ಮೊನ್ನೆ ರಾತ್ರಿ ಹನ್ನೊಂದ-ಹನ್ನೊಂದುವರಿ ಆಗಿತ್ತ ನಮ್ಮ ಚಂದ್ರ್ಯಾ ವೈಟ ಹಾರ್ಸ್ ನಿಂದ ಕೆಳಗ ಇಳದಂವನ ಸೀದಾ ಫೋನ ತಗದಾ. ನಾ ಅಂವಾ ಹೆಂಡ್ತಿಗೆ ಫೋನ ಮಾಡಿ ನನ್ನ ಮನಿ ತನಕ ಬಿಟ್ಟ ಬರ್ತೇನಿ ಅಂತ ಹೇಳಲಿಕ್ಕೆ ಫೋನ ಮಾಡ್ಲಿಕತ್ತಾನ ಅಂತ ತಿಳ್ಕೊಂಡ
’ಏ…ನೀ ಯಾಕ ರಿಸ್ಕ ತೊಗೊಂಡ ನನಗ ಮನಿತನಕ ಬಿಡಾಕ ಬರ್ತಿಲೇ…ನಾ ಓಲಾದಾಗ ಇಲ್ಲಾ ಆಟೋದಾಗ ಹೋಗ್ತೇನಿ…..ನಿಂದ ಮೊದ್ಲ ಭಾಳ ಆಗೇತಿ ..ನೀ ಸೀದಾ ಮನಿಗೆ ಹೋಗ ….ಗೋಕುಲ ರೋಡನಾಗ ಪೋಲಿಸರ ಬ್ಯಾರೆ ಇರ್ತಾರ ಮತ್ತೇಲ್ಲರ ಸಿಕ್ಕರ ಹತ್ತ ಸಾವಿರ ದಂಡ ಐತಿ….ಏನಿಲ್ಲದ ರೊಕ್ಕ ಕಡಮಿ ಬಿತ್ತಂತ ಪಾರ್ಟಿನ ಕಂಟ್ರಿಬ್ಯೂಶನ್ ಮಾಡಿಸಿಸಿ ಕೊಟ್ಟಿ. ನಾಳೆ ನೀ ಪೋಲಿಸರ ಕೈಯಾಗ ಸಿಕ್ಕರ ಆ ಹತ್ತ ಸಾವಿರ ದಂಡಾನೂ ಕಂಟ್ರಿಬ್ಯೂಶನ್ ಮಾಡಸೊವನ” ಅಂತ ನಾ ಎಷ್ಟ ಅಂದರೂ ಕೇಳಲಿಲ್ಲಾ.
’ಲೇ…ದೋಸ್ತರಾಗಿ ಮನಿಗೆ ಬಿಡಲಿಲ್ಲ ಅಂದರ ದೋಸ್ತಿಗೆ ಅಸಂಯ್ಯ ಮಾಡಿದಂಗ ಮಗನ’ ಅಂತ ಅಂದಾ.
ಇಂವಾ ಫೋನ ಮಾಡಿದ್ದ ತನ್ನ ಹೆಂಡ್ತಿಗೆ ಅಲ್ಲಾ, ನಮ್ಮ ಇನ್ನೊಬ್ಬ ದೋಸ್ತ ರವ್ಯಾಗ. ಅತ್ತಲಾಗ ರವ್ಯಾ ಫೋನ ಎತ್ತೋದ ತಡಾ ಇಂವಾ
“ಲೇ…..ರವ್ಯಾ…..ಆ ಗೋಕುಲ ರೋಡನಾಗ ಪೋಲಿಸರ drink and drive ಹಿಡಿಲಿಕತ್ತಾರೇನ ನೋಡಲೇ” ಅಂತ ಅಂದಾ.
ನಂಗ ಒಮ್ಮಿಕ್ಕಲೇ ಶಾಕ್ ಆತ, ಅಲ್ಲಾ ರವ್ಯಾ ಇರೋದ ಬೆಂಗಳೂರಾಗ ಈ ಮಗಾ ಅವಂಗ ’ಗೋಕುಲ ರೋಡನಾಗ ಪೋಲಿಸರ ಇದ್ದಾರೇನ’ ಅಂತ ಕೇಳಿದರ ಪಾಪ ಅಂವಾ ಹೆಂಗ ನೋಡಬೇಕ
“ಇಲ್ಲಲಾ…..thanks ದೋಸ್ತ…….sorry to disturb you late in the night….good night’ ಅಂತ ಕನ್ನಡ ಮಿಡಿಯಮನಾಗ ಕಲತಿದ್ದರು ಇಂಗ್ಲೀಷನಾಗ ಮಾತಾಡಿ ಫೋನ ಇಟ್ಟಾ.
