ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ಒಂದ ಸಂಡೇ ಎಲ್ಲಾರೂ ಊಟಕ್ಕ ಕೂತಿದ್ವಿ, ಒಮ್ಮಿಂದೊಮ್ಮಿಲೇ ಹೊರಗ ಹೆಣ್ಣಮಕ್ಕಳ ಬಾಯಿ ಕೇಳಸಲಿಕತ್ತ. ಅದ ಏನ ಆಗಿತ್ತಂದರ ನಮ್ಮ ಲೈನ ಒಳಗ ಒಂದ ಹಾವ ಬಂದಿತ್ತ. ಅದ ಒಬ್ಬೊಬ್ಬರ ಮನಿ ಗೇಟ ಹೊಕ್ಕೋತ-ಹೊಕ್ಕೋತ ನಮ್ಮ ಮನಿ ಗೇಟ ಒಳಗ ಪಾಸ್ ಆಗಿತ್ತ. ಇಡಿ ಓಣಿ ಹೆಣ್ಣಮಕ್ಕಳ ಅದಕ್ಕ ಬೆನ್ನ ಹತ್ತಿದ್ದರು. ಒಬ್ಬರಿಗೂ ಹಾವ ಹೊಡೆಯೋ ಧೈರ್ಯಾ ಇರಲಿಲ್ಲಾ. ಆ ಹಾವು ಅರ್ಧಾ ಇವರ ಬಾಯಿಗೆ ಹೆದರಿನ ಒಬ್ಬರ ಮನಿ ಕಂಪೌಂಡನಿಂದ ಮತ್ತೊಬ್ಬರ ಮನಿ ಕಂಪೌಂಡಿಗೆ ಹೊಂಟಿತ್ತ. ಹೊರಗ ಗದ್ಲ ಜೋರ ಆಗಿ ಯಾರೋ “ಪ್ರೇರಣಾನ ಮನಿ ಗೇಟನಾಗ ಹೋತ” ಅಂದದ್ದ ಕೇಳಸ್ತ, ನಾವ ಭಡಕ್ಕನ ಎದ್ದ ಏನಂತ ನೋಡ್ಲಿಕ್ಕೆ ಹೊರಗ ಬಂದ್ವಿ.
ಎದರಗಿನ ಮನಿ ದ್ರಾಕ್ಷಾಯಣಿ ಅಂಟಿ ’ನಿಮ್ಮ ಕಂಪೌಂಡ ಒಳಗ ಹಾವ ಹೋತ’ ಅಂದರು. ನಾ ಹೆಂತಾ ಹಾವ ಅಂತ ಕೇಳಿದರ
’ಏ..ಪಸಂದ್ ಒಂದ ನಾಲ್ಕ ಮಾರ ಇತ್ತ, ನಾಗರಹಾವ ತೊಗೊ’ ಅಂದರು. ಅಲ್ಲಾ ಈ ಹೆಣ್ಣಮಕ್ಕಳಿಗೆ ಹಾವ ಅಂದರ ನಾಗರಹಾವ ಒಂದ ಗೊತ್ತ. ನಾ ’ಏ ಕೇರೆ ಹಾವ ಇರಬೇಕ ಬಿಡ್ರಿ’ ಅಂತ ಏನ ಅಗದಿ ದೊಡ್ಡ ಹೊಡೆಯವರಗತೆ ಲುಂಗಿ ಏರಿಸಿಕೊಂಡ ಕಸಬರಗಿ ತೊಗೊಂಡ ಬಂದೆ.
’ಅಯ್ಯ ನಮ್ಮಪ್ಪಾ, ಹೆಂತಾ ದೊಡ್ಡ ಹಾಂವ ಐತಿ ನೀ ಝರಿ ಹೋಡಿಯೋ ಕಸಬರಗಿ ತೊಗೊಂಡ ಬಂದಿ ಅಲಾ’ ಅಂತ ಅವರ ಅನ್ನೋದಕ್ಕ ನಮ್ಮವ್ವಾ, ನಮ್ಮಜ್ಜಿ ಏನಂತ ನೋಡ್ಲಿಕ್ಕೆ ಹೊರಗ ಬಂದರು. ಅಕಿ ಹಿಂದ ಪ್ರೇರಣಾನೂ ಬಂದಳು.
ನಮ್ಮಜ್ಜಿ ಪ್ರೇರಣಾ ಹೊರಗ ಬರೋದಕ್ಕ
’ಏ….ನೀ ಹೊರಗ ಬರಬ್ಯಾಡ ಒಳಗ ಹೋಗ’ ಅಂತ ಅಕಿನ್ನ ಒಳಗ ಕಳಸಿದ್ಲು.
