ಇದ ಹೋದ ವರ್ಷ ಡಿಸೆಂಬರದ ಮಾತ ಇರಬೇಕು, ಹಿಂಗ ಮನ್ಯಾಗ ಹರಟಿ ಹೊಡ್ಕೋತ ಕೂತಾಗ, ನಮ್ಮವ್ವ ಒಮ್ಮಿಂದೊಮ್ಮಿಲೇ
“ಎಷ್ಟ ಲಗೂ ವರ್ಷ ಕಳಿತಪಾ ಪ್ರಶಾಂತಾ.. ದಿವಸ ಹೋಗಿದ್ದ ಗೊತ್ತಾಗಂಗಿಲ್ಲಾ ನೋಡ, ಹೋದ ವರ್ಷರ ನನಗ ೬೪ ತುಂಬಿದ್ವು ಈಗಾಗಲೇ ೬೫ ತುಂಬಿ ಬಿಟ್ಟವು, ಹಿಂಗs ಫಾಸ್ಟ ದಿವಸ ಹೊಂಟರ ಇನ್ನ ಎಷ್ಟ ದಿವಸೋ ಏನೊ ನಂದು” ಅಂತ ಅಂದ್ಲು. ಅದಕ್ಕ ನನ್ನ ಹೆಂಡತಿ ಸುಮ್ಮನ ಕೂಡಬೇಕೊ ಬ್ಯಾಡೊ
“ಅಯ್ಯ..ಅತ್ಯಾ, ಲಾಸ್ಟ ಮೂರ ವರ್ಷದಿಂದ ಹಿಂಗ ಅಂದ ಅಂದ ನಿಮ್ಮ ಆಯುಷ್ಯ ಜಾಸ್ತಿ ಮಾಡ್ಕೋಳಿಕತ್ತೀರಿ ತೊಗೊಳ್ರಿ” ಅಂದ ಬಿಟ್ಲು. ತೊಗೊ ಒಂದ ರೌಂಡ ಇಬ್ಬರದು ಜಟಾ-ಪಟಿ ಶುರು ಆತ, ನಾ ಸಿರಿಯಸ್ ಆಗಿ ನಡಕ ಬಾಯಿ ಹಾಕಿ
“ನನಗ ನಿಮ್ಮಿಬ್ಬರಿಗೂ ಬರಬರತ ವಯಸ್ಸ ಹೋಗ್ತೋದೊ ಇಲ್ಲಾ ಬರ್ತದೊ ಗೊತ್ತಿಲ್ಲಾ ಆದರ ನೀವಿಬ್ಬರು ಹಿಂಗ ಜಗಳಾಡಿದರ ನನ್ನ ವಯಸ್ಸಂತೂ ಕಡಿಮೆ ಆಗೋದ ಗ್ಯಾರಂಟಿ, ಮುಂದಿನ ವರ್ಷದಿಂದ ನೀವಿಬ್ಬರು ಒಟ್ಟ ಜಗಳಾಡಂಗಿಲ್ಲಾ ಅಂತ ರೆಸ್ಯುಲೇಶನ್ ಮಾಡ್ರಿ” ಅಂದೆ.
ನಮ್ಮವ್ವಗ ರೆಸ್ಯುಲೇಶನ್ ಅಂದರ ಒಮ್ಮಿಕ್ಕಲೇ ಗೊತ್ತಾಗಲಿಲ್ಲಾ, ಕಡಿಕೆ ರೆಸ್ಯುಲೇಶನ್ ಅಂದ್ರ ಆಣಿ ಅಂತ ಹೇಳಿದ ಮ್ಯಾಲೆ
“ಆತ ತೊಗೊ ನಿನ್ನ ಮ್ಯಾಲೆ ಆಣಿ ಮಾಡಿ ಹೇಳ್ತೇನಿ, ಮುಂದಿನ ವರ್ಷದಿಂದ ನಿನ್ನ ಹೆಂಡತಿ ಏನ ಹಾಳಗುಂಡಿ ಬಿದ್ದರು ನಾ ಅಕಿ ಉಸಾಬರಿ ಹೋಗಂಗಿಲ್ಲಾ” ಅಂದ್ಲು. ಅಕಿ ಹಂಗ ಅಂದಿದ್ದ ನೋಡಿ ನನ್ನ ಹೆಂಡತಿ ತಾನು ಉಮೇದಿಲೇ
“ನಿಮ್ಮ ಆಣಿ ಮಾಡಿ ಹೇಳ್ತೇನಿ, ನಿಮ್ಮವ್ವಗ ಇನ್ನ ಮುಂದ ಇತತ್ತ ಸರಿ ಅಂದರ ಕೇಳ್ರಿ” ಅಂದ್ಲು. ಅಲ್ಲಾ ಇಬ್ಬರು ನನ್ನ ಮ್ಯಾಲೆ ಆಣಿ ಮಾಡಿದರು, ಇನ್ನ ಮುಂದಿನ ವರ್ಷ ನನ್ನ ಗತಿ ಏನಪಾ ಅಂತ ಚಿಂತ ಹತ್ತ.
