ಏನ ಅನ್ನವಾ…ನಿನ್ನ ಗಂಡಾ ಭಾಳ ಛಲೋ

ಇದ ಕರೆಕ್ಟ ಒಂದ ವರ್ಷದ ಹಿಂದಿನ ಮಾತ ನನ್ನ ಹೆಂಡ್ತಿ ಅತ್ಯಾನ ಮಗನ ಮ್ಯಾರೇಜ್ ಇತ್ತ. ಇನ್ನ ನಮ್ಮ ಅತ್ತಿ ಮನಿ ಕಡೆ ಮ್ಯಾರೇಜ್ ಅಂದರ ನನ್ನ ಹೆಂಡ್ತಿ ಒಂದ ವಾರ ಮೊದ್ಲ ಜಿಗದಿದ್ಲು, ಮ್ಯಾಲೆ ನನಗ
’ಇದ್ದೂರಾಗ ಲಗ್ನಾ ನೀವ ತಪ್ಪಸಬ್ಯಾಡ್ರಿ, ಸೋಡ ಮುಂಜವಿ ಇಂದ ಹಿಡದ ಪ್ರಸ್ಥದ್ದ ಮರದಿವಸದ್ದ ಸತ್ಯನಾರಾಯಣ ಪೂಜಾ ಮುಗಿಯೋ ತನಕ ದಿವಸಾ ಇಲ್ಲೇ ಊಟಕ್ಕ ಬರ್ರಿ’ ಅಂತ ನಮ್ಮಕಿ ಹೇಳಿದ್ದಕ್ಕ ನಾ ದಿನಾ ಮಧ್ಯಾಹ್ನ, ರಾತ್ರಿ ಊಟಕ್ಕ ಅಲ್ಲೆ ಹೋಗ್ತಿದ್ದೆ. ’ಊಟ ಹೋದರ ಕೋಟಿ ಲಾಭ’ ಅಂತಾರ, ಮೊದ್ಲ ತುಟ್ಟಿ ಕಾಲ ಹಿಂಗಾಗಿ ಹೋಗ್ತಿದ್ದೆ ಅನ್ನರಿ.
ದೇವರ ಊಟದ್ದ ದಿವಸ ಗಡದ್ದ ಊಟಾ ಹೊಡದ ಹಿಂಗ ಚಾಪಿ ಮ್ಯಾಲೆ ಅಡ್ಡಾಗಿದ್ದೆ. ಒಳಗ ನನ್ನ ಹೆಂಡ್ತಿ, ಅಕಿ ಕಜೀನ್ಸ್ ಎಲ್ಲಾರೂ ಸೇರಿ ಮದ್ವಿ ಸಂಬಂಧ ಮುತ್ತೈದಿಯರಿಗೆ ಉಡಿ ತುಂಬಲಿಕ್ಕೆ ಅರಿಷಣ-ಕುಂಕಮದ್ದ ಚೀಟ ಕಟಗೋತ ಹರಟಿ ಹೊಡಿಲಿಕತ್ತಿದ್ದರ. ಒಂದ ಮೂರ ನಾಲ್ಕ ಮಂದಿ ಇದ್ದರ, ಪುಣ್ಯಾಕ್ಕ ಅರಷಣ ಕುಂಕುಮದ್ದ ಚೀಟ ಕಟ್ಟೋದ ಅಂತ ನನ್ನ ಹೆಂಡ್ತಿ ನನಗ ಹೆಲ್ಪ್ ಮಾಡಲಿಕ್ಕೆ ಬರ್ರಿ ಅಂತ ಕರಿಲಿಲ್ಲಾ. ಇಲ್ಲಾಂದರ ಮಂಗಳಸೂತ್ರ ಕಟಗರಿಸಿದಾಗ ಸಹಿತ ಕರಿಮಣಿ ಪೋಣಸಲಿಕ್ಕೆ ಬಿಡೋಕಿ ಅಲ್ಲ ಅಕಿ. ಅದರಾಗ ಉಂಡ ಗಂಡಗ ಸುಮ್ಮನ ಅಡ್ಡಾಗಲಿಕ್ಕೆ ಬಿಡೋ ಸಂಪ್ರದಾಯನ ಅಲ್ಲಾ ಅಕಿದ.
