ಒಂದ ಹದಿನೈದ ದಿವಸದ ಹಿಂದ ಒಮ್ಮಿಂದೊಮ್ಮಿಲೇ
“ರ್ರಿ…ನಾಡದ ನಿಮ್ಮ ಮಗಳ ಸಾಲ್ಯಾಗ ಗ್ರ್ಯಾಂಡಪೇರೆಂಟ್ಸ್ ಡೇ ಅದ….ಅದಕ್ಕರ ಬರ್ತಿರೊ ಇಲ್ಲೊ ನೋಡ್ರಿ” ಅಂತ ನನ್ನ ಹೆಂಡ್ತಿ ಅಂದ್ಲು.
“ಲೇ…ಗ್ರ್ಯಾಂಡಪೇರೆಂಟ್ಸ ಡೇ ನೋ ಇಲ್ಲಾ ಪೇರೆಂಟ್ಸ್ ಡೇ ನೊ?” ಅಂತ ನಾ ಅಂದರ
“ಪೇರೆಂಟ್ಸ್ ಡೇ ಕ್ಕ ಎಂದ ಬಂದೀರಿ, ವರ್ಷಾ ನಾ ಒಬ್ಬೋಕಿನ ಹೋಗ್ತೇನಿ…ನೋಡಿದವರೇಲ್ಲಾ ನಂದ ಡೈವರ್ಸ ಆಗೇದ, ನಾ ಸಿಂಗಲ್ ಪೇರೆಂಟ್ ಅಂತ ತಿಳ್ಕೊಂಡಾರ….ಅದಕ್ಕ ಗ್ಯ್ರಾಂಡಪೇರೆಂಟ್ಸ ಡೇ ಕ್ಕ ರ ಬರ್ರಿ…ನಿಮ್ಮವ್ವಗ ಅಂತೂ ಏಳಲಿಕ್ಕೆ-ಕೂಡಲಿಕ್ಕೆ ಬರಂಗಿಲ್ಲಾ ………ಹೆಂಗಿದ್ದರೂ ನಿಮ್ಮ ತಲ್ಯಾಗೂ ಕೂದ್ಲಿಲ್ಲಾ, ವಯಸ್ಸಾದೊರಂಗ ಕಂಡ ಕಾಣ್ತೀರಿ’ ಅಂತ ಟಾಂಟ್ ಹೊಡದ್ಲು.
ಹಂಗ ಅಕಿ ಹೇಳಿದ್ದ ಖರೆ ಬಿಡ್ರಿ, ನಾ ವಯಸ್ಸಾದೊರಂಗ ಕಾಣೊದ ಅಲ್ಲ ಮತ್ತ… ನಾ ಒಟ್ಟ ಮಕ್ಕಳ ಸಾಲಿಗೆ ಪೇರೆಂಟ್ಸ ಡೇ ಕ್ಕ ಹೋಗಲಾರದ್ದ. ನಾ ಇಬ್ಬರು ಮಕ್ಕಳದ ಹದಿನೈದ ವರ್ಷದ ಸಾಲಿ ಸರ್ವೀಸ ಒಳಗ ಒಂದ ದಿವಸನೂ ಪೇರೆಂಟ್ಸ ಡೇ ಕ್ಕ ಹೋಗಲಿಲ್ಲಾ, ಮಕ್ಕಳೇನ ಕಲಿತಾರ, ಹೆಂಗ ಕಲಸ್ತಾರ ಅಂತ ತಲಿ ಕೆಡಸಿಗೊಳ್ಳಿಲ್ಲಾ. ಅಲ್ಲಾ ನಾ ಸ್ವತಃ ಕೋತಂಬರಿ ಕಾಲೇಜನಾಗ ಪೂಜಾರ ಸರ್ ಫಿಜಿಕ್ಸ ಫೇಲ್ ಆದಾಗ ಪೇರೆಂಟ್ಸ್ ಕರಕೊಂಡ ಬಾ ಅಂದಾಗ ಭಾಡಗಿ ಪೇರೆಂಟ್ಸ್ ಕರಕೊಂಡ ಹೋದೊಂವಾ ಇನ್ನ ನನ್ನ ಮಕ್ಕಳ ಸಾಲಿಗೆ ಖಾಸ ಪೇರೆಂಟ್ ಅಂತ ಎಲ್ಲೆ ಹೋಗಬೇಕ.
