಲಾ…ಯಾಕ ಶ್ರಾವಣ ಮಧ್ಯಾಹ್ನಕ್ಕ ಮುಗಿತದ ಅಂತ ವೀಕೆಂಡ್ ಮಧ್ಯಾಹ್ನನ ಶುರು ಮಾಡೋಣೇನ?’ ಅಂತ ನಾ ಕೇಳಿದರ…
’ಲೇ…ಮೂರ ಗಂಟೇಕ್ಕೆ ರೆಡಿ ಇರ, ಗೋವಾ ಕ್ಯಾಸೀನೋಕ್ಕ ಹೋಗೊಣ, ಹೋಗೊ-ಬರೋ ಖರ್ಚ ಎಲ್ಲಾ ನಂದ ಮಗನ’ ಅಂತ ಹೇಳಿ ಫೋನ್ ಇಟ್ಟಾ.
ಅಲ್ಲಾ, ಪಾಪ ಅಂವಾ ಹಂಗ ಗೋವಾ ಕ್ಯಾಸಿನೊಕ್ಕ ಕರಕೊಂಡ ಹೋಗ್ತೇನಿ ಅಂತ ಅನ್ನಲಿಕ್ಕತ್ತ ಭಾಳ ವರ್ಷ ಆಗಿತ್ತ. ನಾನ ಮನಸ್ಸ ಮಾಡಿದ್ದಿಲ್ಲಾ. ಮ್ಯಾಲೆ ಅಲ್ಲೇ ಹೋದರ ಒಂದ ಹತ್ತ-ಇಪ್ಪತ್ತ್ ಸಾವಿರ ಇಟಗೊಂಡ ಹೋದರ ಮಜಾ ಬರತದ ಅಂತ ದೋಸ್ತರ ಹೇಳಿದ್ದಕ್ಕ ನಾ ವಿಚಾರನ ಕೈ ಬಿಟ್ಟ ಬಿಟ್ಟಿದ್ದೆ.
ಇವತ್ತ ಮತ್ತ ಕರೆಯೋದಕ್ಕ ನಾನೂ ಆತ ಹೋಗೆ ಬಿಡೋಣ ನಡಿ ಅಂತ ಡಿಸೈಡ ಮಾಡಿ ಮನ್ಯಾಗ ಹೆಂಡ್ತಿಗೆ ಕ್ಯಾಸಿನೋಕ್ಕ ಹೊಂಟೇನಿ ಅಂತ ಸೈಡಿಗೆ ಕರದ ಹೇಳಿದೆ.
ನಾ ಕ್ಯಾಸಿನೋಕ್ಕ ಹೊಂಟೇನಿ ಅಂತ ಗೊತ್ತಾಗಿದ್ದ ಅಕಿ ಮಹಾಭಾರತನ ಶುರು ಮಾಡಿದ್ಲು. ಅಲ್ಲಾ ಹಂಗ ಮಹಾಭಾರತ ಶುರು ಆಗಿದ್ದ ಕ್ಯಾಸಿನೊದಿಂದ ಆ ಮಾತ ಬ್ಯಾರೆ.
ಇನ್ನ ನಾ ಕ್ಯಾಸಿನೋಕ್ಕ ಹೋಗ್ತೇನಿ ಅಂದಿದ್ದಕ್ಕ ಇಕಿ ಮೈಯಾಗ ದ್ರೌಪದಿ ಬಂದೋಕಿ ಗತೆ
’ಮನ್ಯಾಗ ನಾ ಏನರ ಕೇಳಿದರ ರೊಕ್ಕ ಇಲ್ಲಾ ಅಂತೀರಿ, ಶ್ರಾವಣದಾಗ ಐದ ವಾರ ಗೌರಿ ಕೂಡಸಿದರ ಖರ್ಚ ಜಾಸ್ತಿ ಆಗ್ತದ ಅಂತ ಕಡಿ ಶುಕ್ರವಾರ ಇಷ್ಟ ಗೌರಿ ಕುಡಸಿದ್ರಿ, ಕೀರಾಣಿಯವಂಗ ಉದ್ರಿ ಹೇಳಿರಿ. ಈಗ ಗೋವಾಕ್ಕ ಹೋಗಲಿಕ್ಕೆ ರೊಕ್ಕ ಹೆಂಗ ಬರ್ತದ’ ಅಂತ ಒದರಿಕತ್ಲು.