ಅವರೇಲ್ಲಾ ಮಾತಾಡ್ತ ಮಾತಾಡ್ತ ಇರಬೇಕಾರ ಒಮ್ಮಿಕ್ಕಲೇ ನನ್ನ ಹೆಂಡ್ತಿ ತನ್ನ ಕಜೀನ್ ಭಾರತಿಗೆ
“ನಿಮ್ಮ ಮನೆಯವರ ಲಗ್ನಕ್ಕ ಯಾವಾಗ ಬರತಾರ? ಹಂಗ ಅವರ ಭಾರಿ ಗಳಿ-ಬಿಳಿ ಮನಷ್ಯಾ, ಮೊದ್ಲ ಬಂದಿದ್ದರ ಪಾಪ ಕೈತುಂಬ ಕೆಲಸ ಮಾಡ್ತಿದ್ದರು” ಅಂದ್ಲು. ಅದಕ್ಕ ಭಾರತಿ
“ಹೌದ ಬಿಡ ಅಕ್ಕಾ, ನಮ್ಮ ಮನೆಯವರದ ಭಾರಿ ಹೆಲ್ಪಿಂಗ್ ನೇಚರ್, ಅಗದಿ ಹೆಣ್ಣಮಕ್ಕಳ ನಾಚಬೇಕ ಅಷ್ಟ ಚೊಕ್ಕ ಕೆಲಸಾ ಮಾಡ್ತಾರ, ಆದರ ಏನ್ಮಾಡೋದ ಹುಡುಗರ ಸಾಲಿ ತಪ್ಪಸಲಿಕ್ಕೆ ಬರಂಗಿಲ್ಲಾ, ಹಿಂಗಾಗಿ ಡೈರೆಕ್ಟ ಮದ್ವಿಗೆ ಬರ್ತಾರ’ ಅಂದ್ಲು. ನನ್ನ ಹೆಂಡತಿ ಅಲ್ಲಿಗೆ ಬಿಡಬೇಕ ಇಲ್ಲ
’ಏನ ಅನ್ನವಾ ನಿನ್ನ ಗಂಡ ಭಾಳ ಛಲೋ ಮನಷ್ಯಾ ಬಿಡ, ಹೋದಲ್ಲೆ ಬಂದಲ್ಲೇ ನಾಲ್ಕ ಕೆಲಸ ಮಾಡಿ ಮಂದಿ ಕಡೆ ಸೈ ಅನಿಸ್ಗೊತಾನ. ನಮ್ಮ ಮನೆಯವರನ ನೋಡ ಒಂದ ಕಡ್ಡಿ ಇತ್ತಲಾಗಿಂದ ತಗದ ಅತ್ತಲಾಗ ಇಡಂಗಿಲ್ಲಾ, ನೋಡ ಹೆಂಗ ಬಿದ್ಕೊಂಡಾರ’ ಅಂದ್ಲು.
