ಜೂನ ಒಂದಕ್ಕ ಹುಟ್ಟಿದವರ ಕೈ ಎತ್ತರಿ….

ಇದ ಒಂದ ಮುವತ್ತೈದ-ಮುವತ್ತಾರ ವರ್ಷದ ಹಿಂದಿನ ಮಾತ ಇರಬೇಕ. ನಮ್ಮಪ್ಪ ನನಗ ಸರ್ಕಾರಿ ಸಾಲ್ಯಾಗಿಂದ ಗೊಂಜಾಳ ಉಪ್ಪಿಟ್ಟ ಹಜಮ ಆಗಂಗಿಲ್ಲಾ ಅಂತ ಐದನೇತ್ತಕ್ಕ ೫ ನಂ. ಸಾಲಿ ಬಿಡಿಸಿಸಿ ಘಂಟಿಕೇರಿ ನ್ಯಾಶನಲ್ ಹೈಸ್ಕೂಲಿಗೆ ಅಡ್ಮಿಶನ್ ಮಾಡಿಸಿದಾ. ಆವಾಗ ಸಾಲಿ ಕರೆಕ್ಟ ಜೂನ ಒಂದಕ್ಕ ಶುರು ಆಗ್ತಿದ್ವು. ಹಂಗ ಜೂನ್ ಒಂದ ಶನಿವಾರ ಬಂದಿದ್ದರ ಸೋಮವಾರದಿಂದ ಶುರು ಆಗ್ತಿದ್ದವು. ಯಾಕಂದರ ಒಂದ ದಿವಸ ಸಾಲಿಗೆ ಹೋಗಿ ಮರದಿವಸ ಸೂಟಿ ಆದರ ಅದ ದ್ವಿತೀಯ ವಿಘ್ನ ಆದಂಗ. ಯಾವದ ಛಲೋ ಕೆಲಸಾ ಮಾಡ್ಬೇಕಾರ ಅದಕ್ಕ ದ್ವಿತೀಯ ವಿಘ್ನ ಆಗಬಾರದು ಅಂತಾರ. ಮದ್ವಿ ಮಾಡ್ಕೋಳೊದ ಒಂದ ಬಿಟ್ಟ ಮತ್ತ. ಹಂಗ ಗಂಡಸರಿಗೆ ಮದ್ವಿ ಮಾಡ್ಕೊಳೋದ ಛಲೋ ಕೆಲಸ ಏನಲ್ಲಾ ಆ ಮಾತ ಬ್ಯಾರೆ.
ಇನ್ನ ಮಾಡರ್ನ ಸಾಲಿ ಶನಿವಾರನ ರಿ-ಓಪನ್ ಇದ್ದರು ಮನ್ಯಾಗ
’ನೀ ಸೋಮವಾರದಿಂದನ ಹೋಗ ತಮ್ಮಾ…ಏನ ಒಂದನೇ ದಿವಸನ ಹೋಗಿ ಫಸ್ಟ ಬರೋದು ಅಷ್ಟರಾಗ ಅದ’ ಅಂತಿದ್ದರು. ಸಾಲಿ ಸೆಕ್ಯೂಲರ್ ಇದ್ದರು ನಾವ ಕಮ್ಯುನಲ್ ಇದ್ವಿ. ಹಿಂಗಾಗಿ ದ್ವಿತೀಯ ವಿಘ್ನ ಮಾಡ್ತಿದ್ದಿಲ್ಲಾ. ಕರೆಕ್ಟ ಜೂನ ಫಸ್ಟಗೆ ನಮ್ಮ ಹೊಸಾ ಸಾಲಿ ಶುರು ಆತ. ಇನ್ನೇನ ಟೀಚರ್ ಅಟೆಂಡನ್ಸ್ ತೊಗೊಬೇಕು ಅನ್ನೋದರಾಗ ನಮ್ಮ ಕ್ಲಾಸಿನಾಗಿನ ಮೇರಿ ಎದ್ದ ನಿಂತ ’teacher today is my birthday’ ಅಂತ ಟೀಚರಗೆ ಒಂದ ಚಾಕಲೇಟ್ ಕೊಟ್ಟ ನಮಗೇಲ್ಲಾ ಐದ ಪೈಸಾದ ಲಿಂಬಿಹುಳಿ ಪೇಪರಮೆಂಟ್ ಹಂಚಿ, ಬ್ಯಾರೆ ಟೀಚರ್ಸಗೆ ಚಾಕಲೇಟ ಕೊಡಲಿಕ್ಕೆ ಪರ್ಮಿಶನ್ ತೊಗೊಂಡ ಕ್ಲಾಸ ಬಿಟ್ಟ ಹೋದ್ಲು.
ಅಕಿ ಹೋಗೊದ ತಡಾ ಮತ್ತೊಂದಿಬ್ಬರ ’ಟೀಚರ್ ಇವತ್ತ ನಂಬದು ಬರ್ಥಡೇ, ನಾವು ಮನಿಗೆ ಹೋಗಿ ಚಾಕಲೇಟ್ ತರ್ತೇವಿ’ ಅಂತ ಎದ್ದ ನಿಂತರು. ಅವರನ ನೋಡಿ ಮತ್ತೊಂದ ನಾಲ್ಕ ಮಂದಿ ’my birthday also’ ಅಂತ ಎದ್ದರು.
ನಮ್ಮ ಕ್ಲಾಸ ಟೀಚರ್ ಗಿಡ್ನಂದಿ ಮೇಡಮಗೆ ತಲಿ ಕೆಟ್ಟ ಹೋತ, ಅವರ ಸಿಟ್ಟಿಗೆದ್ದ
’ಜೂನ್ ಫಸ್ಟಕ್ಕ ಹುಟ್ಟಿದವರೇಲ್ಲಾ ಕೈ ಎತ್ತರಿ’ ಅಂದ್ರು.
ಬರೋಬ್ಬರಿ ಹದಿಮೂರ ಜನಾ ಕೈ ಎತ್ತಿದರು.
ಟೀಚರ ಹಣಿ ಬಡ್ಕೊಂಡ ’ಐವತ್ತ ಮಂದಿ ಕ್ಲಾಸನಾಗ ಇಪ್ಪಂದ ಮಂದಿ ಒಂದನೇ ದಿವಸನ ಬಂದಿಲ್ಲಾ, ಬಂದೋರ ಒಳಗ ಅರ್ಧಾ ಮಂದಿ ಇವತ್ತ ಬರ್ಥಡೇ ಅಂತ ಕ್ಲಾಸ ಬಿಟ್ಟ ಚಾಕಲೇಟ್ ಹಂಚಗೋತ ಹೊಂಟರ ನಾ ಯಾರಿಗೆ ಕಲಸಲಿ’ ಅಂತ ಬೈಲಿಕತ್ತರ.
’ಅಯ್ಯ..ನಮ್ಮ ಅವ್ವಾ-ಅಪ್ಪಾ ಜೂನ ಫಸ್ಟಕ್ಕ ಹಡದರ ನಂಬದೇನ ತಪ್ಪರಿ’ ಅಂತ ಅನ್ನೋವ ಇದ್ದೆ, ಹೋಗ್ಲಿ ಬಿಡ ನಂದೇನ ಇವತ್ತ ಬರ್ಥಡೇ ಅಲ್ಲಾ. ಅದರಾಗ ನಮಗ ಸರ್ಕಾರಿ ಸಾಲ್ಯಾಗ ಬರ್ಥಡೇ-ಗಿರ್ಥಡೇ ಮಾಡಿ ಗೊತ್ತ ಇದ್ದಿದ್ದಿಲ್ಲಾ, ಸುಮ್ಮನ ಇಲ್ಲೆ ಯಾರ ಯಾರ ಚಾಕಲೇಟ್ ಕೊಡ್ತಾರ ಇಸ್ಗೊಂಡರಾತು ಅಂತ ಗಪ್ ಇದ್ದೆ.
