ಇದ ಒಂದ ಇಪ್ಪತ್ತ ವರ್ಷದ ಹಿಂದಿನ ಮಾತ ಇರಬೇಕ, ನಂಬದ ದಣೇಯಿನ ಮದ್ವಿ ಆಗಿತ್ತ, ಇಬ್ಬರು ಸೇರಿ ಯಾರದೋ ಕುಬಸಕ್ಕ ಬೆಂಗಳೂರಿಗೆ ಹೋಗಿದ್ವಿ. ಇನ್ನ ಬೆಂಗಳೂರ ತನಕ ಬಂದೇನಿ ಒಂದ ರೌಂಡ ಬ್ರಿಗೇಡ್ ರೋಡ್, ಎಮ್.ಜಿ. ರೋಡ ಅಡ್ಡಾಡಿ ಪಬ್ ಹೊಕ್ಕ ಬಂದರಾತು ಅಂತ ನಾ ಹೊಂಟರ ನನ್ನ ಹೆಂಡ್ತಿ
“ರ್ರಿ, ಎಲ್ಲೇ ಹೊಂಟೀರಿ? ನಾನೂ ಬರೋಕಿನ” ಅಂತ ಗಂಟ ಬಿದ್ಲು. ನಾ ಎಷ್ಟ ಬ್ರಿಗೇಡ್ ರೋಡನಾಗ ಯಾ ಗುಡಿ-ಗುಂಡಾರ ಇಲ್ಲಾ ಅಂದರೂ ಅಕಿ ಬಂದ ಬಿಟ್ಟಳು.
ನಾವ ಹಿಂಗ ಎಮ್.ಜಿ ರೋಡ ಮ್ಯಾಲೆ ಹೊಂಟಾಗ ನಮ್ಮ ಎದುರಿಗೆ ಒಂದ ಹುಡಗಿ ಒಬ್ಬೋಕಿನ ಜೋರ ಜೋರ ಮಾತಾಡ್ಕೋತ ಅಗದಿ ಹೊಡೆಯೊರಗತೆ ಕೈ ಸೊನ್ನಿ ಮಾಡ್ಕೋತ ಬರಲಿಕತ್ತಿದ್ಲು.
ಅಕಿ ಕರೆಕ್ಟ ನಮ್ಮ ಎದರಿಗೆ ಬರೋದಕ್ಕ
“u dont talk nonsense, how dare you dump me like this…you are cheat” ಅಂತ ಅಂದಿದ್ದ ನಮ್ಮಿಬ್ಬರಿಗೂ ಕೇಳಸ್ತ. ಅಕಿ ಹಂಗ ಅಂದಿದ್ದ ಕೇಳಿ ನನ್ನ ಹೆಂಡ್ತಿ ಬಹುಶಃ ಆ ಹುಡಗಿ ನನಗ ಬೈದ್ಲಂತ ತಿಳ್ಕೊಂಡಳ ಕಾಣತದ
“ರ್ರಿ…ಅಕಿ ಯಾರಿಗೆ ಅಂದ್ಲು” ಅಂತ ಕೇಳಿದ್ಲು.
“ನಂಗೇನ ಗೊತ್ತ…ಅಕಿನ್ನ ಕೇಳ” ಅಂತ ನಾ ಅಂದೆ.
“ಅಲ್ಲರಿ..ಅಕಿ ನಿಮಗ ಅಂದಳೇನ ನೋಡ್ರಿ? ಇಲ್ಲಾಂದರ ಹುಚ್ಚರಂಗ ರಸ್ತೆ ಮ್ಯಾಲೆ ಒಬ್ಬೋಕಿನ ಹಂಗ್ಯಾಕ ಬೈಕೋತ ಹೋಗ್ತಾಳ” ಅಂತ ಅಂದ್ಲು.