ಆಮ್ಯಾಲೆ ನಾನು ನನ್ನ ಹೆಂಡತಿ ಒಂದಿಷ್ಟ ಹೊಸ ವರ್ಷದ್ದ ರೆಸ್ಯೂಲೇಶನ್ ಮಾಡಿದರಾತು ಅಂತ ರೆಸ್ಯುಲೇಶನ್ ಪಟ್ಟಿ ಮಾಡಲಿಕ್ಕೆ ಹತ್ತಿದ್ವಿ.
“ನೀವು ಈ ವರ್ಷ ಫಾಲತು ವಾರಕ್ಕೊಮ್ಮೆ weekend party ಅಂತ ರೊಕ್ಕ ಖರ್ಚ ಮಾಡೋದ ಬಂದ ಮಾಡಿ ಮನಿ ಕಟ್ಟಸಲಿಕ್ಕೆ ಶುರು ಮಾಡ್ರಿ, ವರ್ಷಾ ಒಂದ ಹತ್ತ ಸಾವಿರ ರೂಪಾಯಿ ಮಂದಿ ಮನಿ ಒಪನಿಂಗಗೇ ಹೋಗಿ ಹೋಗಿ ಉಡಗೊರಿ ಕೊಡೊದ ಆತ ನಮ್ಮ ಹಣೇಬರಹದಾಗ, ನಾವ ಯಾವಾಗ ಮಂದಿ ಕಡೆ ಉಡಗೊರೆ ತೊಗೊಳೊದು” ಅಂತ ನನ್ನ ಹೆಂಡತಿ ಶುರು ಮಾಡಿದ್ಲು. ಹಂಗ ಅಕಿ ಹೇಳೊದ ಖರೇನ ನನ್ನ ಕೈಯಾಗ ರೊಕ್ಕ ನಿಲ್ಲಂಗಿಲ್ಲಾ, ಹಿಂಗಾಗೆ ಇವತ್ತೀಗೂ ಒಂದ ಸ್ವಂತ ಮನಿ ಕಟ್ಟಸಲಿಕ್ಕೆ ಆಗಲಿಲ್ಲಾ.
ನಾ ಅಕಿಗೆ “ಲೇ, ನೀ ಮೊದಲ ಈ ವರ್ಷ ನಿಂದ ವೇಟ್ ಒಂದ ಹತ್ತ ಕೆ.ಜಿ ಇಳಸಬೇಕು, ಇಲ್ಲಾಂದರ ನಾಳೆ ನಾ ಮನಿ ಕಟ್ಟಿದರ ನಾಂದಿ ಇಟಗೊಳಿಕ್ಕೆ ನೀ ಇರಲಾರದಂಗ ಆಗಿ ಗಿಗಿತ್ತ” ಅಂತ ಅಂದೆ, ಅದಕ್ಕ ಅಕಿ
“ನಾ ಈ ವರ್ಷ ಜಿಮಗೆ ಹೋಗ್ತೇನಿ” ಅಂತ ರೆಸ್ಯುಲೇಶನ್ ಮಾಡಿದ್ಲು. ನಂಗ ತಲಿ ಕೆಡ್ತ ಇಕಿ ನಾ ಇಲ್ಲೆ ರೊಕ್ಕ ಉಳಿಸಿ ಮನಿ ಕಟ್ಟಸಬೇಕು ಅಂತ ವಿಚಾರ ಮಾಡಲಿಕತ್ತರ ಇಕಿ ರೊಕ್ಕ ಖರ್ಚ ಮಾಡೊದರ ಬಗ್ಗೆ ವಿಚಾರ ಮಾಡಲಿ ಕತ್ತಾಳಲಾ ಅಂತ
“ಈ ವರ್ಷದಿಂದ ಮನಿಕೆಲಸಾ ಮಾಡೋಕಿನ್ನ ಬಿಡಸಿ, ಭಾಂಡೆ, ಒಗ್ಯೋಣಾ ಎಲ್ಲಾ ನೀನ ಮಾಡ್ಕೋ” ಅಂತ ಅಂದೆ. ಅಕಿ ಮುಂದ
“ಈ ವರ್ಷದಿಂದ ಮಕ್ಕಳಿಗೆ ಟ್ಯುಶನ್ ಬಿಡಿಸಿ ಬಿಡೋಣ, ನೀವು ಹೊರಗಿಂದ ಊರ ಉಸಾಬರಿ ಮಾಡೋದ ಬಿಟ್ಟ ಮಕ್ಕಳ ಅಭ್ಯಾಸ ಕಡೆ ಸ್ವಲ್ಪ ಲಕ್ಷ ಕೊಡರಿ” ಅಂತ ರೊಕ್ಕಾ ಉಳಸೊ ಮಾತ ಹೇಳಿದ್ಲು. ನಾ ಇಕಿ ನನಗ ಬೆನ್ನ ಹತ್ಯಾಳಲಾ ಅಂತ
“ಇನ್ನ್ ಮ್ಯಾಲೆ ಮಗಳಿಗೆ ಆಟೋ ಬಿಡಿಸಿ, ನೀನ ಮಗಳನ ದಿವಸಾ ಸಾಲಿಯಿಂದ ಕಳಸೋದ ಕರಕೊಂಡ ಬರೋದು ಮಾಡ” ಅಂತ ವಾಪಸ ಅಕಿ ಮ್ಯಾಲೆ ಬಂದೆ.