’ಏ..ನನ್ನ ಮಾತ ಕೇಳ, ಹೋಗೊ ಬರೋ ಖರ್ಚ ಎಲ್ಲಾ ಬಸ್ಯಾಂದ, ನಾ ಸುಮ್ಮನ ಅವನ ಜೊತಿ ಹೋಗಿ ಬರೋಂವ ಇಷ್ಟ..ನಾ ಏನ ಆಡಂಗಿಲ್ಲಾ, ಬರೇ ನೋಡಲಿಕ್ಕೆ ಹೊಂಟೇನಿ, experience ಇರಲಿ ಅಂತ ಇಷ್ಟ’ ಅಂತ ನಾ ಎಷ್ಟ ಬಡ್ಕೊಂಡರು ಅಕಿ ಏನ ಕೇಳಲಿಲ್ಲಾ. ತಲಿಕೆಟ್ಟ ಬೇಕಾರ ನೀನು ಜೊತಿಗೆ ಬಾ ಅಂತ ನಾ ಅಂದರ
’ಯಾಕ ರೊಕ್ಕ ಕಡಮಿ ಬಿದ್ದರ ನನ್ನೂ ವತ್ತಿ ಇಡೋ ವಿಚಾರ ಅದ ಏನ?’ ಅಂತ ಅಂದ್ಲು.
ತೊಗೊ ಹಿಂಗ ಇಕಿ ಬಾಯಿ ಮಾಡೋದ ನಮ್ಮವ್ವಗ ಅರ್ದಾ-ಮರ್ದಾ ಕೇಳ್ತ. ಅಕಿ ನಡಕ ಬಾಯಿ ಹಾಕಿ
’ಏನಂತ ನಿನ್ನ ಗಂಡಂದ?’ ಅಂತ ಕೇಳೊದಕ್ಕ ಈಕಿ ಸನ್ನಿ-ಸೂಕ್ಷ್ಮ ಇಲ್ಲದ ಡೈರೆಕ್ಟ ನಮ್ಮವ್ವಗ
’ನಿಮ್ಮ ಮಗಾ ಗೋವಾಕ್ಕ ಕ್ಯಾಸಿನೋ ಆಡಲಿಕ್ಕೆ ಹೊಂಟಾರ’ ಅಂತ ಅಂದ ಬಿಟ್ಟಳು.
ನಮ್ಮವ್ವ ಒಂದ ಹೊಡ್ತಕ್ಕ
’ಹೋದರ ಹೋಗ್ಲಿ ತೊಗೊ..ಪಾಪ ಅವಂಗೂ ಆಸರಕಿ-ಬ್ಯಾಸರಕಿ ಇರ್ತದ ಇಲ್ಲ. ಹಬ್ಬ-ಹುಣ್ಣಮಿ ಅಂತ ತಿಂಗಾಳನಗಟ್ಟಲೇ ಮನ್ಯಾಗ ಇತ್ತ, ಹೆಂಡ್ತಿ-ಮಕ್ಕಳನ ಬಿಟ್ಟ ಒಂದ ದಿವಸರ ಕೈ ಬಿಟ್ಟ ಆಡ್ಲಿ ತೊಗೊ’ ಅಂದ ಮತ್ತ ಮ್ಯಾಲೆ ನನ್ನ ಮಾರಿ ನೋಡಿ ’ನೀ ಗೋವಾದಾಗ ಗೆದ್ದ ಬಾ ಮಗನ…ವಿಜಯೀ ಭವ’ ಅಂದ ಬಿಟ್ಟಳು.
