ಮೊನ್ನೆ ಸಂಜಿ ಮುಂದ ಒಮ್ಮಿಂದೊಮ್ಮಿಲೇ ನನ್ನ ಹೆಂಡತಿ
’ರ್ರಿ..ಅನ್ನಂಗ ನಿಂಬದ h index ಎಷ್ಟ ಅದ?” ಅಂತ ಕೇಳಿದ್ಲು.
ನಾ ಒಮ್ಮಿಕ್ಕಲೇ ಗಾಬರಿ ಆದೆ, ಒಂದು ನಾ ಈ h index ಬಗ್ಗೆ ಕೇಳಿದ್ದಿಲ್ಲಾ, ಮ್ಯಾಲೆ ನಂಗ ಹಿಂಗ ಗಂಡಂದರ ಪರಫಾರ್ಮನ್ಸ ಮೇಜರ್ ಮಾಡಲಿಕ್ಕೆ ಇಂಡೆಕ್ಸ ಅದ ಅಂತನೂ ಗೊತ್ತಿರಲಿಲ್ಲಾ. ಅಲ್ಲಾ h ಇಂಡೆಕ್ಸ ಅಂದಕೂಡ್ಲೆ ನಂಗ ಇದ related to husband , ಗಂಡಾ ಅನ್ನೋ ಪ್ರಾಣಿ ಸಂಸಾರದ ಸುಳಿ ಒಳಗ ಸಿಕ್ಕ ಎಷ್ಟ ಹುಚ್ಚ ಆಗ್ಯಾನ ಅಂತ ಮೇಜರ್ ಮಾಡಲಿಕ್ಕೆ ಇರೋ ಇಂಡೆಕ್ಸ ಇರಬೇಕ ಅಂತ ಸಹಜವಾಗಿ ಅನಸ್ತ.
ಇನ್ನ ನಂಗ ಗೊತ್ತಿಲ್ಲಾ ಅಂತ ಹೇಳಿ ಅಕಿ ಕಡೆ ಯಾಕ ಅಸಂಯ್ಯ ಮಾಡಿಸ್ಗೊಳೊದ ಅಂತ ದೊಡ್ದಿಸ್ತನಾ ಮಾಡಿ ನಾ
’ನನ್ನ h index ತೊಗೊಂಡ ನೀ ಏನ ಮಾಡ್ತಿ, ಇರಬೇಕ ಒಂದ ಎಪ್ಪತ್ತ ಎಂಬತ್ತ ’ ಅಂತ ಅಂದ ಬಿಟ್ಟೆ.
‘ರ್ರಿ…ಏನೇನರ ಹುಚ್ಚುಚಾಕಾರ ಮಾತಾಡ್ತೀರಲಾ, ಐನಸ್ಟೀನಂದ 44 ಇತ್ತಂತ, ನೀವೇನ ಅವನಕಿಂತಾ ಶಾಣ್ಯಾರಿನ…’ ಅಂತ ಅಂದ್ಲು. ನಂಗ ಇಕಿ ಏನ ಇವತ್ತ ಐನಸ್ಟೀನ್ ಲೇವೆಲ್ ಮಾತಾಡ್ಲಿಕತ್ತಳಲಾ ಎಲ್ಲರ ಇಕಿ ಮೈಯಾಗ ಯಾವದರ ವಿಜ್ಞಾನಿ ಬಂದಾನೇನ ಅಂತ ಅನಸಲಿಕತ್ತ. ಅಲ್ಲಾ ಹಂಗ ಇಕಿಗೆ pH valueನ ಟಫ್ ಆಗ್ತದ ಅಂತ ಕಲಿಬೇಕಾರ ಕಾಮರ್ಸ ತೊಗೊಂಡೊಕಿ ಇವತ್ತ ಹಿಂಗ್ಯಾಕ ಸೈಂಟಿಫಿಕ್ ಆಗಿ ಮಾತಾಡ್ಲಿಕತ್ತಾಳ ಅಂತ ತಲಿ ಕೆಟ್ಟ
’ಏ…ಎಲ್ಲಿ h index ತಂದ ತಲಿ ತಿಂತಿಲೇ…ನಿಂಗ್ಯಾರ ಹಿಂತಾವೇಲ್ಲಾ ಹೇಳಿ ಕೊಟ್ಟರು’ ಅಂತ ಬೈದ ಮ್ಯಾಲೆ ಹೇಳಿದ್ಲು ಅಕಿ ಕಜೀನ ಅಮೇರಿಕಾದಿಂದ ಫೋನ ಮಾಡಿ ತನ್ನ ಗಂಡನ ಬಗ್ಗೆ ಬಕೇಟಗಟ್ಲೆ ಹೊಗಳಿ ಲಾಸ್ಟಿಗೆ
’you know my husband’s h index is 27…its highest in his company’ ಅಂತ ಹೇಳಿದ್ಲಂತ.
