ಈಗ ಒಂದ ಎಂಟ ತಿಂಗಳ ಹಿಂದಿನ ಮಾತ ಇರಬೇಕ, ನಾ ಒಂದ ಲಗ್ನಕ್ಕ ಹೋಗಿದ್ದೆ, ಅಲ್ಲೆ ಕಲ್ಯಾಣ ಮಂಟಪದ ಗ್ವಾಡಿ ಮ್ಯಾಲೆ ಒಂದ ಬೋರ್ಡ ಹಾಕಿ ಅದರ ಮ್ಯಾಲೆ ‘ಜೀವನ ರಥ… ಸಾಗುವ ಪಥ’ ಅಂತ ಒಂದಿಷ್ಟ ಹಿತ ವಚನ ಬರದಿದ್ದರು. ಅಗದಿ ಮನಸ್ಸಿಗೆ ಹತ್ತೊ ಹಂತಾ ಮಾತ ಇದ್ವು ಖರೆ ಆದರ ಅದನ್ನ ಎಲ್ಲಾ ಬಿಟ್ಟ ಮದ್ವಿ ಮಂಟಪದಾಗ ಯಾಕ ಹಾಕಿದ್ದರೋ ಗೊತ್ತಾಗಲಿಲ್ಲಾ. ಅವನ್ನೇಲ್ಲಾ ಓದಿ ಬಿಟ್ಟರ ಲಗ್ನಾ ಮಾಡ್ಕೊಳಿಕತ್ತೋರ ಲಗ್ನಾ ಮಾಡ್ಕೊಳೊದನ್ನ reconsider ಮಾಡಬೇಕ ಹಂಗ ಇದ್ವು.
ನಾ ಭಾಳ ತಲಿಕೆಡಸಿಗೊಳ್ಳಿಕ್ಕೆ ಹೋಗಲಾರದ ಸುಮ್ಮನ ಓದಿ ಮರತ ಬಿಟ್ಟೆ. ಆದರ ಅದ ನಮ್ಮ ವಲ್ಲಭಜ್ಜನ ಕಣ್ಣಿಗೆ ಅದ ಬಿತ್ತ. ಅಂವಾ ಅದನ್ನ ಓದಿ ಅದರಾಗ ಏನ ಸುಡಗಾಡ ಹಿಡಸ್ತೊ ಗೊತ್ತಿಲ್ಲಾ, ನಂಗ
“ಏ, ಪರ್ಶ್ಯಾ, ಅಲ್ಲೇ ಆ ಬೋರ್ಡ ಮ್ಯಾಲೆ ಬರದಾರಲಾ ಅದನ್ನ ನಂಗ ಒಂದ ಹಾಳ್ಯಾಗ ಬರದ ಕೊಡ” ಅಂದಾ
“ಏ, ಅದನ್ನ ತೊಗೊಂಡ ನೀ ಏನ ಮಾಡ್ತಿ, ತಿರಗಿ ಗಿರಿ-ಮೊಮ್ಮಕ್ಕಳನ ಕಂಡಿ, ನಿನ್ನ ಜೀವನ ರಥದ ಗಾಲಿ ತಿರಗೋದ ಬಿಟ್ಟ ಜ್ಯಾಮ ಆಗಿ ಮೊನ್ನೆನ ಮಣಕಾಲ( knee) replacement ಮಾಡಿಸ್ಗೊಂಡಿ’ ಅಂತ ನಾ ಅಂದರ
