ಮತ್ತ IPL ಶುರು ಆತು. ಇದು ಐದನೇ ಕಂತು, ಭಾಗ, ಆವೃತ್ತಿ, ಸರಣಿ ಏನ ಸುಡಗಾಡರ ಅನ್ರಿ. ಇನ್ನ ಒಂದೆರಡ ತಿಂಗಳಂತೂ ತಲಿ ಚಿಟ್ಟ ಹಿಡಿಯೋಷ್ಟ ಕ್ರಿಕೆಟ. ಹಂಗ ರೊಕ್ಕಾ ತೊಗಂಡ ಆಡೋರಿಗೆನ ಅನಸಂಗಿಲ್ಲಾ, ಪುಕಶೆಟ್ಟೆ ಮನ್ಯಾಗ ಕೂತ ನೋಡವರಿಗೆ ತ್ರಾಸ. ಅದು ಕ್ರಿಕೆಟ ಕಂಡ್ರ ಆಗಲಾರದವರಿಗ ಅಂತೂ IPL ಬಂತಂದ್ರ ತಲಿಕೆಟ್ಟ ಹೋಗ್ತದ. ಹಂಗ ಒಂದಿಷ್ಟ ಮಂದಿ ಕ್ರಿಕೆಟ ಲೈಕ ಮಾಡೋರೊ IPL ಶುರು ಆದ ಮ್ಯಾಲೆ ಕ್ರಿಕೆಟ ಅಂದ್ರ ವೈಕ ಅನ್ನಲಿಕತ್ತಾರ. ಅಲ್ಲಾ ಹಂಗ ಯಾವದ ಆಗಲಿ ಅತೀ ಆತಂದ್ರ ಹೇಸಿಗೆ ಅನಿಸಿ ವಾಕರಿಕೆ ಬಂದ ಬರತದ ಬಿಡ್ರಿ.
ಆದರ ನಾ ಮಾತ್ರ IPL ಬಂತಂದ್ರ ಕೆಲಸ-ಬೊಗಸಿ, ಹೆಂಡ್ತಿ- ಮಕ್ಕಳು, ದೋಸ್ತರು ಎಲ್ಲಾ ಬಿಟ್ಟ ಸಂಜೀ ಮುಂದ ಟಿ.ವಿ ಎದುರಿಗೆ ಕೂತನೆಂದರ ತಿಂಡಿ,ತೀರ್ಥ, ಊಟ, ಕಡಿಕೆ ನಿದ್ದಿನೂ t.v ಮುಂದನ. ಅದಕ್ಕ ನಮ್ಮವ್ವಾ ” ಶುರು ಆತಿನಪಾ ನಿನ್ನ ಸುಡಗಾಡ ಆಟ. ಇನ್ನ ನಿಂದ ಎಲ್ಲಾ t.v. ಮುಂದ ಏನಪಾ? ಸುಮ್ಮನ ಇಲ್ಲೆ ಒಂದ bedpan ತಂದ ಇಟ್ಗೊ” ಅಂತಾಳ. ಪಾಪ, ನಮ್ಮವ್ವಗ ಟಿ.ವಿ ಒಳಗಿನ್ ಅಕಿ ನೋಡೋ ಮನಿಹಾಳ ಧಾರಾವಾಹಿ ಎಲ್ಲಾ ಬಂದಾಗತಾವಲಾ ಅದಕ್ಕ ಸಂಕಟಾ ಪಟ್ಟ ಆ ಸಿಟ್ಟಲೇ ನನ್ನ ಕ್ರಿಕೆಟಗೆ ಬೈತಾಳ ಇಷ್ಟ.
