ಹೋದ ಸಂಡೆ ಮುಂಜ ಮುಂಜಾನೆ ಎದ್ದ ದಾಡಿ-ಗಿಡಿ ಮಾಡ್ಕೊಂಡ ಸ್ಮಾರ್ಟ ಆಗಿ ರೆಡಿ ಆಗೋದಕ್ಕ ನನ್ನ ಹೆಂಡ್ತಿ ಅಡ್ದ ಬಾಯಿ ಹಾಕಿ
“ಎಲ್ಲೇ ಹೊಂಟದ ಸವಾರಿ…’ ಅಂತ ಕೇಳಿದ್ಲು.
“ಎಷ್ಟ ಸಲಾ ಹೇಳಬೇಕಲೇ ನಿಂಗ ಎಲ್ಲೇರ ಹೊಂಟಾಗ ಹಂಗ ಕೇಳಬಾರದು ಅಂತ…ಆಗೋ ಕೆಲಸನೂ ಆಗಂಗಿಲ್ಲಾ’ ಅಂತ ಅಂದರ
’ಅದಕ್ಕ ಕೇಳಿದ್ದ..ಹಂತಾದೇನ ನಟ್ಟ ಕಳಿಲಿಕ್ಕೆ ಹೊಂಟೀರಿ ಇಷ್ಟ ಶೃಂಗಾರ ಮಾಡ್ಕೊಂಡ’ ಅಂದ್ಲು.
ಇನ್ನ ಮುಂಜ ಮುಂಜಾನೆದ್ದ ಇಕಿದೇನ ಬಾಯಿ ಹತ್ತೋದ ಬಿಡ ಅಂತ
’ಏನಿಲ್ಲಾ, ಕಲ್ಯಾರ ಮನ್ಯಾಗ ಕಲ್ಯಾಣೋತ್ಸವ ಮಾಡಲಿಕತ್ತಾರ ಅದಕ್ಕ ಹೊಂಟೇನಿ, ಮಧ್ಯಾಹ್ನ ಊಟಾ ಅಲ್ಲೇ’ ಅಂತ ಹೇಳಿದೆ.
ಇನ್ನ ಕಲ್ಯಾಣೋತ್ಸವ ಅಂದರ ದೇವರ ಕೆಲಸ ಹಿಂಗಾಗಿ ಅಕಿ ಏನ ಮುಂದ ಮಾತಾಡ್ಲಿಲ್ಲಾ ಆದರೂ ತಡ್ಕೊಳಿಕ್ಕೆ ಆಗಲಾರದ
’ಅಲ್ಲಾ, ನಿಮ್ಮ ಒಬ್ಬರಿಗೆ ಹೇಳ್ಯಾರೋ ಏನ ದಂಪತ್ ಹೇಳ್ಯಾರೋ?’ ಅಂತ ಕೇಳಿದ್ಲು. ಹಂಗ ಯಾಕ ಕೇಳಿದ್ಲು ಅಂದರ ಹಿಂದಕ ಒಂದ ಮೂರ-ನಾಲ್ಕ ಫಂಕ್ಶನಗೆ ನಾ ದಂಪತ್ ಕರದಾಗ ಇಕಿನ್ನೆಲ್ಲೇ ಬಾಲಂಗಸಿಗತೆ ಕಟಗೊಂಡ ಹೋಗೊದು ಅಂತ ಇಕಿಗೆ ಹೇಳಿದ್ದೇಲಾ, ಮುಂದ ಕರದವರ ಎಲ್ಲೇರ ಇಕಿಗೆ ಭೆಟ್ಟಿ ಆದಾಗ
’ಏನ ಮೊನ್ನೆ ಸತ್ಯನಾರಾಯಣ ಪೂಜಾಕ್ಕ ಬರಲೇಲಾ…ಯಾಕ ಬರೋಹಂಗ ಇದ್ದಿದ್ದೀಲ್ಲೇನ?’ ಅಂತ ಕೇಳಿದಾಗ ಇಕಿಗೆ ಗೊತ್ತಾಗತಿತ್ತ ಅವರ ದಂಪತ್ತ ಕರದಿದ್ದರ ನಾ ಇಕಿಗೆ ಹೇಳಿದ್ದಿಲ್ಲಾ ಅಂತ.
