ರ್ರಿ.. ನಾ ಈಗರ ಋಷಿಪಂಚಮಿ ಹಿಡಿಲೇನು?

ಹಂಗ ಇಕಿ ಒಮ್ಮಿಕ್ಕಲೇ ’ ನಾ ಈಗರ ಋಷಿಪಂಚಮಿ ಹಿಡಿಲೇನು?’ ಅಂತ ಕೇಳಲಿಕ್ಕೆ ಕಾರಣ ಅದ. ಅದ ಏನಪಾ ಅಂದರ ಹಿಂದಕ ಒಂದ ಹದಿನೈದ-ಹದಿನಾರ ವರ್ಷದ ಹಿಂದ ಒಂದ ಸರತೆ ನಮ್ಮ ಅನಸಕ್ಕಜ್ಜಿ ಋಷಿಪಂಚಮಿ ಉದ್ಯಾಪನಿಗೆ ನಾವ ದಂಪತ್ ಹೋಗಿ ಬಂದಾಗ ಅಕಿ ಅಲ್ಲೆ ನಮ್ಮಜ್ಜಿ ಉದ್ಯಾಪನಿ ಮಾಡಿದ್ದ ಸಡಗರ ನೋಡಿ
’ರ್ರೀ…. ನಾನು ಋಷಿಪಂಚಮಿ ಹಿಡಿತೇನ್ರಿ’ ಅಂತ ಗಂಟ ಬಿದ್ದಿದ್ಲು. ಹಂಗ ಆವಾಗ ಅಕಿಗೆ ಈ ಋಷಿಪಂಚಮಿ ಅಂದರ ಏನೂ ಅಂತ ಗೊತ್ತ ಇದ್ದಿದ್ದಿಲ್ಲಾ. ಒಟ್ಟ ಯಾರರ ಏನರ ಛಲೋ ಕಾರ್ಯಕ್ರಮ ಮಾಡಿದರ ಇಲ್ಲೊ ನಾನೂ ಮಾಡ್ತೇನಿ ಅಂತ ಅನ್ನೋ ಚಟಾ ಇತ್ತ.
ನಾ ಅಕಿಗೆ ’ನಿಂದ ಋಷಿ ಪಂಚಮಿ ಹಿಡಿಯೋ ವಯಸ್ಸಲ್ಲಾ, ಮ್ಯಾಲೆ ಇದ ವೃತಾ, ನಿನ್ನ ಕಡೆ ಏನ ತಲಿ ವೃತಾ ಮಾಡಲಿಕ್ಕೆ ಆಗ್ತದ. ಅದು ಒಂದ ಅಲ್ಲಾ ಎರಡಲ್ಲಾ ಏಳ ವರ್ಷಗಟ್ಟಲೇ ಮಾಡಬೇಕು. ನೀ ನೋಡಿದರ ತಿಂಗಳಿಗೊಮ್ಮೆ ಸಂಕಷ್ಟಿ ಮಾಡಬೇಕಾರ ಚಂದ್ರೋದಯ ಆಗೊತನಕ ತಡಕೊಳಿಕ್ಕೆ ಆಗಂಗಿಲ್ಲಾ ಅಂತ ಅಂಗಾರಕ ಸಂಕಷ್ಟಿ ಇದ್ದಾಗೋಮ್ಮೆ ಇಷ್ಟ ಮಾಡಲಿಕತ್ತಿ. ಇನ್ನ ಋಷಿಪಂಚಮಿ ಹೆಂಗ ಮಾಡ್ತಿ’ ಅಂತ ನಾ ತಿಳಿಸಿ ಹೇಳಿದರು ಅಕಿ ಹಟಾ ಹಿಡದಿದ್ಲು.
