ಮೊನ್ನೆ ನನ್ನ ದೋಸ್ತನ ಮಗಂದ ಮುಂಜವಿ ಇತ್ತ. ಇನ್ನ ಅಂವಾ ನನಗ
’ಲೇ…ನೀ ನಿಮ್ಮ ಫ್ಯಾಮಿಲಿ ಕರಕೊಂಡ ಬರಬೇಕ’ ಅಂತ ಭಾಳ ಒತ್ತಾಯ ಮಾಡಿ ಹೇಳಿದ್ದಕ್ಕ ನಾ ಹೆಂಡ್ತಿ ಮಗಳನ ಕರಕೊಂಡ ಹೋಗಿದ್ದೆ. ಹಂಗ ಅಂವಾ ಅಗದಿ ನಮ್ಮ ಫ್ಯಾಮಿಲಿ ಕ್ಲೋಸ್ ಫ್ರೆಂಡ್ ಬಿಡರಿ ಅದರಾಗ ಹತ್ತ ದಿವಸ ಮೊದ್ಲ ಗಂಡಾ ಹೆಂಡ್ತಿ ಬಂದ ಕಾರ್ಡ್ ಕೊಟ್ಟ ಮ್ಯಾಲೆ ರಿಟರ್ನ್ ಗಿಫ್ಟ್ ಬ್ಯಾರೆ ಕೊಟ್ಟ ಹೋಗಿದ್ದರು, ಇನ್ನ ನಾವ ಹೋಗಲಿಲ್ಲಾ ಅಂದರ ಹೆಂಗ?
ಇನ್ನ ಮುಂಜವಿಗೆ ಹೋಗೊದ ಅಂದ ಕೂಡ್ಲೆ ನನ್ನ ಹೆಂಡತಿ ಎರೆಡ ದಿವಸ ಮೊದ್ಲ ಸೀರಿ ಇಸ್ತ್ರಿ ಮಾಡಿ, ನಿರಗಿ ಮಾಡಿ ಮಡಚಿ ಗಾದಿ ಬುಡಕ ಇಟಗೊಂಡ್ಲು. ಅಲ್ಲಾ ಹಂಗ ಅಕಿ ಎಷ್ಟ ಮೊದ್ಲ ಏನ ತಯಾರ ಮಾಡ್ಕೊಂಡಿದ್ದರೂ ಮತ್ತ ಮುಂಜವಿ ದಿವಸ ಇಕಿ ತಾಸ ಗಟ್ಲೆ ರೆಡಿ ಆಗಿ ಕಲ್ಯಾಣ ಮಂಟಪಕ್ಕ ನಾವ ಹೋಗೊದರಾಗ ಅಲ್ಲೆ ಮುಂಜವಿದ ಮನಿ ಅಕ್ಕಿ ಕಾಳ ಮುಗದ ಹೋಗಿದ್ವು. ಅಲ್ಲೆ ನಾವ ಹೋಗೊದರಾಗ ಜನಾ ಒಂದ ಕಾಲದಾಗ ಹೆಂಗ ರೇಶನ್ ಅಂಗಡಿ ಒಳಗ ಚಿಮಣಿ ಎಣ್ಣಿಗೆ ಪಾಳೆ ಹಚ್ಚಿರತಿದ್ದರ ಹಂಗ ಆ ಮುಂಜವಿ ಮಣಿಗೆ ವಿಶ್ ಮಾಡ್ಲಿಕ್ಕೆ ಪಾಳೆ ಹಚ್ಚಿದ್ದರ. ನನಗರ ಹೊಟ್ಟಿ ಹಸ್ತಿ ಬಿಟ್ಟಿತ್ತ, ನಾ ’ಮೊದ್ಲ ಊಟಾ ಮಾಡೆ ಆಮ್ಯಾಲೆ ವಿಶ್ ಮಾಡೋಣ’ ಅಂದರ ನನ್ನ ಹೆಂಡ್ತಿ
’ಏ..ಅಸಂಯ್ಯ ಅದ ಹೆಂಗ…ಮೊದ್ಲ ಬರೋದ ಲೇಟ್ ಆಗೇದ, ಮ್ಯಾಲೆ ಡೈರೆಕ್ಟ್ ಊಟಕ್ಕ ಹೋದರ ಅವರೇನ ನಾವು ಊಟಕ್ಕ ಬಂದೇವಿ ಅಂತ ತಿಳ್ಕೊಬೇಕ ಏನ’ ಅಂತ ಪಾಳೆಕ್ಕ ನಿಲ್ಲಿಸಿದ್ಲು. ಏನಿಲ್ಲಾ ಅಂದರು ಒಂದ ಐವತ್ತ ಮಂದಿ ಪಾಳೆ ಇತ್ತ. ಅದರಾಗ ಭೆಟ್ಟಿ ಆಗಿ ವಿಶ್ ಮಾಡಿದೋರ ಎಲ್ಲಾ ಫೋಟೊ ಹೊಡಿಸ್ಗೋತಾರಲಾ ಅದ ಅಂತೂ ಹಿಂಗ ಹೊಟ್ಟಿ ಹಸ್ಗೊಂಡ ಪಾಳೇಕ್ಕ ನಿಂತವರ ಬಿ.ಪಿ. ಏರಸ್ತದ, ಆದರ ಏನ ಮಾಡೋದ ಅನಿವಾರ್ಯ.