“ಲೇ…ಹುಚ್ಚಿ…ಅಕಿ ಹುಚ್ಚಿ ಅಲ್ಲಾ. ನೀ ಹುಚ್ಚಿ ಇದ್ದಿ, ಅಕಿ ಫೋನನಾಗ ಯಾವದೋ ಹುಡುಗನ ಜೊತಿ ಮಾತಾಡಲಿಕತ್ತಿದ್ಲು, ಅದ ಅವಂಗ ಬೈದಿದ್ದ” ಅಂತ ನಾ ಅಂದರ.
“ಅಕಿ ಕಡೆ ಫೋನ ಎಲ್ಲೇ ಇತ್ತ..ಎರಡೂ ಕೈ ಬೀಸ್ಗೋತ ಬೈಕೋತ ಹೊಂಟಿದ್ಲು…” ಅಂತ ಅಂದ್ಲು.
ಆಮ್ಯಾಲೆ ನಮ್ಮಕಿಗೆ
’ ಆ ಹುಡಗಿ ಇಯರ್ ಫೋನ ಹಾಕ್ಕೊಂಡ, ಶಾರ್ಟ್ಸ್ ಪಾಕೇಟನಾಗ್ ಮೋಬೈಲ್ ಇಟಗೊಂಡು, ಅದರ ವಾಯರ್ ತನ್ನ ಸ್ಲೀವಲೇಸ್ ಟಿ-ಶರ್ಟ ಒಳಗಿಂದ ಪಾಸ್ ಮಾಡ್ಕೊಂಡು ಕಿವ್ಯಾಗ ಅದರ ಪ್ಲಗ್ ತುರಕೊಂಡ ಮಾತಾಡ್ಲಿಕತ್ತಿದ್ಲು’ ಅಂತ ತಿಳಿಸಿ ಹೇಳೋದರಾಗ ರಗಡ ಆತ.
“ಅಯ್ಯ…ಹಣೇಬರಹನ..ನಾ ಅನ್ಕೋಂಡೆ ಹುಡಗಿ ನೋಡಿದರ ಹೆಂತಾ ಛಂದ ಅದ, ಪಾಪ ಹಿಂಗ್ಯಾಕ ಹುಚ್ಚರಂಗ ಒಂದ ಮಾತಾಡಲಿಕತ್ತದ ಅಂತ” ಅಂತ ಅಂದ್ಲು.
“ಅಲ್ಲಾ, ಅದ ಇರಲಿ ನಿಮಗ ಹೆಂಗ ಎರಡ ನಿಮಿಷದಾಗ ಅಕಿ ಶಾರ್ಟ್ಸ ಒಳಗ ಮೋಬೈಲ್ ಇತ್ತು, ಅಕಿ ಟಿ-ಶರ್ಟ ಒಳಗಿಂದ ವಾಯರ್ ಪಾಸ್ ಮಾಡ್ಕೊಂಡ ಕೀವ್ಯಾಗ ಇಯರ್ ಫೋನ ಇಟಗೊಂಡಿದ್ದ ಕಾಣತ” ಅಂತ ಸಡನ್ ಆಗಿ ನಮ್ಮಕಿ ಟಾಪಿಕ್ ಚೆಂಜ್ ಮಾಡಿದ್ಲು.
ಯಪ್ಪಾ ದೇವರ..ನಾ ಬೆಂಗಳೂರಿಗೆ ಅದು ಬ್ರಿಗೇಡ್, ಎಮ್.ಜಿ ರೋಡಿಗೆ ಹೆಂಡ್ತಿ ಜೊತಿ ಬಂದಿದ್ದ ದೊಡ್ಡ ತಪ್ಪ ಆತ ಅಂತ ಹಣಿ ಬಡ್ಕೊಂಡ
“ಲೇ…ಅದ ಕಾಮನ್ ಸೆನ್ಸಲೇ..ಇನ್ನ ಅಕಿ ಇಯರ್ ಫೋನನಾಗ ಮಾತಾಡ್ಲಿ ಕತ್ತಾಳ ಅಂದರ ವಾಯರ್ ಎಲ್ಲೇರ ಮೈಯಾಗ ಹಾದ ಹೋಗಬೇಕಲಾ, ಮ್ಯಾಲೆ ಅಕಿ ಟೈಟ್ ಟಿ-ಶರ್ಟ್ ಹಾಕಿದ್ಲ, ವಾಯರ್ ಪಾಸ್ ಆಗಿದ್ದ ಅಗದಿ ಎದ್ದ ಕಾಣ್ತಿತ್ತ” ಅಂತ ಅಂದ ಬಿಟ್ಟೆ. ತೊಗೊ ಅದ್ಕೊಂದ ರಾಮಾಯಣನ ಶುರು ಆತ.
