ಹಿಂಗ ಮದ್ವಿದ ಒಂದನೇ ವರ್ಷದ್ದ ಅನಿವರ್ಸರಿ ಮುಗದ ಒಂದ ಎರಡ ದಿವಸ ಆಗಿತ್ತ, ಒಂದ ದಿವಸ ಮುಂಜಾನೆ ನಾ ಆಫೀಸಗೆ ಹೋಗ ಬೇಕಾರ ನಮ್ಮಕಿ ಒಮ್ಮಿಂದೊಮ್ಮಿಲೇ
’ರ್ರಿ…ಈ ವರ್ಷ ಹನಿಮೂನಗೆ ಎಲ್ಲೆ ಹೋಗೋದ?’ ಅಂತ ಅಂದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ.
’ಲೇ..ಹನಿಮೂನ ಜೀವನದಾಗ ಒಂದ ಸರತೆ, ಅದು ಲಗ್ನ ಇದ್ದಂಗ, ವರ್ಷಾ ವರ್ಷಾ ಇರಂಗಿಲ್ಲ. ವರ್ಷಕ್ಕೊಮ್ಮೆ ಬರೋದ ಅನಿವರ್ಸರಿ ಇಷ್ಟ ಅದು ಎಲ್ಲಿ ತನಕ ಅನಿವರ್ಸರಿ ನೆನಪ ಇರತದ ಅಲ್ಲಿ ತನಕ’ ಅಂತ ನಾ ಜೋರ ಮಾಡಿದರ
’ಏ..ಅದ ಹೆಂಗ, ಹೋದ ವರ್ಷ ಹೋಗಿ ಈ ವರ್ಷ ಹೋಗಲಿಲ್ಲಾ ಅಂದರ ದ್ವಿತೀಯ ವಿಘ್ನ ಆಗ್ತದ, ಶಾಸ್ತ್ರಕ್ಕ ನಾಲ್ಕ ದಿವಸ ಆಗಲಿ ಎಲ್ಲೇರ ಹೋಗೊದ’ ಅಂತ ಗಂಟ ಬಿದ್ಲು.
ಅಕಿ ದ್ವಿತೀಯ ವಿಘ್ನ ಆಗ್ತದ ಅಂದ ಕೂಡಲೇ ಪಾಪ ನಮ್ಮವ್ವ ಗಾಬರಿ ಆಗಿ ಏನೋ ಛಲೋ ಕೆಲಸಾ ಮಾಡ್ಕಿಕ್ಕೆ ಹೊಂಟಾರ ಇಬ್ಬರು ಅಂತ ತಿಳ್ಕೊಂಡ
’ಪಾಪ, ಹುಡುಗಿ ಇಷ್ಟ ಅವಚಗೊಳ್ಳಿಕತ್ತದ, ಅದಕ್ಕೂ ಆಸರಕಿ-ಬ್ಯಾಸರಕಿ ಇರ್ತದ ಇಲ್ಲ, ಹೋಗಿ ಬಾ ಒಂದ ನಾಲ್ಕ ದಿವಸ’ ಅಂದ್ಲು.
ಅಲ್ಲಾ ಆವಾಗ ಇನ್ನೂ ಅತ್ತಿ-ಸೊಸಿದ ಲವ್ ಲವ್ ನಮ್ಮ ಗಂಡಾ- ಹೆಂಡ್ತಿಗಿಂತಾ ಜೋರ್ ಇತ್ತ ಆ ಮಾತ ಬ್ಯಾರೆ.
ಹಂಗ ನಾ ನೋಡಿದರ ಒಂದನೇ ಹನಿಮೂನಗೆ ಸಾಲಾ-ಸೂಲಾ ಮಾಡಿ ಜೀವನದಾಗ ಒಮ್ಮೆ ಹೋಗೊದ ಅಂತ ಮದ್ವಿ ಲೋನಗೆ ಟಾಪ್ ಅಪ್ ಮಾಡಿಸಿ ಹನಿಮೂನ್ ಲೋನ್ ತೊಗೊಂಡ ಹದಿನೈದ ದಿವಸ ಗಟ್ಟಲೇ ಆಫೀಸನಾಗ ಪೇ ಕಟ್ ರಜಾ ಬ್ಯಾರೆ ಹಾಕಿ ಅರ್ಧಾ ಕೇರಳಾ ತೋರಿಸಿಗೊಂಡ ಬಂದಿದ್ದೆ, ಇಕಿ ಏನ ಈ ವರ್ಷ ಮತ್ತ ಗಂಟ ಬಿದ್ಲಲಾ ಅಂತ ಅನಸಲಿಕತ್ತ.