’ನೀ ಸುಮ್ಮನ ಒಂದ ಹಾಳ್ಯಾಗ ಬರದ ಕೊಡಲೆ’ ಅಂತ ನಂಗ ಜೋರ ಮಾಡಿದಾ. ನನ್ನ ಕಿಸೆದಾಗರ ಬರ್ಕೋಳಿಕ್ಕೆ ಹಾಳಿ, ಸಣ್ಣ ಪ್ಯಾಡ ಯಾವದು ಇದ್ದಿದ್ದಿಲ್ಲಾ, ಒಂದ ಮೂರ ನಾಲ್ಕ ಮಂದಿಗೆ ಕೇಳಿದೆ ಎಲ್ಲಿನೂ ಹಾಳಿ/ ಪ್ಯಾಡ ಸಿಗಲಿಲ್ಲಾ. ಕಡಿಕೆ ಒಂದ ಒಂದಿಬ್ಬರ ಹೆಣ್ಣ ಮಕ್ಕಳಿಗೆ
“ನಿಮ್ಮ ಕಡೆ ಏನರ ವ್ಯಾನಿಟಿ ಬ್ಯಾಗದಾಗ ಪ್ಯಾಡ ಅದ ಏನ?” ಅಂತ ಕೇಳಿದೆ, ಅವರು ನನ್ನ ಮಾರಿ ನೋಡಿ ಇಲ್ಲಾ ಅಂದರು. ನಾ ಅಷ್ಟಕ್ಕ ಬಿಡಲಿಲ್ಲ ಮತ್ತ ಹಂಗ ಮದುವಿಗೆ ಬಂದ ನಮ್ಮ ಪೈಕಿ ಹೆಣ್ಣ ಮಕ್ಕಳಿಗೆ ’ಪ್ಯಾಡ ಅದ ಏನ’ ’ಪ್ಯಾಡ ಅದ ಏನ’ ಕೇಳ್ಕೊತ ಹೊಂಟೆ. ನಾ ಹಂಗ ಕೇಳ್ಕೋತ ಹೊಂಟಿದ್ದ ನಮ್ಮ ಮಾಮಿ ನೋಡಿ ನನ್ನ ಹೆಂಡತಿಗೆ ಕರದ
“ನಿನ್ನ ಗಂಡಾ ಎಲ್ಲಾ ಹೆಣ್ಣಮಕ್ಕಳಿಗೂ ವ್ಯಾನಿಟಿ ಬ್ಯಾಗಿನಾಗ ಪ್ಯಾಡ ಅದ ಏನ ಅಂತ ಹುಚ್ಚರಂಗ ಕೇಳಲಿಕತ್ತಾನ, ಅವಂಗ ಪ್ಯಾಡ ಯಾಕ ಬೇಕ ಕೇಳ” ಅಂತ ಹೇಳಿ ಕಳಸಿದ್ಲು. ನನ್ನ ಹೆಂಡತಿ ಸಿಟ್ಟಲೇ ನನ್ನ ಕಡೆ ಬರೋದಕ್ಕ ನಾ ಅಕಿಗೆ
“ಲೇ, ನಿನ್ನ ಕಡೆ ಪ್ಯಾಡ ಅದ ಏನ?” ಅಂತ ಕೇಳಿದೆ.
“ರ್ರಿ, ಅದ ಏನ ಅಸಂಯ್ಯ ಕಂಡ ಕಂಡ ಹೆಣ್ಣಮಕ್ಕಳಿಗೆ ಪ್ಯಾಡ ಅದ ಏನ, ಪ್ಯಾಡ ಅದ ಏನ ಅಂತ ಕೇಳಲಿಕತ್ತೀರಿ, ನೀವು ಪ್ಯಾಡ ತೊಗೊಂಡ ಏನ ಮಾಡೋರು?” ಅಂದ್ಲು.
“ಅಲ್ಲೇ ಬೊರ್ಡ ಮ್ಯಾಲೆ ಬರದಿದ್ದನ್ನ ವಲ್ಲಭಜ್ಜಗ ಬರದ ಕೊಡಬೇಕಂತ ಅದಕ್ಕ ಬರಿಲಿಕ್ಕೆ ಪ್ಯಾಡ ಬೇಕಾಗಿತ್ತು” ಅಂದೆ.
