ಈಗ ಒಂದ ವಾರದ ಹಿಂದ ಲೇಡಿ ಗೈನಾಕಲಜಿಸ್ಟ ಕಡೆ ಹೋಗಿದ್ದೆ…ಅಲ್ಲಾ, ಹೆಂಡ್ತಿ ಕರಕೊಂಡ ಹೋಗಿದ್ದೆ. ಯಾಕ ಅನ್ನೋದ ಇಂಪಾರ್ಟೆಂಟ್ ಅಲ್ಲಾ..ಸುಳ್ಳ congratulations ಅಂತ ಕಮೆಂಟ್ ಮಾಡ್ಲಿಕ್ಕೆ ಹೋಗಬ್ಯಾಡ್ರಿ…
ನಾ ಅಲ್ಲೆ ಏನಿಲ್ಲಾ ಅಂದರೂ ಒಂದ ಮೂರ-ನಾಲ್ಕ ತಾಸ ಇದ್ದೆ.. ಇನ್ನ ಕೆಲಸಿಲ್ಲಾ ಬೊಗಸಿಲ್ಲಾ ದಾವಾಖಾನ್ಯಾಗ ಪಾಳೆ ಹಚ್ಚಿ ಕೂತಿದ್ದೆ, ಹದಿನೈದ ಹದಿನಾರ ಪೇಶೆಂಟ್..ಒಬ್ಬೊಬ್ಬರದ ಒಂದೊಂದ ತಿಂಗಳದ್ದ ಕಥಿ…ಕೇಳ್ತಿರೇನ..ನನಗಂತೂ ಒಂದ ಬುಕ್ ಬರೆಯೋ ಅಷ್ಟ ವಿಷಯ ಸಿಕ್ಕತ…
ಆದರ ಐವತ್ತ ದಾಟಿದ ಮ್ಯಾಲೆ ಆ ವಿಷಯ ಬರದರ ಮಜಾ ಬರಂಗಿಲ್ಲಾ, ಮ್ಯಾಲೆ ಮತ್ತೊಬ್ಬರದ ಸುದ್ದಿ ತೊಗೊಂಡ ನಾವೇನ ಮಾಡ್ಬೇಕ ಅಂತ ನನ್ನ ಜೊತಿ ಅವತ್ತ ಆಗಿದ್ದ ಒಂದಿಷ್ಟ ಪ್ರಸಂಗ ನಿಮ್ಮ ಜೊತಿ ಇವತ್ತೀನ ಒಗ್ಗರಣಿ ಒಳಗ ಹಂಚಗೊಳಿಕತ್ತೇನಿ….
ರಿಸೆಪ್ಶನಿಸ್ಟ ಪೇಶೆಂಟ್ ಹೆಸರ ರಿಜಿಸ್ಟ್ರೇಶನ್ ಮಾಡಸಲಿಕ್ಕೆ ಫಾರ್ಮ್ ಕೊಟ್ಟರ..ಅದರಾಗ sex : male / female ಅಂತ ಇತ್ತ…
ನನಗ ಗೈನಾಕೊಲೊಜಿಸ್ಟ ಕಡೆ ಹೋದಾಗ ಸಹಿತ ರಿಜಿಸ್ಟ್ರೇಶನ್ ಫಾರ್ಮ್ ಒಳಗ ಪೇಶೆಂಟದ್ದ sex ಕೇಳ್ತಾರಲಾ ಅಂತ ವಿಚಿತ್ರ ಅನಸ್ತ…ಅಲ್ಲೇ ಇದ್ದ female ರಿಸೆಪ್ಶನಿಸ್ಟಗ ಹಿಂಗ್ಯಾಕ ಅಂತ ಕೇಳಿದೆ…ಅಕಿ ಒಳಗ ಹೋದಾಗ ಡಾಕ್ಟರನ ಕೇಳ್ರಿ ಅಂದ್ಲು….
