ನಿನ್ನೆ ಕರ್ನಾಟಕ ರಾಜ್ಯೋತ್ಸವಕ್ಕ ಒಂದ ಇಂಗ್ಲೀಷ್ ಮಿಡಿಯಮ್ ಸಾಲಿಗೆ ಚೀಫ್ ಗೆಸ್ಟ ಅಂತ ಹೋಗಿದ್ದೆ. ಹಂಗ ಪ್ರಿನ್ಸಿಪಾಲ್ ನಮ್ಮ ದೋಸ್ತನ ಇದ್ದಾ. ನಾ ಅವಂಗ ’ಯಾ ಕಾರ್ಯಕ್ರಮಕ್ಕೂ ನಾ ಗೆಸ್ಟ-ಗಿಸ್ಟ ಅಂತ ಹೊಗೊಂವ ಅಲ್ಲಾ, ಹಂತಾ ದೊಡ್ಡ ಸಾಹಿತಿನೂ ಅಲ್ಲಾ’ಅಂತ ಎಷ್ಟ ಬಡ್ಕೊಂಡರು ನನ್ನ ಮಾತ ಕೇಳಲಿಲ್ಲಾ
’ಏ, ದೋಸ್ತ…. ಕುಡ್ಡಗಣ್ಣಾಗ ಮೆಳ್ಳ ಗಣ್ಣ ಶ್ರೇಷ್ಟಪಾ… ನಮಗ ನೀನ ದೊಡ್ಡ ಸಾಹಿತಿ. ಭಾಳ ತಲಿಕೆಡಸಿಗೊಬ್ಯಾಡಾ, ಒಂದ ಅರ್ಧಾ ತಾಸ ಹುಡಗರ ಜೊತಿ ಹರಟಿ ಹೊಡದ ಹೋಗ, ಹೆಂಗಿದ್ದರೂ ನಂಬದ ಇಂಗ್ಲೀಷ ಮೀಡಿಯಮ್ ಸಾಲಿ’ಅಂತ ಅಂದಾ.
ಸರಿ ಬಿಡಿ ಹೋಗಿ ಹುಡಗರಿಗೆ ಏನರ ಒಂದ ನಾಲ್ಕ ಹಳೇ ಗಾದಿ ಮಾತು-ಒಗಟು ಕೇಳಿ ನಾಲ್ಕ ಮಾತಾಡಿ ಬಂದರಾತು ಅಂತ ಹೋಗಿದ್ದೆ. ಹಂಗ ನಾವ ಹುಟ್ಟಾ ಅ.ಆ.ಇ.ಈ ಕಲತವರು, ಆದರ ಈಗಿನವರೇಲ್ಲಾ A B C D products, ಪಾಪ ಇವು ಐದನೇತ್ತಕ್ಕ ಅ- ಅಮ್ಮ, ಆ- ಆನೆ ಅನ್ಕೋತ ಕ- ಕನ್ನಡ ಮುಟ್ಟೋದರಾಗ ರಗಡ ಆಗಿರ್ತದ. ಹಿಂಗಾಗಿ ಅವರದ ಕನ್ನಡದ್ದ ಜ್ಞ- ಜ್ಞಾನ ಅಷ್ಟಕಷ್ಟ. ಇನ್ನ ಹಿಂತಾ ಹುಡಗರ ಮುಂದ ನನಗೊತ್ತಿದ್ದ ಕನ್ನಡನ ರಗಡ ಆತ ತೊಗೊ ಅಂತ ಅವರ ಜೊತಿ ಮಾತಾಡ್ತ ಮಾತಾಡ್ತ ’ಗಾದಿ ಮಾತ ಯಾರಿಗರ ಬರ್ತಾವೇನ’ ಅಂತ ಕೇಳಿದೆ. ಒಬ್ಬಂವ ಕೈ ಎತ್ತಿದಾ..ಹೇಳ ನೋಡೋಣ ಅಂದೆ….
’ಸ್ಟೇಶನ್ ಮಾಸ್ತರಗ ನಿದ್ದಿ ಇಲ್ಲಾ…ಸಾಲಿ ಮಾಸ್ತರಗೆ ಬುದ್ದಿಲ್ಲಾ’ಅಂತ ಅಂದ ಬಿಟ್ಟಾ. ಹುಡಗರೇಲ್ಲಾ ಜೋರಾಗಿ ನಗಲಿಕತ್ತರ. ತಮ್ಮಾ ನೀ ಎಲ್ಲಿಂದ ಬರ್ತಿಪಾ ಅಂತ ಕೇಳಿದೆ, ಅಂವಾ ಗಾಮನಗಟ್ಟಿ ಅಂದಾ, ಅಪ್ಪಾರ ಏನ ಮಾಡ್ತಾರ ಅಂತ ಕೇಳಿದರ ’ಕನ್ನಡ ಸಾಲಿ ಮಾಸ್ತರ’ ಅಂತ ಅಂದಾ. ’ಮತ್ತ ಅಲ್ಲೇ ಕಲಿಬೇಕಿಲ್ಲ ಇಲ್ಲಿಗೆ ಯಾಕ ಬಂದಿ’ ಅಂದೆ. ’ನೀನರ ಇಂಗ್ಲೀಷ ಮೀಡಿಯಮ್ ಕಲತ ಶಾಣ್ಯಾ’ ಆಗ ಅಂತ ನಮ್ಮವ್ವ ಕಳಿಸ್ಯಾಳ್ರಿ ಅಂದಾ.
ಒಂದ ಸರತೆ ಆ ತಾಯಿಯ ಚರಣ ಕಮಲಗಳಿಗೆ ಮನದೊಳಗ ವಂದಿಸಿ, ನಾ ಮುಂದ ಗಾದಿ ಮಾತ ಕೇಳೋದ ಅಲ್ಲಿಗೆ ನಿಲ್ಲಿಸಿ ಟಾಪಿಕ್ ಚೇಂಜ್ ಮಾಡಿ ಒಗಟ ಅಂದರ ಗೊತ್ತೇನ ಅಂತ ಕೇಳಿದೆ. ಈ ಸರತೆ ಯಾರೂ ಕೈ ಎತ್ತಲಿಲ್ಲಾ. ನಂಗ ಸಮಾಧಾನ ಆತ.
ಒಗಟು ಅಂದರ ಏನು ಅಂತ ತಿಳಿಸಿ ಹೇಳಲಿಕ್ಕೆ ಒಂದ ಒಗಟ ಹೇಳಿ ಅದರ ಉತ್ತರಾ ಕೇಳಿದರಾತು ಅಂತ
’ನೀರುಂಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ’ ಏನ ಹೇಳ್ರಿ ಅಂತ ಕೇಳಿದೆ..ಒಬ್ಬರಿಗೂ ಉತ್ತರ ಗೊತ್ತಿಲ್ಲಾ, ಕಡಿಕೆ ನಾನ – ತೆಂಗಿನಕಾಯಿ ಅಂತ ಉತ್ತರಾ ಹೇಳಿದೆ ಮುಂದ
’ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ !’ ಏನ ಅಂತ ಕೇಳಿದೆ.
ಪಾಪ ಆ ಹುಡಗರಿಗೆ ಮೊದ್ಲ ಒಗಟ ಅಂದರ ಗೊತ್ತ ಇದ್ದಿದ್ದಿಲ್ಲಾ, ಹಂತಾದರಾಗ ಹಿಂದ ಕುತಕೊಂಡ ಒಬ್ಬ ಹುಡಗ ’ನೀರಾ’ ಅಂದಾ. ಉಳದವರ ಜೋರಾಗಿ ನಕ್ಕರು….ಯಾಂವಲೇ ಅಂವಾ ಅಂತ ಪ್ರಿನ್ಸಿಪಾಲ್ ಅಂದರ ಯಾರು ತುಟಿ ಪಿಟಕ್ಕ ಅನ್ನಲಿಲ್ಲಾ. ಕಡಿಕೆ ಆ ಪ್ರಿನ್ಸಿಪಾಲನ ’ಉಪ್ಪು’ ಅಂತ ಉತ್ತರಾ ಹೇಳಿದಾ.
’ಗಿಡ್ಡ ನನ್ನ ಮಗಾ, ಅಡ್ಡ ಬಿದ್ದಾನ’ ಅಂತ ಕೇಳಿದೆ, ಒಬ್ಬೊಂವ ’ಬಸ್ಯಾ’ ಅಂದಾ, ಯಾ ಬಸ್ಯಾಲೇ ಅಂತ ಕೇಳಿದರ ಸರ್ ’ಅದ ಅಲ್ಲೇ ಮುಂದ ಕುಂತಾನ ನೋಡ್ರಿ ಗಿಡ್ಡ ಬಸ್ಯಾ…ಅವನರಿ….ಹೋಮ ವರ್ಕ್ ಮಾಡ್ಕೊಂಡ ಬರಂಗಿಲ್ಲರಿ, ಟೀಚರ್ ಬಂದ ಕೂಡ್ಲೇ ಅಡ್ಡ ಬಿದ್ದ ಬಿಡ್ತಾನ್ರಿ’ ಅಂತ ಅಂದಾ.