ನಂಗ ಅಕಿ ಹಂಗ ಅಂದಿದ್ದ ಕೇಳಿ ಗಾಬರಿ ಆತ. ಎಲ್ಲೆ ಇಕಿ ಹೋದ ಜನ್ಮದಾಗ ಗಾಂಧಾರಿ ಇಲ್ಲಾ ಕುಂತಿ ಆಗಿದ್ಲೋ ಅಂತ ಅನಸಲಿಕತ್ತ. ಅಕಿ ಅಂದಿದ್ದ ಕೇಳಿ ನನ್ನ ಹೆಂಡ್ತಿ ಸಿಟ್ಟಿಗೆದ್ದ
’ರ್ರಿ….ಅವರೇನ ಗೋವಾಕ್ಕ ಯುದ್ಧಕ್ಕ ಹೊಂಟಿಲ್ಲಾ, ಕ್ರಿಕೇಟ್ ಆಡಲಿಕ್ಕೆ ಹೊಂಟಿಲ್ಲಾ ಗೆದ್ದ ಬರಲಿಕ್ಕೆ, ಕ್ಯಾಸಿನೋ ಹೊಂಟಾರ , ಅದ ಅಂದರ ಏನ ಅಂತ ತಿಳ್ಕೊಂಡೀರಿ…..ಖರೇನ ದುಶ್ಯಾಸನಗ ತಕ್ಕ ಗಾಂಧಾರಿ ಇದ್ದಂಗ ಇದ್ದಿರಿ ತೊಗಿರಿ’ ಅಂತ ನಮ್ಮವ್ವಗ ಕ್ಯಾಸಿನೋ ಅಂದರ ಏನು ಅಂತ ಅಲ್ಲೆ ಇರೋದ ಇರಲಾರದ್ದು ಎಲ್ಲಾ ಹೇಳಿದ್ಲು.
ಅಲ್ಲಿ ತನಕಾ ನಮ್ಮವ್ವಾ ನಾ ಗೋವಾಕ್ಕ ಯಾವದೋ ಆಟಾ ಆಡಲಿಕ್ಕೆ ಹೊಂಟೇನಿ ಅಂತ ತಿಳ್ಕೊಂಡಿದ್ಲು. ಹಿಂಗಾಗಿ ಪಾಪ ’ವಿಜಯೀ ಭವ’ ಅಂತ ಆಶೀರ್ವಾದ ಮಾಡಿದ್ಲು. ಇನ್ನ ಹೆಂಗಿದ್ದರು ನಮ್ಮವ್ವಗ ಇಕಿ ಎಲ್ಲಾ ಹೇಳೆ ಬಿಟ್ಟಾಳ ತೊಗೊ ಅಂತ ನಾ ನಮ್ಮವ್ವಗ
’ ಅವ್ವಾ, ನಾ ರೊಕ್ಕ ಹಚ್ಚಿ ಆಡಂಗಿಲ್ವಾ, ಬರೇ ನೋಡ್ಲಿಕ್ಕೆ ಹೊಂಟೇನಿ. ಪುಕ್ಕಟ್ಟ ಬಸ್ಯಾ ಕರಕೊಂಡ ಹೊಂಟಾನ ಮ್ಯಾಲೆ ಅಲ್ಲೇ ಊಟಾ, ನಾಷ್ಟಾ ಎಲ್ಲಾ ಫ್ರೀ…ಅದರಾಗ ನಾಗ್ಯಾ ಎಂಟ್ರೀನೂ ಫ್ರೀ ಕೊಡಸ್ತಾನ’ ಅಂತ ಕನ್ವಿನ್ಸ್ ಮಾಡಿ ಹೂಂ ಅನಿಸಿದೆ.