ಅಷ್ಟರಾಗ ಅಲ್ಲೆ ಲ್ಯಾಬ್ ಒಳಗ ಕೆಲಸಾ ಮಾಡ್ಕಿಕತ್ತೊಂವ ನನಗ ಪರಿಚಯದವನ ಇದ್ದಾ ಅಂವಾ ನನ್ನ ನೋಡಿದವನ
‘ಮತ್ತೇನಣ್ಣಾ ಭಾಳ ದಿವಸದ ಮ್ಯಾಲೆ ಬಂದೀ…’ ಅಂದ ಬಿಟ್ಟಾ
’ಲೇ…ಭಾಳ ವರ್ಷ ಅನ್ನಲೇ…ಭಾಳ ದಿವಸ ಅಂದರ ನನ್ನ ಹೆಂಡ್ತಿ ಎಲ್ಲೇರ ನಾ ಮತ್ತೊಬ್ಬರ ಯಾರನರ ಆವಾಗ-ಇವಾಗ ಕರಕೊಂಡ ಬರ್ತಿರತೇನಿ ಅಂತ ತಿಳ್ಕೋಬಾರದ ಮಗನ ’ ಅಂತ ನಮ್ಮಕಿ ಮುಂದ ಅವಂಗ ಕ್ಲ್ಯಾರಿಫೈ ಮಾಡಿದೆ…
ಇನ್ನ ಆ ಲೇಡಿ ಡಾಕ್ಟರ್ ಅವರ ಮನೆಯವರ ನನಗ ಮೊದ್ಲಿಂದ ಪರಿಚಯದವರ. ಅದರಾಗ ನಾ ಅವರಿಗೆ ಏನಿಲ್ಲಾ ಅಂದರು ವರ್ಷಕ್ಕ ಒಂದ್ಯಾರಡ ಪೇಶೆಂಟ್ ಕಳಸ್ತಿರ್ತೇನಿ….ಅಲ್ಲಾ ಹಂಗ ವರ್ಷಕ್ಕ ಒಂದ್ಯಾರಡ ಪೇಶೆಂಟ್ ಗೈನಿಕ್ ಕಡೆ ಕಳಸ್ತಿರ್ತೇನಿ ಅಂದರ ಮತ್ತ ನೀವು ಎಲ್ಲೇರ ನನ್ನ ಬಗ್ಗೆ ತಪ್ಪ ತಿಳ್ಕೊಂಡ-ಗಿಳ್ಕೊಂಡೀರಿ..ನಾ ಹೇಳಿದ್ದ ನಮ್ಮ ಪರಿಚಯದವರನ ಕಳಸ್ತಿರ್ತೇನಿ ಅಂತ…
ಇನ್ನ ಅಗದಿ ಟಿಪ್ ಟಾಪ್ ಆಗಿ ದಂಪತ್ ಹೋಗಿದ್ದ ನೋಡಿ, ಡಾಕ್ಟರ ನನಗ
’ಏನೋ ಗುಡ್ ನ್ಯೂಜ್ ಇದ್ದಂಗ ಕಾಣ್ತದಲಾ’ ಅಂತ ಚಾಷ್ಟಿ ಮಾಡಿದರು….
’ಹಂಗೇನರ ನಮಗ ಗುಡ್ ನ್ಯೂಜ್ ಆದರ ಅದ ನಿಮಗ ಬ್ಯಾಡ ನ್ಯೂಜ್ ಆಗ್ತದ ವಿಚಾರ ಮಾಡಿ ಚೆಕ್ ಮಾಡಿ ಹೇಳ್ರಿ…’ ಅಂತ ನಾ ಸಿರಿಯಸ್ ಆಗಿ ಅಂದೆ.