ಮತ್ತ ನಾ ಏನ್ ಹಂಗ ಭಾರಿ ಕ್ರಿಕೆಟ ಆಡೋಂವ ಏನ್ ಅಲ್ಲಾ. ನಂದ ಏನಿದ್ದರು ನೋಡೋದು ಜಾಸ್ತಿ ಮಾಡೋದ ಕಡಿಮೆ. ಆದರು ವಾರಕ್ಕೊಮ್ಮೆ ಒಂದೆರಡ ತಾಸ ಆಡಿ ನನ್ನ ಚಟಾ ತೀರಿಸ್ಗೋತೇನಿ. ಆದರ ನಾ ಆಡೋದು ಟೆನ್ನಿಸ್ ಬಾಲ್ ಕ್ರಿಕೆಟ, ಅದರಾಗ ನನಗ leather bat ಎತ್ತಲಿಕ್ಕೂ ಆಗಂಗಿಲ್ಲಾ. ಇನ್ನ leather ball cricket ಆಡಿ ಇದ್ದ ಒಂದೆರಡ ಕೈ ಕಾಲ ಮುರಕೋಳೊದು ಬ್ಯಾಡಾ ಅಂತ ಸುಮ್ಮನ tennis ballಗೆನ risk ಬ್ಯಾಡಾ ಅಂತ ಗಾರ್ಡ ಹಾಕ್ಕೊಂಡ ಆಡ್ತೇನಿ. ಆವಾಗ – ಇವಾಗ ಆಡ ಬೇಕಾರ ಕೈ ಕಾಲ ಒಳಸಿಕೊಂಡ ಇಲ್ಲಾ ಮೈ ಕೈ ಕೆತಗೊಂಡ ಮನಿಗೆ ಬಂದಾಗ ಹೆಂಡತಿ ಬೈತಿರತಾಳ ” ನಿಮಗ್ಯಾಕ ಬೇಕರಿ ಗಂಡ ಹುಡುಗರ ಆಟ. ನೀವ ನೋಡಿದರ leg Stump ಇದ್ದಂಗ ಇದ್ದೀರಿ, ಎಲ್ಲೇರ ಒಂದ ಹೋಗಿ ಒಂದ ಆದರ ಏನ ಮಾಡೋದು?….ಮನ್ಯಾಗ ಹುಡುಗರು ಇನ್ನೂ ಸಣ್ಣವ ಅವ, ಸುಮ್ಮನ ರಾಮ ರಾಮ ಅಂತ ಮನ್ಯಾಗ ಕೂತ ಮಂದಿ ಆಡೋದ ನೋಡಬಾರದ” ಅಂತಾಳ. ಏನ್ಮಾಡ್ತೀರಿ ’ಆಡಿದರ ಹೆಂಡ್ತಿ ಬೈತಾಳ, ನೋಡಿದ್ರ ಅವ್ವಾ ಬೈತಾಳ’, ಒಟ್ಟ ನನ್ನ ಜೀವನಾ ಅನ್ನೋದ fast bowlers ಕೈಯಾಗ ಸಿಕ್ಕ leather ball ಆದಂಗ ಆಗೇದ, ಪ್ರತಿಯೋಂದ ballಗೂ ತಿಕ್ಕೋರ ತಿಕ್ಕೋರ.
