ಇದ ಒಂದ ನಾಲ್ಕ ತಿಂಗಳದ ಹಿಂದಿನ ಮಾತ ಇರಬೇಕ, ನಮ್ಮ ತಂಗಿ ಅತ್ತಿ ಮನ್ಯಾಗಿನ ಶ್ರೀಮಂತ ಮುಗಿಸಿಕೊಂಡ ಹಡಿಲಿಕ್ಕೆ ಅಂತ ಗಂಡನ ಮನ್ಯಾಗಿಂದ ಗುಡಚಾಪಿ ಕಿತಗೊಂಡ ನಮ್ಮ ಮನಿಗೆ ಬಂದ ಟೆಂಟ್ ಹಾಕಿದ್ಲು. ಹಂಗ ಅಕಿವು ಲಗ ಭಗ ಎಷ್ಟ ನಮೂನಿ ಕುಬಸ ಜಗಿತ್ತಿನಾಗ ಅವ ಅವನ್ನೇಲ್ಲಾ ನಮ್ಮವ್ವ ಮೊದ್ಲ ಮುಗಸಿದಿದ್ಲು. ಆದರು ನಮ್ಮ ತಂಗಿ ಯಾವದರ ಹೊಸಾ ಹೊಸಾ ಕುಬಸ ಇನ್ನು ಉಳದಾವೇನ ಅಂತ ಹುಡಕಿ ಹುಡಕಿ ಮಾಡಿಸ್ಗೋತ ಹೊಂಟಿದ್ಲು. ನಂಗಂತೂ ಖರೇನ ಹೇಳ್ತೇನಿ ಎಲ್ಲೆ ಅಕಿ ಯಾರರ ಇನ್ನೊಂದ ಎರಡ ಹೊಸಾ ನಮೂನಿ ಕುಬಸಾ ಹೇಳಿದರ ಹಡಿಯೋದನ್ನ ಸಹಿತ ಒಂದ ಎರಡ ತಿಂಗಳ ಪೋಸ್ಟಪೋನ್ ಮಾಡ್ತಾಳೊ ಅಂತ ಚಿಂತಿ ಹತ್ತಿ ಬಿಟ್ಟಿತ.
ನನಗ ನನ್ನ ಹೆಂಡತಿಗರ ಯಾವಾಗ ಇಕಿದೋಂದ ಬಾಣಂತನ ಮಾಡೆ ಅಟ್ಟ್ಯೋವೊ ಅಂತ ಅನಿಸಿದರ ಇಕಿ ನೋಡಿದರ ಹಡೇಯೊದರ ಬಗ್ಗೆ ಚಕಾರ ಎತ್ತಲಾರದ ಇನ್ನೂ ಆ ಕುಬಸಾ ಈ ಕುಬಸಾ ಅಂತ ನಮ್ಮ ಜೀವಾ ತಿನ್ನಲಿಕತ್ತಿದ್ಲು. ಅದರಾಗ ಆ ಡಾಕ್ಟರ ಬ್ಯಾರೆ ಇಕಿ ತೋರಸಲಿಕ್ಕೆ ಹೋದಾಗೊಮ್ಮೆ ವಾರಗಟ್ಟಲೇ ಡಿಲೇವರಿ ಡೇಟ್ ಮುಂದ ಹಾಕ್ಕೋತ ಹೊಂಟ ಬಿಟ್ಟಿದ್ದಾ, ಇಕಿಗೂ ಅದ ಬೇಕಾಗಿತ್ತ. ಹೆಂಗಿದ್ದರೂ ಹಡಿಯೋದ ಇನ್ನೂ ದೂರ ಅದ ತಡಿ ಅಂತ ಕುಬಸಾ ಮಾಡಿಸ್ಗೋತ ಕೂತ ಬಿಟ್ಟಿದ್ಲು.
