’ಅತ್ಯಾ…….ಕಸದ್ದ ಗಾಡಿ ಬಂತ ’

ನಾ ರೆಡಿ ಆಗಿ ಇನ್ನೇನ ಆಫಿಸಗೆ ಹೋಗಬೇಕು ಅಂತ ತಿಂಡಿ ತಿನ್ನಲಿಕ್ಕೆ ಕೂರ್ತಿರ್ತೇನಿ ಹೊರಗ ಕಸದ್ದ ಗಾಡಿದ ಹಾರ್ನ್ ಆಗ್ತದ. ನನ್ನ ಹೆಂಡ್ತಿಗೆ ಕಸದ್ದ ಗಾಡಿ ಹಾರ್ನ್ ಕೇಳ್ಸೋದ ತಡಾ
’ಅತ್ಯಾ…ಕಸದ್ದ ಗಾಡಿ ಬಂತ’ ಅಂತ ಒದರ್ತಾಳ. ಮುಂದ ಅತ್ತಿ-ಸೊಸಿ ’ಕಸದ್ದ ಗಾಡಿ ಬಂತ- ಕಸದ್ದ ಗಾಡಿ ಬಂತ’ ಅಂತ ಅಗದಿ ಅಂಗಳದಾಗ ಹಾವ ಬಂದಂಗ ಮಾಡ್ತಾರ. ಇದ್ದ ಬಿದ್ದ ಕೆಲಸಾ ಎಲ್ಲಾ ಬಿಟ್ಟ ಮೊದ್ಲ ಅಡಗಿ ಮನ್ಯಾಗಿನ ವೆಟ್ ಕಸಾ, ಬೆಡ ರೂಮ ಒಳಗಿನ ಡ್ರೈ ಕಸಾ ಎಲ್ಲಾ ಸಪರೇಟ್ ಒಂದೊಂದ ಬ್ಯಾನ್ ಆಗಿದ್ದ ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ ಒಳಗ ಹಾಕ್ಕೊಂಡ ಹೋಗಿ ಗೇಟ ಮುಂದ ಗಾಡಿ ನಮ್ಮ ಮನಿ ಬಾಗಲಕ್ಕ ಬರೋ ತನಕಾ ನಿಂತ ಬಿಡೋದ. ಇತ್ತಲಾಗ ಒಲಿ ಮ್ಯಾಲೆ ಹಾಲ ಇಟ್ಟಿದ್ದ ಖಬರ ಇರಂಗಿಲ್ಲಾ, ಬಚ್ಚಲಮನ್ಯಾಗ ಸ್ನಾನಕ್ಕ ಬಿಟ್ಕೊಂಡಿದ್ದ ಬಿಸಿನೀರ ನಳಾ ಚಾಲು ಇದ್ದದ್ದ ಖಬರ ಇರಂಗಿಲ್ಲಾ… ನಾ ಟಿಫಿನ್ ಗೆ ಕೂತಿದ್ದರ ನೀರ ಕೊಟ್ಟಿರಂಗಿಲ್ಲಾ, ಚಪಾತಿ ಹಾಕಿದರ ಪಲ್ಯಾ ಹಾಕಿರಂಗಿಲ್ಲಾ…ಇವರಿಗೆ ಮೊದ್ಲ ಕಸಾ ಕೊಡಬೇಕ.
ದಿವಸಾ ಇದ ಕಥಿ. ಕಸದೊಂವಾ ಬರೋತನಕಾ ಗೇಟನಾಗ ನಿಂತ ಬಿಡೋದ. ನಾ ಹತ್ತ ಸರತೆ ಹೇಳ್ತೇನಿ..ಕಸದ್ದ ಗಾಡಿ ಬರೊಕಿಂತ ಮುಂಚೆ ನಮ್ಮನಿ ಕಸದ ಚೀಲಾ ರಸ್ತೆಕ್ಕ ಇಟ್ಟ ಬಿಡ್ರಿ ಅವರಷ್ಟಕ್ಕ ಅವರ ಹಾಕ್ಕೊಂಡ ಹೋಗ್ತಾರ ಅಂತ. ಇವರೇನ ನನ್ನ ಮಾತ ಕೇಳಂಗಿಲ್ಲಾ..ಎಲ್ಲೆ ನಾವ ಹಿಂಗ ಚೀಲ ಇಟ್ಟಾಗ ಓಣ್ಯಾಗಿನ ನಾಯಿ ಬಂದ ಚೀಲಕ್ಕ್ ಬಾಯಿ ಇಟ್ಟ ಅಗದಿ ಇಡಿ ರಸ್ತೆ ತುಂಬ ಹೊಲಸಾಟ ಮಾಡಿದರ ಅಂತ ಇವರ ಸಂಕಟಾ.
