ಹೆಂಡ್ತಿ ಹಾದಿ ತಪ್ಪಿದರ ಅಂದರ ಹಂಗ ಹಾದಿ ತಪ್ಪೋದಲ್ಲಾ ಮತ್ತ, ನೀವೇಲ್ಲರ ಅಪಾರ್ಥ ಮಾಡ್ಕೋಂಡಿರಿ, ಹೆಂಡ್ತಿ ಹೊರಗ ಹೋದೊಕಿ ದಾರಿ ತಪ್ಪಿ ಮನಿಗೆ ಬರಲಿಲ್ಲಾ ಅಂದರ, ಇಲ್ಲಾ ನಾವ ಮನಿಗೆ ಬಂದಾಗ ಅಕಿ ಮನ್ಯಾಗ ಕಾಣಲಿಲ್ಲಾ ಅಂದರ ನಾವ ಭಾಳ ತಲಿಕೆಡಸಿಗೊಂಡ ಚಿಂತಿ ಮಾಡೋ ಅವಶ್ಯಕತೆ ಏನ ಇಲ್ಲಾ, ಅಕಿ ತವರ ಮನಿಗೆ ಹೋಗಿರತಾಳ ಅಂತ ಗ್ಯಾರಂಟಿ ಅನ್ನೋ ಅರ್ಥದಾಗ ನಾ ಬರದಿದ್ದ ಇಷ್ಟ. ಒಂಥರಾ ಈ ‘ಕತ್ತಿ ಹಾದಿ ತಪ್ಪಿದರ ಹಾಳ ಗ್ವಾಡಿ’ ಅಂತಾರಲಾ ಹಂಗ ‘ಹೆಂಡ್ತಿ ಹಾದಿ ತಪ್ಪಿದರ, ತವರ ಮನಿ’. ಹಂಗ ಹಾದಿ ತಪ್ಪಿ ಎಲ್ಲರ ಕಳಕೊಂಡರ ಕಳಕೊವಳ್ಳಾಕ ತೊಗೊ ಅಂತ ಸುಮ್ಮನ ಕೂಡಲಿಕ್ಕು ಬರಂಗಿಲ್ಲಾ. ಮತ್ತ ಆಜು-ಬಾಜು ಜನಾ ನಾವ ಏಲ್ಲೋ ಅಕಿಗೆ ಏನೋ ಮಾಡೇವಿ ಅಂತ ನಮ್ಮನ್ನ ಹಿಡದ ಒಳಗ ಹಾಕಸ್ತಾರ ಇಷ್ಟ. ಅದಕ್ಕ ಅಕಿ ತವರಮನಿಗೆ ಹೋಗ್ಯಾಳಿಲ್ಲೊ ಅಂತ ಅಕಿ ಹಂಗ ಹೋದಾಗ ಒಮ್ಮೆ ನಾವ ಫೋನ್ ಮಾಡಿ ಕನಫರ್ಮ್ ಮಾಡ್ಕೋಬೇಕು.
ಈ ಹೆಂಡತಿ ಮಾತ ಮಾತಿಗೆ ತವರ ಮನಿಗೆ ಹೋಗೋದು ಲೋಕಲ್ ತವರಮನಿ ಇದ್ದೊವರಿಗೆ ಇಷ್ಟ ಅಪ್ಲಿಕೇಬಲ್ ಮತ್ತ, ಹಂಗ ದೂರ ಯಾವುದರ ಊರಾಗ ತವರಮನಿ ಇದ್ದರ ‘ಪೀಡಾ ಹೋದರ ಹೋಗಲಿ ತೊಗೊ’ ಅಂತ ಹೆಂಡತಿನ್ನ ವರ್ಷಕ್ಕ ಎರಡ ಸರತೆ ಮೇ ಸೂಟ್ಯಾಗ ಒಮ್ಮೆ, ಅಕ್ಟೋಬರ್ ಸೂಟ್ಯಾಗ ಒಮ್ಮೆ ಕಳಿಸಿ ಅಕಿ ತವರಮನಿ ಚಟಾ ತಿರಸಬಹುದಿತ್ತ. ಆದ್ರ ಈ ಲೋಕಲ್ ತವರಮನಿ ಹೆಂಡಂದ್ರ ಯಾವಾಗ ತವರಮನಿಗೆ ಹೋಗ್ತಾರ, ಯಾವಾಗ ಅತ್ತಿಮನ್ಯಾಗ ಇರ್ತಾರ ಅನ್ನೋದ ಕಟಗೊಂಡ ಗಂಡಗು ಗೊತ್ತಾಗಂಗಿಲ್ಲಾ. ಈ ವಾರ ಇಲ್ಲೆ ಇದ್ದಳು ಅನ್ನೋದರಾಗ ಮುಂದಿನ ವಾರ ಅಲ್ಲೆ ಇರತಾಳ. ಒಟ್ಟ ಹೆಣ್ಣ ಮಕ್ಕಳಿಗೆ ತವರಮನಿ ಅಂದರ ಸಾಕ ಯಾವಾಗಲು ಒಂದ ಕಾಲ ಹೊಚ್ಚಲ ಹೊರಗ. ಹಂಗ ಲಗ್ನ ಆದಮ್ಯಾಲು ಗಂಡನ್ನೂ ಕಟಗೊಂಡ ತವರಮನಿ ಒಳಗ ಇರೋ ಪುಣ್ಯಾತಗಿತ್ಯಾರಿಗೆ ಈ ಲೇಖನಾ ಸಂಬಂಧ ಇಲ್ಲಾ. ನಿಮ್ಮ ಗಂಡಂದರ ಭಾಳ ಪುಣ್ಯಾ ಮಾಡ್ಯಾರ, ಹಂತಾ ಭಾಗ್ಯ ಎಲ್ಲಾ ಗಂಡಂದರಿಗೂ ಸಿಗಂಗಿಲ್ಲಾ ಆ ಮಾತ ಬ್ಯಾರೆ.