ಅದರಾಗ ನಮ್ಮವ್ವನೂ ಹುರುಪಿನೋಕಿ, ಮ್ಯಾಲೆ ಮಗಳದ ಒಂದನೇ ಬಾಣಂತನಾ ಹಿಂಗಾಗಿ ಅಕಿ ಹೇಳಿದ್ದ ಕುಬಸಾ ಮಾಡ್ಕೋತ ಹೊಂಟ ಬಿಟ್ಟಿದ್ಲು. ಇನ್ನೊಂದ ವಿಚಿತ್ರ ಅಂದರ ನಮ್ಮ ತಂಗಿಗೆ ಅವರ ವೈನಿ ಮಾಡಿಸ್ಗೊಂಡದ್ದಕಿಂತಾ ಒಂದ ಜಾಸ್ತಿ ಕುಬಸಾ ಮಾಡಿಸ್ಗೋಬೇಕು ಅಂತ ತಲ್ಯಾಗ ಹ್ಯಾಂವ ಹೊಕ್ಕ ಬಿಟ್ಟಿತ್ತ. ಹಿಂಗಾಗಿ ’ಭಾಭಿ ನೀ ಯಾವ್ಯಾವ ಕುಬಸಾ ಮಾಡಿಸ್ಗೊಂಡಿದ್ದಿ?’ ಅಂತ ಕೇಳಿ ಕೇಳಿ ತಾನು ಮಾಡಿಸ್ಗೊಳಿಕತ್ತಿದ್ಲು. ಅಲ್ಲಾ ಅವರ ವೈನಿ ಅಂದರ ನನ್ನ ಹೆಂಡತಿನ ಆ ಮಾತ ಬ್ಯಾರೆ. ಆದರ ನನ್ನ ಹೆಂಡತಿ ಕುಬಸಾ ಮಾಡಿಸ್ಗೊಂಡಿದ್ದ ಅಕಿ ತವರಮನಿ ಖರ್ಚ್ ಒಳಗ ಆದರ ನಮ್ಮ ತಂಗಿ ಮಾಡಿಸ್ಗೊಳೊದ ತನ್ನ ತವರಮನಿ ಖರ್ಚ್ ಒಳಗ ಅಂದರ ನನ್ನ ಖರ್ಚಿನಾಗ. ನಂಗ ಹಿಂಗ ಇಕಿದ ಡಿಲೇವರಿ ಡೇಟ್ ಮುಂದ ಹೊಕ್ಕೋತ ಹೊಂಟರ ಮುಂದ ಅಕಿದ ನಾರ್ಮಲರ್ ಆಗಲಿ ಇಲ್ಲಾ ಸಿಜರಿನರ್ ಆಗಲಿ ನಂದಂತೂ ಅಕಿದ ಬಾಣಂತನ ಮಾಡಿ ಅಟ್ಟೋದರಾಗ ಸಿಜರಿನ್ ಆಗೋದ ಗ್ಯಾರಂಟಿ ಅಂತ ಅನಸಲಿಕತ್ತ್.
ಕಡಿಕೆ ನನ್ನ ಪುಣ್ಯಾಕ್ಕ ಒಂದ ಸರತೆ ಡಾಕ್ಟರಕಡೆ ತೋರಸಲಿಕ್ಕೆ ಹೋದಾಗ ಅವರ
’ನಿಂಬದು ಡೇಟ್ ಬಾರ್ ಆಗೇದ ಹಂಗ ನಾರ್ಮಲ್ ಆಗಲಿ ಅಂತ ವೇಟ್ ಮಾಡ್ಕೋತ ಕೂತರ ನಡೆಯಂಗೇಲಾ ಸುಮ್ಮನ ಮೂಹೂರ್ತಾ ನೋಡಿ ಸಿಜರಿನ್ ಮಾಡಿಸ್ಗೊಂಡ ಬಿಡ್ತೀರೇನ್ ನೋಡ್ರಿ’ ಅಂತ ಮತ್ತ ಇಕಿಗೆ ಆಪ್ಶನ್ ಕೊಟ್ಟರು. ಇಕಿ ವಿಚಾರ ಮಾಡಿ ಮುಂದಿನ ವಾರ ಹೇಳ್ತೇನಿ ಅಂತ ಮತ್ತ ವಾಪಸ ಮನಿಗೆ ಬಂದ್ಲು. ಅಲ್ಲಾ ಅದರಾಗ ವಿಚಾರ ಮಾಡೋದ ಏನ ಡೇಟ್ ಫಿಕ್ಸ್ ಮಾಡ್ಕೊಂಡ ಬರಬೇಕಿಲ್ಲ ಅಂತ ನಾ ಅಂದರ ’ನಿಂಗೇಲ್ಲಾ ಗೊತ್ತಾಗಂಗಿಲ್ಲಾ ತೊಗೊ, ಮುಂದಿನವಾರ ಮಾಮಿ ಕುಬಸ ಇಟಗೊಂಡಾರ ಅದನ್ನ ಮುಗಿಸಿಗೊಂಡ ಡೇಟ್ ಫಿಕ್ಸ್ ಮಾಡ್ಕೊಂಡರ ಆತು’ ಅಂತ ನಂಗ ಜೋರ ಮಾಡಿದ್ಲು.