ಹಿಂಗ ಪಾಳೆ ನಿಂತಾಗ ನಮ್ಮ ಮುಂದ ಒಂದ ಗಂಡಾ-ಹೆಂಡ್ತಿ ಜೋಡಿ ನಿಂತಿತ್ತ. ಅವರ ಯಾರೋ ನಮ್ಮ ದೋಸ್ತನ ಕಲೀಗ್ ಇರಬೇಕ ಫಸ್ಟ ಟೈಮ್ ಇವರ ಮನಿ ಫಂಕ್ಶನಗೆ ಬಂದಂಗ ಕಾಣ್ತ. ಇನ್ನ ಪಾಳೆದಾಗ ನಿಂತೋರ ಮಜಾ ಮಜಾ ಹರಟಿ ಹೊಡಿತಿರ್ತಾರ, ಹಿಂಗ ಮಾತಾಡ್ತ ಮಾತಾಡ್ತ ನನ್ನ ಮುಂದ ನಿಂತವನ ಹೆಂಡ್ತಿ ತನ್ನ ಗಂಡಗ ಒಮ್ಮಿಂದೊಮ್ಮಿಲೇ
’ಅಲ್ಲರಿ ಆ ಹುಡಗನಕಿಂತಾ ಪಾಪ ಆ ಹುಡಗಿ ಭಾಳ ಸಣ್ಣೋಕಿ ಕಾಣ್ತಾಳ ಅಲ್ಲರಿ……ಎಷ್ಟ ಸಣ್ಣೋಕಿನ ಕೊಟ್ಟಾರಲಾ ?’ ಅಂತ ಅಂದ್ಲು.
ನಂಗ ಒಮ್ಮಿಕ್ಕಲೇ ಇಕಿ ಏನ ಅಂದ್ಲು ಅಂತ ತಿಳಿಲೇ ಇಲ್ಲಾ. ಅಷ್ಟರಾಗ ಅಕಿ ಗಂಡಾ
’ಯಾ ಹುಡಗಿಲೇ..’ ಅಂದಾ.
’ಅದರಿ…ಸ್ಟೇಜ್ ಮ್ಯಾಲೆ ಇದ್ದಾಳಲಾ ಅಕಿ ಬಗ್ಗೆ ಹೇಳಿದೆ’ ಅಂದ್ಲು. ಅಂವಾ ತಲಿ ಕೆಟ್ಟ
’ಏ…ನಾವ ಈಗ ಬಂದಿದ್ದ ನಮ್ಮ ಬಾಸ್ ನ ಮಗನ ಮುಂಜ್ವಿಗೆಲೇ… ಅವರ ಮದ್ವಿಗೆ ಅಲ್ಲಾ…ಆ ಹುಡಗಿ ಕಂಡಂಗ ಕಾಣೋಕಿನ ಮುಂಜವಿ ಮಣಿ ತಾಯಿ’ ಅಂತ ಅಂವಾ ಅಗದಿ ನಾಲ್ಕ ಮಂದಿಗೆ ಕೇಳೊ ಹಂಗ ಒದರಿದಾ. ಅದಕ್ಕ ಅವನ ಹೆಂಡ್ತಿ
’ಅಯ್ಯ…ನೀವೇನ ನನಗ ಮುಂಜ್ವಿ..ಮದ್ವಿ ಅಂತ ಏನ ಹೇಳಲೇ ಇಲ್ಲಾ….ನಮ್ಮ ಬಾಸ್ ಫಂಕ್ಶನ್ ಅಂತ ಅಂದರಿ, ಅದಕ್ಕ ನಾ ಮದ್ವಿ ಅಂತ ತಿಳ್ಕೊಂಡಿದ್ಲೆ’ ಅಂತ ಅವಂಗ ಜೋರ ಮಾಡಿದ್ಲು.