ಹಂಗ ಈ IPL ಶುರು ಆದಗಿಂದ Cricketದ ದಿಕ್ಕು ದಶೀನ ಬದಲಾಗೇದ. Cricket ಅನ್ನೋದ ಒಂದ ಮೂರ ತಾಸಿನ ಪಿಕ್ಚರ್ ಆಗಿ, ಅದರಾಗ climax, romance, tragedy ಏಲ್ಲಾ ಹೊಕ್ಕಂಡ ಬಿಟ್ಟದ. ಅದರಾಗ night IPL match ಇದ್ದಾಗಂತೂ ಯಾವದರ ಬಾರ್ ಗೆ ಹೋಗಿ ದೊಡ್ಡ screen ಮ್ಯಾಲೆ ನೋಡಲಿಕ್ಕ ಇಷ್ಟ ಮಜಾ ಬರತದಲಾ, ಇಲ್ಲೆ ನಮಗ ಏರಿದಂಗ ಅಲ್ಲೆ Slog Over ಶುರು ಆಗ್ತಾವ. ತೋಗೊ ಅವನೌನ ನಮಗಂತೂ ಅಗದಿ ನಾವ ಆಡಿದಂಗ ಆಗ್ತದ. ಅದರಾಗ ಒಂದ ನಾಲ್ಕೈದ ಮಂದಿ ಕಂಪನಿ ಇದ್ದರಂತು ಮುಗತ ಹೋತ ” ಈ Over ನಾಗ ಒಂದ Four ಹೊಡಿತಾನ ನೋಡ್, bets ಏನ್? Next over ನಾಗ wicket ಬೀಳ್ತದಪಾ ಎಷ್ಟೇಷ್ಟ ಶರ್ತ?” ಅಂತೇಲ್ಲಾ tight ಆಗಿ ನಾವ ಮಾತಾಡೋದ ಕೇಳಿ ಆಜು-ಬಾಜು ಮಂದಿ ನಾವು Bookie ಅಂತ ತಿಳ್ಕೊಂಡ ” sir ಈಗ ಏನ್ rate ನಡದದ” ಅಂತ 3-4 overಗೆ ಒಮ್ಮೆ ಕೇಳ್ತಾರ. ಹಂಗ ಖರೆ bookie ಆಗಿದ್ದರ ಒಂದ ನಾಲ್ಕ ದುಡ್ಡರ ಗಳಸ್ತಿದ್ದೇನೋ ಏನೋ? ಅದರ ಅದಕ್ಕೂ ಧೈರ್ಯಾ ಇಲ್ಲಾ.
” ನಿಮಗ ಕುಡಿಲಿಕ್ಕೆ ಆ cricket ಒಂದ ಕಡಿಮಿ ಇತ್ತ ನೋಡ್ರಿ, ಅದರಾಗ ಆ ಸುಡಗಾಡ cheer girls ಕುಣಿಯೋದ ನೋಡಿ cheers ಅಂತ ಹಲ್ಲತಕ್ಕೋಂಡ ಕೂತ ಬಿಡ್ತೀರಿ, ಖರೆ ಹೇಳ್ರಿ ನೀವ cricket ನೋಡಲಿಕ್ಕೆ ಕೂಡ್ತೀರೋ ಇಲ್ಲಾ ಆ ಹುಡಗ್ಯಾರನ ನೋಡಲಿಕ್ಕೆ ಕೂಡ್ತೀರೋ ” ಅಂತ ನನ್ನ ಹೆಂಡತಿ ಕೇಳ್ತಾಳ. ಕೆಲವೊಮ್ಮೆ ನನಗೂ ಖರೇನ ನಾ ಏನ್ ನೋಡಲಿಕ್ಕೆ ಕೂತೆನಿ ಅಂತ doubt ಬರತದ ಬಿಡ್ರಿ.