ಅದು ಖರೇನ ಅನ್ನರಿ.
ನಮ್ಮ ಮನಿಯಿಂದ ಎರಡ ಮನಿ ದಾಟಿದ ಮ್ಯಾಲೆ ಸಾವಜಿ ಮನಿ ಅದ. ಅವರ ಎಲ್ಲೆ ಕಸದಂವಾ ಬರೋತನಕಾ ಕಾಯೋದ ಅಂತ ಕಸಾ ತಂದ ರಸ್ತೆಕ್ಕ ಇಟ್ಟ ಹೋಗ್ತಾರ. ಆ ಕಸದೊಂವಾ ಬರೋದರೊಳಗ ಏನರ ನಾಯಿಗೆ ಸಾವಜಿ ವಾಸನಿ ಬಡಿತಂದರ ಮುಗಿತ. ಅವರ ಮನ್ಯಾಗ ಹಿಂದಿನ ದಿವಸ ಮಾಡಿದ್ದ ಚಿಕನ್ ಕಬಾಬದ್ದ ಬೋನ್ಸ್ ನಮ್ಮ ಮನಿ ಗೇಟ್ ಮುಂದ ಬಿದ್ದಿರ್ತಾವ. ಅಲ್ಲಾ ನೋಡಿದವರ ಏನ ತಿಳ್ಕೋಬೇಕ ಹೇಳ್ರಿ…ಏನಿಲ್ಲದ ನನ್ನ ಬಗ್ಗೆ ಮಂದಿಗೆ ನೂರಾ ಎಂಟ ಸಂಶಯ..ಇನ್ನ ಹಂತಾದ ನನ್ನ ಮನಿ ಬಾಗಲದಾಗ ಚಿಕನ್ ಲೆಗ್ ಪೀಸ್ ಸಿಕ್ಕರ ನೀವ ಸುಮ್ಮನ ಬಿಡ್ತೀರಿ? ಒಂದು ನಮ್ಮನ್ನ ಯಾಕ ಕರದಿಲ್ಲಾ ಅಂತರ ಕೇಳ್ತೀರಿ…..ಇಲ್ಲಾ ಮಗನ ಎಗ್ಗ್ ತಿಂದರ ಅಸಿಡಿಟಿ ಅಂತಿದ್ದಿ ಈಗ ಸೀದಾ ಕೋಳಿಗೆ ಕೈ ಹಚ್ಚಿ ಏನ ಅಂತೀರಿ. ಹಿಂಗಾಗೇ ನಮ್ಮವ್ವ ನನ್ನ ಹೆಂಡ್ತಿ ಸುಳ್ಳ ಯಾಕ ರಿಸ್ಕ ಅಂತ ಆ ಕಸದ್ದ ಗಾಡಿ ಬರೋ ತನಕಾ ನಿಂತ ಅವಂಗ ಕಸಾ ಕೊಡ್ತಾರ.
