ಬರ ಬರತ ಏನ ಬಂತಪಾ ನಮ್ಮ ಹುಡುಗರ ಹಣೇಬರಹ ಅಂತ ಇತ್ತೀಚಿಗೆ ಕೆಟ್ಟ ಭಾಳ ಕೆಟ್ಟ ಅನಸಲಿಕತ್ತದ. ಮೊದ್ಲs ಏನ ಇಲ್ಲದ ಕನ್ಯಾದ shortage ಅದರಾಗ ಇದ್ದ ಬಿದ್ದ ಕನ್ಯಾಕ್ಕು software engineer,ಬೆಂಗಳೂರ, ಪೂಣೆ ಹುಡುಗರ ಬೇಕ. ಹಿಂಗಾದರ ನಮ್ಮ ಹುಬ್ಬಳ್ಳಿ ಧಾರವಾಡ ಹುಡುಗರದ ಗತಿ ಏನು ಅಂತ ಖರೇನ ಭಾಳ ಚಿಂತಿ ಹತ್ತಿ ಬಿಟ್ಟದ.
ಈಗ ಹಂತಾದರಾಗ TV ಒಳಗ ನೂರಾ ಎಂಟ deodorantದ್ದವು ಮಜಾ ಮಜಾ ad ಬಂದ ನಮ್ಮ ಹುಡುಗರದ ತಲಿ ಕೆಡಲಿಕತ್ತಾವ. ಆ ad ನೋಡಿ ನಮ್ಮ ಹುಡುಗರು ’ನಮಗ ಮೈತುಂಬ deodorant ಹೊಡ್ಕೊಂಡರs ಇಷ್ಟ ಹುಡಗ್ಯಾರ ಸಿಗತಾರ’ ಅಂತ ತಿಳ್ಕೊಂಡ ದಿವಸಕ್ಕ ಹತ್ತ ಸರತೆ ಹೋಗ್ತ ಬರ್ತ ಠುಸ್ಸ್ ಠುಸ್ಸ್ ಅಂತ ಹೊಡ್ಕೋತ ಓಡಾಡಲಿಕತ್ತಾವ.
“ಲೇ, ಅಲ್ಲಲೇ ನಿಮ್ಮ ಇಷ್ಟ ಛಂದನ ಮಾರಿಗೆ, ಇದ್ದೂರಾಗ ಇದ್ದದ್ದರಾಗ ಮಾಡೋ ಛಲೋ ನೌಕರಿಗೆ, ಗುಂಟೆ ಜಗದಾಗ ಅದು ನೆಲದ ಮ್ಯಾಲೆ ಇರೋ ಸ್ವಂತ ಮನ್ಯಾಗ ಅವ್ವಾ- ಅಪ್ಪಾ- ಅಜ್ಜಿನ್ನ ಕರಕೊಂಡ ಭಯ- ಭಕ್ತಿ ಇಂದ ಇದ್ದರss ನಿಮಗ ಕನ್ಯಾ ಸಿಗವಲ್ವು ಹಂತಾದ ಆ ಠುಸ್ಸ್ ಠುಸ್ಸ್ ಹೊಡ್ಕೊಂಡರ ಸಿಗತಾವೇನಲೇ” ಅಂತ ನಾ ಎಷ್ಟ ತಿಳಿಸಿ ಹೇಳಿದರು ಕೇಳಂಗಿಲ್ಲಾ.