’ಏ, ದಂಪತ್-ಗಿಂಪತ್ ಏನ ಹೇಳಿಲ್ಲಾ, ನಾವ ದೋಸ್ತರ ಸೇರಿ ಅವರ ಮನ್ಯಾಗ ಕಲ್ಯಾಣೋತ್ಸವ ಮಾಡಸಲಿಕತ್ತೇವಿ…ನೀ ಏನ ಅಲ್ಲೆ ಬಂದ ಪುಣ್ಯಾವಚನಿಗೆ ಕೂಡೋದ ಇಲ್ಲಾ’ ಅಂತ ಹೇಳಿದೆ.
ಅಲ್ಲಾ ನಿಮಗ ಗೊತ್ತಲಾ ನಮ್ಮ ದೋಸರ ಪೈಕಿ ಒಂದಿಷ್ಟ ಹುಡುಗರದು ಇನ್ನೂ ಮದುವಿ ಆಗಿಲ್ಲಾ, ಪಾಪ ಒಟ್ಟ ಕನ್ಯಾ ಸಿಗವಲ್ವು ಅಂತ. ಹಿಂಗಾಗಿ ಮೊನ್ನೆ ಸಹಜ ರವಿ ಆಚಾರ್ಯರ ಜೊತಿ ಮಾತಾಡ್ಕೋತ
’ಏನರಿ ನಮ್ಮ ಹುಡುಗರ ಹಣೇಬರಹ, ಪಾಪ ತಿಂಗಳಿಗೆ ೨೦-೨೫ ಸಾವಿರ ಗಳಸಿದರು ಕನ್ಯಾ ಸಿಗವಲ್ವು, ಮುಂದ ಏನ ಗತಿ, ಏನ್ತಾನ’ ಅಂತ ಅಂದಾಗ ಅವರು
’ಅಲ್ಲಾ ಎಲ್ಲಾರೂ ಸೇರಿ ಒಂದ ಶ್ರೀನಿವಾಸ ಕಲ್ಯಾಣೋತ್ಸವ ಯಾಕ ಮಾಡಬಾರದು’ ಅಂತ ಸಜೇಶನ್ ಕೊಟ್ಟರು. ಕಡಿಕೆ ಅವರ ಹಿಂತಾ ದಿವಸ ಮೂಹೂರ್ತ ಛಲೋ ಅದ, ನಾನ ನಿಂತ ಮಾಡಸ್ತೇನಿ ಅಂತನೂ ಅಂದರು. ಅದರಾಗ ಈ ಕೊರೊನಾ ಕಾಟ ಜಾಸ್ತಿ ಆದಾಗಿಂದ ಜನಾ ಮದ್ವಿನೂ ಆನಲೈನ ಮಾಡ್ಕೊಳಿಕತ್ತಾರ ಹಿಂಗಾಗಿ ಅವರು ಫ್ರೀ ಇದ್ದರ ಕಾಣ್ತದ.
ನಾ ಆಮ್ಯಾಲೆ ಈ ಲಗ್ನ ಆಗಲಾರದ್ದ ಹುಡುಗರಿಗೆ ಕೇಳಿದೆ
’ಹೆಂಗ ಮತ್ತ ರವಿ ಆಚಾರ್ಯರ ಹಿಂಗ ಅಂದಾರ, ಏನಿಲ್ಲದ ಎಷ್ಟ ಕನ್ಯಾ ನೋಡಿದರು ನಿಮ್ಮ ಹಣೇಬರಹಕ್ಕ ಒಬ್ಬರೂ ಹೂಂ ಅನ್ನವಲ್ಲರು, ನೋಡ್ರಿ ಎಲ್ಲಾರೂ ಕಾಂಟ್ರಿಬ್ಯೂಶನ್ ಮಾಡಿ ಕಲ್ಯಾಣೋತ್ಸವ ಮಾಡ್ತಿರೇನ?’ ಅಂತ ಅನ್ನೋದ ತಡಾ ಅಗದಿ ನಾ ಮುಂದ ನೀ ಮುಂದ ಅಂತ ರೆಡಿ ಆದರು. ಅಲ್ಲಾ ನಮ್ಮ ಹುಡುಗರ ಅಂತೂ ಕನ್ಯಾ ಸಿಗ್ತದ ಅಂದರ ಸ್ವಯಂವರಕ್ಕೂ ರೇಡಿ ಇದ್ದವು ಇನ್ನ ಕಂಟ್ರಿಬ್ಯೂಶನಕ್ಕ ಯಾಕ ತಲಿಕೆಡಿಸ್ಗೋತಾರ. ಮ್ಯಾಲೆ ನನ್ನಂತಾ ಲಗ್ನ ಆದ ಒಂದ ನಾಲ್ಕ ಮಂದಿ ದೋಸ್ತರು ಕಾಂಟ್ರಿಬ್ಯೂಶನ್ ಮಾಡಿದ್ವಿ. ಇನ್ನೊಂದ ಲಗ್ನ ಆಗಲಿ ಅಂತ ಅಲ್ಲ ಮತ್ತ, ದೋಸ್ತರದೂ ಲಗ್ನ ಆಗಲಿ ಅಂತ. ಅಲ್ಲಾ ನಮಗ ಒಂದ ಕಟಗೊಂಡ ರಗಡ ಆಗೇದ ಇನ್ನ ಕಾಂಟ್ರಿಬ್ಯೂಶನ್ ಮಾಡಿ ಕಲ್ಯಾಣೋತ್ಸವ ಮಾಡಿ ಮತ್ತೊಂದ ಮಾಡ್ಕೊಳಿಕ್ಕೆ ತಲಿಕೆಟ್ಟದೇನ?
ಇನ್ನ ನಾ ಹಿರೇತನ ಮಾಡಿದ್ದಕ್ಕ ಜವಾಬ್ದಾರಿ ತೊಗೊಂಡ ಕಲ್ಯಾರ ಮನ್ಯಾಗ ಕಲ್ಯಾಣೋತ್ಸವ ಮಾಡಲಿಕ್ಕೆ ವ್ಯವಸ್ಥಾ ಮಾಡಿ, ಹೀರೇ ಮನಷ್ಯಾರ ಅಂತ ಕಲ್ಯಾನ ಅವ್ವಾ-ಅಪ್ಪಗ ನಾಂದಿ ಇಟಗೋರಿ ಅಂತ ಹೇಳಿದೆ.
ಈ ಶ್ರೀನಿವಾಸ ಕಲ್ಯಾಣೋತ್ಸವ ಏನ ಅದ ಅಲಾ ಇದನ್ನ ನಾರ್ಮಲ್ಲಾಗಿ ಮನ್ಯಾಗ ಯಾರದರ ಕಂಕಣ ಬಲಾ ಲಗೂನ ಕೂಡಿ ಬರಲಿಲ್ಲಾ ಅಂದರ ಮಾಡ್ತಾರ. ಹಂಗ ಶ್ರೀ ಶ್ರೀನಿವಾಸ ಪದ್ಮಾವತಿಯವರದ ಮದುವಿ ಮಾಡಿ ಒಂದ ಅರಷಣ ಬೇರಿಗೆ ಕಂಕಣ ಕಟ್ಟಿ ಅದನ್ನ ಪೂಜಾ ಮಾಡಿ ಕಡಿಕೆ ಯಾರ ಯಾರದ ಲಗ್ನ ಆಗಿರಂಗಿಲ್ಲಾ ಅವರ ಕೈಗೆ ಆ ಕಂಕಣ ಕಟ್ಟತಾರ, ಹಂಗ ಶ್ರೀನಿವಾಸನ ಕಂಕಣ ಕಟಗೊಂಡರ ಮುಂದ ತಿಂಗಳ-ಒಪ್ಪತ್ತನಾಗ ಮದ್ವಿ ಆಗ್ತದ ಅನ್ನೊ ಪ್ರಥಾ ಅದ.