ಇನ್ನ ನಮ್ಮ ಮನಿಯಿಂದ ಎಡಗಡೆ ಒಂದ ನಾಲ್ಕ ಮನಿ ದಾಟಿದರ ನಮ್ಮ ಪೈಕಿ ಒಬ್ಬರದ ಮನಿ ಅದ. ಅಗದಿ ಸೂಕ್ಷ್ಮ ಮಂದಿ, ಓಣ್ಯಾಗ ಇದ್ದಾರೋ ಇಲ್ಲೋ ಅನಬೇಕ ಅಷ್ಟ ಸಭ್ಯ ಜನಾ. ಅವರ ಮನ್ಯಾಗ ತಾಯಿ, ಮಗಾ ಸೊಸಿ ಇರ್ತಾರ. ಆ ಮಗಾ ಅಂತೂ ಅಪ್ಪಿ-ತಪ್ಪಿ ಕಲಿಯುಗದಾಗ ಹುಟ್ಟ್ಯಾನ ಅನಬೇಕ ಅಷ್ಟ ಛಲೋ ಅಂತ ನಮ್ಮವ್ವ ಹೇಳೋಕಿ. ಹಂಗ ನಂಗೇನ ಕ್ಲೋಸ್ ಇಲ್ಲಾ ಮ್ಯಾಲೆ ಸಾಚಾ ಮಂದಿ ಜೊತಿ ನನ್ನ ದೋಸ್ತಿನೂ ಇಲ್ಲ ಬಿಡ್ರಿ. ಯಾವಾಗರ ಒಮ್ಮೆ ಅಪರೂಪಕ್ಕ ನಮ್ಮ ಮನಿ ಮುಂದ ಭೇಟ್ಟಿ ಆದರ
’ಆರಾಮ ಅಣ್ಣಾ……ಇಲ್ಲಾ, ಇವತ್ತ ಗುರವಾರ ಅಲಾ ಮಠಕ್ಕ ಹೋಗಿದ್ದೆ…ಇವತ್ತ ಸಂಕಷ್ಟಿ ಅಲಾ ಹಿಂಗಾಗಿ ಗಣಪತಿ ಗುಡಿಗೆ ಹೋಗಿದ್ದೆ….’ ಇನ್ನ ನಮ್ಮವ್ವ ಗೇಟ ನಾಗ ಕಂಡ್ಲ ಅಂದರ
’ಏನ ಕಾಕು ಇವತ್ತ ದ್ವಾದಶಿ ನಾಷ್ಟಾ ಏನ ಆಗಿತ್ತ…… ಈ ಸರತೆ ಹುಣ್ಣಮಿ ಎರಡ ಬಂದಾವಂತಲಾ’ ಹಿಂತಾವೇಲ್ಲಾ ಅವನ ಮಾತ.
ನಂಗರ ಅವನ ಮಾತ ಕೇಳಿದಾಗೋಮ್ಮೆ ಪಿತ್ತ ನೆತ್ತಿಗೇರ್ತಿತ್ತ. ಅವನೌನ ಅಂವಾ ಏನರ ಮಾಡವಲ್ನಾಕ, ಎಷ್ಟರ ಸಾಚಾ ಇರವಲ್ನಾಕ ಅದನ್ನ ನಮ್ಮವ್ವಗ ಯಾಕ ಹೇಳ್ಬೇಕ? ನಮ್ಮವ್ವ ಅಂವಾ ನಮ್ಮ ಮನಿ ಗೇಟ್ ಮುಂದ ಹಾದ ಹೋದಾಗೋಮ್ಮೆ ನಂಗ ಮಂಗಳಾರತಿ ಮಾಡ್ತಿದ್ಲು ’ ಒಂದ ದೇವರ ಇಲ್ಲಾ ದಿಂಡ್ರ ಇಲ್ಲಾ… ಪೂಜಿ ಇಲ್ಲಾ ಪುನಸ್ಕಾರ ಇಲ್ಲಾ…ವೈದಿಕರ ಮನ್ಯಾಗ ಛಲೋ ಹುಟ್ಟಿ ತೊಗೊ’ ಅಂತ ಅನ್ನೋಕಿ…ಹಡದವರ ಯಾರ ಅಂದರ ಮತ್ತಅಕಿಗೆ ಸಿಟ್ಟ ಬರ್ತಿತ್ತ.
ಅದರಾಗ ಯಾವಾಗರ ಅವರ ಮನಿ ಅಂಟಿ ಹರಟಿ ಹೊಡಿಲಿಕ್ಕೆ ನಮ್ಮ ಮನಿಗೆ ಬಂದರ ಮುಗದ ಹೋತ
’ನನ್ನ ಮಗಾ ಅಷ್ಟ-ಇಷ್ಟ ಛಲೋ…ಒಂದ ಅಡಿಕಿ ಹೋಳ ಚಟಾ ಇಲ್ಲಾ…ಒಂದ ಪಾರ್ಟಿ ಅನ್ನಂಗಿಲ್ಲಾ…ಹಂಗ- ಹಿಂಗ’ ಅಂತ ಹೇಳಿದ್ದ ಹೇಳಿದ್ದ. ಅದನ್ನ ಕೇಳಿ ನಮ್ಮವ್ವ ಮತ್ತ ನನಗ ಕೊರೆಯೋಕಿ
ಇನ್ನ ನಾ ಏನರ ಆ ಅಂಟಿ ಕಣ್ಣಿಗೆ ಕಂಡ ಬಿಟ್ಟರ ’ಭಾರಿ ಬರೀತಿ ಬಿಡಪಾ….ಪಾಪ ಎಲ್ಲಾ ಹೆಂಡ್ತಿ- ಅವ್ವನ್ನ ಮ್ಯಾಲೆ ಬರೀತಿ……ನಮ್ಮ ಮಂದಿದ ಅಂತೂ ನೀ ಏನೂ ಉಳಸೇಲ ತೊಗೊ ನಿನ್ನ ಆರ್ಟಿಕಲ್ ಒಳಗ ’ ಅಂತ ಅನ್ನೋಕಿ….