“ಏನ ಖತರನಾಕ ಆಬ್ಸರ್ವೇಶನ್ರಿ ನಿಂಬದ…ಬರೇ ಹಿಂತಾವ ನೋಡ್ತಿರ್ರಿ….ಅವಕ್ಕೊಂದ ಬುದ್ದಿ ಇಲ್ಲಾ ಚಡ್ಡಿ ಮ್ಯಾಲೆ ಊರ ತುಂಬ ಅಡ್ಡಾಡ್ತಾವ, ನೀವ ಹಂತಾದ ನೋಡಲಿಕ್ಕೆನ ಒಬ್ಬರ ಎಮ್.ಜಿ. ರೋಡಗೆ ಬರಲಿಕತ್ತಿದ್ದರಿ ಕಾಣ್ತದ” ಅಂತ ರಸ್ತೆದಾಗ ಜಗಳಾ ತಗದ್ಲು.
ನಂಗ ಅಕಿಗೆ ಮುಂದ ಸಮಾಧಾನ ಮಾಡಿ ’ಎದರಿಗೆ ಬರಲಿಕತ್ತಿದ್ಲು, ಕಣ್ಣಿಗೆ ಕಾಣ್ತು, ನಾನರ ಏನ ಮಾಡ್ಲಿ, ಅಲ್ಲಾ ಹಂಗ ಬಾಜೂಕ ಒಂಬತ್ತವಾರಿ ಹೆಂಡ್ತಿ ಇರಬೇಕಾರ ಮೂರವಾರಿ ಹುಡಗ್ಯಾರನ ಯಾಕ ನೋಡ್ಲೇ ನಮ್ಮವ್ವಾ’ ಅಂತ ಕನ್ವಿನ್ಸ ಮಾಡಿ ಮುಂದ ಕರಕೊಂಡ ಹೋದೆ.
ಮುಂದ ರಸ್ತೆದಾಗ ಏನಿಲ್ಲಾಂದರು ಒಂದ ಹತ್ತ ಹದಿನೈದ ಜನಾ ಹಿಂಗ ಒಬ್ಬೊಬ್ಬರ ಮಾತಾಡ್ಕೊತ ಹೊಂಟಿದ್ದನ್ನ ತೋರಿಸಿದೆ. ನನ್ನ ಹೆಂಡತಿಗೆ ಅವರನೇಲ್ಲಾ ನೋಡಿ ಭಾರಿ ಅಜೀಬ ಅನಸ್ತ.
“ರ್ರಿ….ಅದೇನ ಒಬ್ಬೋರ ಹುಚ್ಚರಂಗ ಮಾತಾಡ್ಕೋತ ಹೋಗ್ತಾರ್ರಿಪಾ ಇಲ್ಲಿ ಮಂದಿ” ಅಂತ ಒಂದ ಹತ್ತ ಸಲಾ ಅಂದ್ಲು.
ಅಲ್ಲಾ ಆವಾಗ ಜಸ್ಟ ಈ ಮೋಬೈಲಗೆ ಇಯರ್ ಫೋನ್, ಬ್ಲೂ ಟೂಥ್ ಡಿವೈಸ್ ಹೋಸ್ದಾಗಿ ಬಂದಿದ್ವು, ಇನ್ನೂ ವಾಯರ್-ಲೆಸ್ ಬ್ಲೂ ಟೂಥ್ ಬಂದಿದ್ದಿಲ್ಲಾ. ಅದು ಪಾಪ ನನ್ನ ಹೆಂಡತಿಗೆ ಗೊತ್ತ ಇದ್ದಿದ್ದಿಲ್ಲಾ. ಹಿಂಗಾಗಿ ಟೆಕ್ನಾಲಜಿ ಗೊತ್ತ ಇರಲಾರದವರಿಗೆ ಹಿಂಗ ಒಮ್ಮಿಕ್ಕಲೇ ಒಬ್ಬೊಬ್ಬರ ಮಾತಾಡ್ಕೋತ ರೋಡನಾಗ ಅಡ್ಡಾಡೋದ ನೋಡಿದ್ರ ಅವರ ಹುಚ್ಚ ಅನಸ್ತಾರ.