ಅಲ್ಲಾ ಪಾಪ ಅಕಿಗೆ ಅಕಿ ಗಂಡ ಫಂಕ್ಶನ್ ಅಂತ ಕರಕೊಂಡ ಬಂದಿದ್ದಾ. ಅಕಿ ಒಟ್ಟ ಒಂದ ಫಂಕ್ಶನ್, ಊಟ ಹೊರಗ ಅಂತ ಬಂದ ಬಿಟ್ಟಿದ್ಲು. ಅದರಾಗ ಆ ಪಾಳೆ ಒಳಗ ಪಾಪ ಆ ಮುಂಜ್ವಿ ಮಣಿ ಸಣ್ಣಂವಾ ಇದ್ದಾ ಹಿಂಗಾಗಿ ದೂರಿಂದ ಬರೇ ಅವರವ್ವಾ ಅಪ್ಪ ಇಷ್ಟ ಎದ್ದ ಕಾಣ್ತಿದ್ದರು, ಮ್ಯಾಲೆ ಅವರು ಅಗದಿ ಮದಮಕ್ಕಳಗತೆ ತಯಾರ ಆಗಿದ್ದಕ್ಕ ಅಕಿಗೆ ಕನಫ್ಯೂಸ್ ಆಗಿತ್ತ ಅನ್ನರಿ. ಹಂಗ ಆ ಹುಡಗನ ಅವ್ವಾ ಖರೇನ ಸಣ್ಣ ಹುಡಗಿ ಇದ್ದಂಗ ಇದ್ಲು ಆ ಮಾತ ಬ್ಯಾರೆ.
ಅಕಿ ಹಂಗ ಅಂದಿದ್ದು ನಮ್ಮಕಿ ಕಿವಿಗೂ ಬಿದ್ದ ಬಿಡ್ತ. ನಮ್ಮಕಿಗೆ ’ಆ ಹುಡಗಿ ಎಷ್ಟ ಸಣ್ಣೊಕಿ ಇದ್ದಾಳ’ ಅಂತ ಅಕಿ ಅಂದಿದ್ದ ಕೇಳಿ ತಡ್ಕೊಳಿಕ್ಕೆ ಆಗಿದ್ದಿಲ್ಲಾ. ಇಕಿ ಭಡಕ್ಕನ್ ನಡಕ ಬಾಯಿ ಹಾಕಿ
’ಏ…ಅಕಿಗೆ ಅಕಿ ಕಿಂತಾ ದೊಡ್ಡೋಕಿ ಮಗಳ ಇದ್ದಾಳ್ರಿ, ಅಕಿ ಹೆಂಗ ನಿಮಗ ಕನ್ಯಾ ಕಂಡಂಗ ಕಂಡ್ಲು’ ಅಂದ್ಲು. ಅಕಿ ಕಿಂತಾ ದೊಡ್ಡೊಕಿ ಅಕಿ ಮಗಳ ಅಂದರ, ಅಕಿ ಮಗಳ ಅಕಿ ಕಿಂತಾ ಎತ್ತರ ಇದ್ದಾಳ ಅಂತ ಅರ್ಥ ಮತ್ತ. ಅದಕ್ಕ ಪಾಪ ಅಕಿ
’ಹೌದೇನ್ರಿ….ನಾ ಫಸ್ಟ್ ಟೈಮ್ ಅವರಿಗೆ ನೋಡಿದ್ದರಿ ಅದಕ್ಕ ಕೇಳಿದೆ, ಆದರೂ ಅವರ ಎಷ್ಟ ಸಣ್ಣೋರ ಕಾಣ್ತರಲ್ಲರಿ’ ಅಂತ ನಮ್ಮಕಿಗೆ ಅಂದ್ಲು. ತೊಗೊ ಇಕಿಗೆ ಮತ್ತಿಷ್ಟ ಸಂಕಟ ಆತ.
ಯಾಕ ಅಂದರ ನಮ್ಮ ದೋಸ್ತನ ಹೆಂಡ್ತಿ ನಮ್ಮಕಿ ಒಂದ ವಾರಗಿ. ಆದರ ಅಕಿ ಮೂರ ವಾರಿ, ನಮ್ಮೋಕಿ ಒಂಬತ್ತ ವಾರಿ. ಅದರಾಗ ನಾ ಹಗಲಗಲಾ ನಮ್ಮಕಿಗೆ ಮಾತ ಮಾತಿಗೆ ನೋಡ ಅಕಿ ಎರೆಡ ಹಡದರು ಹೆಂಗ ಇದ್ದಾಳ ಅಂತ ಅಂತಿದ್ದೆ. ಹಿಂಗಾಗಿ ಅಕಿನ್ನ ಕಂಡರ ನಮ್ಮಕಿಗೆ ಹೊಟ್ಟ್ಯಾಗ ಸಂಕಟ ಆಗ್ತಿತ್ತ.