ಅಲ್ಲಾ ಹಂಗ ನಿಮ್ಮ-ನಿಮ್ಮ ಹೆಂಡಂದರ ತವರಮನಿಗೆ ಹೋಗೊದ ಬಿಡೋದು ನಿಮಗ ಬಿಟ್ಟ ವಿಷಯ ಬಿಡ್ರಿ, ಅದರ ಬಗ್ಗೆ ನಾ ತಲಿ ಕೆಡಸಿಕೊಳ್ಳೊದರಾಗ ಅರ್ಥ ಇಲ್ಲಾ, ನಾ ಹಂಗ ಬ್ಯಾರೆಯವರ ಹೆಂಡತಿ ತವರಮನಿಗೆ ಹೋದರೂ ತಲಿ ಕೆಡಸಿಗೊಳ್ಳೊದು ಅಂದರ ನನ್ನ ತಂಗಿ ಗಂಡನ ಹೆಂಡತಿ ತವರಮನಿಗೆ ಹೋದಾಗ ಇಷ್ಟ, ಯಾಕಂದರ ಅಕಿ ತವರಮನಿ ಅಂತ ಬಂದ ವಕ್ಕರಸೋದ ನಮ್ಮ ಮನಿನ ಅಲಾ ಅದಕ್ಕ. ಅದರಾಗ ಅಕಿದು ಲೊಕಲ್ ತವರಮನಿ, ಅತ್ತಿ ಮನ್ಯಾಗ ಹೇಳೊರು ಕೇಳೊರು ಬ್ಯಾರೆ ಯಾರು ಇಲ್ಲಾ. ಹಂಗ ನೋಡಿದ್ರ ಅಕಿ ನನ್ನ ಹೆಂಡತಿಗಿಂತಾ ಜಾಸ್ತಿ ತವರಮನಿಗೆ ಹೋಗ್ತಾಳ (ಅಂದರ ನಮ್ಮ ಮನಿಗೆ ಬರ್ತಾಳ) ಅಂದರು ತಪ್ಪ ಇಲ್ಲಾ. ಏನ್ ಮಾಡೋದ ಒಡಹುಟ್ಟಿದ ತಂಗಿ, ಅವ್ವಾ-ಅಪ್ಪ ಇರೋತನಕಾ ಬಂದು ಹೋಗಿ ಮಾಡ್ತಾಳ ಅಂತ ನಾನು ಸುಮ್ಮನಿದ್ದೇನಿ.
ಇನ್ನ ನನ್ನ ಹೆಂಡತಿ ಬಗ್ಗೆ ನಾ ಹೇಳಬೇಕಪಾ ಅಂತ ಅಂದ್ರ ನಮ್ಮಕಿದು ಲೊಕಲ್ ತವರಮನಿ ಏನರಿಪಾ. ಇಂವಾ ಮತ್ತ ತನ್ನ ಹೆಂಡತಿ ಸುತ್ತ ಗಂಟ ಬಿದ್ದನಲ್ಲಪಾ ಅನ್ನ ಬ್ಯಾಡರಿ, ಇನ್ನ ನಾ ನನ್ನ ಹೆಂಡ್ತಿ ತವರಮನಿಗೆ ಹೋಗೊದರ ಬಗ್ಗೆ ಬರೀಲಾರದ ಮತ್ತೊಬ್ಬರ ಹೆಂಡತಿ ತವರಮನಿಗೆ ಹೋಗೊದರ ಬಗ್ಗೆ ಬರೇಯೋದ ತಪ್ಪಾಗ್ತದ.
ನನ್ನ ಹೆಂಡತಿ ತವರಮನಿ ಇರೋ ನೇಕಾರ ನಗರಕ್ಕೂ ನಮ್ಮ ರೇಣುಕಾ ನಗರದ ಮನಿಗೂ ಒಂದ ಐದ ಕಿ.ಮಿ.ಡಿಸ್ಟನ್ಸ್, ಆಟೋದಾಗ ಹೋದರ ಒಂದ ೭೦ ರೂಪಾಯಿ ತೊಗತಾರ. ಹಂಗ ನಮ್ಮಕಿದ ಒಂದ ಸ್ವಲ್ಪ ತೂಕ ಜಾಸ್ತಿ ಅದ ಅಂತ ಕೆಲವೊಮ್ಮೆ ನೂರ ರೂಪಾಯಿ ತೊಗೊತಾರ. ಬಸ್ಸಿಗೆ ಹೋಗಬೇಕಂದ್ರ ಎರಡೆರಡ ಬಸ್ ಚೆಂಜ್ ಮಾಡಬೇಕು ಅದರಾಗ ಮೊನ್ನೆ ನಮ್ಮ ರೇಣುಕಾನಗರದ ಕಂಡಕ್ಟರ ಇಕಿ ಆಕಾರ ನೋಡಿ ಚಾಷ್ಟಿಗೆ “ಅಕ್ಕಾರ, ನೀವ ಇನ್ನಮ್ಯಾಲೆ ಬಸ್ಸಿನಾಗ ಅಡ್ಡ್ಯಾಡಬೇಕಾರ ಲಗೇಜ್ ಟಿಕೇಟ್ ಮಾಡಸಬೇಕು, ನಿಮ್ಮ ತೂಕ ಜಾಸ್ತಿ ಅದ” ಅಂತ ಎಲ್ಲಾರ ಮುಂದ ಅಂದಾನಂತ ಆವಾಗಿಂದ ಅಕಿ ನೂರ- ನೂರ ರೂಪಾಯಿ ಬಡದ ಆಟೊಕ್ಕ ಹೋಗೋದು. ಅಕಿದ ಏನ ಗಂಟ ಹೋಗೋದು ಬಿಡ್ರಿ, ರೊಕ್ಕ ನಂದ ಅಲಾ, ಅಕಿ ತವರಮನಿಯವರ ಏನ ಕೊಡಂಗಿಲ್ಲ. ಆದ್ರು ನನ್ನ ಹೆಂಡತಿಗೆ ತವರಮನಿ ವ್ಯಾಮೋಹ ಭಾಳ ಅದ. ಲಗ್ನಾಗಿ ಹದಿನೈದ ವರ್ಷ ಆದರೂ ಇವ್ವತ್ತಿಗೂ ತವರಮನಿ ಅಂದರ ಜಿಗದಾಡಕೋತ ಹೋಗ್ತಾಳ. ಅಲ್ಲಾ ತಾಯಿ ಪ್ರೇಮ ಅಂದರ ಹಂಗ ಇರತದ, ಹೆಣ್ಣಿನ ಕರಳ ಕೂಗು ನಿನಗೇನ ಗೊತ್ತಾಗಬೇಕು ದನಾಕಾಯೋವನ ಅಂತ ಸೆಂಟಿಮೆಂಟಲ್ & ಎಮೋಶನಲ್ ಡೈಲಾಗ್ ಹೊಡಿಬ್ಯಾಡರಿ. ನಾನೂ ಈ ಹದಿನೈದ ವರ್ಷದಾಗ ನನ್ನ ಹೆಂಡತಿದ ಕರಳಿಂದ ಇಷ್ಟ ಏನ್ ಎಲ್ಲಾದರ ಕೂಗು ಕೇಳೇನಿ. ಹಂಗ ನನ್ನ ಹೆಂಡತಿಗೆ ಹಗಲಗಲಾ ತವರಮನಿಗೆ ಹೋಗಲಿಕ್ಕೆ ನಮ್ಮ ಮನ್ಯಾಗ ಯಾರದು ಅಭ್ಯಂತರ ಇಲ್ಲಾ, ಆದ್ರ ಹಂಗ ಅಂತ ಹೇಳಿ ಮಾತ ಮಾತಿಗೆ ತವರಮನಿಗೆ ಹೋಗಿ ಕೂಡೋದ ಸರಿ ಅಲ್ಲ ಬಿಡ್ರಿ. ಆದ್ರ ಒಮ್ಮೇನು ಇಕಿ ಬ್ಯಾರೆ ವಿಷಯಕ್ಕ ಶಟಗೊಂಡ, ಜಗಳಾಡಿ ಹೋಗಿಲ್ಲ ಮತ್ತ, ಹಂಗ ಶಟಗೊಂಡ ಹೋಗಿದ್ದರ ‘ಅವನೌನ ಅಕಿನ್ನ ಎಲ್ಲೇ ರಮಿಸಿ ಕರೇಯೋದ ಬಿಡ’ ಅಂತ ಬಿಟ್ಟರ ಬಿಡ ಬಹುದಿತ್ತ. ಇಷ್ಟ ಸಲಾ ಹೋದರು, ಪ್ರೀತಿಲೆ ಹೋಗಿ ಪ್ರೀತಿಲೇನ ಬರತಾಳ. ಹಂಗ ಖರೆ ಹೇಳ್ಬೇಕಂದರ ನಾ ಜಗಾಳಾಡೋದು ಅಕಿ ಶಟಗೋಳೊದು ಎಲ್ಲಾ ಅಕಿ ತವರಮನಿಗೆ ಹೋಗೊ ವಿಷಯದಾಗ ಇಷ್ಟ.
ಲಗ್ನಾದ ಹೊಸ್ತಾಗಿ ವರ್ಷದಾಗ ಒಂದ ನಾಲ್ಕೈದ ಸರತೆ ತವರಮನಿಗೆ ಹೋಗಿ ಬಂದು ಮಾಡಬೇಕು, ಹಂಗ ತವರಮನಿ ನೆನಪ ಹೆಣ್ಣ ಮಕ್ಕಳಿಗೆ ಭಾಳ ಇರತದ, ಎಷ್ಟ ಅಂದರೂ ಹುಟ್ಟಿ ಬೆಳದಿದ್ದ ಮನಿ, ಒಪಗೊಂಡೆ. ಆದ್ರ ಮುಂದ ಅದ ಕಡಿಮೆ ಆಗಕೋತ ಹೋಗಿ ಅತ್ತಿ ಮನಿನ ನಮ್ಮ ಮನಿ ಅಂತ ಅನ್ನೋ ಭಾವನೆ ಬರಬೇಕಲಾ? ಇಲ್ಲಾ, ಅದನ್ನ ಕೇಳ ಬ್ಯಾಡರಿ. ಇವತ್ತು ಮಾತಾಡಬೇಕಾರ ‘ನಾವ ನಮ್ಮ ಮನ್ಯಾಗ ಹಂಗ ಮಾಡ್ತೇವಿ, ಇಲ್ಲಿಗತೆ ಅಲ್ಲಾ’ ಅಂತನ ಅಂತಾಳ. ನಮ್ಮ ಮನ್ಯಾಗ ಅಂದರ ತವರಮನಿ ಅಂತ ತಿಳ್ಕೋಬೇಕ ಮತ್ತ, ಗಂಡನ ಮನಿ ಅಲ್ಲಾ. ಏನ್ಮಾಡ್ತೀರಿ ಈ ಹೆಣ್ಣ ಮಕ್ಕಳನ್ನ, ಆ ತವರಮನಿಯವರ ಇವರಿಗೆ ಏನರ ಮಾಟಾ ಮಾಡಿಸಿರ್ತಾರೋ ಏನೋ?