ಆಮ್ಯಾಲೆ ’ಋಷಿಪಂಚಮಿ ವೃತಾ ಹಿಡಿಯೋರು ಋಷಿಗಳಗತೆ ವೈರಾಗ್ಯದ ಜೀವನ ನಡಸಬೇಕು. ಸರಳ-ಸಾದಾ ಜೀವನ, ಎಲ್ಲಾ ಮೊಹ, ಲೌಕಿಕ, ಕಾಮ, ವಾಸನಾ ಎಲ್ಲಾ ಬಿಟ್ಟ ಇರಬೇಕು. ಅದರಾಗ ಇದ ಮೇನ್ ವಯಸ್ಸಾದ ಹಿರೇ ಹೆಣ್ಮಕ್ಕಳ ಮಾಡ್ತಾರ, ಅದು ಕಡಿಗೆ (menstrual cycle) ನಿಂತವರು, ಮುಂದ ಮಕ್ಕಳಾಗಂಗಿಲ್ಲಾ ಅಂತ ಗ್ಯಾರಂಟೀ ಇದ್ದವರು ಹಿಡಿತಾರ. ನಾವ ದಣೇಯಿನ ಈಗ ಒಂದ ಕೀರ್ತಿಗೆ ಅಂತ ಮಗನ್ನ ಹಡದೇವಿ ಇನ್ನೂ ಆರತಿಗೆ ಒಬ್ಬ ಮಗಳನ್ನ ಹಡಿಯೋದ ಬಾಕಿ ಅದ ಅಂತ ತಿಳಿಸಿ ಹೇಳೊದರಾಗ ಏಳು-ಹನ್ನೇರಡ ಆಗಿತ್ತ. ಹಂಗ ನಾ ಅದರ ಬಗ್ಗೆ ’ರ್ರಿ…ನಾನೂ ಋಷಿಪಂಚಮಿ ಹಿಡಿತೇನಿ’ ಅಂತ ಒಂದ ಲೇಖನಾನೂ ಬರದಿದ್ದೆ ಆ ಮಾತ ಬ್ಯಾರೆ.
ಈಗ ಅಕಿ ಮತ್ತ ಆ ವಿಷಯ ತಗಿಲಿಕ್ಕೆ ಕಾರಣ ಏನಪಾ ಅಂದರ ಮೊನ್ನೆ ನಮ್ಮ ಪೈಕಿ ಇನ್ನೊಬ್ಬರ ಋಷಿಪಂಚಮಿ ವೃತಾ ಮಾಡಿ ಉದ್ಯಾಪನಿ ಮಾಡಿದ್ದರು. ಹದಿನಾರ ಮಂದಿ ಬ್ರಾಹ್ಮಣ ಮುತ್ತೈದಿಗೊಳಿಗೆ ಕರದ ಊಟಕ್ಕ ಬ್ಯಾರೆ ಹಾಕಿದರು. ಆ ಮುತ್ತೈದಿ ಲಿಸ್ಟ ಒಳಗ ನನ್ನ ಹೆಂಡ್ತಿ ಇದ್ಲು, ಇನ್ನ ಮುತ್ತೈದಿ ಜೊತಿ ಬ್ರಾಹ್ಮಣ ಫ್ರೀ ಸ್ಕೀಮ್ ಒಳಗ ನಾನೂ ಹೋಗಿ ಬಂದೆ.
