’ಹಳೇ ಕೆಬ್ಬಣಾ,ಮೊಡ್ಕಾ ಡಬ್ಬಿ, ವಡ್ಕಾ ಪ್ಲಾಸ್ಟಿಕ ಬಕೇಟ ಮಾರಾಕ ಕೊಡೊ…….ಹರಕಾ ಚಪ್ಪಲ್, ರದ್ದಿ ಪೇಪರ, ಖಾಲಿ ಬಾಟಲಿ ಮಾರಕ್ ಕೊಡೆ………’ಅಂತ ಒದರಕೋತ ಒಂದ ದುಗುಸೊ ಗಾಡಿ ತೊಗಂಡ ಓಣಿ ತುಂಬಾ ಅಡ್ಯಾಡೊರನ ನೋಡಿರಬೇಕಲಾ? ಈಗ ಒಂದ ಸ್ವಲ್ಪ ಕಡಿಮೆ ಆಗೇದ, ಇಲ್ಲಾಂದ್ರ ಮೊದ್ಲ ವಾರಕ್ಕ ಒಂದ ಸರತೆ ನಮ್ಮ ಓಣ್ಯಾಗ ಬಂದ ಬರತಿದ್ದರು. ಹಂಗ ಬೆಂಗಳೂರ ಮಂದಿಗೆ ಇದ ಗೊತ್ತಿರಲಿಕ್ಕಿಲ್ಲಾ, ಆದ್ರ ಹುಬ್ಬಳ್ಳಿ-ಧಾರವಾಡದಾಗ ಹುಟ್ಟಿ ಬೆಳದ ಇಲ್ಲೆ ಉಳದರ ಸ್ಕ್ರ್ಯಾಪ್ ಆಗತೇವಿ ಅಂತ ಇವತ್ತ ಬೆಂಗಳೊರಿಗೆ ಹೋಗಿ ಸೆಟ್ಲ ಆಗಿ, ಟ್ರಾಫಿಕನಾಗ ಲೈಫ್ ಸ್ಕ್ರ್ಯಾಪ್ ಮಾಡ್ಕೊಂಡವರಿಗೆ ನೆನೆಪ ಇದ್ರು ಇರಬಹುದು. ಮನ್ಯಾಗಿನ ಹಳೇ ಕೆಬ್ಬಣದ ಸಾಮಾನು, ಮೊಡ್ಕಾ ಡಬ್ಬಿ, ವಡದದ ಪ್ಲ್ಯಾಸ್ಟಿಕ್ ಬಕೇಟ್, ಹಾಲಿನ ಪಾಕೇಟ, ಹಲ್ಲತಿಕ್ಕೋ ಬ್ರಶ್, ಬಚ್ಚಲಾ ತಿಕ್ಕೋ ಬ್ರಶ್, ಖಾಲಿ ಟೂಥ ಪೇಸ್ಟನ ಟ್ಯೂಬ್, ಹರಕ ಪ್ಲಾಸ್ಟಿಕ್ ಚಪ್ಪಲ್, ರದ್ದಿ ಪೇಪರ್, ಖಾಲಿ ಬಾಟಲಿ ಒಂದ -ಎರಡ ಎಲ್ಲಾ ಸ್ಕ್ರ್ಯಾಪ್ ಐಟೆಮ್ ಮನಿ ಬಾಗಲಕ್ಕ ಬಂದ ತೊಗೊಂಡ ಹೋಗ್ತಿದ್ದರು.