ಏನ್ಮಾಡ್ತೀರಿ ಹಿಂತಾಕಿಗೆ, ಡಾಕ್ಟರ್ ನೀ ದಿಂದಾಗ ಇದ್ದಿ, ಎನಿ ಮುಮೆಂಟ್ ಡಿಲೇವರಿ ಆಗಬಹುದು ಪಟಕ್ಕನ್ ಡಿಲೇವರಿ ಮಾಡಿಸ್ಗೊಂಡ ಬಿಡ ಅಂದರು ಇಕಿ ಆ ಕುಬಸದ ಸಂಬಂಧ ಡೇಟ್ ಫೈನಲೈಜ್ ಮಾಡವಳ್ಳಾಗಿದ್ಲು. ಅಲ್ಲಾ ಹಂಗ ನಮ್ಮ ಮಾಮಿ ಇಕಿದ ಕುಬಸಾ ಮೊದ್ಲ ಮಾಡಿದ್ಲು ಈಗ ಮತ್ತೇನ ಇಕಿ ಹಡಿವಳ್ಳಂತ ಎರಡನೇ ರೌಂಡ ಕುಬಸ ಮಾಡಲಿಕತ್ಲೇನ್ ಅಂತ ಕೇಳಿದರ
’ಏ, ಅದೇನೋ ಕರದಿಂಗಳ ಕುಬಸಂತ ನಿಮ್ಮ ತಂಗಿ ಗಂಟ ಬಿದ್ದಾಳ ಅದನ್ನೊಂದ ಮಾಡಿಸ್ಗೊಂಡ ಹಡೇಯೋಕಿ ಅಂತ’ ಅಂತ ನನ್ನ ಹೆಂಡತಿ ಕೆಟ್ಟ ಮಾರಿ ಮಾಡ್ಕೊಂಡ ಅಂದ್ಲು. ’ಕರದಿಂಗಳ ಕುಬಸಾ’ ಅಂತ ಕೇಳಿ ನಾ ಒಮ್ಮಿಕ್ಕಲೇ ಗಾಬರಿ ಆದೆ, ಅಲ್ಲಾ ಹಂಗ ಬೆಳದಿಂಗಳ ಕುಬಸಾ ಅಂತ ಕೇಳಿದ್ದೆ ಆದರ ಈ ಕರದಿಂಗಳ ಕುಬಸ ಎಲ್ಲಿದ ಬಂತಲೇ ಅಂತ ನನ್ನ ಹೆಂಡತಿಗೆ ಕೇಳಿದರ
’ಎಲ್ಲಿಂದ ಬಂತೊ ಏನೊ ಯಾರಿಗೊತ್ತರಿ, ಬೆಳದಿಂಗಳದಾಗ ಮಾಡಿದರ ಬೆಳದಿಂಗಳ ಕುಬಸಾ ಅಂತಾರ, ಈಗ ಅಮವಾಸಿ ಹತ್ತರ ಬಂದದ ಹಿಂಗಾಗಿ ನಿಮ್ಮ ತಂಗಿ ಅಮವಾಸಿ ಕರಿ ಕತ್ತಲಿ ಒಳಗ ಕರದಿಂಗಳ ಕುಬಸಾ ಮಾಡಿಸ್ಗೋಳೊಕಿ’ ಅಂತ ಹೇಳಿದ್ಲು.
ಅಲ್ಲಾ ಈ ಹೆಣ್ಣಮಕ್ಕಳ ತಮ್ಮ ಅನಕೂಲಕ್ಕ ಏನೇನ ಕಂಡಹಿಡಿತಾರೊ ಏನೋ ಅಂತೇನಿ. ಅನ್ನಂಗ ನನ್ನ ಹೆಂಡತಿಗೆ ಯಾಕ ಈ ಕರದಿಂಗಳ ಕುಬಸಾ ಅಂದಕೂಡಲೇ ಸಿಟ್ಟ ಬಂದಿತ್ತ ಅಂದರ ಪಾಪ ಅವರವ್ವ ಅಕಿಗೆ ಈ ಕುಬಸಾ ಮಾಡಿದ್ದಿಲ್ಲಾ, ಹಿಂಗಾಗಿ ನಮ್ಮ ತಂಗಿ ನನ್ನ ಹೆಂಡತಿಕಿಂತ ಒಂದ ಹೆಚಗಿ ಕುಬಸಾ ಮಾಡಿಸ್ಗೊಂಡ್ಲಲಾ ಅಂತ ಇಕಿಗೆ ಸಂಕಟ ಆಗಲಿಕತ್ತಿತ್ತ ಇಷ್ಟ. ಕಡಿಕೆ ಒಂದ ದಿವಸ ರಾತ್ರಿ ’ಕರದಿಂಗಳ ಕುಬಸಾ’ ಮಾಡಿಸ್ಗೊಂಡ ಕರಿ ಅಂಚ ಇದ್ದದ್ದ ಮತ್ತೊಂದ ಸೀರಿ ಉಡಿ ತುಂಬಿಸ್ಗೊಂಡ ಮರುದಿವಸ ದಾವಾಖನಿಗೆ ಹೋಗಿ ಅಡ್ಮಿಟ್ ಆಗಿ ಅದರ ಮರದಿವಸ ಹಡದ್ಲು. ಖರೇ ಹೇಳ್ತೇನಿ ಹಡದೊಕೇನೊ ಅಕಿ ಆದರ ಮೈ ಮನಸ್ಸು ಹಗರ ಆಗಿದ್ದ ಮಾತ್ರ ನಂದ, ಅಷ್ಟ ಆ ಕುಬಸದ ಸಂಬಂಧ ನಂಗ ಸಾಕ ಸಾಕಾಗಿ ಹೋಗಿತ್ತ.
ಅಲ್ಲಾ ಹಂಗ ಈಗ ಹಡದ ಮ್ಯಾಲೆ ಬಾಣಂತನದ ಹಣಗಲ ಶುರು ಆಗೇದ ಆ ಮಾತ ಬ್ಯಾರೆ, ಅದನ್ನ ಮತ್ತ ಯಾವಾಗರ ಹೇಳ್ತೇನಿ. ಆದರು ಒಂದ ಸರತೆ ಅಕಿ ಮಾಡಿಸ್ಗೊಂಡ ಕುಬಸದ ಲಿಸ್ಟ್ ಹೇಳ್ತೇನಿ ಓದಿ ಬಿಡ್ರಿ, ಹಂಗ ನಿಮಗ್ಯಾರಿಗರ ಉಪಯೋಗ ಆದರು ಆಗಬಹುದು.