ಹಂಗ ನೋಡಿದ್ರ ಇವತ್ತ IPL ಶುರು ಆದಮ್ಯಾಲೆ ಎಷ್ಟ ಮಂದಿಗೆ ನಮ್ಮ ದೇಶದಾಗ Cricket ಆಡಲಿಕ್ಕ ಅವಕಾಶ ಸಿಗ್ತು ವಿಚಾರ ಮಾಡ್ರಿ. ನಂಬದು 122 ಕೋಟಿ ಜನಸಂಖ್ಯೆ ಅದರಾಗ ಒಂದ 62 ಕೋಟಿ ಗಂಡಸರು ,25 ಕೋಟಿ ಯುವಕರು. ಇನ್ನ ಆ 25 ಕೋಟಿ ಯುವಕರೂಳಗ 15 ಮಂದಿ Select ಮಾಡಿ ನಮ್ಮ National Team ,ಅಲ್ಲಾ Sorry BCCI Team Ready ಮಾಡಬೇಕು. ಅವಾಗ ಬರೆ Talent ಇದ್ದರ ಸಾಕಾಗಂಗಿಲ್ಲಾ , Influence ಬೇಕ, ರೊಕ್ಕ ಬೇಕು. ಅಂದರ ನೀವ ಕಡಿಕೆ ಒಂದ Match ನಾಗ ತೆಂಡೊಲ್ಕರಗ ನೀರ ಕೊಟ್ಟ ಬರಲಿಕ್ಕರ ಕರಕೋತಾರ. ಅಕಸ್ಮಾತ ಹಂಗ ಏನರ ಸಿನೀಯರ್ players injure ಆದಾಗ Chance ಸಿಕ್ಕ ನಿಮಗ ಒಂದ Match ಆಡಿಸಿದರು ಅಂದ್ರ ಅವತ್ತ ಹಿಂಗ ಆಡಬೇಕಲಾ, tv ಒಳಗ ನಿಮ್ಮ ಅವ್ವ ಅಪ್ಪಂದ interview ತೊಗೊಂಡ ರಾತ್ರೊ ರಾತ್ರಿ ನೀವು famous ಆಗಬೇಕು.
ಅಲ್ಲಾ ಹಂಗ ಇವತ್ತ ನೀರ ಕೊಡಲಿಕ್ಕೆ, ಮಾರಿ ವರಿಸಿಗೊಳ್ಳಿಕ್ಕೆ ಟಾವೆಲ್ ಕೊಡಿಲಿಕ್ಕ ground ಗೆ ಹೋದವರ ಒಂದಿಷ್ಟ players ಅವಕಾಶ ಸಿಕ್ಕಾಗ ದುಡಕೊಂಡ ಇವತ್ತ ಸಿನಿಯರ್ಸೆಗೆ ನೀರ ಬಿಟ್ಟ Retirement ತೊಗೊಳೊ ಹಂಗ ಮಾಡ್ಯಾರ. ಆದರ ಅದ Law of the nature ಬಿಡ್ರಿ. ಹೊಸಾ ಎಲಿ ಹುಟ್ಟಬೇಕಂದ್ರ ಹಳೆ ಎಲಿ ಉದರಬೇಕು ಇಲ್ಲಾ ಉದರಸಬೇಕು. ಈಗ ದ್ರಾವಿಡ, ಗಂಗೂಲಿಗೆ ಹೊಸಾ ಹುಡುಗರು ಬಂದ ಉದರಿಸಿದರಲಾ ಹಂಗ. ಈಗ ಏನಿದ್ರು competition ದುನಿಯಾ. ಹಂಗ ಅಕಸ್ಮಾತ ಒಬ್ಬೊಂವಾ ಒಂದ Match ಎನರ fail ಆದ ಅಂದ್ರ ಸಾಕ, ಹತ್ತ ಮಂದಿ ಬಾಯಿ ತಕ್ಕೊಂಡ ತುದಿಗಾಲ ಮ್ಯಾಲೆ ನಿಂತಿರತಾರ ನನಗ chance ನಿನಗ chance ಅಂತ. ಹೊಸಬರಿಗೆ ಅವಕಾಶ ಸಿಗಬೇಕಂದರ ಒಂದ ಈಗ ಇದ್ದವರ fail ಆಗಬೇಕು ಇಲ್ಲಾ injure ಆಗಬೇಕು.