ಹಂಗ ಇಕಿ ಮನಿ ಕೆಲಸಾ ಎಲ್ಲಾ ತಾನ ಮಾಡಿ ಮಗಳನ ಸಾಲಿಗೆ ಕರಕೊಂಡ ಬರೋದು ಬಿಡೋದು ಮಾಡಿದ್ಲಂದರ ಜಿಮಗೆ ಯಾಕ ಹೋಗಬೇಕ, ತನ್ನ ತಾನ ಮೈ ಕರಗತದ, ಮ್ಯಾಲೆ ನನ್ನ ರೊಕ್ಕನೂ ಉಳಿತಾವ ಅನ್ಕೊಂಡ ಹೊಸಾ ವರ್ಷಕ್ಕ ವೆಲ್ ಕಮ್ ಮಾಡಿದೆ.
ಆ ಮಾತಿಗೆ ಈಗ ಒಂದ ವರ್ಷ ಆಗಲಿಕ್ಕೆ ಬಂತ, ನನ್ನ ಹೆಂಡತಿದೇನ ಒಂದ ಗುಂಜಿನೂ ವೇಟ ಇಳದಿಲ್ಲಾ. ನಾ ಏನ ಇನ್ನು ಮನಿದ ಭೂಮಿ ಪೂಜಾ ಮಾಡಲಿಲ್ಲಾ. ಹಿಂಗಾಗಿ ಆ ಹೋದ ವರ್ಷದ ಲಿಸ್ಟ ಬರೇ ಡೇಟ ಚೇಂಜ ಮಾಡಿ ರೆಸ್ಯುಲೇಶನ್ಸ ಹಂಗ ಕಂಟಿನ್ಯು ಮಾಡಬೇಕಂತ ಮಾಡೇನಿ.
ಅಲ್ಲಾ, ಇರಲಿ ಹಂಗ ನಮಗ ಒಂದ ವರ್ಷ ಹೆಂಗ ಹೋತು ಅಂತ ಗೊತ್ತಾಗಲಿಲ್ಲಾ ಅಂದರ ನಾವು ಖುಷಿಲೇನ ಕಳದೇವಿ ಅಂತ ಅರ್ಥ. ಹಂಗಿದ್ದಮ್ಯಾಲೆ ಯಾಕ ಸುಳ್ಳ ಆಗಲಾರದ್ದ ರೆಸ್ಯುಲೇಶನ್ ಮಾಡಿ ಅದಕ್ಕ ಬೆನ್ನ ಹತ್ತಬೇಕು, ಸುಮ್ಮನ ಸಂತೋಷದಿಂದ ಹೆಂಡ್ತಿ ಹೇಳಿದಂಗ ಕೇಳ್ಕೊಂಡ ಬದಕೋದ ಛಲೋ…
ಅನ್ನಂಗ ನಮ್ಮವ್ವ ನನ್ನ ಹೆಂಡತಿ ಮಾಡಿದ್ದ ರೆಸ್ಯುಲೇಶನ್ ಒಂದ ಪೂರ್ತಿ ಆದಂಗ ಅನಸ್ತದ, ಅವರಿಬ್ಬರೂ ಸೇರಿ ಏನ ನನ್ನ ಮ್ಯಾಲೆ ಆಣಿ ಮಾಡಿ ಇನ್ನ ಒಟ್ಟ ಇಬ್ಬರೂ ಜಗಳಾಡಂಗಿಲ್ಲಾ ಅಂತ ಅಂದಿದ್ದರಲಾ ಅದು…ಅಲ್ಲಾ ಹಂಗ ಅವರ ಜಗಳಾಡೋದ ಬಿಟ್ಟಾರೊ ಇಲ್ಲೊ ನಂಗಿನ್ನೂ ಗ್ಯಾರಂಟಿ ಇಲ್ಲಾ ಆದರ ನಾ ಮಾತ್ರ ಇನ್ನು ಇದ್ದೇನಲಾ ಅದಕ್ಕ ಅವರ ಜಗಳಾಡೋದ ಬಿಟ್ಟಿರಬೇಕು ಅಂತ ಅನ್ಕೊಂಡೇನಿ…..
ಹಂಗ ಹೊಸ ವರ್ಷಕ್ಕ ರೆಸ್ಯುಲೇಶನ್ ಅಂತು ಮಾಡರಿ, ಅದನ್ನ ಪಾಲಸೋದು ಬಿಡೋದು ಮುಂದಿನ ಮಾತ.