ಎಲ್ಲಾರ ಹಂಗ ನನ್ನ ಹೆಂಡತಿನೂ ಲಗ್ನಾದ ಹೋಸ್ತಾಗಿ ತವರಮನಿಗೆ ಹೋಗಿ ಬಂದು ಮಾಡ್ತಿದ್ದಳು. ಖರೆ ಹೇಳ್ಬೇಕಂದರ ಮೊದ್ಲ ಒಂದ್ಯಾರಡ ವರ್ಷ ರೇಣುಕಾನಗರ ಟು ನೇಕಾರನಗರ ಬಸ್ಸ ಪಾಸ ತಗಸಿದ್ಲು ಅಂದ್ರು ತಪ್ಪ ಇಲ್ಲಾ, ಆವಾಗ ನಾನೂ ತಪ್ಪ ತಿಳ್ಕೋತಿದ್ದಿಲ್ಲಾ ಆ ಮಾತ ಬ್ಯಾರೆ. ನಂದ ಲಗ್ನಾಗಿ ಇನ್ನೇನ ಸಂಸಾರ ಶುರು ಆತು ಅನ್ನೋದರಾಗ ಪುಷ್ಯ್ ಮಾಸ ಬಂತು. “ಪುಷ್ಯ್ ಮಾಸದಾಗ ಮಾವನ ಮಾರಿ ನೋಡಬಾರದು, ನಿನ್ನ ಹೆಂಡತಿನ್ನ ಒಂದ ತಿಂಗಳ ಕಳಸಿ ಬಿಡಪಾ” ಅಂತ ನಮ್ಮವ್ವಂದ ಹುಕುಮ ಆತು. ಅಲ್ಲಾ, ಜನೇವರಿ ಥಂಡಿ ತಿಂಗಳ, ಹಂಗ ಬಿಟ್ಟ ಇರಲಿಕ್ಕೆ ಆಗಂಗಿಲ್ಲಾ, ಅದರಾಗ ಈಗ ಹಸಿ ಮೈ ಇದ್ದೋವರು ಅಂತ ಅಂದರೂ ನಮ್ಮವ್ವ ಕೇಳಲಿಲ್ಲಾ. ನಾ ನಮ್ಮಪ್ಪನ್ನ ಸುಮ್ಮನ ಒಂದ ತಿಂಗಳ ನಮ್ಮವ್ವನ ಜೊತಿ ಮಾಡಿ ಕಾಶಿ ಯಾತ್ರಕ್ಕ ಕಳಸಿ ಬಿಟ್ಟರಾತೂ ಅಂತ ಅನ್ಕೊಂಡಿದ್ದೆ ಆದ್ರ ಖರ್ಚ ಭಾಳ ಆಗ್ತದ ಬಿಡ, ಅದರಾಗ ನಾ ಮೊನ್ನೆ-ಮೊನ್ನೆನ ಹನಿಮೂನಗೆ ಹೋಗಿ ಇಪ್ಪತ್ತ ಸಾವಿರ ರೂಪಾಯಿ ಖರ್ಚ ಮಾಡ್ಕೊಂಡ ಬಂದೇನಿ ಎಲ್ಲೀ ಕಾಶಿಯಾತ್ರಿ, ಅಂವಾ ಇನ್ನೂ ಗಟ್ಟಿ ಇದ್ದಾನ ಮುಂದ ನೋಡಿದ್ರ ಆತು ಅಂತ ಸುಮ್ಮನ ಬಿಟ್ಟೆ. ಕಡಿಕೆ ಹೆಂಡತಿನ್ನ ತವರಮನಿಗೆ ಕಳಸಿ, ನಾನ ತಡ್ಕೋಳ್ಳಿಕ್ಕೆ ಆಗಲಾರದಾಗ ಒಮ್ಮೆ ನಮ್ಮ ಅತ್ತಿಮನಿಗೆ ಹೋಗಿ-ಬಂದು ಮಾಡ್ತಿದ್ದೆ. ಹೊಸಾ ಹೆಂಡತಿ ಅಲಾ, ಮಾರಿ ನೋಡಲಿಲ್ಲಾಂದ್ರ ತಡ್ಕೋಳ್ಳಿಕ್ಕೆ ಆಗತಿದ್ದಿದ್ದಿಲ್ಲಾ. ಮುಂದ ನನ್ನ ಹಣೇಬರಹಕ್ಕ ನಾ ಲಗ್ನಾ ಮಾದ್ಕೊಂಡಿದ್ದ ಮುಂದಿನ ವರ್ಷನ ಅಧಿಕ ಮಾಸ ಬಂತು, ನಾ ಅಧಿಕ ಮಾಸ ಲೀಪ್ ಇಯರದಾಗ ಇಷ್ಟ ಬರತದ ಅಂತ ೨೦೦೦ದ ಎಂಡಿಗೆ ಲಗ್ನಾ ಮಾಡ್ಕೋಂಡರ, ೨೦೧೧ ಮೇ ದಾಗ ಅಧಿಕ ಮಾಸ ಬಂತ. ಇನ್ನ ಅಧಿಕ ಮಾಸದಾಗ ಒಂದ ತಿಂಗಳ ಗಂಡನ್ನ ಮಾರಿ ನೋಡಬಾರದು ಅಂತ ಮತ್ತ ತವರಮನಿಗೆ ಹೋಗಲಿಕ್ಕೆ ತಯಾರಾದ್ಲು. ನಾ ಅಂದೆ ” ಮಾರಿ ಇಷ್ಟ ನೋಡಬಾರದ ಹೌದಲ್ಲ, ಅದಕ್ಯಾಕ ನೀ ತವರಮನಿಗೆ ಹೋಗ್ತಿ ಬಿಡ, ನಾ ಹೆಂಗಿದ್ದರು ಒಂದ ಮುಂಜಾನೆ ಹೋದನೆಂದರ ಕತ್ತಿಗತೆ ದುಡದ ಬರೋದ ರಾತ್ರಿನ, ಶಾಸ್ತ್ರಕ್ಕ ನಾ ಮೂರ ದಿವಸ ರಾತ್ರಿ ಮಾರಿ ಒಂದ ನೋಡಲಾರದಂಗ ಇದ್ದ ಇರತೇನಿ, ಅಷ್ಟು ನನ್ನ ಮ್ಯಾಲೆ ನಿನಗ ವಿಶ್ವಾಸ ಇಲ್ಲಾಂದ್ರ ನೀ ಬೇಕಾರ ಅವ್ವನ ಜೋತಿ ಒಳಗ ಮಲ್ಕೊ” ಅಂತ ಅಂದರು ಕೇಳಲಿಲ್ಲ. ತವರಮನಿಗೆ ಮತ್ತ ಜಿಗದ ಬಿಟ್ಟಳು. ಮುಂದ ಒಂದ ತಿಂಗಳಿಗೆ ಆಷಾಡ ಮಾಸ, ಅತ್ತಿ ಮಾರಿ ನೋಡ ಬಾರದು ಅಂತ ಹೊಂಟ ನಿತ್ತಳು, ನಾ ಅಂದೆ.
“ದಣೆಯಿನ ಲಗ್ನಾಗಿ ಒಂದ ಆರ ತಿಂಗಳಾಗಿಲ್ಲಾ, ನೀ ಹಿಂಗ ಒಂದ ತಿಂಗಳ ಬಿಟ್ಟ ಒಂದ ತಿಂಗಳ ಏನೇನರ ನೇವಾ ಹೇಳಿ ತವರಮನಿಗೆ ಹೋದರ ಹೆಂಗ, ನಮ್ಮವ್ವನ್ನ ಎಲ್ಲರ ಮೂರ ದಿವಸ ಶಾಸ್ತ್ರಕ್ಕ ತವರಮನಿಗೆ ಕಳಸೋಣಂತ, ನಮ್ಮಪ್ಪ ಎನ ನಮ್ಮವ್ವನ ಬಿಟ್ಟ ಇದ್ದ ಇರತಾನ, ಅವನ ಲಗ್ನಾಗಿ ಭಾಳ ವರ್ಷಾತು, ನೀ ಏನ್ ತವರಮನಿಗೆ ಹೋಗಬ್ಯಾಡ, ನನ್ನ ಜೊತಿ ಲಗ್ನಾ ಆದೊವರದು ತಿರಗಿ ಕಳ್ಳ ಕುಬಸ ಆಗಲಿಕತ್ತಾವ, ನಂಬದ ಇನ್ನೂ ಹರಾ ಇಲ್ಲಾ-ಶಿವಾ ಇಲ್ಲಾ” ಅಂದ್ರು ಕೇಳಲಿಲ್ಲಾ. “ಅದೇನ ವರ್ಷಾ-ವರ್ಷಾ ಹೋಗೊದ ಇರತದ ಏನ್, ಹಂಗ ನಿಯಮ, ಸಂಪ್ರದಾಯ ತಪ್ಪಸ ಬಾರದು, ಅದರಾಗ ನನ್ನ ಹಣೇಬಾರಕ್ಕ ನನಗ ಅತ್ತಿ-ಮಾವ ಇಬ್ಬರು ಇದ್ದದ್ದ ಮನಿಗೆ ನಮ್ಮಪ್ಪ ಕೊಟ್ಟರ ನಂದೇನ ತಪ್ಪ” ಅಂತ ಪೂರ್ತಿ ಒಂದ ತಿಂಗಳನ ತವರಮನಿಗೆ ಹೋದ್ಲು. ” ಹೌದ ಬಿಡವಾ, ನಿಂಗ ಅತ್ತಿ-ಮಾವಾ ಇಬ್ಬರು ಇದ್ದದ್ದ ಮನಿ ಸಿಕ್ಕದ್ದ ನಂದ ತಪ್ಪು” ಅಂತ ನಾ ಸುಮ್ಮನಾದೆ. ನಂಗ ಅನಸ್ತದ ‘ಮಗಾ ಮದುವಿ ಆದ ಮ್ಯಾಲೆ ಅವ್ವ- ಅಪ್ಪನ್ನ ಬಿಟ್ಟ ಬ್ಯಾರೆ ಮನಿ ಮಾಡಿದಾ’ ಅಂತಾರಲಾ ಅದಕ್ಕ ಇದೂ ಒಂದ ಕಾರಣ ಇದ್ದರು ಇರಬಹುದು ಅಂತ.