ಆದರ ಈ IPL ಶುರು ಆದ ಮ್ಯಾಲೆ ನಮ್ಮ ದೇಶದಾಗ 8-10Team ಆದವು. ಒಂದೊಂದು Team ಗೆ 25-30 cricketers select ಆದ್ರು. ಯಾರ ನಾವೇನ್ ಈ ಜನ್ಮದಾಗ ’ರಾಹುಲ ದ್ರಾವಿಡ, ಶೇವಾಗ, ಸಚಿನ ಜೋತಿ ಆಡ್ತೇವಿ ಅಂತ ಅನ್ಕೊಂಡಿದ್ದಿಲ್ಲಾ ಅವರಿಗೆಲ್ಲಾ ಅವಕಾಶ ಸಿಗ್ತು. Net practice ಒಳಗ Bowling ಮಾಡಲಿಕ್ಕ ಕರಕೊಂಡ ಬಂದ ಹುಡುಗರು international players ಜೋತಿ ಆಟಾ ಆಡೋ ಹಂಗ ಆತ. ಮೊದ್ಲ ಹೆಸರ ಕೇಳಲಾರದ Players ಎಲ್ಲಾ national level famous ಆದ್ರು. ಇದನ್ನೆಲ್ಲಾ ವಿಚಾರ ಮಾಡಿದ್ರ IPL ನಿಂದನ ಅವರೇಲ್ಲಾ ಎದ್ದರು ಅನ್ನಬಹುದು. ನಮ್ಮ ದೇಶದಾಗ ತಿರುಗಿ-ಮುರುಗಿ cricket players ಅಂದ್ರ ಒಂದ ನಾಲ್ಕ-ಐದ ಮಂದಿ ಹೆಸರ ಹೇಳೋರಿಗೆ ಒಂದ ಹತ್ತ್-ಇಪ್ಪತ್ತ್ ಹೊಸಾ ಹೆಸರ ಹುಟ್ಟಿದ್ವು. ಪಾಪ, ground ನಾಗ ಕೂತ ನೋಡಲಿಕ್ಕೂ ಅವಕಾಶ ಸಿಗ್ತದ ಇಲ್ಲೋ ಅನ್ನೂರಿಗೆ ಆಡೋ ಅವಕಾಶ ಸಿಕ್ತು. ಅವರ ಜೀವನನ ಬದಲಾತು. ಹಂಗ ಕ್ರಿಕೆಟ ಬದಲಾತು, ಕ್ರಿಕೆಟರ್ಸ ಬದಲಾದರು, IPL ಮಾಲಕರ ಬದಲಾದರು, cricket rules ಬದಲಾದವು. ಬದಲಾಗಲಾರದ್ದ ಅಂದ್ರ ನಮ್ಮಂತಾ ನೋಡೊವರ ಹಣೆಬರಹ ಒಂದ, ಆವಾಗೂ ಟಿ.ವಿ ಮುಂದ ಕೂತ cricket ನೋಡ್ತಿದ್ದಿವಿ , ಈಗೂ ಟಿ.ವಿ ಮುಂದ ಕೂತ cricket ನೋಡ್ತೆವಿ. ಇಷ್ಟ ಅವಾಗ ಡಬ್ಬಾ ಟಿ.ವಿ ಇತ್ತು ,ಈಗ LCD TV ಬಂದಾವ.
ಇನ್ನ ಈ IPL ಒಳಗ ಭಾಳ ರೊಕ್ಕ ಅದ, ಅದು ರೊಕ್ಕದ ಸಂಬಂಧ ನಡೆಯೋ ಜೂಜಾಟದ ಆಟಾ ಅಂತೇಲ್ಲಾ ಅಂತಾರ. ಹಂಗ ಇವತ್ತ cricket ಆಡೋರು underwear , ಬನಿಯನ್ ನಿಂದ ಹಿಡದ ಎಲ್ಲಾ advertisement ಗೂ ಪೋಸ್ ಕೊಡ್ತಾರ. ಎಷ್ಟರ ಮಟ್ಟಿಗೆ ಈ ಕಂಪನಿಯವರು cricketers ನ್ನ ಖರಿದಿ ಮಾಡಿರತಾರ ಅಂದ್ರ ಅವರು ಒಂದ ಮುಂಜಾನಿಯಿಂದ ರಾತ್ರಿ ಮಲ್ಕೋಳೊತನಕಾ ಅವರ brand ದ್ದ ಸಾಮಾನ ಹಕ್ಕೊಂಡ ಇರತಾರ.