ಅಕಿ ತನ್ನ ತಲಿ ಜಜ್ಜಕೊಂಡ
“ಬುದ್ಧಿ ಎಲ್ಲಿ ಇಟ್ಟೀರಿ, ಛಂದಾಗಿ ರೈಟಿಂಗ ಪ್ಯಾಡ ಅಂತ ಕೇಳಬೇಕೋ ಬ್ಯಾಡೊ, ಹಂಗ ಹೆಣ್ಣಮಕ್ಕಳಿಗೆ ನಿನ್ನ ಕಡೆ ಪ್ಯಾಡ ಅದ ಏನ, ಪ್ಯಾಡ ಅದ ಏನ ಅಂತ ಕೇಳಿದರ ಅವರ ಏನ ತಿಳ್ಕೋಬೇಕ, ಭಾಳ ಶಾಣ್ಯಾರಿದ್ದೀರಿ ತೊಗೊರಿ” ಅಂತ ತನ್ನ ಕಡೆ ಇದ್ದಿದ್ದ ಡ್ರೈ ಆಗಿದ್ದ ವೆಟ್ ಟಿಸ್ಸ್ಯು ನನ್ನ ಮಾರಿಗೆ ಬಡದ ಹೋದ್ಲು.
ನಾ ನನ್ನ ಹೆಂಡತಿ ಮ್ಯಾಲೆ ಆಣಿ ಮಾಡಿ ಹೇಳ್ತೇನಿ ಅಲ್ಲಿ ತನಕ ನಾ ಪ್ಯಾಡ ಅಂತ ಅಂದರ ಇವರ ಬ್ಯಾರೆ ತಿಳ್ಕೋತಾರ ಅಂತ ನನಗ ಕನಸಿನಾಗೂ ಅನಸಿದ್ದಿಲ್ಲಾ.
ಇನ್ನ ನನ್ನ ಹೆಂಡ್ತಿ ಕೊಟ್ಟಿದ್ದ ಟಿಸ್ಸ್ಯೂದ ಮ್ಯಾಲೆ ನಮ್ಮ ಅಜ್ಜ ಹೇಳಿದ್ದನ್ನ ಬರದ ಕೊಟ್ಟೆ. ಅಂವಾ ಅಲ್ಲಿಗೆ ಗಪ್ ಕೂಡಲಿಲ್ಲಾ. ಹೆಂಗಿದ್ದರು ಮನಿ ಅಕ್ಕಿಕಾಳ ಮುಗದಿದ್ದವು, ಇನ್ನ ಸಾರ್ವಜನಿಕ ಅಕ್ಕಿಕಾಳ ಹುಡುಗಾ ಹುಡಗಿ ಅವತ್ತ ರೆಡಿ ಆದರ ಅವತ್ತ ಇಲ್ಲಾ ಮರುದಿವಸಕ್ಕೊ ಬಿದ್ದರು ಬಿಳಬಹುದಿತ್ತ. ಅವಂಗೂ ಕೆಲಸ ಇದ್ದಿದ್ದಿಲ್ಲಾ, ನಂಗೂ ಕೆಲಸ ಇದ್ದಿದ್ದಿಲ್ಲಾ, ಹಿಂಗಾಗಿ ನನ್ನ ಹಿಡದ
’ಇದರಾಗಿಂದ ಒಂದೊಂದ ಓದ ಮಗನ, ನಾ ನಿನಗ ತಿಳಿಸಿ ಹೇಳ್ತೇನಿ’ ಅಂದಾ. ಅದರಾಗ ಅಂವಾ ಹಾನಗಲ್ ಒಳಗ ಒಂದ ಕಾಲದಾಗ ಮಾಸ್ತರ ಇದ್ದೊಂವಾ. ಹಿಂಗಾಗಿ ನಾ ಸಿಕ್ಕೇನಿ ಅಂತ ನಂಗ ಕೊರಿಲಿಕತ್ತಾ.
ನಾ ಓದ್ಲಿಕ್ಕೆ ಶುರು ಮಾಡಿದೆ.