ಇನ್ನ ನಾ ಅಕ್ಟೋಬರ ಸೂಟ್ಯಾಗ ಹುಟ್ಟಿದಂವಾ, ಅಲ್ಲಾ ಹಂಗ ನಮ್ಮ ಅವ್ವಾ-ಅಪ್ಪಾ ಎರಡೂ ಮಕ್ಕಳನೂ ಪ್ಲ್ಯಾನ ಮಾಡಿ ಅಕ್ಟೋಬರ ಸೂಟಿ ಒಳಗ ಹಡದಿದ್ದರ. ಹಿಂಗಾಗಿ ಸ್ಕೂಲನಾಗ ನಾವ ಬ್ಯಾರೆಯವರ ಬರ್ಥಡೇ ಚಾಕಲೇಟ್ ಇಸ್ಗೊಂಡೇವೆ ಹೊರತೂ ಯಾರಿಗೂ ಕೊಟ್ಟಿಲ್ಲಾ ಅನ್ನರಿ.
ಇನ್ನ ನಮ್ಮ ಕ್ಲಾಸಿನಾಗ ಇರೋರ ಎಲ್ಲಾ ಖರೇನ ಜೂನ ಫಸ್ಟಕ್ಕ ಹುಟ್ಟಿದವರೇನಲ್ಲಾ. ಆವಾಗ ಆರ ವರ್ಷ ಆಗಿದ್ದರ ಇಷ್ಟ ಸಾಲ್ಯಾಗ ಒಂದನೇತ್ತಕ್ಕ ಸೇರಿಸ್ಗೋತಿದ್ದರ. ಹಿಂಗಾಗಿ ಪೇರೆಂಟ್ಸ ತಮ್ಮ ಮಕ್ಕಳ ಜೂನ ಫಸ್ಟಕ್ಕ ಹುಟ್ಟ್ಯಾರ ಅಂತ ಬರಿಸಿಸಿ ಸಾಲಿಗೆ ಸೇರಿಸಿ ಬಿಡ್ತಿದ್ದರು. ಒಂದೂ ಪೇರೆಂಟ್ಸಗೆ ಖರೇನ ಮಕ್ಕಳ ಹುಟ್ಟಿದ್ದ ಡೇಟ್ ಗೊತ್ತ ಇರ್ತಿದ್ದಿಲ್ಲಾ, ಇಲ್ಲಾ ಭಾಳ ಮಂದಿ ಹಳ್ಯಾಗ ಹುಟ್ಟಿದವರು, ಅಲ್ಲೇನ ಬರ್ಥ ಸರ್ಟಿಫಿಕೇಟ ಯಾ ಸೂಲಗಿತ್ತಿನೂ ಕೊಡ್ತಿದ್ದಿಲ್ಲಾ. ಒಟ್ಟ ಸಾಲಿಗೆ ಸೇರಸಲಿಕ್ಕೆ ವಯಸ್ಸ ಅಡ್ಜಸ್ಟ ಮಾಡಿ ಜೂನ ಒಂದ ಅಂತ ಬರಿಸಿ ಬಿಡ್ತಿದ್ದರು. ಮುಂದ ಅವರ ಜೀವನ ಪರ್ಯಂತ ಜೂನ ಒಂದಕ್ಕ ಹುಟ್ಟಿದವರ. ಆವಾಗೇಲ್ಲಾ ನಾಲ್ಕೈದ ಮಿನಿಮಮ್ ಹಡಿಯೋರ್ರಿಪಾ, ಎಲ್ಲೇ ಎಲ್ಲಾರ ಬರ್ಥಡೇ ನೆನಪ ಇಟ್ಗೊಬೇಕ. ಮ್ಯಾಲೆ ಬರ್ಥ ಡೇಟ ತೊಗೊಂಡ ಏನ ಮಾಡಬೇಕ ಅನ್ನೋ ಜನಾ, ಅವರಿಗೇನ ಗೊತ್ತಿತ್ತ ಮುಂದ ಒಂದ ದಿವಸ ಆಧಾರ ಕಾರ್ಡ, ಪ್ಯಾನ ಕಾರ್ಡ, ಪಾಸಪೋರ್ಟ ಎಲ್ಲಾ ಬರ್ತಾವ ಅದಕ್ಕ ಡೇಟ್ ಆಫ್ ಬರ್ಥ್ ಬೇಕ, ಹುಟ್ಟಿದ್ದಕ್ಕ ಬರೇ ಜೀವಂತ ಇದ್ದರ ಸಾಲಂಗಿಲ್ಲಾ documental ಪ್ರೂಫ್ ಬೇಕಾಗ್ತದ ಅಂತ. ಏನೊ ಪುಣ್ಯಾ ಮಕ್ಕಳನ ಸಾಲಿಗೆ ಸೇರಿಸಿದರಂತ ಜೂನ ಫಸ್ಟಗೆ ಹುಟ್ಟಿದ್ದ ಪ್ರೂಫರ ಸಿಕ್ಕತ, ಇಲ್ಲಾಂದರ ಅದು ಇರ್ತಿದ್ದಿಲ್ಲಾ.