ಆವಾಗ ಇಕಿಗೆ ಋಷಿಪಂಚಮಿ ಮತ್ತ ನೆನಪಾಗಿ ’ಹಿಂದಕ ನಾ ಋಷಿಪಂಚಮಿ ಹಿಡಿಲೇನ ಅಂತ ಕೇಳಿದಾಗ ನಿಂದ ಇನ್ನೂ ಆಗೋದ ಹೋಗೋದ ಅದ ಸದ್ಯೇಕ ಋಷಿಪಂಚಮಿ ಹಿಡಿಯೋದ ಬ್ಯಾಡ ಅಂದಿದ್ದರಿ, ಈಗರ ಹಿಡಿಲೇನ?’ ಅಂತ ಇಗೇನ ಅಕಿದ ಆಗೋದ-ಹೋಗೋದು ಎಲ್ಲಾ ಮುಗದದ ಅನ್ನೋರಗತೆ ಕೇಳಿದ್ಲು. ನಂಗ ಏನ ಹೇಳಬೇಕ ತಿಳಿಲಿಲ್ಲಾ ಇನ್ನ ಮತ್ತ ಅದ
’ನೀ ಋಷಿಪಂಚಮಿ ಹಿಡದರ ಸನ್ಯಾಸಿ ಜೀವನ, ಮೋಹ, ಮಾಯಾ, ಲೌಕಿಕ ಎಲ್ಲಾ ಮರಿಬೇಕ’ ಅಂತ ಹೇಳೊದರಾಗ ಅರ್ಥ ಇಲ್ಲ ಬಿಡ ಅಂತ
’ಲೇ ಇನ್ನ ಹತ್ತ ವರ್ಷಕ್ಕ ನಂದ ಅರವತ್ತ ವರ್ಷದ ಶಾಂತಿ ಅಂದರ ಷಷ್ಟಬ್ದಿ, ಆವಾಗ ಮತ್ತ ಮಕ್ಕಳೇಲ್ಲಾ ಸೇರಿ ಮದ್ವಿ ಮಾಡ್ತಾರ, ಆವಾಗ ಮತ್ತ ಪ್ರಸ್ತ, ಹನಿಮೂನ್ ಎಲ್ಲಾ ಇರ್ತಾವ. ಹಂತಾದರಾಗ ನೀ ಋಷಿಪಂಚಮಿ ಹಿಡದರ ನಾ ಷಷ್ಟಬ್ದಿ & ಮುಂದಿಂದ ಕಾರ್ಯಕ್ರಮ ಯಾರ ಜೊತಿ ಮಾಡ್ಕೋಳಿ? ಒಂದ ಸ್ವಲ್ಪ ವಿಚಾರ ಮಾಡ’ ಅಂತ ಅಂದೆ. ಆದರೂ ಅಕಿ ಏನ ಕೇಳಲಿಲ್ಲಾ.
ನಾ ತಲಿಕೆಟ್ಟ ’ ಇಷ್ಟ ಋಷಿಪಂಚಮಿ, ಋಷಿಪಂಚಮಿ ಅಂತ ಬಡ್ಕೊಳಿಕತ್ತಿ ಅಲಾ ಅದರ ಬಗ್ಗೆ ನಿನಗ ಏನರ ಗೊತ್ತ ಅದ ಏನ, ಅದನ್ನ ಯಾಕ ಮಾಡ್ತಾರ, ಯಾರ ಮಾಡ್ತಾರ?’ ಅಂತ ಕೇಳಿದರ ಅಕಿಗೆ ಅದರ ಏನ ಇತಿಹಾಸನೂ ಗೊತ್ತ ಇದ್ದಿದ್ದಿಲ್ಲಾ, ಪೂರಾಣನೂ ಗೊತ್ತ ಇದ್ದಿದ್ದಿಲ್ಲಾ. ಕಡಿಕೆ ನಾ ಅಕಿಗೆ ’ಮೊದಲ ಅದರ ಬಗ್ಗೆ ಡಿಟೇಲ್ಸ ತಿಳ್ಕೊ ಆಮ್ಯಾಲೆ ಡಿಸೈಡ ಮಾಡ, ಋಷಿಪಂಚಮಿ ಹಿಡಿಬೇಕೊ ಬ್ಯಾಡೊ’ ಅಂತ ಅಕಿಗೆ ಋಷಿಪಂಚಮಿ ಪುರಾಣ ಹೇಳಲಿಕ್ಕೆ ಶುರು ಮಾಡಿದೆ.