ಇನ್ನ ಆವಾಗಿನ ಕಾಲದಾಗ ಕಾಮನ್ ಆಗಿ ಹನಿಮೂನ್ ಸ್ಪಾಟ್ಸ್ ಅಂದರ ಮೈಸೂರ್- ಊಟಿ- ಕೊಡೈಕೆನೆಲ್. ಅವ ಇಷ್ಟ ಫೇಮಸ್ ಆಗಿದ್ವ ಅಂದರ ಪ್ರತಿ ಊರಾಗೂ ಒಂದಿಲ್ಲಾ ಒಂದ ಟೂರಿಸ್ಟ ಕಂಪನಿಯವರ ಈ ಊರಗೊಳಿಗೆ ಹನಿಮೂನ ಪ್ಯಾಕೇಜ್ ಇಟ್ಟಿರ್ತಿದ್ದರ. ಮತ್ತ ಇಷ್ಟ ಅಗದಿ ಚೊಕ್ಕ ಎಲ್ಲಾ ಆರೆಂಜಮೆಂಟ್ ಮಾಡಿರ್ತಿದ್ದರ ಅಂದರ ಹುಡುಗಾ ಹುಡಗಿ ಹನಿಮೂನ್ ಬಿಟ್ಟ ಬ್ಯಾರೆ ಯಾವದಕ್ಕೂ ತಲಿಕೆಡಸಿಕೊಳ್ಳೊ ಹಂಗ ಇರ್ತಿದ್ದಿಲ್ಲಾ ಅಷ್ಟ ವ್ಯವಸ್ಥಾ ಮಾಡಿರ್ತಿದ್ದರ. ಒಂದ ಹೋಟೆಲ್ ರೂಮನಿಂದ ಹಿಡದ ಚಹಾ, ತಿಂಡಿ, ಊಟಾ, ಕ್ಯಾಂಪ್ ಫೈರ್ ಎಲ್ಲಾ ಅವರದ, ಹೆಂಡ್ತಿನ್ನೊಂದ ನಾವ ಕರಕೊಂಡ ಹೋದರ ಆತ. ಅದರಾಗ ಬಸ್ ತುಂಬ ಹನಿಮೂನ್ ಕಪಲ್ಸ್ ಬ್ಯಾರೆ, ಕೇಳ್ತಿರೇನ? ಅಲ್ಲಾ ಅದನ್ನ ಕೇಳೋಹಂಗೂ ಅಲ್ಲಾ ನೋಡೊಹಂಗ ಇರ್ತದ ಆ ಮಾತ ಬ್ಯಾರೆ.
ಅದರಾಗ ಇನ್ನೊಂದ ಮಜಾ ಅಂದರ ನಮ್ಮಲ್ಲೆ ಭಾಳಿಷ್ಟ ಮಂದಿಗೆ ಲಗ್ನ ಆದ ಕೂಡಲೇ ದೇವರಿಗೆ ಹೋಗೊದ ಅಂತ ಒಂದ ನಿಯಮ ಇರ್ತಿತ್ತ. ಕೆಲವೊಬ್ಬರ ಮನ್ಯಾಗ ಮೊದ್ಲ ದೇವರಿಗೆ ಹೋಗಿ ಬರ್ರಿ ಆಮ್ಯಾಲೆ ಹನಿಮೂನ್ ಅಂತ ಅನ್ನೋರ, ಇನ್ನ ಕೆಲವೋಬ್ಬರ ಮೊದ್ಲ ಹನಿಮೂನ್ ಆಮ್ಯಾಲೆ ದೇವರ ಅನ್ನೋರ. ದಣೇಯಿನ ಲಗ್ನಾ ಮಾಡ್ಕೊಂಡ ಯಾವಾಗ ಹನಿಮೂನಕ್ಕ ಹೋಗೋಣ ಅಂತ ತುದಿಗಾಲ ಮ್ಯಾಲೆ ನಿಂತೋರಿಗೆ ಮೊದ್ಲ ದೇವರ ಅಂದರ ಹೆಂಗ ಅಂತ ನನಗ ಅನಸ್ತಿತ್ತ. ಅಲ್ಲಾ ನನ್ನ ಪ್ರಕಾರ ಹನಿಮೂನ್ ತಲ್ಯಾಗ ಇಟಗೊಂಡ ದೇವರಿಗೆ ಹೋಗೊದಕಿಂತ ಹೆಂಡ್ತಿನ್ ಇಷ್ಟ ತಲ್ಯಾಗ ಇಟಗೊಂಡ ಮೊದ್ಲ ಹನಿಮೂನಗೆ ಹೋಗೊದ ಛಲೋ.