ಹಂಗ ಪೇರೆಂಟ್ಸ ಮಕ್ಕಳದ ಹುಟ್ಟಿದ್ದ ಡೇಟ್ ಗೊತ್ತಿಲ್ಲಾಂದರ ಆವಾಗ ಸಾಲ್ಯಾಗಿನ ಹೆಡಮಾಸ್ತರ ಜೂನ್ ಒಂದ ಅಂತ ತಾವ ಬರದ ಅಡ್ಮಿಶನ್ ತೊಗೊತಿದ್ದರ. ಆವಾಗೇಲ್ಲಾ ಮಕ್ಕಳ ಸಾಲಿ ಕಲ್ತರ ಖುಶಿ ಪಡೋ ವಿಷಯರಿಪಾ. ಬರ್ಥ ಸರ್ಟಿಫಿಕೇಟ್ ಅದು-ಇದು ಅಂತ ತಲಿಗೆಡಸಿಗೊತಿದ್ದಿಲ್ಲಾ. ಹಂಗ ಬರ್ಥ್ ಸರ್ಟಿಫಿಕೇಟ್ ತೊಗೊಂಡ ಬಂದ ಸಾಲಿಗೆ ಅಡ್ಮಿಶನ್ ಮಾಡಸ್ರಿ ಅಂದಿದ್ದರ ಇವತ್ತ ಜೂನ ಒಂದಕ್ಕ ಹುಟ್ಟಿದವರ ಪೈಕಿ ೫೦ ಪರ್ಸೆಂಟ್ ಮಂದಿ ಅನಪಡ್ ಇರ್ತಿದ್ದರ ಆ ಮಾತ ಬ್ಯಾರೆ.
ಮುಂದ ಹೈಸ್ಕೂಲ, ಕಾಲೇಜ ಎಲ್ಲಾ ಕಡೆನೂ ಭಾಳ ದೋಸ್ತರು ಹಿಂಗ ಜೂನ ಫಸ್ಟಕ್ಕ ಹುಟ್ಟಿದವರ.
ನಾ ಮುಂದ ಕೀರ್ಲೋಸ್ಕರದಾಗ ಕೆಲಸಾ ಮಾಡ್ಬೇಕಾರ ಅಲ್ಲೆ ಪರ್ಸನಲ್ ಡಿಪಾರ್ಟಮೆಂಟನವರು ಬರ್ಥಡೇ ಇದ್ದೋರ ಹೆಸರ ನೋಟಿಸ ಬೋರ್ಡ ಮ್ಯಾಲೆ ಹಚ್ಚಿ ಅವರನ ಟೈಮ ಆಫೀಸಗೆ ಕರದ ಬರ್ಥಡೇ ಗ್ರೀಟಿಂಗ್, ಒಂದ ಪಾವ ಕೆ.ಜಿ ಮಿಶ್ರಾ ಪೇಢಾ ಕೊಡತಿದ್ದರು. ನೋಟಿಸ ಬೋರ್ಡ್ ಮ್ಯಾಲೆ ಯಾಕ ಹೆಸರ ಹಚ್ಚತಿದ್ದರು ಅಂದರ ಒಂದು ಅವರಿಗೂ ಗೊತ್ತಾಗಲಿ ಇವತ್ತ ಅವರ ಬರ್ಥಡೇ ಅಂತ ಮ್ಯಾಲೆ ಅದ ನಮ್ಮಂತಾ ನಾಲ್ಕ ಮಂದಿಗೆ ಗೊತ್ತಾಗಿ ನಾವ ಅವರ ಕಡೆ ಪಾರ್ಟಿ ಕೆತ್ತಲಿ ಅಂತ. ಇನ್ನ ಜೂನ ಒಂದಕ್ಕ ಕೆ.ಇ.ಸಿ ಒಳಗ ಏನಿಲ್ಲಾಂದರು ಒಂದ ನೂರ ಮಂದಿ ಬರ್ಥಡೇ ಬರ್ತಿತ್ತ, ಅವತ್ತ ಅಂತು ಮಿಶ್ರಾ ಪೇಢಾದವರದ ಗಾಡಿನ ಕಂಪನಿಗೆ ಬರ್ತಿತ್ತ. ಪಾಪ ನಮ್ಮ ಟೈಮ ಆಫೀಸ ದೋಸ್ತ ’shorthand’ ಮಧುಗ ನೂರ ಮಂದಿಗೆ ಕೈ ಕೊಟ್ಟ ಕೊಟ್ಟ ಪೇಢೆ, ಗ್ರೀಟಿಂಗ್ ಕೊಡೊದರಾಗ ಕೈ ಅನ್ನೋದ ’longhand’ ಆಗಿರ್ತಿತ್ತ.