ಅಲ್ಲಾ ಹಂಗ ನಮ್ಮ ಮನ್ಯಾಗ ಇದ್ದದ್ದರಾಗ ಸ್ವಲ್ಪ ಧೈರ್ಯಾ ಇದ್ದೋಕಿ ಅಕಿನ, ನಾ ಅಕಿ ಧೈರ್ಯಾದ ಮ್ಯಾಲೆ ಹಾವ ಹೊಡಿಲಿಕ್ಕೆ ಕಸಬರಗಿ ತೊಗೊಂಡ ಬಂದಿದ್ದೆ.
’ಏ ಅಕಿ ನನ್ನ ಜೊತಿ ಇರಲಿ ತಡಿ’ ಅಂತ ನಾ ಅಂದರ ನಮ್ಮಜ್ಜಿ
’ಲೇ…ಹುಚ್ಚಾ ಬಸರ ಹೆಂಗಸ ಹಾವ ನೋಡಿದರ ಹಾವಿನ ಕಣ್ಣ ಹೋಗ್ತಾವ’ ಅಂತ ನನ್ನ ಕಿವ್ಯಾಗ ಹೇಳಿದ್ಲು.
ಕಡಿಕೆ ಹಾವ ಅಲ್ಲೆ ಹೋತ, ಇಲ್ಲೆ ಹೋತ ಅಂತ ಅನ್ನೋದರಾಗ ಅದ ಹೆದರಿ ಬಾಜು ಉಮಾ ಅಂಟಿ ಮನಿಗೆ ಹೋತ. ಈ ಹೆಣ್ಣಮಕ್ಕಳೇಲ್ಲಾ ಸೇರಿ ನೆಕ್ಸ್ಟ ಉಮಾ ಅಂಟಿ ಮನಿಗೆ ಹೋಗಿ ’ನಿಮ್ಮ ಕಂಪೌಂಡನಾಗ ಹಾವ ಬಂದದ’ ಅಂತ ಒದರಲಿಕ್ಕತ್ತರು. ಮುಂದ ಹಾವ ಇವರ ಬಾಯಿಗೆ ಹೆದರಿ ಅವರ ಮನಿನು ದಾಟಿ ಹಿಂದ ಹೊಲದಾಗ ಹೋತ.
ಹಿಂಗ ಓಣ್ಯಾಗ ಹಾವು ಬಂದರು ನನ್ನ ಹೆಂಡ್ತಿ ಒಟ್ಟ ಹೊರಗ ಬಂದ ಬಾಯಿ ಮಾಡಲಾರದ್ದ ದ್ರಾಕ್ಷಯಣಿ ಅಂಟಿಗೆ ಡೌಟ ಬಂತ. ಇಕಿ ಮನ್ಯಾಗ ಜೊಂಡಿಗ್ಯಾ ಬಂದರ ಓಣಿ ತುಂಬ ಓಡ್ಯಾಡೋಕಿ ಹಂತಾಕಿ ಹಾವ ಬಂದರು ಸುಮ್ಮನ ಇದ್ದಳಲಾ ಅಂತ ನಮ್ಮವ್ವಗ
“ಮತ್ತೇನ ಸಿಂಧಕ್ಕಾ…ಸೊಸಿದ ವಿಶೇಷ ಏನ? ಎಷ್ಟರಾಗ?” ಅಂತ ಕೇಳೆ ಬಿಟ್ಟರು.
ನಮ್ಮವ್ವಗ ಅವರ ಕೇಳಿದ್ದ ನೋಡಿ ಆಶ್ಚರ್ಯ ಆತ. ಯಾಕಂದರ ಅಕಿಗೆ ಗೊತ್ತ ಆಗಿನ ಒಂದ ವಾರ ಆಗಿತ್ತ. ಇನ್ನ ನಮ್ಮಜ್ಜಿ ಯಾರಿಗೂ ಸುದ್ದಿ ಹಚ್ಚಬ್ಯಾಡಾ ಅಂದಿದ್ದಕ್ಕ ನಮ್ಮ ಮನಿ ಭಾಂಡೆ ತಿಕ್ಕೋಕಿಗೆ ಸಹಿತ ಹೇಳಿದ್ದಿಲ್ಲಾ. ಅಲ್ಲಾ ಹಂಗ ಅದೇನ ಮುಚ್ಚ ಇಡೊದ ಅಲ್ಲ ಬಿಡ್ರಿ. ಹಿಂಗಾಗಿ ನಮ್ಮವ್ವಾ
“ಹೌದರಿ, ಈಗ ಎರಡರಾಗ, ನಿಮಗ ಹೆಂಗ ಗೊತ್ತಾತು?” ಅಂತ ಕೇಳಿದ್ಲು.