ಇರಲಿ, ಆಮ್ಯಾಲೆ ಬರತ-ಬರತ ನನ್ನ ಹೆಂಡತಿಗೆ ತವರ ಮನಿಗೆ ಹೋಗಲಿಕ್ಕೆ ನೆವಾ ಕಡಿಮಿ ಆಗಲಿಕತ್ವು. ಕಡಿಕೆ
“ರ್ರಿ, ನಾ ಹೊರಗ ಆಗೇನಿ, ಸುಮ್ಮನ ಮೂರ ದಿವಸ ಇಲ್ಲೆ ಇದ್ದರ ಏನ ಮಾಡೋದು, ನಾ ತವರಮನಿಗೆ ಹೋಗಿ ಬರ್ತೇನಿ” ಅಂತ ಶುರು ಮಾಡಿದ್ಲು. ನಾ “ಇಲ್ಲ ನೋಡಿಲ್ಲೇ, ನಾವು ವೈಷ್ಣವರಗತೆ ಹಂಗೆಲ್ಲಾ ತಂಬಗಿ, ತಾಟ, ಚಾಪಿ ಕೊಟ್ಟ ಮುಲ್ಯಾಗ ಕೂಡಸಂಗಿಲ್ಲಾ, ನಮಗೆಲ್ಲಾ ನಡಿತದ, ಸುಮ್ಮನ ಬಾಯಿಮುಚಗೊಂಡ ಮನಿ ಕೆಲಸಾ ಮಾಡ್ಕೋತ ಇಲ್ಲೆ ಇರು” ಅಂತ ಅಂದೆ. “ಯಾಕ, ಆ ಮನಿ ಕೆಲಸಾ ಮಾಡೋಕಿ ತಿಂಗಳಿಗೆ ಮೂರ ದಿವಸ ರಜಾ ಹಾಕಿದರ ಸುಮ್ಮನ ಇರ್ತೀರಿ, ನಂಗ ಒಂದ ಮೂರ ದಿವಸ ತವರ ಮನಿಗೆ ಹೋಗಿ ಬರ್ತೇನಿ ಅಂದರ ನಾ ಮತ್ತ ವಾಪಸ ಬರ್ತೇನೋ ಇಲ್ಲೋ ಅನ್ನೊರಂಗ ಯಾಕ ಮಾಡ್ತೀರಿ, ನಮಗು ಆಸರಕಿ, ಬ್ಯಾಸರಕಿ ಇರತೋದ ಇಲ್ಲೋ, ಹೆಂಡತಿ ಅಂದರ ಗಾಣದಾಗಿನ ಎತ್ತ ಅಂತ ತಿಳ್ಕೋಂಡೀರಿ, ನಿಮ್ಮ ಹಣೆಬರಹಕ್ಕ ನಾವ ಎಷ್ಟ ದುಡದರು ಕಡಿಮೆನ, ನಿಮ್ಮ ಕಣ್ಣಾಗ ಹೆಂಡತಿ ಕಾಲಾಗಿನ ಕಸಾ ಆಗ್ಯಾಳ, ನಮನ್ನ ನೀವು ಜೀತದಾಳ ಅಂತ ತಿಳ್ಕೋಂಡಿರಿ….” ಅಯ್ಯಯ್ಯ….ಅಕಿ ಮಾತ ಕೇಳಿ ನಾ ಅಕಿ ಬಾಯಿ ಮುಚ್ಚಿ ಎತಗೊಂಡ ಹೋಗಿ ಬೆಡರೂಮನಾಗ ಡಬ್ ಹಾಕೋದ ಒಂದ ಬಾಕಿ ಉಳದಿತ್ತ, ಅಷ್ಟ ಮಾತಾಡಿದಳು. ಅದ ಲಾಸ್ಟ ಮುಂದ ಎಂದು ನಾ ಅಕಿ ತವರಮನಿ ಅಂದಾಗ ಇಲ್ಲಾ ಅಂದಿಲ್ಲಾ, ಅವನೌನ ಒಂದ ಎರಡನೂರ ರೂಪಾಯಿ ಬಡದ ಆಟೋದವಂಗ ನಾನ ಫೋನ ಮಾಡಿ ಹೋಗಿ ಒಗದ ಬಾ ಅಂತ ಹೇಳಿ ಕಳಸ್ತೇನಿ. ಏನ ಮಾಡ್ತೀರಿ?
ಇವತ್ತೀಗೂ ನನ್ನ ಹೆಂಡತಿ ತವರಮನಿ ಅಂದರ ಬಿದ್ದ ಸಾಯಿತಾಳ, ಈಗ ಏನೋ ಹುಡುಗರು ದೊಡ್ಡವ ಆಗ್ಯಾವ ಸಾಲಿ-ಪಾಲಿಗೆ ಹೋಗ್ತಾವ ಅಂತ ಸ್ವಲ್ಪ ಕಡಿಮೆ ಆಗೇದ, ಆದ್ರ ಈಗೂ ಕೆಲವೊಮ್ಮೆ ತಡ್ಕೋಳ್ಳಿಕ್ಕೆ ಆಗಲಿಲ್ಲಾಂದ್ರ ಮಕ್ಕಳ ಸಾಲಿ ಬಿಡಸಿ ಆದರೂ ಅಡ್ಡಿಯಿಲ್ಲಾ ತವರಮನಿಗೆ ಹಣಕಿ ಹಾಕಿ ಬರ್ತಾಳ. ನಮ್ಮ ಮಕ್ಕಳ ಸಾಲ್ಯಾಗ ಲೊವೆಸ್ಟ ಅಟೆಂಡನ್ಸ್ ನನ್ನ ಮಕ್ಕಳದ್ವ, ಹಂಗ ಕರೆಸ್ಪಾಂಡಿಂಗ್ಲಿ ಮಾರ್ಕ್ಸ್ ತೊಗಂಡಿರ್ತಾವ ಆ ಮಾತ ಬ್ಯಾರೆ. ನಾ ಅಂತು ತಾಯಿ ಮಕ್ಕಳು ಏನರ ಮಾಡ್ಕೋಳಿ ಬಿಡ ಅಂತ ಕೈ ಬಿಟ್ಟ ಬಿಟ್ಟೇನಿ. ನಾ ಹಂಗ ಅಕಿ ಕುಬಸಕ್ಕ, ಹಡಿಲಿಕ್ಕೆ, ಹಡದ ಮ್ಯಾಲೆ ಕತ್ತಲ ಕೋಣೆ ನೋಡಲಿಕ್ಕೆ, ಅಕಿ ತವರ ಮನ್ಯಾಗ ಫಂಕ್ಶನ್ ಇದ್ದಾಗ ವಾರಗಟ್ಟಲೇ ಹೋಗಿದ್ದು ಎಲ್ಲಾ ಬರಕೋತ ಹೋದರ ಒಂದ ಕಾದಂಬರಿನ ಆಗತದ ಬಿಡ್ರಿ.