ಇನ್ನ ಭಾರತಿ ಗಂಡನ್ನ ಹೊಗಳಿದ್ದನ್ನ ಕೇಳಿ ಆರತಿ ಯಾಕ ಸುಮ್ಮನ ಕೂಡ್ತಾಳ
“ಅಯ್ಯ.. ನನ್ನ ಗಂಡನೂ ಹಂಗ ಬಿಡ್ವಾ, ಯಾವದರ ಫಂಕ್ಶನ್ ಬಂತಂದರ ಅಂವಾ ಒಬ್ಬೊಂವ ಇದ್ದರ ಹತ್ತ ಮಂದಿ ಇದ್ದಂಗ. ಹಿಂಗ ಲಗ್ನಾ-ಮುಂಜವಿ ಬಂತಂದರ ಒಂದ ಹಾಲಗಂಬಾ ಹಾಕಿ ಇಳಸೋ ತನಕ ದುಡಿತಾನ ಬಿಡ. ಸುಳ್ಳ ಯಾಕ ಹೇಳ್ಬೇಕ’ ಅಂತ ಅಂದ್ಲು, ಮುಂದ ನನ್ನ ಹೆಂಡತಿ ಅಕಿಗೂ
’ನೀನು ಪುಣ್ಯಾ ಮಾಡಿ ತೊಗೊ ಹಂತಾ ಗಂಡ ಸಿಗಬೇಕಂದರ…ಎಲ್ಲಾದಕ್ಕೂ ಪಡದ ಬರಬೇಕವಾ’ ಅಂದ್ಲು. ಅಕಿ ಮಾತ ಕೇಳಿದರ ಅವರೇಲ್ಲಾ ಪುಣ್ಯಾ ಮಾಡ್ಯಾರ ಇಕಿ ಒಬ್ಬೋಕಿನ ನನ್ನ ಕಟಗೊಂಡ ಪಾಪಾ ಮಾಡ್ಯಾಳ ಅನಸಲಿಕತ್ತ. ಅಲ್ಲಾ ಆರತಿ ಗಂಡನ ಬ್ಯೂಸಿನೆಸ್ ಇರೋದ ಪೆಂಡಾಲ್ ಹಾಕೋದ, ಹಿಂಗಾಗಿ ಹಾಲಗಂಬಾ ಹಾಕಿ ಇಳಸೋದ ಅವನ, ಅದರಾಗ ಏನ ದೊಡ್ಡಿಸ್ತನ. ಹಂಗ ಆ ಆರತಿ ತಮ್ಮ ಅತ್ತಿನ್ನ ನೋಡ್ಲಿಕ್ಕೆ ಗಂಡನ್ನ ಬಿಟ್ಟ ಬಂದ ಇಲ್ಲೇ ಅವನ ಬಗ್ಗೆ ದೊಡ್ಡಿಸ್ತನ ಬಡಿಲಿಕತ್ತಿದ್ಲು. ಇನ್ನ ಅವರಿಬ್ಬರದ ಕೇಳಿ ಶಿಲ್ಪಾ
’ನಮ್ಮ ಮನೆಯವರ ಅಂತೂ ನನಗ ಒಂದ ಸ್ವಲ್ಪ ನೆಗಡಿ ಬಂದರ ಸಾಕ್ವಾ, ಒಂದ ಮುಂಜಾನೆ ಕ್ಯಾಗಸ ಹೊಡದ ಥಳಿ ಹಾಕೋದರಿಂದ ಹಿಡದ ರಾತ್ರಿ ಕಶಾಯ ಮಾಡಿಕೊಟ್ಟ ದುಬಟಿ ಹೊಚ್ಚಿ ಮಲಗಸೋ ತನಕಾ ಸೇವಾ ಮಾಡ್ತಾರ ಬಿಡ ಸುಳ್ಳ ಯಾಕ ಹೇಳ್ಬೇಕ’ ಅಂದ್ಲು. ನನ್ನ ಹೆಂಡ್ತಿ ಮತ್ತ
’ಅಯ್ಯ…ನಮ್ಮವ್ವ..ನಮ್ಮ ಮನೆಯವರನ ನೋಡಬೇಕ, ನಾ ಒಂದ ಸರತೆ ಸೀತರ ಸಾಕ ಮೂರ ಫೀಟ ದೂರ ಜಿಗಿತಾರ. ಮತ್ತ ಮ್ಯಾಲೆ ನಂಗ ಕೋವಿಡ್ ಟೆಸ್ಟ ಮಾಡಿಸ್ಗೊ ಅಂತಾರ. ಹಂಗರ ನಾ ಕ್ವಾರೆಂಟೈನ್ ಆಗ್ತೇನಿ ನೀವ ಮನಿ ಕೆಲಸಾ ಮಾಡ್ರಿ ಅಂದರ ಅದೂ ಇಲ್ಲಾ. ಹಂಗ ಗಂಡನ ಕಡೆ ಸೇವಾ ಮಾಡಿಸ್ಗೊಳ್ಳಿಕ್ಕೂ ಹಣೇಬರಹದಾದ ಇರಬೇಕ ತೊಗೊ’ ಅಂದ್ಲು.