ಹಿಂಗಾಗಿ ನಾ ಒಂದ ಸಾರ್ವಜನಿಕ ಕಲ್ಯಾಣೋತ್ಸವ ಮಾಡಿ ನಾಲ್ಕ ಮಂದಿಗೆ ಗಂಟ ಹಾಕಿ ಅವರನು ನನ್ನಂಗ ಹಾಳ ಭಾವ್ಯಾಗ ದೂಡಲಿಕ್ಕೆ ಪ್ರಯತ್ನ ಮಾಡಲಿಕ್ಕತ್ತಿದ್ದೆ ಅನ್ನರಿ. ಅಲ್ಲಾ ನಮ್ಮ ಪ್ರಯತ್ನ ನಾವ ಮಾಡೋದ, ಹಂಗ ’ಕಂಕಣ ಭಾಗ್ಯ ಕೂಡಿದಾಗ ಕಲ್ಯಾಣ ಆಗೋದ’ ಆ ಮಾತ ಬ್ಯಾರೆ.
ಅಲ್ಲಾ ಈಗ ನಾವೇನ ಕಲ್ಯಾಣೋತ್ಸವ ಮಾಡಿದ್ವೇನ? ನಮ್ಮ ಮದ್ವಿ ಆತ ಇಲ್ಲ. ಲಗ್ನ ಆದ ಮ್ಯಾಲೆ ಕಲ್ಯಾಣ ಆತೋ ಇಲ್ಲೋ ಆ ಮಾತ ಬ್ಯಾರೆ ಆದರ ಮದ್ವಿ ಆಗಿದ್ದ ಅಂತು ಖರೇನ.
ಇನ್ನ ಇನ್ನೊಂದ ಮಜಾ ಅಂದರ ಯಾರ ಹಿಂಗ ಕಲ್ಯಾಣೋತ್ಸವಕ್ಕ ಹೋಗಿ ಕಂಕಣಾ ಕಟ್ಟಿಸಿಗೊಂಡ ಬರ್ತಾರಲಾ ಅವರ ಆ ಕಲ್ಯಾಣೋತ್ಸವದಾಗ ಮುಂದ ನಂದ ಮದ್ವಿ ಆದರ ನಾ ಹಿಂಗ ಮಾಡ್ತೇನಿ, ಹಂಗ ಮಾಡ್ತೇನಿ ಅಂತ ಬೇಡ್ಕೋಬೇಕಂತ. ಮತ್ತ ಆ ಹರಕಿ ಖರೆ ಖರೇನ ಮದ್ವಿ ಆದಮ್ಯಾಲೆ ತೀರಸಬೇಕಂತ. ಅಲ್ಲಾ ಹಂಗ ಹರಕಿ ತೀರಸಲಿಲ್ಲಾ ಅಂದರ ಆಗಿದ್ದ ಮದ್ವಿ ಏನ ಕ್ಯಾನ್ಸೆಲ್ ಆಗಂಗಿಲ್ಲ ಮತ್ತ..ಅದ ಪ್ರಥಾರಿಪಾ ಅದಕ್ಕ ಹೇಳಿದೆ ಇಷ್ಟ.
ಇನ್ನ ನಮ್ಮ ದೋಸ್ತರ ಇಷ್ಟ ಕಾಂಟ್ರಿಬ್ಯೂಶನ್ ಮಾಡಿ ಕಲ್ಯಾಣೋತ್ಸವ ಮಾಡಿದರಲಾ ಹಂಗರ ಈ ಮಕ್ಕಳ ಏನೇನ ಬೇಡ್ಕೊಂಡಾರ ಅಂತ ನಾ ಸಹಜ ಕಲ್ಯಾಣೋತ್ಸವ ಮುಗದ ಮ್ಯಾಲೆ ಕೇಳಿದರ ಒಬ್ಬೊಬ್ಬಂವ ಒಂದೊಂದ ಬೇಡ್ಕೊಂಡಿದ್ದಾ.
ನಮ್ಮ ಕಲ್ಯಾ..