ಇನ್ನ ನಮ್ಮ ಮನ್ಯಾಗ ಏನ ದೇವರಿಗೆ ಹೋಗಿ ಬಂದ ಮ್ಯಾಲೆ ಹನಿಮೂನ್ ಅಂತ ಇರಲಿಲ್ಲ ಬಿಡ್ರಿ, ಒಟ್ಟ ವರ್ಷ ತುಂಬೋದರಾಗ ಇಲ್ಲಾ ಕಳ್ಳ ಕುಬಸದಕ್ಕಿಂತ ಮೊದ್ಲ ದೇವರಿಗೆ ಹೋದರ ನಡಿತದ ಅಂತ ನಮ್ಮಜ್ಜಿ ಹೇಳಿದ್ಲು. ಇನ್ನ ನಾ ದೊಡ್ಡಿಸ್ತನಾ ಮಾಡಿ ಮೈಸೂರ್- ಊಟಿ- ಕೊಡೈಕೆನೆಲ್ ಪ್ಯಾಕೇಜ ಒಳಗ ಯಾಕ ಸಾರ್ವಜನಿಕ ಹನಿಮೂನಗೆ ಹೋಗಬೇಕ ಅಂತ ಸಪರೇಟ್ ತೆಕ್ಕಡಿ, ಮುನ್ನಾರ, ಪೇರಿಯಾರಕ್ಕ ಕರಕೊಂಡ ಹೋಗಿ ಬಂದಿದ್ದೆ.
ಈಗ ನೋಡಿದರ ಇಕಿ ಮತ್ತ ಈ ವರ್ಷ ಗಂಟ ಬಿದ್ದಾಳಲಾ ಅಂತ ತಲಿ ಕೆಟ್ಟತ. ಅಷ್ಟರಾಗ ನಮ್ಮ ಮಾಮಾಗ ವೆಂಗೂರ್ಲಾ ಅಂತ ಒಂದ ಸೌಥ ಮಹಾರಾಷ್ಟ್ರದ್ದ ಸಮುದ್ರ ದಂಡಿ ಹಳ್ಳಿಗೆ ಟ್ರಾನ್ಸಫರ್ ಆಗಿತ್ತ. ನಮ್ಮಜ್ಜಿ ನನ್ನ ಲಗ್ನಕ್ಕ ಅಂತ ಬಂದೋಕಿ ಒಂದ ವರ್ಷ ಆದರೂ ಇಲ್ಲೇ ವಸ್ತಿ ಉಳದಿದ್ಲು. ಕಡಿಕೆ ಅಕಿನ್ನ ಅಕಿ ಮಗನ ಮನಿಗೆ ಬಿಟ್ಟಂಗ ಆತ, ನಾವ ವೆಂಗೂರ್ಲಾ ನೋಡಿದಂಗ ಆತ ಅಂತ ಭಾಡಗಿ ಕಾರ ಮಾಡ್ಕೊಂಡ ಖಾಸ ಹೆಂಡ್ತಿನ ಕರಕೊಂಡ ಹೋಗಿ ನಾಲ್ಕ ದಿವಸ ಇದ್ದ ನಮ್ಮಜ್ಜಿನ್ನ ಬಿಟ್ಟ ವೆಂಗೂರ್ಲಾ ಬೀಚ ನೋಡ್ಕೊಂಡ ಬಂದೆ. ಹಂಗ ವೆಂಗೂರ್ಲಾಕ್ಕ ಹೋಗ ಬೇಕಂದರ ವಾಯಾ ಅಂಬೋಲಿ ಘಾಟ ಹೋಗಬೇಕಿತ್ತ, ನನ್ನ ಹೆಂಡ್ತಿಗೆ ಘಾಟ ಕಂಡರ ತಲಿ ತಿರಗತಿತ್ತ. ಹಿಂಗಾಗಿ ಹೋಗ್ತ ಬರತ ಇಕಿಗೆ ಕಾರ ಒಳಗ ಖಿಡಕಿ ಬಿಟ್ಟ ಕೊಟ್ಟ ಒಂದ ಪಾಕೇಟ್ extra large ವೆಟ್ ಟಿಶ್ಯೂ ಪೇಪರ್ ಬಾಕ್ಸ್ ಕೊಟ್ಟ ಬಿಟ್ಟಿದ್ದೆ.
ಮುಂದ ಹಿಂಗ ಒಂದ ವಾರ ಆಗ್ತ ಇಕಿ ಆ ವೆಂಗೂರ್ಲಾದ್ದ ಎರಡನೇ ಹನಿಮೂನದ್ದ ಫೋಟೊದಾಗ ಅಂಬೋಲಿ ಘಾಟ ನೋಡಿದಾಗೊಮ್ಮೆ ವೈಕ ವೈಕ್ ಅನಲಿಕತ್ಲು. ಇದ ಏನ ವಿಚಿತ್ರ ಫೋಟೊದಾಗ ಘಾಟ್ ನೋಡಿದರು ವಾಂತಿ ಮಾಡ್ತಾಳಲಾ ಅಂತ ಕವಿತಾ ಐತಾಳ ಡಾಕ್ಟರಗೆ ಕೇಳಿದರ ಅವರ ಎಲ್ಲಾ ಚೆಕ್ ಮಾಡಿ
’ನೀವ ಹೋಗಿದ್ದ ಎರಡನೇ ಹನಿಮೂನ್ ಅಲ್ಲಾ, ಅದ ಬೇಬಿಮೂನ್….ಕಂಗ್ರಾಟ್ಸ, your wife is carrying’ ಅಂತ ಹೇಳಿ ಕಳಸಿದರ.
ಖರೇ ಹೇಳ್ಬೇಕಂದರ ನಂಗ ಅಲ್ಲಿ ತನಕ ಹನಿಮೂನ್ ಗತೆ ಬೇಬಿಮೂನ್ ಅಂತನೂ ಒಂದ ಇರ್ತದ ಅಂತ ಗೊತ್ತ ಇದ್ದಿದ್ದಿಲ್ಲಾ. ಹಂಗ ನಿಯಮದ ಪ್ರಕಾರ ಹನಿಮೂನ ಬೇಬಿಮೂನಕ್ಕ ಬೇಸ್ ಆಗಬೇಕ. ಆದರ ನಾವ ಎರಡನೇ ಹನಿಮೂನ್ ಅಂತ ಹೋಗಿದ್ದ ಬರೇ ಹನಿಮೂನ್ ಆಗಿದ್ದಿಲ್ಲಾ ಅದ ಬೇಬಿಮೂನ್ ಆಗಿತ್ತ ಅನ್ನರಿ.
ಅಲ್ಲಾ ಯಾರಿಗೆ ಬೇಬಿಮೂನ್ ಗೊತ್ತ ಇಲ್ಲಾ ಅವರಿಗೆ ಒಂದ ಸರತೆ ಹೇಳಿ ಬಿಡ್ತೇನಿ. ಗಂಡಾ- ಹೆಂಡತಿ ಇಬ್ಬರೂ ಸೇರಿ ಹೆಂಡ್ತಿ ಜಸ್ಟ ಕ್ಯಾರಿಂಗ್ ಇದ್ದಾಗ ಏನ ಹನಿಮೂನಗತೆ ಹೋಗ್ತಾರ ಅದಕ್ಕ ಬೇಬಿಮೂನ್ ಅಂತಾರ. ಮತ್ತ ’ಇದಕ್ಕ ಹೋಗೊದ ಡಾಕ್ಟರ್ ಸ್ಟಾರ್ಟಿಂಗಗೆ ಒಂದ ತಿಂಗಳ ಬೆಡ್ ರೆಸ್ಟ್ ಅಂತ ಹೇಳ್ತರಲಾ ಅದರಕಿಂತ ಮೊದ್ಲೊ ಇಲ್ಲಾ ಆಮ್ಯಾಲೋ’ ಅಂತ ನನಗ ಕೇಳ ಬ್ಯಾಡ್ರಿ. ಡಾಕ್ಟರಗೆ ಒಂದ ಸಲಾ ’ನಾವ ಬೇಬಿಮೂನಗೆ ಹೊಂಟೇವಿ’ ಅಂತ ಕೇಳಿ ಹೋಗೊದ ಛಲೊ. ಯಾಕಂದರ ಈಗೀನ ಹುಡಿಗ್ಯಾರ ನಾಜೂಕ ಇರ್ತಾರ ಮ್ಯಾಲೆ ಡಾಕ್ಟರ್ ಧಡಮ್ -ಧಡಕಿ ಆಗಬಾರದು, ಬಸ್ ಹತ್ತಬ್ಯಾಡ್ರಿ, ಕಾರ್ ಹತ್ತ ಬ್ಯಾಡ್ರಿ ಅಂತೇಲ್ಲಾ ವಾರ್ನಿಂಗ ಕೊಡ್ತಿರ್ತಾರ ಅದಕ್ಕ ಹೇಳಿದೆ.