ನೆಕ್ಸ್ಟ ನನ್ನ ಹೆಂಡತಿಗೆ ಸೂಕ್ಷ್ಮ
’ನೋಡ ನೀ ಇದನ್ನ ದೊಡ್ಡ ಇಶ್ಯು ಮಾಡಬೇಡಾ..ನಾ ಏನ ಆಡಂಗಿಲ್ಲಾ, ಹಂಗ ಏನರ ಆಡಿ ಗೆದ್ದರ ಅರ್ಧಾ ನಿನಗ ಕೊಡ್ತೀನಿ’ ಅಂದರು ಅಕಿ ಏನ ಕೇಳಲಿಲ್ಲಾ.
ಕಡಿಕೆ ಗೆದ್ದದ್ದ ಎಲ್ಲಾ ನಿನಗ ತೊಗೊ ಅಂದಮ್ಯಾಲೆ ಖುಷ್ ಆಗಿ ATM Card ಇಟ್ಟ ಆರತಿ ಮಾಡಿ ಕಳಸಿದ್ಲು.
ಸರಿ ನಾವ ಮೂರ-ನಾಲ್ಕ ಮಂದಿ ಮಧ್ಯಾಹ್ನ ಹುಬ್ಬಳ್ಳಿ ಬಿಟ್ಟರು ಗೋವಾ ಮುಟ್ಟೋದರಾಗ ರಾತ್ರಿ ಹನ್ನೊಂದ ಆಗಿತ್ತ. ಅಲ್ಲಾ, ಏನಿಲ್ಲದ ಶನಿವಾರಕ್ಕೊಮ್ಮೆ ನಾವ ಹುಬ್ಬಳ್ಳಿನ ಗೋವಾ ಅಂತ ತಿಳ್ಕೋಳೊರ ಇನ್ನ ಗೋವಾಕ್ಕ ಹೊಂಟರ ಕೇಳ್ತಿರೇನ? MRP ಕಂಡಲ್ಲೇ ಗಾಡಿ ನಿಲ್ಲಸ್ತಿದ್ವಿ. ಅದರಾಗ ನಮ್ಮ ಬಸ್ಯಾ
’ಗೂಗಲ್ ಮ್ಯಾಪ್ ತಪ್ಪ ತೋರಸ್ತೈತಿ, ನಾ ಹಗಲಗಲಾ ಬರೋಂವಾ ನಂಗೇಲ್ಲಾ ಶಾರ್ಟ್ ಕಟ್ ಗೊತ್ತೈತಿ ನೀ ಬಾಯಿ ಮುಚಗೊಂಡ ಬಾ’ ಅಂತ ಪಣಜಿ ಮುಟ್ಟಸೊದರಾಗ ಹನ್ನೊಂದ ಹೊಡಿಸಿದಾ.
ಇನ್ನ ಒಳಗ ಹೋದ ಮ್ಯಾಲೆ ಗೆಲ್ಲೋದ ಗ್ಯಾರಂಟಿ ಇಲ್ಲಾ, at least entryನರ ಫ್ರೀ ಆಗಲಿ ಅಂತ ನಾಗ್ಯಾ ಎಂಟ್ರೀ ಫ್ರೀ ಕೊಡಸಿದಾ.
ನಾ ಒಳಗ ಹೋಗಿ ನೋಡ್ತೇನಿ ಕಾಲಿಡಲಿಕ್ಕೆ ಜಾಗಾ ಇಲ್ಲಾ. ಮುಕ್ಕಾಲ ಭಾಗ ಜನಾ ಉತ್ತರ ಕರ್ನಾಟಕದವರ. ಅವರ ಮಾತು-ಕತಿ ಕೇಳಿದರ ಅಗದಿ ನನಗ ಗದ್ದನಕೇರಿ ಕ್ರಾಸನಾಗ ನಿಂತಂಗ
ಆಗಲಿಕತ್ತಿತ್ತ. ಅವರ ಅವತಾರ ನೋಡಿದರ ಹಳೇ ಜೀನ್ಸ ಕಟ್ ಮಾಡಿದ್ದ ಶಾರ್ಟ್ಸ್, ಪರಕಾರ ಕಟ್ ಮಾಡಿದ್ದ ಮಿಡಿ. ಗದ್ಲಾ ನೋಡಿದರ ಹುಬ್ಬಳ್ಳಿ ದುರ್ಗದಬೈಲಕಿಂತಾ ಜಾಸ್ತಿ ಇತ್ತ.