ಇನ್ನ ಅಕಿ ಮಾತ ಕೇಳಿ ಇಕಿ ಎಲ್ಲಾ ಗಂಡಂದರಿಗೂ h index ಇರ್ತದ ಅಂತ ತಿಳ್ಕೊಂಡ ನನ್ನ ಕೇಳಿದ್ಲು.
ಅಲ್ಲಾ ಹಿಂತಾ ಹೆಂಡಂದರ ಇದ್ದರ ಎಲ್ಲಾ ಗಂಡಂದರಿಗೂ ಹುಚ್ಚ ಹಿಡದ ಅದಕ್ಕೊಂದ ಇಂಡೆಕ್ಸ ಬರೋದ ಅಂತೂ ಗ್ಯಾರಂಟಿ ಬಿಡ್ರಿ.
ನಾ ಆಮ್ಯಾಲೆ ತಲಿಕೆಡಸಿಕೊಂಡ ಈ ಸುಡಗಾಡ h index ಅಂದರೇನೂ ಅಂತ google search ಮಾಡಿದ ಮ್ಯಾಲೆ ಗೊತ್ತಾತ ಇದ ರಿಸರ್ಚ್ ಮಾಡೋ ಸೈಂಟಿಸ್ಟ ಕಮ್ ಗಂಡಂದರಿಗಿಷ್ಟ ಸಂಬಂಧಪಟ್ಟಿದ್ದ ಅಂತ.
ಒಬ್ಬ ಸೈಂಟಿಸ್ಟ ರಿಸರ್ಚ ಮಾಡಿ ಎಷ್ಟ ಪೇಪರ ಪ್ರೆಸೆಂಟ್ ಮಾಡ್ಯಾನ ಮತ್ತ ಅದರಾಗ ಅವನ ಆ ರಿಸರ್ಚ ಪೇಪರ ಎಷ್ಟ ಮಂದಿ ಮುಂದ ತಮ್ಮ ರಿಸರ್ಚ ಒಳಗ ಎಷ್ಟ ಸಲಾ ರೆಫರ್ ಮಾಡ್ಯಾರ ಅನ್ನೊದರ ಮ್ಯಾಲೆ ಆ ವಿಜ್ಞಾನಿದ h index calculate ಮಾಡ್ತಾರ. ಆಡ ಭಾಷೆ ಒಳಗ ಹೇಳ್ಬೇಕಂದರ ರಿಸರ್ಚ ಮಾಡೋರ ಶಾಣ್ಯಾತನಾ, ಅವರ ಬರದ ರಿಸರ್ಚ ಜರ್ನಲ್ ಎಷ್ಟ ಫೇಮಸ್ ಆಗೇದ ಅನ್ನೋದ ಗೊತ್ತ ಆಗೋದ ಈ ಎಚ್. ಇಂಡೆಕ್ಸನಿಂದ ಅನ್ನರಿ. ಈ ಇಂಡೆಕ್ಸ ಕಂಡ ಹಿಡದ ವಿಜ್ಞಾನಿ J.E. Hirsch ಹಿಂಗಾಗಿ ಇದಕ್ಕ Hirsch index or Hirsch number ಅಂತನೂ ಕರಿತಾರ. ನಾ ನೋಡಿದರ h for husband ಇಲ್ಲಾ h for ಹುಚ್ಚಾ ಇರಬೇಕ ಅಂತ ತಿಳ್ಕೊಂಡಿದ್ದೆ.
