ನಾ ಖರೇ ಹೇಳ್ತೇನಿ ಒಮ್ಮೋಮ್ಮೆ ಯಾಕರ ಇಕಿಗೆ ಭರತನಾಟ್ಯ ಕಲಸಲಿಕ್ಕೆ ಹಾಕಿದೆ ಅಂತ ಅನಸ್ತದ…
ನನಗಿಷ್ಟ ಅಲ್ಲಾ ನನ್ನ ಹೆಂಡ್ತಿಗೂ ಹಂಗ ಅನಸ್ತದ, ಅದನ್ನ ಅಕಿ ಅಂದ ತಿರಿಸ್ಗೊತಾಳ ಆದರ ನಾ ಅನ್ನಂಗಿಲ್ಲಾ ಇಷ್ಟ…
ಅಲ್ಲಾ ಮಗಳ ಕ್ಲಾಸಿಕಲ್ ಡ್ಯಾನ್ಸರ್ ಆಗಬೇಕ ಅಂತ ದೊಡ್ಡಿಸ್ತನ ಬಡದ ಭರತನಾಟ್ಯಕ್ಕ ಹಾಕಿದಂವಾ ನಾನ ಅಲಾ, ಮ್ಯಾಲೆ ಅಪ್ಪಂದರಿಗೆ ಮಗಳ ಏನ ಮಾಡಿದರು ಛಂದ….ಹಿಂಗಾಗಿ ಬಾಯಿ ಮುಚಗೊಂಡ ಅನುಭವಸಬೇಕ ಇಷ್ಟ..
ಅಕಿ ಕುಣಿಯೋಕಿ…ಅದರ ಸಂಬಂಧ ನಮಗೇಲ್ಲಾ ಕುಣಸೋಕಿ.
ಇವತ್ತ ಮತ್ತೊಂದ ಪ್ರೋಗ್ರಾಮ್ ಇತ್ತ…ತೊಗೊ ನಿನ್ನೆ ಇಂದ ಇಕಿ ಸಡಗರ ಶುರು…ಮೊದ್ಲ ಯಾ ಹಾಡ ಮ್ಯಾಲೆ ಡ್ಯಾನ್ಸ್ ಮಾಡಬೇಕ ಅಂತ ಅನ್ನೋದ ಒಂದ ಇಷ್ಯು..
ಒಂದ ಸರತೆ ಹಾಡ ಫೈನಲ್ ಆದ ಮ್ಯಾಲೆ ಆ ಹಾಡ ತಕ್ಕ ಭರತನಾಟ್ಯದ್ದ ಡ್ರೇಸ್ ಸೆಲೆಕ್ಷನ್…ಮನ್ಯಾಗಿನ್ನ ಡ್ರೇಸ್ ಬಗಿಹರಿಲಿಲ್ಲಾ ಅಂದರ ಭಾಡಗಿ ತರಬೇಕ..ಇನ್ನ ಇಕಿ ತಯಾರಾಗೋದ ಅಂದರ ಮುಗದ ಹೋತ…ನನ್ನ ಹೆಂಡ್ತಿ ತನ್ನ ಲಗ್ನದಾಗೂ ಇಷ್ಟ ಟೈಮ್ ತೊಗೊಂಡಿದ್ದಿಲ್ಲಾ ಅಷ್ಟ ಟೈಮ್ ಇಕಿ ಪ್ರತಿ ಸರತೆ ತಯಾರ ಆಗಲಿಕ್ಕೆ ತೊಗೊತಾಳ…ಆಮ್ಯಾಲೆ ಹೆರಳು, ಬೈತ್ಲಾ, ವಡವಿ – ವಸ್ತ್ರಾ..ಹೂವು.. ಇಷ್ಟ ಮುಗಿತ ಅನ್ನೋದರಾಗ ಮೇಕಪ್ ಸ್ಟಾರ್ಟ….ಫೌಂಡೇಶನ್ ನಿಂದ ಹಿಡದ ಎರೆಡ ಫ್ಲೋರ್ ಸ್ಲ್ಯಾಬ್ ತನಕಾ ಮೇಕಪ್ ಮಾಡ್ಕೊಳೊದರಾಗ ನೋಡೊರಿಗೆ ಸಾಕ-ಸಾಕಾಗಿ ಹೋಗ್ತದ…ಮ್ಯಾಲೆ ಇವಕ್ಕೇಲ್ಲಾ ನನ್ನ ಹೆಂಡ್ತಿ ಅಸಿಸ್ಟಂಟ್.