ಪಾಪ ಅಕಿ ಒಬ್ಬೋಕಿನ ಹೋಗೊಕಿ ಮಾಸ್ತರ ಕಡೆ
’ನಿಮ್ಮ ಮಕ್ಕಳ ಹಂಗ-ಹಿಂಗ, ಓದಂಗಿಲ್ಲಾ,ಮಾತ ಕೇಳಂಗಿಲ್ಲಾ’ ಅಂತೇಲ್ಲಾ ಕಂಪ್ಲೇಂಟ್ ಕಿವಿ ತುಂಬ ಬೈಸ್ಗೊಂಡ ಬಂದ ಮುಂದ ನನಗ ಬಯ್ಯೋಕಿ. ಅಕಿ ಹೇಳಿದ್ದನ್ನೇಲ್ಲಾ ಸೀರಿಯಸ್ ಆಗಿ ಕೇಳಿ ಲಾಸ್ಟಿಗೆ
“ನೀ ಹೇಳ್ಬೇಕಿಲ್ಲ….ಎರಡೂ ಮಕ್ಕಳ ನನ್ನ ಹೋತಾವ ಹಿಂಗಾಗಿ ಮಂಡ ಅವ ಅಂತ ಹೇಳಿ” ಅಂತ ಅಂದ ಮುಂದ ಅಕಿ ಕಡೆ “ಭಾಳ ದೊಡ್ಡ ದೊಡ್ದ ಮಾತಾಡ ಬ್ಯಾಡ್ರಿ, ಮುಂದಿನ ಸರತೆ ಪೇರೆಂಟ್ಸ ಡೇ ಕ್ಕ ನೀವ ಹೋಗಿ ನಿಮ್ಮ ಮಾರಿ ತೊರಿಸ್ರಿ.. ಮಕ್ಕಳ ಯಾರನ ಹೋತಾವ ಗೊತ್ತಾಗ್ತದ” ಅಂತ ಅಂತಿದ್ಲು.
ನಾ “ಆತ ತೊಗೊ ಮುಂದಿನ ಸರತೆ ಹೋಗ್ತೇನಿ” ಅಂತ ಅನ್ನೋದ ಮತ್ತ ಪೇರೆಂಟ್ಸ್ ಡೇ ಬಂದಾಗ ಅಕಿನ್ನ ಕಳಸೊದ. ಪಾಪ ಅಕಿಗೆ ಬಿಡಲಾರದ ಕರ್ಮ, ಒಂಬತ್ತ ತಿಂಗಳ ಹೊತ್ತ ಹೆತ್ತೋಕಿ ಬ್ಯಾರೆ. ಬಾಯಿ ಮುಚಗೊಂಡ ಹೋಗಿ ಕಿವಿ ತುಂಬ ಬೈಸ್ಗೊಂಡ ಬರ್ತಿದ್ಲು.
ಹಿಂಗ ಇಕಿ ಪ್ರತಿ ಸಲಾ ಒಬ್ಬೊಕಿನ ಹೋಗೊದು ಟೀಚರ್ ಹೇಳಿದ್ದಕ್ಕೇಲ್ಲಾ ಹೂಂ ಹೂಂ ಅಂತ ಗೋಣ ಹಾಕೊಂಡ ಬರೋದು ನೋಡಿ ನೋಡಿ ಆ ಸಾಲಿ ಪ್ರಿನ್ಸಿಪಾಲ್ ಇಕಿ ಮುಂದ ಎಷ್ಟ ಹೇಳಿದರು ಅಷ್ಟ ಅಂತ
“ನೀವು ಮುಂದಿನ ಸರತೆ ನಿಮ್ಮ ಮನೆಯವರನ ಕರಕೊಂಡ ಬರ್ರಿ….ಅವರಿಗೇನರ ಕಾಳಜಿ ಅದ ಇಲ್ಲ ಮಕ್ಕಳದ್ದ” ಅಂತ ಅಂದರಂತ. ಅದಕ್ಕ ಇಕಿ
“ಇಲ್ಲರಿ ಅವರ ಬರೋಹಂಗಿಲ್ಲಾ….ಭಾಳ ಬ್ಯೂಸಿ ಇರ್ತಾರ, ಮ್ಯಾಲೆ ಪ್ರೈವೇಟ ಕಂಪನ್ಯಾಗ ಪೇರೆಂಟ್ಸ ಡೇ ಕ್ಕ ಸೂಟಿ ಕೊಡಂಗಿಲ್ಲಾ” ಅಂತ ಹೇಳಿದ್ಲಂತ.