ಇನ್ನ ಇಕಿ ಕಸೀನ ಏನ ಅಮೇರಿಕಾದಿಂದ ಫೋನ ಮಾಡಿದ್ಲಲಾ ಅಕಿ ಗಂಡ ಒಂದ ಕಂಪನಿ ಒಳಗ ಸೀನಿಯರ್ ಸೈಂಟಿಸ್ಟ ಇದ್ದಾನ. ಅಂವಾ ರಿಸರ್ಚ ಪೇಪರ್ಸ ಪಬ್ಲಿಶ್ ಮಾಡ್ಯಾನ ಹಿಂಗಾಗಿ ಅವಂದ h index ಅದ. ಆ ಮಗಾ ಏನೋ ದೊಡ್ಡ ಸಾಧನೆ ಮಾಡೇನಿ ಅಂತ ದೊಡ್ಡಿಸ್ತನಾ ಮಾಡ್ಲಿಕ್ಕೆ ತನ್ನ ಹೆಂಡ್ತಿ ಮುಂದ ಹೇಳ್ಯಾನ. ಇನ್ನ ಅಕಿ ಎಷ್ಟ ಅಂದರು typical indian ಹೆಂಡ್ತಿ, ಹಿಂಗಾಗಿ ತನ್ನ ಗಂಡನ ಎಚ್. ಇಂಡೆಕ್ಸ ಇಷ್ಟ ಅಂತ ಅಖಂಡ ಭಾರತಕ್ಕೇಲ್ಲಾ ಫೋನ ಮಾಡಿ ಹೇಳ್ಯಾಳ. ಅಕಿ ಮಾತ ಕೇಳಿ ನಮ್ಮ ಮನಿ ಸೈಂಟಿಸ್ಟ ಇದ ಜಗತ್ತಿನಾಗ ಎಲ್ಲಾ ಗಂಡಂದರಿಗೂ ಇರ್ತದ ಅಂತ ತಿಳ್ಕೊಂಡ ನನ್ನ h index ಎಷ್ಟು ಅಂತ ಕೇಳಿದ್ಲು ಇಷ್ಟ.
ನಂಗ ಅನಸ್ತ ಆ ನನ್ನ ಹೆಂಡ್ತಿ ಕಜೀನನ ಗಂಡಂದ ರಿಸರ್ಚ ಎಚ್.ಇಂಡೆಕ್ಸಕಿಂತಾ ಅವನ ಹೆಂಡ್ತಿ ಏನ ಇಡಿ ಇಂಡಿಯಾದಾಗಿನ ಮಂದಿಗೆ ಫೋನ ಮಾಡಿ ಹೇಳಿದ್ಲಲಾ ಅದರ ಎಚ್. ಇಂಡೆಕ್ಸ ಜಾಸ್ತಿ ಆಗಿರ್ತದ ಅಂತ. ಅಲ್ಲಾ ಹೆಂಡಂದರ ಬಾಯಾಗ ಮಾತ ಎಲ್ಲೆ ನಿಲ್ತಾವ…ಇನ್ನ ನೋಡ್ರಿ, ನಮ್ಮ ಬಳಗದವರೇಲ್ಲಾ ಅಕಿ ಗಂಡಂದ ಇಷ್ಟ h- index ಅಂತ ಒಬ್ಬೊರಿಗೊಬ್ಬರ ಹೇಳಿ ಹೇಳಿ ಅಕಿದ citation ( ಉಲ್ಲೇಖ ) ಜಾಸ್ತಿ ಆಗಲಿಲ್ಲಾಂದರ ಹೇಳ್ರಿ ನನಗ.
ನಾ ಆಮ್ಯಾಲೆ ಸಮಾಧಾನಲೇ ನನ್ನ ಹೆಂಡ್ತಿಗೆ h index ಅಂದರ ನಾರ್ಮಲಿ ನಾರ್ಮಲ್ ಗಂಡಂದರಿಗೆ ಇರಂಗಿಲ್ಲಾ ಹಿಂಗಾಗಿ ನ್ಯಾಚುರಲಿ ನಂಗ ಇಲ್ಲಾ ಅಂತ ತಲಿ ಒಡ್ಕೊಂಡ ಹೇಳಿದರೂ ಅಕಿಗೇನ ತಿಳಿಲಿಲ್ಲಾ. ನಾ ಹೇಳಿದ್ದಿಲ್ಲಾ ಹಿಂತಾವೇಲ್ಲಾ ಅಕಿಗೆ ಹೇಳಿದರ ಉಣಕಲ್ ಕೇರಿ ಒಳಗ ಹುಣಸಿ ಹಣ್ಣ ತೊಳದಂಗ ಅಂತ. ಏನಿಲ್ಲದ ಅಕಿದ pH valueನ ಭಾಳ ಕಡಮಿ ಹಂತಾದರಾಗ ಇದೇಲ್ಲ ತಿಳಿಬೇಕ.