ಮುಂದ ನಮ್ಮ ಪಾಳೇ ಬಂತ ನಾವ ವಿಶ್ ಮಾಡಿ ಗಿಫ್ಟ್ ಕೊಟ್ಟ ನಮ್ಮ ದೋಸ್ತನ ಹೆಂಡ್ತಿಗೆ ಅವರ ಅಂದಿದ್ದ ಕಥಿ ಹೇಳಿದೆ ಅಕಿ ಅಗದಿ ಖುಶ್ ಆಗಿ
’you made my day.. ಒಂದ ಹೋಳಗಿ extra ತಿನ್ನ ನೀ ಪ್ರಶಾಂತ’ ಅಂತ ಹೇಳಿ ಕಳಸಿದ್ಲು.
ಹಂಗ actually ನಮ್ಮ ದೋಸ್ತಗ ಎರೆಡ ಮಕ್ಕಳ, ಒಂದನೇದೊಕಿ ಮಗಳ, ಎರಡನೇದ್ದ ಮಗಾ. ಆ ಮಗಂದ ಈಗ ಮುಂಜ್ವಿ ಇಟ್ಗೊಂಡಿದ್ದಾ. ಹಂಗ ಮುಂದ ಆದರ ಗುರುಬಲಾ ನೋಡಬೇಕಾಗ್ತದ ಅಂತ ಆ ಹುಡಗ ಈಗ ಐದನೇತ್ತಾ ಇದ್ದರೂ ಮುಂಜವಿ ಮಾಡ್ಲಿಕತ್ತಿದ್ದಾ.
ನಾ ಆಮ್ಯಾಲೆ ಊಟಕ್ಕ ಕೂತಾಗ ನನ್ನ ಹೆಂಡ್ತಿಗೆ
’ನೋಡ ಅಕಿ ಎರೆಡ ಹಡದರೂ ಹೆಂಗ್ ಮೆಂಟೇನ್ ಮಾಡ್ಯಾಳ, ನೋಡಿದವರೇಲ್ಲಾ ಆ ಹುಡಗಿ ಸಣ್ಣೋಕಿ ಇದ್ದಾಳ, ಕನ್ಯಾ ಅಂತ ತಿಳ್ಕೊತಾರ. ನೀ ನೋಡಿದರ ನಮ್ಮ ಮೌಶಿ ಕಂಡಂಗ ಕಾಣ್ತಿ’ ಅಂತ ಕಿತಬಿ ಮಾಡಿದೆ. ತೊಗೊ ಇಕಿಗೆ ಪಿತ್ತ ನೆತ್ತಿಗೇರತ.
’ಈಗ ಸುಮ್ಮನ ಬಾಯಿ ಮುಚಗೊಂಡ ಊಟಾ ಮಾಡ್ತಿರೋ ಇಲ್ಲೋ…..ಸುಳ್ಳ ನನ್ನ ಮೂಡ ಯಾಕ್ ಹಾಳ್ ಮಾಡ್ತೀರಿ’ ಅಂತ ಒಂದ ಗುಡಗ ಹಾಕಿ ಆ ಹೋಳಗಿ ಬಡಸೊವಂಗ ಕರದ ’ಹೋಳಗಿ ಭಾಳ ಸಣ್ಣವ ಆಗ್ಯಾವ, ಇನ್ನೊಂದ ಹಾಕಿಲ್ಲೇ’ ಅಂತ ಹಾಕಿಸ್ಗೊಂಡ ಕಟಿಲಿಕತ್ಲು. ನಾನು ಹೋಗ್ಲಿ ಬಿಡ ಎಷ್ಟ ಹೇಳಿದರು ಅಕಿ ಏನ ನನ್ನ ಮಾತ ಕೇಳೋಕಿ ಅಲ್ಲಾ, ನಾ ಭಾಳ ದಪ್ಪ ಆಗೇನಿ ಅಂತ ಕೊರಗಿ ಕೊರಗಿ ಸೊರಗೋಕಿನೂ ಅಲ್ಲಾ ಅಂತ ಸುಮ್ಮನಾದೆ.