ನಾ ’ಲೇ..ಬಸ್ಯಾ ಉತ್ತರ ಅಲ್ಲಪಾ…ಕರೆಕ್ಟ ಉತ್ತರ…ಹೊಚ್ಚಲಾ’ ಅಂತ ಅಂದರ,
’ಹೊಚ್ಚಲಾ….what is ಹೊಚ್ಚಲಾ’ ಅಂತ ವಾಪಸ ನನ್ನ ಕೇಳಿದರು.
ಅಷ್ಟರಾಗ ಒಬ್ಬೊಂವ ’ಲೇ..ಅದಲೇ the one which comes before ಬಚ್ಚಲಾ… ಬಚ್ಚಲಕ್ಕ ಹೊಗೊ ಮುಕ್ಕಟ ಇರ್ತೈತಲಾ..ಗ್ರೈನೇಟದ ಪಟ್ಟಿ ಅದಕ್ಕ ಹೊಚ್ಚಲಾ ಅಂತಾರ’ ಅಂದಾ.
ಹಂಗ ನಂಗ ಇಂಗ್ಲೀಷನಾಗ ಹೊಚ್ಚಲಕ್ಕ ಏನ ಅಂತಾರ ಅಂತ ಗೊತ್ತಿದ್ದಿದ್ದಿಲ್ಲಾ….ಸುಮ್ಮನ shut up ಅಂತ ಬೈದ ಮುಂದ ನನ್ನ ಒಡಪ ಕಂಟಿನ್ಯೂ ಮಾಡಿದೆ.
’ಮುಳ್ಳುಂಟು ಗಿಡವಲ್ಲ, ನಾಲಿಗೆಯುಂಟು ಪ್ರಾಣಿಯಲ್ಲ, ಟೋಪಿಯುಂಟು ಕಾಂಗ್ರೆಸ್ಸಲ್ಲ, ಹಾಗಾದರೆ ನಾನು ಯಾರು’ ಅಂತ ಕೇಳಿದರ ಯಾವನೋ ಗ್ರಾಮ ಪಂಚಾಯತಿ ಅಧ್ಯಕ್ಷನ ಮಗಾ ’ಬಿ.ಜೆ.ಪಿ’ ಅಂದಾ. ನಮ್ಮ ದೋಸ್ತ ಪ್ರಿನ್ಸಿಪಾಲ್ ತಲಿಕೆಟ್ಟ…ಲೇ ಪೆನ್ನರಲೆ…ಪೆನ್ ಅಂತ ಸಿಟ್ಟಲೇ ಒದರಿದಾ.
ನಂಗೂ ಇವರ ವಿಚಿತ್ರ ವಿಚಿತ್ರ ಉತ್ತರಾ ಕೊಡೊದ ನೋಡಿ ಮಜಾ ಬರಲಿಕತ್ತ. ನಾನು ಹಂಗ ಶುರು ಹಚಕೊಂಡ
’ಚೋಟುದ್ದ ಹುಡುಗಿಗೆ, ಮಾರುದ್ದ ಜಡೆ’ ಅಂತ ಕೇಳಿದೆ…ಸಡನ್ ಆಗಿ ಒಬ್ಬೊಂವ ಸೂಜಿ ಅಂದಾ. ನಾ ಒಬ್ಬನರ ಕರೆಕ್ಟ ಉತ್ತರಾ ಹೇಳಿದನಲಾ ಅಂತ ಖುಶ್ ಆಗಿ ’ಯಾರಲೇ ಅಂವಾ’ ಅಂದೆ, ಯಾರು ಕೈ ಎತ್ತಲಿಲ್ಲಾ.
’ಲೇ..ಉತ್ತರ ಕರೆಕ್ಟ ಐತಿ ಯಾರ ಹೇಳಿದರಿ’ ಅಂದಮ್ಯಾಲೆ ಒಬ್ಬಂವ ಎದ್ದ ನಿಂತಾ.