ಇವತ್ತೀನ ವಿಜ್ಞಾನ ಬೆಳದಿದ್ದ ಹಳೇ ಮಂದಿಗೆ ಪಚಿನನ ಆಗಂಗಿಲ್ಲಾ, ಇನ್ನ ನಾ ಮಾಡ್ಕೊಂಡಿದ್ದು ಅಗದಿ ಪ್ರಾಚೀನ ಕಾಲದೋಕಿನ್ನ, ಹಿಂಗಾಗಿ ಇಕಿನೂ ಅವರ ಹುಚ್ಚರಂಗ ಒಬ್ಬರ ಮಾತಾಡ್ಕೋತ ಹೊಂಟಾರ ಅಂತ ತಿಳ್ಕೊಂಡಿದ್ಲು.
ಅಲ್ಲಾ, ನಂಗ ಇಕಿ ಹಿಂಗ ಅಂದಾಗ ಒಂದ ಮುವತ್ತೈದ ನಲವತ್ತ ವರ್ಷದ ಹಿಂದಿನ ಒಂದ ವಿಷಯ ನೆನಪಾತ.
ನಾ ಹಿಂದ ಸಣ್ಣಂವ ಇದ್ದಾಗ ನಮ್ಮ ಮನಿ ಹತ್ತರ ಒಬ್ಬರ ಹಿಂಗ ದಿವಸಾ ತಮ್ಮಷ್ಟಕ್ಕ ತಾವ ರಸ್ತೆದ ಮ್ಯಾಲೆ ಮಾತಾಡ್ಕೋತ ಹೋಗ್ತಿದ್ದರು, ಅದರಾಗ ಅವರ ಇಂಗ್ಲೀಷೊಳಗ ಮಾತಾಡೋರ. ಆವಾಗ ನಾ ಮೂರನೇತ್ತ, ನಾಲ್ಕನೇತಾ ಇದ್ದೆ, ನಮ್ಮ ದೋಸ್ತರ ಒಂದಿಷ್ಟ ಮಂದಿ ಆ ಮನಷ್ಯಾ ರಸ್ತೆ ಮ್ಯಾಲೆ ಹೊಂಟನಂದರ
’ಏ, ಹುಚ್ಚರಂಗ ಒಬ್ಬನ ಮಾತಾಡ್ಕೋತ ಹೊಂಟಾನ ನೋಡ’ ಅಂತ ಅವಂಗ ಕಾಡಸ್ತಿದ್ದರು. ನಾನು ಅಂವಾ ಒಬ್ಬನ ಹಿಂಗ ಮಾತಾಡ್ಕೋತ ಹೊಂಟಾನ ಅಂತ ಅಂದರ ಖರೇನ ಹುಚ್ಚ ಇರಬೇಕ ಬಿಡ ಅಂತ ತಿಳ್ಕೊಂಡಿದ್ದೆ. ಹಂಗ ಒಂದ ಸರತೆ ನಮ್ಮವ್ವಗ ಹೇಳಿದಾಗ ಅಕಿ ನಂಗ ಬೈದ
“ಏ, ಹಂಗ ದೊಡ್ಡವರಿಗೇಲ್ಲಾ ಮಾತಾಡ್ಬಾರದು, ಅವರ ಭಾಳ ಕಲತೋರ, ಆಗಿನ ಕಾಲದಾಗ B.Sc ಮಾಡ್ಯಾರ, ಕಾಲೇಜಿನಾಗ ಭಾಳ ಶಾಣ್ಯಾರಿದ್ದರಂತ” ಅಂತ ಹೇಳಿದ್ಲು.