ನಮ್ಮವ್ವಗೂ ಈ ಹಳೆ ಸಾಮಾನ ತೊಗೊಳೊರಿಗೂ ಏನೋ ಹೋದ ಜನ್ಮದ ಸಂಬಂಧ. ಹಿಂಗಾಗಿ ನಮ್ಮವ್ವ ಪಾಪ ಅವರ ಬಂದಾಗೊಮ್ಮೆ ಹಂಗ ಖಾಲಿ ಕೈಲೆ ಒಟ್ಟ ಕಳಸ್ತಿದ್ದಿಲ್ಲಾ. ಮನ್ಯಾಗಿಂದ ಏನರ ಹಳೇ ಸಾಮಾನ ಕೊಟ್ಟ ಅವರ ಕಡೆ ಹೊಸಾ ಸಾಮಾನ ತೊಗೊಳೊದು, ಕಡಿಕೆ ಹಳೆ ಸಾಮಾನ ಇದ್ದಿದ್ದಿಲ್ಲಾಂದ್ರ ಇದ್ದದ್ದ ಬಳಸೊ ಸಾಮಾನನ ಭಾಳ ಹಳೇವ ಆಗ್ಯಾವ ಅಂತ ಕೊಟ್ಟ ಕಳಸಿಬಿಡ್ತಿದ್ಲು. ಹಂಗಂತ ನಮ್ಮವ್ವಾ ‘ಭಾಳ ಶಾಣ್ಯಾಕಿ’, ಮನ್ಯಾಗಿನ ಬ್ಯಾಡಗಿದ್ದ ಸಾಮಾನೆಲ್ಲಾ ಡಿಸ್ಪೋಸ್ ಮಾಡಿ ಮನಿ ಅಗದಿ ಸ್ವಚ್ಛ ಇಡತಾಳ ಅಂತ ತಿಳ್ಕೊಳ್ಳಿಕ್ಕೆ ಹೋಗ ಬ್ಯಾಡರಿ. ನಮ್ಮ ಮನ್ಯಾಗ ನಾಲ್ಕ ಮಂದಿ ಉದ್ದ ಕಾಲ ಚಾಚಿ ಮಲ್ಕೊಳ್ಳಿಕ್ಕೆ ಜಾಗಾ ಇಲ್ಲದಿದ್ದರು ಅಡ್ಡಿಯಿಲ್ಲಾ ಮನಿ ತುಂಬ ಚೀಲ ಗಟ್ಟಲೆ ಹಾಲಿಂದ ಪ್ಲಾಸ್ಟಿಕ್ ಪಾಕೇಟ, ಹಳೇ ಚಪ್ಪಲ್, ಒಡದದ ಬಕೇಟ, ಮುರಕಾ ಮುಚ್ಚು ಕಾಯಿ, ಸೌಟು -ಚಮಚೆ, ಖಾಲಿ ಬಾಟಲಿ ಒಂದ ಎರಡ ಅಕಿ ಎಲ್ಲಾ ಸಾಮಾನ ಕೂಡಿಸಿ ಕೂಡಿಸಿ ಮನ್ಯಾಗ ಮೂಲ್ಯಾಗ ಇಲ್ಲಾ ಪಲ್ಲಂಗ ಬುಡಕ ಚೀಲಾ ತುಂಬಿ-ತುಂಬಿ ಇಡತಿದ್ದಳು. ‘ಬಾಕಿ ಎಲ್ಲಾ ಒಕೆ ಆದರೆ ಖಾಲಿ ಬಾಟಲಿ ಯಾಕೆ ?’ ಅಂತ ಮತ್ತ ನೀವೇಲ್ಲರ ನಮ್ಮಪ್ಪನ ಬಗ್ಗೆ ತಪ್ಪ ತಿಳ್ಕೋಳ್ಳಿಕ್ಕೆ ಹೋಗಬ್ಯಾಡರಿ, ನಮ್ಮವ್ವ ಕೂಡಿಸಿ ಇಡತಿದ್ದ ಬಾಟಲಿ ಎಲ್ಲಾ ನನ್ನವು, ಅಂದರ ನನ್ನ ಔಷಧದ ಬಾಟಲಿಗಳು. ನಾ ಸಣ್ಣಾಂವ ಇದ್ದಾಗ ಭಾಳ ನಾಜೂಕ ಇದ್ದನೆಂತ, ಹಿಂಗಾಗಿ ನಂದಿನಿ ಹಾಲಕಿಂತಾ ವುಡವರ್ಡ್ಸ್ ಗ್ರೈಪ್ ವಾಟರ್ ಜಾಸ್ತಿ ಕುಡಿತಿದ್ದೆ, ಆವಾಗ ನಾ ಕ್ವಾಟರ್ ಬಾಟಲಿ ಗಟ್ಟಲೆ ಗ್ರೈಪ್ ವಾಟರ್,ಔಷಧ ಕುಡದದ್ದಕ್ಕ ಇವತ್ತ ಇನ್ನೂ ಇದ್ದೇನಿ ಅಂತ ನಮ್ಮವ್ವ ಅಂತಿರ್ತಾಳ. ಹಿಂಗಾಗಿ ಈ ಕ್ವಾಟರ್ ಬಾಟಲಿ ೠಣಾ ನಾ ಎಂದೂ ಮರಿಲಿಕ್ಕೆ ಆಗಾಂಗಿಲ್ಲಾ.