ನನಗರ ಹಿಂಗ ಸಾವಿರಗಟ್ಟಲೇ ಜನಕ್ಕ ನೋಡಿದರ anxiety ಆಗ್ತದ. ಮ್ಯಾಲೆ ಫಸ್ಟ ಟೈಮ್ ಕ್ಯಾಸಿನೋ ಅಂತ anxiety ಬ್ಯಾರೆ ಆಗಿತ್ತ. ತೊಗೊ ಒಂದ ಅರ್ಧಾ ತಾಸ ಹುಚ್ಚ ಹಿಡದಂಗ ಆತ. ಒಂದ ಕೂಡಲಿಕ್ಕೆ ಜಾಗಾ ಇಲ್ಲಾ ನಿಲ್ಲಲಿಕ್ಕೆ ಜಾಗಾ ಇಲ್ಲಾ. ಇನ್ನ ಆಡೊ ಟೇಬಲ್ ಮ್ಯಾಲೆ ಅಂತೂ ಒಬ್ಬರ ಮ್ಯಾಲೆ ಒಬ್ಬರ ಬಿದ್ದ ಆಡಲಿಕ್ಕತ್ತಿದ್ದರು.
ಮ್ಯಾಲೆ ನಂಗರ ಒಂದೂ ಆಟನೂ ತಿಳಿವಲ್ವು. ಮನ್ಯಾಗ ನಮ್ಮಜ್ಜಿ, ನಮ್ಮವ್ವಾ, ಹೆಂಡ್ತಿ ಜೊತಿ ಚಕ್ಕಾ-ವಚ್ಚಿ, ಹಾವು-ಏಣಿ…ಭಾಳಂದರ ಇತ್ತೀಚಿಗೆ ಲೂಡೋ ಬಿಟ್ಟರ ಬ್ಯಾರೆ ಆಟಾ ಆಡಿ ಗೊತ್ತ ಇರಲಿಲ್ಲಾ. ಕಡಿಕೆ ಇದ್ದಿದ್ದರಾಗ ರೋಲೇಟ್ ಟೇಬಲ್ ಮ್ಯಾಲೆ ಜಾಗಾ ಸಿಗ್ತ.
ಹಂಗ ಆಟ ತಿಳಿಯೋದರಾಗ ಮೂರ ಸಾವಿರ ಹೋತ. ಏ ಈಗ ಆಟ ತಿಳಿತ ತಡಿ ಅಂತ ಮತ್ತ ಎರಡ ಸಾವಿರದ ಕ್ವೈನ್ಸ್ ತೊಗೊಂಡ ಕೂತೆ. ಎರೆಡ ಸಾವಿರದಾಗ ಇಪ್ಪತ್ತೊಂದುವರಿ ಸಾವಿರ ಮಾಡಿದೆ. ಅಷ್ಟರಾಗ ನಮ್ಮ ಡ್ರೈವರ
’ಸಾಕ ಬಿಡ್ರಿ ಸರ್….ಎಷ್ಟ ಗೆದ್ದರೂ ಮನಿಗೆ ಹೋಗಿ ಹೆಂಡ್ತಿಗೆ ಬಡೆಯೋರು, ಮೂರ ಆಗಾಕ ಬಂತ ಇನ್ನೊಂದ ತಾಸಿಗೆ ಇಡ್ಲಿ- ಸಾಂಬಾರ್ ಟಿಫೀನ್ ಐತಿ, ತಿಂದ ವಾಪಸ ಹುಬ್ಬಳ್ಳಿಗೆ ಹೋಗೋಣ..’ ಅಂತ ಬಡ್ಕೊಂಡಾ. ಆದರ ನಾ ಅವನ ಮಾತ ಕೇಳಲಿಲ್ಲಾ. ಅದರಾಗ ಅಂವಾ ಗೆದ್ದದ್ದ ಅಷ್ಟು ಹೆಂಡ್ತಿಗೆ ಕೊಡಬೇಕ ಅನ್ನೊದನ್ನ ನೆನಪ ಮಾಡಿದ್ದಕ್ಕ ಆಗಿದ್ದ ಆಗಲಿ ಅಂತ ಗೆದ್ದಿದ್ದನ್ನ ಅಷ್ಟು ಆಡಿ ಸೋತ ಲಾಸ್ಟಿಗೆ ಫ್ರೀ ಇಡ್ಲಿ-ವಡಾ- ಸಾಂಬಾರ ಚಟ್ನಿ ತಿಂದ ವಾಪಸ ಹುಬ್ಬಳ್ಳಿ ಹಾದಿ ಹಿಡದೆ.