ನಾ ಮುಂದ ಯಾವಾಗ ಕಾಲೇಜಿಗೆ B.Sc ಮಾಡಲಿಕ್ಕೆ ಹತ್ತಿದೆ ಆವಾಗ ನಮ್ಮವ್ವಗೂ ಹೊಟಿ ಬ್ಯಾನಿ ಹತ್ತಿತ್ತ, ನಾನೂ ಮುಂದ ಎಲ್ಲೇ ಹಂಗ ಆಗ್ತೇನೋ ಅಂತ. ಅದರಾಗ ನಾನು ಶಾಣ್ಯಾ ಬ್ಯಾರೆ ಇದ್ದೆ. ಹಂಗ ಆವಾಗೇನ ಕಲತ ಹುಚ್ಚಾಗಲಿಲ್ಲಾ ಆದರ ಮದ್ವಿ ಆದ ಮ್ಯಾಲೆ ಹುಚ್ಚ ಆದೆ ಆ ಮಾತ ಬ್ಯಾರೆ.
ಇನ್ನ ಹಿಂಗ ಒಬ್ಬೊಬ್ಬರ ತಮ್ಮಷ್ಟಕ ತಾವ ಮಾತೋಡೊರು ತಮ್ಮ ಕಾಲ್ಪನಿಕ ಜಗತ್ತಿನೊಳಗ (fantasy world) ಯಾರದೋ ಜೊತಿ ಮಾತಾಡ್ತಿರ್ತಾರ, ಅವರಿಗೆ ತಮ್ಮ ಹೊರ ಜಗತ್ತಿನ ಅರಿವು ಇರಂಗಿಲ್ಲಾ, ತಮ್ಮ ಲೋಕದಾಗ ಇರ್ತಾರ. ಅದಕ್ಕ ವಿಜ್ಞಾನದಾಗ ‘ಚಿತ್ತ ವಿಕಲತೆ’ (schizophrenia) ಅಂತ ಕರಿತಾರ.
ಅಲ್ಲಾ, ನಾ ಹೇಳಿದ್ದ 80-85ರ ಮಾತ ಇರಬಹುದು, ಆದರ ಈಗ ವಿಜ್ಞಾನ ಇಷ್ಟ ಬೆಳದದಲಾ, ನಾವು ಹುಚ್ಚರಂಗ ಒಬ್ಬರ ಮಾತಾಡ್ಕೋತ ಹೊಂಟಿರ್ತೇವಿ, ಹಂಗ ಕಾಲ್ಪನಿಕ ಅಲ್ಲದೇ ಹೋದರು ನಮ್ಮ ಆಜು ಬಾಜು ಜಗತ್ತಿನ ಅರಿವ ಇಲ್ಲದ ಮತ್ತೊಬ್ಬರ ಜೊತಿ ಫೋನನಾಗ ಮಾತಾಡತಿರ್ತೇವಿ.
ನಾವೇಲ್ಲಾ technology ಅಂತ ’ಚಿತ್ತ’ ಇಷ್ಟ ಅಲ್ಲಾ ’ವಿಚಿತ್ರ ವಿಕಲತೆ’ ಯಿಂದ ಬಳಲಿಕತ್ತೇವಿ, ಹಂಗ ನಾವು ಒಂದಿಲ್ಲಾ ಒಂದ ದೃಷ್ಟಿ ಒಳಗ schizophrenic ಆಗಲಿಕತ್ತೇವಿ ಅಂತ ಒಮ್ಮೊಮ್ಮೆ ನನಗ ಅನಸ್ತದ.
ಅಲ್ಲಾ ಹಂಗ ಹಳೇ ಮಂದಿಗೆ ಇವತ್ತೀನ ಟೆಕ್ನಾಲಜಿ ನೋಡಿದರ ಹುಚ್ಚ ಅನಿಸೇ ಅನಸ್ತದ ಬಿಡ್ರಿ.