ಇಂಗ್ಲೀಷನಾಗ ಮಾತ ಯಾಕ ಬಂದ್ವು ಅಂತ ಬಿಡಿಸಿ ಹೇಳ್ಬೇಕಾಗಿಲ್ಲಾ ಅನ್ಕೊಂಡೇನಿ….
ಮುಂದ ನಾ ಅವಂಗ ’ರವ್ಯಾಗ ಯಾಕ ಫೋನ ಮಾಡಿದ್ದಿಲೇ …..ಅವಂಗೇನ ಗೊತ್ತಾಗತೈತಿ ಗೋಕುಲ ರೋಡನಾಗ ಪೋಲಿಸರ ಇದ್ದದ್ದ ಬಿಟ್ಟಿದ್ದ…..ನಿಂದ ಏರೈತಿ…ನೀ ಸೀದಾ ಮನಿಗೆ ಹೋಗಪಾ …ನಂಗೇನ ಬಿಡೋದ ಬ್ಯಾಡ’ ಅಂತ ನಾ ಅಂದರ
“ಲೇ…..ಅಂವಾ ಅಲ್ಲೇ ಮ್ಯಾಲೆ ISS ದಾಗ ಇರ್ತಾನ ಮಗನ…ಅವಂಗ ಇಡಿ ಜಗತ್ತಿನಾಗ ಎಲ್ಲೇಲ್ಲೆ ಪೋಲಿಸರ drink and drive ಹಿಡಿಲಿಕತ್ತಾರ ಎಲ್ಲಾ ಗೊತ್ತಾಗತೈತಿ…’ ಅಂದಾ.
ನಂಗ ಗ್ಯಾರಂಟೀ ಆತ… ಇವನ ಜೊತಿ ಹೋದರ ನಾವಿಬ್ಬರು ಪೋಲಿಸರ ಕೈಯಾಗ ಸಿಗೋದ ದೂರ ಉಳಿತ ಅಂಬುಲೆನ್ಸ ಕೈಯಾಗೂ ಸಿಗಂಗಿಲ್ಲಾ ಅಂತ…ನಾ ಎಷ್ಟ ಬಡ್ಕೊಂಡೆ
’ಮಗನ… ನಿಂದ ಪಾರ್ಟಿ ಅಂತ ಆ ಪರಿ ತೊಗೊಬ್ಯಾಡ’ ಅಂದರೂ ಕೇಳಲಿಲ್ಲಾ….ಹೆಂಗಿದ್ದರೂ ಜಾಸ್ತಿ ಆದರ ಕಂಟ್ರಿಬ್ಯೂಶನ್ ತೊಗೊ ಅಂತ ಮಗಾ ಹೊಡದ ಹೊಡದಾ ಈಗ ನೋಡಿದರ ನಾ ಬ್ಯಾಡ ಅಂದರು ಮನಿಗೆ ಬಿಡ್ತೇನಿ ಅಂತ ಗಂಟ ಬಿದ್ದಾನ…ಅಲ್ಲಾ ಹಂಗ ಏನಿಲ್ಲದ ನಂಬದೇಲ್ಲಾ ಮುವತ್ತ ವರ್ಷದ ದೋಸ್ತಿ ಇನ್ನ ಒಂದ ನೈಂಟಿ ಹೊಡದರ ಅದ ಅರವತ್ತ ವರ್ಷದ ದೋಸ್ತಿಗೆ auto update ಆಗೇ ಬಿಡ್ತದ ಬಿಡ್ರಿ.
ಅಲ್ಲಾ ಇಂವಾ ನಮ್ಮ ರವ್ಯಾ ISSನಾಗ ಇರ್ತಾನ ಅಂತ ಅಂದನಲಾ, ಅದ ಯಾವ ISS ಅಂತ ತಿಳ್ಕೊಂಡಿರಿ… International Space Station. ಅಲ್ಲಿಂದ ಎಲ್ಲಾ ಕಾಣ್ತೈತಿ ಅಂತ ನಮ್ಮ ಚಂದ್ರ್ಯಾಂದ ಲಾಜಿಕ್.