ಅಲ್ಲಾ, ಯಾಕಂದರ ಹದಿನೈದ ವರ್ಷದ ಹಿಂದ ನಮ್ಮಕಿದ ಎರಡನೇದ ಡಿಲೇವರಿ ಆದಮ್ಯಾಲೆ ’ ಇತಿ ಪ್ರೇರಣಾ ಆಡೂರ ಸಂತತಿ ಉತ್ಪತ್ತಿ ಪುರಾಣೆ… ಅಂತಿಮೋಧ್ಯಾಯಃ’ ಅಂತ ಮುಂದ ಮಕ್ಕಳ ಆಗಲಾರದ್ದ ಆಪರೇಶನ್ ಮಾಡಿ ’ಇನ್ನ ಮುಂದ ನಿಮ್ಮ ಮನೇಯವರಿಗೆ ಮಕ್ಕಳ ಆಗಂಗಿಲ್ಲಾ, ನಿಮಗ ಆದರ ಆಗಬಹುದು’ ಅಂತ ಹೇಳಿ ಕಳಸಿದ ಡಾಕ್ಟರ ನೀವ ಅಂತ ಅವರಿಗೆ operation ಮಾಡಿಸಿದ್ದನ್ನ್ ರಿಮೈಂಡ್ ಮಾಡಿದೆ…..
ಡಾಕ್ಟರ್ ’ಓಹ್ I see..I forgot’ ಅಂತ ಅಂದರು….
ನಾ ಅವರಿಗೆ ‘but we have not…we keep remembering it regularly…whenever…’ ಅಂತ ಅನ್ನೋವ ಇದ್ದೆ..ಹೋಗ್ಲಿ ಬಿಡ ಇಷ್ಟ ವಯಸ್ಸಾದ ಮ್ಯಾಲೂ ಹಿಂತಾವೇಲ್ಲಾ ಮಾತಾಡೋದ ಸರಿ ಅನಸಂಗಿಲ್ಲಾ ಅಂತ ಸುಮ್ಮನಾದೆ…
ಮುಂದ ಅವರ ಏನ ಆಗಲಿ ಒಂದ ಅಲ್ಟ್ರಾ ಸೌಂಡ ಮಾಡಿಸಿ ನೋಡೋಣ, ಒಂದ ಲಿಟರ್ ನೀರ ಕುಡದ ಒಂದ ತಾಸ ಹೊರಗ ಕೂಡ್ರಿ ಅಂತ ಕಳಸಿದ್ರು…ಮತ್ತ ಹೊರಗ ಒಂದ ಬಿಸ್ಲೇರಿ ಬಾಟಲಿ ಹಿಡಕೊಂಡ ಕೂತ್ವಿ… ನನಗ ಅಲ್ಟ್ರಾ ಸೌಂಡ ಅಂದ ಕೂಡಲೇ ಯಾಕೊ ಟೆನ್ಶನ್ ಶುರು ಆತ…ನಿಮಗೊತ್ತಲಾ..ನಾ anxiety ಮನಷ್ಯಾ ಅಂತ… ಅಲ್ಲಾ ಇದ ಮೊದ್ಲ ಕಲಿಯುಗ, ಎದರದು ಗ್ಯಾರಂಟಿ ಇರಂಗಿಲ್ಲಾ..ಹಂತಾದರಾಗ ನಾ ಅಪರೇಶನ್ ಮಾಡಿಸಿಸಿ ಹದಿನೈದ ವರ್ಷದ ಮ್ಯಾಲೆ ಆತ, ಎಲ್ಲೇರ operation validity ಮುಗದ ಹೋಗಿದ್ದರ ಏನ ಗತಿ ಅಂತ ಟೆನ್ಶನ್ ಶುರು ಆಗಿ ನಾ ನನ್ನ ಹೆಂಡ್ತಿಗಿಂತಾ ಜಾಸ್ತಿ ನೀರ ಕುಡಿಲಿಕತ್ತೆ…