ನಮ್ಮವ್ವ ಹಿಂಗ ಸಾಮಾನ ಕೂಡಿಸಿ ಇಡೋದ ನೋಡಿ-ನೋಡಿ ನಮ್ಮಪ್ಪಗ ಬಿ.ಪಿ ಏರತಿತ್ತ. ಮೊದ್ಲ ಮನ್ಯಾಗ ಅಂವಾ ಎರಡ ಬಿಟ್ಟ ಮೂರನೇದ ಹಡದರ ಮಲಗಸಲಿಕ್ಕೆ ಜಾಗ ಇದ್ದಿದ್ದಿಲ್ಲಾ, ಇಕಿ ನೋಡಿದರ ಮನಿತುಂಬ ಸುಟ್ಟು ಸುಡಗಾಡ ಸಾಮಾನದ್ದ ಚೀಲ ತುಂಬಿ ಇಡೋಕಿ. ಅಂವಾ ತಲಿಕೆಟ್ಟ
“ಲೇ, ನಿಮ್ಮವ್ವಾ, ಒಂದ ದೊಡ್ಡ ‘ಪ್ಲಾಸ್ಟಿಕ್ ಟಬ’ ಬರತದ ಅಂದ್ರ ಕಟಗೊಂಡ ಗಂಡನ್ನು ಭಾಳ ಹಳೇದ ಅಂತ ಕೊಡೋ ಪೈಕಿನ, ಅವನೌನ ಸುಮ್ಮನ ನಾನ ಕೈಲೆ ರೊಕ್ಕಾ ಕೊಟ್ಟ ಆ ಹಳೆ ಸಾಮಾನ ಜೊತಿಗೆ ನಿಮ್ಮವ್ವನ್ನೂ ಕೊಟ್ಟ ಬಿಡಬೇಕು,” ಅಂತ ಅಂತಿದ್ದಾ. ನಾನ
“ಹೋಗಲಿ ಬಿಡಪಾ, ಮನ್ಯಾಗ ಇನ್ನು ತಂಗಿ ಸಣ್ಣಕಿದ್ದಾಳ, ಅಡಗಿ ಮಾಡಿ ಹಾಕೋರ ಯಾರು? ನಿಂಗ ಈ ವಯಸ್ಸನಾಗ ಯಾರು ಕನ್ಯಾನೂ ಕೊಡಂಗಿಲ್ಲಾ, ನಂದಿನ್ನೂ ಲಗ್ನದ ವಯಸ್ಸಾಗಿಲ್ಲಾ” ಅಂತ ಸಮಾಧಾನ ಮಾಡತಿದ್ದೆ. ಇನ್ನ ನಾವ ಏನರ ಸಣ್ಣವರಿದ್ದಾಗ ಹಟಾ ಮಾಡಿದರ ನಮ್ಮನ್ನು ಆ ಮೊಡ್ಕಾ ಒಯ್ಯೋರ ಕೈಯಾಗ ಕೊಡತೇನಿ ಅಂತ ಬ್ಯಾರೆ ಹೆದರಸಿತಿದ್ಲು. ಹಂಗ ಇಕಿ ಖರೇನ ಕೊಟ್ಟ ಬಿಡೊ ಪೈಕಿ ಅಂತ ಪಾಪ ನಮ್ಮ ತಂಗಿ “ಹಳೇ ಕೆಬ್ಬಣಾ,ಮೊಡ್ಕಾ ಡಬ್ಬಿ….” ಅಂತ ಒಣ್ಯಾಗ ಒದರಿದ್ದ ಕೇಳಿದಾಗ ಒಮ್ಮೆ ಗಪ್ಪನ್ ಬಾಯಿ ಮುಚ್ಚಿ ನಮ್ಮವ್ವ ಹೇಳಿದ್ದ ಮಾತ ಎಲ್ಲಾ ಕೇಳ್ತಿದ್ದಳು. ಹಂಗ ಇಕಿ ಆ ಸಾಮಾನ ಕೊಟ್ಟ ಸುಮ್ಮನ ಬರೆ ರೊಕ್ಕಾನರ ತೊಗತಿದ್ಲ, ಇಲ್ಲಾ. ಅದರ ಬದ್ಲಿ ಮತ್ತ ಪ್ಲಾಸ್ಟಿಕ್ ಸಾಮಾನ ತೊಗೊಳಿಕೆ. ಕೊಡಾ, ತಂಬಿಗೆ, ಬಕೇಟ, ಮನ್ಯಾಗ ಇರಲಿ ಬಿಡ್ಲಿ, ಪುಗಶೆಟ್ಟೆ ಬರತದ ಯಾಕ ಬಿಡಬೇಕಂತ ತೊಗೊಳ್ಳೊಕಿ. ನಮ್ಮ ಮನಿ ಮಂದಿಗೆ ತಲಿಗೆ ಒಂದೊಂದ ತಂಬಗಿ ತೊಗೊಂಡ ಹೋಗೊ ಅಷ್ಟ ತಂಬಗಿ ಇದ್ವು ಮನ್ಯಾಗ. ಅದು ನಾಲ್ಕ ಮನಿ ನಡಕ ಇರೋ ಒಂದ ಸಾರ್ವಜನಿಕ ಸಂಡಾಸಿಗೆ.