“ಅಲ್ಲಾ, ನಮ್ಮ ಓಣಿಗೆ ಬ್ಯಾರೆ ಓಣಿ ನಾಯಿ ಬಂದರ ಗೊತ್ತ ಹಿಡದ ಹಚಾ ಹಚಾ ಅನ್ನೋಕಿ ಹಂತಾದ ಮನ್ಯಾಗ ಹಾವ ಬಂದರು ನಿಮ್ಮ ಸೊಸಿ ತನ್ನ ಬಿಲಾ ಬಿಟ್ಟ ಬರಲಿಲ್ಲಾ ಅದಕ್ಕ ಕೇಳಿದೆ” ಅಂದರು.
ಹಂಗ ನನಗ ನಮ್ಮಜ್ಜಿ ಹೇಳೋತನಕಾ ಬಸರ ಹೆಂಗಸ ಹಾವಿನ ನೋಡಿದರ ಹಾವಿನ ಕಣ್ಣ ಹೋಗ್ತಾವ ಅಂತ ಗೊತ್ತ ಇದ್ದಿದ್ದಿಲ್ಲಾ. ಮುಂದ ಮನ್ಯಾಗ ನಾ ನಮ್ಮಜ್ಜಿಗೆ
“ಬಸರ ಹೆಂಗಸ ಇದ್ದೋರ ಹಾವಿನ ನೋಡಿದರ ಹಾವಿನ ಕಣ್ಣ ಹೋಗ್ತಾವ ಅಂತ ಮೊದ್ಲ ಹೇಳಿದ್ದರ ಸುಮ್ಮನ ನಾ ಕನಫರ್ಮ್ ಮಾಡ್ಕೋಳಿಕ್ಕೆ ಇಕಿ ಮುಂದ ಹಾವ ತಂದ ಹಿಡಿತಿದ್ದೆನಲಾ ನಮ್ಮವ್ವಾ, ಸುಳ್ಳ ಡಾಕ್ಟರಗೆ, velocit pregnancy test kit ಗೆ ರೊಕ್ಕಾ ಬಡದೆ” ಅಂದೆ.
ಹೌದಲ್ಲ ಮತ್ತ, ಸುಮ್ಮನ ಡೌಟ ಬಂದಾಗೋಮ್ಮೆ ಹೆಂಡ್ತಿ ಮುಂದ ಹಾವ ಹಿಡಿಯೋದರಿಪಾ, ಅದರ ಕಣ್ಣ ಹೋದರ ಪಾಸಿಟಿವ್ ಇಲ್ಲಾಂದರ ನೆಗಿಟೀವ್. ಹೆಂಗಿದ್ದರೂ ಮನಿ ಕಡೆ ರಗಡ ಹಾವ ಇದ್ದವು.
ನಮ್ಮಜ್ಜಿ ಹಣಿ ಹಣಿ ಬಡ್ಕೊಂಡ
’ಸಾಕ ಸುಮ್ಮನ ಕೂಡಪಾ ಮಾರಾಯ, ನಿನ್ನ ಜೊತಿ ಯಾರ ಮಾತಾಡೋರ” ಅಂತ ಬೈದ್ಲು.
ಪುಣ್ಯಾಕ್ಕ ನನ್ನ ಲಗ್ನ ಆಗೋದಕ್ಕ ನಮ್ಮ ಶಿರ್ಶಿ ಒಳಗಿನ ಝೂ ಬಂದ ಆಗಿತ್ತ. ಇಲ್ಲಾಂದರ ಅಲ್ಲೇ ಝೂ ಒಳಗ ಸಾವಿರ ಗಟ್ಟಲೇ ಹಾವ ಇದ್ದವು, ನಾ ಎಲ್ಲೇರ ಇಕಿಗೆ ನಮ್ಮೂರಿನ ಝೂ ತೋರಸ್ತೇನಿ ಬಾ ಅಂತ ಕರಕೊಂಡ ಹೋಗಬೇಕು ಅವೇಲ್ಲಾ ಕುರುಡ ಆಗಿದ್ದರ ಏನ್ಮಾಡ್ತೀರಿ?