ಹಿಂಗ ವರ್ಷಾ ವರ್ಷಾ ಪಾಪ ಅಕಿ ಒಬ್ಬೊಕಿನ ಹೋಗಿ ಪೇರೆಂಟ್ಸ ಡೇ ಅಟೆಂಡ್ ಮಾಡಿ ಬೈಸ್ಗೊಂಡ ಬರ್ತಿದ್ಲು. ಅದರಾಗ ಇಕಿ ಒಬ್ಬೊಕಿನ ಹೋಗೊದನ್ನ ಉಳದ ಪೇರೆಂಟ್ಸ ನೋಡಿ ಒಮ್ಮೊಮ್ಮೆ
’ಯಾಕ್ರಿ ನಿಮ್ಮ ಮನೆಯವರ ಬರಂಗೇಲಲಾ’ ಅಂತ ಒಂದಿಬ್ಬರ ಕೇಳಿದರ ಇನ್ನೊಂದಿಬ್ಬರ
’ನಿಮ್ಮ ಮನೇಯವರ ಅಬ್ರಾಡನಾಗ ಇರ್ತಾರೇನ್’ಅಂತ ಕೇಳೋರ.
ಇನ್ನ ಒಂದಿಷ್ಟ ಪಂಡಿತರಂತು ’ನೀವು ನಿಮ್ಮ ಮನೇಯವರು ಬ್ಯಾರೆ ಆಗಿರೇನ’ ಅಂತ ಕೇಳೊರಂತ.
ಇಕಿ ಅವರಂದಿದ್ದನ್ನ ಸಿರಿಯಸ್ ತೊಗೊಂಡ ’ಮಂದಿ ಏನೇನರ ಮಾತಾಡ್ತರ, ಏನೇನರ ತಿಳ್ಕೋತಾರ…please ನೀವು ಬರ್ರಿ’ ಅಂತ ಗಂಟ ಬಿಳ್ತಿದ್ಲು.
’ಲೇ…ಯಾರ ಏನ ತಿಳ್ಕೊಂಡರ ಏನ ಆಗೋದ. ನೀ ಅವರಿಗೆ ಹೇಳ ’ಹೌದ ನಾ ಗಂಡನ ಬಿಟ್ಟೇನಿ, ಮಕ್ಕಳನ ಕಟಗೊಂಡ ಒಬ್ಬಕಿನ ಇರ್ತೇನಿ’ ಅಂತ….ಮಂದಿ ಏನರ ಅನ್ಕೊತಾರ ಅಂತ ಹೆದರಿ ಪೇರೆಂಟ್ಸ ಡೇ ಕ್ಕ ಬರಲಿಕ್ಕೆ ಆಗ್ತದೇನ’ ಅಂತ ಅಕಿಗೆ ಜೋರ ಮಾಡ್ತಿದ್ದೆ.
ಇನ್ನ ಈ ಪೇರೆಂಟ್ಸ್ ಡೇ ದ್ದ ಇಷ್ಟ ಗದ್ಲ ಹಂತಾದರಾಗ ಈಗ ಸಾಲ್ಯಾಗ ಗ್ರ್ಯಾಂಡಪೇರೆಂಟ್ಸ ಡೇ ( first sunday of every september) ಬ್ಯಾರೆ ಶುರು ಮಾಡ್ಯಾರ. ಅಲ್ಲಾ ನಾ ಸ್ವಂತ ಹಡದ ಅಪ್ಪನ ಪೇರೆಂಟ್ಸ ಡೇ ಕ್ಕ ಹೋಗ್ತಿದ್ದಿಲ್ಲಾ ಇನ್ನ ನಮ್ಮವ್ವ ಗ್ರ್ಯಾಂಡಪೇರೆಂಟ್ಸ ಡೇ ಕ್ಕ ಬಾ ಅಂದರ ಎಲ್ಲೇ ಬರಬೇಕ? ಹೇಳಿ ಕೇಳಿ ನಮ್ಮವ್ವ.