’ಕಲ್ಯಾಣೋತ್ಸವ ಮಾಡಿದಮ್ಯಾಲೆ ಆರ ತಿಂಗಳದಾಗ ಮದ್ವಿ ಆದರ ಹನಿಮೂನಕಿಂತ ಮೊದ್ಲ ನಾ ಬರೇಗಾಲಲೇ ತಿರುಪತಿ ಬೆಟ್ಟ ಜೋಡಿಲೇ ಹತ್ತತೇನಿ’ ಅಂತ ಬೇಡ್ಕೊಂಡಿದ್ದಾ. ಇನ್ನ ವೆಂಕಪ್ಪಾ ಇಂವಾ ಜೋಡಿಲೇ ಬೆಟ್ಟಾ ಹತ್ತತೇನಿ ಅಂತ ಬೇಡ್ಕೊಂಡಿದ್ದಕ್ಕರ ಇವಂಗ ಒಂದ ಜೋಡಿ ಗಂಟ ಹಾಕಬೇಕಾಗಿತ್ತ ಪಾಪ.
ಇನ್ನ ವಾದಿದ ಕಥಿ ಕೇಳ್ರಿಲ್ಲೇ…ಹಂಗ ಅಂವಾ ಜಗತ್ತಿನಾಗ ಯಾ ದೇವರಿಗೂ ಬೇಡ್ಕೊಳೋದ ಉಳದಿದ್ದಿಲ್ಲಾ, ಎಲ್ಲಾ ಮಾಡಿ ಮುಗದಿತ್ತ ಅನ್ರಿ, ಆದರೂ ಇನ್ನೂ ಮದ್ವಿ ಆಶಾ ಬಿಡಲಾರದ ’ಕಲ್ಯಾಣೋತ್ಸವಕ್ಕ ಕಂಟ್ರಿಬ್ಯೂಶನ್’ ಮಾಡಿದ್ದಾ. ಅವಂಗ
’ನೀ..ಏನ ಬೇಡ್ಕೊಂಡಿಲೇ ವಾದ್ಯಾ’ ಅಂತ ಅಂದರ
’ಲಗ್ನಾದ ಮ್ಯಾಲೆ ವರ್ಷ ತುಂಬೋದರಾಗ ಒಂದರ ಹಡಿತೇನಿ’ ಅಂತ ಬೇಡ್ಕೊಂಡೇನಿ ಅಂದಾ.
ಹಕ್ಕ್…ಅದೇನ ಬೇಡ್ಕೊಳೋದ ಎಲ್ಲರ? ಲಗ್ನ ಆದ ಮ್ಯಾಲೆ ಹಡದ ಹಡಿತಾರ ಅದರಾಗ ಏನ ದೊಡ್ಡದ ಅಂತೇನಿ. ದೇವರಿಗೆ ಏನರ ಬೇಡ್ಕೊ ಅಂದರ ಈ ಮಗಾ ತಾ ಹಡಿತೇನಿ ಅಂತ ಬೇಡ್ಕೊಂಡಾನಲಾ ಅಂತ ಆಶ್ಚರ್ಯ ಆಗಿ ಹಂಗ್ಯಾಕ ಬೇಡ್ಕೊಂಡಿಲೇ ಅಂತ ಕೇಳಿದರ.
’ಏ ಈಗ ಲಗ್ನಾ ಆಗಲಿ ಅಂತ ಬೇಡ್ಕೊಳೊದ, ಆಮ್ಯಾಲೆ ಮಕ್ಕಳ ನಮ್ಮ ಅರವತ್ತ ವರ್ಷದ ಶಾಂತಿಕಿಂತ ಮೊದ್ಲ ಆಗಲಿ ಅಂತ ಬೇಡ್ಕೊಳೋದ, ಎಲ್ಲೀದ ಅಣ್ಣಾ ಹಿಂಗಾಗಿ ನಾ ಸೀದಾ ಒಂದರಾಗ ಎರಡು ಮುಗಿಸಿ ಬಿಟ್ಟೇನಿ’ ಅಂದಾ. ಏನ್ಮಾಡ್ತೀರಿ? ಹಂಗ ಅದರಾಗೂ ಲಾಜಿಕ್ ಅದನ ಮತ್ತ.