ಇಷ್ಟ ಅಲ್ಲದ ಹಳೆ ಅರಬಿನು ಕೂಡಿಸಿ ಇಟ್ಟ-ಇಟ್ಟ ಕಡಿಕೆ ಅವನೆಲ್ಲಾ ಕೊಟ್ಟ ಸ್ಟೀಲಿನ ಡಬ್ಬಿ , ಪರಾತ, ಕೊಳಗಾ, ತಾಟ ತೊಗೊಳೊಕಿ, ಆ ಸಾಮಾನ ಮನ್ಯಾಗ ಮೊದ್ಲ ಎಷ್ಟ ತುಂಬಿದ್ದರು ಸೈ.
“ಅಲ್ಲವಾ, ಮನ್ಯಾಗ ನಾಲ್ಕ ಮಂದಿ ಇದ್ದೇವಿ, ಎಂಟ ತಾಟ ಅವ, ಸಾಕ ತೋಗೊ ಇನ್ನ” ಅಂತ ಅಂದ್ರ
“ನೀ ಸುಮ್ಮನಿರ್, ನಿನಗೇನ ತಿಳಿತದ, ನಾಳೆ ನಿಮ್ಮ ತಂಗಿ ಲಗ್ನಕ್ಕ ರುಕ್ಕೋತ ದಿವಸ ಭೂಮದ ಭಾಂಡೆ ಅಂತ ಇಡಲಿಕ್ಕೆ ಬರತಾವ” ಅನ್ನೊಕಿ. ಹೋಗಲಿ ಹಳೇ ಅರಬಿನರ ಖಾಲಿ ಆದವಲಾ ಅಂದ ಅನ್ಕೊಂಡರ, ಅಕಿ ಬರೇ ಗಂಡಸರ ಅರಬಿ ಇಷ್ಟ ಕೊಡೊಕಿ. ಅದರಾಗ
“ನಿಮ್ಮಪ್ಪನ ಪ್ಯಾಂಟ್ ಶರ್ಟ ಕೊಟ್ಟರ ಛಲೋ ಸ್ಟೀಲಿಂದ ಡಬ್ಬಿನ ಕೊಡ್ತಾರ, ನನ್ನ ಸೀರಿಗೆ ಏನ ಸುಡಗಾಡು ಬರಂಗಿಲ್ಲ” ಅಂತ ಬರೆ ನಮ್ಮಪ್ಪನ ಪ್ಯಾಂಟ- ಶರ್ಟ ಕೊಡತಿದ್ಲು. ನಾ ಇನ್ನೂ ಅವಾಗ ಪ್ಯಾಂಟ ಹಾಕೊತಿದ್ದಿಲ್ಲಾ, ಹಂಗ ನನ್ನ ಚಡ್ಡಿಗೆ ಅಷ್ಟ ರಿಸೇಲ್ ವ್ಯಾಲೂನು ಇರಲಿಲ್ಲಾ ಅನ್ರಿ. ಹಂಗಿ ಇಡಿ ಮನಿ ಮಂದಿ ಅರಬಿ ಕೊಡತಿದ್ಲು ಆದರ ತನ್ನ ಸೀರಿ ಮಾತ್ರ ಒಂದ ದಿವಸನೂ ಟ್ರಂಕನಾಗಿನಿಂದ ತಗಿಲಿಲ್ಲಾ. ನಾ ಖರೆ ಹೇಳ್ತೇನಿ ಇವತ್ತಿಗೂ ತನ್ನ ಟ್ರಂಕನಾಗ ಆಕಿ ತನ್ನ ಸುರಗಿ ಸಿರಿಯಿಂದ ಹಿಡದ ಮೊನ್ನೆ ನಮ್ಮಪ್ಪನ ೭೦ ವರ್ಷದ ಶಾಂತಿಗೆ ನಾ ಕೊಡಸಿದ್ದ ರೇಶ್ಮಿ ಸೀರಿ ತನಕ ಎಲ್ಲಾ ಹಂಗ ಇಟಗೊಂಡಾಳ. ಹಂಗ ಅಕಿ ಜೊತಿಗೆ ಜೀರ್ಣಾಗಿದ್ದ ಸೀರಿ ಇನ್ನೂ ಮನ್ಯಾಗ ಅವ, ಅವನ್ನ ಹಳೆ ಅರಬಿ ತೊಗೊಳೊರ ಅಂತೂ ತೊಗಳಂಗಿಲ್ಲಾ ಸುಮ್ಮನ ಹೊರಗರ ವಗಿವಾ ಅಂದ್ರ “ಬ್ಯಾಡಾ ಯಾರರ ಹಡದರ ಧುಬಟಿ ಹೋಲಿಲಿಕ್ಕೆ ಬರತಾವ” ಅಂತ ಹಂಗ ಇಟ್ಕೊಂಡಾಳ. ಹಂಗ ನಾವ ಹುಟ್ಟಿ ಬೆಳದಿದ್ದ ನಮ್ಮವ್ವನ ಧುಬಟ್ಯಾಗ ಬಿಡ್ರಿ ಆ ಮಾತ ಬ್ಯಾರೆ. ಆದ್ರ ಇವತ್ತಿಗೂ ತನ್ನವು ಆ ಗಂಟನಾಗಿನ ಸಿರಿ ಗಂಟ ಕಟ್ಟಿ ಹಂಗ ಇಟ್ಟಾಳ, ಉಡಂಗಿಲ್ಲಾ, ಉಡೋರಿಗೆ ಕೊಂಡಗಿಲ್ಲಾ. ಹೋಗ್ಲಿ ಬಡುವರಿಗೆರ ದಾನ ಮಾಡ ಅಂದ್ರ “ಮಗನ ೭೨ ರಾಗ ನೂರಾ ಐವತ್ತ ರೂಪಾಯಿ ಕೊಟ್ಟ ನಮ್ಮವ್ವ ಕೊಡಸಿದ್ದ ಸೀರಿ, ನಿಮ್ಮಪ್ಪ ಕೊಡಿಸಿದ್ದೇನ್ ಅಲ್ಲಾ” ಅಂತ ವರ್ಷಕ್ಕೊಮ್ಮೆ ತಗದ ಝರಡಿ ಆಗಿರೋ ಸಿರಿ ಒಳಗ ನಮ್ಮ ಮಾರಿ ನೋಡಿ ಮತ್ತ ಡಾಂಬರ ಗುಳಿಗೆ ಹಾಕಿ ಟ್ರಂಕ್ ಬಾಯಿ ಮುಚ್ಚಿ ಇಡ್ತಾಳ. ಮತ್ತ ಇನ್ನ ಆ ಟ್ರಂಕ್ ತೆಗೆಯೊದು ಮುಂದಿನ ವರ್ಷ ಯುಗಾದಿಗೆ ಮನಿ ಸ್ವಚ್ಛ ಮಾಡಬೇಕಾರ. ಆ ಸೀರಿಗೆ ಇರೋ ಕಿಮ್ಮತ್ತಿನಕಿಂತಾ ಜಾಸ್ತಿ ನಾನು, ನಮ್ಮಪ್ಪಾ ಡಾಂಬರ ಗುಳಗಿಗೆ ರೊಕ್ಕಾ ಬಡದೇವಿ ಅಂದ್ರು ಅಡ್ಡಿಯಿಲ್ಲಾ. ಏನ ಮಾಡೋದ ಎಷ್ಟಂದ್ರು ನಮ್ಮವ್ವಾ ಬಾಯಿಮುಚಗೊಂಡ ಸುಮ್ಮನ್ ಇರಬೇಕ ಅಷ್ಟ, ಅದರಾಗ ಅಕಿ ಕೈ ಯಾಗ ಸಿಕ್ಕ ಜೀರ್ಣ್ ಆಗಿರೋ ನಮ್ಮಪ್ಪನ ಸುಮ್ಮನಿರಬೇಕಾರ ನಾ ಏನ ಜಿಗದಾಡಿದರರ ಏನ ಆಗೋದದ.
ಹಂಗ ಈ ಸ್ಟೀಲಿಂದ ಕೊಳಗಾ, ಪರಾತ, ಪ್ಲಾಸ್ಟಿಕ ತಂಬಿಗಿದ ಚಟಾ ನಮ್ಮವ್ವನ್ನ ಇನ್ನೂ ಬಿಟ್ಟಿಲ್ಲಾ. ಹಳೆ ಪಾತೇಲಿ, ಡಬ್ಬಿ, ಮುಚ್ಚು ಕಾಯಿ ನೂರಾ ಎಂಟ ವಡಕಾ ಸಾಮಾನ ಇನ್ನೂ ಮನ್ಯಾಗ ಕೂಡಿಸಿ ಇಡತಾಳ. ಆದ್ರ ಈಗ ಕಾಲ ಬದಲಾಗೇದ, ಮೊದ್ಲಿನಂಗ ಹಳೇ ಕೆಬ್ಬಣಾ- ಮೊಡ್ಕಾ ಸಾಮಾನ ತೊಗೊಳೊರು ಕಡಿಮೆ ಆಗ್ಯಾರ. ನಮ್ಮವನ ಹಂಗ ಪ್ಲಾಸ್ಟಿಕ ಕೂಡಿಟ್ಟ-ಕೂಡಿಟ್ಟ ಮಾರಿ ತಂಬಗಿ ತೊಗೊಂಡ ಹೋಗೋರು ಕಡಿಮೆ ಆಗ್ಯಾರ. ಆದ್ರ ನಮ್ಮ ಅವ್ವನ ಸ್ವಭಾವ ಮಾತ್ರ ಇನ್ನೂ ಬದಲಾಗಿಲ್ಲಾ. ಇತ್ತೀಚಿಗೆ ನಂದ ಮದುವಿ ಆದಮ್ಯಾಲೆ ಅಕಿದ ಏನು ಮನ್ಯಾಗ ನಡೆಯಂಗಿಲ್ಲಾ, ಅಕಿನೂ ಹಳೇ ಸಾಮಾನ ಆದಂಗ ಆಗ್ಯಾಳ ಅಂತ ಸುಮ್ಮನ ಇದ್ದಾಳ.