’ನೋಡಿಲ್ಲೇ… ಪದ್ಮಪುರಾಣದೊಳದ ಋಷಿಪಂಚಮಿ ಬಗ್ಗೆ ಹೇಳ್ಯಾರ, ಹೆಣ್ಣಮಕ್ಕಳ ತಿಳಿದೋ ತಿಳಿಲಾರದನೋ ಮಾಡಿದ ಸಕಲ ಪಾಪಗಳಿಗೆ ಪ್ರಾಯಶ್ಚಿತಕ್ಕಾಗಿ ಈ ವೃತಾ ಮಾಡ್ಬೇಕಂತ. ಇದನ್ನ ಹೇಳಿದ್ದ ಶ್ರೀ ಕೃಷ್ಣ. ಧರ್ಮರಾಜ ಶ್ರೀ ಕೃಷ್ಣಗ ’ಜೀವಿತಾವಧಿ ಒಳಗ ಮಾಡಿದ ಎಲ್ಲಾ ಪಾಪಗಳಿಗೆ ಪ್ರಾಯಶ್ಚಿತವಾಗಿ ಏನರ ವೃತಾ ಇದ್ದರ ಹೇಳಪಾ’ ಅಂತ ಕೇಳಿದಾಗ ಅಂವಾ ಈ ವೃತದ ಬಗ್ಗೆ ಹೇಳಿ, ಈ ವೃತಾ ಮಾಡೋದರಿಂದ ಸ್ತ್ರೀ ತನ್ನ ಜೀವಿತಾವಧಿ ಒಳಗ ಮಾಡಿದ ಪಾಪಗಳನ್ನ ಕಳ್ಕೋತಾಳ ಅಂತ ಹೇಳಿದನಂತ’ ಅಂತ ನಾ ಪುರಾಣ ಶುರು ಮಾಡಿದೆ. ಇಕಿ ಸಟಕ್ಕನ ನಡಕ ಬಾಯಿ ಹಾಕಿ
’ಅಯ್ಯ ಹಂತಾದ ಏನ ಪಾಪಾ ಮಾಡ್ಯಾರ ಹೆಣ್ಣಮಕ್ಕಳ…ಗಂಡಸರ ಏನ ಪಾಪಾ ಮಾಡಂಗೇಲೇನ್?’ ಅಂತ ಕೇಳಿದ್ಲು.
’ಅದ ನಂಗೋತ್ತಿಲ್ಲಾ, ನೀ ಅದನ್ನ ಕೃಷ್ಣಗ ಕೇಳ…. ಆದರ ಮೊದ್ಲ ಅಂವಾ ಹೇಳಿದ್ದ ಪೂರ್ತಿ ಪುರಾಣನರ ಕೇಳ…
’ಹಿಂದಕ ಇಂದ್ರಗ ರುದ್ರಾಸುರನನ್ನ ಕೊಂದಾಗ ಬ್ರಹ್ಮಹತ್ಯೆ ಮಾಡಿದ ದೋಷ ಬಂತಂತ, ಇನ್ನ ದೇವರಿಗೆ ದೋಷ ಬಂದರ ಮುಂದ ಹೆಂಗ? ಅದಕ್ಕ ಪರಿಹಾರ ಏನ ಅಂತ ಋಷಿ-ಮುನಿಗಳು ವಿಚಾರ ಮಾಡಿ ಇಂದ್ರಗ ಬಂದ ಬ್ರಹ್ಮ ಹತ್ಯೆ ದೋಷವನ್ನ, ಪಾಪವನ್ನ ನಾಲ್ಕ ಭಾಗ ಮಾಡಿ ಒಂದ ಭಾಗ ಭೂಮಿ ಒಳಗ, ಒಂದ ನೀರನಾಗ , ಒಂದ ಮರದಾಗ ಇನ್ನೊಂದ ಭಾಗ ಸ್ತ್ರೀ ಒಳಗ ಇಟ್ಟರಂತ. ಹಿಂಗಾಗಿ ಆವಾಗ-ಇವಾಗ ಇಂದ್ರನ ದೋಷ ಈ ನಾಲ್ಕುದರಾಗೂ ಪ್ರಕಟ ಆಗ್ತಿರ್ತದ ಅಂತ. ಸ್ತ್ರೀ ಒಳಗ ರಜಸ್ವಲೇ menstrual cycle ಏನ ಅದ ಅಲಾ ಅದ ಆ ಇಂದ್ರ ಬ್ರಹ್ಮ ಹತ್ಯೆ ಮಾಡಿದ ದೋಷದ ಒಂದು ಭಾಗ. ಇನ್ನ ರಜಸ್ವಲೆ ಸಮಯದೊಳಗ ಏನ ಹೆಣ್ಣಮಕ್ಕಳ ಮನ್ಯಾಗಿನ ಪಾತ್ರೆ-ಸಾಮಾನು, ಧವಸ ಧಾನ್ಯ , ಪದಾರ್ಥ ಎಲ್ಲಾ ಮುಟ್ಟಿರ್ತಾರಲಾ ಅದು ಪಾಪ. ಇನ್ನ ಆ ಪಾಪ ಹೋಗಬೇಕು ಅಂದರ ಸಪ್ತ ಋಷಿಗಳನ್ನ ಪೂಜಸಬೇಕು, ಆ ಸಪ್ತ ಋಷಿಗಳನ್ನ ಪೂಜಸೋದ ಋಷಿಪಂಚಮಿ ವೃತ. ಇದನ್ನೇಲ್ಲಾ ಹೇಳಿದ್ದ ಆ ಶ್ರೀ ಕೃಷ್ಣ ಪರಮಾತ್ಮ. ನೀ ಮತ್ತ ನನಗ ಹುಚ್ಚುಚಾಕಾರ questions ಕೇಳಬ್ಯಾಡಾ’ ಅಂತ ಸಂಕ್ಷೀಪ್ತ ಋಷಿಪಂಚಮಿ history cum story ಹೇಳಿದೆ.
ಇಷ್ಟ ಹೇಳಿದರು ಅಕಿ ಏನ ಕನ್ವಿನ್ಸ್ ಆದಂಗ ಕಾಣಲಿಲ್ಲಾ ಕಡಿಕೆ ನಾ ಸಿಟ್ಟಿಗೆದ್ದ
’ನೋಡಿಲ್ಲೇ ನಿನಗ ಋಷಿಪಂಚಮಿ ಉದ್ಯಾಪನಿನ ಮಾಡೊದ ಇಂಪಾರ್ಟೇಂಟೊ ಇಲ್ಲಾ ಒಟ್ಟ ಯಾವದರ ಉದ್ಯಾಪನಿ ಮಾಡಬೇಕೊ ಮೊದ್ಲ ಅದನ್ನ ಕ್ಲೀಯರ್ ಮಾಡ’ ಅಂದೆ. ಯಾಕಂದರ ಇಕಿ ಮಂದಿ ಅಗದಿ ಗ್ರ್ಯಾಂಡ್ ಆಗಿ ಉದ್ಯಾಪನಿ ಮಾಡಿದ್ದ ನೋಡಿ ಇದ ಯಾವದರ ಉದ್ಯಾಪನಿ ಅಂತ ಕೇಳಿದ ಮ್ಯಾಲೆ ಇಕಿಗೆ ಹಿಂಗ ಋಷಿಪಂಚಮಿ ಅಂತ ವೃತಾನೂ ಇರ್ತದ ಅದನ್ನ successfully complete ಮಾಡಿದ ಮ್ಯಾಲೆ ಉದ್ಯಾಪನಿ ಮಾಡ್ತಾರ ಅಂತ ಗೊತ್ತ ಆಗಿದ್ದ.