ನಂಗ ಖರೇನ ಅಕಿ ಮಾತ ಕೇಳಿ ಒಂಥರಾ ಗಿಲ್ಟಿ ಫೀಲಿಂಗ ಬರಲಿಕ್ಕೆ ಶುರು ಆತ. ನಾ ಒಬ್ಬೊಂವಾ ಯಾವ ಕೆಲಸಕ್ಕೂ ಬರಲಾರದಾಂವ, ಮದ್ವಿ ಮನಿಗೆ ಬಿಟ್ಟಿ ಊಟಕ್ಕ ಬಂದೇನೇನೋ ಅನಸಲಿಕತ್ತ. ಅಲ್ಲಾ ಹಿಂಗ ಮಂದಿಗೆ ಎಲ್ಲಾ
“ಏನ ಅನ್ನವಾ ನಿನ್ನ ಗಂಡಾ ಭಾಳ ಛಲೋ ಬಿಡ’ ಅಂತ ಅಂದರ ನಂಗ ಹೆಂಗ ಆಗಂಗಿಲ್ಲಾ ಹೇಳ್ರಿ. ಅಗದಿ ಏನ ಇಕಿ ನನ್ನ ಕಟಗೊಂಡಿದ್ದ ಯಾವದೋ ಜನ್ಮದ ಪಾಪ ಅನ್ನೋರಗತೆ ಮಾತಾಡ್ಲಿಕತ್ತಿದ್ಲು.
ಅಲ್ಲಾ ಅರಿಷಣ- ಕುಂಕುಮದ ಚೀಟ ಕಟ್ಟಬೇಕಾರರ, ಅದು ಬ್ಯಾರೆಯವರ ತಮ್ಮ ಗಂಡನ ಬಗ್ಗೆ ನಾಲ್ಕ ಛಲೋ ಮಾತಾಡಿದ್ದ ನೋಡಿ ಸಹಿತ ಸ್ವಂತ ಗಂಡನ ಬಗ್ಗೆ ಹಿಂಗ ಅನ್ನೋದ?
ಇತ್ತಲಾಗ ಕೀರ್ತಿ ಒಂದ ಹತ್ತ ಸರತೆ ಐ-ಫೋನ ಹಿಡಕೊಂಡ ಟೆರೆಸ್ ಮ್ಯಾಲೆ ಹೋಗೊದು ಮತ್ತ ಒಳಗ ಬರೋದ ನಡಸಿದ್ಲು, ಅಕಿ ಒಳಗ ಬಂದಾಗೋಮ್ಮೆ ತಂದು ಒಂದ ಮೂರ ಅಕ್ಕಿ ಕಾಳ ಹಾಕಿ
’ಅಯ್ಯ ನನ್ನ ಗಂಡ ನಿಮಗ ಗೊತ್ತ ಅದ ಅಲ್ವಾ, ನಂದ ಡಿಲೇವರಿ, ಬಾಣಂತನ ಸಹಿತ ಅವನ ಮಾಡಿದಾ’ ಅಂದ್ಲು. ಅಲ್ಲಾ ಅಕಿ ಹಡದಿದ್ದ ನೆದರಲ್ಯಾಂಡನಾಗ, ಅಲ್ಲೇ ಏನ ಸುಡಗಾಡ ಬಾಣಂತನ ಮಾಡೊದ ಇರಂಗಿಲ್ಲಾ. ಅದರಾಗ ಇವರವ್ವಗ ವಿಸಾ ಸಿಗಲಿಲ್ಲಾ ಅಂತ ಅಕಿ ಹೋಗಿದ್ದಿಲ್ಲಾ. ಹಿಂಗಾಗಿ ಗಂಡನ ಕಟಗೊಂಡಿದ್ದ ತಪ್ಪಿಗೆ ಹೆಂಡ್ತಿ ಬಾಣಂತನ ಮಾಡಿದ್ದ ಅನ್ನರಿ. ಅಲ್ಲಾ ಅಲ್ಲೇನ ಒಂದ ಅಗ್ಗಿಷ್ಟಗಿ ಇಲ್ಲಾ, ಕೂಸಿಗೆ ಎರೆಯೋದ ಇಲ್ಲಾ, ಕೂಸಿಗೆ ಎಣ್ಣಿ ಹಚ್ಚಿ ಯರಿತೇವಿ ಅಂದರ
’no, not required..baby will not get rusted’ ಅಂತ ಡಾಕ್ಟರ ಅದಕ್ಕೂ ಬ್ಯಾಡ ಅಂದಿದ್ದರಂತ.