ಆದ್ರ ಒಂದ ಮಾತ ಖರೆ, ನನಗ ನನ್ನ ಹೆಂಡತಿ ಮಕ್ಕಳನ್ನು ಕರಕೊಂಡ ತವರಮನಿಗೆ ಹೋದಾಗ, ಅದು ಏನರ ಸಂಡೆ ಇತ್ತಂದರ ಮನ್ಯಾಗ ಇರಲಿಕ್ಕೆ ಇಷ್ಟ ಆರಾಮ ಅನಸ್ತದ ಅಲಾ, ಆಹಾ, ವರ್ಣಿಸಲು ಅಸಾಧ್ಯ, ಹೇಳೋರ ಇಲ್ಲಾ ಕೇಳೊರ ಇಲ್ಲಾ, ನಾ ಯಾವಾಗ ಬೇಕ ಆವಾಗ ಏಳೋದ, ಯಾವಗರ ತಿನ್ನೋದ, ಏನ ಬೇಕ ಅದ ಮಾಡಬಹುದು. ಮನಿ ಅಂಬೋದು ಶಾಂತನೀಕೇತನದಷ್ಟ ಶಾಂತವಾಗಿ ನಾ ಪ್ರಶಾಂತವಾಗಿ ಇರತೇನಿ. ನಾ ಒಂದಿಷ್ಟ ಒಳ್ಳೋಳ್ಳೆ ಲೇಖನ ಬರದಿದ್ದ ಅಕಿ ತವರಮನಿಗೆ ಹೋದಾಗ ಮತ್ತ. ಹಂಗ ನಾ ಬರದಿದ್ದ ಮೊಸ್ಟಲೀ ಎಲ್ಲಾ ಲೇಖನಾ ಛಲೋನ ಅವ ಅಂತ ಅಂದರ ಆವಾಗೇಲ್ಲಾ ನನ್ನ ಹೆಂಡತಿ ತವರಮನಿಗೆ ಹೋಗಿದ್ಲು ಅಂತ ತಿಳ್ಕೋರ್ರಿ. ಹಂಗ ನಿಮ್ಮ ಹೆಂಡತಿನೂ ತವರಮನ್ಯಾಗ ಇದ್ದಾಗ ನೀವು ನನ್ನಂಗ ಆರಾಮ ಇರ್ತೀರಿ ಅಂದರ ತಲಿ ಕೆಡಸಿಗೊಳ್ಳಿಕ್ಕೆ ಹೋಗ ಬ್ಯಾಡರಿ, ಅವರ ಕಾಯಮ್ ತವರ ಮನ್ಯಾಗ ಇದ್ರು ತಪ್ಪೆನ ಇಲ್ಲ. ಇದು ನನ್ನ ಅನಿಸಿಕೆನ ಮತ್ತ, ನೀವೇಲ್ಲರ ನಾ ಹೇಳಿನಿ ಅಂತ ನಿಮ್ಮ ಹೆಂಡತಿನ್ನ ಕಾಯಮ ತವರಮನಿಗೆ ಕಳಿಸಿ-ಗಿಳಸಿರಿ.
ಇದ ಭಾಳ ಆತ ಬಿಡ, ಏನ್ ಜಗತ್ತಿನಾಗ ಯಾರ ಹೆಂಡಂದ್ರ ತವರಮನಿಗೆ ಹೋಗಂಗಿಲ್ಲಾ ಬರೆ ನಿನ್ನ ಹೆಂಡತಿ ಇಷ್ಟ ಹೋಗ್ತಾಳ ಅನ್ನೊರಂಗ ಬರದಿ ಅನ್ನ ಬ್ಯಾಡರಿ, ನನ್ನ ಅನುಭವಾ ನಾ ಬರದೇನಿ. ನಿಮ್ಮ ಅನುಭವಾ ನೀವ ಬರೀರಿ, ಯಾರ ಬ್ಯಾಡ ಅಂದಾರ. ಇನ್ನ ಬರೇ ನನ್ನ ಹೆಂಡತಿ ಬಗ್ಗೆ ಬರದ ನಮ್ಮವ್ವನ ಬಗ್ಗೆ ಬರಿಲಿಲ್ಲಾಂದ್ರ ನನ್ನ ಹೆಂಡತಿ ಸಿಟ್ಟಿಗೆದ್ದ ಮತ್ತ ತವರಮನಿಗೆ ಹೋದರು ಹೋಗಬಹುದು ಅದಕ್ಕ ಒಂದ ನಾಲ್ಕ ಅಕ್ಷರ ನಮ್ಮವ್ವನ ಬಗ್ಗೆನು ಬರದ ಬಿಡ್ತೇನಿ.