ಈ IPLನಾಗ ಎಲ್ಲಾ match fix ಆಗಿರತಾವ, ಕೆಲಸಾ-ಬೊಗಸಿ ಬಿಟ್ಟ TV ಮುಂದ ಕೂತ ಮಂಗ್ಯಾ ಆಗೋರ ನಾವ , ರೊಕ್ಕಾಗಳಸೋರ ಅವರು ಅಂತೇಲ್ಲಾ ಒಮ್ಮೊಮ್ಮೆ ಅನಸ್ತದ.
ಒಟ್ಟ ಒಂದ ಮಾತನಾಗ ಹೇಳ್ಬೇಕಂದ್ರ IPL ನಿಂದ cricket ದ ಹಣೇಬರಹನ ಬದಲಾಗೇದ. ಆಡೋರಿಗೆ ಛಲೋ ಆಗೇದ, ಗಳಸೋರಗಿ ಉಪಯೋಗ ಆಗೇದ, ನೋಡರಿಗೆ ಒಂದಿಷ್ಟ ಮಂದಿಗೆ ಬೇಜಾರ ಆಗೇದ. ಆದ್ರ cricket ಮಾತ್ರ ಹಳ್ಳಾ ಹಿಡಿಲಿಕ್ಕ ಹತ್ತೇದ. cricket ಈಗ ಒಂದ ಧಂಧೆ ಆಗೇದ. ಪ್ರತಿ IPL Team ಗೂ win and lose ಬದ್ಲಿ Profit & loss ಬಂದದ. IPL ನಾಗ Teams, Players ಜೊತಿಗೆ cricket ಹರಾಜ್ ಆಗಲಿಕತ್ತದ. ಇಷ್ಟ ಆದ್ರೂ ನಮಗ IPL ಬೇಕ. ಹಂಗ IPL ಬಂದ ಆದ್ರ ನಮ್ಮ ದೇಶದ್ದ Economy ನ ಹಾಳಾಗ್ತದ ಅಂತ, ಕೇಳ್ರಿ ಬೇಕಾರ ಶರದ ಪವಾರವರಿಗೆ. ನಾವು Lokpal ಮುಂದೂಡಬಹುದು ಆದ್ರ IPL ಅಲ್ಲಾ. IPL ಅನ್ನೋದು ಇವತ್ತ cricketಗೆ ಹಿಡಿದಿರೋ ದೆವ್ವಾ, ಇದ ಯಾವಾಗ ಬಿಡ್ತದೋ ಇಲ್ಲಾ cricketನ ಜೀವಾ ತೊಗೊಂಡ ಹೋಗ್ತೋದು ಆ ದೇವರಿಗೆ ಗೊತ್ತ. ದೇವರ ಅಂದರ ಸಚಿನ್ ತೆಂಡುಲ್ಕರ್ ಅಲ್ಲ ಮತ್ತ.
ಇವತ್ತ cricket ಅಂದ್ರ India, India ಅಂದ್ರ cricket ಆಗೇದ , BCCI ಮುಂದ ICC ದ ಏನು ನಡೆಯಂಗಿಲ್ಲಾ. ಜಗತ್ತಿನಾಗ Richest cricket body ಅಂದ್ರ ನಂಬದ, ಹಂಗ ನಾವು ಮನಸ್ಸ ಮಾಡಿದ್ರ ICC ನ್ನ ಖರಿದಿ ಮಾಡಬಹುದು. ಆದ್ರ ಇದ ಹಿಂಗ ಮುಂದವರದರ ನಾವು cricket ಕಳ್ಕೋತೇವಿ, ಅಷ್ಟಂತೂ ಖರೆ ಅನಸಲಿಕತ್ತದ.