ಇರಲಿ..ಯಾಕ ಒಮ್ಮಿಂದೊಮ್ಮಿಲೇ ಟಾಪಿಕ್ ಚೇಂಜ್ ಆತಲಾ ಅನಬ್ಯಾಡ್ರಿ… I will come to the point now.
ಈ ಅಂಟಿನೂ ದಿವಸಾ ನಮ್ಮವ್ವನ ಗತೆ ಗೇಟ ಮುಂದ ಕಸಾ ಹಾಕಲಿಕ್ಕೆ ನಿಲ್ಲೋಕಿ. ಅಕಿದ ಇನ್ನೊಂದ ಮಜಾ ಅಂದರ ಆ ಕಸದವನ ಕೈಗೆ ಕಸಾ ಕೊಡ್ತಿದ್ದಿಲ್ಲಾ, ತಾನ ಕೈ ಎತ್ತರಸಿ ಜಿಗದ ಆ ಗ್ಯಾಡ್ಯಾಗ ದೂರಿಂದ ಕಸಾ ಒಗಿಯೋಕಿ, ಏನ ಇಕಿ ಮನಿದ ಕಸಾ-ಮುಸರಿನು ಮಡಿಲೇ ಅದ ಅನ್ನೋರಗತೆ ಮಾಡೋಕಿ…ಮೊನ್ನೆ ಒಂದ ಸರತೆ ಹಿಂಗ ಒಂದ ದೊಟ್ಟ ಚೀಲಾ ಕಸ ಹಿಡ್ಕೊಂಡ ಗಾಡಿ ಬಂದ ಕೂಡ್ಲೇ ಒಗಿಲಿಕ್ಕೆ ಹೋದ್ಲು…. ಕಸಾ ಜಾಸ್ತಿ ಇತ್ತ, ಚೀಲಾ ವಜ್ಜ ಆಗಿತ್ತ…ಎತ್ತರಿಸಿ ಒಗಿಲಿಕ್ಕೆ ಹೋಗೊದರಾಗ ಆ ಡ್ರೈವರ್ ಗಾಡಿ ಮುಂದ ತೊಗೊಂಡ ಬಿಟ್ಟಾ…ಆ ಚೀಲಾ ಡಮಾರ್….ಅಂತ ರಸ್ತೆಕ್ಕ ತಲಿ ಕೆಳಗಾಗಿ ಬಿತ್ತ…. ಅದರಾಗಿನ ಕಸಾ-ಮುಸರಿ ಜೊತಿ ಠಳ್ಳ – ಠಳ್ಳ ಅಂತ ಎರೆಡ ಬ್ಲ್ಯಾಕ್ ಡಾಗ್ ಖಾಲಿ ಬಾಟಲಿ ರಸ್ತೆ ತುಂಬ ಸಿಡದ ಬಿದ್ದವು…ಆ ಸಪ್ಪಳಕ್ಕ ಇಡೀ ಓಣಿ ಮಂದಿ ರಸ್ತೆಕ್ಕ ಬಂದರು…ಮುಸರಿ ವಾಸನಿ, ಬ್ಲ್ಯಾಕ್ ಡಾಗ್ ವಾಸನಿಗೆ ಎರೆಡ ಬ್ಲ್ಯಾಕ & ವೈಟ್ ನಾಯಿ ಬೌ..ಬೌ ಅನ್ಕೋತ ಓಡಿ ಬಂದ್ವು… ಕಸದಂವಾ ಮುಂದಿನ ಮನಿಗೆ ಹೋದಾ…ರಸ್ತೆದಾಗ ಬಿದ್ದ ಬಾಟಲ್ ಪೀಸ್- ಕಸಾ ಅಂವಾ ಮುಟ್ಟಲಿಲ್ಲಾ….ಯಾಕಂದರ ಅವ ಮಡಿಲೇ ಇದ್ವು…..ಇಡೀ ಓಣಿ ಮಂದಿ ಆ ಅಂಟಿ ಮಾರಿ ನೋಡೋರ…ಪಾಪಾ ಅವರ ಪರಿಸ್ಥಿತಿ ನೋಡೊಹಂಗ ಇರಲಿಲ್ಲಾ…ಸುಮ್ಮನ ಒಳಗಿಂದ ಕಡ್ಡಿ ಕಸಬರಗಿ ತೊಗೊಂಡ ಬಂದ ರಸ್ತೆ ಎಲ್ಲಾ ಕಸಾ ಹುಡುಗಿ ಮತ್ತೊಂದ ಚೀಲದಾಗ ತುಂಬಕೊಂಡ ಹೋದರ……ಆದರ ಓಣಿ ಮಂದಿ ಸುಮ್ಮನ ಇರ್ತಾರೇನ್ರಿ…..ನಮ್ಮವ್ವನಂಥಾ ಖಾಸ ಹಡದ ಮಗಗ ಬಿಡೋರಿಲ್ಲಾ ಇನ್ನ ಬಾಜುದೋಕಿ ಮಗಗ ಬಿಡ್ತಾರ….