ಹಳೇ ಮಂದಿ ಬಿಡ್ರಿ, ನನ್ನ ಹೆಂಡ್ತಿನ ’ಏನ ಹುಚ್ಚರಂಗ ಒಬ್ಬರ ಮಾತಾಡ್ತಾರ’ ಅಂತ ಅಂತಾಳ ಅಂದರ? ಅಲ್ಲಾ ಹಂಗ ಅಕಿ ಹುಚ್ಚರಂಗ ಮಾತಾಡ್ತಾಳ ಬಿಡ್ರಿ ಆ ಮಾತ ಬ್ಯಾರೆ.
ನಾ ಒಮ್ಮೆಮ್ಮೆ ನನ್ನ ಆರ್ಟಿಕಲ್ ಬಗ್ಗೆ ವಿಚಾರ ಮಾಡ್ಕೋತ ಏನರ ಒಬ್ಬನ ನಕ್ಕ ಬಿಟ್ಟರ
“ರ್ರಿ..ಯಾಕ ನಕ್ಕರಿ” ಅಂತಾಳ.
“ಏನ ಇಲಲ್ಲೇ..ಸುಮ್ಮನ ನಕ್ಕೆ” ಅಂತ ನಾ ಅಂದರ
“ಹಂಗ ಸುಮ್ಮ-ಸುಮ್ಮನ ಯಾರರ ಹುಚ್ಚರಂಗ ನಗ್ತಾರೇನ…..ಖರೇ ಹೇಳ್ರಿ” ಅಂತ ಗಂಟ ಬಿಳ್ತಾಳ.
ಇಕಿ ಎಲ್ಲರ ಒಂದ ದಿವಸ ನಾಲ್ಕ ಮಂದಿ ಮುಂದ “ನಮ್ಮ ಮನೆಯವರ ಒಮ್ಮೊಮ್ಮೆ ಹುಚ್ಚರಂಗ ಒಬ್ಬೊಬ್ಬರ ನಗತಿರ್ತಾರ” ಅಂತ ಅಂದರು ಅಂದ್ಲ.
ಅಲ್ಲಾ ಅಕಿಗೆ ಹೆಂಗ ಹೇಳಬೇಕ ನಾ ನನ್ನ ಕಾಲ್ಪನಿಕ ಕಥಾ ಲೋಕದಾಗ ಯಾವದೋ ಪ್ರಬಂಧದಾಗ ನಿನ್ನ ಮ್ಯಾಲೆ ಒಂದ ಹೊಸಾ ಡೈಲಾಗ ಕಲ್ಪನೆ ಮಾಡ್ಕೊಂಡ ನಕ್ಕೇನಿ ಅಂತ, ಇನ್ನ ಆ ಡೈಲಾಗ ಹೇಳಲಿಕ್ಕಂತೂ ಬರಂಗಿಲ್ಲಾ.
ಹೋಗಲಿ ಬಿಡ್ರಿ ಅಕಿ ಏನರ ಅನ್ಕೋವಳ್ಳಾಕ. ನೀವ ಹಂಗ ಅನ್ಕೊಬ್ಯಾಡ್ರಿ ಮತ್ತ.
ಅರವತ್ತ ಎಪ್ಪತ್ತ ವರ್ಷದ ಹಿಂದ ಯಾವುದ ಹುಚ್ಚತನ ಅನಸ್ತಿತ್ತ ಅದ ಇವತ್ತ ವಿಜ್ಞಾನ ಮತ್ತು ಟೆಕ್ನಾಲಜಿ ಹೆಸರಲೆ ಚಾಲ್ತಿ ಆಗೇದ, ಕಾಲ ಇಷ್ಟ ಬದಲಾಗಿಲ್ಲಾ ಹುಚ್ಚತನಾನೂ ಬದಾಲಾಗೇದ ಅಂತ ಅನಸ್ತದ.
(ಮೇ24ಕ್ಕ WORLD SCHIZOPHRENIA DAY ಇತ್ತ, ಅದರ ನಿಮಿತ್ತ ಈ ಪ್ರಹಸನ)
Very nice prahasana 👌🙏