ಅಲ್ಲಿನೂ ಹಂಗ, ಒಂದೂ ಸಾಲ್ಯಾಗ ಜೂನ ಒಂದ ಅಂತ ಬರಿಸಿದ್ದಕ್ಕ ಜೂನ ಒಂದಕ್ಕ ಹುಟ್ಟಿದವರು, ಇನ್ನೊಂದಿಷ್ಟ ಜನಾ ರಾಯನಾಳ-ಗಂಗಿಯಾಳ ಆಜು-ಬಾಜು ಹಳ್ಳಿ ಮಂದಿ. ಅವರೇಲ್ಲಾ ತಮ್ಮ ಹೊಲಾ ಕಿರ್ಲೋಸ್ಕರಕ್ಕ ಕೊಟ್ಟ ಕೆಲಸಕ್ಕ ಸೇರಿದವರ, ಪಾಪ ಅವರ ಕಡೆ ಬರ್ಥ ಸರ್ಟಿಫಿಕೇಟ ಇರಲಿಲ್ಲಾ. ಹಿಂಗಾಗಿ ಜೂನ ಒಂದ ಅಂತ ಬರಕೊಂಡ ಕೆಲಸಕ್ಕ ತೊಗೊಂಡಿದ್ದರು.
ಅಲ್ಲಾ, ಹಿಂಗಾಗಿ ನಮ್ಮ ದೇಶದಾಗ ಭಾಳಷ್ಟ ಜನಾ ಜೂನ ಫಸ್ಟಕ್ಕ ಹುಟ್ಟಿದವರ ಇದ್ದಾರ. ಬೇಕಾರ statistics ತಗದ ನೋಡ್ರಿ. ಇದ ನಮ್ಮ ದೇಶದ majority people birthday, ನಾವ ಇದನ್ನ national birthday ಅಂತ ಸೆಲೆಬ್ರೇಟ್ ಮಾಡ್ಬೇಕ.
ಇನ್ನೊಂದ ಮಜಾ ಕೇಳ್ರಿಲ್ಲೆ, 2012ರ ಗುಜರಾತ ಅಸೆಂಬ್ಲಿ ಒಳಗ 36 ಮಂದಿ MLA ಜೂನ ಒಂದಕ್ಕ ಹುಟ್ಟಿದವರ ಇದ್ದರಂತ, ಹಂಗ 2007ರಾಗ 28, 2002ರಾಗ 31ಮಂದಿ ಜೂನ ಒಂದಕ್ಕ ಹುಟ್ಟಿದವರ. ಅವರದು ಸೇಮ ಇಶ್ಯು, ಹುಟ್ಟಿದಾಗ ಬರ್ಥ ಸರ್ಟಿಫಿಕೇಟ್ ಇರಲಿಲ್ಲಾ, ಎಲ್ಲಾರೂ ಸಾಲ್ಯಾಗ ಜೂನ ಒಂದ ಅಂತ ಬರಿಸಿದವರ. ಇನ್ನ ಆರೋಗ್ಯ ಮಂತ್ರಿಗಳು ಏನರ ಜೂನ ಒಂದಕ್ಕ ಹುಟ್ಟಿದ್ದರ ಅವರ ತಮ್ಮ ಡೇಟ್ ಆಫ್ ಬರ್ಥ್ ಚೇಂಜ್ ಮಾಡ್ಕೋಬಹುದು ಯಾಕಂದರ ಜನನ ಮರಣಗಳ ದಾಖಲೇ ಇಡೋದ health ministryನ ಅಲಾ.