“ಇವೇಲ್ಲಾ ಹಳೆ ಸಾಮಾನ ಖಾಲಿ ಆಗ್ಬೇಕಂದ್ರ, ನಿಮ್ಮವ್ವ ನಿಕಾಲಿ ಆಗಬೇಕ ನೋಡಪಾ, ಅಲ್ಲಿ ತನಕ ಹೆಂಗರ ಈ ಹಳೆ ತಲಿ ಸಂಬಾಳಿಸಿಗೋ ” ಅಂತ ನಮ್ಮಪ್ಪ ಅಂತಿರ್ತಾನ. ನಾ ಅರ್ಧಾ ಅಕಿ ಸಾಮಾನ ಸಂಬಂಧರ ಇವತ್ತ ದೊಡ್ಡ-ದೊಡ್ಡ ಮನಿ ಭಾಡಗಿ ಹಿಡದ ಬದಕೋ ಪ್ರಸಂಗ ಬಂದದ.
ಇತ್ತಿತ್ತಲಾಗ ಆ ಪ್ಲಾಸ್ಟಿಕ್ ಕ್ಯಾರಿಬ್ಯಾಗ ಕೂಡಿಸಿ ಇಡೋದ ಒಂದ ಹೊಸಾ ಚಟಾ ಹುಟ್ಕೋಂಡದ. ಇವತ್ತ ನಾ ಏನರ ಬಿಗ್ ಬಜಾರ್ ಕ್ಕ ಹೋಗಿ ಒಂದ ನಾಲ್ಕೈದ ಚೀಲದ ತುಂಬ ಸಾಮಾನ ತೊಗೊಂಡ ಬಂದ್ರ ಎಲ್ಲಾರು ಏನ ಸಾಮಾನ ತಂದಿರಿ ಅಂತ ನೋಡಲಿಕ್ಕತ್ತರ ಈಕಿ “ಆ ದೊಡ್ಡ ಕ್ಯಾರಿ ಬ್ಯಾಗ ಹರಿಬ್ಯಾಡ್ರಿ ನನಗ ಬೇಕ” ಅಂತ ಗಬಕ್ಕನ ತೊಗೊಂಡ ಕಪಾಟನಾಗ ತುರಕಿ ಇಟಗೊತಾಳ, ಹಂಗ ನಮ್ಮ ಮನ್ಯಾಗ ಏನಿಲ್ಲಾಂದ್ರೂ ಒಂದ ಹತ್ತ ವರ್ಷದಿಂದ ಮಾರ್ಕೇಟನಾಗ ಚಾಲ್ತಿ ಇರೋ ಎಲ್ಲಾ ತರಹದ್ದ ಕ್ಯಾರಿಬ್ಯಾಗ ಅವ. ಹಂಗೇನರ ಕಾರ್ಪೂರೇಶನವರ ನಮ್ಮ ಮನಿಗೆ ರೇಡ ಮಾಡಿದರ ಕಡಿಮೆ ಜಿ.ಎಸ್.ಎಮ.ದ್ದ ಬ್ಯಾನ್ ಆಗಿದ್ದ ಕ್ಯಾರಿಬ್ಯಾಗ ಕಿಲೋಗಟ್ಟಲೆ ಸಿಗ್ತಾವ, ನಮ್ಮವ್ವನ ಹಿಡದ ಜೇಲ ಒಳಗ ಹಾಕ್ತಾರ ಅಷ್ಟ. ಏನ ಮಾಡ್ತಿರಿ? ನಮ್ಮ ಅವ್ವಂದ ಅದ ಹೆಂತಾ ಚಟಾನೋ ಏನೋ, ಇಲ್ಲಾ ನಮ್ಮಪ್ಪ ಹೇಳೊಹಂಗ ಹೋದ ಜನ್ಮದಾಗ ಎಲ್ಲೇರ ಇಕಿ ಖರೇನ ಆ ಪ್ಲಾಸ್ಟಿಕ್ ಆರಸೋಕಿ ಆಗಿದ್ಲೋ ಎನೋ ಆ ದೇವರಿಗೆ ಗೊತ್ತ.