ಇನ್ನ ಅಕಿಗೆ ತಿಳಿಯೊ ಹಂಗ ಹೇಳಲಿಲ್ಲಾಂದರ ಅಕಿ ನನ್ನ ತಲಿ ತಿಂದ ಖರೇನ ಹುಚ್ಚ ಹಿಡಸ್ತಾಳಂತ ನಾ ಅಕಿಗೆ ಬಾಜುಕ ಕೂಡಿಸ್ಗೊಂಡ
’ನೋಡ ಈಗ ನೀ ವಾಟ್ಸಪ್ ಒಳಗ ಒಂದ ಏನರ ಹೊಸಾ ಸುದ್ದಿ ಬರದ ಊರ ಮಂದಿಗೆ ಮೆಸಜ್ ಕಳಸ್ತಿ. ಅದನ್ನ ಊರ ಮಂದಿ ಮತ್ತ ನೂರ ಮಂದಿಗೆ ಫಾರವರ್ಡ ಮಾಡ್ತಾರ. ಹಿಂಗ ಅದ ಒಂದ ಮೋಬೈಲನಿಂದ ಮತ್ತೊಂದ ಮೋಬೈಲಗೆ ವೈರಲ್ ಆಗಕೋತ ಹೋಗ್ತದ…ಇನ್ನ ನೀ ಬರದ ಮೆಸೆಜ್ ಕೆಳಗ ನೀ ಅಂತೂ ಅಗದಿ ನೀನ ಕಂಡ ಹಿಡದವರಗತೆ ಪ್ರೇರಣಾ ಪ್ರಶಾಂತ ಆಡೂರ ಅಂತ ಬರದ ಕಳಿಸಿರ್ತಿ…so… ಅದ ಎಲ್ಲಾ ಕಡೆ ವೈರಲ್ ಆಗಿ ನಿನ್ನ ಹೆಸರ ವೈರಲ್ ಆಗ್ತದಲಾ. ಹಂಗ ಯಾರರ ರಿಸರ್ಚ ಮಾಡಿದ್ದ ಪೇಪರ ಮತ್ತೊಬ್ಬರ ರೆಫರ್ ಮಾಡಿ ತಮ್ಮ ರಿಸರ್ಚ ಪೇಪರ ಒಳಗ ಅವರ ಹೆಸರ ಉಲ್ಲೇಖ ಮಾಡಿದರ ಅವರ h index ಜಾಸ್ತಿ ಆಗಕೋತ ಹೋಗ್ತದ’ ಅಂತ ಗುದ್ದಾಡಿ ಆಡ ಭಾಷೆ ಒಳಗ ನಮ್ಮಕಿಗೆ ವಿಜ್ಞಾನದ h index ತಿಳಿಸಿ ಹೇಳಿದೆ.
ಅಕಿ ನಾ ಹೇಳಿದ್ದಕ್ಕೇಲ್ಲಾ ಎಲ್ಲಾ ತಿಳದವರಗತೆ ಗೋಣ ಹಾಕಿ ಕಡಿಕೆ
“ಅಲ್ಲರಿ…ನಾ ವಾಟ್ಸಪ್ ಒಳಗ ಎಷ್ಟ ರಿಸರ್ಚ ಮಾಡಿ ಮಾಡಿ ವಿಷಯ ಬರದ ಕಳಸ್ತೇನಿ…ಹಂಗ ಅದಕ್ಕೂ ಏನರ h index ಕೊಡ್ತಿದ್ದರ ನನ್ನ ಇಂಡೆಕ್ಸ ಐನಸ್ಟಿನ್ ಏನ ನ್ಯೂಟನ್ ಕಿಂತಾ ಜಾಸ್ತಿ ಇರ್ತಿತ್ತ” ಅಂತ ಅಂದ ಬಿಟ್ಟಳು.