’ರ್ರೀ…ನೀರ ಜಾಸ್ತಿ ಕುಡಿ ಅಂತ ನಿಮ್ಮ ಮನೆಯವರಿಗೆ ಹೇಳ್ಯಾರ…ಅಲ್ಟ್ರಾ ಸೌಂಡ ಅವರದ..ನಿಮ್ಮದಲ್ಲಾ’ ಅಂತ ರಿಸೆಪ್ಶನಿಸ್ಟ ನನಗ ರಿಮೈಂಡ್ ಮಾಡಿದ್ಲು…
ಅಷ್ಟರಾಗ ನಮ್ಮ ದೋಸ್ತ ಮೆಡಿಕಲ್ ರೆಪ್ ಒಬ್ಬೊಂವ ಅದ ಹಾಸ್ಪಿಟಲ್ ಗೆ ಬಂದ…ನನ್ನ ನೋಡಿದವನ
’ಮತ್ತೇನಲೇ ವಿಶೇಷ… ಗೈನಾಕಲಜಿಸ್ಟ ಕಡೆ ಬಂದೀ….ಮೂರನೇದ್ದರ ಏನ ರೇಡಿ ಮಾಡಿ ಏನ ಮಗನ’ ಅಂತ ಅಗದಿ ನಾಲ್ಕ ಮಂದಿಗೆ ಕೇಳೋ ಹಂಗ ಒದರಿದಾ. ನಂಗರ ಬಿ.ಪಿ. ಏರಿತ್ತ…ತಡಕೊಂಡ
’ಲೇ…ನಿನ್ನೌನ..ಒಳತ ಅನ್ನ ಮಗನ….ಮೊದ್ಲ ನಿನ್ನ ನಾಲಿಗೆ ಮ್ಯಾಲೆ ಮಚ್ಛಿ ಐತಿ’ ಅಂತ ಅವಂಗ ಬಾಯಿ ಮುಚ್ಚಿಸಿಸಿದೆ….
ಮುಂದ ಹತ್ತ ನಿಮಿಷಕ್ಕ ನಮ್ಮ ರೇಣುಕಾನಗರದಾಗಿನ ಮನೆ ಕಡೆ ಇದ್ದ ಪೂಜಾರ ಅಂಟಿ ತಮ್ಮ ದಿಂದಾಗ ಸೊಸಿನ ಕರಕೊಂಡ ಬಂದರು…ನಮ್ಮಕಿನ್ನ, ಅಕಿ ಹೊಟ್ಟಿ ನೋಡಿದವರ
“ಏನ ಪ್ರೇರಣಾ….ಮತ್ತ ವಿಶೇಷ’ ಅಂದರು..
’ಏ…ಹಂಗೇನ ಇಲ್ಲರಿ ಮಾಮಿ, ಸುಮ್ಮನ ಹಂಗ ರೆಗ್ಯೂಲರ್ ಚೆಕ್ ಅಪ್ ಗೆ ಬಂದಿದ್ದೆ’ ಅಂತ ಅಕಿ ಅಂದ್ಲು…ಆಮ್ಯಾಲೆ ನಾನ ಅವರಿಗೆ ಸಮಾಧಾನದ್ಲೇ ಸವಕಾಶ ’ ಅಕಿದ ಎರಡನೇದ ಹಡದಾಗ ಉಳದ ಹೊಟ್ಟಿ ಇನ್ನೂ ಒಳಗ ಹೋಗಿಲ್ಲಾ..ಹಿಂಗಾಗಿ ever carrying ಕಂಡಂಗ ಕಾಣ್ತಾಳ..ಮತ್ತ ನೀವೇಲ್ಲರ ಇಡಿ ರೇಣುಕಾನಗರದವರಿಗೆ ಎಲ್ಲಾ ಹೇಳಿ-ಗೀಳಿರಿ ಅಂತ ತಿಳಿಸಿ ಹೇಳಿದೆ.
ನಮ್ಮ ಹಣೆಬರಹಕ್ಕ ಕೆಲವೊಂದ ಜಗಾದಾಗ ಯಾರು ನಮಗ ಪರಿಚಯ ಇದ್ದೋರ ಸಿಗ ಬಾರದಪಾ ಅಂತ ಅನ್ಕೊಂಡಿರ್ತೇವಿ ಅಲ್ಲೇ ಮುದ್ದಾಂ ಪರಿಚಯದವರ ಸಿಗ್ತಾರ…especially ಬಾರ್ ಒಳಗ ಅಂತು ನನಗ ಭಾಳ ಸರತೆ ಹಿಂಗ ಆಗೇದ….ಇರಲಿ ಟಾಪಿಕ್ ಡೈವರ್ಟ ಮಾಡೋದ ಬ್ಯಾಡಾ..