ಅಲ್ಲಾ ನೀವು ಖರೇ ಹೇಳಿದ್ರು ಕೇಳ್ತಿರಿ…ಸುಳ್ಳು ಹೇಳಿದ್ರು ಕೇಳ್ತಿರಿ…..ಆದರ ನಾ ಖರೇ ಹೇಳ್ತೇನಿ….(ಹಂಗ ತೊಗೊಂಡಾಗ ನಾವ ಯಾವಾಗಲೂ ಖರೇನ ಹೇಳ್ತೇವಿ ಆ ಮಾತ ಬ್ಯಾರೆ)…..ಯಾವಾಗಿಂದ ಈ ಹೊಸಾ traffic rules and regulations ಬಂದಾವಲಾ ಆವಾಗಿಂದ ರಾತ್ರಿ ಹೊರಗ ಹೋಗಲಿಕ್ಕೆ ಹೆದರಕಿ ಬರಲಿಕತ್ತದ ಬಿಡ್ರಿ, ಅಕಸ್ಮಾತ ರಿಸ್ಕ ತೊಗೊಂಡ ಹೋದರು ಮನಿಗೆ ಬಂದ ಮುಟ್ಟೊದರಾಗ ಪೋಲಿಸರ ಹೆದರಕಿಗೆ ತೊಗೊಂಡಿದ್ದ ಎಲ್ಲಾ ಇಳದ ಬಿಟ್ಟಿರತದ. ಇನ್ನ ಸುಮ್ಮನ ಮನ್ಯಾಗ ಹೆಂಡ್ತಿಗೆ ಕೈಕಾಲ ಹಿಡ್ಕೊಂಡ ಅಕಿನ್ನ ಒಪ್ಪಿಸಿಸಿ ತೊಗೊಬೇಕಂದರ ಒಂದು ಅಕಿ ಅಷ್ಟ ಸರಳ ಒಪಗೊಳಂಗಿಲ್ಲಾ…ಹಂಗ ಅಪ್ಪಿ ತಪ್ಪಿ ’ಗಂಡಾ ಪೋಲಿಸರ ಕೈಯಾಗ ಸಿಕ್ಕೊಂಡರ ಹತ್ತ ಸಾವಿರ ದಂಡ’ಅಂತ ಅಂತಃಕರಣ ಪಟ್ಟ ಇಲ್ಲಾ ಪೇಪರನಾಗ ಏನರ ’ಹಿಂತಾಕಿ ಗಂಡ, ಹಿಂತಲ್ಲೇ ಡ್ರಿಂಕ್ ಮಾಡಿ ಡ್ರೈವ ಮಾಡಬೇಕಾರ ಸಿಕ್ಕ ಬಿದ್ದಾನ’ ಅಂತ ಹೆಸರ ಬಂದಗಿಂದಿತ್ತ ಅಂತ ಹೆದರಿನರ ಮನ್ಯಾಗ ತೊಗೊಳಿಕ್ಕೆ ಯೆಸ್ ಅಂದ್ಲು ಅಂತ ತಿಳ್ಕೋರಿ…ಅದ ಬರೇ breathe analyzer ( drink and drive tesing machine) ಅಲ್ಲಾ emission testing machine ಮುಂದ ಇಟ್ಕೊಂಡ ಕುಡದಂಗ……ಪ್ರತಿ ಸಿಪ್ಪಿಗೊಮ್ಮೆ ಚೆಕ್ ಮಾಡೋಕಿ….ಲಿಮಿಟ್ ದಾಟತ ಅಂತ ಮುಗಿಸೆ ಬಿಡೋಕಿ. ಇನ್ನ ಅದೇಲ್ಲೆ ಏರಬೇಕ?
ಏನ ಬಂತಪಾ ನಮ್ಮ ಹೆಣೇಬರಹ..ಸುಮ್ಮನ ಈ drink and drive ಬ್ಯಾನ ಮಾಡೋದಕಿಂತಾ drinks ಬ್ಯಾನ ಮಾಡಿದ್ದರ ಛಲೋ ಇತ್ತ ಅನಸಲಿಕತ್ತದ.