ಇರಲಿ, ಇವತ್ತ ನಾವು ಹಂಗ ಯಾವುದು ನಮಗ ಜೀವನದಾಗ ಅವಶ್ಯಕ ಇಲ್ಲಾ ಆ ಸಾಮಾನ ನಮ್ಮವ್ವನ ಗತೆ ಇಟಗೊಂಡ ಕೂಡೋದರಾಗ ಅರ್ಥ ಇಲ್ಲಾ, ಸುಮ್ಮನ ಹೊರಗ ಛೆಲ್ಲೊದ ಭಾಳ ಛಲೋ ಅಂತ ನನಗ ಅನಸ್ತದ. ಹಂಗ ಖರೆ ಅಂದ್ರ ನಾವ ಸಾಮಾನ ಮಾಡಬೇಕಾರನ ವಿಚಾರ ಮಾಡಿ ಮಾಡಬೇಕು. ಎಷ್ಟ ಬೇಕೊ ಅಷ್ಟ ಮಾಡಬೇಕ. ಅನಾವಶ್ಯಕ ಸಾಮಾನ ಮಾಡಿ ಮನಿ ತುಂಬಿಸಿಗೋಳೋದರಾಗ ಅರ್ಥ ಇಲ್ಲಾ. ಹಳೇ ಸಾಮಾನ ಯಾವುದ ಉಪಯೋಗ ಇಲ್ಲಾ ಅವನ್ನ ಹೊರಗ ಹಾಕೋದರಾಗ ಮೀನಾ-ಮೇಷ ಮಾಡಬಾರದು. ಅವ್ವಾ-ಅಪ್ಪನ್ನ, ಹೆಂಡ್ತಿನ್ನ ಬಿಟ್ಟ ಮತ್ತ.
ಮೊನ್ನೆ ಜೊಸೆಫ ನ್ಯೂಟನ್ನ್ ನ ’principle of emptiness’ ಓದಲಿಕತ್ತಿದ್ದೆ. ಅದರಾಗ ಅಂವಾ ಇದ ವಿಷಯದ ಮ್ಯಾಲೆ ನಾವು ಹೆಂಗ ಜೀವನದಾಗ ಮುಂದ ಉಪಯೋಗ ಬರತಾವ ಅಂತ, ಇಲ್ಲಾ ಬರಬಹುದು ಅಂತ ಸುಟ್ಟು-ಸುಡಗಾಡ ಸಾಮಾನ ಇಟ್ಕೊಂಡ ಕೂತ ನಮ್ಮ prosperityಗೆ ನಾವ ಅಡ್ಡಾಗತೇವಿ ಅಂತ ಭಾಳ ಛಂದ ಬರದಾನ. ಮುಂದಿನ ಭವಿಷ್ಯದ ಸಂಬಂಧ ಇವತ್ತ ಅಂದರ ವರ್ತಮಾನದಾಗ ಮಜಾ ಮಾಡಲಾರದ ಕತ್ತಿಗೆತೆ ದುಡದ ರೊಕ್ಕಾಗಳಿಸಿ ಕೂಡಿಸಿ ಇಟ್ಟ ಬದಕೋದ ಕೆಲವೂಮ್ಮೆ ಖರೇನ ತಪ್ಪ ಅನಸ್ತದ. ಹಂಗ ನಾವ ಇವತ್ತ ಬರೆ ಹಳೆ ಮೊಡ್ಕಾ ಸಾಮಾನು, ಹರಕಾ ಅರಬಿ, ಖಾಲಿ ಬಾಟಲಿ ಇಷ್ಟ ಮನ್ಯಾಗ ಇಟಗೊಂಡ ಬದುಕಲಿಕತ್ತಿಲ್ಲಾ. ಅದರಂಗ ನಾವು ನಮ್ಮ ಮನಸ್ಸಿನಾಗ ಹಳೆ ವಿಚಾರ, ದುಃಖ, ದ್ವೇಷ, ಅಸೂಯೆ, ಸಂಕಟಾ ಇವನ್ನು ಇಟಗೊಂಡ ಬದುಕಲಿಕತ್ತೆವಿ. ಇದು ನಮ್ಮವ್ವನ ಹಂಗ ಬರೆ ಮೊಡ್ಕಾ ಸಾಮಾನ ಇಟಗೊಂಡ ಬದಕೋದಕಿಂತಾ ಹೆಚ್ಚ ಡೆಂಜರ್ ಅನಸ್ತದ. ಇದ ನಮ್ಮ ಮುಂದಿನ ಬೆಳವಣಿಗೆನ ಹಳ್ಳಾ ಹಿಡಸ್ತದ. ಹಳೇ ಸಾಮಾನ ಹೆಂಗ ಹೊರಗ ಹೋದ್ರ ಹೊಸ ಸಾಮಾನಕ್ಕ ಮನ್ಯಾಗ ಜಾಗ ಸಿಗ್ತದೊ ಹಂಗ ಹಳೇ ವಿಚಾರ, ದ್ವೇಷ, ಅಸೊಯೆ, ಸಂಕಟಾ ಎಲ್ಲಾ ತಲ್ಯಾಗಿಂದ ಹೋದರ ಹೊಸಾ ವಿಚಾರಕ್ಕ ತಲ್ಯಾಗ ಜಾಗಾ ಸಿಗ್ತದ. ನಾವು ಹುಚ್ಚರಂಗ ಅನಾವಶ್ಯಕ ವಸ್ತುಗಳನ್ನ ಮನ್ಯಾಗ, ಅನಾವಶ್ಯಕ ವಿಚಾರಗಳನ್ನ ಇಮೋಶನಲ್ಲಾಗಿ ತಲ್ಯಾಗ ತುರಕೊಂಡ ಬದಕೊದರಾಗ ಏನು ಅರ್ಥ ಇಲ್ಲಾ. ಜೀವನದಾಗ ನಮಗ ಯಾವುದು ಉಪಯೋಗ ಇಲ್ಲಾ ಹಂತದನ್ನೇಲ್ಲಾ ಕೊಟ್ಟ ಬಿಡೋದು, ಕೆಟ್ಟ ವಿಚಾರ ಬಿಟ್ಟ ಬಿಡೋದು ಭಾಳ ಛಲೋ. ಜೊಸೆಫ್ ನ್ಯೂಟನ್ ಹೇಳಿದಂಗ it’s not the objects we keep that strangles our life but rather the attitude of keeping. ನಮ್ಮ ವಿಚಾರ ಮಾಡೋ ದೃಷ್ಟಿಕೋನ ಬದಲಾಗಿ ಹಳೆ unwanted ವಿಚಾರ ಹೊರಗ ಹಾಕಬೇಕು, ಅಂದ್ರ ನಮ್ಮ ಭವಿಷ್ಯ ಬದಲಾಗಿ ಜೀವನದಾಗ ಸಮೃದ್ಧಿ ಬರತದ. ನೋಡ್ರಿ ಹಂಗ ಯಾರರ “ಹಳೇ ದ್ವೇಷ, ಮನಸ್ಸನಾಗಿನ ದು:ಖ, ಹೊಟ್ಟಿಕಿಚ್ಚ ಮಾರಕ ಕೊಡೋ……” ಅಂತ ಬಂದ್ರ ಎಲ್ಲಾ ಕೊಟ್ಟ ಬಿಡರಿ, ಅದರ ಬದ್ಲಿ ಹೊಸಾ ವಿಚಾರ ತೊಗೊಳ್ರಿ.
Let the new enter your home, your mind and life ಅಂತ ಆಶಿಸುತ್ತಾ ಈ ಪ್ರಹಸನ ಇಲ್ಲಿಗೆ ಮುಗಸ್ತೇನಿ. ಲೈಕ್ ಆದರ ಕಮೆಂಟ್ ಬರಿರಿ ಇಲ್ಲಾಂದರ ತಲ್ಯಾಗಿಂದ ತಗದ ಒಗಿರಿ. ಸುಮ್ಮನ ತಲ್ಯಾಗ ಇಟ್ಗೊಂಡ ಕೂಡೋದರಾಗ ಏನ ಅರ್ಥ ಇಲ್ಲಾ.
ಅನ್ನಂಗ ನಮ್ಮವ್ವಗ ಒಂದ good news, ಈಗ BIG BAZAR ನಾಗ ಹಳೇ ಮೊಡ್ಕಾ ಸಾಮಾನ, ರದ್ದಿ ಪೇಪರ್, ವೊಡ್ಕಾ ಡಬ್ಬಿ, ಖಾಲಿ ಬಾಟಲಿ ಎಲ್ಲಾ ತೊಗೊಳ್ಳಿಕತ್ತಾರಂತ, ನಾಳೆ ನಮ್ಮವ್ವನ ಕರಕೊಂಡ ಹೋಗಿ ಇದ್ದದ್ದಿಷ್ಟ ಹಳೇ ಸಾಮಾನ ಕೊಟ್ಟ ಹೊಸಾ ಸಾಮಾನ ತೊಗಂಡರ ಬರಬೇಕು. ಈಗ ಎಲ್ಲಾದಕ್ಕೂ exchange offer, ಹೆಂಡ್ತಿಗೆ ಒಂದ ಬಿಟ್ಟ.