ಅಲ್ಲಾ, ಹಂಗ ನಮ್ಮ ಕಾಲದಾಗ ಪಾಲಕರನ ಸಾಲಿಗೆ ಕರಕೊಂಡ ಹೋದರ ’ಮಗಾ, ಏನೋ ಸಾಲ್ಯಾಗ ಲಫಡಾ ಮಾಡ್ಯಾನ, ಅದಕ್ಕ ಪಾಲಕರನ ಕರಕೊಂಡ ಬಾ’ ಅಂತ ಹೇಳ್ಯಾರ ನೋಡ ಅಂತಿದ್ದರು. ನಮ್ಮ ಪೇರಂಟ್ಸನ್ನ ಒಂದ ದಿವಸನೂ ಸಾಲಿ ಮೆಟ್ಟಲಾ ಹತ್ತಸಲಾರದಂಗ ಕಲ್ತೇವಿ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಈಗ ನೋಡಿದರ ಮಾತ ಮಾತಿಗೆ ಪೇರೆಂಟ್ಸ ಕರಿತಾರ.
ಕಡಿಕೆ ನನ್ನ ಹೆಂಡ್ತಿಗೆ ಪಟಾಯಿಸಿ, ’grandparents dayಕ್ಕೂ ನೀನ ಹೋಗಿ ಬಾ, ಹಂಗ ಮಗನ ಬದ್ಲಿ ಮಗಳ ದೊಡ್ಡೊಕಿ ಇದ್ದ, ಅಕಿ ಲಗ್ನಾ ಮಾಡಿದ್ದರ ಇಷ್ಟೊತ್ತಿದೆ ನೀ ಅಜ್ಜಿ ಆಗಿರ್ತಿದ್ದಿ’ ಅಂತ ಕನ್ವಿನ್ಸ ಮಾಡಿ ಕಳಸಿದೆ ಆ ಮಾತ ಬ್ಯಾರೆ.
ಆದರ ಯಾವಾಗ ಹೋದ ವರ್ಷ ನನ್ನ ಮಗಾ SSLC ಮುಗಸಿದಾ ಇಕಿ ಸಿರಿಯಸ್ ಆಗಿ
’ನನಗ ಕಾಲೇಜಿಗ ಹೋಗಲಿಕ್ಕೆ ಆಗಂಗಿಲ್ಲಾ, ನಾ ಹತ್ತ ವರ್ಷ ಅವನ ಸಾಲಿಗೆ ಹೋಗಿ ಹೋಗಿ ನನ್ನ ಕೋಟಾ ಮುಗಿಸೇನಿ…ಇನ್ನ ಮುಂದ ಅವನ ಕಾಲೇಜಿಂದ ಜವಾಬ್ದಾರಿ ನೀವು ಹೊರೊ ಹಂಗ ಇತ್ತಂದರ ಕಾಲೇಜ ಹಚ್ಚರಿ ಇಲ್ಲಾಂದರ ಇಲ್ಲಾ’ ಅಂತ ಅಗದಿ ಕಡ್ದಿ ಮುರದಂಗ ಹೇಳಿ ಬಿಟ್ಟಳು.
ಇನ್ನ ಅನಿವಾರ್ಯ, ಇನ್ನರ ಅವನ ಜವಾಬ್ದಾರಿ ತೊಗೊ ಬೇಕಂತ ನಾನ ಕರಕೊಂಡ ಹೋಗಿ KLE ಡಿಪ್ಲೋಮಾಕ್ಕ ಅಡ್ಮಿಶನ್ ಮಾಡಿಸಿಸಿದೆ. ಅವನ ಕಾಲೇಜಿಗೆ ಸೇರಿಸಿ ಹದಿನೈದ ದಿವಸ ಆಗಿತ್ತ ಇಲ್ಲೋ orientation program ಅಂತ ಪೇರೆಂಟ್ಸಗೆ ಕರದರು.
ತೊಗೊ ಇಲ್ಲೇನೂ ಶುರು ಆತಲಾ ಅಂತ ನನ್ನ ಹೆಂಡ್ತಿ ಹಣಿ ಹಣಿ ಬಡ್ಕೊಂಡ ’ನಂಗೇನ ಸಂಬಂಧ ಇಲ್ಲಾ, ನೀವ ಬಲಾ, ನಿಮ್ಮ ಮಗಾ ಬಲಾ….’ ಅಂತ ಖಡಕ ಆಗಿ ಸರಕೊಂಡ ಬಿಟ್ಟಳು.
ನಾ ಪ್ರಿನ್ಸಿಪಾಲ್ ಅಂಗಡಿ ಸರಗೆ ಫೋನ ಮಾಡಿದರ parents attendance ಕಂಪಲ್ಸರಿ ಅಂದರು. ಸರಿ ಕಡಿಕೆ ನಾನ ಹೋದೆ.
ನನ್ನ ಮಗಂದ ಕಾಲೇಜ ಯುನಿಫಾರ್ಮ ಇತ್ತ, ನಾ ಜೀನ್ಸ್, ವೈಟ್ ಶರ್ಟ್ ಹಾಕ್ಕೊಂಡ ಮ್ಯಾಲೆ ಹಿಂದ ಒಂದ ಲ್ಯಾಪ್ ಟಾಪ್ ಬ್ಯಾಗ್ ಹಾಕ್ಕೊಂಡ, ತಲಿ ಮ್ಯಾಲೆ ಕೂದ್ಲ ಹೋಗಿದ್ದ ಕಾಣಲಾರದಂಗ ಬೇಸ್ ಬಾಲ್ ಕ್ಯಾಪ ಹಾಕ್ಕೊಂಡ ಹೋದೆ.
ಒಂದಿಬ್ಬರ ಪ್ರಥಮನ ದೋಸ್ತರ ಅವಂಗ ಸೈಡಿಕೆ ಕರದ
’ಏ…ನಿಮ್ಮಣ್ಣನ ಕರಕೊಂಡ ಬಂದಿ ಏನಲೇ, ಕಾಲೇಜಿಗೂ ನಿಮ್ಮಪ್ಪ ಬರಲಿಲ್ಲೇನ’ ಅಂತ ಕೇಳಿದರು..
’ಏ ಇವರ ನಮ್ಮ ಪಪ್ಪಾ’ ಅಂತ ಅಂವಾ ಹೇಳಿದರು ಅವರ ನಂಬಲಿಕ್ಕೆ ತಯಾರ ಇರಲಿಲ್ಲಾ..ಮುಂದ ಇವನ ಹೆಸರ ರೆಜಿಸ್ಟ್ರೇಶನ್ ಮಾಡಲಿಕ್ಕೆ ಹೋದಾಗ ಮೇಡಮ್ ಒಬ್ಬರು ನನ್ನ ಮಾರಿ ನೋಡಿ..
’ಏ orientation program ಫ್ರೇಶರ್ಸ್ ಗೆ ಇಷ್ಟ ಬ್ಯಾಕ್ ಲಾಗ್ ಇದ್ದೋರಿಗೆ ಅಲ್ಲಾ’ ಅಂತ ಅಂದರು….
ಏನ್ಮಾಡ್ತೀರಿ? ಅಲ್ಲೇ ಕಾಲೇಜಿನಾಗ ನೋಡಿದರ ನಾ ಒಂದೊಂದ ಸೆಮ್ ಒಳಗ ನಾಲ್ಕ ನಾಲ್ಕ ಬ್ಯಾಕ ಲಾಗ್ ಇದ್ದ ಸ್ಟುಡೆಂಟ್ ಅಂತ ತಿಳ್ಕೊಳಿಕತ್ತಾರ ನನ್ನ ಹೆಂಡ್ತಿ ನೋಡಿದರ ನನಗ
’ನಿಮಗ ವಯಸ್ಸಾತ, ನಿಮ್ಮ ಮಗಳ ಸಾಲಿಗೆ ಗ್ರ್ಯಾಂಡ ಪೇರೆಂಟ್ಸ ಡೇ ಕ್ಕ ಬರ್ರಿ’ ಅಂತ ಕರಿತಾಳ.
ಅಲ್ಲಾ ನಾ ಇನ್ನೂ ಹಿಂಗ young and energitic ಹುಡಗರಂಗ ಕಾಣೊದ ಅಕಿಗೆ ನೋಡ್ಲಿಕ್ಕೆ ಆಗವಲ್ತ ಬಿಡ್ರಿ. ಅಲ್ಲಾ ಹಂಗ ಮಂದಿ ಅಕಿಗೆ ಅಂಟಿ ಅಂತ ಕರೆಯೋದು, ನಂಗ ಅಣ್ಣಾ ಅಂತ ಕರಿಯೋದು….ಪಾಪ ಅಕಿಗೆ ಕೆಟ್ಟ ಅನಸಿ ಹೊಟ್ಟ್ಯಾಗ ಸಂಕಟಾಗಲಾರದ ಏನ.
ಅದರಾಗ ಮಾರ್ಕ್ ಟ್ವೈನ್ ’ age is issue of mind over matter, if you dont mind it does not matter ಅಂತ ಹೇಳಿದ ಮ್ಯಾಲೆ I dont mind at all. You also dont mind.
Excellent. How natural ! Shabbash …