ಅನ್ನಂಗ ನಾವ ಎಲ್ಲಿದ್ವಿ…..ISS…. ಹಾಂ….. ಒಂದು ನಮ್ಮ ರವ್ಯಾ ಇರೋ ISSಗೂ international space stationಗೂ ಸಂಬಂದ ಇಲ್ಲಾ, ಪಾಪ ಅಂವಾ ಬೆಂಗಳೂರಾಗ International scientific services ಅನ್ನೋ ಕಂಪನ್ಯಾಗ ಕೆಲಸ ಮಾಡ್ಕೊಂಡ ಇದ್ದಾನ. ಆದರ ನಮ್ಮ ಚಂದ್ರ್ಯಾ ಅವ ಎರಡು ISS ಒಂದ ಅಂತ ತಿಳ್ಕೊಂಡ ಅವಂಗ ಫೋನ ಹೊಡದಿದ್ದಾ. ಇನ್ನ ರವ್ಯಾಗ ಗೊತ್ತ ಹಿಂಗ ನಡರಾತ್ರ್ಯಾಗ ಹುಬ್ಬಳ್ಳಿ ದೋಸ್ತರ ಫೋನ ಮಾಡ್ಯಾರ ಅಂದರ ಇವರದ ಜಾಸ್ತಿ ಆಗೈತಿ ಅದಕ್ಕ ಫೋನ ಮಾಡಿ ಜೀವಾ ತಿಂತಾರ ಅಂತ. ಅದಕ್ಕ ಅಂವಾ ಫೋನ ಮಾಡಿದಾಗ ಸೀದಾ ’ಗೋಕುಲ ರೋಡನಾಗ ಪೋಲಿಸರಿಲ್ಲ ತೊಗೊ ’ ಅಂತ ಹೇಳಿ ಫೋನ ಇಟ್ಟ ಬಿಟ್ಟಿದ್ದಾ.
ಇನ್ನ ನಮ್ಮ ಚಂದ್ರ್ಯಾ ಅವಂಗ ಫೋನ ಮಾಡಲಿಕ್ಕೆ ಇನ್ನೊಂದ ಕಾರಣ ಅಂದರ ಅಂವಾ ಮೊನ್ನೆ ಬ್ರ್ಯಾಡ್ ಪಿಟ್ ( Brad Pitt) ಹಾಲಿವುಡ್ actor..ತನ್ನ ಹೊಸಾ ಸಿನೇಮಾ ’ad astra’ದ್ದ ಪ್ರಮೋಶನ್ ಸಂಬಂಧ International Space Stationದಾಗ ಇರೋರ ಜೊತಿ ಮಾತಾಡಿದ್ದ ಸುದ್ದಿ ಕೇಳಿದ್ದಾ, ಅದು earth to space call. ಅದರಾಗ ಬ್ರ್ಯಾಡ್ ಪಿಟ್ ಮ್ಯಾಲೆ ಅಂತರಿಕ್ಷದೊಳಗ ಇರೋರ ಜೊತಿ ಒಂದಿಷ್ಟ ಮಾತಾಡಿದ್ದು, ನಮ್ಮ ಚಂದ್ರಯಾನ ೨ದ್ದ ವಿಕ್ರಮ ಲ್ಯಾಂಡರ ಬಗ್ಗೆನೂ ಕೇಳಿದ್ದು ಎಲ್ಲಾ ಸುದ್ದಿ ಬಂದಿತ್ತಲಾ, ಹಿಂಗಾಗಿ ಇವನ ತಲ್ಯಾಗ ರವ್ಯಾ International Space Stationನಾಗ ಇರ್ತಾನ ಅವಂಗ ಅಲ್ಲಿಂದ ಎಲ್ಲೇಲ್ಲೆ ಪೋಲಿಸರ ಇದ್ದಾರ, ಎಲ್ಲೇ ಹಿಡಿಲಿಕತ್ತಾರ ಅಂತ ಎಲ್ಲಾ ಗೊತ್ತಾಗತೈತಿ ಅಂತ ಇತ್ತ………..ಏನ್ಮಾಡ್ತಿರಿ?
ನಾ ಆಮ್ಯಾಲೆ ಚಂದ್ರ್ಯಾಗ ಆ ISS ಬ್ಯಾರೆಲೇ ಅಂತ ತಿಳಿಸಿದ ಮ್ಯಾಲೆ ಮತ್ತ ಇಂಗ್ಲೀಷ ನಾಗ ’Oh….ISS’ ಅಂತ ಅಂದಾ..ಮತ್ತೇನ ISSಲೇ ಅಂತ ಕೇಳಿದರ I’m So Sorry ಅಂದಾ.