ಮುಂದ ಒಂದ ಹತ್ತ ದಿವಸಕ್ಕ ವಿಜು ಅಂಟಿ ಮನ್ಯಾಗ ಹಾವ ಬಂತ ಅವರ ಸೊಸಿ ಬಂದ ನನಗ
’ಒಂದ ಸ್ವಲ್ಪ ನಿಮ್ಮ ಹೆಂಡ್ತಿನ್ನ ಕಳಸರಿ ನಮ್ಮ ಮನ್ಯಾಗ ಹಾವ ಬಂದದ” ಅಂದ್ಲು,
“ಏ ಅಕಿ ಏನ ಹಾವ ಹಿಡಿಯೋಕಿ ಅಲ್ಲಾ, ಜೊಂಡಿಗ್ಯಾ ಹಿಡಿಲಿಕ್ಕೆ ಹೆದರತಾಳ ಇನ್ನೇಲ್ಲೇ ಹಾವ ಹಿಡಿಬೇಕ” ಅಂತ ನಾ ಅಂದರ
“ಅಲ್ಲರಿ, ಅಕಿ ಬಸರ ಇದ್ದಾಳಂತಲಾ, ಅಕಿ ನೋಡಿದರ ಹಾವಿನ ಕಣ್ಣ ಹೋಗ್ತಾವ ಅಂತ, ಅದಕ್ಕ ಹಾವಿನ ಮ್ಯಾಲೆ ಅಕಿದ ದೃಷ್ಟಿ ಬೀಳಲಿ, ಹಾವ ಕುಡ್ಡ ಆತ ಅಂದರ ಅದನ್ನ ಹಿಡದ ಹೊಡಿಬಹುದು” ಅಂದ್ಲು. ಏನ ಹೇಳ್ತೀರಿ ಹಿಂತಾವರಿಗೆ.
ಅಲ್ಲಾ ಹಂಗ ಇದನ ಒಂದ ಸೈಡ ಬ್ಯುಸಿನೆಸ್ ಮಾಡಬೇಕ ಅಂತ ನನಗ ಅನಸ್ತ ಖರೆ ಆದರ ಅದ ಒಂಬತ್ತ ತಿಂಗಳದ ಇಷ್ಟ, ಕಾಯಮ್ ಏನ ಇಕಿ ಬಸರ ಇರಂಗಿಲ್ಲಾ ಏನಿಲ್ಲಾ ಅಂತ ಸುಮ್ಮನಾದೆ.
ಆದರೂ ಈ ಹಳೇ ಕಾಲದ ಮಂದಿ ಏನೇನ ನಂಬತಾರೊ ಏನೋ. ಇನ್ನೊಂದ ಮಜಾ ಅಂದರ ಬಸರ ಹೆಂಗಸ ನೋಡಿದ್ದ ಹಾವಿಗೆ ಏನ ಕಣ್ಣ ಹೋಗಿರ್ತಾವ ಅಲಾ ಅವು ಅಕಿ ಹಡದಮ್ಯಾಲೆ ಮತ್ತ ವಾಪಸ ಬರ್ತಾವ ಅಂತ. ಅಲ್ಲಾ ಆ ಹಾವಿಗೆ ಹೆಂಗ ಇಕಿ ಹಡದದ್ದ ಗೊತ್ತಾಗತದ?
ನಾ ನಮ್ಮಜ್ಜಿಗೆ
’ಇವನ್ನೇಲ್ಲಾ ಯಾರ ಕಂಡ ಹಿಡದಾರ‍್ವಾ ನಮ್ಮವ್ವಾ, ಬಸರ ಹೆಂಗಸ ಇದ್ದೋರ ಮತ್ತೇನೇನ ಮಾಡಬಾರದ ಹೇಳ’ ಅಂತ ಕೇಳಿದೆ.
ಅಕಿ ಹಂಗ ಭಾಳಿಷ್ಟ ಹೇಳಿದ್ಲು, ಅದರಾಗ ಇನ್ನೊಂದ ಮಜಾ ಕೇಳ್ರಿ ಇಲ್ಲೆ.