“ಯಪ್ಪಾ, ನಿಂದೊಂದ ಲಗ್ನ ಆಗೇದಿಲ್ಲ? ನೀ ಸುಮ್ಮನ ಬಾಯಿಮುಚಗೊಂಡ ಕೂಡ. ಇಲ್ಲೆ ಇದ್ದುರಾಗ ನೌಕರಿ ಮಾಡಲಿಕತ್ತಿದ್ದಕ್ಕ ಇದ್ದೂರಿಂದ ಕನ್ಯಾನ ಸಿಗವಲ್ವು ಇನ್ನ ಬ್ಯಾರೆ ಊರಿಂದ ಕನ್ಯಾ ಎಲ್ಲೆ ನಮ್ಮನ್ನ ಮೂಸ ನೋಡಬೇಕ” ಅಂತ ಒಬ್ಬೊಂವ ಅಂದರ ಇನ್ನೊಬ್ಬಂವಾ
“ಸ್ವಂತ ಮನಿ ಇಷ್ಟ ಇದ್ದರ ಮಾತ ಬ್ಯಾರೆ ಇತ್ತ. ಸ್ವಂತ ಅವ್ವಾ ಅಪ್ಪಾನು ಇದ್ದಾರಲಾ, ಅದಕ್ಕ ಕನ್ಯಾ ಸಿಗವಲ್ವು, ಈಗಿನ ಕನ್ಯಾದ ಕುಂಡ್ಲಿ ಒಳಗ ಅತ್ತಿ-ಮಾವಾ ಇಲ್ಲದ್ದ ಮನಿ ಇಷ್ಟ ಬರದಿರತಾರಪಾ” ಅಂದಾ.
ಅಲ್ಲಪಾ ಹಂಗ ನೀವ ಹೇಳೊದ ಕರೆಕ್ಟ ಖರೆ ಆದರ ಹಿಂಗ ಠುಸ್..ಠುಸ್ deodorant ಹೊಡ್ಕೊಂಡರೇನ ಕನ್ಯಾ ಸಿಗ್ತಾವ ಏನ ಅಂತ ಕೇಳಿದರ ಅದಕ್ಕ ಉತ್ತರ ಇಲ್ರಿ. ಒಟ್ಟ ಆ ಸುಡಗಾಡ TV ಒಳಗ ತೊರಸಿದ್ದ ನೋಡಿ ಹಂಗ ಮೈತುಂಬ ಹೊಡ್ಕೊಂಡರ ನಮಗ ಹುಡಗ್ಯಾರ ಬಿಳ್ತಾರ ಅಂತ ಹೊಡ್ಕೊಂಡ ಅಡ್ಡಾಡತಾವ ಖೋಡಿ ಒಯ್ದಂದು. ಅಲ್ಲಾ ಅಲ್ಲೇ TV ಒಳಗ ಹೊಡ್ಕೊಂಡ ಅಡ್ಡಾಡೋರ ಹೆಂತಾವರ್ರಿಪಾ ರಣಬೀರ ಕಪೂರ, ವಿರಾಟ ಕೊಹ್ಲಿ ಹಂತಾವರ, ಅವರಿಗೇನ ಹೊಡ್ಕೊಂಡರು ಹುಡಗ್ಯಾರ ಬಿಳ್ತಾವ ಹೊಡ್ಕೊಳಿಲ್ಲಾ ಅಂದರೂ ಬಿಳ್ತಾವ. ನಮ್ಮಂತಾವರಿಗೆ ಬೀಳಬೇಕಲಾ?ಅಲ್ಲಾ, ಮಾತ ಹೇಳಿದೆ….ಎಲ್ಲಿಗೆ ಬಂತ ಗಂಡ ಹುಡುಗರ ಹಣೇಬರಹ ನೋಡ್ರಿ.