ಇನ್ನ ನಮ್ಮ ರಾಘ್ಯಾ ತಂದ ಲಗ್ನ ಆದರ ಮತ್ತ ಕಲ್ಯಾಣೋತ್ಸವ ಮಾಡಸ್ತೇನಿ ಅಂತ ಬೇಡ್ಕೊಂಡಿದ್ದಾ, ಯಾಕಲೇ ಅಂದರ ’ನಮ್ಮ ಸಣ್ಣ ಕಾಕಾಂದ ಇನ್ನೂ ಲಗ್ನ ಆಗಿಲ್ಲಾ ಅದಕ್ಕ’ ಅಂದಾ.
ಏನ ಅನ್ನರಿ ನಮ್ಮ ಹುಡುಗರ ಪರಿಸ್ಥಿತಿ ನೋಡಿ ಕೆಟ್ಟ ಅನಸ್ತ.
ಅಲ್ಲಾ ಅವರಿಗೇಲ್ಲಾ ನನ್ನಂಗ ಮದ್ವಿ ಆದೋರ ಪರಿಸ್ಥಿತಿ ನೋಡಿ ಕೆಟ್ಟ ಅನಸ್ತಿರ್ತದ, ಆದರ ಹಂತಾ ಕೆಟ್ಟ ಪರಿಸ್ಥಿತಿನೂ ದೇವರ ನಮ್ಮ ಹಣೇಬರಹದಾಗ ಬರದಿಲ್ಲಲ್ಲಾ ಅಂತ ಹಳಹಳಸ್ತಾವ ಖೋಡಿ ಓಯ್ದಂದ.
ಕಡಿಕೆ ಅಂತೂ ಇಂತೂ ನಾ ’ಕಲ್ಯಾಣೋತ್ಸವ’ ಮುಗಿಸಿ ಹಿಂಗ ಮನಿಗೆ ಬರೋದಕ್ಕ ನನ್ನ ಹೆಂಡ್ತಿ ಬಾಗಲಕ್ಕ ನಿಂತಿದ್ಲು
’ಅಯ್ಯ…ಕಡಿಕೂ ಮನಿಗೆ ಬಂದ್ರೇಲಾ…ನಾ ಎಲ್ಲೇ ನಿಮ್ಮ ದೋಸ್ತರದ ಕಲ್ಯಾಣೋತ್ಸವ ಮಾಡಿ ಕಳ್ಳ ಕುಬಸಾನೂ ಮುಗಿಸೆ ಬರ್ತೀರಿ ಅಂತ ತಿಳ್ಕೊಂಡಿದ್ದೆ’ ಅಂತ ಟಾಂಟ್ ಹೊಡದ್ಲು. ಅಲ್ಲಾ ತನ್ನ ಗಂಡಂದ ಒಂದ ಲಗ್ನ ಆಗೇದ ಅಂತ ಮಂದಿಗೆ ಹಿಂಗ ಅನಬಾರದ ಬಿಡ್ರಿ. ಅಕಿ ಅಷ್ಟಕ್ಕ ಸುಮ್ಮನಾಗಲಿಲ್ಲಾ
’ಮತ್ತ..ನೀವೂ ಏನರ ಬೇಡ್ಕೊಂಡ ಬಂದಿರೇನ?’ ಅಂತ ಕೇಳಿದ್ಲು.
’ಏ…ನಾ ಎನ್ ತಲಿ ಬೇಡ್ಕೊಬೇಕಲೇ…ಬೇಡ್ಕೊಳಲಾರದ ’ಬಯಸದೇ ಬಂದ ಭಾಗ್ಯ’ ಅಂತ ಯಾವಾಗಲೂ ಬಾಗಲಕ್ಕ ನಿಂತಿರ್ತಿ…ಇತ್ತಲಾಗ ಹೊರಗೂ ಹೊಗಲಿಕ್ಕೂ ಬಿಡಂಗಿಲ್ಲಾ ಒಳಗೂ ಬರಲಿಕ್ಕೂ ಬಿಡಂಗಿಲ್ಲಾ..ಸಾಕ ಸುಮ್ಮನಿರ’ ಅಂತ ಜೋರ ಮಾಡಿ ಬಲಗಾಲ ಇಟ್ಟ ಹೊಚ್ಚಲಾ ದಾಟಿ ಒಳಗ ಹೋದೆ.