’ಉತ್ಸಾಹಿಯಾಗು ಆದರೆ ದುಡಕಬೇಡ…….’ ಅಂತ ಒಂದನೇ ಲೈನ ಓದೋದಕ್ಕ ತಡಿ ತಡಿ ಅಂದಾ. ಇಂವಾ ನಾ ಓದಿದ್ದನ್ನ ನನಗ explain ಮಾಡ್ಲಿಕತ್ತಾ.
’ನೋಡ ಮಗನ….ಉತ್ಸಾಹಿಯಾಗು ಆದರ ದುಡಕಬ್ಯಾಡ ಅಂದರ ಏನ ಅರ್ಥ….ಹಿಂಗ ಕನ್ಯಾ ಪಾಸ ಆತಿಲ್ಲೋ ಕಂಡೇನೊ ಇಲ್ಲೊ ಅನ್ನೊರಂಗ ಅಕಿ ಹಿಂದ ಅಡ್ಡಾಡಿ, ಅಕಿ ಹೇಳಿದಂಗ ಕುಣ್ಕೋತ, ನಾಲ್ಕ ಮಂದಿ ಹಿರೇಮನಷ್ಯಾರನೂ ಕೇಳಲಾರದ ಲಗ್ನಾ ಮಾಡ್ಕೊಂಡ ಮುಂದ ಮರಗತೀರಲಾ… ಅದಕ್ಕ ಇದನ್ನ ನಿಮ್ಮಂತಾವರ ಸಂಬಂಧ ಬರದಿದ್ದ’ ಅಂದಾ. ನಂಗ ತಲಿ ಕೆಟ್ಟತ
’ಏ.. ಅಜ್ಜಾ..ನನ್ನ ಮದ್ವಿ ಆಗಿ ಇಪ್ಪತ್ತೆರಡ ವರ್ಷ ಆತ ಇನ್ನ ಅದನ್ನ ತೊಗೊಂಡ ಏನ ಮಾಡೊಂವಾ…ಅದ ನನಗ ಸಂಬಂಧ ಇಲ್ಲಾ…ಸುಮ್ಮನ ಇರ’ ಅಂದರ ಕೇಳಲಿಲ್ಲಾ… ಮುಂದಿನ ಲೈನ ಓದ ಅಂದಾ. ಇಂವಾ ಇನ್ನ ಬಿಡಂಗಿಲ್ಲ ಬಿಡ ಅಂತ ಮುಂದಿನ ಲೈನ ಓದಿದೆ.
’ಕರುಣೆ ತೋರಿಸು ಆದರೆ ಮೋಸ ಹೋಗಬೇಡ’ ಅಂತ ಅನ್ನೊದಕ್ಕ ಇಂವಾ ಅದನ್ನ ಮತ್ತ ನನಗ ತಿಳಿಸಿ
’ಮಗನ ಇದ ನಿಮ್ಮಂತಾವರಿಗೆ …ಹೆಂಡ್ತಿ ಅಂದರ ಸಾಕ ಮರಿಗೆ ಮರಿಗೆ ಸಾಯ್ತಿರಿ, ಹಡದ ಅವ್ವಾ-ಅಪ್ಪನಕಿಂತ ಕಟಗೊಂಡ ಹೆಂಡ್ತಿಗೆ ಕರುಣೆ ತೋರಸ್ತೀರಿ… ಅಕಿ ಹೇಳಿದ್ದನ್ನೇಲ್ಲಾ ಒಪ್ಪಾ ಇಟ್ಗೋತಿರಿ…. ಅದ ಅವ್ವಾ-ಅಪ್ಪಾ ಹೇಳಿದರ ಕೇಳ್ತಿರೇನ’ ಅಂತ ಶುರು ಹಚಗೊಂಡಾ. ನಂಗ ಅನಸ್ತ ಇಂವಾ ತನ್ನಮಕ್ಕಳ-ಮೊಮ್ಮಕ್ಕಳ-ಸೊಸಿ ಮ್ಯಾಲಿಂದ ಸಿಟ್ಟ ಎಲ್ಲಾ ನನ್ನ ಮ್ಯಾಲೆ ಹಾಕಲಿಕತ್ತಾನ ಅಂತ. ಇನ್ನ ಎಷ್ಟ ಅಂದರೂ ಹಿರೇಮನಷ್ಯಾ ಯಾವಾಗರ ಒಮ್ಮೆ ಭೆಟ್ಟಿ ಆಗೊಂವಾ ಹೇಳಿದ್ದಕ್ಕ ಹೂಂ ಅಂದರ ನಂದೇನ ಗಂಟ ಹೊಗೊದ ಅಂತ ನಾನು ರೆಡಿ ಆಗೇನ ಮುಂದಿನ ಲೈನ
’ನಮೃತೆಯಿರಲಿ ಆದರೆ ಗುಲಾಮನಾಗಬೇಡ…’ ಅಂತ ಓದಿದೆ. ಇಂವಾ ಮತ್ತ ಅದ ರಾಗ ಹೇಳಿದಾ ’ನೀವೇಲ್ಲಾ ’ಜೋರೊ ಕಾ ಗುಲಾಮರಲೇ…’ ಅದ ಮತ್ತ ಲಾಸ್ಟ ಲೈನದ ಡೈಲಾಗ್ಸ ಕಂಟಿನ್ಯೂ ಆದ್ವು. ಮುಂದ ’ಉಳಿತಾಯ ಮಾಡು ಆದರೆ ಜಿಪುಣನಾಗ ಬೇಡ, ಲಾಭಗಳಿಸು ಆದರೆ ಲೋಭಿಯಾಗಬೇಡ’ ಅಂತ ಓದೋದಕ್ಕ ಪಟಕ್ಕನ ಹಿಂದಿನಿಂದ ನನ್ನ ಹೆಂಡ್ತಿ ಅಡ್ಡ ಬಾಯಿ ಹಾಕಿ
’ಇದ ಅಂತೂ ಇವರಿಗೆ ಅಪ್ಲಿಕೇಬಲ್ ಆಗೋದರಿ ಅಜ್ಜಾ…ಒಂದ ರೂಪಾಯಿ ಖರ್ಚ ಮಾಡ್ಬೇಕಂದರು ಹತ್ತ ಸಲಾ ವಿಚಾರ ಮಾಡ್ತಾರ. ಸಂಸಾರಕ್ಕೂ ಬ್ಯಾಲೆನ್ಸ್ ಶೀಟ್ ಹಾಕೊ ಪೈಕಿ, ಕೈ ಬಿಟ್ಟ ಖರ್ಚ ಮಾಡಂಗಿಲ್ಲಾ’ ಅಂತ ಅಂದ್ಲು.
ಅಲ್ಲಾ, ಇಕಿ ಇಷ್ಟೊತನಕ ಕಳುವಿಲೇ ನಾ ನಮ್ಮಜ್ಜನ ಕಡೆ ’ಜೋರೊ ಕಾ ಗುಲಾಮ್’ ಅಂತ ಬೈಸ್ಗೊಳೊದನ್ನ ಕೇಳಲಿಕತ್ತಿದ್ಲ ಕಾಣ್ತದ ಆವಾಗ ಸುಮ್ಮನ ಇದ್ದೋಕಿ ಈಗ ನಡಕ ಬಾಯಿ ಹಾಕಿದ್ಲು.