ಇವತ್ತ ಆ ads ಪ್ರಕಾರ ಗಂಡಸರಿಗೆ ಹುಡಗ್ಯಾರ ಬೆನ್ನ ಹತ್ತೋದ deodorant ಹೊಡ್ಕೊಂಡರಿಷ್ಟ, ಬೇಕಾರ ನೀವ ಸ್ನಾನ ಮಾಡ್ರಿ ಇಲ್ಲಾ ಬಿಡ್ರಿ ಆದರ deodorant ವಾಸನಿ ಮಾತ್ರ ಬರಬೇಕ. ನಮ್ಮ ಹುಡಗರಿಗೆ ಹಿಂಗಾಗಿ ಅದ ಒಂಥರಾ ಇನ್ನೊಂದ ಹೊಸಾ ಚಟಾ ಆದಂಗ ಆಗಿ ಬಿಟ್ಟದ. ಹಾಲ ತರಿಲಿಕ್ಕು ಹೊಡ್ಕೊಂಡ ಹೋಗ್ತಾವ ಹಜಾಮತಿ ಅಂಗಡಿಗೂ ಹೊಡ್ಕೊಂಡ ಹೋಗ್ತಾವ. ಇವತ್ತ ನಮ್ಮ ಹುಬ್ಬಳ್ಳ್ಯಾಗ big bazar, easyday ಸರ್ವೈವ್ ಆಗಲಿಕತ್ತಿದ್ದ ಆ ಗಮ್ಮ ನಾರೋ deodorant ಮ್ಯಾಲೆ. ಏನ್ಮಾಡ್ತೀರಿ?
ಅಲ್ಲಾ ಆದರು ಹೆಂತಿಂತಾ deo ಬಂದಾವರಿ ಮಾರ್ಕೇಟನಾಗ axe, set wet, nivea,wild stone, fogg ಒಂದ ಎರಡ ಮೊನ್ನೆ ಒಂದ ಮಾಲ್ ನಾಗ ನಾ ಇನ್ನೊಂದ ಹೊಸಾ deo ನೋಡಿದೆ. ಅದರ ಹೆಸರ ಕಾಮ ಸೂತ್ರ ಅಂತ. ಮೈಗೆ ಹೊಡ್ಕೋಳೊದ ಮತ್ತ. ಅಲ್ಲಾ ಹಂಗ ಆ ಹೆಸರ ಭಾಳ ಪುರಾತನ ಕಾಲದ್ದು, ಯಾರಿಗು ಗೊತ್ತ ಇರಲಾರದ್ದ ಏನ ಅಲ್ಲ ಬಿಡ್ರಿ ಆದರ ಈ ಹೆಸರಿಂದ deoನೂ ಅದ ಅಂತ ನಂಗ ಗೊತ್ತ ಇದ್ದಿದ್ದಿಲ್ಲಾ. ಏನ ಹೆಸರೊ ಏನ ಸುಡಗಾಡೊ ಒಟ್ಟ ಹುಡುಗರಿಗೆ ಹುಚ್ಚು ಹಿಡಿಸಿ ಬಿಟ್ಟಾರ ಇಷ್ಟ ಮಾತ್ರ ಖರೆ.
ಅದರಾಗ ಹಿಂತಾ ಹುಚ್ಚುಚಾಕಾರ deo ಹೊಡ್ಕೊಂಡ score more ಅಂತ ಎಷ್ಟ ಹುಡಗ್ಯಾರ ನಮ್ಮ ಕಡೆ ನೋಡ್ತಾರ ಅಂತ ಲೆಕ್ಕ ಇಡ್ಕೋಬೇಕಂತ. ಇಲ್ಲೆ ಒಂದಕ್ಕ ಗತಿ ಇಲ್ಲಾ ಹಂತಾದರಾಗ ಇವರ ಹಿಂಗ ಸಿಕ್ಕಾ ಪಟ್ಟೆ score ತೊರಿಸಿದರ ನಮ್ಮ ಹುಡಗರದ ತಲಿ ಕೆಡಲಾರದ ಏನ ಆಗ್ತದ. ಇವು ಅವನ್ನ ನೋಡಿ ಮೈ ತುಂಬ ಹೊಡ್ಕೊಂಡ I am a AXE boy, I am a FOGG boy ಅಂತ ಅಡ್ಡಾಡತಾವ ಆತ. ಸಣ್ಣ ಹುಡುಗರ ಇದ್ದಾಗ ಹೆಂಗ I am a complan BOY ಅಂತ ಅಡ್ಡಾಡತಿದ್ದವಿ ಅಲಾ ಹಂಗ. ಆವಾಗ ಕಾಂಪ್ಲನ್ ಬಾಯ್ ಅಂತ ಅಂಗಿ ಚಣ್ಣಾ ಹಾಕ್ಕೊಂಡ ಅಡ್ಡಾಡತಿದ್ದಿವಿ ಈಗ AXE BOY ಅಂತ ಹಾಕ್ಕೊಂಡ ಅರಬಿ ತಗದ ಅಡ್ಡಾಡತೇವಿ ಇಷ್ಟ ಫರಕ್.