ಹಂಗ ನಮ್ಮಕಿಗೆ ಮತ್ತೊಬ್ಬರ ತೆಳ್ಳಗ ಇದ್ದದ್ದ ನೋಡಿದರ ತ್ರಾಸ ಆಗ್ತದ. ಅದರಾಗ ಯಾರರ ದಪ್ಪ ಇದ್ದೋರ ಡೈಟ್ ಮಾಡಿ, ವಾಕಿಂಗ್ ಜಿಮ್ ಮಾಡಿ ಮೈ ಇಳಸಿ ಬಿಟ್ಟರಂತು.
“ಅಯ್ಯ ನಮ್ಮವ್ವ ಏನ ಸೊರಗಿಯ…ಎಲ್ಲೇರ ಒಂದ ಹೋಗಿ ಇನ್ನೊಂದ ಅಗಿ-ಗಿಗಿತ್ತ..ಹಂಗ ಒಮ್ಮಿಕ್ಕಲೇ ಮೈ ಇಳಸಬಾರದ…ಯಾವದರ ಛಲೋ ಡಾಕ್ಟರಗೆ ತೊರಸ ಇಲ್ಲಾ ಪ್ರೋಟಿನ್, ವಿಟಾಮಿನ್ ತೊಗೊ ” ಅಂತ ಉಲ್ಟಾ ಅವರಿಗೆ ಬುದ್ಧಿ ಹೇಳ್ತಾಳ.
ಹಂಗ ನಮ್ಮಕಿ ಡೈಟ್ ಬಗ್ಗೆ ಒಂದ ಪ್ರಹಸನನ ಮುಂದಿನ ಸರತೆ ಬರೋದ ಅದ ತೊಗೊರಿ.
ಇನ್ನೊಂದ ಮಜಾ ಅಂದರ ಈ ನಮ್ಮ ದೋಸ್ತನ ಹೆಂಡ್ತಿ ಮೊನ್ನೆ ಇಲೆಕ್ಷನ್ ಒಳಗ ಓಟ್ ಹಾಕಲಿಕ್ಕೆ ಹೋದಾಗ ಅಕಿಗೆ ಫಸ್ಟ್ ಟೈಮ್ ವೋಟರ್ ಅಂತ ತಿಳ್ಕೊಂಡ ಬಿಜೆಪಿಯವರ ಗುಲಾಬಿ ಹೂ ಕೊಟ್ಟ ಕೊಳಸಿದ್ದರಂತ. ಏನ್ಮಾಡ್ತೀರಿ? ಹಂಗ ಪೇರೆಂಟ್ಸ್ ಡೇ ಮೀಟಿಂಗ್ ಹೋದಾಗೂ ಅಕಿ ಮಗಳಿಗೆ ’ನಿಮ್ಮಕ್ಕನ ಯಾಕ ಕರಕೊಂಡ ಬಂದಿ, ನಿಮ್ಮವ್ವ ಬಂದಿಲ್ಲಾ?’ ಅಂತ ಮೇಡಮ್ ಅಂತಿದ್ದರಂತ.
ಅಲ್ಲಾ, ಅದ ಎಲ್ಲಾ ಅವರವರ ಮೈಗುಣಾ ಬಿಡ್ರಿ, ಹಂಗ ಖರೆ ಕೇಳಿದ್ರ ದಪ್ಪ ಇದ್ದೋರದ ಊಟಾ ಭಾಳ ಕಡಮಿ ಇರ್ತದ. ಆದರ ಏನ್ಮಾಡೋದ ಅವರ ಎಷ್ಟ ಕಡಮಿ ಉಂಡರು ಮೈ ಬರತಿರತದ, ಅದ manufacturing defect ಏನ ಮಾಡ್ಲಿಕ್ಕೆ ಆಗಂಗಿಲ್ಲಾ.
ಆದರ ಒಂದ ಸಿರಿಯಸ್ ಆಗಿ ಹೇಳ್ತೇನಿ ನೋಡ್ರಿ. ದಪ್ಪ- ತೆಳ್ಳಗ ಇರೋದ ಸೆಕಂಡರಿ..ಒಟ್ಟ ಫಿಟ್ ಆಗಿ, ಆರೋಗ್ಯವಾಗಿ ಮತ್ತ active ಆಗಿ ಇದ್ದರ ಸಾಕ. ನೀವ ಹೆಂಗರ ಇರ್ರಿ…ಆರಾಮ ಇರ್ರಿ. ಹೆಂಡ್ತಿ ಮೌಶಿ ಕಂಡಂಗ ಕಂಡರ ಏನ, ಕನ್ಯಾ ಕಂಡಂಗ ಕಂಡರ ಏನ? ಗಂಡಂದರಿಗಂತು ಅನುಭವಸೋದ ತಪ್ಪಂಗಿಲ್ಲಲಾ.