ಇರಲಿ ಇಷ್ಟೊತನಕ ನಾ ಬರದಿದ್ದೇಲ್ಲಾ ಕಾಲ್ಪನಿಕ..ನೀವೇಲ್ಲರ ನಾವ ಖರೇನ drink and drive ಕೆಟಗರಿ ಮನಷ್ಯಾರ ಅಂತ ತಿಳ್ಕೊಂಡ-ಗಿಳ್ಕೊಂಡಿರ್ರಿ. ನಾವ ಎಲ್ಲಾ ದೋಸ್ತರು law abiding citizens.
ಆದರೂ ಒಂದ ಸಲಾ ಹಂಗ ವಿಚಾರ ಮಾಡ್ರಿ ನಮಗೂ ಯಾವಾಗ ಬೇಕ ಆವಾಗ ನಮ್ಮ ಮೋಬೈಲನಿಂದ spaceಗೆ call ಮಾಡಿ ಅಲ್ಲೇ ಇರೋರಿಗೆ ಮ್ಯಾಲಿಂದ ಏನೇನ ಕಾಣಕತ್ತೈತಿ ಅಂತ ಕೇಳೊ ಅವಕಾಶ ಇತ್ತಂದರ ಏನೇನ ಕೇಳ್ತಿದ್ವಿ ಅಂತ.
ನಮ್ಮ ಹುಬ್ಬಳ್ಳಿ ಮಂದಿ ಅಂತೂ ಹುಬ್ಬಳ್ಳ್ಯಾಗ ಎಲ್ಲೇಲ್ಲೆ ಟ್ರಾಫಿಕ್ ಪೋಲಿಸರ ಹೆಲ್ಮೇಟ್, ಲೈಸನ್ಸ check ಮಾಡಲಿಕ್ಕೆ ನಿಂತಾರ ಅಂತ first ಕೇಳ್ತಾರ, next ಎಲ್ಲೇ ರೋಡ ತೆಗ್ಗ ತಗದಾರ, ಎಲ್ಲೇ ಧೂಳ ಎದ್ದೈತಿ ಕೇಳ್ತಾರ. ಇನ್ನ ದುರ್ಗದಬೈಲಾಗ ಗುರಸಿದ್ದನ ದ್ವಾಸಿ ಅಂಗಡಿ, ಮ್ಯಾದರ ಓಣ್ಯಾಗ ಹುಸೇನನ ಚುರಮರಿ ಗಾಡಿ, ಬಾರದಾನ ಸಾಲನಾಗ ಮಿರ್ಚಿ ಅಂಗಡಿ ತಗದೈತಿನ ಅಂತ ಕೇಳೋರ ಇದ್ದಾರ…
ಮಠದಾಗ ಮಂಗಳಾರ್ತಿ ಆತೇನೂ, ಸಾಯಿ ಬಾಬಾನ ಗುಡ್ಯಾಗ ಪ್ರಸಾದಕ್ಕ ಪಾಳೇ ಭಾಳ ಅದ ಏನ ಅಂತ ಕೇಳೊ ನನ್ನಂತ ಸಾತ್ವಿಕರು ಇರ್ತಾರ.
ಇನ್ನ ಅಕಸ್ಮಾತ…..ನಮ್ಮ ಹೆಂಡಂದರ ಹಂಗ spaceಗೆ ಕಾಲ ಮಾಡಿದ್ದರ ಅವರೇನೇನ ಕೇಳ್ತಿದ್ದರ imagine ಮಾಡರಿ? ಅಲ್ಲಾ, ಹಂಗ ಮೊದ್ಲ ಹೆಂಡಂದರ unimaginable ಇರ್ತಾರ ಇನ್ನ ಅವರ ಏನ ಕೇಳ್ತಿದ್ದರು ಅನ್ನೋದ ನಮ್ಮಂತಾ ಹುಲುಮಾನವರಿಗೆ imagine ಮಾಡಲಿಕ್ಕೂ ಸಾದ್ಯ ಇಲ್ಲಾ. ಆದರೂ ಅವರ ಮೊದ್ಲ ಕೇಳೋದ
’ನಮ್ಮ ಮನೇಯವರ not reachable ಇದ್ದಾರ…ಎಲ್ಲೆ ಕೂತಾರ ಒಂದ ಸ್ವಲ್ಪ ನೋಡ ….’
ಕರೆಕ್ಟ ಹೌದಲ್ಲ ನಾ ಹೇಳಿದ್ದ?