ಮುಂಜಾನೆ ಎದ್ದ ಅಕಿ ಕ್ಯಾಗಸ, ಸಾರಿಸಿ ರಂಗೋಲಿ ಹಾಕೋದ ಬಿಟ್ಟ ಮಗಳ ತಯಾರಿಗೆ ನಿಲ್ಲಬೇಕ…ಇನ್ನ ಮಗಳ ತಯಾರಾಗಿ ಬರೋತನಕಾ ನಾ ಅಂತೂ ಹೆಂಡ್ತಿನ್ನ ಮರತಂಗ ಅನ್ನರಿ…ಅದರಾಗ ನನ್ನ ಮಗಳ ನನ್ನ ಹಂಗ ಎಲ್ಲಾದಕ್ಕೂ ಪಿಸಿ ಮ್ಯಾಲೆ ಪರ್ಟಿಕ್ಯೂಲರ್..ಅದ ಹಂಗ ಆತ, ಇದ ಹಿಂಗ ಆತ….ಇದ ಹಿಂಗ ಆಗಬೇಕ ಅಂತ ನನ್ನ ಹೆಂಡ್ತಿ ಜೀವಾ ತಿಂದ ತಿನ್ನೋಕಿ…ನನ್ನ ಮಗಳಿಗೆ ಬೈತ್ಲಾ ತಗದರ ಕೂದ್ಲ ಸಹಿತ ಅಗದಿ ಹಿಸೆ ಮಾಡಿದಂಗ ಕರೆಕ್ಟ ಡಿವೈಡ್ ಆಗಬೇಕ ಅಷ್ಟ ಪರ್ಟಿಕ್ಯೂಲರ್…ಒಮ್ಮೆ ಅಕಿನ್ನ ತಯಾರ ಮಾಡಿ ಮುಗಸೋದರಾಗ ನನ್ನ ಹೆಂಡ್ತಿಗೆ ಯಾಕರ ಒಂದನೇದ ಗಂಡ ಹಡದ ಮ್ಯಾಲೆ ಆಪರೇಶನ್ ಮಾಡಿಸ್ಗೊಳಿಲ್ಲಾ, ಗಂಡನ ಮಾತ ಕೇಳಿ ಹೆಣ್ಣ ಹಡದ ತಪ್ಪ ಮಾಡಿದೆ ಅಂತ ಒಂದ ಹತ್ತ ಸರತೆ ಅನಸಿರ್ತದ…
ಇನ್ನೊಂದ ತಲಿ ಕೆಡೊ ವಿಷಯ ಅಂದರ ನನ್ನ ಮಗಳ ಕನ್ನಡಿ ಮುಂದ ತಯಾರ ಆಗ್ತ ಆಗ್ತ ಒಂದ ಹತ್ತ ಸರತೆ ಸೆಲ್ಫಿ ಹೋಡ್ಕೊತಾಳ…ಹಂಗ ಕನ್ನಡಿ ಒಳಗ ಕರೆಕ್ಟ ಅನಿಸಿ ಸೆಲ್ಫಿ ಒಳಗ ಕರೆಕ್ಟ ಅನಸಲಿಲ್ಲಾ ಅಂದರೂ ಮತ್ತ ರೀ ಮೇಕಪ್, ರೀ ಡ್ರೇಸ್ಸಿಂಗ್….ಹೋಗ್ಲಿ ಬಿಡ್ರಿ ಅದರ ಬಗ್ಗೆ ಎಷ್ಟ ಬರದರು ಕಡಮಿನ.
ಇನ್ನ ಒಮ್ಮೇ ಎಲ್ಲಾ ಮೇಕಪ್ ಮುಗಿಸಿ ರೇಡಿ ಆದ್ಲು ಅಂತ ಅಂದರ ಮುಂದ ಅಕಿಗೆ ತಿನಸಬೇಕು, ನೀರ ಕುಡಸಬೇಕು, ಬ್ಯಾಗ ರೇಡಿ ಮಾಡ್ಬೇಕು, ಶೂಜ್ ಹಾಕಬೇಕು…ಯಾಕ ಅಂದರ ಅಕಿ ತನ್ನ ಕೈಲೇ ಏನೂ ಕೆಲಸಾ ಮಾಡಂಗಿಲ್ಲಾ…ಮಾಡಿದರ ಮೇಕಪ್ ಹಾಳ ಆಗ್ತಾದ…ಅದರಾಗ ಕೈತುಂಗ ಆ ಸುಡಗಾಡ ಇನ್ಸ್ಟಂಟ್ ಮೆಹಂದಿ ಬ್ಯಾರೆ ಬಡ್ಕೊಂಡಿರ್ತಾಳ…ಹಿಂಗಾಗಿ ಪಾಪ ಎಲ್ಲಾ ನನ್ನ ಹೆಂಡ್ತಿನ ಅಕಿ ಸೇವಾ ಮಾಡ್ಬೇಕ…
’ತಿಂಗಳಿಗೆ ಮೂರ ನಾಲ್ಕ ಸರತೆ ಇಕಿನ್ನ ಡ್ಯಾನ್ಸಿಗೆ ತಯಾರ ಮಾಡೋದಕಿಂತಾ..ವರ್ಷಕ್ಕೊಮ್ಮೆ ಬಾಣಂತನ ಮಾಡೋದ ಛಲೋ’ ಅಂತ ನಮ್ಮಕಿ ಸಿಟ್ಟ ಆಗೋಕಿ…ಅಲ್ಲಾ, ಅದ ಮುಂದ ಮಾಡೋದ ಅದನ ಅದ ಆ ಮಾತ ಬ್ಯಾರೆ…