ಈ ಸರತೆ ನಮ್ಮಜ್ಜ ಏನ ಅನ್ನಲಿಲ್ಲಾ. ಒಂದ ಸರತೆ ನನ್ನ ಮಾರಿ ಒಂದ ಸರತೆ ನಮ್ಮಕಿ ಮಾರಿ ನೋಡಿ ಮುಂದಿಂದ ಓದ ಮಗನ ಅಂದಾ
ಇನ್ನ ಅದರ ಬಗ್ಗೆನೂ ಕೊರೆಯೊಂವ ಇದ್ದನೋ ಏನೋ ಅಷ್ಟರಾಗ ನನ್ನ ಪುಣ್ಯಾಕ್ಕ ಸ್ಟೇಜ್ ಮ್ಯಾಲೆ
’ ಸೂ ಮೂಹೂರ್ತೇ ಸಾವಧಾನ..ಸುಲಗ್ನೇ ಸಾವಧಾನ’ ಅಂತ ಲಗ್ನಾ ಮಾಡ್ಕೊಳೋರಿಗೆ ವಿನಾಯಕ ಭಟ್ಟರ warning ಮಾಡ್ಲಿಕತ್ತಿದ್ದರು.
ನಾ ಏ ಅಕ್ಕಿಕಾಳ ಟೈಮ ಆತ ಬಾ ಅಜ್ಜಾ, ಹೊಟ್ಟಿ ಹಸ್ದಾವ, ಮ್ಯಾಲೆ ನೀ ಶುಗರ್ ಪೇಶೆಂಟ ಪಟಕ್ಕನ ಅಕ್ಕಿ ಕಾಳ ಹಾಕಿ ಒಂದನೇ ಪಂಕ್ತಿಗೆ ಊಟಕ್ಕ ಕೂಡೋಣ ಅಂತ ಕರಕೊಂಡ ಹೋದೆ.
ಅಲ್ಲಾ, ಹಂಗ ಆ ’ಜೀವನ ರಥ- ಸಾಗುವ ಪಥ’ ಬರದಿದ್ದರಾಗ, ನಮ್ಮಜ್ಜ ಹೇಳಿದ್ದರಾಗ ಏನು ತಪ್ಪ ಇಲ್ಲಾ. ಆದರ ಅದ ಥೇರಿ, ಪ್ರ್ಯಾಕ್ಟಿಕಲ್ ಆಗಿ ಹಂಗ ಬದಕೋದ ಎಷ್ಟ ತ್ರಾಸ ಅಂತ ಇಪ್ಪತ್ತೆರಡ ವರ್ಷದಾಗ ನನಗೂ ಗೊತ್ತ ಆಗೇದ ಎಪ್ಪತ್ತ ವರ್ಷದಾಗ ನಮ್ಮಜ್ಜಗೂ ಗೊತ್ತ ಆಗೇದ.
ಹಂಗ ಮುಂದಿನ ವಾರ ನನ್ನ ಮದ್ವಿ ಆಗಿ 23 ವರ್ಷ ಆಗ್ತದ. ಈಗ ನನಗ ಏನಿದ್ದರು ಹೆಂಡ್ತಿ ಹೇಳಿದ್ದ ಪಥಾ, ಅಕಿ ನಡಿಸಿದಂಗ ಜೀವನ ರಥಾ…ಹೌದಿಲ್ಲ ಮತ್ತ?
ಅಲ್ಲಾ ಯಾರ ಜೀವನ ರಥಾ ನಡಸಿದರ ಏನ ಆಗೋದರಿ, ಒಟ್ಟ ಜೀವನದ ಪಥಾ ಛಂದಾಗಿ ಸಾಗಿದರ ಸಾಕ.
ನೋಡ್ರಿ ಹಂಗ ಹೊಸ್ದಾಗಿ ಲಗ್ನ ಆಗೋರ ಈ ಪ್ರಹಸನ ಓದಿ ಏನರ ಪ್ರಿಕಾಶನ್ ತೊಗೊಳೊದಿತ್ತಂದರ ತೊಗೊರಿ. ಇನ್ನ ಲಗ್ನ ಆದೋರಿಗಂತೂ ಇದೇಲ್ಲಾ ಗೊತ್ತ ಇದ್ದದ್ದ.