’ಗೋವಾದಿಂದ ತರಸಿದ್ದೇನ…next time ಹೋಗಬೇಕಾರ ನಂಗೂ ಹೇಳ’ ಅಂತ ನಮ್ಮ ಈ ಕಡೆ ಮನಿ ಸಾವಜಿ ಅಂದಾ…..
’ನಿನ್ನೆ ಏಕಾದಶಿ ಇತ್ತ…ಪಾಪ ಹುಡುಗ ಬರೇ liquid ಮ್ಯಾಲೆ ಇತ್ತ ಕಾಣ್ತದ’ ಅಂತ ಎದರಗಿನ ಮನಿ ಮಾಮಿ ಅಂದರು……
’ಬಾಟ್ಲಿ ಕಸದಾಗ ಯಾಕ ಹಾಕ್ತಾರೋ ಏನೋ…ಕೂಡಿಸಿ ಕೂಡಿಸಿ ಇಟ್ಟ ಹಳೇ ಬಾಟ್ಲಿ ತೊಗೊಳೊರಿಗೆ ಕೊಟ್ಟರ ರೊಕ್ಕರ ಬರ್ತದ’ ಅಂತ ನಮ್ಮವ್ವ ಅಂದ್ಲು…..
ನಮ್ಮವ್ವಾ ಅಂದದನ್ನ ಕೇಳಿ ನನ್ನ ಹೆಂಡ್ತಿ ತಲಿಕೆಟ್ಟ ’ಭಾಳ ಶಾಣ್ಯಾರಿದ್ದೀರಿ…ಒಳಗ ಬರ್ರಿ…ನಮ್ಮ ಮನ್ಯಾಗ ಬುಟ್ಟಿ ಗಟ್ಟಲೇ ಬುಲ್ ಡಾಗ್ ಬಾಟಲ್ ಬಿದ್ದಾವ ಅವನ್ನ ಮಾರರಿ ಮೊದ್ಲ’ ಅಂತ ಎಳ್ಕೊಂಡ ಬಂದ್ಲು….
ಮರದಿವಸ ಮುಂಜಾನೆ …ನಾ ಟಿಫಿನ್ ಗೆ ಕೂತಿದ್ದೆ…ನನ್ನ ಹೆಂಡ್ತಿ ಹಿಂದಿನ ದಿವಸ ಅನ್ನ ಉಳದದ ಅಂತ ಅದಕ್ಕ ಯಾವದೋ ಸುಡಗಾಡ ಹಿಟ್ ಕಲಿಸಿ ಫಡ್ ಮಾಡಿ ಹಾಕಿದ್ಲು….ಇನ್ನೇನ ಚಟ್ನಿ ಹಾಕೋಕಿ ಇದ್ಲು ಅಷ್ಟರಾಗ ಕಸದ ಗಾಡಿದ ಹಾರ್ನ್ ಆತು….ಅಕಿ ಚಟ್ನಿ ನನಗ ಹಾಕೋದ ಬಿಟ್ಟ ಪಾತೇಲಿ ಕೈಯಾಗ ಹಿಡ್ಕೊಂಡ
’ ಅತ್ಯಾ…….. ಕಸದ ಗಾಡಿ ಬಂತ’ ಅಂತ ಇವತ್ತ ಯಾರ ಮನಿ ಒಳಗಿಂದ ಬಾಟಲಿ ಬೀಳ್ತಾವ ನೋಡ್ಲಿಕ್ಕೆ ಹೋದ್ಲು.
eom/-
ಸಭ್ಯ ಓದುಗರ ಗಮನಕ್ಕೆ – black dog, black & white and bull dog are all alcohol beverages…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