’ಸೂಜಿ right answer ….. ಹೆಂಗ ಹೇಳಿದಿ explain’ಅಂದೆ…ಅಂವಾ ಹೆದರಕೋತ
’ಸರ್…ಅಲ್ಲೇ ಮುಲ್ಯಾಗ ಕುಂತಾಳಲ್ಲರಿ..ಸುಜಾತಾ…..ಸೂಜಿ….ಇಟ ಅದಾಳ ಯಾ ನಮೂನಿ ಉದ್ದನ ಜಡಿ ಹಾಕ್ಕೊಂಡಾಳ ನೋಡ್ರಿ…..’ ಅಂತ ಅಂದಾ. ನಂಗ ಹುಚ್ಚು ಹಿಡಿಯೊದೊಂದ ಬಾಕಿ ಇತ್ತ.
next…’ರಂಗ್ಯಾನ ಮನಿ ಹುಂಜ ನಿಂಗ್ಯಾನ ಮನ್ಯಾಗ ತತ್ತಿ ಇಟ್ಟರ ಆ ತತ್ತಿ, ರಂಗ್ಯಾಂದೋ ನಿಂಗ್ಯಾಂದೊ’ ಅಂತ ಕೇಳಿದೆ. ಸಡಕ್ಕನ ಒಬ್ಬಂವ ಎದ್ದ ’ಸರ್..ತತ್ತಿದಂತೂ ಗೊತ್ತಿಲ್ಲರಿ ಆದರ ಹುಂಜ ಮಾತ್ರ ಇವತ್ತಿಲ್ಲಾ ನಾಳೆ ನಮ್ಮನಿಗೆ ಬರೋದರಿ’ ಅಂದಾ, ಯಾಕ ಅಂದೆ, ರಂಗ್ಯಾ,ನಿಂಗ್ಯಾ ಇಬ್ಬರು ವೆಜಿಟೇರಿಯನ್ರಿ, ತತ್ತಿ ಬಿಟ್ಟ ಬ್ಯಾರೆ ತಿನ್ನಂಗಿಲ್ಲಾ ಅಂದಾ…ಮತ್ತ ಹುಡಗರ ಎಲ್ಲಾ ಜೋರಾಗಿ ನಗಲಿಕತ್ತರ. ’ಲೇ…ನೀ ಕೋಳಿನರ ತಿನ್ನ ಇಲ್ಲಾ ಹುಂಜಾನರ ತಿನ್ನ ಮಗನ… ಆದರ ಹುಂಜ ಎಂದರ ತತ್ತಿ ಇಡ್ತೇತೇನ್ಲೇ’ ಅಂತ ಬೈದೆ.
ಹಂಗ ಹುಡುಗರು ಏಂಜಾಯ ಮಾಡ್ಲಿಕತ್ತಾರ ಅಂತ ಕಂಟಿನ್ಯೂ ಮಾಡಿ
’ಊರ ಎಲ್ಲಾ ಅಡ್ಡಾಡತೈತಿ ದೇವರ ಮುಂದ ಬಂದ ಉಚ್ಚಿ ಹೋಯ್ತೈತಿ’ ಅಂತ ಕೇಳಿದೆ, ಒಬ್ಬಂವ ಎದ್ದ ನಿಂತ ’ಹನಮ್ಯಾ’ ಅಂದಾ. ಲೇ ಹನಮ್ಯಾ ಯಾರ ..ನಮ್ಮ ತಮ್ಮರಿ…ಅಂವಾ ಭಾಳ ಸಣ್ಣಂವ ಅದಾನ ಅವಂಗ ದೇವರ ಮುಂದ ಬಂದ ಉಚ್ಚಿ ಹೋಯ್ಯೊ ಚಟಾ ಐತಿರಿ ಅಂದಾ. ಯಪ್ಪಾ ದೇವರ…ನೀನ ಕಾಪಾಡಪ್ಪಾ ಅಂತ ನಾ ಅಲ್ಲಿಗೆ ಒಗಟ ಕೇಳೋದ ಮುಗಿಸಿ ಆಟಾ- ಗೂಟಾ ಜೈ ಅಂದೆ.
ಅಷ್ಟರಾಗ ಒಬ್ಬಂವ ’ಸರ್… ಇವಕ್ಕೇಲ್ಲಾ ಇಂಗ್ಲೀಷನಾಗ riddles ಅಂತಾರ್ರಿ…you ask english riddles, we will answer’ಅಂತ ಅಂದಾ. ನಂಗ ಖರೇನ ಒಡಪಿಗೆ ಇಂಗ್ಲೀಷ ಒಳಗ ರಿಡಲ್ಸ್ ಅಂತಾರ ಅಂತ ಗೊತ್ತಿದ್ದಿದ್ದಿಲ್ಲಾ. ಅಲ್ಲಾ ನಾ ಸರ್ಕಾರಿ ಕನ್ನಡ ಸಾಲ್ಯಾಗ ಕಲ್ತಂವ ಅಲಾ.