ಹಂಗ ನಂಗ ಅಕಿ ಹೇಳಿದ್ದ ಖರೇನ ಅನಸ್ತ. ಅಲ್ಲಾ ಅಕಿ ಹೆಂತಿಂತಾ ಅವಿಷ್ಕಾರ ಮಾಡಿ ವಾಟ್ಸಪ್ ಮಾಡ್ತಾಳ ಅಂತ ತಿಳ್ಕೊಂಡಿರಿ ನೀವು. ಓದಿದರ ಗಾಬರಿ ಆಗ್ತೀರಿ ಆದರೂ ಒಂದ ಸಲಾ ಓದಿ ಬಿಡ್ರಿ, ನಿಮಗೂ ಖರೆ ಅನಿಸಿ ನೀವು ಮುಂದ ಮಂದಿಗೆ ಫಾರವರ್ಡ್ ಮಾಡಬಹುದು
’ಎರಡ-ಮೂರ ಸರತೆ ಚಹಾ ಮಳ್ಳಿಸಿದ್ದ ಚಹಾ ಪುಡಿ ಕರಿಬೇವ ಗಿಡಕ್ಕ ಹಾಕಿದರ ಅದು ಛಲೋ ಚಿಗಿತದ’
’ಡೇಟ ಬಾರ ಆಗಿದ್ದ ಮೆಡಿಸಿನ್ಸ ಹೊರಗ ಚಲ್ಲಲಾರದ ಗುಲಾಬಿ ಗಿಡಕ್ಕ ಹಾಕಿದರ ಹೂ ಜಾಸ್ತಿ ಬಿಡ್ತಾವ.
’ಹಂಗ ಡೇಟ್ ಬಾರ್ ಆಗಿದ್ದ ಗುಡ್ ನೈಟ ರಿಫಿಲ್ ಉಪಯೋಗ ಮಾಡಿದರ ಗುಂಗಾಡ ಜಾಸ್ತಿ ಆಗ್ತಾವ’
’ಕಾರ್ನ್ ಹಾಕಿ ದೊಸಿ ಮಾಡಿದರ ದೋಸಿ ಹೊತ್ತಂಗಿಲ್ಲಾ’.
ಹಿಂತಾ ನೂರಾ ಎಂಟ ರಿಸರ್ಚ ಮಾಡಿ ವಾಟ್ಸಪನಾಗ ಕಳಸ್ತಿರ್ತಾಳ.
ಅಲ್ಲಾ ಮತ್ತ ನೀವೆಲ್ಲರ ’ಇವೇಲ್ಲಾ ನಿನ್ನ ಹೆಂಡತಿ ಕಂಡ ಹಿಡದದ್ದಲ್ಲಾ, ನಮಗ ಮೊದ್ಲ ಗೊತ್ತಿತ್ತ’ ಅಂತ ನನ್ನ ಹೆಂಡತಿ ಮ್ಯಾಲೆ plagiarism ಕೃತಿಚೌರ್ಯದ ಕೇಸ ಹಾಕಿ ಗಿಕಿರಿ ಮತ್ತ…… ನಾ ಹಂಗ ಸುಮ್ಮನ ಹೇಳಿದೆ.
ಇವತ್ತ ಹಿಂಗ ವಾಟ್ಸಪ್ ಒಳಗ ಜನಾ ಯಾರೊ ಬರದದ್ದನ್ನ ಹುಚ್ಚುಚಾಕಾರ ಫಾರವಾರ್ಡ ಮಾಡ್ತಿರ್ತಾರಲಾ ಹಂಗ ಅದಕ್ಕೂ ಏನರ ಒಂದ ಇಂಡೆಕ್ಸ ಇದ್ದರ ಹೆಂಗ ಅಂತ ಒಂದ ಸಲಾ ವಿಚಾರ ಮಾಡ್ರಿ.
ನೋಡ್ರಿ ಹಂಗೇನರ ನಿಮಗ ಇವತ್ತಿನ ಪ್ರಹಸನ ಲೈಕ ಆದರ ನಾಲ್ಕ ಮಂದಿಗೆ ಉಲ್ಲೇಖ ( citation) ಮಾಡಿ ನಂದೊಂದ ಚೂರ h index ಜಾಸ್ತಿ ಮಾಡಿ ಪುಣ್ಯಾ ಕಟಗೋರಿ.
ನಂದ h index 7 (ಖರೇಗೂ).
You explained a special term to common people by wrapping it in a comedy coating.