ಅಲ್ಲಾ, ನಾ ಮೊದ್ಲ ಹೇಳಲಿಕತ್ತಿದ್ನೇಲ್ಲಾ, ಒಂದಿಷ್ಟ ಮಂದಿಗೆ ಲಗ್ನ ಆದಮ್ಯಾಲೆ ಮೊದ್ಲ ದೇವರಿಗೆ ಹೋಗಬೇಕೊ ಇಲ್ಲಾ ಹನಿಮೂನಗೆ ಹೋಗಬೇಕೊ ಅಂತ ಕನಫ್ಯುಸನ್ ಇರ್ತದ ಅಂತ ಇನ್ನ ಹಂತಾದರಾಗ ಯಾರದರ ಲಗ್ನಾ ಅವರ ಮನ್ಯಾಗ ಅವರಜ್ಜಾ ಇಲ್ಲಾ ಅಜ್ಜಿ ಯಾರೋ ಅಗದಿ ಇವತ್ತ ನಾಳೆ ಅನ್ನೊಹಂಗ ಸಿರಿಯಸ್ ಇದ್ದಾರ ಪಾಪ ಅವರ ಮೊಮ್ಮಗನ ಮದ್ವಿ ನೋಡೇರ ನೋಡ್ಲಿ ಅಂತ ಮದ್ವಿ ಮಾಡಿದ್ದರ ಅಂತ ತಿಳ್ಕೋರಿ ಅವರದಂತು ಇನ್ನು ಫಜೀತಿ ಆಗತದ. ಒಂದು ಅವರ ಹಿಂಗ ಲಗ್ನಾ ಮುಗಿಸಿಗೊಳ್ಳೊದಕ್ಕ ವೆಂಟಿಲೇಟರ್ ಮ್ಯಾಲಿಂದ ಅಕ್ಕಿ ಕಾಳ ಹಾಕಿದವರು ತಿಂಗಳ ಒಪ್ಪತ್ತನಾಗ ಗೋವಿಂದಾ ಆಗಿರ್ತಾರ. ಇನ್ನ ಅವರದೇಲ್ಲಾ ಕಾರ್ಯಕ್ರಮ ಮುಗಿಸಿ, ಮುಂದ ಅವರ ಹನಿಮೂನಕ್ಕ ಏನರ ಹೋದರ ಅವರದು ಒಂಥರಾ ನನ್ನಂಗ ಹನಿಮೂನ್ ಕಮ್ ಬೇಬಿಮೂನ್ ಆಗೋ ಚಾನ್ಸಿಸ್ ಇರ್ತಾವ ಅನ್ನರಿ.
ಇರಲಿ, ಹಂಗ ಅವತ್ತ ನನ್ನ ಹೆಂಡ್ತಿ ಹನಿಮೂನದ್ದ ದ್ವಿತೀಯ ವಿಘ್ನ ಮಾಡಲಾರದಕ್ಕ ಅವತ್ತಿನಿಂದ ಇವತ್ತಿನ ತನಕಾ ವರ್ಷಾ ತಪ್ಪಸಲಾರದ ಹನಿಮೂನಗೆ ಹೋಗ್ತೇನಿ. ಅಕಿ ಜೊತಿನ ಮತ್ತ. ಈಗ ದಣೇಯಿನ ಒಂದ ವಾರದ ಹಿಂದ
’ಕೊಡಗಿನ ಕಾವೇರಿ… ನೀ ಬೆಡಗಿನ ವಯ್ಯಾರಿ’ ಅಂತ ಅಕಿನ್ನ ಮಡಿಕೇರಿಗೆ 22ನೇ ಹನಿಮೂನಗೆ ಕರಕೊಂಡ ಹೋಗಿ ಬಂದೇನಿ.
’ನೀ ಹೋಗಿದ್ದ ಹನಿಮೂನೊ ಇಲ್ಲಾ ಬೇಬಿಮೂನೊ ಒಂದ ಸರತೆ ಕನಫರ್ಮ್ ಮಾಡ್ಕೋ’ ಅಂತೇನ ಅನಬ್ಯಾಡ್ರಿ, ಇಪ್ಪತ್ತೆರಡ ವರ್ಷ ಆದಮ್ಯಾಲೆ ನಂದೇನ ಇದ್ದರೂ ಬರೇ ಹನಿಮೂನ್ ಇಷ್ಟ ಬೇಬಿಮೂನ್ ಇಲ್ಲಾ. ಹಂಗ ಈಗ ’ಬೇಬಿಮೂನ್’ ಇಕಿ ಜೊತಿ ಅಂತೂ ಸಾಧ್ಯನ ಇಲ್ಲಾ ಆ ಮಾತ ಬ್ಯಾರೆ.
ಖಾಸ ಹೆಂಡ್ತೀನ ಕರಕೊಂಡ ಹೋಗಿ 😃😃