ಮನಿ ಗೇಟ ಮುಂದ ಇನ್ನೂ ಕಾರ ಇಳದಿದ್ದಿಲ್ಲಾ ನನ್ನ ಹೆಂಡತಿ ಮನಿ ಬಾಗಲಕ್ಕ ಕದಲಾರತಿ ಹಿಡ್ಕೊಂಡ ಎಷ್ಟ ಗೆದ್ದರಿ ಅಂತ ಕೇಳಿದ್ಲು.
’ಏ..ಗೆಲ್ಲಲಿಲ್ಲಾ, ಸೋಲಲಿಲ್ಲಾ…ಸುಮ್ಮನ experienceಗೆ ಹೋಗಿದ್ದೆ ..’ ಅಂತ ನಾ ಅಂದ ಸುಮ್ಮನಾದೆ.
ಮರದಿವಸ ಅರಬಿ ಒಗಿ ಬೇಕಾರ ನನ್ನ ಹೆಂಡ್ತಿಗೆ ನನ್ನ ಜೀನ್ಸ್ ಪಾಕೇಟನಾಗ ಒಂದ ನೂರ ರೂಪಾಯಿದ ಕ್ಯಾಸಿನೋ ಕ್ವೈನ್ ಸಿಕ್ಕತ.
ಆವಾಗ ನನಗ ನಮ್ಮವ್ವ ’ಗೋವಾದಾಗ ಗೆದ್ದ ಬಾ ಮಗನ.. ವಿಜಯೀ ಭವ!’ ಅಂತ ಆಶೀರ್ವಾದ ಮಾಡಿದ್ದ ಹುಸಿ ಆಗಲಿಲ್ಲಲಾ ಅಂತ ಖುಶಿ ಆತ.
ಇನ್ನ ನನ್ನ ಹೆಂಡ್ತಿ ನಾ ಗೆದ್ದ ಬೈಮಿಸ್ಟೇಕ್ ತಂದಿದ್ದ ಒಂದ ಕ್ವೈನ್ ’ ನನ್ನ ಗಂಡನೂ ಕ್ಯಾಸಿನೋಗೆ ಹೋಗಿದ್ದಾ’ ಅಂತ ನೆನಪಿಗೆ ಇರಲಿ ಅಂತ ಟ್ರಂಕನಾಗ ಇಟ್ಗೊಂಡಾಳ.
ಆದರೂ ಒಂದ ಮಾತ ಸಿರಿಯಸ್ ಆಗಿ ಹೇಳ್ತೇನಿ ಈ ಕ್ಯಾಸಿನೋ-ಪಾಸಿನೋ ಎಲ್ಲಾ ಕುಡದ-ತಿನ್ನೋರಿಗೆ ಇಷ್ಟ ,ದುಡದ ತಿನ್ನೋರಿಗೆ ಅಲ್ಲಾ ಮತ್ತ.