ಇನ್ನ ನನ್ನ ಹೆಂಡ್ತಿ ಅಕಿ ಬಗ್ಗೆ ಕಂಪ್ಲೇಂಟ್ ಹೇಳಿದಾಗೊಮ್ಮೆ ನನಗರ ಬಿಸಿ ತುಪ್ಪ ಇದ್ದಂಗ…ಇತ್ತಲಾಗ ಹೆಂಡ್ತಿ ಹೇಳಿದ್ದ ಕರೆಕ್ಟ ಅನಿಸಿದರು ಮಗಳಿಗೆ ಏನೂ ಅನಲಿಕ್ಕೆ ಬರಂಗಿಲ್ಲಾ, ಯಾಕಂದರ ಅಕಿ ಮಗಳ….ಅದಕ್ಕ ನಾ ನಮ್ಮಕಿಗೆ
’ಲೇ..ಸುಮ್ಮನ ಒಂದ ಹೆಣ್ಣಾಳ ಇಟ್ಗೊ ನಿಂಗೂ ಎಲ್ಲಾದಕ್ಕೂ ಅನಕೂಲ ಆಗ್ತದ……ಯಾಕ ಒಬ್ಬೊಕಿನ ಎಷ್ಟಂತ ಮಾಡ್ತಿ…ನನ್ನ ಕಾಳಜಿ ಮಾಡೋರ ಯಾರ’ ಅಂತ ಅಗದಿ ಉದಾರ ಮನಸ್ಸಿನಿಂದ ಸಜೆಶನ್ ಕೊಟ್ಟೆ. ತೊಗೊ ಅಕಿಗೆ ಸಿಟ್ಟ ನೆತ್ತಿಗೇರತ…ನನ್ನ ಮಗಳ ಮ್ಯಾಲಿನ ಸಿಟ್ಟ ತಗದ ನನ್ನ ಮ್ಯಾಲೆ ಹಾಕಿ
’ಯಾಕ ಆರಾಮ ಅದ ಇಲ್ಲ….’ ಅಂತ ’ರಾ…ರಾ.’..ರಾವ್ ಕಣ್ಣ ತಗದ್ಲ..ನಾ ಸಮಾಧಾನಲೇ
’ನೋಡ ವಿಚಾರ ಮಾಡ ಮಗಳಿಗೆ ಮೇಕಪ್ ಮಾಡ್ಲಿಕ್ಕೆರ ಒಬ್ಬ ಪಾರ್ಲರದೊಕಿನ ಇಟ್ಗೊಳೋಣು’ ಅಂತ ನಾ ಅಂದರ
ಅಲ್ತಾ ಹಚ್ಚಲಿಕತ್ತಿದ್ದ ನಮ್ಮಕಿ ಮಾರಿ-ಕಣ್ಣು ಆ ಅಲ್ತಾಕಿಂತ ಕೆಂಪ ಆದ್ವು.. ಅಲ್ಲಾ ಹಂಗ ಅಕಿ ಏನರ ಅಪ್ಪಿ-ತಪ್ಪಿ ಹೂಂ ಅಂದಿದ್ದರ ನನ್ನ ಮಾರಿನೂ ಕೆಂಪ್ ಆಗ್ತಿತ್ತ ಆ ಮಾತ ಬ್ಯಾರೆ…ಹೋಗ್ಲಿ ಬಿಡ್ರಿ ಅದಕ್ಕೂ ಪಡದ ಬರಬೇಕ..
’ಹೋಗ್ರಿ ಭಾಳ ಶಾಣ್ಯಾರಿ ಇದ್ದೀರಿ…ಎದಿ ಉದ್ದ ಮಕ್ಕಳ ಬೆಳದ ನಿಂತರೂ ನಿಮಗ ಬುದ್ಧಿ ಬರಲಿಲ್ಲಾ’ ಅಂತ ನನಗ ಅಂದ್ಲು…..
ಅಂತು ಇಂತು ಒಟ್ಟ ಮಗಳನ ತಯಾರಿ ಮಾಡಿ ಸವಾಯಿ ಗಂಧರ್ವ ಹಾಲ್ ತನಕ ಬಿಟ್ಟೊ ಬರೋದರಾಗ ನಾವಿಬ್ಬರೂ ಗಂಡಾ ಹೆಂಡ್ತಿ ಮಗಳ ಹೇಳಿದಂಗ ಕುಣದಿದ್ದ ಕುಣದಿದ್ದ….
ಅಲ್ಲಾ ಹಂಗ ಮಗಳ ಸಂಬಂಧ ಅಷ್ಟೂ ಮಾಡಲಿಲ್ಲಾಂದರ ಹೆಂಗ ..
“Behind every great daughter is a truly amazing dad” ಅಂತ ನನ್ನಷ್ಟಕ್ಕ ನಾನ ಡುಬ್ಬಾ ಚಪ್ಪರಿಸಿಗೊಂಡ ಸಮಾಧಾನ ಮಾಡ್ಕೋತಿರ್ತೇನಿ.
Your Daughter is very cute,
Best wishes to you and family.