ಮೊದ್ಲ ಶುರು ಆಗೋದ ಕಳ್ಳ ಕುಬಸ, ತವರ ಮನಿ ಕುಬಸ, ಸಾರ್ವಜನಿಕ ಕುಬಸ, ಹೊಟೇಲ್ ಕುಬಸ, ತೋಟದ ಕುಬಸಾ, ತೂಗಮಂಚ ಕುಬಸ, ಬೆಳದಿಂಗಳ ಕುಬಸ, ಮಾಲ್ ಕುಬಸ, ಎಳೆ ಬಿಸಿಲ ಕುಬಸ, ದೀಪದ ಕುಬಸ, ಪಿಜ್ಜಾ ಕುಬಸಾ, ಪಾವ್ ಭಾಜಿ ಕುಬಸಾ, ಕರದಿಂಗಳ ಕುಬಸ…ಅಯ್ಯಯ್ಯ..ಒಂದ ಎರಡ ಹಂಗ ಎಷ್ಟ ಬರದರು ಕಡಮಿನ ಬಿಡ್ರಿ, ಅಕಿ ಏನರ ಇನ್ನೊಂದ ಎರಡ ದಿವಸದಾಗ ಹಡದಿದ್ದಿಲ್ಲಾ ಅಂದರ ನಾ ಒಂದ ’ಲಗೂ ಹಡಿ ಕುಬಸಾ’ಅಂತ ಹೊಸಾ ನಮೂನಿ ಕುಬಸಾ ಮಾಡಿ ದಾವಾಖಾನಿಗೆ ಹೋಗಿ ಅಡ್ಮಿಟ್ ಮಾಡಿ ಬರೋಂವ ಇದ್ದೆ ಏನೋ ಪುಣ್ಯಾ ಅಷ್ಟರಾಗ ಹಡದ್ಲು.
ಅನ್ನಂಗ ಇನ್ನೊಂದ ಹೇಳೋದ ಮರತೆ ನನ್ನ ಹೆಂಡತಿಗೆ ನನ್ನ ತಂಗಿಗೆ ಕರದಿಂಗಳ ಕುಬಸಾ ಮಾಡ್ತಾರ ಅಂದಾಗ ಬೇಜಾರ ಆಗಿತ್ತಲಾ ಅದಕ್ಕ ನಮ್ಮವ್ವ ಏನ ಅಂದ್ಲ ಗೊತ್ತ ’ಅಯ್ಯ..ಬೆಳ್ಳಗ ಇದ್ದೋರಿಗೆ ಇಷ್ಟ ಕರದಿಂಗಳಾ ಕುಬಸಾ ಮಾಡ್ತಾರ ಪ್ರೇರಣಾ ಹಿಂಗಾಗಿ ನಿಂಗ ಮಾಡಿದ್ದಿಲ್ಲ ತೊಗೊ ಯಾಕ ಬೇಜಾರ ಆಗ್ತಿ’ ಅಂದ್ಲು. ಏನ ಮಾಡ್ತಿರಿ ನಮ್ಮವ್ವನ ಹಂತಾವರಿಗೆ?ಪಾಪ ನನ್ನ ಹೆಂಡ್ತಿ ಎರೆಡ ಹಡದೋಕಿಗೆ ತನ್ನ ಮಗಳ ಒಂದನೇದ ಹಡಿಲಿಕತ್ಲು ಅಂತ ಹೆಂಗ ಬೇಕಾದಂಗ ಅನ್ನೋದ? ಇದಕ್ಕ ಅನ್ನೋದ ಹೆಣ್ಣ ತಾಯಿ ಕರಳ ಅಂತ, ಮಗಳ ಮಕ್ಕಳಿಗೆ ಒಂದು ಮಗನ ಮಕ್ಕಳಿಗೆ ಒಂದು ಮಾಡೊದಕ್ಕ.
ಇರಲಿ ನಮ್ಮ ತಂಗಿ ಇಷ್ಟ ಕುಬಸಾ ಮಾಡಿಸ್ಗೊಂಡರು ಈಗ ಮುತ್ತಿನಂತಾ ಒಂದ ಗಂಡಸ ಮಗನ ಹಡದಾಳ, ಇರೋಕಿ ಒಬ್ಬೋಕಿ ತಂಗಿ ನಾನರ ಅಕಿಗೆ ಮಾಡಲಾರದ ಇನ್ನ್ಯಾರಿಗ ಮಾಡ್ಬೇಕ ಬಿಡ್ರಿ. ಹಂಗ ಹೆಂಡ್ತಿ ಮಾತ ಕೇಳಿ ತಂಗಿ ತವರಮನಿ ಒಳಗ ಕುಬಸಾ ಮಾಡಿಸ್ಗೊಂಡದ್ದರ ಲೆಕ್ಕಾ ಇಡೋದ ತಪ್ಪ ಅನ್ರಿ.