ಬಸರ ಹೆಂಗಸ ಇದ್ದೋರಕಡೆ ಉಳದ ಹೆಣ್ಣಮಕ್ಕಳ ತಲಿ ತೊರಸ್ಗೊಬಾರದ ಅಂತ, ಅಂದರ ಮೊದ್ಲಿನ ಕಾಲದಾಗ ಹೇನ, ಹೊಟ್ಟ (Head lice and dandruff) ಒರಿಸ್ಗೊಳ್ಳಿಕ್ಕೆ ಒಬ್ಬೊರಿಗೊಬ್ಬರ ತಲಿ ಕೊಟ್ಟ ಕೂಡ್ತಿದ್ದರಲಾ, ಅದನ್ನ ಮಾಡಬಾರದ ಅಂತ. ಯಾಕಂದರ ಬಸರ ಹೆಂಗಸ ಕಡೆ ಹೇನ ಒರಿಸ್ಕೊಂಡರ ಹೇನ ಜಾಸ್ತಿ ಆಗ್ತಾವಂತ. ಅದ ಬಾಣಂತಿ ಕಡೆ ತಲಿ ಹಿಕ್ಕಿಸಿಗೊಂಡರ ಹೇನ ಕಡಿಮಿ ಆಗ್ತಾವಂತ. ಏನಂತೀರಿ ಇದ್ದಕ್ಕ?
ಬಹುಶಃ ನಾ ನನ್ನ ಹೆಂಡ್ತಿ ಬಾಣಂತಿ ಇದ್ದಾಗ ತಲಿ ಕೊಟ್ಟಿದ್ದೆ ಕಾಣ್ತದ ನನ್ನ ತಲ್ಯಾಗಿನ ಹೇನ ಏನ ಕೂದ್ಲ ಸಹಿತ ಹೋಗ್ಯಾವ.
ಅಲ್ಲಾ ಇವೇಲ್ಲಾ ಎಷ್ಟ ಖರೇನೋ ಎಷ್ಟ ಸುಳ್ಳೋ ಆ ದೇವರಿಗೆ ಗೊತ್ತ. ನನಗ ನಮ್ಮಜ್ಜಿ ಹೇಳಿದ್ದ ನಾ ನಿಮಗ ಹೇಳಿದೆ ಇಷ್ಟ.
ಲಾಸ್ಟಿಗೆ ಇನ್ನೊಂದ ಸುದ್ದಿ ಕೇಳಿ ಬಿಡ್ರಿ ಇಲ್ಲೆ, ಇದ ನಮ್ಮಜ್ಜಿ ಹೇಳಿದ್ದಲ್ಲಾ ಮತ್ತ ನಮ್ಮ ದೇಶದ್ದೂ ಅಲ್ಲಾ.
ಪ್ರಾಚೀನ ಕಾಲದಾಗ ಈಜಿಪ್ತ ಒಳಗ pregnancy test ಹೆಂಗ ಮಾಡ್ತಿದ್ದರ ಅಂದರ ಅವರ ಯಾರದ ಟೆಸ್ಟ ಮಾಡಬೇಕಲಾ ಅವರ ಮೂತ್ರ ಗೋದಿ ಮತ್ತ ಬಾರ್ಲಿ ಮ್ಯಾಲೆ ಹಾಕತಿದ್ದರಂತ, ಮುಂದ ಒಂದ-ಎರಡ ದಿವಸಕ್ಕ ಗೋದಿ ಚಿಗತರ ಹೆಣ್ಣ ಹುಟ್ಟತದ, ಬಾರ್ಲಿ ಚಿಗತರ ಗಂಡ ಹುಟ್ಟತದ, ಹಂಗ ಎರಡು ಚಿಗಿಲಿಲ್ಲಾ ಅಂದರ not pregnant ಅಂತ ಡಿಕ್ಲೇರ್ ಮಾಡ್ತಿದ್ದರಂತ. ಇದಕ್ಕ ಏನಂತೀರಿ?
ಅಲ್ಲಾ ಇವೇಲ್ಲಾ ಪ್ರಾಚೀನ ನಂಬಿಕೆಗಳು ಮತ್ತು ಪದ್ಧತಿ ಬಿಡ್ರಿ, ಈಗ ವಿಜ್ಞಾನ ಮುಂದವರದದ, ಯಾರೂ ಹಿಂತಾವೇಲ್ಲಾ ನಂಬಗಿಲ್ಲಾ ಖರೆ ಆದರೂ ನಮ್ಮ ಹಳೇ ಮಂದಿ ವಿಚಾರ, ಆಚಾರ ಗೊತ್ತಿರಬೇಕ ಅಂತ ಇಷ್ಟ ಪುರಾಣ ಬರದಿದ್ದ.
ಇನ್ನ ಇಷ್ಟೇಲ್ಲಾ ಓದಿ ಎಲ್ಲರ ನಿಮ್ಮ ಮನಿ ಕಡೆ ಹಾವ ಬಂದರ ನಮ್ಮಕಿಗೆ ಕರದ-ಗಿರದರಿ. ಅಕಿದ ಈಗ ಎಲ್ಲಾ ಮುಗದದ ಮತ್ತ.