ಇರಲಿ, ಈಗ ಎಲ್ಲಾ ಬಿಟ್ಟ ಜೂನ್ ಒಂದ ಯಾಕ ನೆನಪಾತು ಅಂದರ ಮೊನ್ನೆ ಮರ್ಲಿನ್ ಮುನ್ರೊಂದ ’Gentleman Prefer Blondes’ (1953) ಪಿಕ್ಚರ್ ನೋಡ್ಲಿಕತ್ತಿದ್ದೆ. ಅಲ್ಲಾ ಹಂಗ ಅಕಿ ನಮ್ಮ ಅಜ್ಜನ ವಾರ್ಗಿಕಿ ಬಿಡ್ರಿ. ಆದರೂ ಹೆಂತಾ ನಟಿ. ಅಕಿದ ಟ್ಯಾಲೆಂಟ್, ಬ್ಯೂಟಿ ಎಲ್ಲಾ ನೋಡಿ ಅಕಿನೂ ನನ್ನ ಹೆಂಡ್ತಿಗತೆ ಅಕ್ಟೋಬರನಾಗ ಹುಟ್ಟಿರಬೇಕ, she must be libran ಅಂತ ಅಕಿದ ಕುಂಡ್ಲಿ ನೋಡಿದರ ಅಕಿ ಜೂನ್ ಒಂದಕ್ಕ ಹುಟ್ಟಿದ್ದ ಗೊತ್ತಾತ. ಅಕಿ ಏನ ನಮ್ಮಗತೆ ಹೆಡಮಾಸ್ತರ ಜೂನ್ 1 ಅಂತ ಬರದಿದ್ದಕ್ಕ, ಇಲ್ಲಾ ಹೊಲಾ ಕೊಟ್ಟ ಕೆಲಸಕ್ಕ ಸೇರಬೇಕಾರ ಜೂನ ಒಂದ ಅಂತ ಬರಸಿದ್ದಲ್ಲ ಮತ್ತ…ಅಕಿದ ರಿಯಲ್ ಬರ್ಥಡೆನ ಜೂನ್ 1. ಹಿಂಗಾಗಿ ಅಕಿ ಜೊತಿ ಜೂನ್ ಒಂದಕ್ಕ ಹುಟ್ಟಿದವರೇಲ್ಲಾ ನೆನಪಾಗಿ ಇಷ್ಟ ಪುರಾಣ ಬರಿಬೇಕಾತ.
ಹಂಗ ನೀವ ಯಾರರ ಜೂನ್ ಒಂದಕ್ಕ ಹುಟ್ಟಿದವರ ಇದ್ದಿರೇನ್? ಕೈ ಎತ್ತರಿ ಒಂದ ಸಲಾ ನೋಡೋಣು….
ಏ..ಭಾಳ ಜನಾ ಇದ್ದೀರಿ ಬಿಡ್ರಿ….ನಿಮಗೇಲ್ಲಾ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

3 thoughts on “ಜೂನ ಒಂದಕ್ಕ ಹುಟ್ಟಿದವರ ಕೈ ಎತ್ತರಿ….

  1. ಬಹಳ ಚೆನ್ನಾಗಿ, ನಮ್ಮ ಉತ್ತರ ಕನ್ನಡ ಭಾಷೆ ಬರದಿರಿ.ಧನ್ಯವಾದಗಳು

  2. ಅಂತರರಾಷ್ಟ್ರೀಯ ಹುಟ್ಟು ಹಬ್ಬದ ದಿನ ಜೂನ್ 01.

  3. ಓದಬೇಕಾದ್ರ ನಮ್ಮ ಕಣ್ಣ ಮುಂದ ಬರ್ತಾವ ಎಲ್ಲಾ ಸೀನ್ಸ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