ಹಿಂಗ ಒಬ್ಬಬ್ಬರ ತಮ್ಮ ತಮ್ಮ ಗಂಡಂದರನ ಹೊಗಳಿದ್ದ ಹೊಗಳಿದ್ದ ಅವರೇಲ್ಲಾ ಹಂಗ ಅಂದಾಗೊಮ್ಮೆ ನಮ್ಮಕಿ
’ ಹೌದ್ವಾ ಬಿಡ್ವಾ…ನಿನ್ನ ಗಂಡ ಭಾಳ ಛಲೋ’ ಅಂತ ನಂಗ ಬೈಕೋತ ಅರಿಷಣ-ಕುಂಕುಮದ ಚೀಟ ಕಟ್ಟಲಿಕತ್ತಿದ್ಲು.
ಇತ್ತಲಾಗ ಕೀರ್ತಿದ ಒಂದ ಹತ್ತ ಸರೆತೆ ಫೋನ ಹಿಡ್ಕೊಂಡ ಟೆರೆಸ್ ಮ್ಯಾಲೆ ಹೋಗೊದು ಬರೊದ ಜೋರ ನಡದಿತ್ತ. ಕಡಿಕೆ ತಲಿ ಕೆಟ್ಟ ಆರತಿ
’ ಏನ ಒಂದ ಸಮನ ಮಾಳಗಿ ಮ್ಯಾಲೆ ಕೆಳಗ ಅಡ್ಡಾಡಲಿಕತ್ತಿ’ ಅಂತ ಕೇಳಿದರ
’ಏ..ಮೋಬೈಲ ಸಿಗ್ನಲ್ ಬರವಲ್ತ ನಮ್ಮವ್ವಾ, ನಮ್ಮ ಮನೆಯರ ಜೊತಿ ಮಾತಾಡ್ಬೇಕಿತ್ತ ಅರ್ಜೆಂಟ್ ಆಗಿ, ಸುಡಗಾಡ ಟೆರೆಸ್ ಮ್ಯಾಲೆ ಹೋದರು ಬರವಲ್ತ’ ಅಂದ್ಲು. ಅಲ್ಲಾ ಹಂತಾದೇನ ಮಾತೋಡದ ಹಗಲ ಹೊತ್ತಿನಾಗ ಗಂಡನ ಜೊತಿ ಅಂತ ಕೇಳಿದರ
’ಏನಿಲ್ಲಾ ಇವತ್ತ husband appreciation day ಅದ, ಅದಕ್ಕ ನನ್ನ ಗಂಡಗ ಒಂದ ಸ್ವಲ್ಪ appreciate ಮಾಡಿ ವಿಶ್ ಮಾಡಿದರ ಖುಶ್ ಆಗ್ತದ ಪ್ರಾಣಿ’ ಅಂದ್ಲು.