ನಾ ಅಕಿಗೆ ತಿಳಿಸಿ ’ ನೋಡಿಲ್ಲೇ ಹಂಗ ಉದ್ಯಾಪನಿನ ಮಾಡೋದ ಇತ್ತ ಅಂದರ ಅದಕ್ಕ ಋಷಿಪಂಚಮಿನ ಹಿಡಿಬೇಕ ಅಂತೇನ ಇಲ್ಲಾ. ಹಂಗ user friendly ಭಾಳಿಷ್ಟ ವೃತ ಅವ, ನೀ ಬೇಕಾರ ಅನಂತ ಚತುರ್ದಶಿ ವೃತಾ ಹಿಡಿ, ಮಹಾಶಿವರಾತ್ರಿ ವೃತಾ ಹಿಡಿ, ಸೋಲಾಸೋಮವಾರ ವೃತಾ ಹಿಡಿ, ಸ್ವರ್ಣಗೌರಿ ವೃತಾ ಹಿಡಿ ….ನೀ ಬೇಕಾದ್ದ ವೃತಾ ಹಿಡಿ ಅದನ್ನ ಕರೆಕ್ಟ ಮುಗಿಸಿದರ ಉದ್ಯಾಪನಿ ಮಾಡಬಹುದು’ ಅಂತ ತಿಳಿಸಿ ಹೇಳಿ ಸದ್ಯೇಕ ಆ ಋಷಿಪಂಚಮಿ ಮುಂದ ದೂಡೇನಿ. ಮತ್ತ ಯಾವಾಗ ನೆನಪ ಆಗ್ತದೊ ಗೊತ್ತ ಇಲ್ಲಾ.
ಅಲ್ಲಾ ಹಂಗ ನಮ್ಮಕಿ ಏನರ ನಮ್ಮ ಮನೆಯವರದ 108 ಗಿರಮಿಟ್ ಅಂಕಣ ಪ್ರಿಂಟ್ ಆದರ ಉದ್ಯಾಪನಿ ಮಾಡ್ತೇನಿ ಅಂತ ಬೇಡ್ಕೋಂಡಿದ್ದರ ಈಗ ನಾವ ಅಗದಿ ಪದ್ದತಸೀರ ಉದ್ಯಾಪನಿ ಮಾಡಬಹುದಿತ್ತ. ಯಾಕಂದರ ಇವತ್ತಿನ ನನ್ನ ’ಗಿರಮಿಟ್’ ಅಂಕಣ 108ನೇದ್ದ.
ಮತ್ತ ನೀವೇಲ್ಲರ ನಿಮ್ಮ ಮನೆಯವರ ’ಗಿರಮಿಟ್’ ಉದ್ಯಾಪನಿ ಮಾಡ್ತಾರೇನ? ನಮ್ಮನ್ನೂ ಕರಿತಿರೇನ ಅಂತ ಕೇಳಬ್ಯಾಡ್ರಿ….ಹಂಗೇನ ಸದ್ಯೇಕ ವಿಚಾರ ಇಲ್ಲಾ, ಅಕಸ್ಮಾತ ಹಂಗೇನರ ಅಪ್ಪಿ-ತಪ್ಪಿ ಉದ್ಯಾಪನಿ ಮಾಡಿದರ ನಿಮನ್ನ ಬಿಟ್ಟ ಹೆಂಗ ಮಾಡಲಿಕ್ಕೆ ಬರ್ತದ ಹೇಳ್ರಿ? ನೀವೇಲ್ಲಾ ಓದತಿರಿ, ಓದಿರಿ ಅಂತ ಇವತ್ತ ಈ ಗಿರಮಿಟ್ 108 ಪ್ರಹಸನ ಆಗಿದ್ದ.
ನಿಮ್ಮ ಆಶೀರ್ವಾದ ಮಾತ್ರ ಯಾವಾಗಲೂ ನಮ್ಮ ಗಿರಮಿಟ್ ಅಂಕಣದ ಮ್ಯಾಲೆ ಹಿಂಗ ಇರಬೇಕ್ರಿಪಾ ಮತ್ತ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