’ತಮ್ಮಾ ಅವಕ್ಕ ಇಂಗ್ಲೀಷನಾಗ ಏನ ಸುಡಗಾಡರ ಅನ್ನವಲ್ಲರಾಕ, ನೀ ನಿನ್ನ ಮಾತೃಭಾಷೆ ಕನ್ನಡದಾಗಿನ ಒಡಪು ಕಲಿ ಸಾಕ. ಇಂಗ್ಲೀಷ ಮಿಡಿಯಮ್ ಕಲತರ ಇಷ್ಟ ಶಾಣ್ಯಾ ಆಗ್ತಾರಂತೇನ ಇಲ್ಲಾ, ಈಗ ನಾವ ಕನ್ನಡ ಮಿಡಿಯಮನಾಗ ಕಲತಿಲ್ಲಾ’ ಅಂದೆ.
’ಸರ್ ಅದಕ್ಕ ನಿಮಗ ಹೊಚ್ಚಲಕ್ಕ ಇಂಗ್ಲೀಷನಾಗ ಏನಂತಾರ ಗೊತ್ತಿಲ್ಲ ತೊಗೊರಿ….’ ಅಂತ ಹಿಂದಿನಿಂದ ಮತ್ತೊಬ್ಬ ಹುಡಗ ಅಂದಾ. ಮತ್ತ ಗೊಳ್ಳನ ಎಲ್ಲಾರೂ ನಕ್ಕರು.
ಏನ್ಮಾಡ್ತೀರಿ? ಇದು ಇವತ್ತ ನಮ್ಮ ಹುಡುಗರಿಗೆ ಇರೋ ಕನ್ನಡ ಜ್ಞಾನ. ಮಾಥ್ಸ, ಸೈನ್ಸ್ ಎಲ್ಲಾ ಔಟ ಆಫ್ ಜೌಟ್ ಆದರ ಕನ್ನಡಕ್ಕ ೩೫ ಮಾರ್ಕ್ಸ ತೊಗೊಬೇಕಂದರ ಹೋಯ್ಕೊ-ಬಡ್ಕೊ ಆಗ್ತದ, ಅದೂ with ಟೂಶನ್.
ನಾವ ಒಂದ ಕಾಲದಾಗ
’ಹತ್ತಿ ಕಟಗಿ,ಬತ್ತಿ ಕಟಗಿ,
ಬಾವಣ್ಣವರ,ಬಸಪ್ಪನವರ,
ಕೈ ಕೈ ದೂಳಗೈ…..ಪಂಚಂ ಪಗಡಂ…’ ಅಂತ ಆಟಾ ಆಡ್ಕೊತ ಬೆಳದವರು…ಆವಾಗ
’…….ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಡ್ತು?
ಚೆಕ್ಕಿ ಕೊಡ್ತು!
ಚೆಕ್ಕಿ ಏನ್ ಮಾಡ್ದಿ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಡ್ತು ?
ಬೂದಿ ಕೊಡ್ತು !…’ ಅಂತಾ ಹಾಡತಿದ್ದವಿ, ಇವತ್ತ
’ಕ..ಕ..ಕನ್ನಡ ಎಲ್ಲೇ ಹೋತು? ಅಂತ ಕೇಳಿದರ
a..b..c..d… e..ಇಂಗ್ಲೀಷ್ ನಾಗ ಹೋತು’ ಅನ್ನೊ ಪ್ರಸಂಗ ಬಂದದ.
ಇನ್ನ ಆ ಇಂಗ್ಲೀಷ್ ಏನ ಕೊಡ್ತು..ಅಂತ ಇವತ್ತ ನಮ್ಮನ್ನ ನಾವ ಕೇಳ್ಕೊಬೇಕ ಇಷ್ಟ.
ಹಾಂ…ಏನಂದರಿ….ಅಲ್ಲಾ, ಯಾರೋ ‘ಗೊಬ್ಬರಾ ಕೊಡ್ತು’ ಅಂದಂಗ ಆತ ಅದಕ್ಕ ಕೇಳಿದೆ.
ಜೈ ಭುವನೇಶ್ವರಿ.