ನಾ ಅದನ್ನ ಕೇಳಿದವನ ಗಾಬರಿ ಆಗಿ ಎದ್ದ ಕೂತೆ. ಬಹುಶಃ ಇವತ್ತ ಇವರೇಲ್ಲಾ ಹಿಂಗ ತಮ್ಮ ತಮ್ಮ ಗಂಡಂದರನ ಹೊಗಳಿದ್ದ husband appreciation day ಇದ್ದದ್ದಕ್ಕ ಅಂತ ಅನಸಲಿಕತ್ತ. ಪಾಪ ನಮ್ಮೋಕಿ ಮೊದ್ಲ ರೂರಲ್ ಪ್ರಡಕ್ಟ, ಅಕಿಗೆ ಹಿಂಗ ವರ್ಷೊಕ್ಕೊಮ್ಮೆ ಗಂಡನ್ನ ಅಪ್ರಿಸಿಯೇಟ್ ಮಾಡೋ ಡೇ ಅದ ಅಂತನೂ ಗೊತ್ತ ಇದ್ದಿದ್ದಿಲ್ಲಾ ಹಿಂಗಾಗಿ ಸ್ವಂತ ಗಂಡನ್ನ ಬೈಕೋತ ಮತ್ತೊಬ್ಬರ ಗಂಡಂದರನ ಅಪ್ರಿಸಿಯೇಟ್ ಮಾಡ್ಲಿಕತ್ತಿದ್ಲು.
ಅದೇನೋ ಅಂತಾರಲಾ ’ಪೂರ್ವ ಜನ್ಮ ಕೃತಂ ಪಾಪಂ ಪತ್ನಿ ರೂಪೇಣ ಬಾಧತೆ’ ಅಂತ ಹಂಗ ಆಗೇದ ನನ್ನ ಹಣೇಬರಹ.
ಇರಲಿ ಇದ ಎಲ್ಲಾರ ಮನ್ಯಾಗ ಇದ್ದದ್ದ ಹಣೇಬರಹನ, ಎಲ್ಲಾರಿಗೂ ಗಂಡ ಕೆಟ್ಟವನ. ಆದರೂ ವೆಸ್ಟರ್ನ್ ವರ್ಲ್ಡ ಒಳಗ ಪ್ರತಿ ಎಪ್ರಿಲ್ ಮೂರನೇ ಶನಿವಾರ ಹಸಬಂಡ್ ಅಪ್ರಿಸಿಯೇಶನ್ ಡೇ ಅಂತ ಮಾಡ್ತಾರ. ಇವತ್ತ ಆ ದಿವಸ. ಅಂದರ ನೆನಪ ಇಡರಿ ಹೆಂಡಂದರ ಗಂಡಂದರಿಗೆ ಅಪ್ರಿಸಿಯೇಟ್ ಮಾಡೋದ ವರ್ಷಕ್ಕ ಒಂದ ಸರತೆ ಇಷ್ಟ.
ಇರಲಿ, ಇವತ್ತ ಒಂದ ದಿವಸರ ಹೆಂಡಂದರ ಒಂದ ಸರತೆ ನಿಮ್ಮ ಗಂಡಂದರನ ಅಪ್ರಿಸಿಯೇಟ್ ಮಾಡಿ ಪುಣ್ಯಾ ಕಟ್ಗೋರಿ.
ಆಮ್ಯಾಲೆ ಬೇಕಾರ ಟಚ್ ವುಡ್ ಅಂತರ ಅನ್ನರಿ ಇಲ್ಲ ವಳತರ ಅನ್ನರಿ ಅದ ನಿಮಗ ನಿಮ್ಮ ಗಂಡಗ ಬಿಟ್ಟಿದ್ದ.

3 thoughts on “ಏನ ಅನ್ನವಾ…ನಿನ್ನ ಗಂಡಾ ಭಾಳ ಛಲೋ

  1. ಭಾಳ ಚಲೋ ಐತ್ರಿ ಮನಸಾ ಬಹಳವಾಗಿ ಹಗ್ರಾಗ್ಬುಡ್ಟ್ರಿ…..😂

  2. Prabandagalu tumba chennagive Namma manegalle nadeau wanna prasangagalannu Haryana lepanadondige Sarala sundara adubhasheyalli prastuta padisiruvudu odididaga Mugdha needuttade.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