ಮುಂದ ನಾವ ಮತ್ತ ಡಾಕ್ಟರ ಕಡೆ ಹೋಗಿ ಅಲ್ಟ್ರಾ ಸೌಂಡ್ ಮಾಡಿಸ್ಗೊಂಡ್ವಿ.
ಅವರ ಅಲ್ಟ್ರಾ ಸೌಂಡ ಮಾಡಿ ’nothing to worry, nothing special… everything is normal’ ಅಂತ ಹೇಳಿ ಕಳಸಿದರು..ಅವರ ಮಾರಿ ನೋಡಿದರ ನನ್ನಕಿಂತಾ ಅವರ ಜಾಸ್ತಿ ರೀಲೀವ್ ಆದಂಗ ಅನಸಲಿಕತ್ತ…ಹಂಗೇನರ ಹೆಚ್ಚು-ಕಡಮಿ confirm ಆಗಿತ್ತಂದರ ನನ್ನಷ್ಟ ರಿಸ್ಪಾನ್ಸಿಬಲ್ ಆ ಲೇಡಿ ಡಾಕ್ಟರ ಆಗಿರ್ತಿದ್ದರು…ಯಾಕಂದರ ಆಪರೇಶನ್ ಮಾಡಿವರ ಅವರ ಅಲಾ…ಆತ ತೊಗೊ ಒಟ್ಟ ನನ್ನ ಹೆಂಡ್ತಿದ ಎರೆಡ ಸಿಜರಿನ್ ಮಾಡಿದ್ದ ಡಾಕ್ಟರ್ ಬಾಯಾಗ everything is normal ಅಂತ ಬಂತಲಾ…ಅಷ್ಟ ಸಾಕ ಅಂತ ನಾವ ಮನಿ ಹಾದಿ ಹಿಡದ್ವಿ…
…………ದಾರಿ ಒಳಗ ಬರಬೇಕಾರ ನನ್ನ ಹೆಂಡ್ತಿಗೆ ಸೇವಪುರಿ ಗಾಡಿ ಕಾಣತ…
’ರ್ರಿ…. ನಂಗ ಯಾಕೋ ಸೇವಪುರಿ ತಿನ್ನೊ ಹಂಗ ಆಗೇದ’ ಅಂದ್ಲು…
’ಏ…ದಣೆಯಿನ ಡಾಕ್ಟರ ಎಲ್ಲಾ ನಾರ್ಮಲ್ ಅಂತ ಹೇಳ್ಯಾರ ನೀ ಸುಳ್ಳ-ಸುಳ್ಳ ಸೇವಪುರಿ ತಿನ್ನೊಹಂಗ ಆಗೇದ, ಪಾವಭಾಜಿ ತಿನ್ನೊಹಂಗ ಆಗೇದ ಅಂತ ನಾಟಕ ಮಾಡಬ್ಯಾಡಾ…ಮನ್ಯಾಗ ನಮ್ಮವ್ವಾ ದೀಪಾವಳಿ ಫರಾಳ ಮಾಡ್ಯಾಳ ಅದನ್ಯಾರ ತಿನ್ನೋರ’ ಅಂತ ಜೊರ ಮಾಡಿ ಮನಿಗೆ ಕರಕೊಂಡ ಬಂದೆ….
ಅನ್ನಂಗ ನಿಮಗೇಲ್ಲಾ ದೀಪಾವಳಿ ಹಬ್ಬದ ಶುಭಾಶಯ….ನೋಡ್ರಿ ಹಂಗ ಯಾರರ ದೀಪಾವಳಿ ಫರಾಳಕ್ಕ ಕರಿಯೋರಿದ್ದರ ಕರಿರಿ…ನನಗ್ಯಾಕೋ ಮಂದಿ ಮನಿ ಫರಾಳ ತಿನ್ನೊ ಹಂಗ ಆಗೇದ ಅದಕ್ಕ ಭಿಡೆ ಬಿಟ್ಟ ಕೇಳಿದೆ ಇಷ್ಟ….
once again very happy deepavali to you and your family..
Nice 👍😊. Happy Dipavali