ಹಂಗ ನಮ್ಮವ್ವಂದು ಲಗ್ನಾಗಿ ಲಗ-ಬಗ ನಲವತ್ತೈದ ವರ್ಷಾತ. ಆದರ ಏನೋ ಪುಣ್ಯಾಕ್ಕ ಅಕಿ ಲಗ್ನಾದ ಮ್ಯಾಲೇನೂ ಕೆಲಸಕ್ಕ ಹೋಗ್ತಿದ್ದಳು ಅಂತ ಅಕಿಗೆ ಅಷ್ಟ ತವರಮನಿಗೆ ಹೊಗಲಿಕ್ಕೆ ಪುರಸೊತ್ತ ಇರತಿದ್ದಿಲ್ಲಾ. ಆದರ ಈಗ ಒಂದ ಹತ್ತ ವರ್ಷದಿಂದ ನಮ್ಮವ್ವನ ತವರಮನಿ ನಮ್ಮ ಮನಿಯಿಂದ ಮೂರ ಮನಿ ದಾಟಿದರ ಬರತದ. ಅದರಾಗ ಸಾಲದ್ದಕ್ಕ ನಮ್ಮಜ್ಜಿ ಇನ್ನೂ ತಾಸ ಗಟ್ಟಲೇ ಕಟ್ಟಿಮ್ಯಾಲೆ ಕೂತ ಹರಟಿ ಹೊಡಿಯೋಷ್ಟ ಗಟ್ಟಿ ಇದ್ದಾಳ, ಹಿಂಗಾಗಿ ನಮ್ಮವ್ವಾ ದಿವಸಾ ಸಂಜಿಗೆ ೭ ರಿಂದ ೮ ತವರಮನಿಗೆ ಹೋಗಿ ನಮ್ಮಜ್ಜಿ ಜೊತಿ ಹರಟಿ ಹೊಡದ, ಒಂದಿಷ್ಟ ನಮ್ಮಜ್ಜಿ ಬಾಯಿಲೆ ಅಕಿ ಮಗಾ-ಸೊಸಿದ ಛಾಡಾ ಕೇಳಿ, ತನ್ನ ಬಾಯಿಲೆ ತನ್ನ ಮಗಾ-ಸೊಸಿದ ಛಾಡಾ ಹೇಳಿ ಬಂದರ ರಾತ್ರಿ ಊಟ ಹೋಗೋದು. ನಮ್ಮ ಮನಿಗೆ ಯಾರರ ನಮ್ಮವ್ವನ ಭೆಟ್ಟಿ ಆಗಲಿಕ್ಕೆ ಆ ಟೈಮನಾಗ ಬಂದರ ಅವರ ಸೀದಾ ನಮ್ಮಜ್ಜಿ ಮನಿಗೆ ಹೋಗ್ತಾರ, ಅವರಿಗೆ ಗ್ಯಾರಂಟಿ ಇರತದ ನಮ್ಮವ್ವ ಅಲ್ಲೇ ಇರತಾಳ ಅಂತ. ಇನ್ನ ಅರವತ್ತೆಂಟ್ ತುಂಬಿ ಅರವತ್ತೊಂಬತ್ತರಾಗ ಬಿದ್ದ ನಮ್ಮವ್ವನ ತಾ ಮೊಮ್ಮಕ್ಕಳನ್ನ ಕಂಡ್ರು ತನ್ನ ತವರಮನಿ ಹುಚ್ಚ ಬಿಟ್ಟಿಲ್ಲಾ ಅಂದ್ರ ಅಕಿ ಮುಂದ ಪಾಪ ನನ್ನ ಹರೇದ ಹೆಂಡತಿ ಏನ ಅಂತೇನಿ. ಹೋಗಲಿ ಬಿಡ್ರಿ ಅಕಿ ಎನರ ಹಾಳಗುಂಡಿ ಬಿಳವಳ್ಳಾಕ, ಆ ಹಾಳಗುಂಡಿ ಅಕಿ ತವರಮನಿನರ ಯಾಕ ಆಗವಲ್ತಾಕ……
ಸಾಕ, ಸದ್ಯೇಕ ಇಲ್ಲಿಗೆ ಮುಗಸ್ತೇನಿ, ಮತ್ತೇಲ್ಲರ ನನ್ನ ಹೆಂಡತಿ ಇದನ್ನ ಸಿರಿಯಸ್ ತೊಗೊಂಡ ಕಾಯಮ್ ತವರಮನಿಗೆ ಹೋಗಿ ಕೂತರ ನಾ ಏನ್ಮಾಡಬೇಕು. ಅಲ್ಲಾ ಹಂಗ ಅಕಿ ಹೋಗಿ ಕಾಯಮ್ ತವರಮನಿ ಒಳಗ ಕೂತರ ನಾ ಒಂದ ದೊಡ್ಡ ಲೇಖಕ ಆಗಿ, ಜ್ಞಾನಪೀಠ ಅವಾರ್ಡ ಸಿಕ್ಕರೂ ಸಿಗಬಹುದು. ಆದ್ರ ಅದ ನನಗ ಬ್ಯಾಡ, ನಂಗ ನನ್ನ ಹೆಂಡತಿ ಅದರಕಿಂತ ಇಂಪಾರ್ಟೆಂಟ್. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಅಂತಾರಲಾ ಹಂಗ ಅಕಿ ವಾರಕ್ಕ ಮೂರ ಸರತೆ ತವರಮನಿಗೆ ಹೋದರು ಅಡ್ಡಿಯಿಲ್ಲಾ, ನನ್ನ ಜೊತಿನ ಇರಬೇಕು ಯಾಕಂದರ ‘ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲಾ’ ಅಂತ ಹೇಳ್ತಾರ, ಹಿಂಗಾಗಿ ನನ್ನ ಈ ಸುಡಗಾಡ ಜೀವನಕ್ಕ ಅಕೀನ ‘ಪ್ರೇರಣೆ’.