ಅಲ್ಲರಿ ನಾವೇಲ್ಲಾ ಸ್ವಚ್ಛ lifebuoy ಹಚಗೊಂಡ ಸ್ನಾನ ಮಾಡಿ ಮ್ಯಾಲೆ ಎರಡ ಹನಿ ಅತ್ತರ ಹಚಗೊಂಡ ಲಗ್ನಾ ಮಾಡ್ಕೋಳಿಲ್ಲಾ, ಇದನ್ನೇನರ ಹೇಳಲಿಕ್ಕೆ ಹೋದರ “ಆ ಕಾಲ ಹೋತ ಮಾಮಾ” ಅಂತಾರ. ಅಲ್ಲರಿ ಈ deoಕ್ಕೂ ಹುಡಗ್ಯಾರಿಗೂ ಏನ ಸಂಬಂಧ ಅಂತ. ಈ ads ನೋಡಿದರ ಹೆಂಗ ಅನಸ್ತದ ಅಂದರ ನಾವ ಆ deo ಹೊಡ್ಕಂಡರ ಒಂಥರಾ heat seeking missile ಗತೆ ನಮ್ಮ ಮೈ ವಾಸನಿ ಹುಡ್ಕೊಂಡ ಹುಡಗ್ಯಾರ ಬಂದ ಅಪ್ಪಳಸ್ತಾರ ಅನ್ನೋರಗತೆ ಅನಸ್ತದ.
ಇವತ್ತ marketನಾಗ ಗಂಡಸರ deo ಸೇಲ ಆದಷ್ಟ ಹೆಂಗಸರದು ಸೇಲ್ ಆಗಂಗಿಲ್ಲಂತ. ಹೋದ ವರ್ಷ 1400 ಕೋಟಿ ರೂಪಾಯಿದ್ದ ಗಂಡಸರದ deo ಸೇಲಾಗ್ಯಾವ ಅಂದರ ನೀವ ಲೆಕ್ಕಾ ಹಾಕರಿ ಏಷ್ಟ ಹುಡುಗರು ಹುಚ್ಚು ಹಿಡಿಸಿಗೊಂಡಾವ ಅಂತ. ನನ್ನ ಕೇಳಿದರ ಆ ಗುಟ್ಕಾ ಬ್ಯಾನ ಮಾಡಿದಂಗ ಈ ಗಂಡಸರ deoನು ಬ್ಯಾನ ಮಾಡಬೇಕ ಇಲ್ಲಾಂದರ ಇನ್ನೊಂದ ಸ್ವಲ್ಪ ದಿವಸಕ್ಕ ಹುಡುಗರು ಜಾಸ್ತಿ ಇದ್ದಲ್ಲೆ air pollution ಆಗಿ ಎಲ್ಲಾರು ಉಸರಗಟ್ಟಿ ಸಾಯ್ತೇವಿ ಇಷ್ಟ ಮಾತ್ರ ಖರೆ…..ಹಂಗ ಲಗ್ನಾ ಮಾಡ್ಕೊಂಡ ಸಾಯೋದಕಿಂತ ಹಿಂಗ ಸಾಯೋದ ಛಲೋ ಅಂತೀರೇನ್? ಅಲ್ಲಾ ಇಲ್ಲೇ ಸಾಯಲಿಕ್ಕೆ ಲಗ್ನ ಮಾಡ್ಕೋತೇನಿ ಅಂದರು ಕನ್ಯಾ ಸಿಗಬೇಕಲಾ?